ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಸ್ಥಿರ ಕೃಷಿ: ಅಭಿವೃದ್ಧಿಯ ವ್ಯಾಖ್ಯೆ ಬದಲಾಗಲಿ

ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕುಲಾಂತರಿ, ಹೈಬ್ರಿಡ್ ತಳಿಗಳಷ್ಟೇ ಉತ್ತರ ಆಗಲಾರವು
Last Updated 25 ಡಿಸೆಂಬರ್ 2018, 19:56 IST
ಅಕ್ಷರ ಗಾತ್ರ

ಹಿರಿಯ ಕೃಷಿ ವಿಜ್ಞಾನಿ ಎಂ.ಎಸ್. ಸ್ವಾಮಿನಾಥನ್ ಅವರು ಇತ್ತೀಚೆಗೆ ‘ಕರೆಂಟ್ ಸೈನ್ಸ್’ ಪತ್ರಿಕೆಯಲ್ಲಿ ಬರೆದ ಲೇಖನವೊಂದು ಕುಲಾಂತರಿ ಬೆಳೆಗಳ ಅಗತ್ಯ ಹಾಗೂ ಅಪಾಯಗಳ ಬಗ್ಗೆ ಚರ್ಚೆಯೊಂದನ್ನು ಹುಟ್ಟುಹಾಕಿದೆ. ಭಾರತದ ಹಸಿರು ಕ್ರಾಂತಿಯ ಹರಿಕಾರರೇ ಬಿ.ಟಿ. ಹತ್ತಿ ವಿಫಲವಾಗಿದೆಯೆಂದು ಹೇಳಿದ್ದು ಹಲವರ ಕಣ್ಣು ಕೆಂಪಾಗಿಸಿದೆ. ಕೆಲವೇ ಕೆಲವು ಆಹಾರ ಬೆಳೆಗಳ ಉತ್ಪಾದನೆಯನ್ನಷ್ಟೇ ಹೆಚ್ಚಿಸುವ ಗುರಿ ಹೊಂದಿದ್ದ ಹಸಿರು ಕ್ರಾಂತಿಗಿಂತ, ಕೃಷಿಕರ ಹಾಗೂ ಹಳ್ಳಿಗಳ ಸರ್ವತೋಮುಖ ಅಭಿವೃದ್ಧಿಯತ್ತ ಗಮನ ಹರಿಸುವ ‘ಸುಸ್ಥಿರ ಕ್ರಾಂತಿ’ ಅಗತ್ಯವಿದೆ ಎಂದಿದ್ದಾರೆ.

ಹಸಿರು ಕ್ರಾಂತಿಯ ಹೆಸರಿನಲ್ಲಿ ನಾವಿಟ್ಟ ತಪ್ಪು ಹೆಜ್ಜೆಗಳದುಷ್ಪರಿಣಾಮಗಳು ಒಂದೊಂದಾಗಿ ಈಗಷ್ಟೇ ಬೆಳಕಿಗೆ ಬರುತ್ತಿವೆ. ಹೈಬ್ರಿಡ್ ತಳಿಗಳ ಭರಾಟೆಯ ನಡುವೆ ನಮ್ಮ ಪರಿಸರಕ್ಕೆ ಸಹಜವಾಗಿ ಹೊಂದಿಕೊಂಡಿದ್ದ ದೇಸಿ ತಳಿಗಳನ್ನು ಕಳೆದುಕೊಂಡಿದ್ದೇವೆ. ವಿಪರೀತ ಕೀಟನಾಶಕ, ಗೊಬ್ಬರಗಳ ಬಳಕೆಯಿಂದ ನೆಲ-ಜಲ ಮೂಲಗಳನ್ನಷ್ಟೇ ಅಲ್ಲ, ಕೃಷಿಕರ ಹಾಗೂ ಗ್ರಾಹಕರ ಆರೋಗ್ಯವನ್ನೂ ಅಪಾಯಕ್ಕೊಡ್ಡಿದ್ದೇವೆ. ದೇಶದ ಒಟ್ಟಾರೆ ಆಹಾರೋತ್ಪಾದನೆಯಲ್ಲಿ ಪ್ರಗತಿ ಸಾಧಿಸಿದ್ದರೂ ಹಳ್ಳಿಗಳ ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿಯನ್ನು ಬದಲಿಸುವಲ್ಲಿ ವಿಫಲವಾಗಿದ್ದೇವೆ. ತಮ್ಮ ಪುಟ್ಟ ಹೊಲಗಳಲ್ಲಿ ಸಾಧ್ಯವಿದ್ದಷ್ಟನ್ನು ಬೆಳೆದು ಬದುಕುತ್ತಿದ್ದ ಕೃಷಿಕರಿಗೆ ದೇಶಕ್ಕೆಲ್ಲ ಅನ್ನವುಣಿಸುವ ಜವಾಬ್ದಾರಿ ನೀಡಿ ಮತ್ತಷ್ಟು ಬಡವಾಗಿಸಿದ್ದೇವೆ.

ಕಡಿಮೆ ರಾಸಾಯನಿಕ ಒಳಸುರಿ ಹಾಗೂ ಅಧಿಕ ಇಳುವರಿಯ ಭರವಸೆಯನ್ನು ಹೊತ್ತು ತಂದ ಬಿ.ಟಿ. ಹತ್ತಿ, ತನ್ನ ಉದ್ದೇಶಿತ ಗುರಿಗಳನ್ನು ಮುಟ್ಟುವಲ್ಲಿ ವಿಫಲವಾಗಿದೆ. ಶೇಕಡ 95 ಭಾಗದಲ್ಲಿ ಕುಲಾಂತರಿ ಹತ್ತಿಯನ್ನೇ ಬೆಳೆಯುತ್ತಿದ್ದರೂ ಕಳೆದ ಒಂದು ದಶಕದಲ್ಲಿ ಇಳುವರಿಯಲ್ಲಿ ಹೆಚ್ಚೇನೂ ಬದಲಾವಣೆಯಾಗಿಲ್ಲ ಎಂದು ಅಧಿಕೃತ ಅಂಕಿ ಅಂಶಗಳೇ ಹೇಳುತ್ತಿವೆ. ಮೊದಲ ಹಂತದ ಬಿ.ಟಿ. ಹತ್ತಿಗೆ ಕೀಟಗಳು ಈಗಾಗಲೇ ನಿರೋಧಕತೆಯನ್ನು ಬೆಳೆಸಿಕೊಂಡಿವೆ. ಬೋಲ್ ಗಾರ್ಡ್ 2 ಎಂಬ ಎರಡನೇ ಹಂತದ ಬಿ.ಟಿ. ಹತ್ತಿಗೂ ಇದೇ ಗತಿಯಾಗುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಹೊಸ ಕೀಟಗಳ ಸಮಸ್ಯೆಯಿಂದಾಗಿ ಮಣ್ಣಿಗೆ ಇನ್ನಷ್ಟು ವಿಷವುಣಿಸಬೇಕಾಗಿ ಬಂದಿದೆ. ಬಿ.ಟಿ. ಬೆಳೆಯನ್ನುಳಿಸಲು ಅದರ ಜೊತೆಗೆ ಒಂದಿಷ್ಟು ಕುಲಾಂತರಿಯಲ್ಲದ ಗಿಡಗಳನ್ನೂ ಬೆಳೆಸಿ, ಪಾರಂಪರಿಕ ಕೃಷಿ ವಿಧಾನಗಳನ್ನು ಅನುಸರಿಸುವಂತೆ ವಿಜ್ಞಾನಿಗಳೇ ಈಗ ರೈತರಿಗೆ ಹೇಳತೊಡಗಿದ್ದಾರೆ.

ಕುಲಾಂತರಿ ತಂತ್ರಜ್ಞಾನ ಇನ್ನೂ ಕಾರ್ಪೊರೇಟ್ ವಲಯದ ಕಪಿಮುಷ್ಟಿಯಲ್ಲೇ ಇದೆ. ಭಾರತದಲ್ಲಿ ಬೆಳೆಯುವ ಎಲ್ಲ ಬಿ.ಟಿ. ಹತ್ತಿ ಗಿಡಗಳಿಗೂ ಮೊನ್ಸಾಂಟೋ ಎಂಬ ಬಹುರಾಷ್ಟ್ರೀಯ ಕಂಪನಿಗೆ ರಾಯಧನ ಸಲ್ಲುತ್ತದೆ. ಖಾಸಗಿ ಕಂಪನಿಯ ಏಕಸ್ವಾಮ್ಯದಿಂದಾಗಿ ಬೀಜದ ಬೆಲೆಯೂ ಗಗನಕ್ಕೇರಿದೆ. ತಾನು ಬೆಳೆದಿದ್ದರಲ್ಲೇ ಒಂದಿಷ್ಟನ್ನು ಆಯ್ದು ಉಳಿಸಿ ಮುಂದಿನ ನಾಟಿ ಮಾಡುತ್ತಿದ್ದ ಕೃಷಿಕರೀಗ ಪ್ರತಿ ವರ್ಷವೂ ಕಂಪನಿ ಬೀಜಗಳಿಗಾಗಿ ಕಾಯ್ದು ಕುಳಿತುಕೊಳ್ಳಬೇಕಾಗಿದೆ. ಪಾರಂಪರಿಕ ತಳಿಗಳನ್ನು ಬಿಟ್ಟು ಕುಲಾಂತರಿ ಹೈಬ್ರಿಡ್‍ಗಳನ್ನು ಬೆಳೆಯುವಂತೆ ‍ರೈತರನ್ನು ಪ್ರೋತ್ಸಾಹಿಸುತ್ತಿರುವ ಕಂಪನಿಗಳು ಅದೇ ಸಮಯದಲ್ಲಿ ಉಡುಪಿ ಗುಳ್ಳದಂತಹ ದೇಸಿ ಬದನೆಯ ತಳಿಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿವೆ. ಈ ನಡುವೆ ಕುಲಾಂತರಿಗಳ ಸುರಕ್ಷತೆಯ ಬಗ್ಗೆ ವಿಜ್ಞಾನಿಗಳಲ್ಲೇ ಒಮ್ಮತವಿಲ್ಲ. ಹೊಸ ಸಂಶೋಧನೆಗಳು ಪರಿಸರ ಹಾಗೂ ಮನುಷ್ಯರ ಆರೋಗ್ಯದ ಮೇಲಾಗಬಹುದಾದ ಅಪಾಯದತ್ತ ಬೊಟ್ಟು ಮಾಡುತ್ತಿವೆ. ದೀರ್ಘಕಾಲೀನ ಅಧ್ಯಯನಗಳ ಫಲಿತಾಂಶ ಇನ್ನಷ್ಟೇ ಬರಬೇಕಿದೆ. ಕುಲಾಂತರಿ ಬೆಳೆಗಳನ್ನು ಬಿಡುಗಡೆ ಮಾಡುವ ಮೊದಲು ಮಾಡಬೇಕಾದ ಪರೀಕ್ಷೆಗಳ ಬಗ್ಗೆ ಸರಿಯಾದ ನೀತಿ ನಿಯಮಗಳು ನಮ್ಮಲ್ಲಿನ್ನೂ ಇಲ್ಲ. ಕಾರ್ಪೊರೇಟ್ ಹಿತಾಸಕ್ತಿಗಳನ್ನು ಬದಿಗಿಟ್ಟು ಕೃಷಿಕರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸಬೇಕಿದೆ. ಗಗನಕ್ಕೇರಿದ ಒಳಸುರಿಗಳ ಬೆಲೆ, ಅನಿಶ್ಚಿತ ಮಾರುಕಟ್ಟೆ ಧಾರಣೆಗಳಿಂದಾಗಿ ಕೃಷಿಕ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ.

ಜಾಗತಿಕ ಮಾರುಕಟ್ಟೆಯಲ್ಲಿ ಮೊನ್ಸಾಂಟೋ ಕಂಪನಿ ಅಭಿವೃದ್ಧಿಪಡಿಸಿದ ರೌಂಡಪ್ ಕಳೆನಾಶಕದ್ದೇ ಬಹುಪಾಲಿದೆ. ಇದು ಬೆಳೆಯೊಂದನ್ನು ಬಿಟ್ಟು ಉಳಿದೆಲ್ಲ ಬಗೆಯ ಗಿಡಗಳನ್ನೂ ಕೊಲ್ಲುತ್ತದೆ. ಕಳೆಯನ್ನೇ ಕಿತ್ತು ಗೊಬ್ಬರವನ್ನಾಗಿಸುತ್ತಿದ್ದ ರೈತರೀಗ ಬೀಜ, ಗೊಬ್ಬರ ಹಾಗೂ ಕಳೆನಾಶಕಗಳನ್ನು ಕಂಪನಿಯಿಂದಲೇ ಖರೀದಿಸಬೇಕಾದ ವಿಷವೃತ್ತಕ್ಕೆ ಸಿಲುಕುತ್ತಿದ್ದಾರೆ. ಕಾಲಕ್ರಮೇಣ ಯಾವುದಕ್ಕೂ ಬಗ್ಗದ ‘ಮಹಾ ಕಳೆಗಿಡ’ಗಳು ಸೃಷ್ಟಿಯಾಗಿ ಮತ್ತಷ್ಟು ಕಳೆನಾಶಕಗಳನ್ನು ಮಣ್ಣಿಗೆ ಸೇರಿಸುವಂತೆ ಮಾಡುತ್ತಿವೆ. ರೌಂಡಪ್‍ನ ಕ್ಯಾನ್ಸರ್ ಕಾರಕ ಗುಣಗಳ ಬಗ್ಗೆ ಮಾಡಿದ ಅಧ್ಯಯನವನ್ನು ಮುಚ್ಚಿಹಾಕುವ ಪ್ರಯತ್ನವನ್ನು ಕಂಪನಿ ಮಾಡುತ್ತಿದೆ. ಜೈವಿಕ ಸುರಕ್ಷತೆಯ ಬಗೆಗಿನ ಕಠಿಣ ನಿಯಮಗಳನ್ನು ಸಡಿಲಗೊಳಿಸಲು ಲಾಬಿ ಮಾಡುತ್ತಿದೆ.

ಧಾರವಾಡ ಕೃಷಿ ವಿಶ್ವವಿದ್ಯಾಲಯದಂತಹ ಸರ್ಕಾರಿ ಸಂಸ್ಥೆ ಅಭಿವೃದ್ಧಿಪಡಿಸಿದ ಬಿ.ಟಿ. ಹತ್ತಿ ಹಗರಣದ ಸುಳಿಯಲ್ಲಿ ಸಿಲುಕಿದೆ. ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಕೃಷಿ ವಿಶ್ವವಿದ್ಯಾಲಯಗಳು ಕೃಷಿ ಅಧಿಕಾರಿಗಳನ್ನು ತಯಾರಿಸುವ ಕಾರ್ಖಾನೆಗಳಾಗಿಬಿಟ್ಟಿವೆ. ಪಕ್ಕದ ಕಾಸರಗೋಡಿನಲ್ಲೇ ಎಂಡೊಸಲ್ಫಾನ್ ದುರಂತದ ಉದಾಹರಣೆಯಿದ್ದರೂ ಇಂದಿಗೂ ಅದರ ಬಳಕೆಯ ಬಗ್ಗೆ ಉರುಹೊಡೆಸಲಾಗುತ್ತಿದೆ. ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಬೇಕಾದವರು ನೆಲಮೂಲ ಜ್ಞಾನವನ್ನು ಮರೆತು ಎಲ್ಲದಕ್ಕೂ ಪಠ್ಯಪುಸ್ತಕಗಳ ಮೊರೆ ಹೋಗುತ್ತಿದ್ದಾರೆ. ಧಾರವಾಡದ ಕೃಷಿ ವಿ.ವಿ. ಆವರಣದಲ್ಲಿರುವ ಸಾವಯವ ಕೃಷಿ ಸಂಶೋಧನಾ ಸಂಸ್ಥೆಯ ಮುಂದಿನ ಹುಲ್ಲುಹಾಸು, ಹೂಗಿಡಗಳನ್ನು ಬೆಳೆ
ಸಲು ಕೂಡಾ ಯಥೇಚ್ಚ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಾರೆ ಎಂಬುದು ಈ ಸಂಸ್ಥೆಗಳ ಕಾರ್ಯಶೈಲಿಗೆ ಹಿಡಿದ ಕನ್ನಡಿ! ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕುಲಾಂತರಿಗಳು, ಹೈಬ್ರಿಡ್ ತಳಿಗಳಷ್ಟೇ ಉತ್ತರ ಆಗಲಾರವು.

ಕಡಿಮೆ ಒಳಸುರಿಗಳನ್ನು ಬಳಸಿ ಹೆಚ್ಚಿನ ಇಳುವರಿ ಪಡೆಯುವುದರ ಜೊತೆಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ರೂಪಿಸುವತ್ತ ಗಮನಹರಿಸುವುದು ಈಗಿನ ಅಗತ್ಯ. ಈಗಾಗಲೇ ಇರುವ ತಂತ್ರಜ್ಞಾನಗಳನ್ನು ಸರಿಯಾಗಿ ಬಳಸಿಕೊಳ್ಳಬೇಕಿದೆ. ಹವಾಮಾನ ಬದಲಾವಣೆಯ ಈ ಸಮಯದಲ್ಲಿ ಕೃಷಿ ಕ್ಷೇತ್ರ ಎದುರಿಸಬಹುದಾದ ಸವಾಲುಗಳನ್ನೂ ಗಮನದಲ್ಲಿಟ್ಟುಕೊಳ್ಳಬೇಕು. ಅನಿಯಮಿತ ಮಳೆ, ಹೆಚ್ಚುವ ಕೀಟಬಾಧೆಯಂತಹ ಸವಾಲುಗಳಿಗೆ ಸ್ಥಳೀಯವಾಗಿಯೇ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ. ಸುಸ್ಥಿರ ಕೃಷಿಯ ಬಗ್ಗೆ ಸ್ವಾಮಿನಾಥನ್ ಸಮಿತಿ ನೀಡಿದ ವರದಿ ಈಗಲೂ ಸರ್ಕಾರೀ ಕಡತಗಳಲ್ಲಿ ದೂಳು ತಿನ್ನುತ್ತಿದೆ.

ಕುಬ್ಜ ಗೋಧಿ ತಳಿಗಳನ್ನು ಅಭಿವೃದ್ಧಿಪಡಿಸುವ ಮೂಲಕ ಅರವತ್ತರ ದಶಕದಲ್ಲಿ ಭಾರತದಲ್ಲಿ ಹಸಿರು ಕ್ರಾಂತಿಗೆ ನಾಂದಿ ಹಾಡಿದ ಎಂ.ಎಸ್. ಸ್ವಾಮಿನಾಥನ್ ಅವರೇ ನಮ್ಮ ಮುಂದಿನ ಹಾದಿ ಹೇಗಿರಬೇಕೆಂಬುದಕ್ಕೆ ಮಾದರಿಯಾಗುವಂತಹ ಸಂಸ್ಥೆಯೊಂದನ್ನು ಕಟ್ಟಿ ಬೆಳೆಸಿದ್ದಾರೆ. ತಮಿಳುನಾಡಿನಲ್ಲಿ 1998ರಲ್ಲಿ ಪ್ರಾರಂಭವಾದ ಸಂಸ್ಥೆ ಸುತ್ತಲಿನ ನೂರಾರು ಹಳ್ಳಿಗಳಲ್ಲಿ ಕೆಲಸ ಮಾಡುತ್ತಿದೆ. ಹೊಸ ವಿದೇಶಿ ತಂತ್ರಜ್ಞಾನಗಳನ್ನು ರೈತರ ಮೇಲೆ ಹೇರುವ ಬದಲು ಅಲ್ಲಿನ ವಿಜ್ಞಾನಿಗಳು ಮಣ್ಣಿಗಿಳಿದು ಸ್ಥಳೀಯರ ಅಗತ್ಯಗಳನ್ನು ಅರ್ಥ ಮಾಡಿಕೊಂಡು ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಕೃಷಿ ಉತ್ಪಾದನೆಯ ಜೊತೆಗೇ ಪೌಷ್ಟಿಕ ಆಹಾರ, ಶಿಕ್ಷಣ, ಜೀವ ವೈವಿಧ್ಯ ಸಂರಕ್ಷಣೆ ಹೀಗೆ ಹಳ್ಳಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.

ಸಣ್ಣ ಹಿಡುವಳಿದಾರರು ತಾವು ಬೆಳೆದಿದ್ದನ್ನು ಮಾರಿ ಬಳಿಕ ಅಕ್ಕಿಗಾಗಿ ನ್ಯಾಯಬೆಲೆ ಅಂಗಡಿಗಳ ಮುಂದೆ ಕೈಚಾಚುವಂತಹ ಪರಿಸ್ಥಿತಿಗೆ ನಾವಿಂದು ತಲುಪಿದ್ದೇವೆ. ದುರಂತವೆಂದರೆ ರೈತರು ಪದೇ ಪದೇ ಬೀಜಗಳಿಗಾಗಿ ಕಂಪನಿಗಳ ಮೊರೆ ಹೊಕ್ಕರೆ ದೇಶದ ಜಿಡಿಪಿ ಹೆಚ್ಚುತ್ತದೆ. ಪೆಟ್ರೋಲಿಯಂ ಆಧಾರಿತ ರಸಗೊಬ್ಬರಗಳು, ಅಪಾಯಕಾರಿ ಕೀಟನಾಶಕಗಳನ್ನು ಕೊಂಡು ಬಳಸಿದಷ್ಟೂ ಅಭಿವೃದ್ಧಿ ಸೂಚ್ಯಂಕ ಮೇಲೇರುತ್ತದೆ. ಜನರ ಆರೋಗ್ಯ ಹದಗೆಟ್ಟು ಆಸ್ಪತ್ರೆ ಸೇರಿದರೆ ಜಿಡಿಪಿ ಜಾಸ್ತಿಯಾಗುತ್ತದೆ! ನಮ್ಮ ಸುತ್ತಲಿನ ಪರಿಸರ
ವನ್ನು, ಸಮಾಜದ ಸ್ವಾಸ್ಥ್ಯವನ್ನು ಗಣನೆಗೆ ತೆಗೆದುಕೊಳ್ಳದ ಇಂತಹ ಅಭಿವೃದ್ಧಿಯ ವ್ಯಾಖ್ಯೆ ಬದಲಾಗದೇ ಸುಸ್ಥಿರ ಕೃಷಿ ಕ್ರಾಂತಿ ಶುರುವಾಗಲಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT