ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ: ಆಟ ಬದಲಿಸುವ ನೋಟ ಯಾವುದು?

ಮೋದಿವಾದಿ– ಮೋದಿವಿರೋಧಿ ನೆಲೆಯಲ್ಲಿ ಹರಳುಗಟ್ಟುತ್ತಿರುವ ಚುನಾವಣಾ ಸಂಕಥನ: ಚಂದ್ರಕಾಂತ ವಡ್ಡು ಅವರ ವಿಶ್ಲೇಷಣೆ
Published : 18 ಫೆಬ್ರುವರಿ 2024, 19:48 IST
Last Updated : 18 ಫೆಬ್ರುವರಿ 2024, 19:48 IST
ಫಾಲೋ ಮಾಡಿ
Comments

ಈ ಬಾರಿಯೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರಧಾನಿ ನರೇಂದ್ರ ಮೋದಿ ಮತ್ತಷ್ಟು ಸರ್ವಾಧಿಕಾರಿ ಆಗಿ, ಭವಿಷ್ಯದಲ್ಲಿ ಚುನಾವಣೆಗಳೇ ನಡೆಯುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಮುಂದುವರಿದು, ಮಾಧ್ಯಮ, ನ್ಯಾಯಾಂಗ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆಯಂತಹ ಎಲ್ಲಾ ಸಂಸ್ಥೆಗಳ ಮೇಲೆ ಹತೋಟಿ ಸಾಧಿಸಿರುವ ಮೋದಿ ಅವರನ್ನು ಇನ್ನಷ್ಟು ಶಕ್ತಿಶಾಲಿ ಮಾಡಬೇಡಿ ಎಂಬ ಎಚ್ಚರಿಕೆಯ ಸಂದೇಶವೂ ಅವರಿಂದ ಹೊರಬಿದ್ದಿದೆ.

ಹಾಗೆ ನೋಡಿದರೆ ಖರ್ಗೆಯವರ ಮಾತಿನಲ್ಲಿ ಹೊಸದೇನೂ ಇಲ್ಲ. ಆದರೆ ಸುದೀರ್ಘ ಇತಿಹಾಸ ಹೊಂದಿದ ರಾಜಕೀಯ ಪಕ್ಷವೊಂದರ ಅಧ್ಯಕ್ಷರಾಗಿ ಅವರು ತಮ್ಮ ಕಾರ್ಯಕರ್ತರಿಗೆ ಮನದಟ್ಟು ಮಾಡಲು ಯತ್ನಿಸುತ್ತಿರುವ ಭವಿಷ್ಯತ್ತಿನ ಅಪಾಯ ಬಹಳ ಮುಖ್ಯವಾದುದು. ಇಲ್ಲಿ ಪಕ್ಷ ರಾಜಕಾರಣ, ಚುನಾವಣಾ ಕಾರ್ಯತಂತ್ರ ಮೀರಿದ ವಿಶಾಲ ಕಾಳಜಿಯೊಂದು ಖರ್ಗೆಯವರ ಮಾತಿನಲ್ಲಿ ಧ್ವನಿಸುತ್ತಿದೆ.

ಇನ್ನೊಂದು ಬದಿಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರೂ ಲೋಕಸಭಾ ಚುನಾವಣೆಗೆ ಪಕ್ಷವನ್ನು ಅಣಿಗೊಳಿಸುವ ಸಲುವಾಗಿ ತಮ್ಮ ಕಾರ್ಯಕರ್ತರಿಗೆ ಕೆಲವು ಕಿವಿಮಾತುಗಳನ್ನು ಹೇಳಿದ್ದಾರೆ. ಪಕ್ಷದ ಕಾರ್ಯಕರ್ತರ ರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುವಾಗ, ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿ ಬೂತಿನಲ್ಲಿ 2019ಕ್ಕಿಂತ ಹೆಚ್ಚುವರಿಯಾಗಿ 370 ಮತಗಳನ್ನು ತರಲು ಕಾರ್ಯಕರ್ತರು ಕಾರ್ಯೋನ್ಮುಖರಾಗಬೇಕು…’ ಎಂದು ಉತ್ತೇಜಿಸಿದ್ದಾರೆ. ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರತಿಶತ 37 ಮತ ಪಡೆದು 303 ಕ್ಷೇತ್ರಗಳನ್ನು ಗೆದ್ದಿದ್ದ ಪಕ್ಷದ ಮತ ಗಳಿಕೆ ಪ್ರಮಾಣವನ್ನು ಶೇ 45ಕ್ಕೆ ಹೆಚ್ಚಿಸುವ ಗುರಿಯನ್ನು ಆ ಪಕ್ಷ ನಿಗದಿಪಡಿಸಿಕೊಂಡಿದೆ. ‘ವಿಕಸಿತ ಭಾರತ, ಮೋದಿ ಗ್ಯಾರಂಟಿ, ಮತ್ತೊಮ್ಮೆ ಮೋದಿ ಸರ್ಕಾರ’ ಎಂದು ಘೋಷಣೆ ಹೊರಡಿಸುವ ನಿರ್ಣಯವನ್ನೂ ತೆಗೆದುಕೊಳ್ಳಲಾಗಿದೆ.

ಇಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ನರೇಂದ್ರ ಮೋದಿ ಅವರ ಮಾತುಗಳಲ್ಲಿನ ತದ್ವಿರುದ್ಧ ಆದ್ಯತೆ, ಕಾಳಜಿ ಮತ್ತು ಗುರಿಯನ್ನು ಗುರುತಿಸಬಹುದು.

ಮೋದಿ ಅವರನ್ನು ವಿರೋಧಿಸುವ ರಾಜಕಾರಣಿಗಳು, ಪಕ್ಷಗಳು, ಪ್ರಗತಿಶೀಲ ಆಲೋಚಕರು, ಸಂಘಟನೆಗಳ ಮಾತು ಮತ್ತು ಬರವಣಿಗೆಗಳಲ್ಲಿ ಸಾಮಾನ್ಯವಾಗಿ ಪುನಾರಾವರ್ತನೆಯಾಗುವ ಪದವೆಂದರೆ ಫ್ಯಾಸಿಸಂ. ಬಲಪಂಥೀಯ ನಡವಳಿಕೆಗಳ ಮೊತ್ತದಂತೆ, ಬಾಹ್ಯರೂಪದಂತೆ ನರೇಂದ್ರ ಮೋದಿ ಗೋಚರಿಸುತ್ತಿದ್ದಾರೆ. ಇಲ್ಲಿ ಬಿಜೆಪಿ ಗೌಣವಾಗಿ, ಆ ಪಕ್ಷವೇ ರೂಪಿಸಿದ ನಾಯಕನೊಬ್ಬ ಹಂತ ಹಂತವಾಗಿ ನಿಯಂತ್ರಕ ಸ್ಥಾನ ಆಕ್ರಮಿಸಿಕೊಳ್ಳುತ್ತಾ ಸಾಗಿರುವುದು ಆರಂಭಿಕ ಫ್ಯಾಸಿಸಂ ಸ್ವರೂಪವನ್ನೇ ತೋರ್ಪಡಿಸುತ್ತಿದೆ.

ರಾಜ್ಯ ಮತ್ತು ರಾಷ್ಟ್ರ ರಾಜಕೀಯ ಬೆಳೆವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮುಂಬರುವ ಲೋಕಸಭಾ ಚುನಾವಣೆಯ ಸಂಕಥನವು ಮೋದಿವಾದ ಮತ್ತು ಮೋದಿವಿರೋಧದ ನೆಲೆಯಲ್ಲಿ ಹರಳುಗಟ್ಟುವ ಎಲ್ಲಾ ಮುನ್ಸೂಚನೆಗಳು ದಟ್ಟವಾಗಿವೆ.

ನಾಯಕನೇ ಕೇಂದ್ರವಾಗಿ ಪಕ್ಷದ ಅಂಗರಚನೆಯ ಪರಿಧಿಯಾಚೆಗೆ ಸರಿಯುವುದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಫ್ಯಾಸಿಸಂ ತೆರೆದುಕೊಳ್ಳುವ ಮೊದಲ ಹಂತ. ಈಗ ಆ ಹಂತವನ್ನು ಪ್ರವೇಶಿಸಿಯಾಗಿದೆ ಎಂದು ಭಾವಿಸಲು ಬಹಳಷ್ಟು ಕಾರಣಗಳಿವೆ. ಮುಂದಿನ ಮೆಟ್ಟಿಲಲ್ಲಿ ಪಕ್ಷದ ಸಿದ್ಧಾಂತ ಕೂಡ ಮೂಲೆಗುಂಪಾಗಿ ಸಂಪೂರ್ಣ ಒಂದು ನಾಯಕತ್ವ ಮತ್ತು ಅದರ ಸುತ್ತಲಿನ ಹೌದಪ್ಪಗಳೇ ಮೇಲುಗೈ ಪಡೆಯುವ ಸನ್ನಿವೇಶವನ್ನು ಊಹಿಸಬಹುದು. ಈ ವಿನ್ಯಾಸವನ್ನು ಮೋದಿ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಕೂಟದ ಆವರಣದಲ್ಲಿಯೇ ಪರಿಶೀಲಿಸುವುದಾದರೆ, ಮೋದಿಯವರ ವರ್ಚಸ್ಸಿನಿಂದ ನಿರ್ಮಾಣವಾಗಿರುವ ಅನಿವಾರ್ಯ, ಅವಲಂಬನೆ ನಿಧಾನವಾಗಿ ಆರ್‌ಎಸ್‌ಎಸ್‌ ಪಡಸಾಲೆಯಲ್ಲಿಯೂ ಆತಂಕ ಮೂಡಿಸಿದೆ.

ಅನೇಕ ವರ್ಷಗಳ ಕಾಲ ರಹಸ್ಯ ಕಾರ್ಯಸೂಚಿಯಾಗಿ ಅಳವಡಿಸಿಕೊಂಡಿದ್ದ ಸೈದ್ಧಾಂತಿಕ ಪ್ರತಿಪಾದನೆಗಳು ಹಿಂದಿನ ಮೂರು ದಶಕಗಳಲ್ಲಿ ರಹಸ್ಯದ ಪರದೆಯನ್ನು ಕಳಚಿಕೊಂಡಿದ್ದನ್ನು ಗಮನಿಸಿದ್ದೇವೆ. ಬಿಜೆಪಿಯು ಸಂಘ ಪರಿವಾರದ ರಾಜಕೀಯ ಮುಖ ಎಂಬುದರಲ್ಲಿ ಅನುಮಾನವೇನೂ ಉಳಿದಿಲ್ಲ. ಅಷ್ಟೇಅಲ್ಲ, ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಸಂಘ ಪರಿವಾರದ ಬಹಳಷ್ಟು ಸಿದ್ಧಾಂತಿಗಳು ಪರೋಕ್ಷ ಆಡಳಿತ ನಡೆಸಿದ್ದನ್ನೂ ನಾಡು ಕಂಡಿದೆ. ಈ ಹಿನ್ನೆಲೆಯಲ್ಲಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಅವೇ ಭಾವನಾತ್ಮಕ, ಧಾರ್ಮಿಕ ವಿಚಾರಗಳನ್ನು ಮುನ್ನೆಲೆಗೆ ಒಡ್ಡುವ ಕಾರ್ಯಸೂಚಿ ಈಗಿನಿಂದಲೇ ಬಿಚ್ಚಿಕೊಳ್ಳತೊಡಗಿದೆ.

ಚುನಾವಣಾ ತಂತ್ರದ ಭಾಗವಾಗಿ, ಲಾಭಕೋರ ರಾಜಕಾರಣದ ಆಟವಾಗಿ ಅಖಾಡ ಪ್ರವೇಶಿಸುವ ಇಂತಹ ವಿಚಾರಗಳ ಆಯಸ್ಸು ಅಲ್ಪಾವಧಿ ಆಗಿರುವುದಿಲ್ಲ. ಅವು ಸಮಾಜದ ದೈನಂದಿನ ಕಾರ್ಯವೈಖರಿಯಲ್ಲಿ ಉಂಟು ಮಾಡುವ ತಲ್ಲಣಗಳು ದೀರ್ಘಕಾಲೀನ ಪ್ರಭಾವ ಬೀರಲು ಬಹಳಷ್ಟು ಶಕ್ತಿ, ಸ್ಫೂರ್ತಿಯನ್ನು ಮೈಗೂಡಿಸಿಕೊಂಡಿರುತ್ತವೆ.

ಈ ಬೆಳವಣಿಗೆಗಳ ಅಂತಿಮ ಹಂತವನ್ನು ತರ್ಕಬದ್ಧವಾಗಿ, ಆಧಾರಸಮ್ಮತವಾಗಿ ಅರ್ಥೈಸುವುದಾದರೆ, ಅದು ಅರಾಜಕತೆಯತ್ತ ಮುಖ ಮಾಡಬಹುದು. ಆಗ ಪಕ್ಷ, ನಾಯಕ, ಸಿದ್ಧಾಂತ, ತಂತ್ರಗಾರಿಕೆ ಎಲ್ಲವೂ ಸೃಷ್ಟಿಕರ್ತರ ನಿಯಂತ್ರಣವನ್ನೂ ಮೀರುವ ವಿದ್ಯಮಾನವು ಮೇಲ್ನೋಟಕ್ಕೆ ಉತ್ಪ್ರೇಕ್ಷಿತ ಊಹೆ ಅನ್ನಿಸಬಹುದು. ಆದರೆ ಆ ಸಾಧ್ಯತೆಯ ಮರೆವಿಗೆ ತೆರಬೇಕಾದ ಬೆಲೆ ಸಣ್ಣದಲ್ಲ ಎಂಬ ಅರಿವು ಇರದಿದ್ದರೆ ಹೇಗೆ?

ಇದು ಮೋದಿವಾದ ನಮ್ಮನ್ನು ಕರೆದೊಯ್ಯಲಿರುವ ಹಾದಿ ಕುರಿತ ಮಾತಾಯಿತು. ಇನ್ನು, ಮೋದಿ ವಿರೋಧಿ ನೆಲೆಯನ್ನು ಅವಲೋಕಿಸುವುದಾದರೆ, ಆಶಾದಾಯಕ ನಿರೀಕ್ಷೆಯ ಕಿರಣವೇನೂ ಗೋಚರಿಸುವುದಿಲ್ಲ. ಸಂಘ ಪರಿವಾರ ಮೂಲದಿಂದ ಉತ್ಪತ್ತಿಯಾಗುವ ವಿಷಯಗಳನ್ನು ಆಧರಿಸಿ ಬಿಜೆಪಿ ಮುಂದುಮಾಡುವ ಚುನಾವಣಾ ಕಾರ್ಯತಂತ್ರಗಳಿಗೆ ಪ್ರತಿಕ್ರಿಯಾತ್ಮಕ ಧೋರಣೆಗೆ ಹೊರತಾದ ಪ್ರಬಲ ಕಾರ್ಯಸೂಚಿ ಮೋದಿ ವಿರೋಧಿಗಳಿಗೆ ದಕ್ಕಿದಂತೆ ಕಾಣದು. ಪ್ರತಿರೋಧದ ಬಹಳಷ್ಟು ಪ್ರಯತ್ನಗಳು ತಿರುಮಂತ್ರದಂತೆ ಮೋದಿವಾದದ ಪ್ರಚಾರವಾಗಿ ಮಾರ್ಪಡುತ್ತಿರುವುದು ವಿಪರ್ಯಾಸಕರ.

ಮೋದಿವಾದದ ಭಾಗವಾಗಿ ನಿರೂಪಿಸಲ್ಪಡುವ ಜಾತಿ-ಮತ-ಧರ್ಮ ಕೇಂದ್ರಿತ ವಿದ್ಯಮಾನಗಳು ಚುನಾವಣೆಯ ವಿಷಯವಾಗಿ ಪರ ಅಥವಾ ವಿರೋಧದ ನೆಲೆಯಲ್ಲಿ ಚರ್ಚೆಗೆ ಒಳಪಟ್ಟಷ್ಟೂ ವಿರೋಧ ಪಕ್ಷಗಳಿಗೆ ನಷ್ಟ ಎಂಬ ಸಾಬೀತಾದ ಸತ್ಯವನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಮೋದಿವಾದದ ತಿರುಳಾಗಿರುವ ಭಾವನಾತ್ಮಕ ಸಂಗತಿಗಳ ಪ್ರಸ್ತಾಪಗಳಿಗೆ, ಪ್ರತಿಕ್ರಿಯೆಗಳಿಗೆ ವಿರಾಮ ನೀಡಿ ಆರ್ಥಿಕ ಮತ್ತು ಆಡಳಿತಾತ್ಮಕ ಸಂಗತಿಗಳನ್ನು ಹೆಚ್ಚಾಗಿ ಸಾರ್ವಜನಿಕ ಚರ್ಚೆಯ ವೇದಿಕೆಗೆ ಬರುವಂತಾಗಿಸಿದರೆ ಮೋದಿ ವಿರೋಧಕ್ಕೆ ಚಾಲನೆ, ಮನ್ನಣೆ ಸಿಗುವ ಸಂಭವ ಹೆಚ್ಚು. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಹಳೆತಲೆಗಳ ದನಿ, ಶೈಲಿ, ತಂತ್ರ ತಗ್ಗಿಸಿ ಹೊಸ ಪೀಳಿಗೆಗೆ ವೇದಿಕೆ-ಅವಕಾಶ ಕಲ್ಪಿಸುವ ಆಯ್ಕೆಯಿದೆ. ಇತ್ತೀಚೆಗೆ ಸಂತೋಷ್ ಲಾಡ್, ಶರತ್ ಬಚ್ಚೇಗೌಡ, ಪ್ರಿಯಾಂಕ್ ಖರ್ಗೆ ಅಂತಹವರು ಹೊಸ ದನಿ ಹೊರಡಿಸುತ್ತಿದ್ದಾರೆ. ಕೃಷ್ಣ ಬೈರೇಗೌಡ, ಸತೀಶ್ ಜಾರಕಿಹೊಳಿ, ದಿನೇಶ್ ಗುಂಡೂರಾವ್, ರಾಮಲಿಂಗಾರೆಡ್ಡಿ ಥರದವರು ಆಡಳಿತಕ್ಕೆ ಚುರುಕು ತರುತ್ತಿದ್ದಾರೆ. ಇವರನ್ನೆಲ್ಲಾ ಬಳಸಿಕೊಂಡು ಸಕಾರಾತ್ಮಕ ಸಂಗತಿಗಳನ್ನು ರಾಜ್ಯ ಮಟ್ಟದಲ್ಲಿ ಚುನಾವಣಾ ವಿಷಯ ಆಗಿಸಲು ಸಾಧ್ಯವಿದೆ.

ಮೋದಿವಾದಿಗಳ ‘ಬೆಂಕಿಗೆ ಪ್ರತಿಯಾಗಿ ಸಹಬಾಳ್ವೆಯ ಹಣತೆ ಬೆಳಗುವ’ ದೇವನೂರ ಮಹಾದೇವ ಅವರ ಕರೆಯನ್ನು ಸಾಂಕೇತಿಕ ನೆಲೆಯಾಚೆಗಿನ ವಾಸ್ತವಕ್ಕೆ ಕೊಂಡೊಯ್ಯುವ ಹೊಣೆ ಮತ್ತು ಸವಾಲನ್ನು ಯಾರಾದರೂ ಸ್ವೀಕರಿಸಬೇಕಲ್ಲವೇ? ಎಡಪಕ್ಷಗಳ ದುರವಸ್ಥೆ ಕಾಲದಲ್ಲಿ ಬಹುನಿರೀಕ್ಷೆಗೆ ಯಾವ ರೀತಿಯಲ್ಲಿಯೂ ಅರ್ಹವಲ್ಲದ ಕಾಂಗ್ರೆಸ್ ಪಕ್ಷದಲ್ಲಿ ಪರ್ಯಾಯ ರಾಜಕಾರಣ ಹುಡುಕುವ, ನೆಚ್ಚುವ ಅನಿವಾರ್ಯವನ್ನು ಸೃಷ್ಟಿಸಿಕೊಂಡಿರುವುದು ಮತ್ತೊಂದು ದುರಂತಸತ್ಯ. ಗೆದ್ದ ಎತ್ತಿನ ಬಾಲ ಹಿಡಿಯುವವರು, ಗೆಲ್ಲುವ ಎತ್ತಿನ ಹಗ್ಗ ಹಿಡಿಯುವವರು ಬೇಕಾದಷ್ಟು ಜನ ಸಿಗುತ್ತಾರೆ; ಆದರೆ ಈಗ ಬೇಕಿರುವುದು ಗೆಲ್ಲಿಸಬೇಕಾದ ಕರುವಿಗೆ ಹತ್ತೀಕಾಳು ಇಡಬೇಕಾದವರು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT