ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ರಾಜಕೀಯ ಹೇಳಿಕೆ– ತಾತ್ಕಾಲಿಕ ಬಾಳಿಕೆ

ರಾಜಕಾರಣಿಗಳ ನಡುವೆ ಸಂಘರ್ಷ ಮತ್ತು ಜನಸಾಮಾನ್ಯರ ಮಧ್ಯೆ ಸೌಹಾರ್ದ ಇದ್ದಷ್ಟೂ ಚೆಲುವು!
Published 19 ಏಪ್ರಿಲ್ 2024, 20:58 IST
Last Updated 19 ಏಪ್ರಿಲ್ 2024, 20:58 IST
ಅಕ್ಷರ ಗಾತ್ರ

ಒಬ್ಬರು ಇನ್ನೊಬ್ಬರ ಕುರಿತು ಒಂದು ಹೇಳಿಕೆ ನೀಡಿದರೆ, ಅದಕ್ಕೆ ಮೂರು ಸಾಧ್ಯತೆಗಳು ಹೊಸೆದುಕೊಂಡಿರುತ್ತವೆ. ಒಂದು, ಹೇಳಿಕೆ ಸತ್ಯವಾಗಿರುತ್ತದೆ. ಎರಡು, ಹೇಳಿದ ವಿಷಯ ಸುಳ್ಳಾಗಿರುತ್ತದೆ. ಮೂರು, ಅದು ಅರ್ಧಸತ್ಯವಾಗಿರುತ್ತದೆ. ಮೂರನೆಯ ಸಾಧ್ಯತೆಯನ್ನು ಅರ್ಧಸುಳ್ಳು ಎಂದಾಗಿಯೂ ಪರಿಗಣಿಸಬಹುದು. ಆದರೆ ಇವು ಯಾವುವೂ ಅಲ್ಲದ ಮಗದೊಂದು ಸಾಧ್ಯತೆ ರಾಜಕೀಯ ವಲಯದಲ್ಲಿ ಜಾರಿಯಲ್ಲಿರುವುದನ್ನು ಗಮನಿಸಬೇಕು. ಅದನ್ನು ‘ರಾಜಕೀಯ ಹೇಳಿಕೆ’ ಎಂದು ಕರೆಯಲಾಗುತ್ತದೆ. ಇದು ಸತ್ಯವಲ್ಲ, ಸುಳ್ಳಲ್ಲ, ಅರೆಸತ್ಯವೂ ಅಲ್ಲ. ಒಂದು ಬಗೆಯಲ್ಲಿ ‘ನಂಬಿದರೆ ನಂಬಿ, ಬಿಟ್ಟರೆ ಬಿಡಿ’ ಎಂಬಂತಹ, ಗಂಭೀರ ಪರಿಗಣನೆಗೆ ಒಗ್ಗದ ಬೀಸುಮಾತು.

ಅನೇಕ ಬಾರಿ, ಹೇಳಿಕೆ ರೂಪದ ಆರೋಪಕ್ಕೆ ಈಡಾದವರೇ ‘ಅದು ಅವರ ರಾಜಕೀಯ ಹೇಳಿಕೆ ಬಿಡಿ...’ ಎಂದು ತೇಲಿಸುವುದನ್ನು ಕಾಣುತ್ತೇವೆ. ಕೆಲವೊಮ್ಮೆ ರಾಜಕೀಯ ಹೇಳಿಕೆ, ಪ್ರತಿಹೇಳಿಕೆಗಳು ಜನರಿಗೆ ಮನರಂಜನೆಯ ಸರಕಾಗಿಬಿಡುತ್ತವೆ.

ರಾಜಕೀಯ ಹೇಳಿಕೆಗಳಲ್ಲಿ ಹಲವಾರು ವಿಧಗಳನ್ನು ಗುರುತಿಸಬಹುದು. ಅವುಗಳಲ್ಲಿ ಎದುರಾಳಿ ವ್ಯಕ್ತಿ ಅಥವಾ ಪಕ್ಷವನ್ನು ಟೀಕೆ, ವಿಮರ್ಶೆಗೆ ಒಳಪಡಿಸುವುದರ ಜೊತೆಗೆ ತೇಜೋವಧೆಗೆ ಯತ್ನಿಸುವ ಪ್ರಸಂಗಗಳೂ ಇರುತ್ತವೆ. ವಿರೋಧಿಯ ಖಾಸಗಿ ವಿಷಯಗಳನ್ನು ಜಾಲಾಡುವ ಸಂದರ್ಭಗಳು ಅಪರೂಪವೇನಲ್ಲ. ಯಾವಾಗ ಈ ಹೇಳಿಕೆಗಳ ವಿಷಯವು ವ್ಯಕ್ತಿಗತ ಸ್ತರ ದಾಟಿ ಆರೋಪ, ಅದರಲ್ಲೂ ಭ್ರಷ್ಟಾಚಾರ- ಕ್ರಿಮಿನಲ್ ಆರೋಪದ ಸ್ವರೂಪ ಪಡೆಯುತ್ತದೆಯೋ ಅಲ್ಲಿ ಸಾರ್ವಜನಿಕ ಹಿತಾಸಕ್ತಿ ಜನ್ಮತಾಳುತ್ತದೆ. ಆಗ ಅದು ಇಬ್ಬರು ರಾಜಕಾರಣಿಗಳು ಅಥವಾ ಎರಡು ರಾಜಕೀಯ ಪಕ್ಷಗಳ ನಡುವಿನ ವಿದ್ಯಮಾನವಾಗಿ ಉಳಿಯುವುದಿಲ್ಲ.

ರಾಜಕಾರಣಿಗಳ ಇಂತಹ ಹೇಳಿಕೆಗಳ ಒಳಗು, ಉದ್ದೇಶ, ಗುರಿ, ಪರಿಣಾಮ ನಾವಂದುಕೊಂಡಷ್ಟು ಸರಳವೂ ನೇರವೂ ಆಗಿರುವುದಿಲ್ಲ. ಇವು ಸಾರ್ವಜನಿಕವಾಗಿ ನಂಬಿಸುವ, ಅಪನಂಬಿಸುವ ಅಥವಾ ಕನಿಷ್ಠಪಕ್ಷ ಗೊಂದಲ ಮೂಡಿಸುವ ಕಾರ್ಯಸೂಚಿಯನ್ನು ಬಹಳಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತವೆ. ಆಯಾ ಸಮಯ, ಸಂದರ್ಭಕ್ಕೆ ಸರಿಹೊಂದುವಂತೆ ಹೊರಹೊಮ್ಮುವ ಈ ಹೇಳಿಕೆಗಳು ತಮ್ಮ ಒಡೆಯ ನಿಗದಿಪಡಿಸಿದ ಗಮ್ಯವನ್ನೇನೋ ಸೇರುತ್ತವೆ. ಆದರೆ ‘ರಾಜಕೀಯ ಹೇಳಿಕೆ’ ಹಣೆಪಟ್ಟಿಯ ಆಚೆಗಿನ ಸಾರ್ವಜನಿಕ ಒಳಿತು, ನ್ಯಾಯನಿಷ್ಠುರತೆ, ಸತ್ಯಪರತೆ ಕಳಚಿಹೋಗುವ ಸನ್ನಿವೇಶವನ್ನು ಯಾರು, ಹೇಗೆ ನಿಭಾಯಿಸುವುದು?

ಚುನಾವಣೆ ಸಂದರ್ಭಗಳಂತೂ ‘ರಾಜಕೀಯ ಹೇಳಿಕೆ’ಗಳಿಗೆ ಸುಗ್ಗಿಯ ಕಾಲ. ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ತುಸು ಹೆಚ್ಚೇ ಸದ್ದು ಮಾಡುತ್ತಿರುವುದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನಡುವಿನ ತೀವ್ರ ಸ್ವರೂಪದ ಆರೋಪ, ಪ್ರತ್ಯಾರೋಪಗಳ ಕಾಳಗ. ಇವರಿಬ್ಬರ ಸಂಘರ್ಷದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೂ ಪ್ರವೇಶ ಪಡೆದಿರುವುದು ವಿವಾದಕ್ಕೆ ಇನ್ನಷ್ಟು ತೀಕ್ಷ್ಣತೆ ಕಲ್ಪಿಸಿದೆ.

ಈ ಹಿಂದೆ ಸಿದ್ದರಾಮಯ್ಯ ಅವರ ವಿರುದ್ಧ ಸತತ ಆರೋಪ ಮಾಡುತ್ತಿದ್ದ ಕುಮಾರಸ್ವಾಮಿ ಇದೀಗ ಶಿವಕುಮಾರ್‌ ಅವರನ್ನು ಮೊದಲ ಗುರಿ ಮಾಡಿಕೊಂಡಿರುವುದು ಹೊಸ ಬೆಳವಣಿಗೆ. ಶಿವಕುಮಾರ್‌ ಅವರೂ ಇದಕ್ಕೆ ತಮ್ಮದೇ ಆದ ರೀತಿಯಲ್ಲಿ ತಿರುಗೇಟು ನೀಡುತ್ತಿದ್ದಾರೆ. ಇದು ಒಕ್ಕಲಿಗ ಸಮುದಾಯಕ್ಕೆ ಮುಂದಾಳತ್ವ ನೀಡುವ ಪೈಪೋಟಿಯ ಭಾಗ ಎಂಬುದೇನೋ ನಿಜ. ಆದರೆ ಇವರ ಆರೋಪ, ಪ್ರತ್ಯಾರೋಪಗಳಲ್ಲಿ ಬಹಿರಂಗವಾಗುತ್ತಿರುವ ಅಂಶಗಳು ಜಾತಿ ಲೆಕ್ಕಾಚಾರಗಳನ್ನು ಮೀರಿದ ಸಾರ್ವಜನಿಕ ಬದುಕಿನ ಪ್ರಾಮಾಣಿಕತೆ, ಹೊಣೆಗಾರಿಕೆ, ಪಾರದರ್ಶಕತೆಯ ಸಂಗತಿಯನ್ನೂ ಒಳಗೊಂಡಿರುವುದನ್ನು ಹಗುರವಾಗಿ ಭಾವಿಸಬಾರದು.

ಕುಮಾರಸ್ವಾಮಿ ಅವರಿಗೆ ಬೆಂಗಳೂರಿನ ಸುತ್ತಮುತ್ತ ಒಂದು ಸಾವಿರ ಎಕರೆ ಜಮೀನು ಇದೆ ಎಂಬುದು ಶಿವಕುಮಾರ್ ಅವರ ಆರೋಪ. ಶಿವಕುಮಾರ್ ಬೆವರು ಸುರಿಸಿ ಆಸ್ತಿ ಸಂಪಾದನೆ ಮಾಡಿದ್ದಾರೆಯೇ, ಕಲ್ಲುಬಂಡೆ ಕದ್ದು ವಿದೇಶಕ್ಕೆ ಸಾಗಿಸಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯೂ ಆಗಿರುವ ಎಚ್‌.ಡಿ.ಕುಮಾರಸ್ವಾಮಿ. ‘ನನ್ನ ಜಮೀನಿನ ಬಗ್ಗೆ ಇಷ್ಟೊಂದು ಮಾತನಾಡುವ ಶಿವಕುಮಾರ್‌, 24 ಎಕರೆ ಕರಾಬ್‌ ಜಮೀನು ನುಂಗಿಹಾಕಿರುವ ಲುಲು ಮಾಲ್‌ ಬಗ್ಗೆ ಏಕೆ ಮೌನ ವಹಿಸುತ್ತಾರೆ? ಲುಲು ಮಾಲ್ ಇರುವ ಜಾಗವನ್ನು 1934ರಲ್ಲಿ ಮಿನರ್ವ ಮಿಲ್‌ಗೆ ನೀಡಲಾಗಿತ್ತು. ಆ ದಾಖಲೆಯನ್ನು ಹೇಗೆ ಸುಟ್ಟು ಹಾಕಿದರು ಎನ್ನುವುದು ನನಗೆ ಗೊತ್ತಿದೆ. ಅದನ್ನು ಅಕ್ರಮವಾಗಿ ಖರೀದಿ ಮಾಡಿ ಮಾಲ್ ಕಟ್ಟಿದ್ದಾರೆ. ಇದೆಲ್ಲವನ್ನೂ ಮುಂದೆ ದಾಖಲೆ ಸಮೇತ ಬಿಡುಗಡೆ ಮಾಡುತ್ತೇನೆ’ ಎಂದು ಹೇಳಿರುವ ಕುಮಾರಸ್ವಾಮಿಯವರು ಎಂದಿನಂತೆ ಕ್ಲೈಮ್ಯಾಕ್ಸ್ ಬಾಕಿ ಇರಿಸಿದ್ದಾರೆ!

‘ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಜಮೀನು ಬರೆಸಿಕೊಳ್ಳಲು ನೀವು ಏನೆಲ್ಲಾ ಮಾಡಿದಿರಿ ಎನ್ನುವ ಮಾಹಿತಿ ಇದೆ. ಜಮೀನು ಖರೀದಿಸುವುದಾಗಿ ಕೊಟ್ಟ ಚೆಕ್ ನಗದಾಗದೇ ಇರುವ ದಾಖಲೆ ಇದೆ. ಶಾಂತಿನಗರ ಗೃಹ ನಿರ್ಮಾಣ ಸಹಕಾರ ಸಂಘದ ಪ್ರಕರಣದಲ್ಲಿ ಏನು ನಡೆದಿದೆ ಎಂಬುದು ಗೊತ್ತಿದೆ. ಅಸಲಿ ಸಹಕಾರ ಸಂಘದ ಬದಲಿಗೆ ನಕಲಿ ಸಹಕಾರ ಸಂಘ ಸೃಷ್ಟಿಸಿದ್ದೂ ಗೊತ್ತು. ನನ್ನನ್ನು ಚರ್ಚೆಗೆ ಕರೆದಿದ್ದೀರಿ, ನಾನು ಕಂತೆಗಟ್ಟಲೆ ದಾಖಲೆಯೊಂದಿಗೆ ಸಿದ್ಧನಿದ್ದೇನೆ’ ಎಂಬ ಕುಮಾರಸ್ವಾಮಿ ಸವಾಲು ಕೂಡ ಈಗ ಶಿವಕುಮಾರ್ ಅಂಗಳದಲ್ಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಮೈಸೂರಿನಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ದೇವೇಗೌಡರು, ಶಿವಕುಮಾರ್ ವಿರುದ್ಧ ಗುರುತರ ಆರೋಪಗಳನ್ನು ಮಾಡಿದ್ದಾರೆ. ನೀರಾವರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಶಿವಕುಮಾರ್ ಸಾವಿರಾರು ಕೋಟಿ ರೂಪಾಯಿ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮುಂದುವರಿದು, ‘ಕರ್ನಾಟಕದಿಂದ ವಿವಿಧ ರಾಜ್ಯಗಳ ಚುನಾವಣೆಗೆ ಹಣ ರವಾನೆಯಾಗಿದೆ. ಈ ಬಗ್ಗೆ ಸಾಕ್ಷ್ಯಾಧಾರ ನೀಡಲು ನಾನು ಸಿದ್ಧನಿದ್ದೇನೆ’ ಎಂಬುದು ಅವರ ಸವಾಲು.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ದೇವೇಗೌಡರು ಶಿವಕುಮಾರ್ ವಿರುದ್ಧ ಮಾಡಿರುವ ಆರೋಪ ಸಾಮಾನ್ಯವಾದುದಲ್ಲ: ‘ಅಮೆರಿಕದಲ್ಲಿ ದುಡಿದು ತಂದ ಹಣದಲ್ಲಿ ಉದ್ಯಮಿಯೊಬ್ಬರು ಬಿಡದಿ ಬಳಿ ಐ.ಟಿ. ಕಂಪನಿ ಸ್ಥಾಪನೆ ಮಾಡಲು ಮುಂದಾಗಿದ್ದರು. ಶಿವಕುಮಾರ್‌ ಸುಳ್ಳು ಕ್ರಯಪತ್ರ ಸಿದ್ಧಡಿಸಿ, ಅದನ್ನು ಮುಂದಿಟ್ಟುಕೊಂಡು ಸುಪ್ರೀಂ ಕೋರ್ಟ್‌ ತನಕ ಹೋಗಿದ್ದರು. ನ್ಯಾಯಾಲಯದಲ್ಲಿ ಮುಖಭಂಗವಾದ ಬಳಿಕ ಆ ವ್ಯಕ್ತಿಯ ಮಗಳನ್ನು ಒಂಬತ್ತು ದಿನ ಬಂಧನದಲ್ಲಿಟ್ಟಿದ್ದರು. ಆಸ್ತಿ ಪತ್ರಕ್ಕೆ ಸಹಿ ಹಾಕಿ ನಿಮ್ಮ ಮಗಳನ್ನು ಕರೆದುಕೊಂಡು ಹೋಗಿ ಎಂದು ಧಮ್ಕಿ ಹಾಕಿದ್ದರು…’ ಎಂದು ಆರೋಪಿಸಿದ್ದಾರೆ ಮಾಜಿ ಪ್ರಧಾನಿ.

ಇದಕ್ಕೆ ಪ್ರತಿಕ್ರಿಯಿಸಿರುವ ಶಿವಕುಮಾರ್‌, ‘ಅವರು ಸಾಕ್ಷ್ಯ ಬಿಡುಗಡೆ ಮಾಡಲಿ. ನಾನು ತಪ್ಪು ಮಾಡಿದ್ದರೆ ಯಾವುದೇ ಶಿಕ್ಷೆ ಎದುರಿಸಲು ಸಿದ್ಧ. ಯಾವುದೇ ಆರೋಪಕ್ಕೂ ದಾಖಲೆ ಇರಬೇಕಲ್ಲವೇ? ಬೆಂಗಳೂರು ಸುತ್ತಮುತ್ತ ಅವರ ಕುಟುಂಬದ ಎಲ್ಲಾ ಸದಸ್ಯರ ಆಸ್ತಿ ಎಷ್ಟು ಎಂಬ ದಾಖಲೆಗಳನ್ನು ನಾನು ತರುತ್ತೇನೆ. ನಾನು ಕಲ್ಲು ಹೊಡೆದಿದ್ದೇನೆಯೇ, ಲೂಟಿ ಮಾಡಿದ್ದೇನೆಯೇ ಎಂಬುದು ಸದನದಲ್ಲಿ ತೀರ್ಮಾನವಾಗಲಿ’ ಎಂದು ಪ್ರತಿಸವಾಲು ಹಾಕಿದ್ದಾರೆ. ಆದರೆ ಇದು ನಿಜಕ್ಕೂ ತೀರ್ಮಾನ ಆಗಬೇಕಿರುವುದು ಕಾನೂನಿನ ಕಕ್ಷೆಯಲ್ಲಿ!

ಇಲ್ಲಿನ ವಾಗ್ವಾದದಲ್ಲಿ ಪಾಲ್ಗೊಂಡವರು ಸಾಮಾನ್ಯರಲ್ಲ. ಮಾಜಿ ಮುಖ್ಯಮಂತ್ರಿ, ಮಾಜಿ ಪ್ರಧಾನಮಂತ್ರಿ ಹಾಗೂ ಭಾವಿ ಮುಖ್ಯಮಂತ್ರಿ ನಡುವಿನ ಕ್ರಿಮಿನಲ್ ಸ್ವರೂಪದ ಗಂಭೀರ ಆರೋಪಗಳು ಬರೀ ಗಾಳಿಮಾತುಗಳಾಗಿ ಹಾರಿಹೋದರೆ ಹೇಗೆ? ಸೇರು ಸವ್ವಾಸೇರಿನ ಹೇಳಿಕೆಗಳ ಕದನ ಯಾವುದೇ ವ್ಯಕ್ತಿಗಳಿಗೆ, ಪಕ್ಷಗಳಿಗೆ ಸೀಮಿತವಾದುದೇನಲ್ಲ. ಬಹುಪಾಲು ರಾಜಕಾರಣಿಗಳು ಸಮಯಾನುಸಾರ ಪರಸ್ಪರ ಇಂಥ ಆರೋಪ, ಪ್ರತ್ಯಾರೋಪಗಳನ್ನು ಮಾಡಿಕೊಂಡ ರಾಶಿ ಪ್ರಸಂಗಗಳು ದೊರೆಯುತ್ತವೆ. ತಾರ್ಕಿಕ ಅಂತ್ಯ ಮುಟ್ಟಿದ್ದು ಶೂನ್ಯ. ಅವಕಾಶವಿದ್ದರೆ ನ್ಯಾಯಾಂಗವೇ ಸ್ವಯಂಪ್ರೇರಿತ ಮೊಕದ್ದಮೆ ದಾಖಲಿಸಿಕೊಂಡು ಕ್ರಮ ಕೈಗೊಳ್ಳುವುದಷ್ಟೇ ಉಳಿದಿರುವ ಆಶಾಕಿರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT