ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ | ಬಂಡೆಯಂಥ ಮನಸ್ಸು ಬದಲಾಗುವುದೆಂದು?

Published 24 ಜುಲೈ 2023, 21:58 IST
Last Updated 24 ಜುಲೈ 2023, 21:58 IST
ಅಕ್ಷರ ಗಾತ್ರ

ಹಾಗಾದರೆ, ಇದು ಎಂದಿಗೂ ಬದಲಾಗುವುದೇ ಇಲ್ಲವೇ? ಹೆಣ್ಣಿನ ಕುರಿತಂತೆ ಗಂಡಿನ ಈ ನೋಟ, ನಿಲುವು, ನಡೆ ಎಲ್ಲವೂ ಬದಲಾಗದ ಬಂಡೆಯಷ್ಟು ಶಾಶ್ವತವೇ? ಒಂದೊಮ್ಮೆ ಬಂಡೆಯಾದರೂ ಬದಲಾದೀತು, ಗಂಡಿನ ಈ ನಡೆ– ನುಡಿ ಮಾತ್ರ ಬದಲಾಗದೇನೋ ಎನ್ನುವುದನ್ನು ಮಾತ್ರ ಇತ್ತೀಚಿನ ಪ್ರಕರಣಗಳು ಹೇಳುತ್ತಿಲ್ಲ, ಬದಲಾಗ ಬೇಕಾಗಿಲ್ಲ ಎನ್ನುವ ಗಂಡಿನ ಇರಾದೆಯನ್ನೇ ಇವು ಮರುಸ್ಥಾಪಿಸುತ್ತಿವೆ.

ಇತಿಹಾಸದಿಂದ ಎಳೆಗಳನ್ನು ಆಯ್ದು, ಹೆಣ್ಣಿನ ಇತಿಹಾಸದ, ಗೌರವದ, ಹೋರಾಟದ ಬಟ್ಟೆಯನ್ನು ನೇಯುತ್ತಿದ್ದೇವೆ ಎನ್ನುವ ಹೆಣ್ಣಿನ ನಂಬಿಕೆಯೇ ಹುಸಿ, ಹುಲು ಎನ್ನುವ ನಿರಾಸೆಗೆ, ಜುಗುಪ್ಸೆಗೆ ಇಂಥ ಪ್ರಕರಣಗಳು ನಮ್ಮನ್ನು ತಳ್ಳಿಬಿಡುತ್ತವೆ. ಬಿದ್ದ ವಿಶ್ವಾಸವನ್ನು ಮತ್ತೆ ಕೂಡಿಸಿಕೊಂಡು ನಮ್ಮ ಪ್ರಯತ್ನ ಮುಂದುವರಿಸುವುದು ನಮ್ಮ ಯಾವತ್ತಿನ ಪರಿಯೇ ಆಗಿಬಿಟ್ಟಿದೆ.

ಹೆಣ್ಣುಮಕ್ಕಳ ಏನೆಂಥ ಹೋರಾಟವನ್ನೂ ಈ ಗಂಡಾಳಿಕೆ ಅದೆಷ್ಟು ಸುಲಭವಾಗಿ, ನಾಚಿಕೆ ಎನ್ನುವುದರ ಧಾತುವೇ ಇಲ್ಲದಂತೆ ಹೊಸಕಿಹಾಕಿಬಿಡುತ್ತದೆ! ಕುಸ್ತಿಪಟುಗಳು ನಡೆಸಿದ ಅಸೀಮ ಹೋರಾಟವನ್ನೂ ತನ್ನ ಸೀಮೆಯ ಅಧಿಕಾರದಿಂದ ಬಗ್ಗಿಸಿಯೇ ಬಿಟ್ಟಿತಲ್ಲ, ಅದಕ್ಕೆ ಅಷ್ಟೇ ನಿರ್ಲಜ್ಜೆಯಿಂದ ಹೆಣ್ಣುಮಕ್ಕಳೂ ಕೈಜೋಡಿಸಿ ಬಿಟ್ಟದ್ದನ್ನು ನೋಡಿದ ಮೇಲಂತೂ ನಮ್ಮ ಅವಸ್ಥೆಗೆ ಯಾರನ್ನು ದೂರಬೇಕೆಂದೇ ತೋಚುವುದಿಲ್ಲ. ಪಿ.ಟಿ.ಉಷಾರಂಥ, ನಾವೆಲ್ಲರೂ ನಮ್ಮ ಎದೆಯ ಪದಕವೋ ಎಂಬಂತೆ ತಲೆಯ ಮೇಲೆ ಹೊತ್ತು ಮೆರೆದ ಹೆಣ್ಣುಮಗಳು ಆ ಕುಸ್ತಿಪಟುಗಳನ್ನೇ ‘ಹೆಣ್ಣುಮಕ್ಕಳ ಮರ್ಯಾದೆ ಹರಾಜಿಗೆ ಹಾಕುತ್ತಿದ್ದಾರೆ’ ಎಂದು ಹೇಳುವ ಮಟ್ಟಕ್ಕೆ ಹೋದರು (ಈಕೆಯನ್ನು ಕುರಿತ ಪುಸ್ತಕವೊಂದನ್ನು ನಾನು ಅನುವಾದ ಮಾಡಿದ್ದಕ್ಕಾಗಿ ನಾಚಿಕೆ ಮತ್ತು ವಿಷಾದವಾಗುತ್ತಿದೆ).

ಈಕೆಯನ್ನು ರೂಪಕವಾಗಿಸಿಕೊಂಡು ‘ನಾವು ಹುಡುಗಿಯರೇ ಹೀಗೆ...’ ಎಂದು ಪ್ರತಿಭಾ ನಂದಕುಮಾರ್‌ ಅವರು ಬರೆದ ಕವಿತೆ ಬಲು ಜನಪ್ರಿಯ. ತಾನೇ ಹೆಣೆದುಕೊಂಡ ತೆರಣಿಯ ಹುಳುವಿನ ಬಲೆಯಿಂದ ಹೊರಬರಲಾರದ ಹೆಣ್ಣಿನ ಮನಃಸ್ಥಿತಿಯನ್ನು ಹೇಳುವ ಈ ಕವಿತೆಯ ಇನ್ನೊಂದು ಆಯಾಮವನ್ನು ಉಷಾ ಅವರ ಈ ನಡೆ ಸೂಚಿಸುತ್ತಿದೆ. ಗಂಡಿನಲ್ಲಿ ಇರುವಷ್ಟೇ ದಂಡಿಯಾಗಿ ಹೆಣ್ಣಿನಲ್ಲೂ ಇರುವ ಸ್ವಾರ್ಥ, ದುರಾಸೆ, ಆತ್ಮವಂಚನೆ, ರಾಜಿ ಮನೋಭಾವ ಇಲ್ಲಿ ಕಾಣಿಸುತ್ತಿದೆ. ಆದರೆ, ಹೆಣ್ಣಾದ ಕಾರಣಕ್ಕೇ ಸ್ವತಃ ಎದುರಿಸಿದ ಸವಾಲುಗಳು, ಹಿಂಸೆಗಳನ್ನು ಮರೆಯುವುದು, ಪಕ್ಕಕ್ಕಿಡುವುದು ಅಷ್ಟು ಸುಲಭವಾಗಿಬಿಟ್ಟಿತೇ? ಅಲ್ಲಿಯತನಕ ಬಿಗಿಯಾಗಿದ್ದ ಕುಸ್ತಿಪಟುಗಳ ಹೋರಾಟ ನಿಧಾನವಾಗಿ ಸಡಿಲವಾಗಿದ್ದಕ್ಕೆ ಹೆಣ್ಣುಮಕ್ಕಳ ಇಂಥ ನಡೆ– ನುಡಿಗಳೂ ಕಾರಣ ಎನ್ನುವುದು ನಮಗೊಂದು ಕನ್ನಡಿಯಾಗಬೇಕು.

ಮದುವೆಯ ಆಚೆಗಿನ ಸಂಬಂಧಗಳ ಕುರಿತು ಮಹತ್ವದ ತೀರ್ಪು ಬಂದಾಗಲೂ ಅದನ್ನು ವಿರೋಧಿಸಿದ ಪ್ರಭಾವಶಾಲಿ ಹೆಣ್ಣುಮಕ್ಕಳ ಪ್ರತಿಕ್ರಿಯೆಗಳನ್ನೂ ನಾವು ಇದರೊಂದಿಗೆ ಇಟ್ಟುಕೊಳ್ಳಬೇಕು. ಚೌಕಟ್ಟಿನೊಳಗೆ ಇರುವುದರ ಅನುಕೂಲ ಮತ್ತು ಲಾಭಗಳನ್ನೇ ಯಾವಾಗಲೂ ಗುರಿಯಾಗಿ ಇಟ್ಟುಕೊಂಡರೆ, ಪಲ್ಲಟಗಳು ಎಂದು ನಾವು ತಿಳಿದುಕೊಂಡಿರುವ ಸಂಗತಿಗಳು ಬಲು ಬೇಗ ನೀರ ಮೇಲಿನ ಗುಳ್ಳೆಯಂತೆ ಕರಗಿ ನಮ್ಮನ್ನು ಇನ್ನೂ ಕಂಗಾಲುಗೊಳಿಸುವುದೇ ಸೈ.

ಮಣಿಪುರದಲ್ಲಿ ನಡೆಯುತ್ತಿರುವ ಹೆಣ್ಣುಗಳ ಮೇಲಿನ ಕ್ರೌರ್ಯವು ದಶಕದ ಹಿಂದೆ ಶರ್ಮಿಳಾ ಇರೋಮ್ ನಡೆಸಿದ ಐತಿಹಾಸಿಕ ಹೋರಾಟವನ್ನು ಅಣಕಿಸುವಂತೆ ಕಾಣಿಸುತ್ತಿದೆ. ಅಷ್ಟೇ ಅಲ್ಲ, ಹಗಲಿರುಳು ದುಡಿದರೂ, ಬಲುಕಾಲ ಕಳೆದರೂ ಹೆಣ್ಣನ್ನು ಹರಕೆಯ ಕುರಿಯಾಗಿಸುವ ಗಂಡಿನ ಪಶುತ್ವ ಬದಲಾಗುವುದಿಲ್ಲ ಎನ್ನುವುದನ್ನು ಹೇಳುತ್ತಿದೆ. ಗಂಡಿನ ಇಂತಹ ಪಶುತ್ವವನ್ನು ದುರ್ಬಲ ಪಶುತ್ವ ಎಂದೇ ಕರೆಯಬೇಕು. ಇನ್ನೊಂದು ಜೀವದ ಮೇಲೆ, ಅದರ ಒಪ್ಪಿಗೆ ಇಲ್ಲದೆ ನಡೆಸುವ ಆಕ್ರಮಣವು ಎಂದೂ ‘ಶಕ್ತಿ’ ಆಗಲಾರದು. ಗಂಡು ತನ್ನ ದೇಹ, ಮನಸ್ಸಿನ ಮೇಲೆ ಸಾಧಿಸಲಾಗದ ನಿಯಂತ್ರಣವನ್ನು ‘ಪಶುತ್ವ’ ಎಂದು ಮಾತ್ರ ಕರೆಯಬಹುದು. ಇದನ್ನು ತನ್ನ ಗೆಲುವಿನ ಪತಾಕೆಯಂತೆ, ಶಕ್ತಿ ಪ್ರದರ್ಶನದಂತೆ ತೋರಿಸುವ ಅನಾಗರಿಕತೆಯನ್ನು ನಿಯಂತ್ರಿಸುವ ಪ್ರಯತ್ನಗಳೆಲ್ಲ ಯಾಕೆ ಸೋಲುತ್ತಿವೆ?

ಇಷ್ಟೆಲ್ಲ ಆದಮೇಲೂ ‘ಅವನು’ ಮೀಸೆ ತಿರುವಿಕೊಂಡು ಮೆರೆಯುತ್ತಾನೆ, ‘ಅವಳು’ ಅಕಾರಣ ಪಾಪಪ್ರಜ್ಞೆಯಲ್ಲಿ ಮುದುಡಿ, ನರಳಿ ಸಾಯುತ್ತಾಳೆ. ನಾಯಕರು ಅವಳಿಗೆ ‘ಪರಿಹಾರದ ಚೆಕ್’ ಕೊಡುವ ಫೋಟೊ ಪತ್ರಿಕೆಯಲ್ಲಿ ಬರುತ್ತದೆ. ಅದರಲ್ಲೂ ಅವರು ಸಾಧಕರ ನಗೆಯನ್ನು ಬೀರುತ್ತಿರುತ್ತಾರೆ! ಎಸ್.ಮಾಲತಿ ಅವರ ಕವಿತೆಯೊಂದರ ನೆನಪಾಗುತ್ತದೆ, ‘ಗಂಡಿಗೆ ಆತ್ಮವಿದೆಯೇ?’

ಈ ಪ್ರಶ್ನೆಯನ್ನು ತಿರುಗಿಸಿ ನಮಗೂ ಹಾಕಿಕೊಳ್ಳಬೇಕಾದ ತುರ್ತಿನಲ್ಲಿ ನಾವಿದ್ದೇವೆ. ನಮ್ಮ ಆತ್ಮಗಳನ್ನು ಎಚ್ಚರಿಸಿಕೊಂಡು ನಾವು ಅಖಂಡವಾಗಿ ಒಗ್ಗೂಡದ ವಿನಾ ನಮ್ಮ ಹೋರಾಟದಲ್ಲಿ ನಾವು ಗೆಲ್ಲುವುದಿರಲಿ, ಮುಂದುವರಿಯುವುದೂ ಕಷ್ಟ. ಹೆಣ್ಣುಮಕ್ಕಳ ಹೋರಾಟದ ಹಲವು ಮಾದರಿಗಳು, ಹಲವು ದಾರಿಗಳು ಸಂಗಮವಾಗುವುದು ಮಾತ್ರ ನಮ್ಮ ಹೋರಾಟದ ಹಾದಿಯನ್ನು ಬಲಪಡಿಸಬಲ್ಲದು. ಗಂಡಿನ ವಿಕಾರವನ್ನು ನಾವೂ ಕಾಣುತ್ತಲೇ ಅವರಿಗೂ ಕಾಣಿಸುತ್ತಿರುವ ನಮ್ಮ ಯತ್ನಗಳ ಹಿನ್ನಡೆಯನ್ನು ದಾಟಬೇಕಾದರೆ, ನಮ್ಮಲ್ಲಿರುವ ಅಸ್ಪಷ್ಟತೆಗಳನ್ನು, ಮಿತಿಗಳನ್ನು ನಾವು ದಾಟಿಕೊಳ್ಳಬೇಕು. ರಾಜಕೀಯದಲ್ಲಾಗಲೀ ನಮ್ಮ ಸಾಮಾಜಿಕ ಸಂಸ್ಥೆಗಳಲ್ಲಾಗಲೀ ಮೇಲ್ನೋಟಕ್ಕೆ ಎಲ್ಲವೂ ನಮ್ಮ ಪರವಾಗಿಯೇ ಇವೆ. ಆದರೂ ದಿನೇದಿನೇ ನಮ್ಮ ಸೋಲಿನ ಪ್ರಮಾಣವೂ ಹೆಚ್ಚಾಗುತ್ತಿದೆಯೆಂದರೆ, ಅದಕ್ಕೆ ನಮ್ಮಲ್ಲಿರುವ ಒಡಕುಗಳೂ ಕಾರಣ.

ಯಾವುದನ್ನು ಸಿಮೊನ್ ಬುವಾ ‘ಸಂಘಟನೆಯ ಕೊರತೆ’ ಎಂದು ಬಲು ಹಿಂದೆಯೇ ಕಂಡುಕೊಂಡು ನಮ್ಮನ್ನು ಎಚ್ಚರಿಸುವ ಪ್ರಯತ್ನ ಮಾಡಿದರೋ ಅದು ವಿರುದ್ಧ ಪರಿಣಾಮ ಬೀರಿತೇ ಎನ್ನುವ ಅನುಮಾನವೂ ಕೆಲವೊಮ್ಮೆ ನಮ್ಮನ್ನು ಕಾಡುತ್ತದೆ. ಅವಳ ಈ ಮಾತು ಗಂಡನ್ನೇ ಹೆಚ್ಚಾಗಿ ಎಚ್ಚರಿಸಿ, ಅವರು ತಮ್ಮ ಹತ್ಯಾರಗಳನ್ನು ಇನ್ನೂ ಚೂಪಾಗಿ ಮಸೆದಿಟ್ಟುಕೊಳ್ಳುವಂತೆ ಮಾಡಿಬಿಟ್ಟಿತೇನೋ ಎಂದು ಸಿನಿಕತನದ ಗಳಿಗೆಯಲ್ಲೇ ಇರಬಹುದು, ದಾರುಣ ಸತ್ಯದಂತೆ ನಮ್ಮೆದುರು ರಾಚುತ್ತದೆ.

ಹೆಣ್ಣುಕುಲದ ಒಗ್ಗಟ್ಟಿನ ಕೊರತೆಯೇ ಅವರಿಗೆ ಅನಾಯಾಸವಾಗಿ ಬೆಂಬಲದಂತೆ ಕೆಲಸ ಮಾಡುತ್ತಿದೆ. ಮಾತ್ರವಲ್ಲ, ಯಾವ ‘ಸಹೋದರಿತ್ವ’ (ಸಿಸ್ಟರ್‌ಹುಡ್) ತತ್ವವು ನಮ್ಮ ಮೂಲಮಂತ್ರವಾಗಿದ್ದರೆ, ಗಂಡಾಳಿಕೆಯ ಮೇಲೆ ಇನ್ನೂ ಹೆಚ್ಚಿನ ನೈತಿಕ ಹಕ್ಕೊತ್ತಾಯವನ್ನು ತರಬಹುದಿತ್ತೋ ಆ ನೈತಿಕ ಹಕ್ಕೊತ್ತಾಯವನ್ನು ಗಂಡಾಳಿಕೆ ಇನ್ನೂ ಎದುರಿಸುತ್ತಿಲ್ಲ, ಅವರ ವ್ಯಕ್ತಿತ್ವದ ಸಂವೇದನೆಯಲ್ಲಿ ಅದು ಇನ್ನೂ ಸೇರಿಲ್ಲ ಎನ್ನುವ ಕಟುಸತ್ಯವನ್ನು ನಾವು ಅರ್ಥ ಮಾಡಿಕೊಳ್ಳಬೇಕು.

ಇದರ ಜೊತೆಗೇ ಕಾನೂನಿನ ‘ಭಯ’ ಇನ್ನೂ ಹೆಚ್ಚಾಗಬೇಕು, ಅದರ ಕುಣಿಕೆಗಳು ಮತ್ತೂ ‘ಬಿಗಿ’ಯಾಗಬೇಕು. ಇದನ್ನು ಅಮಾನವೀಯ ಎಂದು ಯಾರೂ ತಿಳಿಯಬೇಕಾಗಿಲ್ಲ. ಗಂಡು ಮತ್ತು ಹೆಣ್ಣು ಇಬ್ಬರೂ ಸಮಾನ ಆದರೆ ಭಿನ್ನ ಎನ್ನುವ ಮೂಲ ಸತ್ಯ ಗಂಡಸರ ತಲೆಯಲ್ಲಿ ಮಾತ್ರವಲ್ಲ ಮನಸ್ಸಿನಲ್ಲೂ ಬೇರೂರುವ ತನಕ ಭಯವಾದರೂ ಅವರನ್ನು ಪಶುತ್ವದಿಂದ ಆಚೆಗೆ ತರಬೇಕು. ಚಾಪೆ ಮತ್ತು ರಂಗೋಲಿಯ ಕೆಳಗೆ ಅಪರಾಧಿಗಳು ಪಾರಾಗುವ ದಾರಿಗಳು ಬಂದ್‌ ಆಗಬೇಕು.

ಈ ಎಲ್ಲವುಗಳಷ್ಟೇ ಮುಖ್ಯವಾಗಿ ನಮ್ಮ ಶಿಕ್ಷಣವು ‘ಲಿಂಗ ಸಂವೇದನೆ’ಯನ್ನು ಪಠ್ಯಗಳೊಳಗೆ, ಅದರಾಚೆಗೆ ಎಳವೆಯಿಂದಲೇ ಕಲಿಸುವುದನ್ನು ತನ್ನ ಮೂಲ ಆದ್ಯತೆಗಳಲ್ಲಿ ಒಂದಾಗಿಸಿಕೊಳ್ಳಬೇಕು. ಬಸವನು ಹೊಲಕ್ಕೆ ಹೋಗುವುದು, ಕಮಲಳು ತಾಯಿಗೆ ಅಡುಗೆ ಮನೆಯಲ್ಲಿ ಸಹಾಯ ಮಾಡುವುದೂ ಸಮ ಮಹತ್ವದ, ಶ್ರಮ ವಿಭಜನೆಯ ಸಂಗತಿಗಳು ಎನ್ನುವುದು ಬಾಲ್ಯದ ಹಸಿಮಣ್ಣಿನ ಬುದ್ಧಿ ಭಾವಗಳಲ್ಲಿ ಅಚ್ಚಳಿಯದೇ ಉಳಿದು ಅವರ ಆಲೋಚನಾ ಕ್ರಮವನ್ನು, ವ್ಯಕ್ತಿತ್ವವನ್ನು ರೂಪಿಸುವಂತೆ ಆಗಬೇಕು.

ಹಾಡಿದ್ದನ್ನೇ ಹಾಡುತ್ತಲೇ ಇರಬೇಕು, ಬಂಡೆಯಂಥ ಮನಸ್ಸುಗಳು ಬದಲಾಗುವವರೆಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT