ಬುಧವಾರ, ಏಪ್ರಿಲ್ 8, 2020
19 °C

ಅನನ್ಯ ಅನಾ...

ರಘುನಾಥ ಚ.ಹ. Updated:

ಅಕ್ಷರ ಗಾತ್ರ : | |

Deccan Herald

ಸಾಹಿತ್ಯಕ್ಕೆ ಸಂಬಂಧಿಸಿದ ಬಹುತೇಕ ಚರ್ಚೆಗಳು ಕೃತಿನಿಷ್ಠವಾಗಿರುವ ಬದಲು, ವ್ಯಕ್ತಿನಿಷ್ಠವಾಗಿರುವುದು ಹೆಚ್ಚು. ಆದರೆ, 2018ರ ‘ಮ್ಯಾನ್‌ ಬುಕರ್‌’ ಪ್ರಶಸ್ತಿ ಪುರಸ್ಕೃತ ಕಾದಂಬರಿಗಾರ್ತಿ ಅನಾ ಬರ್ನ್ಸ್‌ ವಿಷಯದಲ್ಲಿ ಇದಕ್ಕೆ ಅವಕಾಶವಿಲ್ಲ. ತಮ್ಮ ಜೀವನದ ಕುರಿತ ಪ್ರಶ್ನೆಗಳು ಎದುರಾದಾಗಲೆಲ್ಲ ಚಿಪ್ಪಿನೊಳಗೆ ತೂರಿಕೊಳ್ಳುವ ಅವರು, ಕೃತಿಗಳ ಮೂಲಕವಷ್ಟೇ ಸಹೃದಯರಿಗೆ ಪರಿಚಿತರು.

ಕಾದಂಬರಿಗಳ ಮೂಲಕವೇ ಅವರ ಬದುಕಿನ ಕಥೆಯನ್ನು ಹೆಣೆಯಲು ನಡೆಯುತ್ತಿರುವ ಪ್ರಯತ್ನಗಳು ಸಾಹಿತ್ಯವಲಯದಲ್ಲಿ ಅಪರೂಪ ಎನ್ನಿಸುವಂತಹವು.

‘ಹಾಡುವುದು ಅನಿವಾರ್ಯ ಕರ್ಮ ಎನಗೆ’ ಎನ್ನುವ ಹಾಡುಹಕ್ಕಿಯಂತಹ ಬದುಕು ಅನಾ ಅವರದು. ತಮ್ಮ ಪಾಡಿಗೆ ತಾವು ಬರೆದುಕೊಂಡಿರುವ ಅವರು, ₹ 50.85 ಲಕ್ಷ ಮೊತ್ತದ ‘ಬುಕರ್‌’ ಪ್ರಶಸ್ತಿ ಮೂಲಕ ಈಗ ಒಮ್ಮೆಗೇ ಸುದ್ದಿಯಲ್ಲಿದ್ದಾರೆ. ಬೂಕರ್‌ ಪ್ರಶಸ್ತಿಯ ಮೌಲ್ಯವಿರುವುದು ಅದರ ಮೊತ್ತದಲ್ಲಲ್ಲ; ಅದು ತಂದುಕೊಡುವ ತಾರಾಮೌಲ್ಯದಲ್ಲಿ.

ಬೂಕರ್‌ ದೊರಕಿತೆಂದರೆ ತಾರಾವರ್ಚಸ್ಸಿನ ಬರಹಗಾರನೊಬ್ಬ ಉದಯಿಸಿದಂತೆಯೇ ಲೆಕ್ಕ. ಬೂಕರ್‌ ಪ್ರಶಸ್ತಿಯ 50ನೇ ವರ್ಷಾಚರಣೆ ಸಂದರ್ಭದಲ್ಲಿ ಅನಾ ಅವರು ಪ್ರಶಸ್ತಿಗೆ ಪಾತ್ರವಾಗಿರುವುದು ವಿಶೇಷ. ಬೂಕರ್‌ ಪ್ರಶಸ್ತಿಯ ಈವರೆಗಿನ 49 ವರ್ಷಗಳ ಇತಿಹಾಸದಲ್ಲಿ ಅನಾ ಪ್ರಶಸ್ತಿ ಪಡೆಯುತ್ತಿರುವ ಹದಿನೇಳನೇ ಮಹಿಳೆ.

ಅನಾ ಮೂಲತಃ ಐರ್ಲೆಂಡ್‌ನ ಬೆಲ್‌ಫಾಸ್ಟ್‌ನವರು. ಪ್ರಸ್ತುತ ಇಂಗ್ಲೆಂಡ್‌ನ ಪೂರ್ವ ಸಸೆಕ್ಸ್‌ನಲ್ಲಿ ಅವರ ನೆಲೆ. ಐರ್ಲೆಂಡ್‌ನಲ್ಲಿ ಕಳೆದ ಬಾಲ್ಯ ಹಾಗೂ ಹದಿಹರೆಯದ ದಿನಗಳ ತವಕತಲ್ಲಣಗಳನ್ನು ಬರವಣಿಗೆಯ ಮೂಲಕ ಹಿಡಿದಿಡುವ ಅವರ ಪ್ರಯತ್ನದ ಫಲವೇ ‘ಮಿಲ್ಕ್‌ಮ್ಯಾನ್‌’ ಕಾದಂಬರಿ. ಇದವರ ಮೂರನೇ ಕೃತಿ. ತವರಿನಲ್ಲಿನ ಸಂಕಷ್ಟದ ದಿನಗಳೇ ತಮ್ಮ ಕಾದಂಬರಿಯ ಹುಟ್ಟಿಗೆ ಕಾರಣ ಎಂದು ಸೂಚ್ಯವಾಗಿ ಹೇಳುವ ಅನಾ ಅವರಿಗೆ, ಬರವಣಿಗೆ ತಮ್ಮ ವೈಯಕ್ತಿಕ ಬದುಕು ಹಾಗೂ ಸಮಕಾಲೀನ ಸಮಾಜವನ್ನು ಅರ್ಥೈಸಿಕೊಳ್ಳುವ ಮಾರ್ಗ ಆದಂತಿದೆ.

ತಾನು ಬದುಕುತ್ತಿರುವ ಕಾಲದ ಅಗ್ನಿಪರೀಕ್ಷೆಯ ರೂಪದಂತೆ ಅನಾ ಅವರ ಕೃತಿಗಳು ಕಾಣುತ್ತವೆ. ವಿವಾಹಿತ ಪುರುಷನೊಂದಿಗೆ ಸಂಬಂಧ ಹೊಂದಿದ ಯುವತಿಯೊಬ್ಬಳು ತನ್ನ ನಂಟನ್ನು ಅಮ್ಮನ ಕಣ್ಣಿನಿಂದ ಮುಚ್ಚಿಡಲು ಹೆಣಗುತ್ತಾಳೆ. ಆ ಸಂಬಂಧದ ಬಗ್ಗೆ ಹಬ್ಬುವ ಗಾಳಿಮಾತುಗಳೇ ಕಾದಂಬರಿಯ ನೇಯ್ಗೆಯಲ್ಲಿನ ಪ್ರಮುಖ ಎಳೆಗಳಲ್ಲೊಂದಾಗಿದೆ. ‘ಇಂತಹದೊಂದು ಕಥನವನ್ನು ನಾವು ಇದುವರೆಗೂ ಓದಿಲ್ಲ. ಸಾಂಪ್ರದಾಯಿಕ ಯೋಚನೆಗೆ ಸವಾಲೆನ್ನಿಸುವ ಚಿಂತನೆ ಇಲ್ಲಿದೆ’ ಎನ್ನುವ ಜ್ಯೂರಿಗಳ ಉದ್ಗಾರವೇ ‘ಮಿಲ್ಕ್‌ ಮ್ಯಾನ್‌’ ಕಾದಂಬರಿಗೆ ನೀಡಿದ ಪ್ರಮಾಣಪತ್ರದಂತಿದೆ. ಹದಿನೆಂಟು ವರ್ಷದ ಯುವತಿಯೊಬ್ಬಳ ನಿರೂಪಕಳಾಗಿರುವ ತಂತ್ರದ ಕಥನ ತೀರ್ಪುಗಾರರಿಗೆ ಇಷ್ಟವಾಗಿದೆ.

ಈ ಬಾರಿಯ ಬೂಕರ್‌ ಕಣದಲ್ಲಿ ಘಟಾನುಘಟಿಗಳಿದ್ದರು. ಈಶಾನ್ಯ ಪೆಸಿಫಿಕ್‌ ಕಾಡುಗಳನ್ನು ನಡೆಯುವ ಕಥೆಯನ್ನೊಳಗೊಂಡ ರಿಚರ್ಡ್‌ ಪವರ್ಸ್‌ರ ‘ದಿ ಓವರ್‌ ಸ್ಟೋರಿ’, ಜೀವಾವಧಿ ಶಿಕ್ಷೆಗೆ ಗುರಿಯಾದ ನರ್ತಕಿಯ ಬದುಕಿನ ಕಥೆಯಾದ ರ‍್ಯಾಚೆಲ್‌ ಕುಶ್‌ನರ್‌ ಅವರ ‘ದಿ ಮಾರ್ಸ್‌ ರೂಂ’, ತಮ್ಮದೇ ಭಾಷೆಯಲ್ಲಿ ಬದುಕು ತಾಯಿ ಮಗುವಿನ ಕಥನ ಕಟ್ಟಿದ್ದ ಯುವ ಬರಹಗಾರ್ತಿ ಡೈಸಿ ಜಾನ್ಸರ್‌ರ ‘ಎವೆರೆಥಿಂಗ್‌ ಅಂಡರ್’, ಗುಲಾಮನಾಗಿ ದುಡಿಯವ ವ್ಯಕ್ತಿಯ ಬದುಕಿನ ಸಂಘರ್ಷದ ಚಿತ್ರಣವಾದ ಎಸಿ ಎಡ್ಯುಗನ್‌ರ ‘ವಾಷಿಂಗ್‌ ಬ್ಯ್ಲಾಕ್‌’ ಹಾಗೂ ರಾಬಿನ್‌ ರಾಬರ್ಟ್ಸನ್‌ರ ಕಾವ್ಯನಾಟಕ ‘ದಿ ಲಾಂಗ್‌ ಟೇಕ್‌’ಗಳು ‘ಮಿಲ್ಕ್‌ ಮ್ಯಾನ್‌’ಗೆ ಭಾರೀ ಸವಾಲು ಒಡ್ಡಿದ್ದವು. ಇವೆಲ್ಲ ಕಥನಗಳನ್ನು ಹಿಂದಿಕ್ಕಿ ‘ಮಿಲ್ಕ್‌ಮ್ಯಾನ್‌’ ಬೂಕರ್‌ ಗರಿಗೊಳಗಾಗಿರುವುದು ಅದರ ಗಟ್ಟಿತನಕ್ಕೆ ಹಾಗೂ ಅನನ್ಯತೆಗೆ ಉದಾಹರಣೆಯಂತಿದೆ.

ಬೆಲ್‌ಫಾಸ್ಟ್‌ನಲ್ಲಿ ಕಳೆದ ದಿನಗಳು ಅನಾ ಅವರ ಬದುಕಿಗೆ ದ್ರವ್ಯ ಒದಗಿಸಿದ್ದರೂ, ಕಳೆದ ದಿನಗಳ ಬಗ್ಗೆ ಹಾಗೂ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಅನಾ ಅವರದು ಗಾಢ ಮೌನ. ಬೆಲ್‌ಫಾಸ್ಟ್‌ನಲ್ಲಿ ಕಳೆದ ದಿನಗಳ ಬಗ್ಗೆ ಒಂದು ಅಂತರ ಉಳಿಸಿಕೊಂಡಿರುವುದಾಗಿ ಸಂದರ್ಶನವೊಂದರಲ್ಲಿ ಅವರು ಹೇಳಿದ್ದರು. ಈ ಅನಾಮಧೇಯತೆಯನ್ನು ಅವರು ಕೃತಿಯಲ್ಲೂ ತಂದಿದ್ದಾರೆ.

‍ಕಾದಂಬರಿಯಲ್ಲಿನ ಪಾತ್ರಗಳಿಗೆ ಹಾಗೂ ಕಥೆ ನಡೆಯುವ ಪ್ರದೇಶಕ್ಕೆ ಹೆಸರುಗಳಿಲ್ಲ. ಬೆಲ್‌ಫಾಸ್ಟ್‌ನ ಉಲ್ಲೇಖ ಕಥೆಯಲ್ಲೆಲ್ಲೂ ಇಲ್ಲ. ಹಾಗಿದ್ದರೂ ಕಥನದಲ್ಲಿ ಕಾಣಿಸಿಕೊಳ್ಳುವ ಹಿಂಸಾಚಾರ, ಕರ್ಫ್ಯೂ, ಸೈನಿಕರ ಸದ್ದುಗದ್ದಲದಂತಹ ವಿವರಗಳೇ ಬೆಲ್‌ಫಾಸ್ಟ್‌ನಲ್ಲಿನ ಕ್ಷೋಭೆಯ ವಾತಾವರಣದೊಂದಿಗೆ ಕಥನವನ್ನು ತಳಕು ಹಾಕಲು ಹಾಗೂ ಕೃತಿಯಲ್ಲಿನ ಅನಾಮಧೇಯತೆಯ ಹಿನ್ನೆಲೆಯಲ್ಲಿ ಕಾದಂಬರಿಗಾರ್ತಿಯ ಬದುಕಿನ ವಿವರಗಳ ಪ್ರತಿಬಿಂಬ ಎಂದು ಊಹಿಸಲು ಕಾರಣವಾಗಿದೆ. ಲೈಂಗಿಕತೆ, ಗಾಸಿಪ್‌ಗಳಿಂದ ಕೂಡಿದ ಹಾಗೂ ಅತೀವ ಒತ್ತಡದಲ್ಲಿ ಬದುಕುತ್ತಿರುವ ಸಮಾಜದ ಚಿತ್ರಣ ಒಳಗೊಂಡಿರುವ ಕಾದಂಬರಿ ಸಹೃದಯರ ಗಮನಸೆಳೆದಿದೆ.

‘ಮಿಲ್ಕ್‌ಮ್ಯಾನ್‌’ ಪ್ರಕಟಣೆ ಕೂಡ ಅನಾ ಅವರಿಗೆ ಸುಲಭದ್ದೇನೂ ಆಗಿರಲಿಲ್ಲ. ಪ್ರಾಣ ಹಿಂಡುವ ಬೆನ್ನುನೋವನ್ನು ಸಹಿಸಿಕೊಂಡು ರಚಿಸಿದ ಕೃತಿ, ಓರ್ವ ಏಜೆಂಟನ ಮೂಲಕ ಬೇರೆ ಬೇರೆ ಪ್ರಕಾಶಕರ ಕೈ ಸೇರಿದ ನೆನಪುಗಳು ಬರಹಗಾರರಿಗೆ ಖುಷಿ ನೀಡುವಂತಹದ್ದಲ್ಲ.

ಅನಾ ಬರಹಗಾರ್ತಿಯಾದುದು ಆಕಸ್ಮಿಕವಾಗಿ. ಬೆಲ್‌ಫಾಸ್ಟ್‌ನಲ್ಲಿದ್ದ ದಿನಗಳಲ್ಲಿ ಲೇಖಕಿಯಾಗುವ ತಾಲೀಮನ್ನೇನೂ ಅವರು ನಡೆಸಿದವರಲ್ಲ. ‘ಎಲ್ಲ ಹುಡುಗಿಯರಂತೆ ನನ್ನ ಬದುಕು’ ಎನ್ನುವ ಅವರಿಗೆ ಓದುವ ಹವ್ಯಾಸವಿತ್ತಾದರೂ ಬರವಣಿಗೆಯ ತಹತಹವೇನೂ ಇರಲಿಲ್ಲ. 1987ರಲ್ಲಿ ಲಂಡನ್‌ನ ಯೂನಿವರ್ಸಿಟಿಗೆ ತೆರಳಿದ ನಂತರವೇ ಬರವಣಿಗೆಯ ಚಿಗುರು ಅವರಲ್ಲಿ ಕುಡಿಯೊಡೆದದ್ದು. ಮೂವತ್ತರ ಪ್ರಾಯದಲ್ಲಿ ಮಗುವಿನ ಮುಗ್ಧತೆಯಲ್ಲಿ ಬರವಣಿಗೆಯ ಮೂಲಕ ಬದುಕಿನ ಅಚ್ಚರಿಗಳನ್ನು ಶೋಧಿಸಲು ಹೊರಟಾಗ ಅಭಿವ್ಯಕ್ತಿಯ ರೂಪದಲ್ಲಿ ಒದಗಿಬಂದದ್ದು ಕಾದಂಬರಿಗಳು.

ಬೇರೊಬ್ಬರ ಬದುಕಿನ ತಲ್ಲಣಗಳನ್ನು ಕಡವಾಗಿ ತೆಗೆದುಕೊಳ್ಳುವುದು ಕಷ್ಟ ಎನ್ನುವ ನಂಬಿಕೆಯ ಅನಾ, ತಮ್ಮ ಬದುಕನ್ನು ಕೂಡ ಒಂದು ಅಂತರದಲ್ಲಿ ನಿಂತು ನೋಡಲು ಬಯಸುವವರು. ಬರೆಯುವ ಮಾಂತ್ರಿಕ ಪ್ರಕ್ರಿಯೆಯಲ್ಲಿ ತನ್ನ ಅನುಭವಗಳು ಹಾಗೂ ಕಲ್ಪನೆಗಳು ಕಥನವಾಗಿ ರೂಪುಗೊಳ್ಳುವುದು ಅವರಿಗೆ ಬೆರಗನ್ನುಂಟುಮಾಡಿದೆ.

‘ಮಿಲ್ಕ್‌ಮ್ಯಾನ್‌’ ಮಾತ್ರವಲ್ಲ – ಅವರ ಹಿಂದಿನ ಕೃತಿಗಳಾದ ‘ನೋ ಬೋನ್ಸ್‌’ ಹಾಗೂ ‘ಲಿಟಲ್‌ ಕನ್‌ಸ್ಟ್ರಕ್ಷನ್ಸ್‌’ ಕೂಡ ವರ್ತಮಾನದ ಸ್ಪಂದನಗಳೇ ಆಗಿವೆ. ಮುರಿಯುತ್ತಿರುವ ಕುಟುಂಬಗಳು, ಸಂಬಂಧಗಳಲ್ಲಿನ ಬಿರುಕುಗಳು, ಹೊತ್ತಿ ಉರಿಯುವ ಸಮಾಜ – ಇವೆಲ್ಲ ಅವರ ಕೃತಿಗಳ‌ನ್ನು ರೂಪಿಸಿರುವ ಪ್ರಮುಖ ದ್ರವ್ಯಗಳು. ‘ನೋ ಬೋನ್ಸ್’ ಕೃತಿ ‘ದಿ ಆರೆಂಜ್‌ ಪ್ರೈಜ್‌’ಗೆ ನಾಮಕರಣ ಹೊಂದುವ ಮೂಲಕ ಸುದ್ದಿಯಾಗಿತ್ತು. ಆದರೂ ಬೂಕರ್‌ ರೇಸ್‌ನಲ್ಲಿ ವಾಚಾಳಿಯಲ್ಲದ ಅನಾ ನೆಚ್ಚಿನ ಹುರಿಯಾಳೇನೂ ಆಗಿರಲಿಲ್ಲ. ‘ಮಿಲ್ಕ್‌ಮ್ಯಾನ್‌’ಗೆ ಪ್ರಶಸ್ತಿಯ ಗೌರವ ಸಂದಿರುವುದು ಮೌನವನ್ನು ಇಷ್ಟಪಡುವ, ತನಗಿಂತಲೂ ತನ್ನ ಕೃತಿ ಮುಖ್ಯವೆಂದು ಬಗೆಯುವ ಲೇಖಕಿಯ  ಬದ್ಧತೆಗೆ ಸಂದ ಗೌರವದಂತಿದೆ.

ಹಿಂಸೆ ಪುಷ್ಕಳವಾಗಿದ್ದ, ತಮ್ಮ ಅಸ್ತಿತ್ವಕ್ಕಾಗಿ ಹೆಣಗುವ ಹಾಗೂ ಅಪನಂಬಿಕೆಯಿಂದ ಕೂಡಿದ್ದ ಬದುಕುಗಳ ಸಮಾಜದಲ್ಲಿ ತಾನು ಬೆಳೆದುಬಂದಿರುವುದಾಗಿ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಕರುಣಾಳು ಆಗಿರುವುದು ಬದುಕಿನಿಂದ ಅವರಿಗೆ ದೊರೆತ ಮಾರ್ಗದರ್ಶನ ಎಂದಿದ್ದಾರೆ.

ಕೃತಿಗಳ ಮೂಲಕ ಮಾತ್ರವಲ್ಲ – ವ್ಯಕ್ತಿತ್ವದ ಮೂಲಕವೂ ಅನಾ ಬರ್ನ್ಸ್‌ ಸಾಹಿತ್ಯದ ವಿದ್ಯಾರ್ಥಿಗಳಿಗೆ ಮಾದರಿಯಾಗಬಲ್ಲರು. ಕೃತಿಕಾರನ ಬದಲು ಕೃತಿ ಮಾತನಾಡಬೇಕು ಎನ್ನುವುದಕ್ಕೆ ಅವರು ಅತ್ಯುತ್ತಮ ಉದಾಹರಣೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು