ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ: ಸಶಕ್ತ ದೃಶ್ಯಾವಳಿಯ ಪ್ರತಿಭಾ ಸಾಹಸ

ಗ್ರಾಮವೊಂದರ ಚಿತ್ರಣವನ್ನು ಯಥಾವತ್ತಾಗಿ ಹಿಡಿದಿಟ್ಟಿದೆ ‘ಶಿವಮ್ಮ ಯರೇಹಂಚಿನಾಳ ’ ಸಿನಿಮಾ
Published 20 ಜೂನ್ 2024, 23:30 IST
Last Updated 20 ಜೂನ್ 2024, 23:30 IST
ಅಕ್ಷರ ಗಾತ್ರ

ಅದೊಂದು ಉತ್ತರ ಕರ್ನಾಟಕದ ಬಸ್ ನಿಲ್ದಾಣ. ಅಲ್ಲಿ ಎದುರುಬದುರು ಕೂತ ಹದಿಹರೆಯದ ಹುಡುಗ ಹುಡುಗಿಯರು. ಒಳಭಾಗದಲ್ಲಿ ಒಬ್ಬ ಮುದುಕ. ಬಸ್ಸಿಗಾಗಿ ಕಾಯುತ್ತಿರುವ ವಯಸ್ಕರಿಗೆ ಅದು ಎಷ್ಟು ಹೊತ್ತಿಗಾದರೂ ಬರಲಿ ಚಿಂತೆಯಿಲ್ಲ. ಕೈಯಲ್ಲಿ ಮಾಯಾಕನ್ನಡಿ ಮೊಬೈಲ್ ಇದೆ. ಕಣ್ಣೇಕಣ್ಣಾಗಿ ಮೊಬೈಲ್ ನೋಡುತ್ತಿರುವುದರ ತೀವ್ರತೆ ಅವರ ಮುಖಭಾವದಲ್ಲಿ ಎದ್ದೆದ್ದು ಕುಣಿಯುತ್ತಿದೆ! ತಮಾಷೆಯೆಂದರೆ, ಈ ನಿಲ್ದಾಣದ ಒಳಗೋಡೆಯಲ್ಲಿ ನಾನಾ ಬಗೆಯ ಪೋಸ್ಟರುಗಳನ್ನು ಒಂದರ ಮೇಲೊಂದರಂತೆ ಅಂಟಿಸಲಾಗಿದೆ. ಅದರಂತೆ ಅಲ್ಲಿಯೇ ‘ಗುಂಗು ಹಿಡಿಶ್ಯಾಳ ಗಂಗಿ’ ನಾಟಕ ಪ್ರದರ್ಶನ ಎಂಬ ಪೋಸ್ಟರು ಇದೆ. ಇದು, ‘ಶಿವಮ್ಮ ಯರೇಹಂಚಿನಾಳ’ ಎಂಬ ಶುದ್ಧ ಗ್ರಾಮೀಣ ಜನಪದ ಚಿತ್ರದ ಕ್ಷಣಮಾತ್ರದ ಒಂದು ದೃಶ್ಯ. ಇಡೀ ಚಿತ್ರ ಉತ್ತರ ಕರ್ನಾಟಕದಲ್ಲಿನ ಗ್ರಾಮದ ಓಣಿಯ ಬದುಕನ್ನು ಹಾಗೆ ಹಾಗೆಯೇ ಇತ್ತಿತ್ತ ಚಿತ್ರ ದೃಶ್ಯದಲ್ಲಿ ತೆಗೆದಿರಿಸಿದಂತಿದೆ!

ನಮ್ಮ ಈಗಿನ ಸಿನಿಮಾ ನಟರು ತಾವು ಚಿತ್ರದಲ್ಲಿ ನಟಿಸಬೇಕಾದರೆ ಎದೆಯೊಳಗೆ, ತಲೆಯೊಳಗೆ ಇರಬೇಕಾದ ಭಾವಕ್ಕಿಂತ, ಪ್ರತಿಭೆಗಿಂತ ದೇಹ, ತೋಳು ಹುರಿ ಇರಬೇಕು ಎಂಬುದನ್ನು ಬಲವಾಗಿ ನಂಬಿದಂತೆ ತೋರುತ್ತದೆ. ಇದರೊಂದಿಗೆ ಆಯಾ ನಟರದೇ ಅಭಿಮಾನಿ ಸೈನ್ಯವೂ ಹೆಚ್ಚುತ್ತಾ ಹುಚ್ಚೆದ್ದು ಕುಣಿದು, ಜಿಮ್‌ಗಳತ್ತ ಮುಖ ಮಾಡಿ ತಂತಮ್ಮ ತೋಳು ದಪ್ಪ ಮಾಡಿಕೊಳ್ಳತೊಡಗಿದೆ. ಇದರಿಂದ ಅವರದೇ ದುರಂತ ಕಥೆಗಳು ಜೀವಂತ ಸೃಷ್ಟಿಯಾಗಿ, ಸಿನಿಮಾ ಕತೆಗಳಿಗಿಂತ ಹೆಚ್ಚು ಪ್ರಚಾರವಾಗತೊಡಗಿವೆ. ಭ್ರಮಾಧೀನ, ಅಗ್ಗದ ಜನಪ್ರಿಯ ಚಿತ್ರಗಳು ಈ ಹೊತ್ತು ಯುವ ಸಮೂಹದಲ್ಲಿ ಕೆಟ್ಟ ಕನಸುಗಳನ್ನು ಸೃಷ್ಟಿಸುತ್ತ, ನಿರುದ್ಯೋಗದ ಒಂಟಿತನವನ್ನು ಹೆಚ್ಚಿಸುತ್ತ ಹಾದಿ ತಪ್ಪಿಸುತ್ತಿವೆ ಎಂಬ ಯಥಾಪ್ರಕಾರದ ಮಾತನ್ನು ಮತ್ತೆ ಪ್ರಸ್ತಾಪಿಸಬೇಕಿದೆ.

ಶಿವಮ್ಮ... ಚಿತ್ರ ಸಿದ್ಧವಾಗಿ ಎರಡು ವರ್ಷಗಳಾಗಿದ್ದರೂ ಇದು ಇತ್ತೀಚೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಆದರೆ ಕಾನ್ ಮತ್ತು ಬೆಂಗಳೂರು ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು ವೀಕ್ಷಕರ ಮೆಚ್ಚುಗೆ ಗಳಿಸಿದೆ. ಯಾಕೆಂದರೆ ಅದರ ಪೂರ್ಣ ಹೊಸತನಕ್ಕಾಗಿ! ಯಾವುದೇ ಗ್ರಾಮೀಣ ಚಿತ್ರವೆಂದರೆ, ಒಬ್ಬ ಸುಪ್ರಸಿದ್ಧ ನಟಿಗೆ ಹಳೆಯ ಹರಿದ ಸೀರೆ, ನಟನಿಗೆ ಚೆಡ್ಡಿ, ಬನೀನು ಏರಿಸಿದರೆ ಹಳ್ಳಿಯ ಕಥೆ ಆದಂತೆ ಅಂದುಕೊಂಡದ್ದುಂಟು. ಆದರೆ ಅದದೇ ಜಾಡಿಗೆ ಬಿದ್ದ ನಟರಿಗೆ ಅವರ ಸವೆದ ನಟನೆಯ ಹಾವಭಾವ ಬದಲಾಗದೆ, ತದನಂತರ ಜನಪದ ನುಡಿಗಟ್ಟುಗಳು ಸರಿಯಾಗಿ ಹೊರಳದೆ, ಕಡೆಗೆ ಜನಪದವಲ್ಲದ ಚಿತ್ರಗಳಾಗಿ ಕಾಣಿಸಿಕೊಂಡದ್ದುಂಟು.

ಇದೀಗ ರಿಷಬ್ ಶೆಟ್ಟಿ ನಿರ್ಮಾಪಕರಾಗಿ, ಫೋಟೊಗ್ರಫಿ ಪರಿಣತ, ಎಂಜಿನಿಯರಿಂಗ್‌ ಪದವಿ ಮುಗಿಸಿದ ಜಯಶಂಕರ ಆರ್ಯರ್ ಸೇರಿ ಮಾಡಿದ ಶಿವಮ್ಮ... ಸಿನಿಮಾ, ನಾಳೆಯೋ ಮುಂದಿನ ವಾರವೋ ನಾವು ಯರೇಹಂಚಿನಾಳ ಗ್ರಾಮಕ್ಕೆ ಹೋಗಿ ಆ ಬೀದಿಯ ಬದುಕನ್ನು ಕಂಡರೆ ಹೇಗೆ ಕಣ್ಣಿಗೆ ಕಾಣಬಹುದೋ ಹಾಗೆಯೇ ಇರುವುದು ಅಚ್ಚರಿಯ ಸಂಗತಿ. ಹಾರಾಡುವ ಪಕ್ಷಿಗಳನ್ನು, ಬೀದಿಯಲ್ಲಾಡುವ ಜೀವಸಂಕುಲವನ್ನು ಕ್ಯಾಮೆರಾದ ಮುಂದೆ ನಿಲ್ಲೆಂದು ಹೇಳಲು ಸಾಧ್ಯವೇ? ಆದರೆ ಆ ಕ್ರಮ ಈ ಚಿತ್ರದಲ್ಲಿ ಶಿವಮ್ಮನಿಂದ, ಅವಳ ಗಂಡ, ಮಗ, ಮಗಳು ಮಿಕ್ಕ ಎಲ್ಲ ಪಾತ್ರಗಳಿಂದ ಸಾಧ್ಯವಾಗಿಬಿಟ್ಟಿದೆ. ಅಷ್ಟೇ ಅಲ್ಲ ಒಂದೇ ದೃಶ್ಯದಲ್ಲಿ ಕನಿಷ್ಠ ಮೂರ್ನಾಲ್ಕು ಭಾವಗಳನ್ನು ಸಾಮಾನ್ಯದಂತೆ ಕಾಣುವ ಈ ಅಸಾಮಾನ್ಯ ಚಿತ್ರದಲ್ಲಿ ನೋಡಬಹುದು.

ಈ ಹೊತ್ತು ಗ್ರಾಮಗಳಲ್ಲಿ ಬೆದ್ದಲು ಬೇಸಾಯ ಹೇಗೆ ಹೊಗೆ ಸುತ್ತಿಕೊಂಡಿದೆ ಎಂಬುದು ತಿಳಿದದ್ದೇ. ಶಿವಮ್ಮನ ಅಣ್ಣ ಬಯಲು ಬಿದ್ದ ಹೊಲದಲ್ಲಿ ಅದೇನೋ ಕೆಲಸ ಮಾಡುತ್ತಿರುತ್ತಾನೆ. ಅವನ ಬೇಸಾಯದ ಶ್ರಮ ಯಾವ ಬಗೆಯದು ಎಂಬುದೇ ಗೊತ್ತಾಗುವುದಿಲ್ಲ. ಹೊಲ ಪಾಳು ಬಿದ್ದಂತೆ ಕಾಣುತ್ತದೆ. ಅಲ್ಲಲ್ಲಿ ಬೆಂಕಿ ಉರಿಯುತ್ತಾ ಅಸಾಧ್ಯ ಹೊಗೆ ಎದ್ದುಕೊಂಡಿರುತ್ತದೆ. ಈ ಒಣಬೇಸಾಯದ ಯಜಮಾನ ಮುಂದೆ ತೀರಿಕೊಳ್ಳುತ್ತಾನೆ. ದೃಶ್ಯದ ವೈವಿಧ್ಯ ಇರುವುದು ಇಲ್ಲೇ. ಶಿವಮ್ಮನ ಈ ರೈತಾಪಿ ಅಣ್ಣ ತೀರಿಕೊಂಡದ್ದಕ್ಕೆ ಕಾರಣ ಅವನ ವ್ಯವಸಾಯದ ಪಡಿಪಾಟಲೋ ಇಲ್ಲಾ ಊರ ಶಾಲೆಯ ಪರಿಚಾರಿಕೆಯ ಉದ್ಯೋಗದೊಂದಿಗೆ ಹೊಸ ಬಿಜಿನೆಸ್ಸು ಹಿಡಿದು, ಆ ಶಕ್ತಿವರ್ಧಕ ಪೇಯವನ್ನು ಎಲ್ಲರಿಗೂ ಕುಡಿಸಿ, ಅದಕ್ಕಾಗಿ ಹೊಗಳಿಸಿಕೊಳ್ಳುವುದರ ಜೊತೆಜೊತೆಗೆ ಬೈಸಿಕೊಳ್ಳುತ್ತಲೂ ಇರುವ ಶಿವಮ್ಮನ ಅಣ್ಣನೂ ಅದನ್ನೇ ಕುಡಿದು ಸತ್ತನೋ ಎಂಬುದು ಸ್ಪಷ್ಟವಾಗುವುದಿಲ್ಲ. ಆದರೆ ಅಂತಹ ಅನುಮಾನದ ಅಪವಾದಕ್ಕೆ ಶಿವಮ್ಮ ಸಿಲುಕುತ್ತಾಳೆ. ಶಿವಮ್ಮ ತಾನು ತೊಡಗುವ ಬಿಜಿನೆಸ್ಸಿಗೆ ಬಂಡವಾಳ ಹೂಡಲು ಎಲ್ಲರಲ್ಲೂ ಸಾಲ ಕೇಳಿದಂತೆ ಅಣ್ಣನಲ್ಲೂ ಕಾಸು ಕೇಳಲು ಬಂದಿರುತ್ತಾಳೆ. ಆಗಲೇ ಅತ್ತಿಗೆಯ ಕೆಂಗಣ್ಣಿಗೆ ಗುರಿಯಾಗಿರುತ್ತಾಳೆ.

ಶಿವಮ್ಮನ ಸತ್ತ ಅಣ್ಣನ ಸುತ್ತ ಕುಳಿತವರಲ್ಲಿ ಮೊದಲ ಸುತ್ತಿನಲ್ಲಿ ಹೆಂಗಸರ ಸಮೂಹವಿದ್ದು, ಹೆಂಡತಿ ತಲೆ ತಲೆ ಚಚ್ಚಿಕೊಳ್ಳುತ್ತಿರಬೇಕಾದರೆ, ಅಣ್ಣನ ಸಾವಿಗೆ ಶಿವಮ್ಮ ಕಕ್ಕಾಬಿಕ್ಕಿಯಾಗಿಯೋ ಸುಪ್ತ ದುಃಖದಲ್ಲಿಯೋ ಕೂತಿರುತ್ತಾಳೆ. ಮತ್ತೊಬ್ಬಳು, ಸತ್ತವನ ಘನ ವ್ಯಕ್ತಿತ್ವವನ್ನು ಉತ್ಪ್ರೇಕ್ಷಾ ಧಾಟಿಯಲ್ಲಿ ಗಂಟಲಿಂದೀಚಿನ ಗುಣಗಾನ ಮಾಡುತ್ತಿರುತ್ತಾಳೆ. ಇದರ ನಡುವೆ ಅತ್ತಿಗೆಯ ದುಃಖ ಸ್ಫೋಟವಾಗಿ, ಶಿವಮ್ಮ ಮಾರುವ ಆಧುನಿಕ ಪೇಯವೇ ಗಂಡನ ಸಾವಿಗೆ ಕಾರಣವೆಂದು ಆಕೆಗೆ ಝಾಡಿಸಿ ಒದೆಯುತ್ತಾಳೆ. ಹೆಣದ ಎರಡನೆಯ ಸುತ್ತಿನಲ್ಲಿ, ಪುರುಷರು ಡಪ್ಪು ದಮಡಿ ತಾಳ ಹಿಡಿದು ಭಜನೆಯ ಪದ ಹಾಡುತ್ತಿರುತ್ತಾರೆ. ಇನ್ನು ಅಲ್ಲೇ ಮೂರನೆಯ ದೃಶ್ಯವಾಗಿ, ಸಿಂಗರಿಸಿದ ಹೆಣದ ಕುರ್ಜನ್ನು ಹೊತ್ತೊಯ್ಯುವಲ್ಲಿ ಭಯಂಕರ ಸದ್ದಿನ ಪಟಾಕಿಯ ಹೊಗೆ ಮತ್ತು ಹುಡುಗರ ಕುಣಿತ, ಓಣಿಯ ಮನೆಗಳೇ ಅಲ್ಲಾಡುವಂತಿರುತ್ತವೆ. ಇಲ್ಲಿ ಸಾವಿನ ಗಹನ ಸಂಗತಿಯೇ ಪತ್ತೆ ಇಲ್ಲದಂತಾಗಿಬಿಡುವುದು ದೃಶ್ಯದ ವಿಚಿತ್ರ!

ಕೆಲವೇ ಕ್ಷಣಗಳ ಈ ದೃಶ್ಯದಲ್ಲಿ ಅಳು, ಈರ್ಷ್ಯೆ, ಗುಣಗಾನ, ತಾಳ ತಪ್ಪಿದ ಭಜನೆ, ಅದರೊಳಗೇ ಚೂರುಪಾರು ಅಧ್ಯಾತ್ಮ ವಾಕ್ಯಗಳು, ಕಡೆಯದಾಗಿ ಪಟಾಕಿಯ ಸಿಡಿತ, ಕುಣಿತ ಎಲ್ಲ ದೃಶ್ಯಾವಳಿಯೂ ಅದ್ಭುತ ರೀತಿಯಲ್ಲಿ ಹಾಯ್ದುಬಿಡುತ್ತದೆ.

ಚಿತ್ರದ ಇನ್ನೊಂದು ಆರಂಭಿಕ ದೃಶ್ಯ ಶಕ್ತಿವರ್ಧಕ ಪುಡಿಯ ಪ್ರಚಾರ ಸಭೆ. ಸಭೆಗೆ ಆಗಮಿಸುವ ಪ್ರಚಾರಕ ಅಧಿಕಾರಿ ತನ್ನ ವಸ್ತುವಿನ ಮಹಿಮೆಯ ಗುಣಗಾನ ಮಾಡಿ, ಹಳ್ಳಿಯವರೆಲ್ಲ ಇದನ್ನು ಬಳಸುವರಾದರೆ ಎಲ್ಲರೂ ದಿನ, ವಾರ, ತಿಂಗಳು, ವರ್ಷದಲ್ಲಿ ಶಕ್ತಿಯುತರೂ ಶ್ರೀಮಂತರೂ ಆಗುವರೆಂದು ಹುರಿದುಂಬಿಸುತ್ತಾನೆ. ಅವನು ಕೈಕಾಲು ಝಾಡಿಸಿ ‘ಐ ವಿಲ್ ಡೂ ಇಟ್’ ಎಂದು ಘೋಷಿಸುವ ಪದಗಳನ್ನು ಶಿವಮ್ಮ ‘ಐ ವಿಲ್ ಡುಟ್’ ಎಂದು ಪುನರುಚ್ಚರಿಸುವಳು. ಇದು ಅವಳ ಕಿವಿಗೆ, ಮನಸ್ಸಿಗೆ ‘ಡೌಟ್’ ಆಗಿಯೂ ‘ಡೋಂಟ್’ ಆಗಿಯೂ ಕೇಳಿಸುತ್ತಿತ್ತೇನೊ!

ಎಲ್ಲರ ಆರೋಗ್ಯದ ಕುರಿತು ಮಾತನಾಡುವ ಶಿವಮ್ಮನ ಗಂಡನೇ ನಿತ್ಯ ರೋಗಿ. ಕಾಲೇಜು ಓದುವ ಉಢಾಳ ಮಗನನ್ನು ‘ಎಲ್ಲಿಗೆ ಹೊರಟೆ?’ ಎಂದು ಕೇಳಿದರೆ ‘ಸುಡುಗಾಡಿಗೆ’ ಎನ್ನುತ್ತಾನೆ. ಅವ್ವನ ಕೈಯಿಂದಲೇ ಬೈಕು ತಳ್ಳಿಸಿಕೊಳ್ಳುತ್ತಾನೆ. ಗ್ರಾನೈಟ್ ಉದ್ಯಮಿಯ ಮಗನನ್ನು ಪ್ರೀತಿಸಿದ ಮಗಳ ಮದುವೆಯನ್ನು ಶಿವಮ್ಮ ವಿರೋಧಿಸುತ್ತಾಳೆ. ಬಡತನಕ್ಕೂ ಶ್ರೀಮಂತಿಕೆಗೂ ಎಲ್ಲಿಯ ಸಂಬಂಧ? ಮದುವೆ ಮುರಿದ ಹಂತದಲ್ಲಿ ಶಿವಮ್ಮನೇ ಬೀಗರ ಮುಂದೆ ಮದುವೆಗಾಗಿ ಬೇಡಿಕೊಳ್ಳುತ್ತಾಳೆ. ಮುರಿದ ಮದುವೆಯ ಕೂಸನ್ನು ಯಾರಿಗೆ ಕೊಡಲಿ ಎಂದು ಕಂಗಾಲಾಗುತ್ತಾಳೆ. ಯಥಾಪ್ರಕಾರ ಹಂಚಿನಾಳದ ಸರ್ಕಾರಿ ಶಾಲೆಗೆ ಬೀಗ ಜಡಿದಿದ್ದು, ಶಿವಮ್ಮ ಅಂಗಳದ ಕಸ ಗುಡಿಸುತ್ತಿರುತ್ತಾಳೆ. 

ಆಧುನಿಕ ಸಂದರ್ಭದಲ್ಲಿ ಅಪರಿಚಿತವೆನಿಸಿ ನಮ್ಮ ಕಣ್ಣ ಮುಂದೆ ಜಾಹೀರಾತು ರೂಪದಲ್ಲಿ ಬರುವ ವಸ್ತು ಸಂಗತಿಯ ಪ್ರಚಾರ ಮತ್ತು ಮಾರಾಟದ ತಂತ್ರಕ್ಕೆ ಪಟ್ಟಣದ ಪರಿಸರ ಮಾತ್ರವಲ್ಲ, ಶರವೇಗದಲ್ಲಿ ಗ್ರಾಮಗಳೂ ಬಲಿಯಾಗುತ್ತಿವೆ ಎಂಬುದರಲ್ಲಿ ಅಚ್ಚರಿಯೇನೂ ಇಲ್ಲ. ಈ ಹಿನ್ನೆಲೆಯಲ್ಲಿ ಒಂದು ಶಕ್ತಿವರ್ಧಕ ಪೇಯದ ಮಾರಾಟ ಮತ್ತು ಅದರ ದಿಢೀರ್ ಲಾಭದ ಮೋಹದ ಹಿಂದೆ ಹೊರಡುವವಳು ಶಿವಮ್ಮ. ಅದರ ಗುಂಗಿನಲ್ಲಿ ಏಳುತ್ತ, ಬೀಳುತ್ತ ಸಾಲಗಾರಳಾಗಿ ತಡವರಿಸುವ ಪರಿಯಲ್ಲಿ, ಕ್ರಮದಲ್ಲಿ ಆಧುನಿಕತೆ ಅನಿವಾರ್ಯ, ಅದಕ್ಕೆ ಒಗ್ಗುವುದೇ ಧರ್ಮ ಅಥವಾ ಕರ್ಮ ಎಂಬುದನ್ನು ಚಿತ್ರದ ಅಂತ್ಯ ಸಾರುವಂತಿದೆ.

ಚಿತ್ರದಲ್ಲಿ ದೃಶ್ಯಗಳಿಗೆ ಹಿನ್ನೆಲೆ ಸಂಗೀತವೇ ಇಲ್ಲ! ದೃಶ್ಯಗಳ ಆಡುಭಾಷೆ ಸಶಕ್ತ. ಈ ಚಿತ್ರ ನಿರ್ಮಾಣದ ಕ್ರಮವನ್ನೇ ವಿವರಿಸುವ ಹಾಡೊಂದಿದೆ. ಸಂಗೀತಾ ಕಟ್ಟಿಯವರ ಉತ್ತರ ಕರ್ನಾಟಕದ ಭಜನಾ ಶೈಲಿಯ ಆರಂಭಿಕ ಶೀರ್ಷಿಕೆಯ ಈ ಹಾಡು ಗುಂಗು ಹಿಡಿಸುವಂತಿದೆ. ಒಂದು ಓಣಿಯ ನಿವಾಸಿ ಶಿವಮ್ಮನ (ಶರಣಮ್ಮ) ಅದಮ್ಯ ಉತ್ಸಾಹದ ಕಥೆಯೊಂದಿಗೆ, ನಿರ್ಮಾಪಕ, ನಿರ್ದೇಶಕರ ಪ್ರತಿಭಾ ಸಾಹಸವೂ ಸೇರಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT