ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೇಖನ | ಕೋಟಾ: ಕೊನೆಗಾಣದ ಆತ್ಮಹತ್ಯೆ

Published 1 ಸೆಪ್ಟೆಂಬರ್ 2023, 23:39 IST
Last Updated 1 ಸೆಪ್ಟೆಂಬರ್ 2023, 23:39 IST
ಅಕ್ಷರ ಗಾತ್ರ

ಉನ್ನತ ಶಿಕ್ಷಣಕ್ಕಾಗಿ ನಡೆಯುವ ಪ್ರವೇಶ ಪರೀಕ್ಷೆಗಳಲ್ಲಿ ಇಡೀ ಪ್ರಪಂಚದಲ್ಲಿಯೇ ಅತ್ಯಂತ ಕಠಿಣವಾದುದು, ಚೀನಾದಲ್ಲಿ ಕಾಲೇಜು ಶಿಕ್ಷಣಕ್ಕಾಗಿ ರಾಷ್ಟ್ರಮಟ್ಟದಲ್ಲಿ ನಡೆಯುವ ‘ಗಾವ್‍ಕಾವ್’ ಪರೀಕ್ಷೆ. ಎರಡನೆಯ ಸ್ಥಾನದಲ್ಲಿರುವುದು ನಮ್ಮ ದೇಶದ ಐಐಟಿ- ಜೆಇಇ.

2022ರಲ್ಲಿ ದೇಶದ 23 ಐಐಟಿಗಳಿಗೆ ಅಂತಿಮವಾಗಿ ಆಯ್ಕೆಯಾದ ವಿದ್ಯಾರ್ಥಿಗಳ ಸಂಖ್ಯೆ 13,801. ಇವರಲ್ಲಿ ಕೋಟಾದಲ್ಲಿರುವ ಕೋಚಿಂಗ್ ಕೇಂದ್ರಗಳಿಂದ ಬಂದ ವಿದ್ಯಾರ್ಥಿಗಳ ಸಂಖ್ಯೆ 2,184. ಇದರೊಂದಿಗೆ, ರಾಷ್ಟ್ರಮಟ್ಟದಲ್ಲಿ ಮೊದಲ 100 ಸ್ಥಾನ ಪಡೆದ ವಿದ್ಯಾರ್ಥಿಗಳ ಪಟ್ಟಿಯಲ್ಲಿ 40 ಮಂದಿ ಕೋಟಾ ಟ್ಯೂಷನ್ ಕೇಂದ್ರಗಳಿಂದ ಬಂದವರು. ವರ್ಷ ವರ್ಷವೂ ಇಂತಹ ಉತ್ತಮ ಫಲಿತಾಂಶದ ದಾಖಲೆಯೇ ಉಜ್ವಲ ಭವಿಷ್ಯದ ಕನಸು ಹೊತ್ತ ಲಕ್ಷಾಂತರ ವಿದ್ಯಾರ್ಥಿಗಳನ್ನು ಕೋಟಾದ ಟ್ಯೂಷನ್  ಕೇಂದ್ರಗಳತ್ತ ಇನ್ನಿಲ್ಲದ ಹಾಗೆ ಸೆಳೆಯುತ್ತದೆ.

ಐಐಟಿ, ನೀಟ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ‘ಟ್ಯೂಷನ್ ರಾಜಧಾನಿ’ ಎಂದೇ ಪ್ರಸಿದ್ಧವಾಗಿರುವ ರಾಜಸ್ಥಾನದ ಕೋಟಾ ಪಟ್ಟಣಕ್ಕೆ, ‘ಪ್ರತಿಷ್ಠಿತ ಐಐಟಿಗಳ ಪ್ರವೇಶದ್ವಾರ’ ಎಂಬ ಹೆಗ್ಗಳಿಕೆ ಇದೆ. ಇದೇ ಕಾರಣದಿಂದ ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ, ಪಂಜಾಬ್, ಮಹಾರಾಷ್ಟ್ರ, ಗುಜರಾತ್ ಮತ್ತು ಪಶ್ಚಿಮ ಬಂಗಾಳದಿಂದ ಸುಮಾರು ಎರಡು ಲಕ್ಷ ವಿದ್ಯಾರ್ಥಿಗಳು, ಕೋಟಾದಲ್ಲಿರುವ 150 ಟ್ಯೂಷನ್ ಕೇಂದ್ರಗಳಿಗೆ ಬಂದು ಸೇರುತ್ತಾರೆ. ಪ್ರತಿವರ್ಷ ಜುಲೈನಿಂದ ಮುಂದಿನ ಜನವರಿಯವರೆಗೆ ಉಳಿದೆಲ್ಲ ಚಟುವಟಿಕೆಗಳನ್ನು ಬದಿಗೊತ್ತಿ, ಊಟ, ನಿದ್ದೆ, ವಿಶ್ರಾಂತಿಗೆ ಗಮನ ಕೊಡದೇ, ಪ್ರತಿದಿನ 12ರಿಂದ 15 ಗಂಟೆಗಳ ಕಾಲ, ಅತಿ ತೀಕ್ಷ್ಣ ಸ್ಪರ್ಧಾತ್ಮಕ ಪರಿಸರದಲ್ಲಿ ತರಗತಿಯ ಪಾಠ, ಪ್ರವಚನ, ಟೆಸ್ಟ್‌ಗಳಲ್ಲಿ ಮುಳುಗಿ ಹೋಗುತ್ತಾರೆ.

ಈ ಬಿಡುವಿಲ್ಲದ ಕಟ್ಟುನಿಟ್ಟಿನ ದಿನಚರಿ ಸೃಷ್ಟಿಸುವ ಒತ್ತಡ, ಆತಂಕ, ಉದ್ವಿಗ್ನತೆ, ನಿರಾಸೆಯನ್ನು ತಾಳಲಾರದವರು ತರಬೇತಿಯನ್ನು ಅರ್ಧಕ್ಕೇ ಬಿಟ್ಟು ಊರಿಗೆ ಹೋಗುವುದೂ ಉಂಟು. ಆದರೆ ಹಾಗೆ ಮಾಡಲಾರದಂತಹ ಅಸಹಾಯಕ ಪರಿಸ್ಥಿತಿಯಲ್ಲಿರುವ, ಭಾವನಾತ್ಮಕವಾಗಿ ಪ್ರಬುದ್ಧವಾಗಿರದ ಕೆಲವು ಮಕ್ಕಳು ಬದುಕಿಗೇ ವಿದಾಯ ಹೇಳುತ್ತಾರೆ. 2015ರಿಂದ 2023ರ ಆಗಸ್ಟ್ 31ರವರೆಗೆ ಈ ರೀತಿ 123 ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ವರ್ಷವೊಂದರಲ್ಲೇ 23 ಆತ್ಮಹತ್ಯೆಗಳಾಗಿವೆ.

ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯುವುದು ಭವಿಷ್ಯದ ಬದುಕಿಗೆ ಇಂದು ಮಾಡುವ ಹೂಡಿಕೆ ಎಂಬ ಭಾವನೆ ನಮ್ಮಲ್ಲಿ ಪ್ರಬಲವಾಗಿದೆ. ಈ ಕಾರಣದಿಂದ ಸಾಲಸೋಲ ಮಾಡಿ, ಸ್ಥಿರಾಸ್ತಿಗಳನ್ನು ಮಾರಿ, ಮಕ್ಕಳನ್ನು ಕೋಟಾ ಟ್ಯೂಷನ್ ಕೇಂದ್ರಗಳಿಗೆ ಕಳುಹಿಸುವ ಸಾವಿರಾರು ಪೋಷಕರಿದ್ದಾರೆ. ಉತ್ತರ ಭಾರತದ ಗ್ರಾಮಾಂತರ ಪ್ರದೇಶಗಳಲ್ಲಿ ಈ ಸಂಖ್ಯೆ ನಿರಂತರವಾಗಿ ಏರುತ್ತಿದೆ. ಪೋಷಕರ ಈ ನಿರೀಕ್ಷೆಯ ಭಾರವನ್ನು ಹೊತ್ತು ಕೋಟಾಗೆ ಬಂದಿಳಿಯುವ ಮಕ್ಕಳಿಗೆ ಅಲ್ಲಿ ಬೇರೊಂದು ಪ್ರಪಂಚವೇ ಎದುರಾಗುತ್ತದೆ. ಗಾಬರಿ ಹುಟ್ಟಿಸುವ ಗಾತ್ರದ ಕ್ಲಿಷ್ಟ ಪಠ್ಯವಸ್ತು, ತೀವ್ರ ಸ್ಪರ್ಧಾತ್ಮಕ ಪರಿಸರ, ಪ್ರತಿದಿನ 10ರಿಂದ 15 ಗಂಟೆಗಳ ಕಾಲ ಗಮನವಿಟ್ಟು ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕಾದ ಅನಿವಾರ್ಯ ಮಕ್ಕಳನ್ನು ಕಂಗೆಡಿಸುತ್ತವೆ.

ತಮ್ಮ ಊರಿನಲ್ಲಿ ಶೇ 90ರಷ್ಟು ಅಂಕ ಪಡೆಯುತ್ತಿದ್ದ ಮಕ್ಕಳು, ಶೇ 60-70 ಅಂಕ ಬಂದಾಗ ಕುಗ್ಗುವುದು ಸಹಜ. ಪ್ರತಿವಾರವೂ ಕಡ್ಡಾಯವಾಗಿ ತೆಗೆದುಕೊಳ್ಳಲೇಬೇಕಾದ ‘ಟೆಸ್ಟ್’ ತೀವ್ರ ಆತಂಕಕ್ಕೆ ಕಾರಣವಾಗುವುದನ್ನು ಅಧ್ಯಯನಗಳು ತೋರಿಸಿಕೊಟ್ಟಿವೆ. ಈ ಟೆಸ್ಟ್‌ಗಳಲ್ಲಿ ಕಡಿಮೆ ಅಂಕ ಬಂದವರನ್ನು ಪ್ರತ್ಯೇಕಿಸಿ, ಉತ್ತಮ ಅಂಕ ಪಡೆದ ‘ಸ್ಟಾರ್’ ವಿದ್ಯಾರ್ಥಿಗಳಿಗೆ ಮತ್ತಷ್ಟು ಉತ್ತಮ ತರಬೇತಿ ನೀಡಲಾಗುತ್ತದೆ. ಈ ವರ್ಗೀಕರಣ ಮತ್ತು ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ಪಾಲಕರಿಗೆ ತಿಳಿಸುವ ವ್ಯವಸ್ಥೆ ಅನೇಕ ಮಕ್ಕಳ ಪಾಲಿಗೆ ದುಃಸ್ವಪ್ನವಾಗುತ್ತದೆ. ಲಕ್ಷಾಂತರ ರೂಪಾಯಿಯನ್ನು ಸಾಲವಾಗಿ ಪಡೆದ ಪೋಷಕರು ಈ ಪರಿಸ್ಥಿತಿಯಲ್ಲಿ ಮಕ್ಕಳ ಮೇಲೆ ಮತ್ತಷ್ಟು ಒತ್ತಡ ಹೇರುತ್ತಾರೆ.

ಇಂತಹ ಒತ್ತಡವನ್ನು ನಿಭಾಯಿಸಲು ವಿದ್ಯಾರ್ಥಿಗಳಿಗೆ ಸ್ನೇಹಿತರು, ಪೋಷಕರು, ಶಿಕ್ಷಕರು, ಹಿತೈಷಿಗಳ ಸಾಂತ್ವನ, ಬೆಂಬಲ ಬೇಕು. ಆದರೆ ಟ್ಯೂಷನ್ ಪ್ರಪಂಚದ ಉಸಿರುಗಟ್ಟಿಸುವ ವೇಗದ ಓಟದಲ್ಲಿ ಇದು ಬಹುತೇಕ ಅಸಾಧ್ಯ. ಇಂತಹ ಒತ್ತಡವನ್ನು ತಡೆಯಲಾಗದೇ ವಿದ್ಯಾರ್ಥಿನಿಯೊಬ್ಬಳು ಊರಿಗೆ ಹಿಂದಿರುಗಲು ಪ್ರಯತ್ನಿಸುತ್ತಾಳೆ. ಊರಿಗೆ ಬಂದರೆ ಮದುವೆ ಮಾಡಿ, ಗಂಡನ ಮನೆಗೆ ಕಳುಹಿಸಬೇಕಾಗುತ್ತದೆ ಎಂಬ ಎಚ್ಚರಿಕೆ ಪೋಷಕರಿಂದ ಬಂದಾಗ ವಿಧಿಯಿಲ್ಲದೆ ಕೋಟಾದಲ್ಲಿಯೇ ಉಳಿಯುವ ಅವಳು, ಮುಂದೆ ಬದುಕಿಗೆ ವಿದಾಯ ಹೇಳುವ ಪ್ರಕರಣವನ್ನು ಅಧ್ಯಯನವೊಂದು ದಾಖಲಿಸಿದೆ.

ಕೋಟಾದಲ್ಲಿನ ಆತ್ಮಹತ್ಯೆಯ ಪ್ರಕರಣಗಳು ಟ್ಯೂಷನ್ ಕೇಂದ್ರಗಳ ಖ್ಯಾತಿಗೆ ಮಸಿ ಬಳಿಯುವ ಸಾಧ್ಯತೆಗಳು ಸ್ಪಷ್ಟವಾಗಿ ಗೋಚರಿಸಲು ಪ್ರಾರಂಭವಾದ ನಂತರ, ಹಲವಾರು ಪ್ರಸಿದ್ಧ ಕೇಂದ್ರಗಳು ಆಪ್ತ ಸಮಾಲೋಚಕರು ಹಾಗೂ ಮನೋವೈದ್ಯರ ಸೇವೆಯನ್ನು ಒದಗಿಸಲು ಪ್ರಾರಂಭಿಸಿವೆ. ಆದರೆ ಎರಡು ಲಕ್ಷ ವಿದ್ಯಾರ್ಥಿಗಳ ಸಂಖ್ಯೆಗೆ ಹೋಲಿಸಿದರೆ ಇದು ಏನೇನೂ ಸಾಲದು. ಕೋಟಾ ವೈದ್ಯಕೀಯ ಕಾಲೇಜಿನ ಮನೋರೋಗ ಚಿಕಿತ್ಸಾ ವಿಭಾಗದ ಮಖ್ಯಸ್ಥರು, ‘ಈ ಸಮಸ್ಯೆಯ ನಿರ್ವಹಣೆಗೆ ಹಿಂದಿನ 20 ವರ್ಷಗಳಿಂದ ನಾವು ವೈಜ್ಞಾನಿಕ ಸಲಹೆಗಳನ್ನು ನೀಡುತ್ತ ಬಂದಿದ್ದರೂ ಸರ್ಕಾರ ಅದಕ್ಕೆ ಗಮನ ನೀಡಿಲ್ಲ’ ಎನ್ನುತ್ತಾರೆ.

2020ರ ಕೋವಿಡ್ ಸಂದರ್ಭದಲ್ಲಿ ರಾಜಸ್ಥಾನ ಸರ್ಕಾರ ಮೂವರು ಪರಿಣತರ ಸಮಿತಿಯೊಂದನ್ನು ಈ ಸಮಸ್ಯೆಯ ಅಧ್ಯಯನಕ್ಕೆ ನೇಮಿಸಿತ್ತು. ಆ ಸಮಿತಿಯ ವರದಿ ಆಧಾರದ ಮೇಲೆ, ವಿದ್ಯಾರ್ಥಿಗಳ ಆತ್ಮಹತ್ಯೆಯನ್ನು ತಡೆಯುವ ಸಲಹೆಗಳನ್ನು ಒಳಗೊಂಡ ಸಮಗ್ರ ಮಸೂದೆಯೊಂದು 2022ರಲ್ಲೇ ಸಿದ್ಧವಾದರೂ ಇದುವರೆವಿಗೂ ಅದನ್ನು ವಿಧಾನಸಭೆಯಲ್ಲಿ ಮಂಡಿಸಿಲ್ಲ. ಈ ಕ್ರಮದ ಹಿಂದೆ ಟ್ಯೂಷನ್ ಕೇಂದ್ರಗಳ ಪ್ರಬಲ ಲಾಬಿ ಇದೆ ಎಂಬ ಅನುಮಾನವಿದೆ.

ಕೋಟಾದಲ್ಲಿ ನೋಂದಣಿಯಾಗಿರುವ ಸುಮಾರು 150 ಟ್ಯೂಷನ್ ಕೇಂದ್ರಗಳಿವೆ. 2,500 ಹಾಸ್ಟೆಲ್, ಪಿ.ಜಿ. ಕೇಂದ್ರಗಳು ಮತ್ತು ವಸತಿ ಗೃಹಗಳು ಎರಡು ಲಕ್ಷ ವಿದ್ಯಾರ್ಥಿಗಳಿಗೆ, ತಿಂಗಳಿಗೆ ₹ 7,500ರಿಂದ ₹ 30,000 ಬಾಡಿಗೆಯ ಮೇಲೆ ವಸತಿಯೊದಗಿಸುತ್ತವೆ. ಪ್ರತಿವರ್ಷ 15ರಿಂದ 20 ಸಾವಿರ ವಿದ್ಯಾರ್ಥಿಗಳಿಗೆ ಹೆಚ್ಚುವರಿ ವಸತಿಗಾಗಿ ಕಾಮಗಾರಿ ನಡೆಯುತ್ತಿದೆ. ಪ್ರತಿವರ್ಷ ಸರಾಸರಿ 50 ಲಕ್ಷ ಪುಸ್ತಕಗಳ ಮಾರಾಟದಿಂದ ₹ 40 ಕೋಟಿಯಿಂದ ₹ 50 ಕೋಟಿಯವರೆಗೆ ಆದಾಯವಿದೆ. ಸರಾಸರಿ ₹ 600 ಬೆಲೆಯ 6 ಲಕ್ಷ ಸಮವಸ್ತ್ರಗಳಿಗೆ ಬೇಡಿಕೆಯಿದೆ. ವಿದ್ಯಾರ್ಥಿಗಳಿಗೆ ಬೆಂಬಲ ನೀಡಲು ಪೋಷಕರೂ ಅವರೊಡನೆ ಉಳಿದುಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿರುವುದರಿಂದ ಒಂದು ಕೊಠಡಿಯ ಫ್ಲ್ಯಾಟ್‍ಗಳಿಗೆ ಅತಿ ಹಚ್ಚಿನ ಬೇಡಿಕೆ ಇದೆ. ವಾರ್ಷಿಕ ₹ 5,000 ಕೋಟಿ ಆರ್ಥಿಕತೆಯ ಟ್ಯೂಷನ್ ವ್ಯವಹಾರ ನೇರವಾಗಿ 2 ಲಕ್ಷ ಮತ್ತು ಪರೋಕ್ಷವಾಗಿ 1.5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ.

ಇಂತಹ ಲಾಭದಾಯಕ ವ್ಯವಸ್ಥೆಯನ್ನು ಕಟ್ಟುನಿಟ್ಟಾದ ನಿಯಂತ್ರಣ ಕ್ರಮಗಳಿಗೆ ಒಳಪಡಿಸುವುದರ ಬದಲಿಗೆ ಕಣ್ಣೊರೆಸುವ ಹಲವಾರು ಕ್ರಮಗಳನ್ನು ಸರ್ಕಾರ ಪ್ರಕಟಿಸಿದೆ. ಪರಿಣತರ ಸಲಹೆಗಳನ್ನು ಗಮನಿಸದ ಸರ್ಕಾರ, ಆಗಸ್ಟ್ 28ರಂದು ಸ್ಥಳೀಯ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ, ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿದೆ! ಮುಂದಿನ ಎರಡು ತಿಂಗಳು ಯಾವುದೇ ಟೆಸ್ಟ್ ನಡೆಸದಂತೆ, ಬುಧವಾರ ಮಧ್ಯಾಹ್ನ ಕಡ್ಡಾಯವಾಗಿ ರಜೆ ನೀಡುವಂತೆ ಟ್ಯೂಷನ್ ಕೇಂದ್ರಗಳಿಗೆ ಆದೇಶ ನೀಡಿದೆ.

ಫ್ಯಾನ್‍ಗೆ ನೇಣು ಹಾಕಿಕೊಳ್ಳಲು ಪ್ರಯತ್ನಿಸಿದರೆ ಇಡೀ ಫ್ಯಾನ್ ಕಳಚಿ ಬೀಳುವಂತೆ ಮಾಡುವ ಸ್ಪ್ರಿಂಗ್‍ಗಳನ್ನು ಫ್ಯಾನ್‍ಗಳಿಗೆ ಅಳವಡಿಸುವಂತೆ, ಮಹಡಿಯಿಂದ ಬೀಳುವವರನ್ನು ತಡೆಯಲು ಬಲೆಗಳನ್ನು ಅಳವಡಿಸುವಂತೆ ಎಲ್ಲ ಹಾಸ್ಟೆಲ್, ವಸತಿಗೃಹಗಳಿಗೆ ಸೂಚನೆ ನೀಡಿದೆ.

ಸರ್ಕಾರ ಮತ್ತು ಕೋಚಿಂಗ್ ಕೇಂದ್ರಗಳು ಲಗುಬಗೆಯಿಂದ ಕೈಗೊಳ್ಳುತ್ತಿರುವ ಈ ಯಾವ ಕ್ರಮಗಳಿಂದಲೂ ಆತ್ಮಹತ್ಯೆಗಳ ಸಂಖ್ಯೆ ಗಮನಾರ್ಹವಾಗಿ ಇಳಿಯುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯ. ಆತ್ಮಹತ್ಯೆಯ ಯೋಚನೆಯಲ್ಲಿರುವ ವಿದ್ಯಾರ್ಥಿಗಳು ಅನೇಕ ಸುಳಿವುಗಳನ್ನು ನೀಡುತ್ತಾರೆ. ಮೌನಕ್ಕೆ ಸರಿದು ಯಾರೊಂದಿಗೂ ಬೆರೆಯದಿರುವುದು, ತರಗತಿಗಳಿಂದ ದೂರ ಉಳಿಯುವುದು, ಬದುಕಿನ ನಿರರ್ಥಕತೆ, ಸಾವಿನ ಬಗ್ಗೆ ಮಾತನಾಡುವುದು, ವೇಷಭೂಷಣ, ಆಹಾರ, ಶುಚಿತ್ವದ ಬಗ್ಗೆ ತೀವ್ರ ನಿರಾಸಕ್ತಿಯಂತಹ ಮುನ್ಸೂಚನೆಗಳನ್ನು ಗುರುತಿಸುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಟ್ಯೂಷನ್ ಕೇಂದ್ರಗಳು, ಹಾಸ್ಟೆಲ್, ವಸತಿಗೃಹಗಳ ಸಿಬ್ಬಂದಿಯಲ್ಲಿ ತ್ವರಿತಗತಿಯಲ್ಲಿ ಬೆಳೆಸಿ, ಹಾಗೆ ಗುರುತಿಸಿದ ಮಕ್ಕಳಿಗೆ ಮನೋವೈದ್ಯಕೀಯ ಸೌಲಭ್ಯವನ್ನು ಆದ್ಯತೆಯ ಮೇರೆಗೆ ಒದಗಿಸುವುದು ಈ ಸಮಸ್ಯೆಗೆ ಪರಿಹಾರ ಒದಗಿಸಬಲ್ಲದು ಎಂಬುದು ಪರಿಣತರ ಖಚಿತ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT