ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಬ್ರೆಕ್ಸಿಟ್, ಕೊರೊನಾ: ಇಕ್ಕಟ್ಟಿನಲ್ಲಿ ಬ್ರಿಟನ್

ಪ್ರಧಾನಿ ಬೋರಿಸ್‌ ಜಾನ್ಸನ್‌ ಪಾಲಿಗೆ ಇವೆರಡೂ ಸತ್ವಪರೀಕ್ಷೆಯ ಸಂಗತಿಗಳೇ ಆಗಿವೆ
Last Updated 26 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ

‘ಕೋವಿಡ್–19 ಸಾಂಕ್ರಾಮಿಕ’ ಹಾಗೂ ‘ಬ್ರೆಕ್ಸಿಟ್ ವಿಚಾರ ವಾಗಿ ಐರೋಪ್ಯ ಒಕ್ಕೂಟದ ಜೊತೆಗಿನ ಮಾತುಕತೆ’ ಎಂಬ ಎರಡು ವಿಷಯಗಳು ಬ್ರಿಟನ್‌ ದೇಶವನ್ನು ಆವರಿಸಿ ಕೊಂಡಿವೆ. ಬ್ರಿಟನ್ನಿನ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಪಾಲಿಗೆ ಇವೆರಡೂ ಸತ್ವಪರೀಕ್ಷೆಯ ಸಂದರ್ಭವನ್ನು ಸೃಷ್ಟಿಸಿವೆ. ಆದರೆ ಅವರು ಅನುಸರಿಸುತ್ತಿರುವ ವಿಳಂಬ ಧೋರಣೆಯು ಜನರ ಜೀವನವನ್ನು, ಜೀವನೋಪಾಯವನ್ನು ಅಪಾಯಕ್ಕೆ ಒಡ್ಡಬಹುದು.

ಜಾನ್ಸನ್‌ ಅವರ ಪಾಲಿಗೆ ಬ್ರೆಕ್ಸಿಟ್ ಮತ್ತು ಕೊರೊನಾ ವೈರಾಣು ಒಂದಕ್ಕೊಂದು ನಂಟು ಹೊಂದಿವೆ: ಸಾಂಕ್ರಾಮಿಕವು ಸೃಷ್ಟಿಸಿರುವ ಆರ್ಥಿಕ ಬಿಕ್ಕಟ್ಟಿನ ಕಾರಣದಿಂದಾಗಿ ಜಾನ್ಸನ್ ಅವರು ಐರೋಪ್ಯ ಒಕ್ಕೂಟದ ಜೊತೆಗಿನ ಮಾತುಕತೆಯಲ್ಲಿ ಆಗಿರುವ ಸಮಸ್ಯೆ
ಗಳನ್ನು ನಿಭಾಯಿಸಬೇಕಾದ ಒತ್ತಡವನ್ನು ಎದುರಿಸುತ್ತಿದ್ದಾರೆ. ಹಾಗೆಯೇ, ವಾಣಿಜ್ಯ ಒಪ್ಪಂದ ಇಲ್ಲದೆಯೇ ಹೊಸ ವರ್ಷಕ್ಕೆ ಕಾಲಿಡುವ ಸಾಧ್ಯತೆಗಳು ಕ್ಷೀಣಿಸಿವೆ. ಹೀಗಿದ್ದರೂ, ಈ ಎರಡೂ ವಿಚಾರಗಳಲ್ಲಿ ನಿರ್ಣಾಯಕ ಕ್ರಮ ಕೈಗೊಳ್ಳಲು ಅವರು ಹಿಂದೇಟು ಹಾಕುತ್ತಿರುವುದರ ಕಾರಣ ಎರಡೂ ಸಮಸ್ಯೆಗಳು ಇನ್ನಷ್ಟು ಬಿಗಡಾಯಿಸಬಹುದು ಎಂದು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಐರೋಪ್ಯ ಒಕ್ಕೂಟದ ಜೊತೆಗಿನ ಮಾತುಕತೆಯನ್ನು ಎಳೆಯುತ್ತ ಸಾಗಿದರೆ ಬ್ರಿಟನ್‌ ಸಮಸ್ಯೆಗೆ ಸಿಲುಕಿಕೊಳ್ಳುತ್ತದೆ. ಅಕ್ಟೋಬರ್ ಕೊನೆಯ ವಾರ ಹಾಗೂ ನವೆಂಬರ್ ಮೊದಲ ವಾರದಲ್ಲಿ ಜಾರಿಯಲ್ಲಿರುವಂತೆ ತಾತ್ಕಾಲಿಕ ಲಾಕ್‌ಡೌನ್‌ಗೆ ಆದೇಶಿಸಬೇಕು ಎಂದು ವಿಜ್ಞಾನಿಗಳು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ. ಈ ಅವಧಿಯಲ್ಲಿ ಶಾಲೆಗಳಿಗೆ ರಜೆ ಇರುತ್ತದೆ. ಹಾಗಾಗಿ, ಲಾಕ್‌ಡೌನ್‌ನಿಂದಾಗಿ ಆಗುವ ಕೆಟ್ಟ ಪರಿಣಾಮಗಳು ಕಡಿಮೆ ಪ್ರಮಾಣದಲ್ಲಿ ಇರುತ್ತವೆ. ಈ ಸಲಹೆ ಬಗ್ಗೆ ಕೆಲವು ತಜ್ಞರು ಪ್ರಶ್ನೆಗಳನ್ನು ಎತ್ತಿರುವುದೂ ಇದೆ.

ಮಧ್ಯಮ ಅವಧಿಯ ಲಾಕ್‌ಡೌನ್‌ ಜಾರಿಗೊಳಿಸುವ ಅವಕಾಶವನ್ನು ಬ್ರಿಟನ್ ಈಗಾಗಲೇ ಕಳೆದುಕೊಂಡಿದೆ. ಆಗ ಲಾಕ್‌ಡೌನ್‌ ಜಾರಿ ಮಾಡಿದ್ದಿದ್ದರೆ ಕೊರೊನಾ ಸೋಂಕು ಪ್ರಕರಣಗಳಲ್ಲಿ ಈಚೆಗೆ ಕಂಡುಬಂದ ಹೆಚ್ಚಳವನ್ನು ತಡೆಯಬಹುದಿತ್ತು. ಆದರೂ ಈಗ ಲಾಕ್‌ಡೌನ್‌ ಜಾರಿಗೆ ತರುವುದರಿಂದ ವೈರಾಣು ಹರಡುವ ವೇಗ ಕಡಿಮೆ ಆಗಬಹುದು ಎಂದು ಸೋಂಕು ರೋಗಗಳ ವಿಷಯವನ್ನು ಬೋಧಿಸುತ್ತಿರುವ, ಪ್ರೊಫೆಸರ್ ಗ್ರಮಾಂ ಮೆಡ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಈಚೆಗಿನ ಒಂದು ವಾರದ ಅವಧಿಯಲ್ಲಿ ಬ್ರಿಟನ್ನಿನಲ್ಲಿ ಪ್ರತಿದಿನ ಸರಾಸರಿ 16 ಸಾವಿರ ಕೋವಿಡ್–19 ಪ್ರಕರಣಗಳು ವರದಿಯಾಗಿವೆ. ಇದು ಆರು ವಾರಗಳ ಹಿಂದಿನ ಸಂಖ್ಯೆಗೆ ಹೋಲಿಸಿದರೆ ಹತ್ತು ಪಟ್ಟು ಹೆಚ್ಚು.

ಹಲವು ನಿರ್ಬಂಧಗಳನ್ನು ಜಾರಿಗೆ ತಂದ ನಂತರದಲ್ಲೂ ಈ ಹೆಚ್ಚಳ ಕಂಡುಬಂದಿದೆ. ಹೆಚ್ಚಿನ ಕ್ರಮಗಳನ್ನು ಜಾರಿಗೆ ತರದಿದ್ದರೆ ಪ್ರತಿದಿನ ವರದಿ ಆಗುವ ಪ್ರಕರಣಗಳ ಸಂಖ್ಯೆಯು 50 ಸಾವಿರಕ್ಕೆ ತಲುಪಬಹುದು ಎಂದು ಸರ್ಕಾರದ ವಿಜ್ಞಾನಿಗಳು ಎಚ್ಚರಿಕೆ ನೀಡಿದ ನಂತರ ಈ ನಿರ್ಬಂಧಗಳನ್ನು ಜಾರಿಗೊಳಿಸಲಾಗಿತ್ತು.‌ ಸಾಂಕ್ರಾಮಿಕವು ಬ್ರಿಟನ್ನಿನ ಉತ್ತರ ಹಾಗೂ ಪಶ್ಚಿಮ ಭಾಗದಲ್ಲಿ ತೀವ್ರವಾಗಿ ಹರಡಿದೆ. ಅದು ದೇಶದ ಎಲ್ಲೆಡೆ ಹರಡುತ್ತಿರುವ ಲಕ್ಷಣಗಳು ಕಾಣುತ್ತಿವೆ. ಲಂಡನ್ನಿನಲ್ಲಿ ನಿರ್ಬಂಧಗಳ ಮಟ್ಟವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ ಅಲ್ಲಿನ ಮೇಯರ್ ಸಾದಿಕ್ ಖಾನ್. ಅವರು ಒತ್ತಾಯಿಸಿರುವಂತೆ ‘ಕಟ್ಟೆಚ್ಚರ’ದ ಸ್ಥಿತಿ ಘೋಷಣೆ ಆದರೆ ಒಂದೇ ಮನೆಯೊಳಗೆ ಬೇರೆ ಬೇರೆ ಮನೆಯ ಜನ ಒಟ್ಟಾಗಿ ಸೇರಲು ಅವಕಾಶ ಇರುವುದಿಲ್ಲ.

ಆದರೆ ಇತರ ನಗರಗಳ ಮೇಯರ್‌ಗಳು ನಿರ್ಬಂಧಗಳ ವಿರುದ್ಧ ದನಿ ಎತ್ತಿದ್ದಾರೆ. ಗ್ರೇಟರ್‌ ಮ್ಯಾಂಚೆಸ್ಟರ್‌ನ ಮೇಯರ್‌ ಆ್ಯಂಡಿ ಬರ್ನ್‌ಹ್ಯಾಮ್‌ ಅವರು, ತಮ್ಮ ನಗರವನ್ನು ಅತ್ಯಂತ ಅಪಾಯ ಇರುವ ನಗರ ಎಂದು ವರ್ಗೀಕರಿಸಲು ವಿರೋಧಿಸಿದ್ದಾರೆ. ಈ ರೀತಿ ವರ್ಗೀಕರಿಸಿದ್ದಿದ್ದರೆ ಅಲ್ಲಿ ಪಬ್‌ಗಳು ಹಾಗೂ ಜಿಮ್‌ಗಳನ್ನು ಮುಚ್ಚಬೇಕಾಗುತ್ತಿತ್ತು. ಖಾನ್ ಅವರಂತೆಯೇ ಬರ್ನ್‌ಹ್ಯಾಮ್ ಅವರೂ ಲೇಬರ್ ಪಕ್ಷದ ಸದಸ್ಯ. ಪಬ್‌ ಮತ್ತು ಇತರ ವಾಣಿಜ್ಯೋದ್ಯಮಗಳಿಗೆ ಹೆಚ್ಚಿನ ಹಣಕಾಸಿನ ನೆರವು ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

‘ನಮ್ಮ ಮೇಲೆ ತರುತ್ತಿರುವ ಒತ್ತಡಗಳಿಗೆ ಮಣಿಯುವುದಿಲ್ಲ’ ಎಂದು ಬರ್ನ್‌ಹ್ಯಾಮ್ ಅವರು ಟ್ವಿಟರ್‌ ಮೂಲಕ ಪ್ರಸಾರ ಮಾಡಿರುವ ವಿಡಿಯೊ ಒಂದರಲ್ಲಿ ಹೇಳಿದ್ದಾರೆ. ಜಾನ್ಸನ್ ಅವರು ಕೆಲವು ವಾರಗಳಿಂದ ಎರಡು ಬಗೆಯ ಆಗ್ರಹಗಳನ್ನು ಸಂಭಾಳಿಸುತ್ತಿದ್ದಾರೆ. ಜಾನ್ಸನ್ ಅವರ ವೈಜ್ಞಾನಿಕ ಸಲಹೆಗಾರರು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸುತ್ತಿದ್ದಾರೆ. ಆದರೆ, ಲಾಕ್‌ಡೌನ್‌ ಅಥವಾ ಅದಕ್ಕೆ ಹತ್ತಿರವಾದ ಕಠಿಣ ಕ್ರಮಗಳನ್ನು ಜಾರಿಗೊಳಿಸಿದರೆ ಅರ್ಥ ವ್ಯವಸ್ಥೆಗೆ ಏಟು ಬೀಳುತ್ತದೆ ಎಂದು ಜಾನ್ಸನ್ ಅವರ ಕನ್ಸರ್ವೇಟಿವ್ ಪಕ್ಷದ ಸದಸ್ಯರು ಎಚ್ಚರಿಕೆ ನೀಡುತ್ತಿದ್ದಾರೆ.

ಸಾಂಕ್ರಾಮಿಕಕ್ಕೆ ಪ್ರತಿಕ್ರಿಯೆಯಾಗಿ ಬ್ರಿಟನ್ನಿನಲ್ಲಿ ತುಸು ಹಿಂದೆ ರಾಜಕೀಯ ಒಮ್ಮತ ರೂಪುಗೊಂಡಿತ್ತು. ಆದರೆ ಅದು ಈಗ ಇಲ್ಲದಂತಾಗಿದೆ. ಲೇಬರ್ ಪಕ್ಷದ ನಾಯಕ ಕೀರ್ ಸ್ಟಾರ್ಮರ್ ಅವರು ತಾತ್ಕಾಲಿಕ ಲಾಕ್‌ಡೌನ್‌ ಪರವಾಗಿ ಇದ್ದಾರೆ. ಜಾನ್ಸನ್ ಅವರು ತಮ್ಮದೇ ಪಕ್ಷದ ಸದಸ್ಯರೊಂದಿಗೆ ಮಾತ್ರವಲ್ಲದೆ ಸಂಪುಟದ ಸಹೋದ್ಯೋಗಿಗಳ ಜೊತೆಯಲ್ಲೂ ಲಾಕ್‌ಡೌನ್‌ ವಿಚಾರವಾಗಿ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಲಾಕ್‌ಡೌನ್‌ ಜಾರಿಗೆ ಹಣಕಾಸು ಸಚಿವ ರಿಷಿ ಸುನಕ್ ಅವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಬ್ರಿಟನ್ನಿನ ಜನ ಕಠಿಣ ನಿರ್ಬಂಧಗಳ ಪರ ಇದ್ದಾರೆ ಎಂಬುದನ್ನು ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸುವ ಸಮೀಕ್ಷೆಗಳು ತೋರಿಸಿವೆ. ಇದು ಜಾನ್ಸನ್ ಅವರ ಮೇಲಿನ ಒತ್ತಡವನ್ನು ಹೆಚ್ಚಿಸಿದೆ. ಆದರೆ, ದೀರ್ಘಾವಧಿಯ ಲಾಕ್‌ಡೌನ್‌ ವಿಚಾರವಾಗಿ ಬ್ರಿಟನ್ನಿನ ಜನರಲ್ಲಿ ಒಮ್ಮತ ಇಲ್ಲ. ‘ಪ್ರಧಾನಿಯವರು ರಾಷ್ಟ್ರವ್ಯಾಪಿ ಲಾಕ್‌ಡೌನ್‌ಗೆ ಆದೇಶಿಸಿದರೆ, ಅವರು ಮನಸ್ಸು ಬದಲಾಯಿಸಿ ಸ್ಟಾರ್ಮರ್ ಪರ ನಿಲುವು ತಾಳಿದಂತೆ ಆಗುತ್ತದೆ’ ಎಂದು ಸಮೀಕ್ಷೆ ನಡೆಸುವ ಕಂಪನಿಯೊಂದರ ರಾಜಕೀಯ ನಿರ್ದೇಶಕ ಕೀರನ್ ಪೆಡ್ಲಿ ಅಭಿಪ್ರಾಯಪಟ್ಟರು. ‘ಲಾಕ್‌ಡೌನ್‌ ಜಾರಿ ಮಾಡದೆ, ಪರಿಸ್ಥಿತಿ ಬಿಗಡಾಯಿಸಿತು ಎಂದು ಭಾವಿಸಿ. ನೀವು ನಮ್ಮ ಮಾತನ್ನು ಮೊದಲೇ ಕೇಳಬೇಕಿತ್ತು ಎಂಬ ಪ್ರತಿಕ್ರಿಯೆಯು ಆಗ ಲೇಬರ್ ಪಕ್ಷದ ಕಡೆಯವರಿಂದ ಬರಬಹುದು. ರಾಜಕೀಯವಾಗಿ ಸ್ಟಾರ್ಮರ್ ಅವರಿಗೆ ಹೆಚ್ಚಿನ ಅಪಾಯಗಳು ಇಲ್ಲ’ ಎಂದು ಅವರು ಅನಿಸಿಕೆ ವ್ಯಕ್ತಪಡಿಸಿದರು.

ಜಾನ್ಸನ್ ಅವರ ಎದುರಿನ ರಾಜಕೀಯ ಆಯ್ಕೆಗಳಲ್ಲಿ ಎಷ್ಟೇ ಅಪಾಯಗಳು ಇದ್ದರೂ ಲಾಕ್‌ಡೌನ್‌ ಪರವಾಗಿ ಲೇಬರ್ ಪಕ್ಷದ ನಾಯಕರು ಇರಿಸುತ್ತಿರುವ ಬೇಡಿಕೆಗಳು ತಕ್ಷಣಕ್ಕೆ ಜಾನ್ಸನ್ ಅವರ ಕೈ ಬಲಪಡಿಸಬಹುದು ಎಂಬ ಲೆಕ್ಕಾಚಾರಗಳು ಇವೆ. ಹಿಂದಿನ ವರ್ಷ ಇದೇ ಸಂದರ್ಭದಲ್ಲಿ ಜಾನ್ಸನ್ ಅವರು ಬ್ರೆಕ್ಸಿಟ್ ವಿಚಾರವಾಗಿ ಬೇಕರ್ ಮತ್ತು ಕೆಲವು ಕಟ್ಟರ್‌ವಾದಿ ಸ್ನೇಹಿತರ ಪ್ರತಿರೋಧವನ್ನು ಮೆಟ್ಟಿ ನಿಂತಿದ್ದರು. ಐರೋಪ್ಯ ಒಕ್ಕೂಟದ ಜೊತೆ ಕಠಿಣವಾಗಿ ವರ್ತಿಸುವುದರ ಮೂಲಕ ಅವರು ಇದನ್ನು ಸಾಧಿಸಿದ್ದರು. ಇದನ್ನು ನಂತರ ಜಾನ್ಸನ್ ಅವರು ವಿಜಯ ಎಂಬಂತೆ ತೋರಿಸಿದ್ದೂ ಇತ್ತು. ಈಗ ಅದೇ ಮಾದರಿಯಲ್ಲಿ ಕೆಲಸ ಮಾಡುವ ಪ್ರಯತ್ನವನ್ನು ಜಾನ್ಸನ್ ಅವರು ಮಾಡುತ್ತಿರುವಂತಿದೆ.

ಕೆಲವು ಪ್ರಮುಖ ವಿಚಾರಗಳನ್ನು ಇಟ್ಟುಕೊಂಡು ಬ್ರೆಕ್ಸಿಟ್ ಕುರಿತ ಮಾತುಕತೆಯನ್ನು ಹೆಚ್ಚು ಮಾಡಿದರೆ ಒಪ್ಪಂದ ಸಾಧ್ಯ ಎಂದು ಜಾನ್ಸನ್ ಅವರ ನಿಕಟವರ್ತಿಗಳು ಹೇಳುತ್ತಾರೆ. ಆದರೆ ಇದು ವಿಳಂಬವಾದಂತೆಲ್ಲ ಬ್ರಿಟಿಷ್ ರಫ್ತುದಾರರಿಗೆ ಸಮಸ್ಯೆ ಹೆಚ್ಚು, ಐರೋಪ್ಯ ಒಕ್ಕೂಟಕ್ಕೆ ಪ್ರಯೋಜನ ಹೆಚ್ಚು.

ಮಾರ್ಕ್‌ ಲ್ಯಾಂಡ್ಲರ್, ಸ್ಟೀಫನ್ ಕ್ಯಾಸಲ್ (ದಿ ನ್ಯೂಯಾರ್ಕ್‌ ಟೈಮ್ಸ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT