ಮಂಗಳವಾರ, ಡಿಸೆಂಬರ್ 7, 2021
19 °C
ಮುಖ್ಯಮಂತ್ರಿಯಲ್ಲದ ಮುಖ್ಯಮಂತ್ರಿ, ಪೊಲೀಸರಲ್ಲದ ಪೊಲೀಸರು, ಪತ್ರಿಕೆಗಳಲ್ಲದ ಪತ್ರಿಕೆಗಳು: ಹೀಗೆಲ್ಲಾ ಉಂಟು

ನಾರಾಯಣ.ಎ ಅಂಕಣ: ಆಳುವವರಿಗೆ ಅರಾಜಕತೆಯೇ ಪ್ರಿಯವಾದಾಗ...

ನಾರಾಯಣ ಎ. Updated:

ಅಕ್ಷರ ಗಾತ್ರ : | |

Prajavani

ಈ ಲೇಖನದಲ್ಲಿ ನೀವು ಓದಲಿರುವುದು ರಾಜಕೀಯ ತತ್ವಗಳನ್ನು. ತತ್ವಗಳನ್ನೆಲ್ಲಾ ಹೇಳುವ, ಕೇಳುವ ಕಾಲ ಇದಲ್ಲ. ಇದು ಶುದ್ಧ ಪ್ರಾಯೋಗಿಕ ರಾಜಕಾರಣದ ಕಾಲ. ಅಧಿಕಾರವೊಂದು ಕೈಯ್ಯಲ್ಲಿ ಇದ್ದರೆ, ಏನನ್ನಾದರೂ ಮಾಡಿ ದಕ್ಕಿಸಿಕೊಳ್ಳಬಹುದಾದ ಕಾಲ. ಇಷ್ಟು ಹೇಳಿದ ನಂತರವೂ ಲೇಖನದಲ್ಲಿ ಬರೆಯಲಾಗಿರುವ ಒಣ ತತ್ವಗಳನ್ನು ನೀವು ಓದುವುದೇ ಆಗಿದ್ದರೆ ಒಂದು ಮನವಿ ಯಿದೆ. ಇದರಲ್ಲಿ ಪ್ರಸ್ತಾಪಿಸಲಾಗಿರುವ ವಿಚಾರಗಳು ಯಾವುದೇ ವ್ಯಕ್ತಿ, ಸಂಘಟನೆ ಅಥವಾ ಸಮಕಾಲೀನ ಘಟನೆಗಳಿಗೆ ಸಂಬಂಧಿಸಿದಂತೆ ಕಂಡರೆ ಅದು ಕೇವಲ ಕಾಕತಾಳೀಯ.

ತತ್ವ ಒಂದು: ಯಾವುದೇ ದೇಶದ ಯಾವುದಾದರೂ ರಾಜ್ಯದಲ್ಲಿ ಯಾರು ಯಾರ ಮೇಲಾದರೂ ಮನಬಂದಂತೆ ನಡೆಸುವ ಬೀದಿ ಹಿಂಸೆಯನ್ನು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಆ ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿರುವ ವ್ಯಕ್ತಿಯೇ ಸಮರ್ಥಿಸುವುದಕ್ಕೆ ಮುಂದಾದರೆ ಅಂತಹ ವ್ಯಕ್ತಿಯನ್ನು ಮುಖ್ಯಮಂತ್ರಿ ಅಂತ ಕರೆಯಲು ಸಾಧ್ಯವಿಲ್ಲ. ಇನ್ನೇನೆಂದು ಕರೆಯುವುದು? ಗೊತ್ತಿಲ್ಲ.
ಮುಖ್ಯಮಂತ್ರಿಯಾಗಿರುವ ವ್ಯಕ್ತಿಯು ಅರಾಜಕತೆಯನ್ನು ಸಮರ್ಥಿಸಿಕೊಳ್ಳುವುದು ಎಂದರೆ ಅದೊಂದು ಥರಾ ಆ ಸ್ಥಾನಕ್ಕೆ ತನ್ನ ಅನರ್ಹತೆಯನ್ನು ಆ ವ್ಯಕ್ತಿಯೇ ಸ್ವಯಂ ಘೋಷಿಸಿಕೊಂಡಂತೆ. ಯಾಕೆಂದರೆ, ಸರ್ಕಾರ ಎಂಬ ವ್ಯವಸ್ಥೆಯನ್ನು ಮನುಷ್ಯಕೋಟಿ ಆವಿಷ್ಕರಿಸಿಕೊಂಡದ್ದೇ ಒಬ್ಬರ ಮೇಲೆ ಒಬ್ಬರು ನಡೆಸಬಹುದಾದ ಸಂಭಾವ್ಯ ಹಿಂಸೆಯನ್ನು ಹತ್ತಿಕ್ಕುವುದಕ್ಕೋಸ್ಕರ. ಎಂತಹದ್ದೇ ಸಂದರ್ಭದಲ್ಲಾದರೂ ಆಡಳಿತ ಕಾನೂನು ಬದ್ಧವಾಗಿಯೇ (Rule of Law) ನಡೆಯುವಂತೆ ನೋಡಿಕೊಳ್ಳುವುದಕ್ಕೋಸ್ಕರ.

ಅಭಿವೃದ್ಧಿ, ಕಲ್ಯಾಣ ಯೋಜನೆ ಇತ್ಯಾದಿಗಳೆಲ್ಲಾ ಹೇಗೋ ನಡೆದುಹೋಗುತ್ತವೆ. ಅವುಗಳನ್ನು ಸರ್ಕಾರ ಮಾತ್ರ ಮಾಡಬೇಕೆಂದೇನೂ ಇಲ್ಲ. ಅಗತ್ಯಬಿದ್ದರೆ ಯಾರಾದರೂ ಮಾಡಬಹುದು. ಮುಖ್ಯಮಂತ್ರಿ ಸ್ಥಾನದಲ್ಲಿರುವ ಯಾರಾದರೂ ವ್ಯಕ್ತಿ ಇಷ್ಟನ್ನು ಕನಿಷ್ಠ ಅರ್ಥಮಾಡಿಕೊಳ್ಳದೆ ಹಿಂಸೆಯನ್ನು ಸಮರ್ಥಿಸುವ ಮಾತುಗಳನ್ನು ಹರಿಬಿಡುವುದು ಎಂದರೆ ಆ ವ್ಯಕ್ತಿ ತಾನು ಯಾವ ವ್ಯವಸ್ಥೆಯ ಮುಖ್ಯಸ್ಥನಾಗಿ ದ್ದಾನೋ ಆ ವ್ಯವಸ್ಥೆಯನ್ನೇ ಅಲ್ಲಗಳೆದಂತೆ. ಅದು ಸಂವಿಧಾನದ್ರೋಹ.

ಇಂತಹ ಮಾತುಗಳನ್ನು ಕೆಲವೊಮ್ಮೆ ಅಧಿಕಾರದಲ್ಲಿ ರುವ ಮಂದಿ ತಿಳಿಯದೆ ಆಡುವುದುಂಟು. ಆದರೆ ಆಡಿದ್ದಕ್ಕೆ ಕನಿಷ್ಠ ವಿಷಾದವನ್ನೂ ವ್ಯಕ್ತಪಡಿಸದೆ, ಒರಟೊರಟಾಗಿ ಅದರ ಸಮರ್ಥನೆಗಿಳಿದರೆ ಆಗ ಅದು ತಿಳಿಯದೆ ಎಸಗಿದ ಅಚಾತುರ್ಯ ಅಂತ ಆಗುವುದಿಲ್ಲ. ಅದು ಅಧಿಕಾರ ಚಲಾಯಿಸಲು ಬೇಕಾದಷ್ಟು ಪ್ರಬುದ್ಧತೆಯೇ ಇಲ್ಲದ ಸ್ಥಿತಿ. ಇಲ್ಲವೇ ಯಾರನ್ನೋ ಮೆಚ್ಚಿಸುವುದಕ್ಕೋಸ್ಕರ ಮಾಡಿಕೊಳ್ಳುವ ಆತ್ಮವಂಚನೆ. ಏನೇ ಆದರೂ ನಾಡಿನ ಮೇಲೆ ಅದು ಬೀರುವ ಪರಿಣಾಮ ಮಾತ್ರ ಒಂದೇ.

ತತ್ವ ಎರಡು: ಯಾವುದಾದರೂ ದೇಶದ ಯಾವು ದಾದರೂ ರಾಜ್ಯದಲ್ಲಿ ಪೊಲೀಸರ ಕಣ್ಣೆದುರಿಗೇ ಪುಢಾರಿಗಳು ಮನಸೋ ಇಚ್ಛೆ ವರ್ತಿಸುವಷ್ಟು ಸ್ವಾತಂತ್ರ್ಯ ಹೊಂದಿದ್ದರೆ ಅಂತಹ ನಾಡಿನಲ್ಲಿ ಸರ್ಕಾರಇದೆ ಅಂತಲೇ ಹೇಳಲು ಸಾಧ್ಯವಿಲ್ಲ. ರಾಮಗೋಪಾಲ್ ವರ್ಮಾ ಅವರ ಒಂದು ಸಿನಿಮಾದ ಹೆಸರು ‘ಸರ್ಕಾರ್’. ಆ ಹೆಸರು ಯಾಕೆಂದರೆ ಆ ಸಿನಿಮಾದಲ್ಲಿ ಪೊಲೀಸರು ಮಾಡುವ ಕೆಲಸವನ್ನೆಲ್ಲಾ ಒಂದು ಸಂಘಟನೆಯ ನಾಯಕ ಮತ್ತು ಅವನ ಅನುಯಾಯಿಗಳು ಮಾಡುತ್ತಿರುತ್ತಾರೆ. ಅದು ಪೊಲೀಸ್ ವ್ಯವಸ್ಥೆಯ ಅಣಕ. ತಪ್ಪಿತಸ್ಥರನ್ನು ಬಂಧಿಸುವುದು, ವಿಚಾರಣೆ ನಡೆಸುವುದೆಲ್ಲ ಪೊಲೀಸರ ಕೆಲಸ. ಪೊಲೀಸರೂ ಇಲ್ಲಿ ತಪ್ಪು-ಸರಿಗಳ ನಿರ್ಣಯ ಮಾಡಬೇಕಿರುವುದು ಕಾನೂನುಗಳ ಆಧಾರದಲ್ಲಿ. ಅದು ಬಿಟ್ಟು ಕಂಡಕಂಡವರೆಲ್ಲಾ ಕಾನೂನನ್ನು ಕಾಲ ಕಸದಂತೆ ಕಂಡು ಅರಣ್ಯನ್ಯಾಯ ನಿರ್ಣಯಕ್ಕೆ ಇಳಿದು ಬಿಟ್ಟರೆ ಅದನ್ನು ಅರಾಜಕತೆ ಅಂತ ಕರೆಯುವುದು. ಅದನ್ನು ಮುಖ್ಯಮಂತ್ರಿಯೇ ಸಮರ್ಥಿಸಿದರೆ ಅದಕ್ಕೆ ಏನೆನ್ನು ವುದು? ನಾಡಿನ ದೌರ್ಭಾಗ್ಯ ಎಂದಷ್ಟೇ ಹೇಳಬಹುದು.

ವಿಕೃತ ಮನಸ್ಸಿನ ಸರ್ವಾಧಿಕಾರಿಗಳು ಆಳುವ ದೇಶ ಗಳಲ್ಲಿ ಕೂಡಾ ಆಳುವವರು ಬಳಸುವ ಪೋಷಾಕು, ಸಂಕೇತಗಳ ಜತೆ ಗುರುತಿಸಿಕೊಳ್ಳಲು ಪೊಲೀಸರು ಸ್ವಇಚ್ಛೆಯಿಂದ ಮುಂದಾಗುವುದಿಲ್ಲ. ಕತ್ತಲೆಯ ಖಂಡದ ವಿಫಲ ದೇಶಗಳಲ್ಲೂ (Failed States) ಪೊಲೀಸರು ಹೀಗೆಲ್ಲಾ ವರ್ತಿಸುವುದಕ್ಕೆ ಬಯಸುವುದಿಲ್ಲ. ಅಧಿಕೃತ ಕಚೇರಿಗಳಲ್ಲಿ ನಡೆಯುವ ಯಾವುದೇ ಆಚರಣೆ ಇರಲಿ ಅಲ್ಲಿ ಪೊಲೀಸರು ಒಂದೋ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳಬೇಕು. ಸಮವಸ್ತ್ರವಿಲ್ಲದೆ ಕಾಣಿಸಿಕೊಳ್ಳುವುದು ಅನಿವಾರ್ಯವಾದರೂ ಅವರ ಉಡುಗೆ-ತೊಡುಗೆ ತಟಸ್ಥ ಸಂಕೇತಗಳನ್ನಷ್ಟೇ ಹೊಂದಿರಬೇಕು. ಪುಢಾರಿಗಳು ಬಳಸುವ ಸಂಕೇತಗಳ ಜತೆ ಕಾಣಿಸಿಕೊಳ್ಳುವುದು ಪೊಲೀಸರಾದವರಿಗೆ ಯಾವುದೇ ದೇಶದಲ್ಲಾದರೂ ಅವಮಾನದ ವಿಚಾರ. ಸರ್ವಾಧಿಕಾರಿಗಳ ಆಡಳಿತವುಳ್ಳ ನಾಡುಗಳಲ್ಲಿ ನಡೆಯದ್ದು, ನಾಡೊಂದು ನಾಗರಿಕತೆಯ ದಿನಗಳನ್ನು ನೋಡುವುದಕ್ಕೆ ಮೊದಲಿದ್ದ ಅವಸ್ಥೆಯಲ್ಲೂ ನಡೆಯದ್ದು ಯಾವ ನಾಡಲ್ಲೂ ನಡೆಯಬಾರದು. ಆದರೆ ಕೆಲವೊಂದು ದೇಶಗಳ ಕೆಲವೊಂದು ರಾಜ್ಯಗಳಲ್ಲಿ ಇದೂ ನಡೆಯುತ್ತದೆ. ಬಹುಶಃ ಅಲ್ಲಿನ ಆಳುವವರೆಲ್ಲ ಪುಢಾರಿಗಳ ಸಮರ್ಥನೆಗೆ ನಿಂತ ನಂತರ ಪೊಲೀಸರಿಗೂ ಪುಢಾರಿಗಳು ಬಳಸುವ ಸಂಕೇತಗಳಲ್ಲಿ ಕಾಣಿಸಿಕೊಳ್ಳುವುದು ತಮ್ಮ ಅಧಿಕೃತ ಸಮವಸ್ತ್ರಗಳಲ್ಲಿ ಕಾಣಿಸಿ
ಕೊಳ್ಳುವುದಕ್ಕಿಂತ ಹೆಚ್ಚುಗಾರಿಕೆ ಅಂತ ಅನ್ನಿಸಿರಬೇಕು. ಅಥವಾ ಅಲ್ಲಿನ ಪೊಲೀಸ್ ವ್ಯವಸ್ಥೆಯೊಳಗೆ ಪುಢಾರಿಗಳ ವರ್ತನೆಯನ್ನು ಸಮರ್ಥಿಸುವ ಸಿದ್ಧಾಂತವನ್ನು ಒಪ್ಪುವವರ ಪ್ರವೇಶ ದೊಡ್ಡ ಪ್ರಮಾಣದಲ್ಲೇ ಆಗಿರಬೇಕು. ಪೊಲೀಸ ರನ್ನು ಪೊಲೀಸರಾಗಿಯೇ ಉಳಿಸಿಕೊಳ್ಳಬೇಕೆನ್ನುವ ಕನಿಷ್ಠ ಪ್ರಜ್ಞೆ ಇರದ ನಾಯಕರಿಂದ ಆಳಿಸಿಕೊಳ್ಳುವ ನಾಡು ಬಹಳ ಕಾಲ ಸುಸ್ಥಿತಿಯಲ್ಲಿ ಉಳಿಯಲಾರದು.

ತತ್ವ ಮೂರು: ಯಾವುದೋ ದೇಶದ ಯಾವುದೋ ಒಂದು ರಾಜ್ಯದ ಮುಖ್ಯಮಂತ್ರಿ ಆಡಬಾರದನ್ನೆಲ್ಲಾ ಆಡುತ್ತಿರುವಾಗ, ಅಲ್ಲಿನ ಪೊಲೀಸರು ಗುರುತಿಸಿಕೊಳ್ಳ ಬಾರದ ಸಂಕೇತಗಳ ಜತೆ ಗುರುತಿಸಿಕೊಳ್ಳಲು ತೊಡಗಿದಾಗ, ಮಾಡಬಾರದವರ ಸಂಗ ಮಾಡತೊಡಗಿ ದಾಗ, ಇವೆಲ್ಲ ಎಂತಹ ಅಪಾಯಕಾರಿ ಬೆಳವಣಿಗೆಗಳು ಅಂತ ಎಚ್ಚರಿಸಬೇಕಾಗಿರುವುದು ಆ ನಾಡಿನ ಪತ್ರಿಕೆಗಳು. ಜೀವಂತ ಪತ್ರಿಕೆಗಳಿರುವ ನಾಡಿನಲ್ಲಿ ಪೊಲೀಸರು ಮೇಲೆ ಹೇಳಿದಂತೆ ವರ್ತಿಸಿದ್ದರೆ ಅಂತಹ ಘಟನೆಯಲ್ಲಿ ಭಾಗಿಯಾದವರ, ಅದಕ್ಕೆ ಪ್ರೇರಣೆ
ಯಾದವರ, ಅದಕ್ಕೆ ಸೂಚನೆ ನೀಡಿದವರ ಜಾತಕಗಳನ್ನು ಜಾಲಾಡಿ ಜನರ ಮುಂದೆ ಇಡುವ ಕೆಲಸ ನಡೆಯುತ್ತಿತ್ತು. ಇಂತಹ ವರ್ತನೆಗಳಿಗೆ ಮುಖ್ಯಮಂತ್ರಿಯೇ ಮುಂತಾದ ವರಿಂದ ಬರುವ ಸಮರ್ಥನೆಯ ವಿರುದ್ಧ ಅಭಿಪ್ರಾಯ ಅಭಿಯಾನವೇ ನಡೆಯುತ್ತಿತ್ತು. ಇಷ್ಟೆಲ್ಲಾ ಮಾಡದೆ ಹೋದರೂ ಈ ವಿಚಾರವಾಗಿ ಒಂದು ಸಂಪಾದಕೀಯವನ್ನಾದರೂ ಬರೆದು ಕೈತೊಳೆದುಕೊಳ್ಳಬೇಕಿತ್ತು. ಕನಿಷ್ಠ ಇಷ್ಟನ್ನೂ ಮಾಡದ ಪತ್ರಿಕೆಗಳು ಯಾವುದಾದರೂ ನಾಡಲ್ಲಿ ಇದ್ದರೆ ಅವುಗಳನ್ನು ಪತ್ರಿಕೆಗಳು ಅಂತ ಕರೆಯಲು ಸಾಧ್ಯವಿಲ್ಲ. ಇನ್ನೇನು ಅಂತ ಕರೆಯುವುದೋ ಗೊತ್ತಿಲ್ಲ.

ತತ್ವ ನಾಲ್ಕು: ಕೊನೆಯದಾಗಿ ಯಾವುದಾದರೂ ದೇಶದ ಯಾವುದಾದರೂ ರಾಜ್ಯವೊಂದರಲ್ಲಿಮುಖ್ಯಮಂತ್ರಿ ಅಂತ ಕರೆಯಲಾಗದ ವ್ಯಕ್ತಿ ಮುಖ್ಯಮಂತ್ರಿಯಾಗಿದ್ದಾಗ, ಪೊಲೀಸರು ಎಂದು ಕರೆಯಲಾಗ ದವರು ಪೊಲೀಸರಾಗಿದ್ದಾಗ, ಮಾಧ್ಯಮಗಳು ಅಂತ ಕರೆ ಯಲಾಗದ ಮಾಧ್ಯಮಗಳಿದ್ದಾಗ, ಅಲ್ಲಿನ ಲೇಖಕರು, ಕವಿಗಳು, ಚಿಂತಕರು, ತತ್ವಜ್ಞಾನಿಗಳು, ನಾಡೋಜರು, ಸಂತರು ಅಖಾಡಕ್ಕೆ ಇಳಿಯಬೇಕಾಗುತ್ತದೆ. ಆತ್ಮಘಾತುಕ ಹಾದಿಯಲ್ಲಿ ಸಾಗುತ್ತಿರುವ ವ್ಯವಸ್ಥೆಯ ಬಗ್ಗೆ ಎಚ್ಚರಿಸಬೇಕಾಗುತ್ತದೆ. ಇಂತಹ ಎಚ್ಚರಿಕೆಯ ಧ್ವನಿಗಳು ಕೇಳಿಸದೇ ಇರುವ ನಾಡನ್ನು ನಾಡೆಂದು ಕರೆಯುವುದಾದರೂ ಹೇಗೆ?

ಮಹಾಭಾರತದಲ್ಲಿ ದ್ರೌಪದಿ ವಸ್ತ್ರಾಪಹರಣ ನಡೆ ಯುವ ಹೊತ್ತಿಗೆ ಭೀಷ್ಮ, ದ್ರೋಣ, ಕೃಪಾದಿಗಳೆಲ್ಲಾ ಸುಮ್ಮಗಿದ್ದರೆ, ನೂರೊಂದು ಮಂದಿ ಕೌರವ ಸೋದರರ ಪೈಕಿ ಒಬ್ಬನಾದ ವಿಕರ್ಣ ಎಂಬಾತ ಮಾತ್ರ ‘ಇದೇನು ನಡೆಯುತ್ತಿದೆ ಇಲ್ಲಿ’ ಅಂತ ಪ್ರತಿಭಟಿಸುತ್ತಾನೆ. ಆತನನ್ನು ಬೆದರಿಸಿ ಹೊರಗಟ್ಟಲಾಗುತ್ತದೆ- ದೇಶದ್ರೋಹಿ, ರಾಜ ದ್ರೋಹಿ, ಧರ್ಮದ್ರೋಹಿ ಎಂಬಿತ್ಯಾದಿ ಬೈಗುಳಗಳು ವಿಕರ್ಣನ ವಿರುದ್ಧವೂ ಅಂದು ಬಳಕೆಯಾಗಿರಬಹುದು. ಆತನೇನೂ ಕೈಲಾಗದೆ ಮೈಪರಚಿಕೊಂಡ ಅನಾಮಿಕ ಕೌರವ ಸೋದರನಲ್ಲ, ಕೌರವ ಸೇನೆಯ ಪ್ರಮುಖರಲ್ಲಿ ಒಬ್ಬ ಎಂಬಂತೆ ಭಗವದ್ಗೀತೆಯ ಮೊದಲ ಅಧ್ಯಾಯದ ಎಂಟನೆಯ ಶ್ಲೋಕದಲ್ಲಿ ಆತನ ಹೆಸರು ಪ್ರಸ್ತಾಪವಾಗು
ತ್ತದೆ. ಆಳುವವರನ್ನು ಕೆಲವೊಮ್ಮೆ ಆಳುವವರ ಕಡೆಯ ವರೇ ಎಚ್ಚರಿಸಬೇಕು. ಕೌರವರ ನಡುವೆಯಾದರೂ ಒಬ್ಬ ವಿಕರ್ಣನಿದ್ದ. ಈಗ ಕೆಲವು ದೇಶಗಳ ಕೆಲವು ರಾಜ್ಯಗಳಲ್ಲಿ ಆಳುತ್ತಿರುವವರ ನಡುವೆ ವಿಕರ್ಣರಂತಹವರೂ ಉಳಿದಿಲ್ಲ ಅನ್ನಿಸುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು