ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಅಂಟಾರ್ಕ್ಟಿಕದ ಜೀವಿ ಉದ್ಯಾನಗಳ ಭವಿಷ್ಯ

ಈ ಶ್ವೇತಖಂಡ ಕಾನೂನಿನಿಂದಲೇ ಅಸ್ತಿತ್ವ ಉಳಿಸಿಕೊಳ್ಳಬೇಕಾದ ಸ್ಥಿತಿ ತಲುಪುತ್ತಿದೆ
Published 9 ಮೇ 2023, 19:35 IST
Last Updated 9 ಮೇ 2023, 19:35 IST
ಅಕ್ಷರ ಗಾತ್ರ

ಜಗತ್ತಿನ ಯಾವೊಂದು ದೇಶಕ್ಕೂ ಸೇರಿರದ ಅಥವಾ ದೇಶಗಳೇ ಇಲ್ಲದ ಏಕೈಕ ಖಂಡ ಭೂಗೋಳದ ದಕ್ಷಿಣ ತುದಿಯಲ್ಲಿರುವ ಅಂಟಾರ್ಕ್ಟಿಕ. ಶ್ವೇತಖಂಡ, ಬಿರುಗಾಳಿಯ ತವರು, ಹಿಮಖಂಡ, ಶೀತಲಖಂಡ, ಉನ್ನತಖಂಡ ಎಂಬ ವಿಶೇಷಣಗಳೆಲ್ಲವೂ ಇದಕ್ಕೆ ಸಲ್ಲುತ್ತವೆ. ಈ ಖಂಡಕ್ಕೆ ಅದರದೇ ಆದ ಜನರೂ ಇಲ್ಲ. ಈಗ ಇರುವವರೆಲ್ಲ ಸಂಶೋಧನೆಗಾಗಿ ಅಲ್ಲಿಗೆ ಬಂದಿರುವ ವಿಜ್ಞಾನಿಗಳು. ಐದು ದಶಕಗಳಿಂದ ತಮ್ಮ ತಮ್ಮ ದೇಶದ ಸಂಶೋಧನಾ ಕೇಂದ್ರಗಳನ್ನು ತೆರೆದು, ಸರ್ವಋತುವಿನಲ್ಲೂ ಈ ಖಂಡದಲ್ಲಿ ವೈಜ್ಞಾನಿಕ ಸಂಶೋಧನೆಯಲ್ಲಿ ತೊಡಗಿದ್ದಾರೆ.

1983ರಲ್ಲಿ ಇಲ್ಲಿನ ಉಷ್ಣತೆ ಮೈನಸ್‌ 89.6 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದ್ದುಂಟು. ಜಗತ್ತಿನ ಹವಾಮಾನವನ್ನೇ ನಿಯಂತ್ರಿಸುವಷ್ಟು ಸಾಮರ್ಥ್ಯ ಈ ಖಂಡಕ್ಕಿದೆ. ಜಗತ್ತಿನ ಶೇ 90ರಷ್ಟು ಸಿಹಿನೀರು ಬರ್ಫದ ರೂಪದಲ್ಲಿ ಇಲ್ಲಿ ಸಂಚಯನವಾಗಿದೆ.

ಮನುಷ್ಯನ ಸಾಹಸವನ್ನು ಪರೀಕ್ಷಿಸಲು ಅಂಟಾರ್ಕ್ಟಿಕ ಖಂಡ ಸದಾ ಪಂಥಾಹ್ವಾನವನ್ನು ನೀಡುತ್ತಲೇ ಬಂದಿದೆ. 1911ರಲ್ಲಿ ನಾರ್ವೆಯ ಅಮುಂಡ್‌ಸನ್‌, ದಕ್ಷಿಣ ಧ್ರುವವನ್ನು ಮೆಟ್ಟಿನಿಂತ ಮೇಲೆ ದೊಡ್ಡ ‘ಹೀರೊ’ ಆದ. ಅಲ್ಲಿಂದ ಶುರುವಾಯಿತು ಅಲ್ಲಿನ ನೆಲದ ಆಕರ್ಷಣೆ. ವಾಸ್ತವವಾಗಿ ಅಲ್ಲಿ ನೆಲವನ್ನು ಮೂರು ಕಿಲೊಮೀಟರ್‌ ಮಂದದ ಹಿಮಸ್ತರಗಳು ಮುಚ್ಚಿಬಿಟ್ಟಿವೆ. ಆದರೆ ಅದರ ಕೆಳಗೆ ಅಡಗಿರಬಹುದಾದ ದೊಡ್ಡ ಪ್ರಮಾಣದ ಚಿನ್ನವೂ ಸೇರಿದಂತೆ ವಿವಿಧ ಲೋಹಗಳು, ಅದಕ್ಕಿಂತಲೂ ಹೆಚ್ಚಿನದಾಗಿ ದೊಡ್ಡ ದೊಡ್ಡ ತೈಲ ಭಂಡಾರಗಳ ಆಕರ್ಷಣೆಯಿಂದ ಎಲ್ಲ ದೇಶಗಳೂ ತಮ್ಮ ಹೀರೊಗಳನ್ನು ಅಲ್ಲಿಗೆ ಅಟ್ಟಿದವು. ಸಾವು, ನೋವನ್ನು ಲೆಕ್ಕಿಸದೆ ವಿಶೇಷವಾಗಿ ಯುರೋಪಿನ ದೇಶಗಳು ಅಲ್ಲಿಗೆ ಲಗ್ಗೆಹಾಕಿ ‘ಇದು ನಮ್ಮ ಜಾಗ’ ಎಂದು ನಕ್ಷೆಗಳಲ್ಲಿ ಅವುಗಳನ್ನು ಮೂಡಿಸಿ, ಅವುಗಳ ಸ್ವಾಮ್ಯವನ್ನು ಘೋಷಿಸಿದವು. ಈ ಪೈಕಿ ಬ್ರಿಟನ್‌, ನಾರ್ವೆ, ಫ್ರಾನ್ಸ್‌ನಂತಹ ಹನ್ನೆರಡು ದೇಶಗಳು ತಮ್ಮ ಬಾವುಟವನ್ನೂ ಹಾರಿಸಿದವು.

ಈ ಸ್ಪರ್ಧೆಗೆ ಕಡಿವಾಣ ಹಾಕಲೇಬೇಕಾಗಿತ್ತು. ಇದು ಎಷ್ಟು ಅತಿರೇಕಕ್ಕೆ ಹೋಯಿತೆಂದರೆ, ಅರ್ಜೆಂಟೀನವು ಅಂಟಾರ್ಕ್ಟಿಕದ ತನ್ನ ಸಂಶೋಧನಾ ಕೇಂದ್ರಕ್ಕೆ ಗರ್ಭಿಣಿಯೊಬ್ಬರನ್ನು ಕಳಿಸಿ, ಅಲ್ಲಿಯೇ ಹೆರಿಗೆಯಾಗುವಂತೆ ನೋಡಿಕೊಂಡು, ಹುಟ್ಟಿದ ಮಗು ಅಂಟಾರ್ಕ್ಟಿಕ ಖಂಡದ ಮೊದಲ ಪ್ರಜೆ ಎಂದು ಘೋಷಿಸಿತು. ಅಲ್ಲಿನ ಅಮೂಲ್ಯ ಸಂಪತ್ತನ್ನು ಕೊಳ್ಳೆ ಹೊಡೆಯಲು ಸಾಧ್ಯವಾಗದಂತೆ ವೈಜ್ಞಾನಿಕ ಸಂಶೋಧನೆಗೆ ಮಾತ್ರ ಮೀಸಲಾಗಿಡುವಂತೆ ಜಾಗತಿಕ ಒತ್ತಡ ಬಂದು, 1959ರಲ್ಲಿ ‘ಅಂಟಾರ್ಕ್ಟಿಕ ಕೂಟ’ ಅಸ್ತಿತ್ವಕ್ಕೆ ಬಂತು. ಈ ಹಿಂದೆ ಸ್ವಾಮ್ಯ ಘೋಷಿಸಿದ್ದ ರಾಷ್ಟ್ರಗಳ ಎಲ್ಲ ಹಕ್ಕನ್ನೂ ಇದು ಅನೂರ್ಜಿತಗೊಳಿಸಿತು. ಇದರ ಹಿಂದೆಯೇ ಜೀವಿ ಸಂಪನ್ಮೂಲದ ಅತಿ ಶೋಷಣೆಯನ್ನು ತಡೆಯಲು 1982ರಲ್ಲಿ ಅಂಟಾರ್ಕ್ಟಿಕ ಸಾಗರ ಜೀವಿ ಸಂಪನ್ಮೂಲ ಸಂರಕ್ಷಣಾ ಸಮಿತಿ (ಸಿಸಿಎಎಂಎಲ್‌ಆರ್‌) ಅಸ್ತಿತ್ವಕ್ಕೆ ಬಂದು ಇಡೀ ಖಂಡದ ನಿರ್ವಹಣೆಯ ನೀಲಿನಕ್ಷೆಯನ್ನು ತಯಾರಿಸಿತು.

ಈಗ ಅಂಟಾರ್ಕ್ಟಿಕ ಒಪ್ಪಂದಕ್ಕೆ 56 ರಾಷ್ಟ್ರಗಳು ಸಹಿ ಹಾಕಿವೆ. ಇದೇ ಜೂನ್‌ ತಿಂಗಳಲ್ಲಿ ಚಿಲಿಯ ಸ್ಯಾಂಟಿಯಾಗೊದಲ್ಲಿ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. 1950ರಿಂದ ಈಚೆಗೆ ಈ ಖಂಡ ಮತ್ತು ಅದರ ಸುತ್ತಣ ದಕ್ಷಿಣ ಸಾಗರ ಮೂರು ಡಿಗ್ರಿ ಸೆಲ್ಸಿಯಸ್‌ ಹೆಚ್ಚುವರಿ ಉಷ್ಣತೆಗೆ ತುತ್ತಾಗಿವೆ. ಅಂಟಾರ್ಕ್ಟಿಕದ ಹಿಮ ಕರಗಿದರೆ, ಅದು ಜಾಗತಿಕ ಮಟ್ಟದ ವಾಯುಗೋಳದಲ್ಲಿ ತರಬಹುದಾದ ಬದಲಾವಣೆ ಕುರಿತು ಗಂಭೀರ ಸ್ವರೂಪದ ಚರ್ಚೆ ಆಗಲಿದೆ.

ಅಂಟಾರ್ಕ್ಟಿಕ ಖಂಡದ ರಕ್ಷಣೆ ಎಂದರೆ ಈಗಿನ ಪರಿಸ್ಥಿತಿಯಲ್ಲಿ ಖಂಡಕ್ಕಿಂತ ಮುಖ್ಯವಾಗಿ ಅದನ್ನು ಆವರಿಸಿರುವ ದಕ್ಷಿಣ ಸಮುದ್ರದ ಜೀವಿಗಳ ರಕ್ಷಣೆ. ಎಲ್ಲ ದೇಶಗಳೂ ಈಗಾಗಲೇ ತಮ್ಮ ತಮ್ಮ ಸಾಗರ ಭಾಗದ ಜೀವಿಗಳ ರಕ್ಷಣೆಗಾಗಿಯೇ ‘ಸಾಗರ ರಕ್ಷಿತ ಪ್ರದೇಶ’ (ಎಂಪಿಎ) ಎಂದು ಆಯಕಟ್ಟಿನ ಜಾಗಗಳನ್ನು ಗುರುತಿಸಿವೆ. ಈ ಪರಿಕಲ್ಪನೆ ಮೂಡಿದ್ದು 1962ರಲ್ಲಿ ‘ರಾಷ್ಟ್ರೀಯ ಉದ್ಯಾನಗಳ ಜಾಗತಿಕ ಕಾಂಗ್ರೆಸ್‌’ನಲ್ಲಿ. ಈಗ 2030ರ ಹೊತ್ತಿಗೆ ಶೇ 30ರಷ್ಟು ಭಾಗ ಸಾಗರ ಪ್ರದೇಶ ರಕ್ಷಿತ ಪ್ರದೇಶವಾಗಿ ಘೋಷಣೆಯಾಗಬೇಕೆಂಬುದು ವಿಶ್ವಸಂಸ್ಥೆಯ ಆಶಯ ಕೂಡ.

ಅಂಟಾರ್ಕ್ಟಿಕ ಖಂಡಕ್ಕೆ ಈ ಯೋಜನೆಯನ್ನು ವಿಸ್ತರಿಸುವುದರಲ್ಲಿ ಹೆಚ್ಚಿನ ಅರ್ಥವಿದೆ. ಏಕೆಂದರೆ ಈಗಿನ 56 ಸದಸ್ಯ ರಾಷ್ಟ್ರಗಳಿಗೆ ಈಗಾಗಲೇ ಒಂದು ಅಂಶ ಮನದಟ್ಟಾಗಿದೆ. ಅಂಟಾರ್ಕ್ಟಿಕ ಖಂಡ ಇಡೀ ಮನುಕುಲಕ್ಕೆ ಸೇರಿದ್ದು ಎಂದು ಘೋಷಣೆಯಾಗಿದ್ದರೂ ಸದ್ದಿಲ್ಲದೆ ಅಲ್ಲಿನ ಜೀವಿ ಸಂಪನ್ಮೂಲವನ್ನು ಲಪಟಾಯಿಸುತ್ತಿವೆ. ವಿಶೇಷವಾಗಿ ‘ಕ್ರಿಲ್‌’ ಎಂಬ ಸೀಗಡಿ ದಕ್ಷಿಣ ಸಾಗರದ ಆಹಾರ ಸರಪಳಿಗೆ ಮೂಲಕೊಂಡಿ. ಹೆಚ್ಚಿನ ಪ್ರೋಟೀನ್‌ ಇರುವುದರಿಂದ ಅಲ್ಲಿನ ತಿಮಿಂಗಿಲ, ಸೀಲ್‌, ಕಡಲಹಕ್ಕಿಗಳು, ಪೆಂಗ್ವಿನ್‌ ಎಲ್ಲಕ್ಕೂ ಕ್ರಿಲ್‌ ಬೇಕು. ಸದ್ಯ ಇಡೀ ಅಂಟಾರ್ಕ್ಟಿಕದ ಸುತ್ತಣ ಸಾಗರದಲ್ಲಿ ಎರಡು ಭಾಗಗಳು ಮಾತ್ರ ‘ರಕ್ಷಿತ ಪ್ರದೇಶ’ ಎಂಬ ಅಡಿಯಲ್ಲಿ ಬರುತ್ತವೆ. ಅಲ್ಲಿ ಕ್ರಿಲ್‌ ದೋಚುವಂತಿಲ್ಲ.

2021ರಲ್ಲೇ ನಾರ್ವೆ, ಚೀನಾ, ಚಿಲಿ, ದಕ್ಷಿಣ ಕೊರಿಯಾ ಒಟ್ಟಾರೆ 1,61,722 ಟನ್‌ ಕ್ರಿಲ್‌ ಸಂಪನ್ಮೂಲವನ್ನು ಅರಕ್ಷಿತ ಪ್ರದೇಶದಿಂದ ಸಂಗ್ರಹಿಸಿದ್ದವು. ವಾಸ್ತವವಾಗಿ ದಕ್ಷಿಣ ಸಾಗರದಲ್ಲಿ ಇರುವ ಕ್ರಿಲ್‌ ಸಂಪನ್ಮೂಲದ ಶೇ 1ರಷ್ಟನ್ನು ಮಾತ್ರ ಹಿಡಿಯಲು ಅವಕಾಶ ಕೊಡಲಾಗಿದೆ. ಆದರೆ ಈ ದೇಶಗಳು ಆಹಾರಕೊಂಡಿಯ ಸರಪಳಿಯನ್ನೇ ತುಂಡರಿಸುತ್ತಿವೆ. ಇಡೀ ಅಂಟಾರ್ಕ್ಟಿಕ ಖಂಡದ ಅಂಚಿನಲ್ಲಿ ಇನ್ನೂ ಮೂರು ರಕ್ಷಿತ ಸಾಗರ ಪ್ರದೇಶಗಳನ್ನು ಸೃಷ್ಟಿಸಬೇಕಾಗಿದೆ. 2012ರಲ್ಲೇ ಸದಸ್ಯ ರಾಷ್ಟ್ರಗಳು ಇದಕ್ಕೆ ಒಪ್ಪಿಗೆ ನೀಡಿದ್ದರೂ ಅಂಟಾರ್ಕ್ಟಿಕ ಖಂಡದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವ ಸಮಿತಿ ಕಾರ್ಯೋನ್ಮುಖವಾಗಿಲ್ಲ. ಏಕೆಂದರೆ ಉತ್ಸಾಹ ತೋರಿದ ದೇಶಗಳು ಜೀವಿಉದ್ಯಾನಗಳನ್ನು ನಿರ್ವಹಿಸಲು ಬೇಕಾದ ಆರ್ಥಿಕ ನೆರವನ್ನು ಕೊಡುತ್ತಿಲ್ಲ. ಇದು ಒಂದು ರೀತಿಯ ಅವಗಣನೆಗೆ ತುತ್ತಾಗಿದೆ. ಇದೇ ಅಲಕ್ಷ್ಯವನ್ನು ಮುಂದುವರಿಸಿದರೆ, ಮುಂದೆ ದಕ್ಷಿಣ ಸಾಗರದ ಜೀವಿವೈವಿಧ್ಯಕ್ಕೇ ಕುತ್ತು ಬರುವಷ್ಟು ಜೀವಿ ಸಂಪನ್ಮೂಲವನ್ನು ಸದಸ್ಯ ರಾಷ್ಟ್ರಗಳೇ ದೋಚುವ ಸಂಭವವಿದೆ.

ಯೋಜಿಸಿದಂತೆ ಇನ್ನು ಮೂರು ಪ್ರದೇಶಗಳು ಜೀವಿಉದ್ಯಾನಗಳ ಸುರಕ್ಷಿತ ತಾಣಗಳಾಗಿ ಸಂರಕ್ಷಿತವಾದರೆ ಸುಮಾರು 36 ಲಕ್ಷ ಚದರ ಕಿಲೊಮೀಟರ್‌ ಪ್ರದೇಶದಲ್ಲಿ ಯಾವ ಮಾನವ ಚಟುವಟಿಕೆಗಳಿಗೂ ಅವಕಾಶವಿರುವುದಿಲ್ಲ. ಆದರೆ ಅಂಟಾರ್ಕ್ಟಿಕದ ಮಟ್ಟಿಗೆ ಇದು ಒಡನೆಯೇ ಕೈಗೂಡುವುದಿಲ್ಲ. ರಷ್ಯಾ ಮತ್ತು ಚೀನಾ ‘ಸಾಗರ ಸಂರಕ್ಷಿತ ಪ್ರದೇಶ’ ಎಂಬ ಪರಿಕಲ್ಪನೆಯನ್ನೇ ಪ್ರಶ್ನಿಸುತ್ತಿವೆ. ನಾಶದ ಭೀತಿಯಲ್ಲಿರುವ ಪಟ್ಟಿಯಲ್ಲಿ ಕ್ರಿಲ್‌ ಸಂಪನ್ಮೂಲ ಬರುತ್ತಿಲ್ಲ. ಅದು ದಂಡಿಯಾಗಿರುವಾಗ, ಸರಿಯಾದ ರೀತಿಯಲ್ಲಿ ಬಳಕೆಯಾದರೆ ತಪ್ಪೇನು ಎನ್ನುತ್ತಿವೆ. ಇದರ ಅರ್ಥ, ಈ ಯೋಜನೆಗೆ ಆರ್ಥಿಕ ಬೆಂಬಲವನ್ನು ಅವು ನೀಡುವ ಸಾಧ್ಯತೆ ಇಲ್ಲ. ಆದರೆ ಇದೇ ವೇಳೆ, ಸದಸ್ಯ ರಾಷ್ಟ್ರವಾಗಿರುವ ಭಾರತ ಅತ್ಯಂತ ಹೆಚ್ಚು ಜೀವಿವೈವಿಧ್ಯವಿರುವ, ವಿಶೇಷವಾಗಿ ಕ್ರಿಲ್‌ ಸಂಪನ್ಮೂಲವಿರುವ ಅಂಟಾರ್ಕ್ಟಿಕ ಖಂಡದ ವೆಡೆಲ್‌ ಸಮುದ್ರ ಮತ್ತು ಪೂರ್ವ ಅಂಟಾರ್ಕ್ಟಿಕದ ಕೊಕ್ಕಿನಂತಿರುವ ಭಾಗದಲ್ಲಿ ಎರಡು ಸಾಗರ ಸಂರಕ್ಷಿತ ಪ್ರದೇಶಗಳನ್ನು ಗುರುತಿಸಲು ಮುಂದೆ ಬಂದಿದೆ.

ಅಂಟಾರ್ಕ್ಟಿಕ ಖಂಡ ಇಡೀ ಮನುಕುಲದ ಆಸ್ತಿ ಎನ್ನುವಾಗ ಅದರ ದುರ್ಬಳಕೆಯೂ ಆಗುತ್ತದೆ. ಏಕೆಂದರೆ ಯಾವೊಂದು ರಾಷ್ಟ್ರಕ್ಕೂ ಅದರ ಮೇಲೆ ಹಕ್ಕಿಲ್ಲ. ಪ್ರತಿಬಾರಿಯೂ ಸದಸ್ಯ ದೇಶಗಳು ಸಭೆ ಸೇರಿ ನಿರ್ಣಯಗಳನ್ನು ಮಂಡಿಸಬೇಕು, ಒಪ್ಪಿಗೆ ಪಡೆದು ಅನುಷ್ಠಾನಗೊಳಿಸಬೇಕು. ಒಂದು ಅರ್ಥದಲ್ಲಿ ಇಡೀ ಈ ಶ್ವೇತಖಂಡ, ನಾವು ರೂಪಿಸುವ ಕಾನೂನಿನಿಂದಲೇ ಅದರ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದ ಅನೂಹ್ಯ ಸ್ಥಿತಿಯನ್ನು ತಲುಪುತ್ತಿದೆ. ನಿಸರ್ಗ ನಮ್ಮ ಕಾನೂನುಗಳಿಗಾಗಿ ಕಾಯುತ್ತದೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT