ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಯಶಸ್ವಿ ಶಿಕ್ಷಣ: ಭಿನ್ನ ಭಿನ್ನ ಹೂರಣ

ಮೂಲಭೂತ ಅಗತ್ಯಗಳ ಸಮಗ್ರ ಶೈಕ್ಷಣಿಕ ಯೋಜನೆ ರೂಪಿಸಬೇಕಾದ ಅಗತ್ಯವಿದೆ
Published 5 ಆಗಸ್ಟ್ 2023, 0:26 IST
Last Updated 5 ಆಗಸ್ಟ್ 2023, 0:26 IST
ಅಕ್ಷರ ಗಾತ್ರ

ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಹೊಸ ಹೊಸ ಆಲೋಚನೆಗಳು, ನೀತಿಗಳು, ಯೋಜನೆಗಳು ಬರುತ್ತಿದ್ದ ಹಾಗೆಲ್ಲ ಶಿಕ್ಷಣದ ಮೂಲಭೂತ ಅಗತ್ಯಗಳ‌ ಪರಿಕಲ್ಪನೆಯೇ ಹೊರಟು ಹೋಗುತ್ತಿದೆಯೇ ಎಂದು ಅನಿಸುತ್ತಿದೆ. ಎಲ್ಲಿ, ಏನು, ಏಕೆ, ಹೇಗೆ, ಯಾವಾಗ- ಇವು ಯಾವುದೇ ಕೆಲಸದೊಂದಿಗೆ ಇರಲೇಬೇಕಾದ ಉತ್ತರವನ್ನು ಬಯಸುವ ಪ್ರಶ್ನೆಗಳಾಗಿವೆ. ನಮ್ಮ‌ ಶೈಕ್ಷಣಿಕ ಸನ್ನಿವೇಶಗಳಲ್ಲಿ ಹಳೆಯ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳದೆಯೇ ಹೊಸದನ್ನು ಸೇರಿಸುತ್ತಾ ಹೋಗುವ ಒಂದು ಪ್ರಕ್ರಿಯೆ ನಡೆಯುತ್ತಿದೆ. ಆಗ, ಬೆಳೆದದ್ದು ಅಗಾಧವಾಗಿ ಬೆಳೆಯಿತು, ಉಳಿದದ್ದು ಹಾಗೆಯೇ ಉಳಿಯಿತು ಎನ್ನುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ದಿಸೆಯಲ್ಲಿ ಪ್ರತಿಯೊಂದು ಶಾಲೆಯಲ್ಲೂ ಇರಲೇಬೇಕಾದ ಮೂಲಭೂತ ಅಗತ್ಯಗಳ ಕುರಿತಾಗಿ ಮರು ಅವಲೋಕನ ನಡೆಸಬೇಕಾಗುತ್ತದೆ.

ಬಿಸಿಲು ಮತ್ತು ಮಳೆ ಎರಡನ್ನೂ ತಡೆದುಕೊಳ್ಳಬಲ್ಲ ಕಟ್ಟಡ, ಅಗತ್ಯ ಪೀಠೋಪಕರಣಗಳು, ಪಾಠೋಪಕರಣಗಳು, ಕ್ರೀಡಾ ಉಪಕರಣಗಳು, ಪ್ರಯೋಗಾಲಯ ಸಾಧನಗಳು, ಸಣ್ಣದಾದರೂ ಒಂದು ಗ್ರಂಥಾಲಯ, ವ್ಯವಸ್ಥಿತ ಶೌಚಾಲಯ, ವಿಶಾಲವಾದ ಆಟದ ಮೈದಾನ, ಶುದ್ಧ ಕುಡಿಯುವ ನೀರಿನ ಪೂರೈಕೆ, ವಿದ್ಯುತ್ ಸಂಪರ್ಕ, ಗಾಳಿ- ಬೆಳಕು ಚೆನ್ನಾಗಿರುವ ಕೊಠಡಿಗಳು, ಬರೆಯುವ ಹಲಗೆ- ಇವಿಷ್ಟು ಶಾಲೆಯ ಮೂಲ ಭೌತಿಕ ಅಗತ್ಯಗಳಾಗಿವೆ.

ಶಿಕ್ಷಣವೆಂದರೇನೆ ಬೌದ್ಧಿಕ ಕ್ರಿಯೆಯಾಗಿದೆ. ಆದ್ದರಿಂದ ಅದನ್ನು ನಿರ್ವಹಿಸುವ ಶಿಕ್ಷಕರ ವಿಚಾರ ಅತಿ ಅವಶ್ಯವಾದ ಮೂಲಭೂತ ಶೈಕ್ಷಣಿಕ ಅಗತ್ಯವಾಗಿದೆ. ಅಗತ್ಯವಿರುವಷ್ಟು ಪ್ರಮಾಣದ ಶಿಕ್ಷಕರ ಒದಗಣೆ ಆಗಬೇಕು. ಭೌತಿಕ ಸಂಪನ್ಮೂಲದ ವಿಚಾರ ಬಂದಾಗ ಆಟದ ಮೈದಾನ ಇರುವ ಶಾಲೆಗಳು, ಆಟದ ಮೈದಾನ ಇಲ್ಲದ ಶಾಲೆಗಳು, ಉಪಯೋಗಕ್ಕೇ ಇಲ್ಲದೆ ನಿರ್ವಹಣೆಯ ಹೊಣೆಗಾಗಿ ಇರುವ ಖಾಲಿ ಕೊಠಡಿಗಳ ಶಾಲೆಗಳು- ಕೊಠಡಿಯ ಕೊರತೆ ಇರುವ ಶಾಲೆಗಳು ಎಂದು ಶಾಲೆಗಳ ವರ್ಗೀಕರಣ ಮಾಡಲು ಸಾಧ್ಯವಿರುವ ಹಾಗೆಯೇ ಶಿಕ್ಷಕರಲ್ಲಿ ಸರ್ಕಾರಿ ಶಾಲೆಗಳ ಶಿಕ್ಷಕರು, ಅನುದಾನಿತ ಶಾಲೆಗಳ ಶಿಕ್ಷಕರು, ಅನುದಾನರಹಿತ ಶಾಲೆಗಳ ಶಿಕ್ಷಕರು ಎಂದು ಮೇಲ್ನೋಟಕ್ಕೆ ಕಾಣುವ ವಿಂಗಡಣೆಯ ಆಚೆಗೆ ಇನ್ನೂ ಹಲವು ವಿಂಗಡಣೆಗಳಿವೆ. ಕಾಯಂ ಶಿಕ್ಷಕರು, ಹೊರಗುತ್ತಿಗೆ ಶಿಕ್ಷಕರು, ಅತಿಥಿ ಶಿಕ್ಷಕರು, ದಾನಿಗಳು ನಿಯೋಜಿಸಿದ ಶಿಕ್ಷಕರು- ಹೀಗೆ ತರಹೇವಾರಿ ಭಿನ್ನತೆಗಳಿವೆ.

ಇವು ಬರೀ ಆಡಳಿತಾತ್ಮಕ‌ ಭಿನ್ನತೆಗಳಾದರೆ ಸಮಸ್ಯೆ ಇಲ್ಲ. ಈ ಭಿನ್ನತೆಯ ನಡುವೆ ಅಗಾಧ ತಾರತಮ್ಯಗಳೂ ಇರುತ್ತವೆ. ಮಾಡುವ ಕೆಲಸದಲ್ಲಿ ಯಾವ ವಿನಾಯಿತಿ ಇಲ್ಲದಿದ್ದರೂ ವೇತನದಲ್ಲಿ ಅಪಾರ ಅಂತರವಿದೆ.‌ ಅಕ್ಕಿಗಾಗಿ ಕಾಯಂ ಶಿಕ್ಷಕರಿಗೆ ನಲವತ್ತು ರೂಪಾಯಿ, ಅತಿಥಿ ಶಿಕ್ಷಕರಿಗೆ ನಾಲ್ಕು ರೂಪಾಯಿ ಎಂದು ವ್ಯತ್ಯಾಸ ಇರುತ್ತದೆಯೇ? ಸಮಾನ ಕೆಲಸಕ್ಕೆ ಸಮಾನ ವೇತನ ಎನ್ನುವುದು ನಮ್ಮ ರಾಜ್ಯ ನಿರ್ದೇಶಕ ತತ್ವಗಳ ಸಲಹೆಯಾಗಿದೆ. ಇದನ್ನು ಬರೀ ಕೃಷಿರಂಗದಲ್ಲಿರುವ ಹೆಣ್ಣಾಳು, ಗಂಡಾಳು ಎಂಬ ವರ್ಗೀಕರಣಕ್ಕೆ ಮಾತ್ರ ಸೀಮಿತಗೊಳಿಸಬೇಕಾಗಿಲ್ಲ. ಕೈಗಾರಿಕೆ ಮತ್ತು ಸೇವಾ ರಂಗದಲ್ಲಿರುವ ಆಡಳಿತಾತ್ಮಕ ವ್ಯತ್ಯಾಸಗಳು ಉಂಟು ಮಾಡುತ್ತಿರುವ ವೇತನ ತಾರತಮ್ಯಕ್ಕೂ ಇದನ್ನು ಅನ್ವಯಿಸಬೇಕು.

ಶಿಕ್ಷಕರಿಗೆ ಕನಿಷ್ಠಪಕ್ಷ ಕುಟುಂಬದ ನಿರ್ವಹಣೆ ಮಾಡಲು ಸಾಧ್ಯವಿರುವಷ್ಟು ವೇತನವನ್ನು ಖಾಸಗಿ ಶಾಲೆಗಳಲ್ಲೂ ಕೊಡಬೇಕು.‌ ಕಾರಣವಿಲ್ಲದೆ ಹಿಂದಿನ ವರ್ಷದ ಶಿಕ್ಷಕರನ್ನು ತೆಗೆದು ಹೊಸದಾಗಿ ನೇಮಕ ಮಾಡಿಕೊಳ್ಳುವಂಥದ್ದನ್ನೆಲ್ಲ ಕೈಬಿಡಬೇಕು.

ಶೈಕ್ಷಣಿಕ ರಂಗದಲ್ಲಿ ಇದಕ್ಕೆ ಬಹಳ‌ ಮಹತ್ವವಿದೆ. ಶಿಕ್ಷಣದ ಮೂಲಕ ಸಾಂವಿಧಾನಿಕ ಆಶಯಗಳು ಈಡೇರಬೇಕು, ಸಮಾನತೆ ಬರಬೇಕು ಎಂದೆಲ್ಲ ನಿರೀಕ್ಷೆಗಳಿವೆ. ಮಕ್ಕಳಿಗೆ ಅವರ ಕಣ್ಣೆದುರಿನಲ್ಲಿ ಅವರ ಶಿಕ್ಷಕರಲ್ಲೇ ಅಸಮಾನತೆ ಎದ್ದು ಕಾಣುತ್ತಿದ್ದರೆ, ಸಮಾನತೆಯ ಆಶಯದ ಸಾಧನೆ ಹೇಗೆ ಸಾಧ್ಯ? ಅಲ್ಲದೆ, ಸ್ವತಃ ಅಸಮಾನತೆಯಲ್ಲಿ ಬಳಲುತ್ತಿರುವ ಶಿಕ್ಷಕರು ಸಮಾನತೆ ಸಾಧನೆಯ ಆಕಾಂಕ್ಷೆಯನ್ನು ವಿದ್ಯಾರ್ಥಿಗಳಲ್ಲಿ ಹುಟ್ಟಿಸಲು ಸಾಧ್ಯವೇ?! ಶಿಕ್ಷಕರಲ್ಲಿ ಆತ್ಮವಿಶ್ವಾಸ ಇದ್ದಾಗ ಮಕ್ಕಳಲ್ಲೂ ಅವರು ಆತ್ಮವಿಶ್ವಾಸವನ್ನು ಬೆಳೆಸಬಲ್ಲರು. ಶಿಕ್ಷಕರನ್ನೇ ಆತ್ಮವಿಶ್ವಾಸ ಹೊಂದಿಲ್ಲದಿರುವ ಸ್ಥಿತಿಯಲ್ಲಿ ಇರಿಸಿದರೆ ಮಕ್ಕಳಲ್ಲೂ ಆತ್ಮವಿಶ್ವಾಸ ಬೆಳೆಯಲು ಸಾಧ್ಯವಿಲ್ಲ.

ಶಿಕ್ಷಣದ ಯಶಸ್ಸು ಬರೀ ಶಿಕ್ಷಕರ ಒದಗಣೆಗೆ ಸೀಮಿತವಾಗಿಲ್ಲ. ಶಿಕ್ಷಕರ ಗುಣಮಟ್ಟವನ್ನೂ ಅವಲಂಬಿಸಿದೆ. ಈಗಿನ ದಿನಗಳಲ್ಲಿ ಗುಣಮಟ್ಟದ ಪರಿಕಲ್ಪನೆಯು ಪರೀಕ್ಷೆಯ ಅಂಕಗಳು, ಡಿಜಿಟಲ್ ಮಾಧ್ಯಮಗಳನ್ನು ಅಳವಡಿಸುವುದು, ಸಾಧನೆಯ ದಾಖಲೆಯನ್ನು ಒದಗಿಸುವುದೇ ಮುಂತಾಗಿ ಬೌದ್ಧಿಕ ವಿಚಾರಗಳಿಗೆ ಸೀಮಿತವಾಗುತ್ತಿದೆ.‌ ಶಿಕ್ಷಕರು ವಿದ್ಯಾರ್ಥಿಗಳಿಗೆ ಅನುಕರಣೆಗೆ ಯೋಗ್ಯರಾದ ಚಾರಿತ್ರ್ಯವಂತರಾಗಿ ಇರಬೇಕು ಎಂಬ ಪರಿಕಲ್ಪನೆ ಸಾರ್ವಜನಿಕ ಪ್ರಜ್ಞೆಯಿಂದ ಕಣ್ಮರೆಯಾದ ಸ್ಥಿತಿಯಲ್ಲಿದೆ.‌ ಆದರೆ ಮಕ್ಕಳು ಬೋಧಿಸಿದ್ದನ್ನು ಕಲಿಯುವುದಕ್ಕಿಂತ ಹೆಚ್ಚಾಗಿ ಮಾಡಿದ್ದನ್ನು ನೋಡಿ, ಅನುಕರಿಸಿ ಕಲಿಯುತ್ತಾರೆ. ಅಂದಾಗ ಶಿಕ್ಷಕರ ನಡವಳಿಕೆಗಳು ಮಕ್ಕಳು ಅನುಸರಿಸಲು ಯೋಗ್ಯವಾಗುವ ಹಾಗೆ ಇರಬೇಕು ಎಂಬ ಅಂಶಕ್ಕೆ ಮಹತ್ವವಿರಬೇಕು.‌ ಚಾರಿತ್ರ್ಯವಂತರಾದ ಶಿಕ್ಷಕರು ಶಿಕ್ಷಣ ಕ್ಷೇತ್ರದ ಮೂಲಭೂತ ಅವಶ್ಯಕತೆಗಳಾಗಿದ್ದಾರೆ.

ಶಿಕ್ಷಕರು ಬಹಳಷ್ಟು ವಿಷಯ ಪರಿಣತರಾಗಿದ್ದು ಅದನ್ನು ಮಕ್ಕಳ ಬೌದ್ಧಿಕ ಮಟ್ಟಕ್ಕೆ ಸೂಕ್ತವಾದ ವಿಧಾನದಲ್ಲಿ ವರ್ಗಾಯಿಸಬಲ್ಲವರಾಗಿರಬೇಕು.‌ ಈ ವಿಷಯ ತಜ್ಞತೆಯ ಪ್ರಶ್ನೆ ಬಂದಾಗೆಲ್ಲ ಯುಟ್ಯೂಬಿನಿಂದ ತೆಗೆದು ತೋರಿಸುವುದು, ಪ್ರೊಜೆಕ್ಟರ್ ಹಾಕುವಂತಹ ತಾಂತ್ರಿಕ ಅಂಶಗಳಿಗೆ ಮಹತ್ವ ಬಂದುಬಿಡುತ್ತದೆ. ಇವೆಲ್ಲ ಅವಶ್ಯಕತೆಗೆ ತಕ್ಕಷ್ಟು ಬೇಕು. ಆದರೆ ಈ ರೀತಿಯ ಡಿಜಿಟಲ್ ತಂತ್ರಜ್ಞಾನ ಬಳಕೆಯೊಂದರಿಂದಲೇ ಶಿಕ್ಷಕರನ್ನು ತಜ್ಞರು ಎನ್ನಲಾಗದು.

ಶಿಕ್ಷಕರಿಗೆ ತಮ್ಮ ವಿಷಯದಲ್ಲಿ ಪ್ರಭುತ್ವ ಇರಬೇಕು. ಮನವರಿಕೆ ಮಾಡಿ ಮಾತನಾಡುವ ಸಾಮರ್ಥ್ಯ ಇರಬೇಕು.‌ ಮಕ್ಕಳಿಗೆ ಅರ್ಥಮಾಡಿಸಬಲ್ಲ‌ ಸಾಮರ್ಥ್ಯ ಶಿಕ್ಷಕರಿಗೆ ಇಲ್ಲದಿದ್ದರೆ ಕಲಿಕೆಯ ದಕ್ಷತೆ ಕುಸಿಯುತ್ತದೆ. ಬಹಳಷ್ಟು ಸಂದರ್ಭಗಳಲ್ಲಿ ಅತಿಯಾದ ಡಿಜಿಟಲ್ ತಂತ್ರಜ್ಞಾನದ ಶೈಕ್ಷಣಿಕ ಅನ್ವಯವು ಶಿಕ್ಷಕರನ್ನು ದುರ್ಬಲಗೊಳಿಸುತ್ತದೆ. ಡಿಜಿಟಲ್ ತಂತ್ರಜ್ಞಾನದಿಂದ ಹೊರಬರುವ ಮಾಹಿತಿಗಳು ಆಕರ್ಷಕ ಹೌದು.‌ ಆದರೆ ಅದು ಶಿಕ್ಷಕರ ದಕ್ಷತೆಯಿಂದಲೇ ಉಂಟಾಗುವ ಬೋಧನಾ ಆಕರ್ಷಣೆಯನ್ನು ದುರ್ಬಲಗೊಳಿಸುತ್ತದೆ ಎಂದು ಗೊತ್ತಿರಬೇಕು.‌ ಆದ್ದರಿಂದ ಎಲ್ಲವನ್ನೂ ಡಿಜಿಟಲ್ ಮಾಧ್ಯಮದ ಮೂಲಕ ಮಂಡಿಸುವ ಪರಿಪಾಟ ಹೊಂದಿರುವವರನ್ನು ಮಾತ್ರ ಯಶಸ್ವಿ ಶಿಕ್ಷಕರು ಎಂದು ಭಾವಿಸುವುದನ್ನು ಬಿಡಬೇಕು. ಔಚಿತ್ಯಕ್ಕೆ ತಕ್ಕಂತೆ ಡಿಜಿಟಲ್ ಮಾಧ್ಯಮಗಳನ್ನು ಖಂಡಿತವಾಗಿಯೂ ಬಳಸಬೇಕು.‌ ಜೊತೆಗೆ ಸ್ವಂತ ಸಾಮರ್ಥ್ಯವನ್ನೂ ಬಳಸುವಂತಹ ತಜ್ಞತೆ ಇರುವ ಶಿಕ್ಷಕರು ಅಗತ್ಯವಾಗುತ್ತಾರೆ.

ಸಮರ್ಥ ಶಿಕ್ಷಕರನ್ನು ಆರಿಸಲು ನೇಮಕಾತಿ ಪರೀಕ್ಷೆಗಳನ್ನು ಹೆಚ್ಚಿಸಿ ಉಪಯೋಗವಿಲ್ಲ. ಬದಲಾಗಿ ಶಿಕ್ಷಕರು ಸಮರ್ಥರಾಗಿ ಇರುವಂತಹ ಆಡಳಿತಾತ್ಮಕ ಸನ್ನಿವೇಶವನ್ನು ನಿರ್ಮಿಸಬೇಕಾಗಿದೆ. ಒಂದು ಕಲಿಕಾ ವಿಚಾರ ಹೀಗಿದೆ ಎಂದು ತಾವು ಹೇಳಿದರೆ ಅದನ್ನು ಕೇಳಿಸಿಕೊಳ್ಳುವ ತಾಳ್ಮೆ ನಮ್ಮ ಮೇಲಧಿಕಾರಿಗಳಿಗೆ ಇದೆ ಎಂಬ ಭರವಸೆ ಶಿಕ್ಷಕರಿಗೆ ಬಂದರೆ, ಆಗ ಅವರು ಸಮರ್ಥರಾಗುತ್ತಾರೆ.‌ ಖಾಸಗಿ ಆಡಳಿತ ಮಂಡಳಿಗಳು ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಹೆಚ್ಚು ಮಧ್ಯಪ್ರವೇಶಿಸಿ ಶಿಕ್ಷಕರಿಗೆ ನಿರ್ದೇಶನ ಕೊಡಲು ಹೋಗಬಾರದು.

ಶಾಲೆಗಳು ಸರ್ಕಾರದ್ದಿರಲಿ, ಖಾಸಗಿ ಇರಲಿ ಪೋಷಕರೂ ಶೈಕ್ಷಣಿಕವಾಗಿ ಸಂವೇದನಾಶೀಲರಾಗುವ ತನಕ ಆಡಳಿತಾತ್ಮಕ ಸನ್ನಿವೇಶವು ಶಿಕ್ಷಣದ ಅವಶ್ಯಕತೆಗೆ ತಕ್ಕ ಹಾಗೆ ರೂಪುಗೊಳ್ಳಲು ಸಾಧ್ಯವಿಲ್ಲ.‌ ಸದ್ಯ ಇರುವ ಎಸ್‌ಡಿಎಂಸಿಗಳು ಅಥವಾ ಖಾಸಗಿ ಶಾಲೆಗಳಲ್ಲಿರುವ ಪೋಷಕರ ಸಮಿತಿಗಳು ಶಾಲೆಗೆ ಅಗತ್ಯವಾದದ್ದನ್ನು ಮಾಡಿಕೊಡಲು ಇರುವ ಪೂರಕ‌ ಘಟಕಗಳಾಗಿ ಅಥವಾ ಪ್ರಶ್ನೆ ಮಾಡುವುದನ್ನಷ್ಟೇ ನಿರ್ವಹಿಸುವ ಘಟಕಗಳಾಗಿ ಇವೆ.‌ ಶೈಕ್ಷಣಿಕ ಯಶಸ್ಸು ಪಡೆಯಬೇಕಾದರೆ ಪೋಷಕರಿಗೂ ಪ್ರಾಥಮಿಕ ಮಟ್ಟದ ಶೈಕ್ಷಣಿಕ ಅರಿವಿನ ತರಬೇತಿಯ ಅಗತ್ಯವಿದೆ.‌ ಪೋಷಕರ ಸಭೆಗಳು ಒಂದಷ್ಟು ಭಾಷಣಗಳಿಗೆ, ಮಕ್ಕಳ ಪ್ರಗತಿಪತ್ರದ ವರದಿ ಸಲ್ಲಿಸುವಿಕೆಗೆ ಸೀಮಿತ ಆಗಬಾರದು.‌

ವರ್ಷದಲ್ಲಿ ಎರಡು ಬಾರಿ ತಜ್ಞ ಸಂಪನ್ಮೂಲ ವ್ಯಕ್ತಿಗಳಿಂದ ಪೋಷಕರಿಗೆ ಶೈಕ್ಷಣಿಕ ತರಬೇತಿಯನ್ನು ಕೊಡಿಸುವ ವ್ಯವಸ್ಥೆಯಾಗಬೇಕು.‌ ಆಗ ಅವರು ಶೈಕ್ಷಣಿಕ ಚಟುವಟಿಕೆಗಳಲ್ಲಿ ಕ್ರಿಯಾತ್ಮಕವಾಗಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ ಮತ್ತು ಶೈಕ್ಷಣಿಕ ಆಡಳಿತದೊಂದಿಗೆ ರಚನಾತ್ಮಕವಾಗಿ ತೊಡಗಿಕೊಳ್ಳುತ್ತಾರೆ.‌ ಅದರಿಂದ ಶೈಕ್ಷಣಿಕ ಆಡಳಿತವೂ ಬಹಳಷ್ಟು ನಿರಾಳವಾಗಲು ಸಾಧ್ಯವಾಗುತ್ತದೆ.

ಮಕ್ಕಳ ಸಾಮರ್ಥ್ಯವರ್ಧನೆ ಶಿಕ್ಷಣದ ಗುರಿಯಾಗಿದೆ. ಆ ಗುರಿಯನ್ನು ತಲುಪಲು ಇರುವ ಸಾಧನಗಳು ಪಠ್ಯಪುಸ್ತಕಗಳು. ಅಂದರೆ ಪಠ್ಯವೇ ಅಂತಿಮ ಅಲ್ಲ. ನಿಧಾನವಾಗಿಯಾದರೂ ಪಠ್ಯಗಳ ರಚನಾ ಪದ್ಧತಿಯನ್ನು ಬದಲಿಸಬೇಕು.‌ ಇತ್ತೀಚೆಗೆ ಪಠ್ಯಗಳು ಸ್ಥಳೀಯ ಸೊಗಡಿನಿಂದ ಬಹುದೂರ ಹೋಗುತ್ತಿವೆ. ಮಕ್ಕಳು ಅಂತರರಾಷ್ಟ್ರೀಯ ಸ್ಪರ್ಧಾತ್ಮಕತೆಗೂ ಸಮರ್ಥರಾಗಬೇಕೆಂಬುದು ನಿಜವೇ. ಆದರೆ ಆ ಸಾಮರ್ಥ್ಯವನ್ನು ಸ್ಥಳೀಯ ವಿವರಗಳ ಮೂಲಕವೇ ಸಾಧಿಸಲು ಬರುತ್ತದೆ. ವಿವರಗಳು ಸ್ಥಳೀಯತೆಯನ್ನು ಹೊಂದಿರಬೇಕು.‌ ಸಾಮರ್ಥ್ಯವು ಅಂತರರಾಷ್ಟ್ರೀಯ ಮಟ್ಟದ್ದಾಗಿರಬೇಕು.‌ ಆಗ ಮಕ್ಕಳಿಗೆ ವಿಚಾರವನ್ನು ಗ್ರಹಿಸಲು ಸುಲಭವಾಗುತ್ತದೆ.

ಇದನ್ನು ಸಾಧಿಸಬೇಕಾದರೆ ಪಠ್ಯಗಳನ್ನು ಜಿಲ್ಲಾ ಮಟ್ಟದಲ್ಲಿ ರಚಿಸಬೇಕು.‌ ಹಾಗೆ ರಚಿಸಲು ಬೇಕಾದ ಮಾನದಂಡಗಳು ರಾಜ್ಯ ಮಟ್ಟದಿಂದ ಸಿಗಬೇಕು.‌ ಅದರಲ್ಲಿ ಸ್ಥಳೀಯತೆಗೆ ಶೇಕಡ ನಲವತ್ತೋ ಐವತ್ತೋ ನಿಗದಿಪಡಿಸಿ ಉಳಿದ ಭಾಗಗಳನ್ನು ಸಾರ್ವತ್ರಿಕವಾಗಿ ತೆಗೆದುಕೊಳ್ಳಬಹುದು.

ಒಟ್ಟಾಗಿ ಹೇಳುವುದಾದರೆ, ಅನೇಕ ಆಲೋಚನೆಗಳು, ಪರಸ್ಪರ ವೈರುಧ್ಯಗಳು, ಅಸ್ಪಷ್ಟತೆಗಳು ತುಂಬಿಹೋಗಿರುವ ಶಿಕ್ಷಣದಲ್ಲಿ ಎಲ್ಲವನ್ನೂ ಕ್ರೋಡೀಕರಿಸಿ, ಮೂಲಭೂತ ಅಗತ್ಯಗಳ ಸಮಗ್ರ ಯೋಜನೆಯೊಂದನ್ನು ರೂಪಿಸಬೇಕಾದ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT