ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರವಿಂದ ಚೊಕ್ಕಾಡಿ ಲೇಖನ: ಪರಿವರ್ತನೆ ಮತ್ತು ಆಲೋಚನಾ ಸ್ವಾತಂತ್ರ್ಯ

Published 31 ಆಗಸ್ಟ್ 2023, 0:16 IST
Last Updated 31 ಆಗಸ್ಟ್ 2023, 0:16 IST
ಅಕ್ಷರ ಗಾತ್ರ

ಸ್ವಾತಂತ್ರ್ಯವನ್ನು ನಾನಾ ಅರ್ಥಗಳಲ್ಲಿ ಪರಿಭಾವಿಸಿಕೊಂಡು ವ್ಯಾಖ್ಯಾನಿಸಲಾಗುತ್ತದೆ. ಸ್ವಾತಂತ್ರ್ಯ ಎಂದರೆ ಸ್ವೇಚ್ಛಾಚಾರವಲ್ಲ ಎಂಬ ಹೇಳಿಕೆಯನ್ನು ಪದೇಪದೇ ಕೇಳುತ್ತೇವೆ. ಸ್ವಾತಂತ್ರ್ಯ ದಿನಾಚರಣೆಯ ಈ ಮಾಸವು ಪ್ರತಿಬಾರಿಯೂ ಕೆಲವು ಕರೆಗಳು ಮತ್ತು ಪ್ರಶ್ನೆಗಳನ್ನು ನಮಗೆ ಕೊಡುತ್ತಲೇ ಬಂದಿದೆ.

ಗಾಂಧೀಜಿಯ ‘ಸ್ವರಾಜ್ಯ’ದ ಪರಿಕಲ್ಪನೆಯು ಬ್ರಿಟಿಷ್ ಆಧಿಪತ್ಯದಿಂದ ಬಿಡುಗಡೆಗೊಳ್ಳುವ ಪರಿಕಲ್ಪನೆಗಿಂತ ಹೆಚ್ಚಿನದ್ದಾಗಿದೆ. ಮಹಿಳೆ ಒಂಟಿಯಾಗಿ ನಡುರಾತ್ರಿಯಲ್ಲೂ ತಿರುಗಾಡಬಲ್ಲಂತಹ ಆದರ್ಶ ಸ್ಥಿತಿಯ ಬಗ್ಗೆ ಅವರು ಹೇಳುತ್ತಾರೆ. ಅತ್ಯಂತ ದಕ್ಷ ಪೊಲೀಸ್ ವ್ಯವಸ್ಥೆ ಇರುವಲ್ಲಿ ಮಹಿಳೆ ನಡುರಾತ್ರಿಯಲ್ಲೂ ಸುರಕ್ಷಿತವಾಗಿ ಓಡಾಡಲು ಸಾಧ್ಯವಿದೆ. ಆದರೆ ಆ ಸುರಕ್ಷತೆಯನ್ನು ಪರಿಪೂರ್ಣ ಎನ್ನಲು ಬರುವುದಿಲ್ಲ. ದೇಶದ ಎಲ್ಲ ಪುರುಷರೂ ಸ್ವಯಂ ಶಿಸ್ತಿಗೆ ತಮ್ಮನ್ನು ತಾವೇ ಒಳಪಡಿಸಿಕೊಂಡಾಗ ಮಹಿಳೆಗೆ ಪರಿಪೂರ್ಣ ಸುರಕ್ಷತೆ ಸಿಗುತ್ತದೆ. ಗಾಂಧಿಯವರ ಸ್ವರಾಜ್ಯವು ಈ ಮಟ್ಟದಲ್ಲಿ ಸ್ವಯಂ ಶಿಸ್ತನ್ನು ಬಯಸುತ್ತದೆ. ಸ್ವರಾಜ್ಯದಲ್ಲಿ ಯಾರೂ ಕಾನೂನಿನ ಭಯದಿಂದ ಸನ್ನಡತೆಯವರಾಗಿ ಇರುವುದಿಲ್ಲ. ಭಯಮುಕ್ತರಾಗಿ ಇರುತ್ತಾರೆ. ಆದರೆ ತಮಗೆ ತಾವೇ ಅಳವಡಿಸಿಕೊಂಡ ನೈತಿಕತೆಯಿಂದಾಗಿ ಸನ್ನಡತೆಯನ್ನು ಹೊಂದಿದವರಾಗಿರುತ್ತಾರೆ. ಪರಿವರ್ತನೆಗಳು ನಿಜವಾಗಿ ನಡೆಯಬೇಕಾದದ್ದು ಹೀಗೆಯೇ.

ಕಾನೂನುಗಳಷ್ಟೇ ಬಹುದೊಡ್ಡ ಪರಿವರ್ತನೆಯನ್ನು ತರಲಾರವು.‌ ಉದಾಹರಣೆಗೆ, ಇತ್ತೀಚೆಗೆ ಅತ್ಯಾಚಾರಕ್ಕೆ ಶಿಕ್ಷೆಯನ್ನು ತೀವ್ರಗೊಳಿಸಿ ಕಾನೂನು ಮಾಡಲಾಯಿತು. ಆದರೆ ಇದರಿಂದ ಅತ್ಯಾಚಾರಿ ಶಿಕ್ಷೆಗೆ ಒಳಗಾಗದಂತೆ ನೋಡಿಕೊಳ್ಳುವ ವ್ಯವಸ್ಥೆಯಲ್ಲಿ ಬದಲಾವಣೆ ಆಗುತ್ತದೆಯೇ? ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿ ಆರತಿ ಬೆಳಗಿ ಅಭಿನಂದಿಸುವ ಮನಃಸ್ಥಿತಿ ಬದಲಾಗುತ್ತದೆಯೇ? ಸಮಸ್ಯೆಯ ನಿಜವಾದ ಪರಿಹಾರ ಕಾನೂನು ಒಂದರಿಂದಲೇ  ಆಗಲಾರದು. ಅಂತರಂಗದಲ್ಲಿ ಆಗುವ ಪರಿವರ್ತನೆಯೇ ನಿಜವಾದ ಪರಿಹಾರ. ಆದರೆ ಅಂತರಂಗದಲ್ಲಿ ಪರಿವರ್ತನೆ ಉಂಟಾಗಲು ಕಾನೂನು ಒಂದು ಉಪಕರಣವಾಗಿ ಕೆಲಸ ಮಾಡಬಲ್ಲದು.

ಗಾಂಧಿಯವರ ಸ್ವರಾಜ್ಯದ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳುತ್ತಾ ಹೋದ ಹಾಗೆ ಸ್ವಾತಂತ್ರ್ಯದ ಪರಿಕಲ್ಪನೆಯು ಮನುಷ್ಯರ ಮೂಲಭೂತ ಸ್ವಭಾವಗಳೊಂದಿಗೆ ಸಂಬಂಧ ಸ್ಥಾಪಿಸಿಕೊಂಡಿರುವುದನ್ನು ಗುರುತಿಸಬಹುದು. ‘ಭಯ’ ಮತ್ತು ‘ಆಸೆ’ಯು ವ್ಯಕ್ತಿತ್ವ ವಿಕಾಸದ ಮೂಲಭೂತ ನೆಲೆಗಳಾಗಿವೆ. ಮಾನವ ವಿಕಾಸದಲ್ಲಿ ತನ್ನನ್ನು ತಾನು ಸುರಕ್ಷಿತನಾಗಿ ಇರಿಸಿಕೊಳ್ಳುವುದು ಎಲ್ಲ ಚಟುವಟಿಕೆಗಳ ಹಿಂದೆಯೂ ಇರುವ ಒಂದು ತತ್ವವಾಗಿದೆ.‌ ದೈಹಿಕವಾಗಿ ಮತ್ತು‌ ಮಾನಸಿಕವಾಗಿ ಬೇಕು ಎನಿಸಿದ್ದನ್ನು ಪಡೆದುಕೊಳ್ಳಲು ನಡೆಸುವ ಪ್ರಯತ್ನದಿಂದಾಗಿ ವ್ಯಕ್ತಿತ್ವದ ವಿಕಾಸವಾಗುವುದು ಇನ್ನೊಂದು ನೆಲೆಯಾಗಿದೆ. ಇವೆರಡನ್ನೂ ಒಂದು ಶಿಸ್ತುಬದ್ಧತೆಗೆ ಒಳಪಡಿಸಿದಾಗ ಸ್ವಾತಂತ್ರ್ಯದ ಪರಿಕಲ್ಪನೆ ಸ್ಪಷ್ಟವಾಗುತ್ತದೆ. ಪರ ಆಕ್ರಮಣದ ಭಯದಿಂದ ಮುಕ್ತನಾಗುವುದು ಗಾಂಧಿಯವರ ಪರಿಕಲ್ಪನೆಯ ಪ್ರಮುಖ ಸಂಗತಿಗಳಲ್ಲೊಂದು. ಗಾಂಧಿಯವರ ಪ್ರಕಾರ, ಹೇಡಿಗಳೆಂದೂ ಅಹಿಂಸಾವಾದಿಗಳಾಗಲಾರರು. ನಿಜವಾಗಿ ಹೇಡಿಗಳು ಜಾಸ್ತಿ ಆಕ್ರಮಣಕಾರಿಗಳಾಗಿ ವ್ಯವಹರಿಸುತ್ತಾರೆ.

ಅನ್ಯರು ಆಕ್ರಮಿಸಿಯಾರು ಎನ್ನುವ ಊಹಾತ್ಮಕ ಭಯದಿಂದ ಹೊರಗೆ ಬಂದಾಗ ನಿರ್ಭೀತಿಯ ಸ್ಥಿತಿ ಸಾಧ್ಯ.‌ ಅನ್ಯರ ಆಕ್ರಮಣದ ಬಗ್ಗೆ ನಿರ್ಭೀತನಾದವನು ಸ್ವತಂತ್ರನಾಗಿ ಇರುತ್ತಾನೆ. ಏಕೆಂದರೆ ನಿರ್ಭೀತನಾದವನು ಶರಣಾಗುವುದಿಲ್ಲ, ದಾಸ್ಯಕ್ಕೆ ಒಳಗಾಗುವುದಿಲ್ಲ, ತನ್ನ ಚಿಂತನೆಗಳು ಮತ್ತು ವರ್ತನೆಗಳನ್ನು ತನ್ನ ಆಲೋಚನೆಯಂತೆಯೇ ನಡೆಸುತ್ತಾನೆ. ಈ ಆಲೋಚನಾ ಸ್ವಾತಂತ್ರ್ಯವೇ ಸ್ವಾತಂತ್ರ್ಯದ ಉಳಿದ ಎಲ್ಲ ರೂಪಗಳಿಗೂ ತಳಹದಿಯಾಗಿದೆ.

‘ಭಯ’ದ ಅಸ್ತಿತ್ವವಿಲ್ಲದ ವಿಕಾಸ ಸಾಧ್ಯವಿಲ್ಲ. ಗಾಂಧಿಯವರ ಸ್ವರಾಜ್ಯದ ಪರಿಕಲ್ಪನೆಯಲ್ಲೂ ‘ಭಯ’ದ ಪರಿಕಲ್ಪನೆ ಇದೆ. ಆದರದು ಆಕ್ರಮಣದ ಭಯವಲ್ಲ. ನೈತಿಕತೆಯ ಭಯ. ಆತ್ಮಸಾಕ್ಷಿಯ ಭಯ. ಇಲ್ಲಿ ಮನುಷ್ಯನನ್ನು ಅನೈತಿಕತೆಗೆ ಸೆಳೆಯುವ ಸಂಗತಿಗಳ ಹಿಡಿತದಿಂದ ಬಿಡುಗಡೆಯನ್ನು ಪಡೆಯುವುದೇ ಸ್ವಾತಂತ್ರ್ಯವಾಗಿದೆ. ಹಣದ ಆಸೆ, ಅಧಿಕಾರದ ಆಸೆ ಅಥವಾ ಇನ್ನೂ ಅಂತಹದೇ ಅಸಂಖ್ಯಾತ ಆಸೆಗಳೇ ಅದನ್ನು ಈಡೇರಿಸಿಕೊಳ್ಳುವ ಹಾದಿಯಲ್ಲಿ ಅನೈತಿಕತೆಗೆ ಪ್ರಚೋದನೆಯನ್ನು ನೀಡುತ್ತವೆ. ಆಸೆಗಳು ಇಲ್ಲದಿದ್ದರೆ ವಿಕಾಸ ಇರುವುದಿಲ್ಲ. ಆದರೆ ಆಸೆಗಳನ್ನು ಈಡೇರಿಸಿಕೊಳ್ಳುವ ಮಾರ್ಗವು ಸಮಂಜಸತೆಯನ್ನು ಹೊಂದಿಲ್ಲದಿದ್ದರೆ ವಿಕಾಸವು ವಿನಾಶದ ರೂಪವನ್ನು ತಳೆಯುತ್ತದೆ.

ತಪ್ಪು ಮಾಡಿ ಸಿಕ್ಕಿಹಾಕಿಕೊಂಡವನಿಗೆ ಶಿಕ್ಷೆಯನ್ನು ಅನುಭವಿಸುವವರೆಗೆ ಮಾತ್ರ ಮಾನಸಿಕ ಒತ್ತಡವಾದರೆ, ತಪ್ಪು ಮಾಡಿ ಸಿಕ್ಕಿಹಾಕಿಕೊಳ್ಳದವನಿಗೆ ಜೀವನಪೂರ್ತಿ ಮಾನಸಿಕ ಒತ್ತಡವೇ. ಮನಸ್ಸಿನಲ್ಲಿ ನಿರಾಳ ಭಾವ ಇಲ್ಲದವನಿಗೆ ಸ್ವಾತಂತ್ರ್ಯದ ಅನುಭವ ದೊರೆಯಲು ಸಾಧ್ಯವಿಲ್ಲ. ಆದ್ದರಿಂದ ಆಸೆಗಳನ್ನು ತೀರಿಸಿಕೊಳ್ಳಲು ತೊಡಗಿಕೊಳ್ಳುವ ವಿಧಾನದಲ್ಲಿ ಸಮಂಜಸತೆಯನ್ನು ಕಾಪಾಡಿಕೊಳ್ಳುವುದು ಸ್ವಾತಂತ್ರ್ಯದ ಅನುಭವಕ್ಕೆ ಅವಶ್ಯವಾಗಿದೆ.

ಪ್ರಸ್ತುತ ದಿನಗಳಲ್ಲಿ ನಮ್ಮ ಸಾಮಾಜಿಕ ವ್ಯವಸ್ಥೆಯು ಸ್ವಾತಂತ್ರ್ಯಕ್ಕೆ ಹೆಚ್ಚುಹೆಚ್ಚು ವಿಮುಖವಾಗಿ ಚಲಿಸುತ್ತಿದೆ. ಒಂದು ದಶಕದ ಹಿಂದೆ ಅಪರಾಧದ ಪ್ರಕರಣಗಳು ಕಾಣಿಸಿದಾಗ ಕೊನೆಪಕ್ಷ ಅಪರಾಧಿಗೆ ಶಿಕ್ಷೆ ಆಗಬೇಕು ಎನ್ನುವ ವಿಚಾರದಲ್ಲಿ ಒಮ್ಮತ ಸಾಧ್ಯವಿತ್ತು.‌ ಈಗ ಅದೂ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಅಪರಾಧ ಮಾಡಿದವನು ತನ್ನ ಕಡೆಯವನು ಎಂದಾದರೆ, ಆತನ ಪರವಾಗಿ ವಾದಗಳನ್ನು ಕಟ್ಟಲಾಗುತ್ತದೆ. ಆ ರೀತಿಯ ಬೇರೆ ಅಪರಾಧಗಳನ್ನು ಯಾಕೆ ಪ್ರಶ್ನಿಸುವುದಿಲ್ಲ ಎಂದು ಕೇಳುತ್ತಾ ಕೇಳುತ್ತಾ, ಇದನ್ನೂ ಪ್ರಶ್ನಿಸಕೂಡದು ಎಂಬ ಮನಃಸ್ಥಿತಿಯನ್ನು ನಿರ್ಮಿಸಲಾಗುತ್ತದೆ.

ವಿಚಾರ ಯಾವುದೇ ಆಗಿದ್ದರೂ ಸಮಾಜವನ್ನು ಎರಡು ಗುಂಪುಗಳಾಗಿ ವಿಭಜಿಸಿರುವುದರಿಂದ ಅಪರಾಧ ಮಾಡಿದವರ ಪರವಾಗಿ ಯಾವುದಾದರೊಂದು ಗುಂಪಿನವರು ವಾದ ಮಂಡಿಸುವಂತಹ ದೌರ್ಭಾಗ್ಯದ ಸನ್ನಿವೇಶ ಎದುರಿಗಿದೆ. ಇದರರ್ಥ ನ್ಯಾಯದ ಪರಿಕಲ್ಪನೆ ಯಾರಲ್ಲೂ ಇಲ್ಲವೆಂದಲ್ಲ. ಎಲ್ಲರಲ್ಲೂ ಇದೆ. ಆದರೆ ನ್ಯಾಯವನ್ನೇ ತಾನು ಪ್ರತಿಪಾದಿಸಿದರೆ ತನ್ನ ಧೋರಣೆ ಅಥವಾ ತನ್ನ ತಂಡ ದುರ್ಬಲವಾದೀತೇನೊ ಎಂಬ ಭಯದಿಂದ ತಪ್ಪನ್ನು ಸಮರ್ಥಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ಇಲ್ಲಿ ಕಾಣಿಸುವ ‘ಭಯ’ ಹೆಚ್ಚು ಅಮೂರ್ತ ಸ್ವರೂಪದ್ದಾಗಿದೆ‌. ಸುಮಾರು ಐವತ್ತು ವರ್ಷಗಳ ಹಿಂದೆ ‘ಗಳಿಕೆ’ ಇಲ್ಲದವರು ಜಾಸ್ತಿ ಇದ್ದರು. ಏನೂ ಇಲ್ಲದವನಿಗೆ ಯಾವ ಭಯವೂ ಇಲ್ಲ. ಏಕೆಂದರೆ ಅವನು ಕಳೆದುಕೊಳ್ಳಬೇಕಾದ್ದು ಏನೂ ಇಲ್ಲ. ಆದರೆ ಈಗಿನ ಸನ್ನಿವೇಶದಲ್ಲಿ ಎಲ್ಲರಲ್ಲಿಯೂ ಅಲ್ಪಸ್ವಲ್ಪ ಗಳಿಕೆಯಿದೆ. ಈ ಗಳಿಕೆಯನ್ನು ಉಳಿಸಿಕೊಳ್ಳಬೇಕಲ್ಲ. ತಾನು ಏನನ್ನು ಮಾತನಾಡಿದರೆ ತನ್ನ ಗಳಿಕೆಗೆ ತೊಂದರೆಯಾಗದ ಹಾಗೆ ನೋಡಿಕೊಳ್ಳಬಹುದು ಎನ್ನುವ ಆಲೋಚನಾ ಕ್ರಮವು ಯಾವಾಗಲೂ ಗೆಲ್ಲಬಹುದಾದದ್ದರ ಪರವಾಗಿ ವಾದ ಮಾಡಲು ಸೂಕ್ತವಾಗುವ ಹಾಗೆ ವ್ಯಕ್ತಿಗಳ ಆಲೋಚನಾಕ್ರಮವನ್ನು ರೂಪಿಸುತ್ತಾ ಹೋಗುತ್ತದೆ.

ಈ ಅಸ್ಪಷ್ಟ ಭಯದ ಇನ್ನೊಂದು ರೂಪವೇ ಆಸೆಗಳು.‌ ಗಳಿಕೆಯನ್ನು ರಕ್ಷಿಸಿಕೊಂಡ ಮೇಲೆ ಇನ್ನಷ್ಟು ಗಳಿಕೆಯನ್ನು ಮಾಡಿಕೊಳ್ಳಲು ಯಾವ ರೀತಿ ವರ್ತಿಸಿದರೆ ಅನುಕೂಲವಾಗಬಹುದು ಎಂಬ ಚಿಂತನೆ ಬರುತ್ತದೆ. ಅದರ ಪರಿಣಾಮವೆಂದರೆ, ಗೆಲ್ಲಲಿರುವುದರ ಫಲವಾಗಿ ಆಲೋಚಿಸುವುದು ಮತ್ತು ಅದನ್ನೇ ವಾದವಾಗಿ ಎಲ್ಲರಿಗೂ ಹೇಳುತ್ತಾ ಹೋಗುವುದು.

ಗೆಲ್ಲಲಿರುವುದು ಯಾವುದು ಎನ್ನುವುದನ್ನು ಮನುಷ್ಯನ ಯೋಚನೆಗಳು ಆತನಿಗೇ ಹೊಳೆಯದಂತೆ ಪೂರ್ವಾನುಭವದಿಂದ ನಿರ್ಧರಿಸಿಬಿಡುತ್ತವೆ. ಎಷ್ಟೇ ಹೋರಾಟವನ್ನು ಮಾಡಿದರೂ ಹಣ, ಅಧಿಕಾರ, ಮತಧರ್ಮಗಳನ್ನು ಒಳಗೊಂಡ ಪಟ್ಟಭದ್ರ ವ್ಯವಸ್ಥೆಯೇ ಸದಾ ಗೆಲ್ಲುತ್ತಾ ಬಂದಿದೆ. ಒಮ್ಮೆ ಸೋತ ಹಾಗೆ ಅನಿಸಿದರೂ ಮತ್ತೆ ಅದೇ ಗೆಲ್ಲುತ್ತದೆ. ಇದು ಮಾನವ ನಾಗರಿಕತೆಗೆ ಇರುವ ಪೂರ್ವಾನುಭವವಾಗಿದೆ. ಪಟ್ಟಭದ್ರ ವ್ಯವಸ್ಥೆಯ ಪರವಾಗಿ ಮಾತನಾಡಲು ಯಾವುದೇ ಹೆಚ್ಚುವರಿ ಎಚ್ಚರಿಕೆಯ ಅಗತ್ಯವಿಲ್ಲ. ಪಟ್ಟಭದ್ರ ವ್ಯವಸ್ಥೆಯೊಂದಿಗೆ ಗುರುತಿಸಿಕೊಂಡಾಗ ಹಣ, ಅವಕಾಶ, ಮಾನ್ಯತೆ ಎಲ್ಲವೂ ಬರಲು ಜಾಸ್ತಿ ಅವಕಾಶವಿದೆ. ಇಂದಿನ ದಿನಗಳಲ್ಲಿ ಅತ್ಯಾಚಾರಿಗಳನ್ನು, ಕೊಲೆಪಾತಕರನ್ನು, ಸಮಾಜಘಾತುಕರನ್ನು ಕೂಡ ಏನಾದರೊಂದು ಕಾರಣ ಕೊಟ್ಟು ಸಹಾನುಭೂತಿಯಿಂದ ನೋಡುವ ಮತ್ತು ವಾದ ಮಂಡಿಸುವ ಪದ್ಧತಿ ಇದೆ ಎನ್ನುವುದೇ ಸಮಾಜವು ಪಟ್ಟಭದ್ರ ವ್ಯವಸ್ಥೆಗೆ ಶರಣಾಗುತ್ತಿರುವುದಕ್ಕೆ ನಿದರ್ಶನವಾಗಿದೆ.

ಅಂದರೆ ಮನುಷ್ಯರ ಆಲೋಚನೆಗಳೇ ಸ್ವಾತಂತ್ರ್ಯದ ಆಶಯಕ್ಕೆ ವಿಮುಖವಾಗಿ ನಡೆಯುತ್ತಿವೆ. ಭಯದಿಂದ ಮುಕ್ತರಾಗಲು ಏನು ಮಾಡಬೇಕು? ಅಪಾಯಕಾರಿಗಳಿಗೆ ವಿರುದ್ಧವಾಗಿ ಮಾತನಾಡಬಾರದು. ಹಾಗೆ ಇರಬೇಕಾದರೆ ಅಪಾಯಕಾರಿಗಳ ವಿರುದ್ಧ ಯೋಚನೆಯನ್ನೇ ಮಾಡದ ಹಾಗೆ ಆಲೋಚನಾ ಕ್ರಮವನ್ನು ರೂಪಿಸಿಕೊಳ್ಳಬೇಕು ಎಂಬ ಸರಳ ಸೂತ್ರ ಇಲ್ಲಿದೆ. ಹೇಗೂ ಅಪಾಯಕಾರಿಗಳ ವಿರುದ್ಧ ಯೋಚಿಸಲು ಇಲ್ಲದ ಮೇಲೆ ಅಪಾಯಕಾರಿಗಳ ಪರ ಯಾಕೆ ಮಾತಾಡಬಾರದು? ಅದರ ಪರಿಣಾಮವಾಗಿ, ಆಸೆಗಳ ಈಡೇರಿಕೆಗೆ ಅವಕಾಶವಿದೆ. ಅಂದರೆ ಮನುಷ್ಯನ ಮೂಲಭೂತವಾದ ಎರಡು ಸ್ವಭಾವಗಳಿಗೂ ಒಂದರಲ್ಲೇ ಪರಿಹಾರ ಸಿಕ್ಕಂತಾಯಿತು. ಆದರೆ ಈ ಪರಿಹಾರ ಮಾನಸಿಕವಾಗಿ ಗುಲಾಮರಾದ ಜನಸಮುದಾಯಗಳನ್ನು ಸೃಷ್ಟಿಸುತ್ತದೆ.‌

ಯೋಚಿಸುವ ಸ್ವಾತಂತ್ರ್ಯವನ್ನೇ ಉಳಿಸಿಕೊಳ್ಳಲು ಆಗದಿದ್ದರೆ ಬೇರೆ ಯಾವುದೇ ಸ್ವಾತಂತ್ರ್ಯವೂ ಉಳಿಯಲು ಸಾಧ್ಯವಿಲ್ಲ. ಆದ್ದರಿಂದ ಬಾಹ್ಯ ಭಯವನ್ನು ಕಡಿಮೆ ಮಾಡಿಕೊಳ್ಳುವ, ಆಸೆಗಳನ್ನು ಹೆಚ್ಚು ಸರಿಯಾದ ವಿಧಾನದಲ್ಲಿ ಈಡೇರಿಸಿಕೊಳ್ಳುವ ರೂಪದ ಆಲೋಚನಾ ಕ್ರಮವನ್ನು ಕಂಡುಕೊಳ್ಳಬೇಕಾಗಿದೆ. ಅದರಿಂದ ದೊರೆಯುವ ಆಲೋಚನಾ ಸ್ವಾತಂತ್ರ್ಯವನ್ನು ಚಲಾಯಿಸಿ ‘ಸ್ವಾತಂತ್ರ್ಯದ ಆಶಯ’ವನ್ನು ಸಾಧಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT