ಆಧುನಿಕತೆಗೆ ತೆರೆದುಕೊಳ್ಳುವುದರೊಂದಿಗೆ ಅಭಿವೃದ್ಧಿಯತ್ತ ದೇಶ ದಾಪುಗಾಲು ಹಾಕುತ್ತಿರುವ ಸಂದರ್ಭದಲ್ಲಿ, ನಗರ ಪ್ರದೇಶದ ಮಹಿಳೆಯರ ಜೀವನ ಮೇಲ್ನೋಟಕ್ಕೆ ಸುಖಮಯವಾಗಿದೆ ಎನಿಸುವಂತಿದೆ. ಆದರೆ, ಗ್ರಾಮೀಣ ಭಾಗದ ಮಹಿಳೆಯರ ಜೀವನಮಟ್ಟ ಹಾಗೂ ಹೆಣ್ಣು ಮಕ್ಕಳ ಬಗೆಗಿನ ಮನೋಭಾವದಲ್ಲಿ ಹೆಚ್ಚಿನ ಬದಲಾವಣೆಯೇನೂ ಕಂಡುಬರುತ್ತಿಲ್ಲ.

ದೇಶದ ಅಸಂಖ್ಯ ಕುಟುಂಬಗಳಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಮಹಿಳೆ ಮತ್ತು ಹೆಣ್ಣು ಮಕ್ಕಳು ದಿನನಿತ್ಯದ ಬದುಕಿನ ಸಣ್ಣ ಸಣ್ಣ ಸೌಲಭ್ಯಗಳಿಗಾಗಿ ನಿರಂತರ ಹೋರಾಟ ನಡೆಸುವ ಪರಿಸ್ಥಿತಿ ಮುಂದುವರಿದೇ ಇದೆ. ಕಿಶೋರಾವಸ್ಥೆಗೆ ಕಾಲಿಟ್ಟ ಬಾಲಕಿಯನ್ನು ಈಗಲೂ ‘ಸೆರಗಲ್ಲಿ ಕಟ್ಟಿದ ಕೆಂಡ’ ಎಂದು ಭಾವಿಸುವ ಮನೋಭಾವ ವ್ಯಾಪಕವಾಗಿಯೇ ಇದೆ. ‘ಜವಾಬ್ದಾರಿ ಕಳೆದುಕೊಳ್ಳುವ’ ಮನೋಭಾವದಲ್ಲಿ ಅಪ್ರಾಪ್ತ ವಯಸ್ಸಿನ ತಮ್ಮ ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕಳುಹಿಸಲು ಅನೇಕ ಪೋಷಕರು ತುದಿಗಾಲಲ್ಲಿ ನಿಂತಿರುತ್ತಾರೆ. ಈ ಪರಿಸ್ಥಿತಿ ರಾಜ್ಯದಲ್ಲೂ ಇದೆ. ಹದಿನೆಂಟು ವರ್ಷ ತುಂಬುವ ಮುನ್ನವೇ ಹೆಣ್ಣು ಮಕ್ಕಳಿಗೆ ಮದುವೆ ಮಾಡುವ /ಘಟನೆಗಳು/ ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುತ್ತಲೇ ಇವೆ.

ಓದಿನಲ್ಲಿ ಆಸಕ್ತಿ ಇಲ್ಲದ ಕಾರಣಕ್ಕಾಗಿ ಬಾಲಕಿಯೊಬ್ಬಳು ಶಾಲೆ ಬಿಟ್ಟು ಮನೆಯಲ್ಲಿದ್ದಳು. ಹದಿನಾರು ವರ್ಷ ವಯಸ್ಸಿನ ಆಕೆಗೆ, ದೂರದ ಸಂಬಂಧಿಯಾದ 27 ವರ್ಷ ವಯಸ್ಸಿನ ಯುವಕನೊಂದಿಗೆ ಮದುವೆ ನಡೆಯಿತು. ‘ನನಗೆ ಎದೆ ನೋವಿದೆ. ಆಸ್ಪತ್ರೆಗೂ ಸೇರಿದ್ದೆ. ನನಗೇನಾದರೂ ಹೆಚ್ಚುಕಡಿಮೆಯಾದರೆ ಮನೇಲಿ ಹೆಣ್ಣು ದಿಕ್ಕಿಲ್ಲ. ಮಗಳನ್ನು ಕೊಡು, ಚೆನ್ನಾಗಿ ನೋಡಿಕೊಳ್ತೀವಿ’ ಎನ್ನುವ ಹುಡುಗನ ತಾಯಿಯ ಮಾತಿಗೆ ಬಾಲಕಿಯ ತಾಯಿ ಕರಗಿದ್ದಳು. ಮಗಳ ಬಾಲ್ಯವಿವಾಹಕ್ಕೆ ಒಪ್ಪಿಗೆ ನೀಡಿದ ತಾಯಿಯ ಮದುವೆಯೂ ಆಕೆಯ ಹದಿನೈದನೇ ವಯಸ್ಸಿನಲ್ಲಿ ನಡೆದಿತ್ತು. ಊರೆಲ್ಲ ಮಲಗಿರುವ ಮಧ್ಯರಾತ್ರಿ 2 ಗಂಟೆ ಸಮಯದಲ್ಲಿ ಮದುವೆ ನಡೆಯಿತು. ಆದರೆ, ಮೊಬೈಲ್ ಫೋನ್ನಲ್ಲಿ ತೆಗೆದ ಮದುವೆಯ ಫೋಟೊಗಳು ಒಬ್ಬರಿಂದ ಒಬ್ಬರಿಗೆ ರವಾನೆಯಾಗಿ, ಅಧಿಕಾರಿಗಳಿಗೂ ತಲುಪಿದವು; ಪ್ರಕರಣ ದಾಖಲಾಯಿತು. ಪ್ರಸ್ತುತ, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಗಳನ್ನು 10ನೇ ತರಗತಿಗೆ ದಾಖಲಿಸಲು ಪೋಷಕರು ಒಪ್ಪಿಕೊಂಡಿದ್ದಾರೆ.

15 ವರ್ಷ 7 ತಿಂಗಳು ವಯಸ್ಸಿನ ಬಾಲಕಿಯೊಬ್ಬಳು ತನ್ನ ಮದುವೆಗೆ ನಡೆದ ಸಿದ್ಧತೆಯ ಬಗ್ಗೆ ಮಕ್ಕಳ ರಕ್ಷಣಾ ಘಟಕ ಸಹಾಯವಾಣಿ 1098ಕ್ಕೆ ದೂರು ನೀಡಿದಳು. ಸ್ಥಳೀಯ ಮಕ್ಕಳ ರಕ್ಷಣಾ ಅಧಿಕಾರಿಗಳು ಬಾಲಕಿಯ ಮನೆಗೆ ಭೇಟಿ ನೀಡಿದಾಗ, ‘ಮದುವೆಗೆ ಯಾವ ಸಿದ್ಧತೆಯೂ ನಡೆದಿಲ್ಲ’ ಎನ್ನುವ ಉತ್ತರ ಎದುರಾಯಿತು. ಪೋಷಕರ ಉತ್ತರದಿಂದ ಸಮಾಧಾನಗೊಳ್ಳದ ಶಿಶು ಅಭಿವೃದ್ಧಿ ಮೇಲ್ವಿಚಾರಕರು, ಬಾಲ್ಯವಿವಾಹ ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಬಾಲಕಿಯ ತಂದೆ–ತಾಯಿಗೆ, ಬಾಲ್ಯವಿವಾಹ ಅಪರಾಧ ಎಂದು ಮನದಟ್ಟು ಮಾಡಿದ್ದಾರೆ. ಅಧಿಕಾರಿಗಳ ಬುದ್ಧಿಮಾತುಗಳನ್ನು ಒಪ್ಪಿದಂತೆ ನಟಿಸಿರುವ ಪೋಷಕರು, ಸಂಬಂಧಿಕರ ಊರಿನ ದೇವಾಲಯದಲ್ಲಿ ಬಾಲಕಿಯ ಮದುವೆ ಮಾಡಿದ್ದಾರೆ. ಪ್ರಸ್ತುತ ಮೊಕದ್ದಮೆ ದಾಖಲಾಗಿದೆ.

ಮೇಲಿನ ಪ್ರಕರಣಗಳಂತಹ ಹಲವು ಪ್ರಕರಣಗಳು ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗುತ್ತಿವೆ.

ಬಾಲಕಿಯ ವಯಸ್ಸು 18 ವರ್ಷ ಹಾಗೂ ಬಾಲಕನ ವಯಸ್ಸು 21 ವರ್ಷ ತುಂಬದೇ ಇರುವ ಅಥವಾ ಇಬ್ಬರಲ್ಲಿ ಒಬ್ಬರು ಅಪ್ರಾಪ್ತ ವಯಸ್ಸಿನವರಿದ್ದಾಗ ನಡೆಯುವ ವಿವಾಹ ‘ಬಾಲ್ಯವಿವಾಹ’ ಎನಿಸಿಕೊಳ್ಳುತ್ತದೆ. ಭಾರತ ಸರ್ಕಾರ ಬಾಲ್ಯವಿವಾಹವನ್ನು ನಿಷೇಧಿಸಿ 2006ರಲ್ಲಿ ಕಾಯ್ದೆ ಜಾರಿಗೊಳಿಸಿದೆ. ‘ಬಾಲ್ಯವಿವಾಹ ನಿಷೇಧ ಕರ್ನಾಟಕ ತಿದ್ದುಪಡಿ ಕಾಯ್ದೆ–2016’ ಅನ್ನು ಜಾರಿಗೆ ತಂದಿರುವ ರಾಜ್ಯ ಸರ್ಕಾರವು ಬಾಲ್ಯವಿವಾಹವನ್ನು ಶಿಕ್ಷಾರ್ಹ ಅಪರಾಧವನ್ನಾಗಿಸಿದೆ. ಇಷ್ಟಾದರೂ ಕಾನೂನಿನ ಕಣ್ಣಿಗೆ ಮಣ್ಣೆರಚುವ ಘಟನೆಗಳು ನಡೆಯುತ್ತಲೇ ಇವೆ. ಬಾಲ್ಯವಿವಾಹ ಅಪರಾಧಕ್ಕೆ 2 ವರ್ಷಗಳವರೆಗಿನ ಕಠಿಣ ಜೈಲು ಶಿಕ್ಷೆ ಅಥವಾ 1 ಲಕ್ಷ ರೂಪಾಯಿವರೆಗೆ ದಂಡ ವಿಧಿಸಬಹುದಾಗಿದೆ. ಜೈಲುವಾಸ ಹಾಗೂ ದಂಡ ಎರಡನ್ನೂ ವಿಧಿಸಬಹುದಾಗಿದೆ.

ಬಾಲ್ಯವಿವಾಹ ನಡೆಸಲು ಹಲವು ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾದುದು, ಹೆಣ್ಣುಮಕ್ಕಳ ಶಿಕ್ಷಣದ ಬಗೆಗಿನ ಅಸಡ್ಡೆ. ಹಲವಾರು ಯೋಜನೆಗಳ ಹೊರತಾಗಿಯೂ ಗುಣಮಟ್ಟದ ಶಿಕ್ಷಣವನ್ನು ಗ್ರಾಮೀಣ ಭಾಗದ ಬಾಲೆಯರಿಗೆ ಒದಗಿಸುವಲ್ಲಿ ಸರ್ಕಾರ ಯಶಸ್ವಿಯಾಗಿಲ್ಲ. ಶಿಕ್ಷಣದ ನಡುವೆಯೇ ಶಾಲೆಯಿಂದ ಹೊರಗುಳಿಯುವ ಹೆಣ್ಣು ಮಕ್ಕಳು ಹಾಗೂ ಅವರಿಗೆ ಮದುವೆ ಮಾಡಿ ತಮ್ಮ ಜವಾಬ್ದಾರಿ ಕಳೆದುಕೊಳ್ಳಲು ಹಾತೊರೆಯುವ ಪೋಷಕರು ಬಹಳಷ್ಟು ಮಂದಿಯಿದ್ದಾರೆ. ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುತ್ತಿರುವಾಗಲೂ ಒಳ್ಳೆಯ ಕಡೆ ಸಂಬಂಧ ಸಿಕ್ಕಿದೆ ಎನ್ನುವ ಕಾರಣದಿಂದಾಗಿ ಅಥವಾ ಹುಡುಗಿ ಹೆಚ್ಚು ಓದಿದಲ್ಲಿ ಹುಡುಗನನ್ನು ಹುಡುಕುವುದು ಕಷ್ಟವಾಗುತ್ತದೆ ಎನ್ನುವ ಪೂರ್ವಗ್ರಹದಿಂದ ಬಾಲಕಿಯರಿಗೆ ಕಿಶೋರಾವಸ್ಥೆಯಲ್ಲೇ ಮದುವೆ ಮಾಡಲಾಗುತ್ತದೆ. ಅನಾರೋಗ್ಯಕ್ಕೆ ತುತ್ತಾದ ಅಜ್ಜಿ ಅಥವಾ ತಾತನ ಕೊನೆಯಾಸೆಯ ಈಡೇರಿಕೆ ಇಲ್ಲವೇ ತಂದೆ–ತಾಯಿಯ ಆಸೆ ಪೂರೈಸಬೇಕು ಎನ್ನುವ ಭಾವನಾತ್ಮಕ ಒತ್ತಡಗಳಿಂದಾಗಿಯೂ ಬಾಲ್ಯವಿವಾಹಗಳು ನಡೆಯುತ್ತವೆ.

ಬಾಲ್ಯವಿವಾಹಕ್ಕೆ ಮತ್ತೊಂದು ಪ್ರಮುಖ ಕಾರಣ, ಹದಿಹರೆಯದವರ ಪ್ರೇಮ ಪ್ರಕರಣಗಳು. ವಯೋಸಹಜ ಆಕರ್ಷಣೆಯ ಕಾರಣದಿಂದ ಪ್ರೀತಿಯಲ್ಲಿ ಸಿಲುಕುವ ಹದಿಹರೆಯದವರು ಮನೆಯವರಿಗೆ ನುಂಗಲಾಗದ ತುತ್ತಾಗುತ್ತಾರೆ. ಪ್ರೇಮದ ಕಾರಣದಿಂದಾಗಿ ಮಗ ಅಥವಾ ಮಗಳು ವಿವೇಚನೆಯಿಲ್ಲದೆ ಮನೆ ಬಿಟ್ಟುಹೋಗುವ ಸಂದರ್ಭಗಳಲ್ಲಿ ಉಂಟಾಗಬಹುದಾದ ‘ಸಾಮಾಜಿಕ ಅವಮಾನ’ದಿಂದ ತಪ್ಪಿಸಿಕೊಳ್ಳಲು ಪೋಷಕರು ಅಪ್ರಾಪ್ತ ವಯಸ್ಸಿನ ತಮ್ಮ ಮಕ್ಕಳಿಗೆ ಮದುವೆ ಮಾಡುತ್ತಾರೆ. ಕಾರಣ ಅಥವಾ ಸಂಪ್ರದಾಯ ಏನೇ ಇದ್ದರೂ ಬಾಲ್ಯವಿವಾಹವು ಮಕ್ಕಳ ಮಾನಸಿಕ, ದೈಹಿಕ ಆರೋಗ್ಯದ ಮೇಲೆ ಉಂಟು ಮಾಡುವ ಪರಿಣಾಮವು ತೀವ್ರತರವಾದುದು. ಅತಿ ಸಣ್ಣ ವಯಸ್ಸಿಗೆ, ಜೀವನದ ಬಗೆಗೆ ಏನೂ ಗೊತ್ತಿಲ್ಲದವರಿಗೆ ಮದುವೆಯ ಜವಾಬ್ದಾರಿ ಹೊರಿಸುವಂತಹ ಕೆಲಸವನ್ನು ನಿಲ್ಲಿಸಬೇಕಾದ ತುರ್ತು ಪ್ರಜ್ಞಾವಂತ ಸಮಾಜದ ಮೇಲಿದೆ.

ಅಪ್ರಾಪ್ತ ವಯಸ್ಸಿನಲ್ಲಿ ನಡೆಸುವ ವಿವಾಹದಿಂದಾಗಿ ದೈಹಿಕ ಆರೋಗ್ಯದ ಮೇಲಾಗುವ ಪರಿಣಾಮಗಳು ಒಂದೆರಡಲ್ಲ. ಗರ್ಭಕೋಶ ಸಂಪೂರ್ಣ ಬೆಳವಣಿಗೆಯಾಗದಿರುವಾಗ ಗರ್ಭಿಣಿಯಾಗುವುದು ಹೆರಿಗೆ ಸಮಯದ ತೊಂದರೆಗಳಿಗೆ ಹಾಗೂ ಅಕಾಲಿಕ ಮರಣಕ್ಕೂ ಕಾರಣವಾಗಬಹುದಾಗಿದೆ. ಜನಿಸುವ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಯ, ರಕ್ತಹೀನತೆ, ಶಿಶುಗಳ ಮರಣ, ಗರ್ಭಪಾತ ಮತ್ತು ಗರ್ಭಚೀಲ ಹಾನಿಯಂತಹ ಸಮಸ್ಯೆಗಳು ಸಂಭವಿಸಬಹುದು. ಅನಾರೋಗ್ಯದ ಸನ್ನಿವೇಶಗಳನ್ನು ಎದುರಿಸುವ ಸಂದರ್ಭದಲ್ಲಿನ ಮಾನಸಿಕ ಒತ್ತಡ ಹಾಗೂ ಅದರ ನಿರ್ವಹಣೆಯಲ್ಲಿ ಬಾಲಕಿಯರು ವಿಫಲರಾಗುವ ಸಾಧ್ಯತೆಯೇ ಹೆಚ್ಚು.

ಬಾಲ್ಯವಿವಾಹದ ಬಂಧನಕ್ಕೆ ಸಿಲುಕುವ ಬಾಲಕಿಯರು ತಮ್ಮ ಬದುಕಿನ ಕುರಿತಂತೆ ನಿರ್ಧಾರಗಳನ್ನು ತೆಗೆದುಕೊಳ್ಳಲೇ ಸಾಧ್ಯವಿಲ್ಲದಿರುವಾಗ, ತಮ್ಮ ಮಕ್ಕಳ ಬದುಕು ಹಾಗೂ ಅವರ ಶಿಕ್ಷಣದ ಕುರಿತಂತೆ ಸಮರ್ಪಕ ನಿರ್ಣಯಗಳನ್ನು ತೆಗೆದುಕೊಳ್ಳಲು ಅಸಮರ್ಥರಾಗುತ್ತಾರೆ. ಕ್ರಮಬದ್ಧ ಶಿಕ್ಷಣ, ಬಾಲ್ಯದಿಂದ ವಂಚಿತರಾಗುವ ಇವರು ಕೌಟುಂಬಿಕ ಒತ್ತಡಕ್ಕೆ ಒಳಗಾಗಿ, ತಮ್ಮ ಮೇಲಾಗಬಹುದಾದ ದೌರ್ಜನ್ಯವನ್ನು ಪ್ರತಿಭಟಿಸುವ ಸಾಮರ್ಥ್ಯವನ್ನೂ ಕಳೆದುಕೊಳ್ಳುತ್ತಾರೆ. ಬಾಲ್ಯವಿವಾಹಗಳಲ್ಲಿ ಸಾಮಾನ್ಯವಾಗಿ ವಯಸ್ಸಿನ ಅಂತರ ಹೆಚ್ಚಾಗಿರುತ್ತದೆ. ಆ ಕಾರಣಕ್ಕಾಗಿ ದಾಂಪತ್ಯದಲ್ಲಿ ಹೊಂದಾಣಿಕೆಯ ಸಮಸ್ಯೆ ಕಂಡುಬರಬಹುದು; ಎಳೆವಯಸ್ಸಿನಲ್ಲಿ ವಿಧವೆಯರಾಗುವ ದೌರ್ಭಾಗ್ಯ ಎದುರಾಗಬಹುದಾದ ಸಾಧ್ಯತೆಯೂ ಇದೆ.

2024ರಲ್ಲಿ ರಾಜ್ಯದಲ್ಲಿ ದಾಖಲಾದ ಬಾಲ್ಯವಿವಾಹಗಳ ಸಂಖ್ಯೆ 165. ಪ್ರಸಕ್ತ ವರ್ಷ ಮೇ ಮೂರನೇ ವಾರದ ವೇಳೆಗೆ 56 ಪ್ರಕರಣಗಳು ದಾಖಲಾಗಿವೆ. ಇದು ದಾಖಲಾದ ಪ್ರಕರಣಗಳ ಲೆಕ್ಕ. ದಾಖಲಾಗದೇ ಉಳಿದವು, ಜನನ ದಾಖಲಾತಿಗಳ ವ್ಯತ್ಯಯದಿಂದ ಉಂಟಾದ ಪ್ರಕರಣಗಳು ಹಾಗೂ ಪೋಕ್ಸೊ (POCSO) ಕಲಂ ಅಡಿಯಲ್ಲಿ ದಾಖಲಾದ ಬಾಲಗರ್ಭಿಣಿಯರ ಪ್ರಕರಣಗಳ ಲೆಕ್ಕವನ್ನೂ ಸೇರಿಸಿದಲ್ಲಿ ಬಾಲ್ಯವಿವಾಹ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುವುದರಲ್ಲಿ ಸಂಶಯವಿಲ್ಲ. 2025ರ ಮೇ ಅಂತ್ಯದವರೆಗೆ ಸುಮಾರು 700 ಬಾಲಗರ್ಭಿಣಿಯರಿಗೆ ಸಂಬಂಧಿಸಿದ ಮೊಕದ್ದಮೆಗಳು ರಾಜ್ಯದಾದ್ಯಂತ ವಿವಿಧ ಠಾಣೆಗಳಲ್ಲಿ ದಾಖಲಾಗಿವೆ. ಚಾಮರಾಜನಗರ ಜಿಲ್ಲೆಯಲ್ಲಿ ಈ ವರ್ಷ ಇಲ್ಲಿಯವರೆಗೆ ದಾಖಲಾಗಿರುವ ಬಾಲಗರ್ಭಿಣಿಯರ ಸಂಖ್ಯೆ 42.

ಬಾಲ್ಯವಿವಾಹವನ್ನು ತಡೆಗಟ್ಟುವಲ್ಲಿ ಸರ್ಕಾರ ಕೈಗೊಂಡಿರುವ ಕ್ರಮ ಹಾಗೂ ಜಾಗೃತಿ ಕಾರ್ಯಕ್ರಮಗಳು, ಒಂದೇ ಒಂದು ಬಾಲ್ಯವಿವಾಹವೂ ನಡೆಯಬಾರದಷ್ಟು ಬಿಗಿಯಾಗಿವೆ. ಆದರೂ ರಂಗೋಲಿ ಕೆಳಗೆ ನುಸುಳುವ ಪೋಷಕರ ಕಾರಣದಿಂದಾಗಿ ಬಾಲ್ಯವಿವಾಹಗಳು ನಡೆದೇ ಇವೆ.

ಗ್ರಾಮ ವ್ಯಾಪ್ತಿಯ ಶಾಲಾ ಮುಖ್ಯೋಪಾಧ್ಯಾಯರು, ಪಿ.ಡಿ.ಒ.ಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ತಳಮಟ್ಟದಲ್ಲಿ ಕಾರ್ಯನಿರ್ವಹಿಸುವ ಸರ್ಕಾರದ ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಬಾಲ್ಯವಿವಾಹ ನಿಷೇಧ ಅಧಿಕಾರಿಗಳೆಂದು ಸರ್ಕಾರ ಗುರುತಿಸಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳು ಬಾಲ್ಯವಿವಾಹ ತಡೆಗಟ್ಟುವ ಹೊಣೆಗಾರಿಕೆಯನ್ನು ಹೊಂದಿದ್ದಾರೆ.

ಬಾಲ್ಯವಿಹಾಹ ತಡೆಗಟ್ಟುವ ದಿಸೆಯಲ್ಲಿನ ಪ್ರಾಥಮಿಕ ಹೊಣೆಗಾರಿಕೆ ಪೋಷಕರದು. ತಮ್ಮ ಮಗುವಿಗೆ ಇರುವ ಒಂದೇ ಒಂದು ಬದುಕನ್ನು ಅತ್ಯಂತ ಸಂತೋಷದಿಂದ ಹಾಗೂ ಸಾರ್ಥಕವಾಗಿ ರೂಪಿಸಿಕೊಳ್ಳುವ ಅವಕಾಶವನ್ನು ಕಲ್ಪಿಸುವ ನಿಟ್ಟಿನಲ್ಲಿ ತಂದೆ–ತಾಯಿ ಜಾಗೃತರಾಗುವ ಅಗತ್ಯವಿದೆ. ವಿವಾಹವೇ ಬದುಕಲ್ಲ; ಮದುವೆಯು ಬದುಕಿನ ಒಂದು ಭಾಗ ಎನ್ನುವುದನ್ನು ಅರ್ಥೈಸಿಕೊಂಡು, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಹಾಗೂ ಪೋಷಕರು ಕೈಜೋಡಿಸಿದಾಗಷ್ಟೇ ‘ಬಾಲ್ಯವಿವಾಹ’ ವಿರುದ್ಧದ ಹೋರಾಟ ಪರಿಣಾಮಕಾರಿ ಆಗಲಿದೆ.

ಲೇಖಕಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಾಮರಾಜನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.