ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ, ಸಾಲ ಮತ್ತು ರೈತರ ಆತ್ಮಹತ್ಯೆ

ಸುಧಾರಿತ ಕೃಷಿ, ವೈಜ್ಞಾನಿಕ ಬೆಲೆ, ಸಮರ್ಪಕ ಮಾರುಕಟ್ಟೆಯೇ ಪರಿಹಾರ
Last Updated 22 ಜನವರಿ 2019, 20:00 IST
ಅಕ್ಷರ ಗಾತ್ರ

ಮೊನ್ನೆ ಊರಿಗೆ ಹೋದಾಗ ನನ್ನ ಸೋದರ ‘ಕಳೆದ ಬಾರಿಯ ಕಬ್ಬಿನ ಬಿಲ್ಲು ಇನ್ನೂ ಬಂದಿಲ್ಲ, ಹಣದ ತಾಪತ್ರಯ ಬಹಳ ಇದೆ. ಆಳುಗಳಿಗೆ ಕೂಲಿ ಕೊಡಲು ದುಡ್ಡಿಲ್ಲ. ಅದಕ್ಕೇ ಈ ಬಾರಿ ಮಹಾರಾಷ್ಟ್ರಕ್ಕೆ ಕಬ್ಬು ಕಳಿಸುತಿದೀನಿ’ ಅಂದ. ಹೌದು, ಬಹಳಷ್ಟು ರೈತರದ್ದು ಇದೇ ಹಣೆಬರಹ.

ಈಚೆಗೆ ಬೆಳಗಾವಿಯಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ ನಡೆದಾಗ, ಕಬ್ಬು ಬೆಳೆಗಾರರ ಆಂದೋಲನಗಳು ದೊಡ್ಡ ಪ್ರಮಾಣದಲ್ಲಿ ನಡೆದವು. ಆಳುವವರು ಮತ್ತು ಚಳವಳಿಗಾರರ ಮಧ್ಯೆ ಬಿರುಸಿನ ಆರೋಪ, ಪ್ರತ್ಯಾರೋಪಗಳ ಸುರಿಮಳೆಯೇ ಆಯಿತು. ರೈತ ಹೋರಾಟಗಾರರು ಮತ್ತು ಸರ್ಕಾರದ ಪಾತಳಿಯಲ್ಲಿ ಏನೆಲ್ಲ ಘಟನೆಗಳು ನಡೆದು ಪ್ರಕರಣಗಳು ಇತ್ಯರ್ಥ(?)ವಾದಂತಾಗಿ ಎಲ್ಲವೂ ತಣ್ಣಗಾದವು. ಮತ್ತೆ ಯಥಾಸ್ಥಿತಿ ಮುಂದುವರೆಯಿತು.

ಯಾವುದೂ ಬದಲಾಗಲಿಲ್ಲ. ರೈತನ ಸಂಕಷ್ಟದ ಅದೇ ಕುಂಡಿಹೊಸೆವ ಬದುಕು. ಮತ್ತೆ ಅದೇ ಬಗೆಯ ಎಲ್ಲೋ ಸಾಲಸೋಲ. ಸಾಹುಕಾರರಿಗೆ ಬಡ್ಡಿ ಕೊಟ್ಟು ಹಣ ತಂದು ರೈತಾಪಿ ಚಟುವಟಿಕೆಗಳನ್ನು ಪೂರೈಸಿಕೊಳ್ಳುವುದು. ಸಾಲ–ಬಡ್ಡಿ ತೀರಿಸುವುದಕ್ಕೆ ಅನ್ನ, ನೀರು ಬಿಟ್ಟು, ನಿದ್ದೆಗೆಟ್ಟು ಒದ್ದಾಡುವುದು. ಅದು ತೀರದಿರಲು ಸಂತಾಪಗೊಂಡು ಒಂದಿನ ನೇಣಿಗೋ, ವಿಷಕ್ಕೋ ಶರಣಾಗಿ ಬದುಕಿಗೆ ಕೊನೆ ಹೇಳುವುದು. ಅದೇ ಮಾಮೂಲಿನಂತೆ ರಾಜಕಾರಣಿಗಳ ಹೇಳಿಕೆ, ಪರಿಹಾರ. ಇದು ರೈತಾಪಿ ಬದುಕಿನ ಆಖ್ಯಾನ!

ಕಬ್ಬು ಕಾರ್ಖಾನೆಗಳ (ಖಾಸಗಿಯಾಗಿರಲೀ, ಸಹಕಾರಿಯಾಗಿರಲೀ) ಒಡೆಯರು ಈ ದಿಶೆಯಲ್ಲಿ ಪಕ್ಷಾತೀತರು. ಒಂದೇ ಮಾಲೆಯ ಹೂಗಳು. ಒಂದೊಮ್ಮೆ ಮಹಾರಾಷ್ಟ್ರದ ನಡುವಯಸ್ಸಿನ ರೈತ ಟಿ.ವಿಯಲ್ಲಿ ಹೇಳುತ್ತಿದ್ದ. ಆತನ ಜಮೀನು ಒಣ ಬೇಸಾಯದ್ದು. ‘ಮಳೆ ಬಂದರೆ ಮಾತ್ರ ಬೆಳೆ. ಇಲ್ಲದಿದ್ದರೆ ಗುಳೆ’. ಬೆಳೆ ಕಂಡಾಗ ವರ್ಷಕ್ಕೆ ₹ 30 ಸಾವಿರವೋ 35 ಸಾವಿರವೋ ಮಾತ್ರ ಗಳಿಸಲು ಸಾಧ್ಯ. ಅದು ಸಹ ದೊರೆತರೆ ಪುಣ್ಯ! ಅದರಲ್ಲಿ ಖರ್ಚುವೆಚ್ಚ ಬೇರೆ. ನಮ್ಮ ಸಣ್ಣ ಹಿಡುವಳಿದಾರರ ಇಂದಿನ ಸ್ಥಿತಿ ಇದು.

ಎಂಬತ್ತರ ದಶಕದಲ್ಲಿ ಆರ್ಥಿಕ ತಜ್ಞ ಡಾ. ಡಿ.ಎಂ.ನಂಜುಂಡಪ್ಪ ಅವರು ಕೃಷಿಗೆ ಸಂಬಂಧಿಸಿದ ನೀತಿಯೊಂದನ್ನು ಹೀಗೆ ಹೇಳಿದ್ದರು. ‘ಕೃಷಿಯ ಉತ್ಪನ್ನಕ್ಕೆ ಸರಿಯಾದ ಬೆಲೆ ಸಿಗದೇ ರೈತ ಅತ್ಯಂತ ದೊಡ್ಡ ಸಮಸ್ಯೆಯನ್ನು ಎದುರಿಸುತ್ತಿದ್ದಾನೆ. ರೈತನ ಬೆಳೆಗೆ ಸರ್ಕಾರ ಸರಿಯಾದ ಬೆಲೆಯನ್ನು ನೀಡಿದಲ್ಲಿ ಆತ ಸರ್ಕಾರದಿಂದ ಬೇರೆ ಏನನ್ನೂ ನಿರೀಕ್ಷಿಸಲಾರ. ಹಾಗಾಗಿ ರೈತ ಸಂಬಂಧಿ ಮಾರುಕಟ್ಟೆಯನ್ನು ಗಟ್ಟಿಗೊಳಿಸಬೇಕು...’ ಇದನ್ನು ನಮ್ಮ ಯಾವ ಸರ್ಕಾರಗಳೂ ಗಂಭೀರವಾಗಿ ಪರಿಗಣಿಸಿದಂತಿಲ್ಲ. ಸರ್ವಪಕ್ಷಗಳ ಚುನಾವಣೆಯ ಪ್ರಣಾಳಿಕೆಯಲ್ಲಿ ಮಾತ್ರ ರೈತರ ಸಾಲಮನ್ನಾ ಪ್ರಧಾನವಾಗಿರುತ್ತದೆ. ಸಾಲಮನ್ನಾ ಮಾಡುವುದು ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರವಲ್ಲ ಎಂಬುದರ ಸರ್ವವಿದಿತ ಸತ್ಯವನ್ನು ಅರಿಯಬೇಕು.

ಎರಡು–ಮೂರು ದಶಕಗಳ ಹಿಂದೆ ಈ ಪರಿಸ್ಥಿತಿ ಇರಲಿಲ್ಲ. ಅಂದಿನ ದೈನಂದಿನ ಬದುಕಿನ ಬೇಡಿಕೆಗಳು ಸೀಮಿತವಾಗಿದ್ದವು. ಇವತ್ತಿನ ಮಾರುಕಟ್ಟೆ ಹಸಿವಿನ ಹಪಹಪಿ ಆಗ ಇಷ್ಟೊಂದಿರಲಿಲ್ಲ. ಆರ್ಥಿಕ ಬೆಳೆಗಳಾದ ಕಬ್ಬು, ಬಾಳೆ, ತಂಬಾಕು ಇತ್ಯಾದಿಗಳ ಜೊತೆಗೆ ಆತನ ಪ್ರತಿನಿತ್ಯದ ಅಗತ್ಯ ಪೂರೈಕೆಯ ದವಸಧಾನ್ಯಗಳಾದ ಜೋಳ, ಗೋಧಿ, ರಾಗಿ, ಭತ್ತ, ನೆಲಗಡಲೆ, ಮೆಣಸಿನಕಾಯಿ, ತರಕಾರಿಗಳನ್ನು ಬೆಳೆಯುತ್ತಿದ್ದ. ಅವುಗಳನ್ನು ತನ್ನ ಆರ್ಥಿಕ ಅಡಚಣೆಗಳಿಗೆ ಅನುಗುಣವಾಗಿ ಮಾರುತ್ತಿದ್ದ. ಬೆಲ್ಲದ ಪೇಟೆಯಿಂದ ಸರಿಯಾಗಿ ಹಣ ಬರುತ್ತಿತ್ತು. ಹೈನು ಕೊಂಚ ಕೈ ಹಿಡಿಯುವುದರ ಜೊತೆಗೆ ಎತ್ತುಗಳನ್ನು ಹೊಲಗದ್ದೆಗಳಲ್ಲಿ ದುಡಿಸುವುದರಿಂದ, ಬಾಡಿಗೆ ರೂಪದಲ್ಲಿ ಚಕ್ಕಡಿಯ ಬಳಕೆ ಆಗುತ್ತಿತ್ತು. ಹಾಗೆಯೇ ಆತನ ಡಿಮ್ಯಾಂಡುಗಳು ಸಹ ಅತ್ಯಂತ ಸರಳ, ಸೀದಾ-ಸಾದಾ ಸ್ವರೂಪದವು. ಮನೆಗೊಂದು ಸೈಕಲ್ಲು ಮತ್ತು ರೇಡಿಯೊ ಅಂದರೆ ದೊಡ್ಡದು. ಸಾಲವು ತೀರಾ ಕಡಿಮೆ ಪ್ರಮಾಣದಲ್ಲಿತ್ತು. ಹೀಗಾಗಿ ‘ರೈತನ ಆತ್ಮಹತ್ಯೆ’ ಎಂಬ ಪಿಡುಗು ಈಗಿನಂತೆ ಇರಲಿಲ್ಲ.

ಆದರೆ ತೊಂಬತ್ತರ ದಶಕದ ನಂತರ ಎಲ್ಲವೂ ಬದಲಾಯಿತು. ಒಂದೇ ರಭಸಕ್ಕೆ ಜಾಗತಿಕ ಮಾರುಕಟ್ಟೆ ಸರ್ವ ರಂಗಗಳನ್ನೂ ಆವರಿಸಿತು. ಕೃಷಿ ಅದಕ್ಕೆ ಹೊರತಲ್ಲ. ಅದು ಭಿನ್ನ ಭಿನ್ನ ಕಾರಣಗಳಿಂದ ಪ್ರಭಾವಕ್ಕೆ ಮತ್ತು ದುರ್ಲಕ್ಷ್ಯಕ್ಕೆ ಒಳಗಾಯಿತು. ಮೂವತ್ತು ವರ್ಷಗಳ ಹಿಂದಿನ ಒಟ್ಟು ಬದುಕಿನ ಶೈಲಿಯು ತನ್ನ ಇರುವಿಕೆಯನ್ನು ಬದಲಿಸಿತು. ರೈತನಷ್ಟೇ ಅಲ್ಲ, ಜೋಪಡಿಗಳಲ್ಲಿರುವವರ ಜೀವನ ಶೈಲಿಯೂ ಬದಲುಗೊಂಡಿತು. ಯಾವ ರೈತ-ಕೂಲಿಯ ಮನೆಯಲ್ಲಿ ಸೈಕಲ್ಲು, ರೇಡಿಯೊ ಇರುತ್ತಿತ್ತೋ ಆ ಜಾಗದಲ್ಲಿ ಟಿ.ವಿ ಮತ್ತು ಬೈಕುಗಳು ಕಾಣಿಸಿಕೊಂಡವು. ನೀರಾವರಿ ಪ್ರದೇಶದಲ್ಲಿ ಈ ಪ್ರವೃತ್ತಿ ಇನ್ನಷ್ಟು ಹೆಚ್ಚು. ಇಲ್ಲಿ ಒಂದು ಪ್ರಶ್ನೆ ಹುಟ್ಟಿಕೊಳ್ಳುತ್ತದೆ.
‘ಉಳಿದವರೆಲ್ಲ ಅನುಭೋಗಿಸುವಾಗ ಅವರೂ ಈ ಸವಲತ್ತುಗಳನ್ನು ಹೊಂದಬಾರದೇ’ ಎಂಬುದೇ ಆ ಪ್ರಶ್ನೆ.

ಅಷ್ಟೊತ್ತಿಗೆ ರೈತ ಅಥವಾ ಸಾಮಾನ್ಯನಿಗೆ ಸಾಲ ಕೊಡುವ ಸಂಸ್ಥೆಗಳು ಹುಟ್ಟಿಕೊಂಡಿದ್ದವು. ಬ್ಯಾಂಕುಗಳೊಟ್ಟಿಗೆ ಸಹಕಾರಿ ಕ್ರೆಡಿಟ್ ಸೊಸೈಟಿಗಳು ತಲೆ ಎತ್ತಿದವು. ಅವು ಬಹು ದೊಡ್ಡ ಪ್ರಮಾಣದಲ್ಲಿ ನಾಯಿ ಕೊಡೆಗಳಂತೆ ಉತ್ತರ ಕರ್ನಾಟಕ ಭಾಗದಲ್ಲಿ ಜನ್ಮತಾಳಿದವು. ಅವುಗಳೋ ರಾಜಕೀಯ ಪಕ್ಷಗಳ ಹಿರಿಕಿರಿ ಪುಢಾರಿಗಳದ್ದೇ ಆಗಿರುವುದೊಂದು ವಿಶೇಷ. ಅದಕ್ಕೆ ಬೇರೆಯದೇ ಆರ್ಥಿಕ ಕಾರಣಗಳುಂಟು. ಅವುಗಳ ಮೇಲೆ ಆರ್‌ಬಿಐನ ಹಿಡಿತ ಎಷ್ಟಿದೆ ಎಂಬುದು ಗೊತ್ತಿಲ್ಲ. ಆದರೆ ಸರ್ಕಾರದ ಆಡಿಟ್‍ಗೆ ಒಳಪಡುವ ಸಂಸ್ಥೆಗಳಾಗಿರುವುದರಿಂದ ಮತ್ತು ಸಕಾರಾತ್ಮಕವಾಗಿ ಮುನ್ನಡೆಸುವವರಿಂದ ಆರ್ಥಿಕ ಸಮಸ್ಯೆ ಇರುವವರಿಗೆ ಅನುಕೂಲವೇ ಆಗಿದೆ. ಆದರೆ ಈ ಬಗೆಯ ಕೆಲವು ಸೊಸೈಟಿಗಳು ದುರ್ಮಾರ್ಗ ಹಿಡಿದು ರೈತರ, ಬಡವರ, ಕೂಲಿ-ಕಾರ್ಮಿಕರ ಠೇವಣಿ ಹಣವನ್ನು ‘ಅಪಹರಿಸಿದ’ ಉದಾಹರಣೆಗಳೂ ನಮ್ಮೆದುರು ಇವೆ. ನೋಟು ರದ್ದತಿ ಮತ್ತು ಜಿಎಸ್‍ಟಿ ಕೂಡ ನಮ್ಮ ಅರ್ಥ ವ್ಯವಸ್ಥೆಯನ್ನು ಬುಡಮೇಲು ಮಾಡಿವೆ ಎನ್ನುತ್ತಾರೆ ಆರ್ಥಿಕ ತಜ್ಞರು. ಮೊನ್ನೆ ಒಬ್ಬ ಚಿಕ್ಕ ಉದ್ಯಮಿ ಮಾತಿಗೆ ಸಿಕ್ಕಿದ್ದರು. ‘ಇವತ್ತು ದುಡ್ಡು, ರಾಜಕಾರಣಿಗಳು ಮತ್ತು ದೊಡ್ಡ ಉದ್ಯಮಿಗಳ ಬಳಿ ಮಾತ್ರ ಇದೆ’ ಎಂದರು. ಇದು ಯೋಚಿಸಬೇಕಾದ ಸಂಗತಿ.

ರೈತರ ಆತ್ಮಹತ್ಯೆಗೆ ಕಾರಣಗಳನ್ನು ಹುಡುಕುವಾಗ ಬೇಡಕಿಹಾಳದ ಸಾವಯವ ಕೃಷಿ ತಜ್ಞ ಸುರೇಶ ದೇಸಾಯಿ ಅವರ ಮಾತುಗಳು ಮುಖ್ಯವೆನಿಸುತ್ತವೆ- ‘ತಪ್ಪು ಬೆಳೆ ಪದ್ಧತಿ ಮೂಲಕ ರೈತನ ಸಮಸ್ಯೆಗಳು ಉಲ್ಬಣಿಸಿವೆ. ಮಿಶ್ರ ಬೆಳೆ ಪದ್ಧತಿಯನ್ನು ರೂಢಿಸಿಕೊಳ್ಳುವುದರಿಂದ ಇಂಥ ಮೂಲ ಸಮಸ್ಯೆಗಳಿಗೆ ಪರಿಹಾರ ಕಾಣಲು ಸಾಧ್ಯ. ತನ್ನ ಬೆಳೆಯನ್ನು ತನ್ನದೇ ನಿಗದಿಯಾದ ಬೆಲೆಗೆ ಮಾರುವ ಸ್ವಾಭಿಮಾನ ರೂಢಿಸಿಕೊಳ್ಳಬೇಕು. ಈಗ ಅತಿಯಾದ ನೀರಿನ ಬಳಕೆ ಹಾಗೂ ಏಕಬೆಳೆ ಮೂಲಕ ಭೂಮಿಯನ್ನು ಸವಳು ಮಾಡಿದ್ದೇವೆ. ಹಾಗಾಗಿ ಬೆಳೆಗೆ ಪೋಷಕಾಂಶದ ಕೊರತೆಯಾಗಿ ಕೀಟಬಾಧೆ, ರೋಗಬಾಧೆ ಹೆಚ್ಚಾಗಿವೆ. ಇದರಿಂದ ಫಲವತ್ತತೆ ಕಡಿಮೆಯಾಗಿದೆ’. ಸುರೇಶ ದೇಸಾಯಿಯವರ ಸುಧಾರಿತ ಕೃಷಿ ಪದ್ಧತಿಯ ಪ್ಯಾಕೇಜ್ ಇಂದು ಪಂಜಾಬಿನಲ್ಲಿ ಜನಪ್ರಿಯಗೊಂಡಿದೆ. ಅದರ ಸಾಧಕ–ಬಾಧಕ ಕುರಿತು ಅಧ್ಯಯನ ಮಾಡುವುದು ಅಗತ್ಯ. ಅಲ್ಲದೇ, ನಮ್ಮ ಹಿರಿಯರು ಹಿಂದೆ ರೂಢಿಸಿಕೊಂಡಿದ್ದಂತೆ, ಆರ್ಥಿಕ ಬೆಳೆ ಜೊತೆಗೆ ದವಸಧಾನ್ಯ ಮತ್ತು ತರಕಾರಿಗಳ ಮಿಶ್ರಬೆಳೆ ಪದ್ಧತಿ ಅನುಸರಿಸುವ ಅಗತ್ಯವನ್ನೂ ಮನಗಾಣಬೇಕಿದೆ.

ಲೇಖಕ: ಪ್ರಾಧ್ಯಾಪಕ, ಭಾವುರಾವ ಕಾಕತಕರ ಕಾಲೇಜು, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT