ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ನಡೆ ಮರೆಮಾಚುವ ನುಡಿಜಾಲ

ಅಸಲಿ ಯುದ್ಧ ಮಾಡುವವರೊಂದಿಗೆ ನಕಲಿ ಯುದ್ಧಶೂರರ ಗಡಿ ಮೀರಿದ ಮಾತಿನ ದಾಳಿ
Last Updated 8 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ
ADVERTISEMENT
""

ಉತ್ರಳ್ಳಿ ಇಂದ್ರಕ್ಕ ಹೀಗೆ ಹೇಳಕೂಡದು: ‘ನಾನು ಯಾರನ್ನೂ ಜೈಲಿಗೆ ಹಾಕುವುದಿಲ್ಲ’. (ಅದರರ್ಥ) ಆಕೆ ಹೀಗೆ ಹೇಳಬೇಕು: ‘ನಾನು ಎಲ್ಲರನ್ನೂ ಬಂಧಿಸುತ್ತೇನೆ ಮತ್ತು ಜೈಲಿಗೆ ಹಾಕುತ್ತೇನೆ’- ಪಿ. ಲಂಕೇಶ್‍ರ ‘ಟೀಕೆ ಟಿಪ್ಪಣಿ-1’ ಕೃತಿಯ ಸಾಲುಗಳು ಇವು.

ಜಗತ್ತು ಎಂಬ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ವ್ಯಾಪಾರವಾಗುತ್ತಿರುವ ಸರಕೆಂದರೆ ಮಾತೇ ಇರಬೇಕು. ಈ ಮಾತಾದರೋ ಎಂಥೆಂಥಾ ಬಣ್ಣದ ದಿರಿಸು, ಅಲಂಕಾರ, ಥಳಕು, ರೂಪ ಧರಿಸಿ ಕುಳಿತಿದೆಯೆಂದರೆ, ಅದಿಲ್ಲದ ಮಣ್ಣೊಳಗೆ ಅಡಗಿರುವ ಅಮೂಲ್ಯ, ಬಿತ್ತಿನಂತಿರುವ ನಿರಲಂಕೃತ ಮಾತುಗಳೆಡೆಗೆ ಯಾರೂ ಕಣ್ಣೆತ್ತಿಯೂ ನೋಡುತ್ತಿಲ್ಲ. ಮಾರಾಗುವುದೇ ಮೌಲ್ಯವಾಗಿರುವ ಕಾಲದಲ್ಲಿ ಒಳಗಿನ ತಿರುಳು ತೆರೆದು ನೋಡುವ ವ್ಯವಧಾನ ಯಾರಿಗೂ ಇಲ್ಲ. ವೈರಲ್ ಆಗುವ ಫೀವರ್‌ನ ಬೆನ್ನು ಬಿದ್ದ ಕಾಲವಿದು.

ಮಾತು ಇಂದು ಪರ್ಯಾಯ ನಾಣ್ಯದಂತೆ ಚಲಾವಣೆಯಲ್ಲಿದೆ. ಅಂದರೆ ಅದು ಬಂಡವಾಳವಾಗಿ ವರ್ತಿಸುತ್ತಿದೆ. ಹೀಗೆ ವರ್ತಿಸುವ ಗಡಿಬಿಡಿಯಲ್ಲಿ ಅದು ಈ ಸಮಾಜದ ನಡೆಗಳನ್ನು ತೆರೆದು ತೋರಿಸುವ ಕನ್ನಡಿಯಾಗಿಯೂ ಕೆಲಸ ಮಾಡುವುದು ನುಡಿಯ ವೈಶಿಷ್ಟ್ಯ. ಇದು ಹಲವು ಸಂದರ್ಭಗಳಲ್ಲಿ ಅನಾವರಣಗೊಳ್ಳುತ್ತಿರುತ್ತದೆ. ಈಗ ನಡೆಯುತ್ತಿರುವ ರೈತರ ಮುಷ್ಕರದ ಹೊತ್ತಿನಲ್ಲೂ ಇದು ಆಗುತ್ತಿದೆ. ಸರ್ಕಾರದ ಎದುರಿಗೆ ಪ್ರಜಾಸತ್ತಾತ್ಮಕವಾಗಿ ರೈತರು ನಡೆಸುತ್ತಿರುವ ಮುಷ್ಕರದ ಬಾಹುಳ್ಯ ನೋಡಿ ಅವರನ್ನು ಹೇಗಾದರೂ ಮಣಿಸಬೇಕು ಎಂದು ಹೊರಟ ಕೆಲವು ಟ್ವಿಟರ್ ವೀರರು, ರೈತರನ್ನು ಮಾತಿನ ಗುಂಡಿನಿಂದ ಹೊಡೆದೋಡಿಸಲು ಅಣಿಯಾದರು. ಇನ್ನು ಕೆಲವು ಸುದ್ದಿಮಾಧ್ಯಮಗಳು ತಮ್ಮ ಬಳಿ ಇರುವ ಮಾತಿನ ಮದ್ದುಗುಂಡಿನ ಸಂಗ್ರಹದಿಂದ ಹೇಗೇಗೋ ಗುರಿಯಿಟ್ಟು ಸ್ಫೋಟಿಸತೊಡಗಿದವು.

ಈ ಸನ್ನಿವೇಶದಲ್ಲಿ ಕೆಲವು ಮಾತುಗಳನ್ನು ಇಲ್ಲಿ ಚರ್ಚಿಸಬಹುದು. ಅದರಲ್ಲಿ ಒಂದು, ಈಚಿನ ಟ್ವಿಟರ್ ಝಾನ್ಸಿರಾಣಿ ಎನಿಸಿಕೊಂಡಿರುವ ಕಂಗನಾ ರನೌಟ್‌ ಅವರ ಮಾತುಗಳು. ರೈತ ಹೋರಾಟದಲ್ಲಿ ಕಾಣಿಸಿಕೊಂಡ ಎಪ್ಪತ್ತೈದರ ಮೊಹಿಂದರ್ ಕೌರ್ ಬಗ್ಗೆ ಬಹಳ ಹಗುರವಾಗಿ ‘ಇಂಥವರು ನೂರು ರೂಪಾಯಿಗೆ ಸಿಗುತ್ತಾರೆ’ ಎಂದು ಟ್ವೀಟ್ ಮಾಡಿದರು. ಕೇವಲ ಮಾತಾಗಿ ಇದನ್ನು ಹೇಳಿದ ಕಂಗನಾರನ್ನು ನಿರ್ಲಕ್ಷಿಸಬಹುದು. ಆದರೆ, ಈ ಮಾತು, ಅದರಾಚೆಗೆ ನಮ್ಮ ಸಾಮಾಜಿಕ ಮನಃಸ್ಥಿತಿಯನ್ನು ಪ್ರತಿಬಿಂಬಿಸುತ್ತಿರುವುದರಿಂದ ಅದನ್ನೀಗ ನಾವು ವಿಶ್ಲೇಷಿಸಲೇಬೇಕು. ಇದನ್ನು ಯಾರು ಹೇಳಿದರು ಎಂಬುದು ಮುಖ್ಯವಲ್ಲ, ಏನು ಹೇಳಿದರು ಎಂಬುದು ಮುಖ್ಯ.

ಸಾಮಾಜಿಕ ತರತಮಗಳನ್ನು ಕಾಪಿಟ್ಟುಕೊಳ್ಳುವ ಸಂಸ್ಕೃತಿಯೊಂದು ನಮ್ಮಲ್ಲಿ ಇದೆ. ಈ ತರತಮವು ಕೆಳಶ್ರೇಣಿಗೆ ಯಾರನ್ನು ತಳ್ಳಬೇಕೆಂದು ಬಯಸುತ್ತದೋ ಅವರನ್ನು ‘ಕೇವಲ’ವಾಗಿ ನಡೆಸಿಕೊಳ್ಳುತ್ತದೆ. ಈ ಕೇವಲತೆ ಅವರನ್ನು ಅವರ ಬಣ್ಣದಿಂದ, ಆಹಾರದಿಂದ, ತೊಡುವ ಬಟ್ಟೆಯಿಂದ, ಅವರ ಆರ್ಥಿಕ ಮಟ್ಟದಿಂದ, ಅವರು ಹುಟ್ಟಿದ ಜಾತಿಯಿಂದ ನಿರ್ಧರಿಸುತ್ತದೆ. ಇದೀಗ ಜನರು ತಮಗಿಂತ ಭಿನ್ನ ಚಿಂತನೆಯನ್ನು ಹೊಂದಿದರೂ ಅವರೆಡೆಗೆ ತರತಮ ಮಾಡುವ ಪ್ರಯತ್ನ ಶುರುವಾಗಿದೆ.

ಪ್ರತಿಭಟನೆಯಲ್ಲಿ ತೊಡಗಿಕೊಂಡಿರುವ ಪಂಜಾಬಿಗರು, ಅದರಲ್ಲೂ ಯುವ ಪಂಜಾಬಿಗರು ಈ ಪ್ರಯತ್ನಗಳನ್ನು ದಿಟ್ಟವಾಗಿ ವಿರೋಧಿಸುತ್ತಿದ್ದಾರೆ. ಅದಕ್ಕಾಗಿ ಮಾತಿನ ಕನ್ನಡಿಯನ್ನು ವಾಸ್ತವಕ್ಕೆ ಹಿಡಿಯಲು ಆರಂಭಿಸಿದ್ದಾರೆ. ಈ ಕೇವಲಗೊಳಿಸುವುದು ಎದುರು ಬಣದ ಆತ್ಮವಿಶ್ವಾಸವನ್ನು ಕುಗ್ಗಿಸಿಬಿಡುತ್ತದೆ. ನೂರು ರೂಪಾಯಿಗೆ ಸಿಗುತ್ತಾರೆ ಅಂದರೆ– ಅದು ಏನನ್ನೆಲ್ಲಾ ಒಳಗೊಂಡಿದೆ? ಮೊದಲಿಗೆ ಅದು ಬಡತನವನ್ನು ಅವಮಾನ ಮಾಡುತ್ತದೆ. ಬರೀ ಅವಮಾನವಲ್ಲ, ಬದಲಿಗೆ, ಜೊಲ್ಲು ಸುರಿಸಿಕೊಂಡು ಬರ್ತಾರೆ ಎಂಬಂತಹ ಅಸಹನೆಯ ಕಿಡಿಯಂತೆ ಇವು ರಾಚುತ್ತವೆ. ಇನ್ನೊಂದು ಸಂದರ್ಭವೆಂದರೆ, ಸಾಮಾಜಿಕ ನೈತಿಕತೆಯನ್ನು ಪ್ರಶ್ನಿಸದೆ ವ್ಯಕ್ತಿಗತ ಮಾನಹಾನಿಯನ್ನು, ‘ದೇಹ’ವನ್ನು ಗುರಿಯಾಗಿಸಿ ಆಡಿ ಅವಮಾನಿಸುವುದು. ಇಲ್ಲೂ ಆಡುತ್ತಿರುವಾಕೆ ಹೆಣ್ಣಾಗಿ, ನಟಿಯಾಗಿ, ಇಂತಹ ಮಾತುಗಳು ಹೆಂಗಸರನ್ನು ನಿಯಂತ್ರಿಸಲು ಬಳಸುವ ಅಸ್ತ್ರಗಳಾಗಿರುವುದನ್ನು ಪರಿವೆಗೇ ತಂದುಕೊಳ್ಳಲಿಲ್ಲ. ಇದು, ಹಿರಿಯ ವಯಸ್ಸಿನ ಹೆಂಗಸಿನ ಬಗ್ಗೆ ಹೇಳುವಾಗ, ಅವಳನ್ನು ಕುಗ್ಗಿಸಲು ಯಾವ ಮಾತಾದರೂ ಸರಿ, ಆಕ್ರಮಣವೊಂದೇ ನಿಶ್ಚಿತ ಎಂಬ ಮಾನಸಿಕತೆಯ ಪ್ರತಿಬಿಂಬವಾಗಿರುತ್ತದೆ.

ಇನ್ನು ಮೂರನೆಯದೊಂದು ಸಂದರ್ಭವಿದೆ. ಇಲ್ಲಿ ಸ್ವಲ್ಪ ಸೂಕ್ಷ್ಮವಾಗಿ ಅವಲೋಕಿಸಿದರೆ, ಮಾತಾಡುವವರನ್ನೇ ಅದು ಆ ಕನ್ನಡಿಯಲ್ಲಿ ತೋರಿಸಿಬಿಡುತ್ತದೆ. ಈ ನೂರು ರೂಪಾಯಿ ಕೊಟ್ಟು ಜನರನ್ನು ಕರೆದುಕೊಂಡು ಬರುವುದನ್ನು ಆರಂಭಿಸಿದವರು ರಾಜಕೀಯ ಪಕ್ಷಗಳವರು. ಅವರ ಸಮಾವೇಶಗಳ ಬಲ ಪ್ರದರ್ಶನಗಳಿಗೆ. ಈಗ ತಮ್ಮಂತೆಯೇ ರೈತರೂ ಮಾಡುತ್ತಿದ್ದಾರೆ- ಎಂದು ಅವರನ್ನೇ ಅವರು ಅನಾವರಣ ಮಾಡಿಕೊಂಡಂತೆ ಆಗುವುದೂ ಇದೆ. ಇದಕ್ಕೆ ವಿರುದ್ಧವಾಗಿ ಮೊಹಿಂದರ್ ಕೌರ್ ನೀಡಿದ ಉತ್ತರ ಆಕೆಯ ಅನುಭವ, ವಯಸ್ಸಿಗೆ ತಕ್ಕನಾಗಿತ್ತು. ರೈತರು ಕಷ್ಟದಲ್ಲಿರುವುದರಿಂದ ಅವರನ್ನು ಬೆಂಬಲಿಸಲು ತಾನು ಅಲ್ಲಿಗೆ ಹೋಗಿದ್ದೆ ಎನ್ನುವುದನ್ನು ಹೇಳುತ್ತಲೇ, ತನ್ನ ರೈತಾಪಿ ಕೆಲಸಗಳಿಗೆ ತಾನು ಪ್ರತಿನಿತ್ಯ ಮುನ್ನೂರರಿಂದ ನಾನೂರು ರೂಪಾಯಿ ಕೂಲಿ ಕೊಡುತ್ತಿದ್ದು, ತನ್ನ ಮನೆಯ ಹಸುಗಳ ಹಾಲು ಕರೆದು, ಹಟ್ಟಿ ಸ್ವಚ್ಛಗೊಳಿಸಿ, ಹಸುವಿನ ಸಗಣಿ ಸಾರಿಸಿ ಕೊಟ್ಟರೆ ತಾನು ಕಂಗನಾರಿಗೆ ಐನೂರು ರೂಪಾಯಿ ಕೊಡಲು ತಯಾರಿದ್ದೇನೆ ಎಂದಾಕೆ ಹೇಳಿದರು. ಇಲ್ಲಿ ಮಾತು ವಸ್ತುಸ್ಥಿತಿಯನ್ನು ಮಾತ್ರ ಹೇಳುವುದರಿಂದ ಬಹಳ ಮೊನಚಾಗಿರುವುದನ್ನು ಗಮನಿಸಬಹುದು.

ತರತಮದ ಮನಃಸ್ಥಿತಿಯ ಇನ್ನೊಂದು ರೂಪವಾಗಿ ರೈತರೆಡೆಗಿನ ದೃಶ್ಯಮಾಧ್ಯಮಗಳ ಇನ್ನೂ ಕೆಲವು ಮಾತುಗಳನ್ನು ಗಮನಿಸಬಹುದು. ರೈತರು ಇಂಗ್ಲಿಷ್ ಮಾತಾಡ್ತಾರಾ? ಜೀನ್ಸ್ ಹಾಕ್ಕೊಂತಾರಾ? ಇತ್ಯಾದಿ ಹಾಸ್ಯಾಸ್ಪದ ಮಾತುಗಳು. ಇದು ಅನುಮಾನಿಸುವ ಮೂಲಕ ಅವಮಾನಿಸುವ ಉದ್ದೇಶದ್ದು ಹಾಗೂ ತರತಮದಲ್ಲಿ ಎಲ್ಲರಿಗೂ ಭಾಷೆ ಹಾಗೂ ಬಟ್ಟೆಯ ಸಮಾನತೆಯನ್ನು ನಿರಾಕರಿಸುವಂಥದ್ದು. ಇದನ್ನು ತೀವ್ರವಾಗಿ ವಿರೋಧಿಸಿದ ಯುವ ರೈತರು ತಾವು ಸದಾ ಹರಿದ, ಕೊಳಕಾದ ಬಟ್ಟೆ ಧರಿಸಬೇಕು, ಇಂಗ್ಲಿಷ್ ಮಾತಾಡಬಾರದು ಎಂದು ಬಯಸುವುದನ್ನು ಇವರು ನಿಲ್ಲಿಸಬೇಕು. ‘ಇದು ನಮ್ಮ ಹಕ್ಕು. ನಾವು ಅನ್ನದಾತರಾಗಿದ್ದು ನಾವು ಮಾತ್ರ ಒಳ್ಳೆಯ ಬಟ್ಟೆ ಧರಿಸದೆ ಸದಾ ದರಿದ್ರರಾಗಿರಬೇಕೇ? ನಾವೂ ಸಂಪನ್ನರು’ ಎಂದು ತಿರುಗೇಟು ನೀಡಿದ್ದಾರೆ.

ಮಾಧ್ಯಮದ ಭಾಷೆ ರೈತರನ್ನು ಕೊಡುವವರು ಎಂದು ಪರಿಗಣಿಸದೆ, ಕೈ ಒಡ್ಡುವವರು ಎಂದು ಸ್ಥಾಪಿಸುವ ನಾಗರಿಕ ಅಹಂಕಾರದ ದ್ಯೋತಕವೂ ಅದರೊಂದಿಗೆ ಮೂರ್ಖತನದ್ದೂ ಆಗಿದೆ.

ತರತಮದ ಒಡಹುಟ್ಟಿಕೊಂಡು ಬರುವ ಇನ್ನೊಂದಿಷ್ಟು ಅಧಿಕಾರದ ಮಾತುಗಳಿವೆ. ಇವು ಬಂದೂಕಿನ ಮೊನೆಯಿಂದ ಉಡಾಯಿಸುವ ಮದ್ದಿನಂತೆ ಬೆದರಿಕೆಯಾಗಿ ವರ್ತಿಸುತ್ತಿರುತ್ತವೆ. ಈಗ ನಾಕಾರು ವರ್ಷಗಳಿಂದ ಇವುಗಳನ್ನು ಎಷ್ಟೊಂದು ಉರುಳಿಸಲಾಗಿದೆ ಎಂದರೆ, ಎಷ್ಟೋ ಜನರ ಬಾಯಿ ಬಂದು ಮಾಡಿದ ಇದನ್ನು ಯೋಧರನ್ನು ಬೆನ್ನಿಗಿಟ್ಟುಕೊಂಡ ಪಂಜಾಬಿನ ರೈತರು ಮರುದಾಳಿಯಲ್ಲಿ ಹಿಮ್ಮೆಟ್ಟಿಸಿ ಬಿಟ್ಟಿದ್ದಾರೆ. ಅದು ‘ದೇಶದ್ರೋಹಿಗಳು’ ಎಂಬ ಆಪಾದನೆ.

ಪಂಜಾಬಿ ರೈತರನ್ನು ಖಲಿಸ್ತಾನಿಗಳು ಎಂದು ದೂಷಿಸಿದ್ದು ವಾಸ್ತವದಲ್ಲಿ ಅಪಾಯಕಾರಿ ನಡೆ. ಹೀಗೆ ಹೇಳುವ ಮೂಲಕ ಆಗುವ ಪರಿಣಾಮಗಳನ್ನೂ
ಯೋಚಿಸದೆ, ಯಾರಿಗೋ ಬೀಸಣಿಗೆಯಾಗುವ ಉಮೇದಿನಲ್ಲಿ, ಯಾರಿಗೋ ಮೊಣಕಾಲೂರುವ ಲಜ್ಜೆಗೇಡಿತನದಲ್ಲಿ ಉರುಳಿಸಿದ ಈ ಗೋಲಿಯಂತಹ ಮಾತುಗಳನ್ನು ತಡೆದ ರೈತರು, ‘ಸರಿ, ನಾವು ಖಲಿಸ್ತಾನಿಗಳು ಎಂದು ನೀವು ಹೇಳುವುದಾದರೆ, ದೇಶದ ಗಡಿ ಕಾಯುತ್ತಿರುವ ನಮ್ಮ ಮಕ್ಕಳನ್ನು ನಾವು ಸೈನ್ಯದಿಂದ ವಾಪಸ್‌ ಕರೆಸಿಕೊಳ್ಳುತ್ತೇವೆ’ ಎಂದರು. ಹೌದು, ಸ್ವಾಭಿಮಾನದ ಶ್ರಮದಿಂದ ಬಾಳುವವರನ್ನು ನೀವು ತಾತ್ಸಾರದಿಂದ ತುಳಿಯಹೋದರೆ ಅವರು ನಿಮ್ಮ ಕಾಲು ಹಿಡಿಯುತ್ತಾರೆಂದು ಭಾವಿಸುವುದು ಕುಟಿಲತನ. ‌

ತಣ್ಣನೆ ಕೊಠಡಿಯೊಳಗೆ ಕುಳಿತು ಪಠಿಸುತ್ತಿರುವ ದೇಶಭಕ್ತಿಯ ಮಂತ್ರದಂತಹ ಮಾತಿಗೆ ಇರುವಷ್ಟು ಚಲಾವಣೆ, ಗಡಿ ಕಾಯುವವರ ಮತ್ತು ಅನ್ನದಾತರ ಮಾತಿನ ನಿಜನೆಲೆಗೆ ತತ್‍ಕ್ಷಣದಲ್ಲಿ ಕಾಣಿಸದೇ ಇದ್ದರೂ ಅದು ಮಣ್ಣೊಳಗಿನ ಬಿತ್ತಿನಂತಹದು, ಅರಿವಿನ ಜಲ ಬಿದ್ದಾಗ ನೆಲಸೀಳಿ ಮೊಳೆಯುವಂತಹದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT