ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಪೋಷಕರ ಪೋಷಣೆ: ಹೊರೆಯಲ್ಲ ಹೊಣೆ

ಮಕ್ಕಳ ಬಗ್ಗೆ ಹಿರಿಯ ನಾಗರಿಕರಿಗೆ ಯಾವುದೇ ರೀತಿಯ ಭ್ರಮೆ ಸಲ್ಲದು
Published 23 ನವೆಂಬರ್ 2023, 0:28 IST
Last Updated 23 ನವೆಂಬರ್ 2023, 0:28 IST
ಅಕ್ಷರ ಗಾತ್ರ

ಬದುಕಿನ ಮುಸ್ಸಂಜೆಯಲ್ಲಿರುವ ಅಪ್ಪ– ಅಮ್ಮನನ್ನು ನೋಡಿಕೊಳ್ಳುವುದನ್ನು ಮಕ್ಕಳು ಅವರಿಗೆ ತೋರುವ ಕೃಪೆ ಎಂದು ಭಾವಿಸಬೇಕಾಗಿಲ್ಲ, ಹೆತ್ತವರನ್ನು ನೋಡಿಕೊಳ್ಳುವುದು ಕಾನೂನು ಬಾಧ್ಯತೆಯಷ್ಟೇ ಅಲ್ಲ, ಅದು ಮಕ್ಕಳ ನೈತಿಕ ಜವಾಬ್ದಾರಿಯೂ ಹೌದು; ಪೋಷಕರಿಂದ ಮಕ್ಕಳು ಆಸ್ತಿಯನ್ನು ಪಡೆದಿದ್ದರಂತೂ ಅದು ಅವರು ಕಡ್ಡಾಯವಾಗಿ ನಿರ್ವಹಿಸಬೇಕಾದ ಕಾರ್ಯ ಎಂಬರ್ಥದ ಮಾತುಗಳನ್ನು ಕರ್ನಾಟಕ ಹೈಕೋರ್ಟ್‌ ಇತ್ತೀಚೆಗೆ ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ಹೇಳಿರುವುದು ಪತ್ರಿಕೆಗಳಲ್ಲಿ ಸಣ್ಣ ಸುದ್ದಿಯಾಗಿ ಪ್ರಕಟವಾಯಿತು. ಈ ವಿಚಾರವು ನಮ್ಮ ಸುತ್ತಮುತ್ತ ದಿನನಿತ್ಯ ನಾವು ನೋಡುತ್ತಲೇ ಇರುವಂತಹ ಸಂಗತಿಯ ಒಂದು ಭಾಗವಾಗಿ ನಮ್ಮನ್ನು ಚಿಂತನೆಗೆ ಹಚ್ಚಬೇಕು.

ಭಾರತೀಯರ ಸರಾಸರಿ ಆಯುಷ್ಯ ಹೆಚ್ಚಿದೆ. ಇದರಿಂದ ಸಹಜವಾಗಿಯೇ ನಮ್ಮ ಸಮಾಜದಲ್ಲಿ 60 ವರ್ಷ ವಯಸ್ಸಿನ ವ್ಯಕ್ತಿಗಳು ‘ವೃದ್ಧರು’ ಎಂದು ಕರೆಸಿ ಕೊಳ್ಳುವುದಕ್ಕೇ ನಿರಾಕರಿಸುತ್ತಿದ್ದಾರೆ. 80ರ ಹತ್ತಿರದವರು ಬಹಳಷ್ಟು ಜನ ಇದ್ದಾರೆ! ಇಂತಹ ಸಂದರ್ಭದಲ್ಲಿ ಮಕ್ಕಳು ಅವರೊಡನೆ ಕೊನೆಯವರೆಗೂ ಇರುತ್ತಾರೋ ಇಲ್ಲವೋ ಹಲವು ಕಾಯಿಲೆಗಳಂತೂ ಜೀವಿಸುತ್ತವೆ! ಹಾಗಾಗಿ, ಈಗ ಹಿರಿಯ ನಾಗರಿಕರ ಆರೈಕೆಯು ಸಮಾಜ ಚಿಂತಿಸಲೇಬೇಕಾದ ತುರ್ತಿನ ಸಂಗತಿ ಎಂದೇ ವೈದ್ಯಕೀಯ ಕ್ಷೇತ್ರ ಭಾವಿಸಿದರೆ ಅದು ಅಚ್ಚರಿಯ ಮಾತೇನಲ್ಲ.

ನಾನು ದಿನನಿತ್ಯ ನೋಡುವ ಆರೋಗ್ಯ ಸಮಸ್ಯೆ ಗಳಲ್ಲಿ ಹಿರಿಯ ನಾಗರಿಕರ ಸಮಸ್ಯೆಗಳು ಇಂದು ಒಟ್ಟು ರೋಗಿಗಳ ಅರ್ಧದಷ್ಟು ಸಂಖ್ಯೆಯನ್ನು ಮೀರುತ್ತವೆ. ಆಸ್ಪತ್ರೆ ಎಂತಹ ಆಧುನಿಕ ಸೌಲಭ್ಯಗಳನ್ನೇ ನೀಡಬಹುದು. ಆದರೂ ಹಿರಿಯ ನಾಗರಿಕರು ಏಕಾಂಗಿಯಾಗಿ ಅಥವಾ ಸಂಗಾತಿಯೊಟ್ಟಿಗೆ ಒದ್ದಾಡಿಕೊಂಡು ಚಿಕಿತ್ಸೆಗೆ ಬರುವುದು ಇಂದು ಸರ್ವೇಸಾಮಾನ್ಯ.

ಎಷ್ಟೋ ಬಾರಿ ಮಕ್ಕಳು ದೂರದ ದೇಶಗಳಲ್ಲಿ, ದೂರದ ಊರುಗಳಲ್ಲಿ ನೆಲೆಸಿರಬಹುದು, ಕಲಹದ ಕಾರಣದಿಂದ ಅಪ್ಪ-ಅಮ್ಮನ ಜೊತೆ ಮಾತೇ ಆಡದೆ ದೂರ ಉಳಿದಿರಬಹುದು ಅಥವಾ ಅಪ್ಪ– ಅಮ್ಮನ ಆರೋಗ್ಯ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಅರಿವಿರದೆ, ಇದ್ದಕ್ಕಿದ್ದಂತೆ ಒಂದು ದಿನ ಬಂದು ವೈದ್ಯರನ್ನೇ ‘ಇವರಿಗೆ ನಿಜವಾಗಿಯೂ ಆರೋಗ್ಯದ ಸಮಸ್ಯೆ ಇದೆಯೇ? ಚಿಕಿತ್ಸೆಗಾಗಿ ಖರ್ಚು ಮಾಡಲೇಬೇಕೆ’ ಎಂದು ಪ್ರಶ್ನಿಸಬಹುದು.

ಕೆಲವೊಮ್ಮೆ ವೈದ್ಯರೇ ಮಕ್ಕಳ ಫೋನ್‌ ನಂಬರನ್ನು ತೆಗೆದುಕೊಂಡು, ಅವರಿಗೆ ಕರೆ ಮಾಡಿ, ‘ನಿಮ್ಮ ಅಪ್ಪ– ಅಮ್ಮನಿಗೆ ಈ ರೀತಿಯ ಆರೋಗ್ಯ ಸಮಸ್ಯೆಯಿದೆ. ಬಂದು ಮಾಹಿತಿ ಪಡೆಯಿರಿ’ ಎಂದು ಹೇಳಬೇಕಾಗಿಯೂ ಬರಬಹುದು. ಈ ಸಂಗತಿಯನ್ನು ಸ್ವಲ್ಪ ವಿವರವಾಗಿ ಪರಿಶೀಲಿಸಿದಾಗ, ಅದರ ಹಿನ್ನೆಲೆಯಲ್ಲಿ ಕಾಣುವ ಹಲವು ಅಂಶಗಳು ಹೇಳುವುದೇನು? ಸಮಸ್ಯೆ ಅಷ್ಟು ಸರಳವಾಗಿಲ್ಲ, ಸಂಬಂಧಗಳು, ರೂಢಿಗತ ಧೋರಣೆಗಳು, ಆಸ್ತಿ ಹಕ್ಕಿನಂತಹ ಹಲವು ಗೋಜಲು, ಗೊಂದಲಗಳಿಂದ ಕಗ್ಗಂಟಾಗಿವೆ. ಹಾಗಾಗಿ, ಇದು ನಿಧಾನವಾಗಿ, ಸಹನೆಯಿಂದ ಬಿಡಿಸಿಕೊಳ್ಳಬೇಕಾದ ಸಂಕೀರ್ಣ ಸಮಸ್ಯೆ ಎಂಬ ವಾಸ್ತವ ತಿಳಿಯುತ್ತದೆ!

ಕಾನೂನು ಏನೇ ಹೇಳಬಹುದು, ಸಮಾಜದಲ್ಲಿ ಏನೇ ನಡೆಯಬಹುದು, ಗಂಡುಮಕ್ಕಳಿರುವ ತಂದೆ– ತಾಯಿ ‘ವಯಸ್ಸಾದ ನಂತರ ಮಗ ನಮ್ಮ ಆರೈಕೆ ಮಾಡುತ್ತಾನೆ’ ಎಂದು ಬಲವಾಗಿಯೇ ನಂಬುತ್ತಾರೆ. ಹಾಗಾಗಿ, ‘ಆಸ್ತಿ ಅವನದೇ ಹಕ್ಕು’ ಎಂದೇ ಅನ್ನುತ್ತಾರೆ. ಹೆಣ್ಣುಮಕ್ಕಳಷ್ಟೇ ಇರುವ ತಂದೆ- ತಾಯಿ ‘ತಮ್ಮನ್ನು ತಾವು ನೋಡಿಕೊಳ್ಳಬೇಕು’ ಎಂದು ಮಾನಸಿಕವಾಗಿ ಸಿದ್ಧರಾಗುತ್ತಾರೆ. ಆದರೆ ಮಕ್ಕಳು ತಂದೆ– ತಾಯಿಯನ್ನು ನೋಡಿಕೊಳ್ಳಬೇಕು ಎಂದಾದರೆ, ಅವರಿಗೆ ಅದಕ್ಕೆ ಪ್ರತಿಯಾಗಿ ‘ಏನನ್ನಾದರೂ’ ನೀಡಬೇಕು. ಅಂದರೆ, ಆಸ್ತಿ ದಕ್ಕಬೇಕು ಎನ್ನುವ ‘ನಿಯಮ’ ನಮಗೇ ಗೊತ್ತಿಲ್ಲದಂತೆ ನಮ್ಮೆಲ್ಲರ ಗ್ರಹಿಕೆಯಲ್ಲಿ ಗಟ್ಟಿಯಾಗಿ ಕುಳಿತುಬಿಟ್ಟಿದೆ!

ತಂದೆ– ತಾಯಿಯ ಆರೈಕೆಯ ಹೊಣೆ ಎಲ್ಲ ಮಕ್ಕಳದು, ಆಸ್ತಿಯೂ ಎಲ್ಲರದು ಎಂಬ ಸರಳ-ಸುಲಭ ಸೂತ್ರ ಯಾರಿಗೂ ಪಥ್ಯವಾಗದ ಅಂಶ. ಇದರ ಪರಿಣಾಮವೆಂದರೆ, ಹಲವು ರೀತಿಯ ಸಮಸ್ಯೆಗಳು. ಬಹುಶಃ ವೈದ್ಯಕೀಯ ಕ್ಷೇತ್ರದಲ್ಲಿ ಕಾಣಬರುವ ಹಲವು ಸಂದರ್ಭಗಳು ನ್ಯಾಯಾಲಯದ ಹಂತಕ್ಕೆ, ಮಾಧ್ಯಮಗಳ ಗಮನಕ್ಕೆ ಬರಲಾರದ ಸಾಧ್ಯತೆ ಇರುವುದರಿಂದ, ಅವುಗಳ ಸಂಕೀರ್ಣತೆ, ವೈವಿಧ್ಯ ಹೆಚ್ಚಿನವರ ತಿಳಿವಿಗೆ ಸಿಗಲಾರದು. ಉದಾಹರಣೆಗೆ, ಹಳ್ಳಿಯಲ್ಲಿ ತಾಯಿಯು ಗಂಡುಮಕ್ಕಳ ಜೊತೆಗೆ ವಾಸಿಸುತ್ತಾಳೆ. ತಾಯಿಗೆ ಸಾಮಾನ್ಯವಾಗಿ ಮುಪ್ಪಿನಲ್ಲಿ ಬರುವ ಡಿಮೆನ್ಷಿಯಾ ಕಾಯಿಲೆ. ಮನೆಯಲ್ಲಿ ನೋಡಿಕೊಳ್ಳುವ ವ್ಯಕ್ತಿ ಆಕೆಯ ಸೊಸೆ. ವೈದ್ಯರ ಬಳಿ ಕರೆತರುವುದು ನೂರಾರು ಮೈಲಿ ದೂರ ವಾಸಿಸುವ ಮಗಳು. ತನ್ನ ಅಣ್ಣನ ಹೆಂಡತಿ ತಾಯಿಯನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ ಎಂಬುದು ಆಕೆಯ ದೂರು. ‘ನಿಮ್ಮ ಬಳಿಯೇ ಇಟ್ಟುಕೊಂಡು ಸರಿಯಾಗಿ ಆರೈಕೆ ಮಾಡಿ’ ಎಂದರೆ, ಮಗಳಿಗಿಂತ ಮೊದಲು ತಾಯಿ ಹೇಳುವ ಮಾತು, ‘ಹೆಣ್ಣುಮಗಳ ಮನೆಗೆ ಹೋಗಿ ಉಳಿಯಲು ನನ್ನ ಮನಸ್ಸು ಒಪ್ಪೀತೇ? ನೋಡಿದ ಜನ
ಏನೆಂದಾರು?’

ಮತ್ತೊಂದು ನಿದರ್ಶನ. ಜೊತೆಯಲ್ಲಿರುವ ಕಿರಿಯ ಮಗ, ಚೆನ್ನಾಗಿ ನೋಡಿಕೊಳ್ಳುವ ಸೊಸೆ. ಆದರೂ ಅಪ್ಪ– ಅಮ್ಮನಿಗೆ, ಆಸ್ತಿಯ ಕಲಹದಿಂದ ಕೋಪಗೊಂಡು ತಮ್ಮೊಂದಿಗೆ ಮಾತೇ ಆಡದ ಹಿರಿಯ ಮಗನದ್ದೇ ಕೊರಗು. ಇನ್ನೊಂದು ಉದಾಹರಣೆ, ಮಗಳು ತಾಯಿಯನ್ನು ತನ್ನ ಬಳಿ ಇಟ್ಟುಕೊಂಡು ಸರಿಯಾಗಿ ಚಿಕಿತ್ಸೆ ಕೊಡಿಸುತ್ತಾ ಆರೈಕೆ ಮಾಡುತ್ತಿದ್ದಾಳೆ. ಆಕೆಯ ಸಹೋದರ ಮದ್ಯವ್ಯಸನಿ. ತಾಯಿಯೇನಾದರೂ ಅವನ ಹೆಸರಿಗೆ ಆಸ್ತಿ ಬರೆದು, ಕೊನೆಗೆ ಅವನು ಅದನ್ನೂ ಕಳೆದುಹಾಕಿ ಯಾರಿಗೂ ಇಲ್ಲದಂತೆ ಮಾಡಿಯಾನು ಎಂಬ ಕಳವಳ ಅವಳಿಗೆ. ತಾಯಿಗೆ ಮಾತ್ರ ಮಗನದೇ ಹಂಬಲ. ಇಲ್ಲಿ ಯಾರು ಸರಿ, ಯಾರು ತಪ್ಪು?!

ಇಂತಹ ನಿದರ್ಶನಗಳನ್ನು ನೋಡುತ್ತಾ ಸಾಗಿದರೆ, ಆಸ್ತಿ– ಆರೈಕೆ– ಮಕ್ಕಳ ಕುಟುಂಬ ಎಲ್ಲಕ್ಕೂ ಪರಸ್ಪರ ಕೊಂಡಿಗಳು ಬೆಸೆದುಕೊಳ್ಳುತ್ತಾ ಸಾಗುತ್ತವೆ. ಹಿರಿಯ ನಾಗರಿಕರು ಬರೀ ಪುರಾಣ– ಆಧ್ಯಾತ್ಮಿಕ ಕೃತಿಗಳನ್ನು ಓದಿದರಷ್ಟೇ ಸಾಕಾಗದು. ಅವುಗಳಿಂದ ಕಲಿತದ್ದನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಂಡು, ‘ಮಕ್ಕಳೆಂಬ ಮೋಹ’ಕ್ಕೆ ಕುರುಡಾಗಿ ಅಂಟದಿರುವುದನ್ನು ಪ್ರಯತ್ನ ಪೂರ್ವಕವಾಗಿ ಸಾಧಿಸುವುದು ಮಹತ್ವದ್ದು ಎನಿಸುತ್ತದೆ. ತಮ್ಮ ಆರ್ಥಿಕ ಸಂಕಷ್ಟಗಳ ಬಗ್ಗೆ ಮಕ್ಕಳೊಡನೆ ಚರ್ಚಿಸುವುದು, ಆರೋಗ್ಯದ ಸಮಸ್ಯೆಗಳ ಬಗೆಗೆ ಹಂಚಿಕೊಳ್ಳುವುದು, ಮಕ್ಕಳು ತಮ್ಮ ಭಾವನೆಗಳಿಗೆ
ಸ್ಪಂದಿಸುವುದನ್ನು ಕಲಿಸುವುದು ಪೋಷಕರು ಅಗತ್ಯವಾಗಿ ಮಾಡಬೇಕಾದ ಕಾರ್ಯಗಳು.

ಗಂಡುಮಕ್ಕಳಿರಲಿ, ಹೆಣ್ಣುಮಕ್ಕಳಿರಲಿ, ಅವರ ಮೇಲೆ ಪೋಷಕರಿಗೆ ಅತಿಯಾದ ಭಾವನಾತ್ಮಕ ಅವಲಂಬನೆ ಸಲ್ಲದು. ‘ನಮ್ಮ ಮಕ್ಕಳು ಹಾಗೆ ಮಾಡುವುದಿಲ್ಲ’, ‘ನಮ್ಮ ಮಕ್ಕಳು ಆ ರೀತಿಯಲ್ಲ’ ಎಂಬ ಭ್ರಮೆ ಯಾರಿಗೂ ಸಲ್ಲದು. ಭಾವನೆಗಳನ್ನು ಬದಿಗಿರಿಸಿ, ಪ್ರಾಯೋಗಿಕವಾಗಿ, ವ್ಯಾವಹಾರಿಕವಾಗಿ ಆಸ್ತಿಯನ್ನು ವಿಂಗಡಿಸುವುದು, ಸರಿಯಾದ ಉಯಿಲು, ತಮ್ಮ ಭಾಗವನ್ನು ಕಡ್ಡಾಯವಾಗಿ ತಮ್ಮ ಹಕ್ಕಿನಲ್ಲಿಯೇ ಇಟ್ಟುಕೊಳ್ಳುವುದು ಇವು ಹಿರಿಯ ನಾಗರಿಕರು ಕೈಗೊಳ್ಳಬೇಕಾದ ಕ್ರಮಗಳು. ಉಯಿಲನ್ನೇ ಮಾಡದಿರುವುದು, ತಾವು ಮೃತರಾದ ಮೇಲೆ ಮಕ್ಕಳು ಏನಾದರೂ ಮಾಡಿಕೊಳ್ಳಲಿ ಎಂಬ ಧೋರಣೆ ಹಿರಿಯ ನಾಗರಿಕರನ್ನೂ ಅವರ ಸಂತತಿಯನ್ನೂ ನರಳಿಸುವ ಸಾಧ್ಯತೆಯೇ ಹೆಚ್ಚು.

‘ಹಿರಿಯ ನಾಗರಿಕರ ಮೇಲಿನ ಹಿಂಸೆ’ ಜಗತ್ತಿ ನಾದ್ಯಂತ ಕಂಡುಬರುತ್ತಿರುವ ಸಮಸ್ಯೆ. 2022ರಲ್ಲಿ ನಡೆದ ಸಮೀಕ್ಷೆಯೊಂದು, ಭಾರತೀಯ ಹಿರಿಯ ನಾಗರಿಕರಲ್ಲಿ ಶೇ 35ರಷ್ಟು ಮಂದಿ ತಮ್ಮ ಗಂಡುಮಕ್ಕಳಿಂದ,
ಶೇ 21ರಷ್ಟು ಮಂದಿ ಸೊಸೆಯಂದಿರಿಂದ, ಶೇ 2ರಷ್ಟು ಮಂದಿ ಇತರರಿಂದ ದೌರ್ಜನ್ಯಕ್ಕೆ ಒಳಗಾಗುತ್ತಾರೆ ಎಂಬುದನ್ನು ತೋರಿಸಿದೆ. ಅಗೌರವ, ಬೈಗುಳ, ಅಲಕ್ಷ್ಯ, ಒತ್ತಾಯಪೂರ್ವಕವಾಗಿ ಆಸ್ತಿ ಬರೆಸಿಕೊಳ್ಳುವುದು ಇದರಲ್ಲಿ ಪ್ರಮುಖವಾದವು. ‘ತಾಮ್ರದ ದುಡ್ಡು ತಾಯಿ ಮಕ್ಕಳನ್ನು ಅಗಲಿಸಿತು’ ಎಂಬ ಗಾದೆ ಇಂದೂ ನಿಜವೇ.

ಮಕ್ಕಳ ಹೊಣೆ ಯಾರದ್ದು ಎಂಬ ಪ್ರಶ್ನೆಗೆ ಉತ್ತರ ಸುಲಭ. ಆದರೆ ಮಕ್ಕಳನ್ನು ತಮ್ಮ ಜೀವನದ ಉದ್ದೇಶ ಸಾಧನೆಯ ಗುರಿಯೊಂದಿಗೆ ಬೆಳೆಸುವ ಪೋಷಕರ ಪೋಷಣೆ ಯಾರ ಹೊಣೆ ಎಂಬ ಪ್ರಶ್ನೆಗೆ ಉತ್ತರ ಇಂದು ಸರಳವಾಗಿ ಉಳಿದಿಲ್ಲ. ಮಾನವೀಯತೆಯ ನೆರಳಲ್ಲಿ, ಕರ್ತವ್ಯನಿಷ್ಠೆಯಲ್ಲಿ ‘ನನ್ನ ತಂದೆ– ತಾಯಿಯ ಹೊಣೆ ನನ್ನದು’ ಎಂದು ಪ್ರತಿ ಮಗ– ಮಗಳು ಇಂದು ಉತ್ತರವನ್ನು ನೀಡಬೇಕಾಗಿದೆ!

ಲೇಖಕಿ: ಮನೋವೈದ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT