ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂವಿಧಾನಿಕ ನೈತಿಕತೆ: ವ್ಯಾಖ್ಯಾನದ ಬಲೆ

ಸಂವಿಧಾನದ ಮೂಲ ಆಶಯಗಳನ್ನು ವ್ಯಾಖ್ಯಾನಿಸುವಾಗ ಹೆಚ್ಚಿನ ಎಚ್ಚರಿಕೆ ಬೇಕು
Last Updated 23 ಜನವರಿ 2019, 19:38 IST
ಅಕ್ಷರ ಗಾತ್ರ

ಸಲಿಂಗ ಕಾಮ ಅಪರಾಧ ಅಲ್ಲ ಎಂದು ಹೇಳಿ ಸುಪ್ರೀಂ ಕೋರ್ಟ್‌ ‘ನವತೇಜ್ ಸಿಂಗ್ ಜೋಹರ್ ಮತ್ತು ಕೇಂದ್ರ ಸರ್ಕಾರ’ದ ನಡುವಣ ಪ್ರಕರಣದಲ್ಲಿ 2018ರ ಸೆಪ್ಟೆಂಬರ್‌ನಲ್ಲಿ ನೀಡಿದ ತೀರ್ಪಿನಲ್ಲಿ ಬಳಸಿದ ‘ಸಾಂವಿಧಾನಿಕ ನೈತಿಕತೆ’ ಎಂಬ ಪದಗಳು ಹಾಗೂ ಅವಕ್ಕೆ ನೀಡಿದ ವ್ಯಾಖ್ಯಾನ ದೇಶದ ಗಮನ ಸೆಳೆದವು.

ಋತಿಮತಿ ಆಗುವ ವಯಸ್ಸಿನ ಹೆಣ್ಣುಮಕ್ಕಳು ಕೂಡ ಶಬರಿಮಲೆಯ ಅಯ್ಯಪ್ಪ ದೇವಸ್ಥಾನ ಪ್ರವೇಶಿಸಬಹುದು ಎಂದು ಘೋಷಿಸಿದ ತೀರ್ಪಿನಲ್ಲಿ (ಇಂಡಿಯನ್ ಯಂಗ್ ಲಾಯರ್ಸ್ ಅಸೋಸಿಯೇಷನ್ ಮತ್ತು ಕೇರಳ ಸರ್ಕಾರದ ನಡುವಣ ಪ್ರಕರಣ) ಕೂಡ ಇದರ ಉಲ್ಲೇಖ ಇದೆ. ಈ ಎರಡು ತೀರ್ಪುಗಳಲ್ಲಿ ಸುಪ್ರೀಂ ಕೋರ್ಟ್‌ ‘ಸಾಂವಿಧಾನಿಕ ನೈತಿಕತೆ’ಯನ್ನು ‘ಸಾಮಾಜಿಕ ನೈತಿಕತೆ’ಗಿಂತ ಉನ್ನತ ಸ್ಥಾನದಲ್ಲಿ ಇರಿಸಿದೆ.

ಸಂವಿಧಾನದಲ್ಲಿ ಹೇಳಿರುವ ಮೂಲಭೂತ ಹಕ್ಕುಗಳನ್ನು ವ್ಯಾಖ್ಯಾನಿಸುವ ಸಂದರ್ಭದಲ್ಲಿ ಈ ದೇಶದ ಧಾರ್ಮಿಕ ವೈವಿಧ್ಯ, ಹತ್ತೆಂಟು ಜಾತಿಗಳು, ಆಚರಣೆಗಳು, ಪದ್ಧತಿಗಳು ನ್ಯಾಯಾಂಗಕ್ಕೆ ಮತ್ತೆ ಮತ್ತೆ ಸವಾಲು ಒಡ್ಡುತ್ತವೆ. ಯಾವುದೇ ವಿಚಾರ ಅಥವಾ ಪ್ರಕರಣದಲ್ಲಿ ನ್ಯಾಯ ತೀರ್ಮಾನ ಮಾಡುವಾಗ ಕಾನೂನುಗಳನ್ನು ವ್ಯಾಖ್ಯಾನಿಸಬೇಕಾದ ಸಂದರ್ಭ ಸುಪ್ರೀಂ ಕೋರ್ಟ್‌ಗೆ ಎದುರಾಗುತ್ತದೆ. ಜನರ ಆಸೆಗಳು, ಆಕಾಂಕ್ಷೆಗಳಿಗೆ ತಕ್ಕಂತೆ ಕಾನೂನುಗಳನ್ನು ರೂಪಿಸುವ ಕೆಲಸದಲ್ಲಿ ಶಾಸಕಾಂಗ ವಿಫಲವಾದಾಗ, ತಮ್ಮ ಪ್ರತಿನಿಧಿಗಳ ಬಗ್ಗೆ ಜನರಲ್ಲಿ ವಿಶ್ವಾಸ ಇಲ್ಲದ ಸ್ಥಿತಿ ನಿರ್ಮಾಣ ಆದಾಗ ಸಂವಿಧಾನದ ನಿಜ ಆಶಯವನ್ನು ವ್ಯಾಖ್ಯಾನಿಸುವ ಕೆಲಸ ಮಾಡಬೇಕಾಗಿದ್ದು ನ್ಯಾಯಾಂಗ. ತನ್ನೆದುರು ಇರುವ ಕಾನೂನು ಹಾಗೂ ಸಾಂವಿಧಾನಿಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಸಂದರ್ಭದಲ್ಲಿ, ಸಂವಿಧಾನ ರೂಪಿಸಿದವರ ಆಶಯ ಏನಿತ್ತು ಎಂಬ ಬಗ್ಗೆಯೂ ನ್ಯಾಯಾಂಗ ಹುಡುಕಾಟ ನಡೆಸುತ್ತದೆ. ‘ಸಾಂವಿಧಾನಿಕ ನೈತಿಕತೆ’ ಎಂಬುದು ಮಹತ್ವ ಕಂಡುಕೊಳ್ಳುವುದು ಇಂತಹ ಸಂದರ್ಭಗಳಲ್ಲಿ.

ಹಾಗಾದರೆ, ಸಾಂವಿಧಾನಿಕ ನೈತಿಕತೆ ಅಂದರೆ ಏನು? ಇದಕ್ಕೆ ಈಗ ಇಷ್ಟೊಂದು ಮಹತ್ವ ದೊರೆಯಲು ಕಾರಣ ಏನು? ಸಾಂವಿಧಾನಿಕ ನೈತಿಕತೆಯ ತತ್ವಗಳ ಬಗ್ಗೆ ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಭೆಯಲ್ಲಿ ಮಾತನಾಡಿದ್ದರು. ಅದು ಈಗ ಮಹತ್ವ ಪಡೆಯುತ್ತಿದೆ. ಆದರೆ ಅದನ್ನು ದೇಶದ ರಾಜಕೀಯ ಸಮುದಾಯ ಇನ್ನಷ್ಟೇ ಅರ್ಥ ಮಾಡಿಕೊಳ್ಳಬೇಕಿದೆ.

ಸಮಾಜದಲ್ಲಿ ಆಗುವ ಬದಲಾವಣೆಗಳಿಗೆ ಅನುಗುಣವಾಗಿ ಸಂವಿಧಾನ ಇರಬೇಕು ಎಂಬ ಉದ್ದೇಶದಿಂದ ಅದರ (ಸಂವಿಧಾನದ) ವ್ಯಾಖ್ಯಾನಗಳು ಆಗುತ್ತವೆ. ಸಂವಿಧಾನವು ತನ್ನ ಮೂಲ ರೂಪದಲ್ಲೇ ಇದ್ದರೆ ಇಂದಿನ ಸಮಾಜದ ಅಗತ್ಯಗಳಿಗೆ ಸ್ಪಂದಿಸದೆ ಇರಬಹುದು. ಇದನ್ನು ಸಂವಿಧಾನ ರೂಪಿಸಿದವರು ಗುರುತಿಸಿದ್ದರು. ಹಾಗಾಗಿಯೇ ಅವರು ‘ಉದಾರವಾದ, ಸಮಾನತೆ, ಭ್ರಾತೃತ್ವ, ಎಲ್ಲರಿಗೂ ನ್ಯಾಯ’ ಎನ್ನುವ ಆಶಯಗಳನ್ನು ಒಳಗೊಂಡ, ‘ವೈಯಕ್ತಿಕ ಘನತೆ ಹಾಗೂ ಮಾನವ ಸ್ವಾತಂತ್ರ್ಯ’ದ ಪರಿಕಲ್ಪನೆಯನ್ನು ಅಡಕವಾಗಿಸಿಕೊಂಡ ‘ಸಾಂವಿಧಾನಿಕ ನೈತಿಕತೆ’ ಎಂಬ ಪರಿಲ್ಪನೆಯ ಮೊರೆ ಹೋದರು.

ಬ್ರಿಟಿಷ್ ಇತಿಹಾಸಕಾರ ಜಾರ್ಜ್‌ ಗ್ರೋಟ್ ಮತ್ತು ಅಂಬೇಡ್ಕರ್ ಹೇಳಿದ ಸಾಂವಿಧಾನಿಕ ನೈತಿಕತೆಯು ಇನ್ನೊಬ್ಬರ ನಂಬಿಕೆ ಹಾಗೂ ದೃಷ್ಟಿಕೋನಗಳನ್ನು ಅರ್ಥ ಮಾಡಿಕೊಳ್ಳುವ ಸಂದರ್ಭದಲ್ಲಿ ವ್ಯಕ್ತಿ ತನ್ನ ನಂಬಿಕೆಯಿಂದ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳುತ್ತದೆ. ಅಂಬೇಡ್ಕರ್ ಅವರು 1952ರಲ್ಲಿ ಮಾಡಿದ ಭಾಷಣದಲ್ಲಿ ಸಂವಿಧಾನದ ಆಶಯಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಸುಪ್ರೀಂ ಕೋರ್ಟ್‌ ಮತ್ತು ಅಲ್ಲಿನ ನ್ಯಾಯಮೂರ್ತಿಗಳು ಕಾನೂನನ್ನು ವ್ಯಾಖ್ಯಾನಿಸುವ ಮೂಲಕ ಅಂಬೇಡ್ಕರ್ ಉಲ್ಲೇಖಿಸಿದ್ದ ಆಶಯಗಳು ಕ್ರಿಯಾರೂಪಕ್ಕೆ ಬರುವಂತೆ ಮಾಡಿದ್ದಾರೆ– ಸಾಮಾಜಿಕ ಮತ್ತು ಮಾನವ ಘನತೆಯನ್ನು ಎತ್ತಿಹಿಡಿಯುವ ಕೆಲಸ ಮಾಡಿದ್ದಾರೆ.

ಸಲಿಂಗ ಕಾಮವನ್ನು ಅಪರಾಧ ಎಂದು ಪರಿಗಣಿಸುವ ಕಾನೂನನ್ನು ಅಸಿಂಧುಗೊಳಿಸಿದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌, ಸಂವಿಧಾನದ 14, 19(1)(ಎ) ಮತ್ತು 21ನೇ ವಿಧಿಗಳನ್ನು ವ್ಯಾಖ್ಯಾನಿಸಿತು. ಹಾಗೆ ಮಾಡುವ ಸಂದರ್ಭದಲ್ಲಿ, ಬದಲಾಗುತ್ತಿರುವ ಸಮಾಜದ ಆಕಾಂಕ್ಷೆಗಳು ಏನು ಎಂಬುದನ್ನು ಪರೀಕ್ಷೆಗೆ ಒಳಪಡಿಸಿತು. ಸಂವಿಧಾನ ರಚನೆ ಆದಾಗ ಹೇಗಿತ್ತು, ಕಾಲ ಬದಲಾದಂತೆ ಸಮಾಜದ ಅಗತ್ಯಗಳೂ ಬದಲಾಗುತ್ತವೆ, ಆಗ ಸಂವಿಧಾನ ಕೊಟ್ಟಿರುವ ಸ್ವಾತಂತ್ರ್ಯಗಳನ್ನು ಪುನರ್‌ ಪರಿಶೀಲನೆಗೆ ಒಳಪಡಿಸಬೇಕಾಗುತ್ತದೆ ಎಂಬ ಮುನ್ನೋಟ ಸಂವಿಧಾನದಲ್ಲೇ ಅಡಕವಾಗಿರುವುದನ್ನು ಕಂಡುಕೊಂಡಿತು.

ಸಮಾಜದ ಕಟ್ಟುಪಾಡುಗಳಲ್ಲಿ ಆದ ಬದಲಾವಣೆಗಳು, ಸಮಾಜದ ಚಲನಶೀಲ ಮನೋಧರ್ಮ, ಸಮಾಜದ ಅಗತ್ಯಗಳು ನಿರಂತರವಾಗಿ ಬದಲಾಗುತ್ತಿರುವುದು, ತಾಂತ್ರಿಕ ಮತ್ತು ಶೈಕ್ಷಣಿಕ ಪ್ರಗತಿಯಿಂದ ಸಾಂಸ್ಕೃತಿಕ ಮೌಲ್ಯಗಳು ಹಾಗೂ ಸಾಮಾಜಿಕ ಆಚರಣೆಗಳ ಬಗ್ಗೆ ಜನರ ದೃಷ್ಟಿಕೋನ ಬದಲಾಗುತ್ತಿರುವುದು... ಇಂಥವೆಲ್ಲವುಗಳನ್ನು ಗಮನಿಸಿ ಶಾಸಕಾಂಗವು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 377ನ್ನು ತಿದ್ದುಪಡಿಗೆ ಒಳಪಡಿಸಿದ್ದಿದ್ದರೆ, ಲಿಂಗ ತಾರತಮ್ಯಕ್ಕೆ ಕಾರಣವಾಗುವ ಅಂಶಗಳನ್ನು ತೆಗೆದುಹಾಕಿದ್ದರೆ, ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶ ಮಾಡುವ ಅಗತ್ಯವೇ ಇರುತ್ತಿರಲಿಲ್ಲ.

ಆದರೆ, ಅಂತಹ ಬೆಳವಣಿಗೆ ಆಗದ ಕಾರಣ ಸುಪ್ರೀಂ ಕೋರ್ಟ್‌ ‘ಸಾಂವಿಧಾನಿಕ ನೈತಿಕತೆ’ಯ ತತ್ವವನ್ನು ನೆಚ್ಚಿಕೊಳ್ಳಬೇಕಾಯಿತು. ಆ ಮೂಲಕ ಎಲ್ಲರಿಗೂ ಸಮಾನ ಸ್ವಾತಂತ್ರ್ಯ, ಎಲ್ಲರಿಗೂ ತಾರತಮ್ಯ ಮುಕ್ತ ಜೀವನ ಎಂಬ ಸಾಂವಿಧಾನಿಕ ಆಶಯಗಳನ್ನು ಈಡೇರಿಸಲು ಹೆಜ್ಜೆ ಇರಿಸಬೇಕಾಯಿತು. ಹಾಗೆಯೇ, ಶಬರಿಮಲೆ ದೇವಸ್ಥಾನದ ವಿಚಾರದಲ್ಲೂ ಮಧ್ಯಪ್ರವೇಶ ಮಾಡಬೇಕಾಯಿತು.

ದೇಶ ಮುಂದುವರಿದಂತೆ ‘ಸಾಂವಿಧಾನಿಕ ನೈತಿಕತೆ’ ಎಂಬ ಪರಿಕಲ್ಪನೆ ಪರೀಕ್ಷೆಗೆ ಒಳಗಾಗಬೇಕು. ದೇಶದ ಸಮಸ್ತರ ಇಚ್ಛೆಯನ್ನು ಒಳಗೊಂಡಿರುವ ಗ್ರಂಥ ನಮ್ಮ ಸಂವಿಧಾನ ಆಗಿರುವ ಕಾರಣ, ಸಂವಿಧಾನವನ್ನು ವ್ಯಾಖ್ಯಾನಿಸುವಾಗ ಅದರಲ್ಲಿ ಹೇಳಿರುವ ಮೌಲ್ಯಗಳನ್ನು ನಿರ್ಲಕ್ಷಿಸಲಾಗದು. ಸಂವಿಧಾನದಲ್ಲಿ ಹೇಳಿರುವ ಹಕ್ಕುಗಳನ್ನು ಅರ್ಥಗರ್ಭಿತವಾಗಿ ವಿಸ್ತರಿಸಿದ್ದು ನ್ಯಾಯಾಂಗದ ಅತಿದೊಡ್ಡ ಕೊಡುಗೆಗಳಲ್ಲಿ ಒಂದು. ಆದರೆ ‘ಸಾಂವಿಧಾನಿಕ ನೈತಿಕತೆ’ಯ ತತ್ವವು ‘ಜನರ ಇಚ್ಛೆಯು ಸಂವಿಧಾನದ ಆಶಯವನ್ನೇ ನುಂಗಿಹಾಕುವ’ ಸ್ಥಿತಿಯ ಬಗ್ಗೆ ಊಹಿಸಿಲ್ಲ. ಹಾಗಾಗಿ, ಮೇಲೆ ಉಲ್ಲೇಖಿಸಿದ ಎರಡು ತೀರ್ಪುಗಳು ಕೋರ್ಟ್‌ ಸಾಧಿಸಿದ ಸಮತೋಲನಕ್ಕೆ ಉತ್ತಮ ಉದಾಹರಣೆಗಳು.

ಮೇಲೆ ಉಲ್ಲೇಖಿಸಿದ ಎರಡು ತೀರ್ಪುಗಳ ಸಾಮಾಜಿಕ ಪರಿಣಾಮಗಳು ದೊಡ್ಡದಿವೆ. ಆದರೂ ‘ಸಾಂವಿಧಾನಿಕ ನೈತಿಕತೆ’ ಎಂಬ ಪರಿಕಲ್ಪನೆಯ ವಿಚಾರದಲ್ಲಿ ಎಚ್ಚರಿಕೆಯ ಒಂದು ಮಾತನ್ನು ಉಲ್ಲೇಖಿಸಬೇಕಾಗುತ್ತದೆ. ಏಕೆಂದರೆ ಈ ಪರಿಕಲ್ಪನೆ ವಸ್ತುನಿಷ್ಠ ಅಲ್ಲ. ಸಂವಿಧಾನದ ಮೂಲ ಆಶಯ ಹಾಗೂ ಮೂಲಭೂತ ತತ್ವಗಳನ್ನು ವ್ಯಾಖ್ಯಾನಕ್ಕೆ ಒಳಪಡಿಸುವಾಗ ಅತ್ಯಂತ ಹೆಚ್ಚಿನ ಎಚ್ಚರಿಕೆ ಬೇಕು. ಇಲ್ಲವಾದರೆ, ‘ಸುಪ್ರೀಂ ಕೋರ್ಟ್‌ ಎಂಬುದು ಸಂಸತ್ತಿನ ಮೂರನೆಯ ಮನೆ ಆಗಬಹುದು’ (ಮೇಲ್ಮನೆ ಮತ್ತು ಕೆಳಮನೆ ಎಂಬ ಎರಡು ಮನೆಗಳು ಇರುವಂತೆ) ಎಂದು ಪಂಡಿತ್ ಜವಾಹರಲಾಲ್ ನೆಹರೂ ಅವರು ಹೊಂದಿದ್ದ ಆತಂಕ ನಿಜವಾಗಿಬಿಡಬಹುದು!

ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್ ಮಿಶ್ರಾ ಆಡಿದ್ದ ಮಾತೊಂದನ್ನು ಇಲ್ಲಿ ಉಲ್ಲೇಖಿಸಬಹುದು. ‘ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದಂತಹ ಉದಾತ್ತ ಆಶಯಗಳನ್ನು ಹೊಂದಿರುವ ಸಂವಿಧಾನದ ಪೀಠಿಕೆಯಲ್ಲಿ ಇರುವ ಗುರಿಗಳನ್ನು ತಲುಪಲು ಸಾಂವಿಧಾನಿಕ ನೈತಿಕತೆಯ ತತ್ವಗಳಿಗೆ ಪ್ರಭುತ್ವದ ಅಂಗಗಳು ಬದ್ಧತೆ ತೋರಿಸಬೇಕಾಗುತ್ತದೆ’.

ಲೇಖಕಿ: ಕರ್ನಾಟಕ ಹೈಕೋರ್ಟ್‌ನಲ್ಲಿ ವಕೀಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT