ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಒಳಗಿನ ವಿಮರ್ಶೆಯ ಅಗತ್ಯ, ಮಹತ್ವ

Published 24 ಅಕ್ಟೋಬರ್ 2023, 23:36 IST
Last Updated 24 ಅಕ್ಟೋಬರ್ 2023, 23:36 IST
ಅಕ್ಷರ ಗಾತ್ರ

ಇಂದಿನ ದಿನಮಾನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಅತ್ಯಂತ ಅಭಾವಕ್ಕೀಡಾಗಿರುವ ಅಂಶವೆಂದರೆ ಕಟು ವಿಮರ್ಶೆ, ಅದರಲ್ಲೂ ಕಟುವಾದ ಸ್ವವಿಮರ್ಶೆ. ವ್ಯಕ್ತಿಗತ ನೆಲೆಯಲ್ಲಾಗಲಿ, ಸಾಮಾಜಿಕ, ರಾಜಕೀಯ ಮತ್ತು ಸಾಹಿತ್ಯ ವಲಯದಲ್ಲಾಗಲಿ ಕೃತಕ ವಿಮರ್ಶೆಯ ಕಲಬೆರಕೆಗಳು ಬೇಕಾದಷ್ಟು ದೊರಕಬಹುದು. ಆದರೆ ನೈಜ ಮಾದರಿಯ ಸ್ವವಿಮರ್ಶೆ ಎಂಬ ಪದಾರ್ಥ ತೀರಾ ಅಪರೂಪ. ಇದರ ಅಭಾವದ ಮೂಲವಿರುವುದು ಮೆಚ್ಚುಗೆ ಮಾತುಗಳ ಮರೆಯಲ್ಲಿ, ಆತ್ಮವಂಚನೆಯ ಪರದೆಯಲ್ಲಿ ಸದಾ ಅವಿತಿಟ್ಟುಕೊಳ್ಳಬಯಸುವ ಮನುಷ್ಯ ಸ್ವಭಾವದಲ್ಲಿ.

ಸಮಾಜದಲ್ಲಿ ವಿಮರ್ಶಾತ್ಮಕ ಒಳಗಿನವರು ಅನೇಕ ಸಂದರ್ಭಗಳಲ್ಲಿ ಮಹತ್ವದ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ಒಂದು ನಿರ್ದಿಷ್ಟ ಜಾತಿ, ಧರ್ಮ, ಗುಂಪು, ಸಂಸ್ಥೆ ಅಥವಾ ಸಮುದಾಯದ ಭಾಗವಾಗಿರುವ ವ್ಯಕ್ತಿಗಳು ತಮ್ಮ ಕಟು ಟೀಕೆಗಳ ಮೂಲಕ ಸಕಾರಾತ್ಮಕ ಬದಲಾವಣೆಗೆ ಚಾಲನೆ ನೀಡಲು ಸಾಧ್ಯ. ಒಳಗಿನ ವಿಮರ್ಶಕರು ಬದಲಾವಣೆಗೆ ವೇಗವರ್ಧಕಗಳಾಗಿ ಕಾರ್ಯನಿರ್ವಹಿಸುತ್ತಾರೆ. ಜಡ್ಡುಗಟ್ಟಿದ ಯಥಾ
ಸ್ಥಿತಿಗೆ ಸವಾಲು ಹಾಕುವ ಅವರ ನಡೆ ಇತರರನ್ನು ಪ್ರೇರೇಪಿಸುತ್ತದೆ ಮತ್ತು ಸುಧಾರಣೆಗೆ ಒತ್ತಾಸೆಯಾಗಿ ನಿಲ್ಲುತ್ತದೆ.

ಒಳಗಿನ ವಿಮರ್ಶಕರ ಅಗತ್ಯ ಮತ್ತು ಮಹತ್ವವನ್ನು ಸಾರುವ ಸಮರ್ಥನೆಗಳು ಜಾಗತಿಕವಾಗಿ, ಸ್ಥಳೀಯವಾಗಿ ಬಹಳಷ್ಟು ಸಿಗುತ್ತವೆ. ಒಳಗಿನವರ ಇಂತಹ ಪ್ರಯತ್ನಗಳು ಸಹಜವಾಗಿ ಪಟ್ಟಭದ್ರ ಹಿತಾಸಕ್ತಿಗಳಿಂದ ಪ್ರತಿರೋಧ, ಸವಾಲು ಮತ್ತು ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಆದಾಗ್ಯೂ ನ್ಯಾಯಯುತ, ಸಮಾನ ಮತ್ತು ನೈತಿಕ ಸಮಾಜವನ್ನು ನಿರ್ಮಿಸುವ ಅವರ ಬದ್ಧತೆಯು ಪ್ರಶ್ನಾತೀತ.

ಬಾಂಗ್ಲಾ-ಸ್ವೀಡಿಷ್ ಲೇಖಕಿ ತಸ್ಲಿಮಾ ನಸ್ರೀನ್ ಮೂಲತಃ ಮಾನವ ಹಕ್ಕುಗಳ ಹೋರಾಟಗಾರ್ತಿ, ಧಾರ್ಮಿಕ ಮೂಲಭೂತವಾದದ ವಿರೋಧಿ. ಬಾಂಗ್ಲಾದೇಶದಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರನ್ನು ಕುರಿತ ಅವರ ‘ಲಜ್ಜಾ’ (ಅವಮಾನ) ಕಾದಂಬರಿ ಜಾಗತಿಕ ವಿವಾದವನ್ನೇ ಸೃಷ್ಟಿಸಿತ್ತು. ಇಸ್ಲಾಂ ಧಾರ್ಮಿಕ ಉಗ್ರವಾದದ ಬಗೆಗಿನ ಅವರ ವಿಮರ್ಶಾತ್ಮಕ ದೃಷ್ಟಿಕೋನಗಳಿಗಾಗಿ ಹತ್ಯೆಗೆ ಫತ್ವಾ ಹೊರಡಿಸಲಾಯಿತು. ನಸ್ರೀನ್ ಅವರ ಕೃತಿಗಳನ್ನು ಬಾಂಗ್ಲಾದೇಶ ಮತ್ತು ಭಾರತದಲ್ಲಿ ನಿಷೇಧಿಸಲಾಗಿದೆ. ಇಸ್ಲಾಮಿಕ್ ಸಮಾಜಗಳಲ್ಲಿ ಮಹಿಳೆಯರ ಸ್ಥಾನ ಕುರಿತ ಅವರ ಅಭಿಪ್ರಾಯಗಳು ವಿಶೇಷವಾಗಿ ವಿವಾದಾಸ್ಪದವಾಗಿವೆ.

ಬ್ರಿಟಿಷ್-ಭಾರತೀಯ ಲೇಖಕ ಸಲ್ಮಾನ್ ರಶ್ದಿ ಅವರ ‘ದಿ ಸಟಾನಿಕ್ ವರ್ಸಸ್’ (1988) ಕಾದಂಬರಿಯನ್ನು ಕೆಲವು ಇಸ್ಲಾಮಿಕ್ ನಾಯಕರು ಧರ್ಮನಿಂದನೆಯ ಬರವಣಿಗೆ ಎಂದು ಪರಿಗಣಿಸಿದರು. ಇರಾನ್‌ನ ಅಯತೊಲ್ಲಾ ಖೊಮೇನಿ 1989ರಲ್ಲಿ ಫತ್ವಾ ಹೊರಡಿಸಿ, ರಶ್ದಿಯವರ ಹತ್ಯೆಗೆ ಕರೆ ನೀಡಿದರು. ಈ ಇಬ್ಬರೂ ಲೇಖಕರ ವಿವಾದಗಳು ಧರ್ಮ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಾಂಸ್ಕೃತಿಕ ಸೂಕ್ಷ್ಮತೆಗಳೊಂದಿಗೆ ಆಳವಾಗಿ ಹೆಣೆದುಕೊಂಡಿವೆ.

ಪಾಕಿಸ್ತಾನದ ನೊಬೆಲ್ ಪ್ರಶಸ್ತಿ ವಿಜೇತ ಹೋರಾಟಗಾರ್ತಿ ಮಲಾಲಾ ತನ್ನ ಖ್ಯಾತಿಯನ್ನು ಉಗ್ರವಾದ ಪೀಡಿತ ಪ್ರದೇಶದ ಮುಸ್ಲಿಂ ಹುಡುಗಿಯರ ಶಿಕ್ಷಣ ಮತ್ತು ಮಹಿಳಾ ಹಕ್ಕುಗಳಿಗಾಗಿ ಬಳಸಿಕೊಂಡರು. ಇನ್ನೊಬ್ಬ ನೊಬೆಲ್ ಪ್ರಶಸ್ತಿ ವಿಜೇತೆ ಆಂಗ್ ಸಾನ್ ಸೂಕಿ, ಬೌದ್ಧ ನಂಬಿಕೆ ಮತ್ತು ಮ್ಯಾನ್ಮಾರ್‌ ನಾಗರಿಕರ ಹಕ್ಕುಗಳನ್ನು ಪ್ರತಿಪಾದಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ. ಅವರು ದೇಶದ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ರಕ್ಷಣೆಯ ಹೋರಾಟದಲ್ಲಿ ಸರಣಿ ಸವಾಲುಗಳನ್ನೇ ಎದುರಿಸಿದರು.

ಪಾಕಿಸ್ತಾನದ ಪ್ರಧಾನಿಯಾಗಿದ್ದ ಬೆನಜೀರ್ ಭುಟ್ಟೊ ಅವರು ಮುಸ್ಲಿಂ ದೇಶದಲ್ಲಿ ಲಿಂಗ ಸಮಾನತೆ ಮತ್ತು
ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪ್ರತಿಪಾದಿಸಿದರು.

ಬಸವಣ್ಣನವರು ಹುಟ್ಟಿನಿಂದ ಬ್ರಾಹ್ಮಣರಾದರೂ ತಮ್ಮ ಬದುಕಿನುದ್ದಕ್ಕೂ ಬ್ರಾಹ್ಮಣ್ಯವನ್ನು ಅತ್ಯಂತ ಕಟುಶಬ್ದ
ಗಳಲ್ಲಿ ಟೀಕಿಸಿದ್ದಾರೆ, ಖಂಡಿಸಿದ್ದಾರೆ, ವಿಮರ್ಶಿಸಿದ್ದಾರೆ. ‘ಕರ್ಮದ ಬಲೆಯಲ್ಲಿ ಸಿಲುಕಿ ವೃಥಾಯ ಬರು
ದೊರೆಹೋಹ ಕೆಡುಕ ಹಾರುವ ನಾನಲ್ಲ, ಕೂಡಲಸಂಗಮದೇವನು ವಿಪ್ರಕರ್ಮವ ಬಿಡಿಸಿ ಅಶುದ್ಧನ ಶುದ್ಧ ಮಾಡಿದನಾಗಿ’, ‘ಆನು ಹಾರುವನೆಂದೆಡೆ ಕೂಡಲಸಂಗಮ ನಗುವನಯ್ಯ’ ಎಂಬಂತಹ ವಚನಗಳ ಸಾಲು
ಗಳು ಒಳಗಿನ ವಿಮರ್ಶೆಗೆ ಮಾದರಿಯಾಗಿ ನಿಲ್ಲುತ್ತವೆ.

ಮಹಾತ್ಮ ಗಾಂಧಿಯವರು ತಾವು ನಂಬಿದ ಹಿಂದೂ ಧರ್ಮದಲ್ಲಿನ ಅಸಮಾನತೆ, ಅಸ್ಪೃಶ್ಯತೆ ಆಚರಣೆಗಳ ವಿರುದ್ಧ ದನಿ ಎತ್ತಿ ಸುಧಾರಣಾವಾದಿ ನೆಲೆಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಿದ್ದು ನಮ್ಮೆದುರಿಗಿದೆ. ಬಿ.ಆರ್.ಅಂಬೇಡ್ಕರ್ ಅವರು ಭಾರತದ ದಲಿತ ಸಮುದಾಯದ ಹಕ್ಕುಗಳು ಮತ್ತು ಸಾಮಾಜಿಕ ಉನ್ನತಿಯ ಹೋರಾಟದಲ್ಲಿ ನಿರ್ಣಾಯಕ ಆಂತರಿಕ ಪಾತ್ರವನ್ನು ನಿರ್ವಹಿಸಿದರು. ಬ್ರಾಹ್ಮಣ ಕುಲದಲ್ಲಿ ಹುಟ್ಟಿ ಬೆಳೆದ ಯು.ಆರ್.ಅನಂತಮೂರ್ತಿ ಅವರು ಸಂಸ್ಕಾರ, ಘಟಶ್ರಾದ್ಧ, ಭಾರತೀಪುರ ಕೃತಿಗಳ ಮೂಲಕ ತಮ್ಮ ಒಳಗಿನ ವಿಮರ್ಶಕನ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿ ರುವುದನ್ನು ಕಾಣಬಹುದು.

ದೇವನೂರ ಮಹಾದೇವ ಅವರು ‘ದಲಿತ ನೌಕರರ ಜೊತೆ ಪಿಸುಮಾತು’ ಲೇಖನದಲ್ಲಿ, ‘ದಲಿತ ನೌಕರರ ಜೀವನಚರಿತ್ರೆಯನ್ನು ಒಂದೇ ವಾಕ್ಯದಲ್ಲಿ ಬರೆಯಿರಿ ಎಂದರೆ ಏನನ್ನು ಬರೆಯಬಹುದು? ‘ಬಡತನದಲ್ಲಿ ಕಷ್ಟಪಟ್ಟು ಓದಿ ವಿದ್ಯಾವಂತನಾಗಿ ಕೆಲಸಕ್ಕೆ ಸೇರಿ ಸಂಬಳ ತೆಗೆದುಕೊಂಡು ಆಮೇಲೆ ಊಟ ಮಾಡಿಕೊಂಡು ಚೆನ್ನಾಗಿ ಸತ್ತ’– ಬಹುತೇಕರದು ಇಷ್ಟೇ ಅಲ್ಲವೆ?’ ಎಂದು ಕೇಳುವುದು ಒಳಗಿನ ಟೀಕೆಯ ಇನ್ನೊಂದು ಶೈಲಿ. ಹುಟ್ಟಿನಿಂದ ವೀರಶೈವ ಜಂಗಮರಾದ ಚಂದ್ರಶೇಖರ ಪಾಟೀಲರು, ‘ಬ್ರಾಹ್ಮಣೋ ಬ್ರಹ್ಮಾಂಡ ಘಾತುಕ, ಜಂಗಮೋ ಜಗದ್ಘಾತುಕ’ ಎಂದು ಬಹಿರಂಗ ಸಭೆಯಲ್ಲಿಯೇ ಹೇಳಿದ್ದರು. ಬಾನು ಮುಷ್ತಾಕ್, ಬೊಳುವಾರು ಮಹಮದ್ ಕುಂಞಿ, ಸಾರಾ ಅಬೂಬಕ್ಕರ್ ಅವರು ಒಳಗಿನ ವಿಮರ್ಶಕರಾಗಿ ಬಹಳಷ್ಟು ಪ್ರತಿರೋಧ ಮತ್ತು ಪ್ರಭಾವ ಎರಡಕ್ಕೂ ಕಾರಣರಾಗಿದ್ದಾರೆ.

ಬೀಚಿಯವರು ತಮ್ಮ ಆತ್ಮಕಥನ ‘ನನ್ನ ಭಯಾಗ್ರಫಿ’ ಯಲ್ಲಿ ಒಂದು ಪ್ರಸಂಗವನ್ನು ಉಲ್ಲೇಖಿಸುವ ಮೂಲಕ ತಮ್ಮ ಒಳಗಿನ ವಿಮರ್ಶೆ ಮೆರೆದಿದ್ದಾರೆ. ವರ್ಷಕ್ಕೊಮ್ಮೆ ಶಿವರಾತ್ರಿ ದಿನದಂದು ಮಾತ್ರ ಮಾಧ್ವರು ಕೂಡ ಸ್ಮಾರ್ತಬ್ರಾಹ್ಮಣರು ಪೂಜೆ ಮಾಡುವ ಈಶ್ವರನ ಗುಡಿಗೆ ಹೋಗುವುದನ್ನು ಗಮನಿಸಿದ ಬೀಚಿ, ತಮ್ಮ ಸೋದರತ್ತೆಯ ಗಂಡನನ್ನು ಈ ಬಗ್ಗೆ ಪ್ರಶ್ನಿಸುತ್ತಾರೆ. ‘ವರ್ಷಕ್ಕೊಮ್ಮೆ ಆತನ ದರ್ಶನಾನೂ ಮಾಡಿಕೋಬೇಕಪ್ಪಾ. ಇಲ್ಲದಿದ್ರೆ ಮುಂದೆ ಕತ್ತೆ ಜನ್ಮ ಬರ್ತದೆ’ ಎಂಬುದು ಅವರ ವಿವರಣೆಯಾಗಿತ್ತು. ಅಂದಿನಿಂದ ಬೀದಿಯಲ್ಲಿ ಒಂದು ಕತ್ತೆಯನ್ನು ನೋಡಿದಾಗಲೆಲ್ಲ ಅದರ ಹಿಂದಿನ ಜನ್ಮದ ವೃತ್ತಾಂತ ನೆನಪಿಗೆ ಬರುತ್ತಿತ್ತು. ‘ಯಾರೋ ಆಚಾರ್ಯರ ಮುಂದು ಈ ಮಾತನ್ನಂದು ಬೈಗುಳನ್ನೂ ತಿಂದಿದ್ದೆ…’ ಎಂದು ವಿಡಂಬಿಸಿದ್ದಾರೆ ಬೀಚಿ.

ಸಾಮಾಜಿಕ ಶ್ರೇಣಿ ವ್ಯವಸ್ಥೆ ಮತ್ತು ಜಾತಿ ಆಧಾರಿತ ತಾರತಮ್ಯವು ಚಾಲ್ತಿಯಲ್ಲಿರುವ ಸಮಾಜಗಳಲ್ಲಿ ವಿಮರ್ಶಾತ್ಮಕ ಒಳಗಿನವರು ಸಾಮಾನ್ಯವಾಗಿ ಹುಟ್ಟು ಅಥವಾ ಆಚರಣೆ ಕಾರಣದಿಂದ ಸವಲತ್ತು ಪಡೆದ ಜಾತಿಗಳಿಗೆ ಸೇರಿರುತ್ತಾರೆ. ಹಾಗಾಗಿ, ಅವರು ತಮ್ಮ ಸಮುದಾಯಗಳ ಒಳಗಿನಿಂದ ಸಾಮಾಜಿಕ ಬದಲಾವಣೆ ಪ್ರತಿಪಾದಿಸಿದಾಗ ಹೆಚ್ಚಿನ ಅರ್ಥ ಮತ್ತು ಮನ್ನಣೆ ಸಿಗಲುಅವಕಾಶವಾಗುತ್ತದೆ. ಕುವೆಂಪು ಅವರು ಒಕ್ಕಲಿಗ ಸಮುದಾಯದ ಕುರಿತು ಆಡಿರುವ ‘ಒಕ್ಕಲಿಗರಂಥಾ ಮಹಾ ಮೂಢರು... ’ ಎಂಬ ಮಾತು ‘ಕುವೆಂಪು ಸಮಗ್ರ ಗದ್ಯ’ದ 2ನೇ ಸಂಪುಟದಲ್ಲಿ ದಾಖಲಾಗಿದೆ. ಕೆ.ಎಸ್.ಭಗವಾನ್ ಅವರು ಅಪ್ರಾಸಂಗಿಕವಾಗಿ ಉಲ್ಲೇಖಿಸಿದ ಇದೇ ಮಾತು ಇದೀಗ ವಿವಾದಕ್ಕೆ ಕಾರಣವಾಗಿದೆ.

ಇಲ್ಲಿ ದಾರ್ಶನಿಕ ಸಾಹಿತಿ ಕುವೆಂಪು ಅವರು ಬಳಸಿರುವ ಪದಗಳನ್ನು ಮೀರಿದ ‘ಒಳಗಿನ ವಿಮರ್ಶಾನೋಟ’ ಎಲ್ಲರ ಗಮನ ತಪ್ಪಿಸಿಕೊಳ್ಳುತ್ತಿರು ವುದು ದುಃಖಕರ. ವಿಶ್ವಮಾನವ ಪರಿಕಲ್ಪನೆಯ ಹಂತ ತಲುಪಿದ್ದ ಮಹಾನ್ ಚೇತನದ ಈ ಮಾತುಗಳ ‘ಹೊರನೋಟ’ ಅಷ್ಟೇ ದಕ್ಕಿ ‘ಒಳನೋಟ’ ನಿಲುಕದಿದ್ದರೆ ತಪ್ಪು ಕುವೆಂಪು ಅವರದಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT