ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಗೂರು ರಾಮಚಂದ್ರಪ್ಪ ಲೇಖನ: ಭಾರತಕ್ಕೆ ಬೇಕು ‘ವಿವೇಕ’ ಪರಂಪರೆ

ಬಿರುಕುಗಳನ್ನು ಬೆಸೆಯಲು ಬೇಕಾದ ಅಂಶಗಳು ವಿವೇಕಾನಂದರ ತಾತ್ವಿಕ ಪರಂಪರೆಯಲ್ಲಿವೆ
Last Updated 10 ಜನವರಿ 2023, 19:31 IST
ಅಕ್ಷರ ಗಾತ್ರ

ಸ್ವಾಮಿ ವಿವೇಕಾನಂದರ ಜನ್ಮದಿನದ (ಜನವರಿ 12) ಹಿನ್ನೆಲೆಯಲ್ಲಿ ಅವರ ವಿಚಾರಧಾರೆಯ ತಾತ್ವಿಕ ನೆಲೆಗಳನ್ನು ಪ್ರಸ್ತುತಗೊಳಿಸಿಕೊಂಡು ಸಮಕಾಲೀನ ಸಂದರ್ಭದ ಧಾರ್ಮಿಕ ಬಿಕ್ಕಟ್ಟುಗಳನ್ನು ಪರಿಶೀಲಿಸುವುದು ಅಗತ್ಯವೆಂದು ನಾನು ಭಾವಿಸುತ್ತೇನೆ. ಯಾಕೆಂದರೆ ನಮ್ಮ ದೇಶದಲ್ಲೀಗ ಧರ್ಮದ ಹೆಸರಿನಲ್ಲಿ ದ್ವೇಷ ಸಾಧಿಸುವ ಪ್ರವೃತ್ತಿಯು ದೊಡ್ಡ ಬಿಕ್ಕಟ್ಟು ಮತ್ತು ಬಿರುಕುಗಳನ್ನು ಸೃಷ್ಟಿ ಮಾಡಿದೆ. ಇಂಥ ಅನಾರೋಗ್ಯಕರ ಬಿರುಕುಗಳನ್ನು ಬೆಸೆಯಲು ಬೇಕಾದ ಅನೇಕ ಅಂಶಗಳು ವಿವೇಕಾನಂದರ ತಾತ್ವಿಕ ಪರಂಪರೆಯಲ್ಲಿವೆ. ಭಾರತವನ್ನು ಬೆಸೆಯುವ ಉದ್ದೇಶ ಹೊಂದಿದ ರಾಹುಲ್ ಗಾಂಧಿಯವರ ಪಾದಯಾತ್ರೆಯನ್ನೂ ಒಳಗೊಂಡಂತೆ ಪ್ರಗತಿಪರ ಭಾರತೀಯ ಮನಸ್ಸುಗಳು ಈ ‘ವಿವೇಕ ಪರಂಪರೆ’ಯನ್ನು ಜನರ ಮುಂದಿಡುವ ಅಗತ್ಯವಿದೆ. ಇದು ಧಾರ್ಮಿಕ ಮೂಲಭೂತವಾದಿಗಳಿಗೆ ಉತ್ತರವಾಗಲಿದೆ.

ನಿಜ, ವಿವೇಕಾನಂದರು ಹಿಂದೂ ಧರ್ಮನಿಷ್ಠ ಧಾರ್ಮಿಕ ನೇತಾರರು. ಅಷ್ಟೇ ಅಲ್ಲ, ಹಿಂದೂ ಧರ್ಮದ ಪ್ರಖರ ಒಳವಿಮರ್ಶಕರು. ಸರ್ವಧರ್ಮ ಮಾನ್ಯವಾದ ಮಾನವೀಯ ಮರು ವ್ಯಾಖ್ಯಾನಕಾರರು. ‘ದೀನ ದೇವೋಭವ, ದರಿದ್ರ ದೇವೋಭವ’ ಎಂಬ ಹೃದಯಸ್ಥ ನುಡಿಗಳೊಂದಿಗೆ ಅನ್ನಮೂಲ ಅಧ್ಯಾತ್ಮವನ್ನು ಪ್ರತಿಪಾದಿಸಿದವರು. ‘ಪರರ ಧಾರ್ಮಿಕ ನಂಬಿಕೆಗಳನ್ನು ಸಹಾನುಭೂತಿಯಿಂದ ನೋಡುವುದೇ ಈಗ ಅತ್ಯವಶ್ಯಕವಾಗಿ ಬೇಕಾಗಿರುವ ಪರಮತ ಸಹಿಷ್ಣುತೆಯ ಪ್ರಥಮ ಹೆಜ್ಜೆ’ ಎಂದು ಪ್ರತಿಪಾದಿಸಿದವರು (ನೋಡಿ: ಕೋ.ಚೆನ್ನಬಸಪ್ಪನವರ ‘ಕಡಲ ತಡಿಯಿಂದ ಹೈಮಾಚಲದಡಿಗೆ’). ಇದು ಭಾರತವನ್ನು ಜೋಡಿಸುವ ವಿವೇಕ ಪರಂಪರೆ. ಬುದ್ಧ, ಬಸವಣ್ಣ, ನಾರಾಯಣ ಗುರು, ಗಾಂಧಿ, ಭಗತ್ ಸಿಂಗ್, ಬೋಸ್, ಅಂಬೇಡ್ಕರ್, ಆಜಾದ್, ಸಾವಿತ್ರಿಬಾಯಿ ಫುಲೆ, ಫಾತಿಮಾ ಶೇಖ್, ಕಬೀರ್, ಸೂಫಿ ಸಂತರು, ಪಂಪ, ಕುವೆಂಪು ಅವರಂತಹ ಅನೇಕ ಸಾಧಕರು ತಮ್ಮದೇ ನೆಲೆ–ನಿಲುವುಗಳಿಂದ ‘ವಿವೇಕ ಪರಂಪರೆ’ಯ ಪ್ರಮುಖರಾಗಿದ್ದಾರೆ. ರಾಹುಲ್ ಗಾಂಧಿಯವರ ಪಾದಯಾತ್ರೆಯಲ್ಲಿ ಇಂಥವರ ಆಶಯ ಅಂತರ್ಗತವಾಗಿತ್ತೆ ಎಂಬ ಪ್ರಶ್ನೆಯೂ ಪ್ರಮುಖವಾಗುತ್ತದೆ.

ಸದ್ಯದ ಸನ್ನಿವೇಶದಲ್ಲಿ ಭಾರತವನ್ನು ಜೋಡಿಸುವ ಆಶಯಕ್ಕೆ ಧರ್ಮ ನಿರಾಕರಣೆ ಮತ್ತು ಸ್ವೀಕರಣೆಯ ಪ್ರಶ್ನೆ ಮುಖ್ಯವಲ್ಲ. ಒಡೆದಾಳುವ ಧಾರ್ಮಿಕ ಮೂಲಭೂತವಾದಿ ಪ್ರವೃತ್ತಿಯ ಪ್ರತಿರೋಧವೇ ಮುಖ್ಯ. ಜನಮಾನಸವನ್ನು ಮುಟ್ಟುವುದು ಮುಖ್ಯ. ಆಗ ನಮ್ಮ ಪ್ರತಿರೋಧ ಇಡಿಯಾಗಿ ಒಂದು ಧರ್ಮದ ಎಲ್ಲರ ವಿರುದ್ಧ ಇರುವುದಿಲ್ಲ. ಯಾಕೆಂದರೆ, ಹಿಂದೂಗಳೆಲ್ಲರೂ ಮೂಲಭೂತವಾದಿಗಳಲ್ಲ, ಮುಸ್ಲಿಮರೆಲ್ಲರೂ ಭಯೋತ್ಪಾದಕರಲ್ಲ, ಕ್ರೈಸ್ತರೆಲ್ಲರೂ ಕರ್ಮಠರಲ್ಲ. ಈಗ ಮೂಲಭೂತವಾದ, ಭಯೋತ್ಪಾದನೆ, ಕರ್ಮಠತೆಗಳು ವಿವಿಧ ಪ್ರಮಾಣ ಮತ್ತು ಸ್ವರೂಪದಲ್ಲಿ ಸರ್ವ ‘ಸಾಂಸ್ಥಿಕ’ ಧರ್ಮಗಳ ‘ಸಣ್ಣ ಸಂಖ್ಯಾತರ’ ಸಾಧನಗಳಾಗುತ್ತಿವೆ. ಕೆಲವರಿಗೆ ಬಂದೂಕವೇ ಬಾಯಿ; ಇನ್ನು ಕೆಲವರಿಗೆ ಬಾಯಿಯೇ ಬಂದೂಕ; ಮತ್ತೆ ಕೆಲವರಿಗೆ ಕರ್ಮಠತೆಯೇ ಕನ್ನಡಕ. ಆದ್ದರಿಂದ ‘ಸಣ್ಣ ಸಂಖ್ಯಾತರ’ ಕಾರಣಕ್ಕಾಗಿ ಇಡೀ ಧರ್ಮದವರನ್ನು ದೂಷಿಸಿದರೆ ಭಾರತೀಯ ಮನಸ್ಸುಗಳನ್ನು ಬೆಸೆಯಲಾಗದು. ಈ ದೃಷ್ಟಿಯಿಂದ ಹಿಂದೂ ಧರ್ಮದ ಸಂದರ್ಭದಲ್ಲಿ ವಿವೇಕಾನಂದರು ಹೇಳಿದ ಈ ಮಾತುಗಳು ಎಲ್ಲ ಧರ್ಮಗಳಿಗೂ ಅನ್ವಯ ವಾಗುತ್ತವೆ: ‘ತಪ್ಪು ಹಿಂದೂ ಧರ್ಮದ್ದಲ್ಲ, ಅಲ್ಲಿರುವ ಸಂಪ್ರದಾಯ ಶರಣರದು, ಪುರೋಹಿತರದು’ (ವಿವೇಕಾನಂದರ ಕೃತಿ ಶ್ರೇಣಿ ಸಂಪುಟ- 6). ಸಂಪುಟ 5ರಲ್ಲಿ ವಿವೇಕಾನಂದರು ಧರ್ಮವನ್ನು ವ್ಯಾಖ್ಯಾನಿ
ಸಿದ್ದು ಹೀಗೆ: ‘ಧರ್ಮವು ದೇವಸ್ಥಾನ ಕಟ್ಟುವುದರಲ್ಲಿ ಇಲ್ಲ ಅಥವಾ ಸಾಮಾಜಿಕ ಪೂಜೆಗೆ ಹೋಗುವುದರಲ್ಲಿಯೂ ಇಲ್ಲ. ಅದು ಗ್ರಂಥದಲ್ಲಿಲ್ಲ, ಮಾತಿನಲ್ಲಿಯೂ ಇಲ್ಲ. ಉಪವಾಸದಲ್ಲೂ ಇಲ್ಲ, ಸಂಸ್ಥೆಯಲ್ಲಿಯೂ ಇಲ್ಲ. ಧರ್ಮವೆಂದರೆ ಸಾಕ್ಷಾತ್ಕಾರ’- ಇಲ್ಲಿ ವಿವೇಕಾನಂದರು ಧರ್ಮದ ಸ್ಥಾವರತ್ವವನ್ನು ವಿಮರ್ಶೆಗೆ ಒಡ್ಡಿದ್ದಾರೆ.

ಇಲ್ಲಿ ಬಸವಣ್ಣನವರು ದೇಗುಲವನ್ನು ದೇಹಕ್ಕೆ ಸ್ಥಳಾಂತರಿಸಿ ‘ದೇಹವೇ ದೇಗುಲ’ ಎಂದದ್ದು ಮತ್ತು ಕುವೆಂಪು ಅವರು ತಮ್ಮ ‘ಜಲಗಾರ’ ನಾಟಕದಲ್ಲಿ ದೇವರನ್ನು ಶ್ರಮಿಕವರ್ಗದ ಹೃದಯವಾಗಿ ಸಿದ್ದು ಉಲ್ಲೇಖನೀಯ. ಈ ಎಲ್ಲರ ಆದರ್ಶಗಳೂ ಅದ್ವಿತೀಯವಾಗಿವೆ. ಆದರೆ ವಾಸ್ತವದಲ್ಲಿ ಭಾರತದ ಯಾವ ಧರ್ಮಗಳೂ ಸ್ಥಾವರಗಳನ್ನು ಬಿಟ್ಟಿಲ್ಲ. ಇದರ ಅರಿವು ವಿವೇಕಾನಂದರಿಗೆ ಇತ್ತು. ಸ್ಥಾವರಗಳನ್ನು ದಾಟಬೇಕೆಂದು ಆಶಿಸಿದರೂ ಅದು ಅಷ್ಟು ಸುಲಭವಲ್ಲ ಎಂದು ಅವರಿಗೆ ಗೊತ್ತಿತ್ತು. ಹೀಗಾಗಿ, ಮುಂದೊಮ್ಮೆ ‘ಮಾನವ ವರ್ಗವನ್ನು ಎಲ್ಲಿ ವೇದಗಳು, ಬೈಬಲ್, ಕುರಾನ್ ಇಲ್ಲವೊ ಅಲ್ಲಿಗೆ ಕರೆದೊಯ್ಯಬೇಕು. ಆದರೂ ವೇದ, ಬೈಬಲ್, ಕುರಾನ್‍ಗಳ ಐಕ್ಯತೆಯಿಂದ ಇದನ್ನು ಸಾಧಿಸಬೇಕಾಗಿದೆ. ...ನಮ್ಮ ಮಾತೃಭೂಮಿಯಲ್ಲಿ ಹಿಂದೂ ಮತ್ತು ಮುಸಲ್ಮಾನ ಧರ್ಮಗಳ ಮಿಲನವಾಗಬೇಕು... ಇದೊಂದೇ ನಮ್ಮ ಪುರೋಗಮನಕ್ಕೆ ಹಾದಿ’ ಎಂದು ಆಶಿಸುತ್ತಾರೆ (ವಿವೇಕಾನಂದರ ಕೃತಿ ಶ್ರೇಣಿ ಸಂಪುಟ- 7). ಇಲ್ಲಿ ಧರ್ಮಗಳು ಮಿಲನವಾಗುವುದೆಂದರೆ ತಂತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುವುದಲ್ಲ, ಸ್ನೇಹ ಸಮ್ಮಿಲನದಿಂದ ಭಾವಬಂಧುತ್ವ ಸಾಧಿಸುವುದು.

ರಾಹುಲ್ ಗಾಂಧಿಯವರ ‘ಭಾರತ್ ಜೋಡೊ’ ಪಾದಯಾತ್ರೆ ಕೂಡ ಧರ್ಮ, ದೇವರುಗಳ ಅಸ್ತಿತ್ವವನ್ನು ಒಪ್ಪುತ್ತಲೇ ದ್ವೇಷ ಬಿತ್ತಿ ದೇಶವನ್ನು ಒಡೆಯುವ ಶಕ್ತಿಗಳ ವಿರುದ್ಧವಾಗಿದೆ. ಆದರೆ ದ್ವೇಷ ಬಿತ್ತುವ ಧರ್ಮ ಧುರೀಣರಿಗಿಂತ ರಾಜಕೀಯ ಪಕ್ಷ ಮತ್ತು ಪರಿವಾರವನ್ನು ವಿರೋಧಿಸುವ ಮಾತುಗಳೇ ಮುನ್ನೆಲೆಗೆ ಬಂದು ‘ಭಾರತ್ ಜೋಡೊ’ಗೆ ರಾಜಕೀಯ ಆಯಾಮವೂ ಲಭ್ಯವಾಗಿದೆ. ರಾಜಕೀಯ ಶಕ್ತಿ ಕೇಂದ್ರಗಳು ಧರ್ಮದ ದುರುಪಯೋಗ ಮಾಡಿಕೊಳ್ಳುತ್ತಿರುವುದರಿಂದ ಪಾದಯಾತ್ರೆಗೆ ಒದಗಿರುವ ರಾಜಕೀಯ ಆಯಾಮವನ್ನು ಪೂರ್ಣ ತಪ್ಪೆಂದು ಹೇಳಲಾಗದು. ಆದರೆ ಜನಮಾನಸದಲ್ಲಿ ಧಾರ್ಮಿಕ ಮೂಲಭೂತವಾದಕ್ಕೆ ಪ್ರತಿರೋಧವನ್ನು ಬಿತ್ತಿ ಬೆಳೆಯಲು ಭಾರತದ ‘ವಿವೇಕ ಪರಂಪರೆ’ ಬಹುಮುಖ್ಯ ಎಂಬುದನ್ನು ಮರೆಯಬಾರದು.

ಹಾಗೆ ನೋಡಿದರೆ ಪಾದಯಾತ್ರೆಯ ವೇಳೆ ರಾಹುಲ್ ಅವರು ‘ಬಹುಪಾಲು’ ಉಚಿತ ಮಾತುಗಳನ್ನೇ ಆಡಿದ್ದಾರೆ. ಸಾಂದರ್ಭಿಕವಾಗಿ ಒಮ್ಮೊಮ್ಮೆ ಪಾದಯಾತ್ರೆಯ ಮೂಲ ಆಶಯದಾಚೆಯ ಮಾತುಗಳು ಬಂದಿದ್ದರೂ ಅವರಿಗೆ ಕೇಂದ್ರ ಆಶಯದ ಸ್ಪಷ್ಟತೆಯಿದೆ. ಇದಕ್ಕೆ ರಾಹುಲ್ ಅವರು ನನಗೆ ಬರೆದ ಒಂದು ಪತ್ರ ಸಾಕ್ಷಿಯಾಗಿದೆ.

ಹೌದು, ಕೆಲವು ದಿನಗಳ ಹಿಂದೆ ರಾಹುಲ್ ಗಾಂಧಿ ಅವರ ಕಚೇರಿಯಿಂದ ನನಗೊಂದು ಅಚ್ಚರಿಯ ಕರೆ ಬಂತು. ಕರೆ ಮಾಡಿದವರು ‘ರಾಹುಲ್ ಗಾಂಧಿಯವರು ನಿಮಗೊಂದು ಪತ್ರ ಕಳಿಸಬೇಕೆಂದಿದ್ದಾರೆ. ನಿಮ್ಮ ಇ-ಮೇಲ್ ಐ.ಡಿ. ಬೇಕು’ ಎಂದರು. ತಿಳಿಸಿದೆ. ಎರಡು– ಮೂರು ದಿನದಲ್ಲಿ ರಾಹುಲ್ ಅವರ ಪತ್ರ ಬಂತು. ಅದರಲ್ಲಿ ಅವರು ‘ಭಾರತ್ ಜೋಡೊ’ ಪಾದಯಾತ್ರೆಯ ಆಶಯವನ್ನು ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದರು. ನನ್ನನ್ನು ಪಾದಯಾತ್ರೆಗೊಮ್ಮೆ ಬರಲು ಆಹ್ವಾನಿಸಿದ್ದರು; ಬರಲಾಗದಿದ್ದರೆ ಪಾದಯಾತ್ರೆಯ ಆಶಯದೊಂದಿಗೆ ಮಾನಸಿಕವಾಗಿ ಭಾರತಯಾತ್ರಿಯಾಗಿ ಬೆಂಬಲಿಸಲು ಕೇಳಿದ್ದರು. ಬಹುತ್ವ ಭಾರತದ ಅಗತ್ಯವನ್ನು ವಿವರಿಸುತ್ತ ‘ನಾವು ನಮ್ಮ ನಮ್ಮ ಅಭಿಪ್ರಾಯವನ್ನು ಒಪ್ಪುವ ಅಥವಾ ಒಪ್ಪದಿರುವ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಸಂವಾದಿಸೋಣ’ ಎಂದು ಅವರು ಪ್ರಜಾಪ್ರಭುತ್ವ ಬದ್ಧ ಆಶಯವನ್ನು ಅಭಿವ್ಯಕ್ತಿಸಿದ್ದರು (ಈ ಮಾದರಿಯ ಪತ್ರವನ್ನು ದೇಶದ ಅನೇಕರಿಗೆ ಬರೆದಿರಬಹುದು).

3500ಕ್ಕೂ ಹೆಚ್ಚು ಕಿಲೊಮೀಟರ್ ನಡಿಗೆ ಸಾಮಾನ್ಯವಾದುದಲ್ಲ, ಭಾರತದ ಭಾವ ಬೆಸುಗೆಯ ಸದುದ್ದೇಶದಿಂದ ಪಾದಯಾತ್ರೆ ಮಾಡುವ ಯಾರನ್ನೇ ಆಗಲಿ ಮನಸಾರೆ ಬೆಂಬಲಿಸುವುದು ದೇಶಬದ್ಧ ನೈತಿಕ ಜವಾಬ್ದಾರಿಯೆಂದು ನಾನು ಭಾವಿಸುತ್ತೇನೆ. ಆದರೆ ಪಾದಯಾತ್ರೆಗೆ ಕೊಡುವ ಬೆಂಬಲವು ಅವರ ಪಕ್ಷಕ್ಕೆ ನೀಡುವ ಬೆಂಬಲವಾಗಬೇಕಿಲ್ಲ.

ವಿವೇಕಾನಂದರ ಸ್ಮಾರಕವಿರುವ ಕನ್ಯಾಕುಮಾರಿಯಿಂದ ಆರಂಭಿಸಿ ಗಾಂಧೀಜಿ ಹುತಾತ್ಮರಾದ ದಿನದಂದು ಕಾಶ್ಮೀರದಲ್ಲಿ ಮುಕ್ತಾಯವಾಗುವ ಈ ಪಾದಯಾತ್ರೆಗೆ ಭೌಗೋಳಿಕ ಮಹತ್ವ ಮಾತ್ರವಲ್ಲದೆ, ಸೌಹಾರ್ದದ ಸಾಂಕೇತಿಕ ಮಹತ್ವವೂ ಲಭ್ಯವಾಗುತ್ತದೆ. ಈ ಸಾಂಕೇತಿಕತೆಯು ಜನಮನ ಸಂಚಲನದ ಜೊತೆಗೆ ಕಾಂಗ್ರೆಸ್ಸಿಗರ ಸಿದ್ಧಾಂತದಲ್ಲೂ ಸಾಕಾರಗೊಂಡರೆ ಪಾದಯಾತ್ರೆ ಸಾರ್ಥಕವಾಗುತ್ತದೆ. ಪಾದಯಾತ್ರೆಯ ನಂತರವೂ ‘ವಿವೇಕ ಪರಂಪರೆ’ ದೇಶವ್ಯಾಪಿಯಾಗಬೇಕು. ಪ್ರಗತಿಪರ ಪರಂಪರೆಯ ಪ್ರತೀಕವಾದ ಸಾಧಕ ರನ್ನು ಪ್ರತಿಗಾಮಿಗಳಿಂದ ವಿಮೋಚನೆಗೊಳಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT