ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯ ಪರಿಷ್ಕರಣೆ- ಶಿಕ್ಷಣ ಸುಧಾರಣೆ; ಇರಲಿ ಸಮಷ್ಟಿದೃಷ್ಟಿ

Last Updated 8 ಏಪ್ರಿಲ್ 2023, 5:38 IST
ಅಕ್ಷರ ಗಾತ್ರ

ನಾಡು– ದೇಶವನ್ನು ಮುನ್ನಡೆಸಬಲ್ಲ ನೈಪುಣ್ಯ, ತಿಳಿವಳಿಕೆ ನೀಡುವಂತಹದ್ದು ಶಿಕ್ಷಣ. ಅದಕ್ಕೆ ಪೂರಕವಾದ ಮೂಲಸೌಕರ್ಯ ಕಲ್ಪಿಸುವುದು ಆಡಳಿತ ನಡೆಸುವವರ ಕರ್ತವ್ಯ. ಭವಿಷ್ಯದ ಕಲ್ಪನೆಯೇ ಇಲ್ಲದೇ, ತಮ್ಮ ಸ್ವಾರ್ಥ ರಾಜಕೀಯಕ್ಕಾಗಿ ಶಿಕ್ಷಣವನ್ನು, ಭವಿಷ್ಯದ ಪ್ರಜೆಗಳ ವ್ಯಕ್ತಿತ್ವವನ್ನು ಹಾನಿಗೊಳಿಸುವುದು ನಾಡಿಗೆ ಮಾಡುವ ವಂಚನೆ. ಉತ್ತಮ ಬೋಧನೆಗೆ ಬೇಕಾದ ಯೋಗ್ಯ ಶಿಕ್ಷಕರನ್ನು ಒದಗಿಸುವುದು, ನಲಿಯುತ್ತಾ ಕಲಿಯುವ ತಾಣವನ್ನಾಗಿ ಶೈಕ್ಷಣಿಕ ಆವರಣವನ್ನು ರೂಪಿಸುವುದು ದಕ್ಷ ಆಡಳಿತಗಾರರ ಜವಾಬ್ದಾರಿ. ಇತ್ತೀಚಿನ ವರ್ಷಗಳಲ್ಲಿ ಈ ಉದಾತ್ತ ಹಾದಿಯನ್ನು ತೊರೆದು ಶಿಕ್ಷಣವನ್ನು ರಾಜಕೀಯಗೊಳಿಸುವ ಅಪಾಯಕಾರಿ ನಡೆ ಎದ್ದು ಕಾಣಿಸುತ್ತಿದೆ. ಮುಂದಿನ ದಿನಗಳಲ್ಲಿ ಶಿಕ್ಷಣ ಸುಧಾರಣೆಗೆ ಆದ್ಯತೆ ಕೊಡುವ ಸಮರ್ಥರನ್ನು ಆಯ್ಕೆ ಮಾಡುವ ಹೊಣೆ ಮತದಾರರ ಮೇಲಿದೆ. ಈ ನಿಟ್ಟಿನಲ್ಲಿ ಚರ್ಚೆಯೂ ನಡೆಯಬೇಕಿದೆ.

ರಾಜ್ಯದಲ್ಲಿ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಸರ್ಕಾರ ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದ ಸಮಿತಿ ಮೂಲಕ ಶಾಲಾ ಪಠ್ಯ ಪರಿಷ್ಕರಣೆ ಕಾರ್ಯ ನಡೆಸಿತ್ತು. ಈ ಪಠ್ಯದಲ್ಲಿ ಎಡಪಂಥೀಯ ಚಿಂತನೆಗಳನ್ನು ತುರುಕಲಾಗಿದೆ ಎಂದು ಆರೋಪಿಸಿದ ಈಗಿನ ಬಿಜೆಪಿ ಸರ್ಕಾರ, ರೋಹಿತ್‌ ಚಕ್ರತೀರ್ಥ ನೇತೃತ್ವದಲ್ಲಿ ಪಠ್ಯ ಪರಿಶೀಲನೆಗೆ ರಚಿಸಿದ್ದ ಸಮಿತಿ ಮೂಲಕ ಪಠ್ಯವನ್ನು ಪುನರ್‌ ಪರಿಷ್ಕರಿಸಿತು. ‍‍ಈ ವೇಳೆ ಬಿಜೆಪಿ ತನ್ನ ಬಲಪಂಥೀಯ ಸಿದ್ಧಾಂತ ತುರುಕಿ, ‘ಶಿಕ್ಷಣದ ಕೇಸರೀಕರಣ’ ಮಾಡುವುದರ ಜತೆಗೆ ಹಲವು ಯಡವಟ್ಟು ಗಳನ್ನು ಮಾಡಿತು ಎಂಬ ಆರೋಪವೂ ಇದೆ.

ಶಾಲಾ ಪಠ್ಯ ಪುನರ್‌ ಪರಿಷ್ಕರಣೆಗೆ ಮುಂದಾದ ರಾಜ್ಯ ಬಿಜೆಪಿ ಸರ್ಕಾರ ಕನ್ನಡ ಭಾಷಾ ಪಠ್ಯಗಳಲ್ಲಿ ಹಲವು ದಲಿತ ಮತ್ತು ಮಹಿಳಾ ಲೇಖಕರ ಪಾಠ ಹಾಗೂ ಪದ್ಯಗಳನ್ನು ಕೈಬಿಟ್ಟಿತ್ತು. ಅಲ್ಲದೆ ಭಗವಾನ್‌ ಬುದ್ಧ, ಮಹಾವೀರ, ಶಿಶುನಾಳ ಶರೀಫ, ಅಕ್ಕಮಹಾದೇವಿ, ನಾರಾಯಣ ಗುರು, ಪೆರಿಯಾರ್‌, ಸಾವಿತ್ರಿ ಬಾಯಿ ಫುಲೆ, ಮೈಸೂರು ಒಡೆಯರ್, ಸುರಪುರದ ವೆಂಕಟಪ್ಪ ನಾಯಕ, ಕೆಲ ಮಹಿಳಾ ಸುಧಾರಕಿಯರು ಸೇರಿದಂತೆ ಹಲವು ಮಹಾನ್‌ ವ್ಯಕ್ತಿಗಳ ಪಠ್ಯ ಭಾಗಗಳನ್ನು ಇತಿಹಾಸ ವಿಷಯದಿಂದ ಕೈಬಿಟ್ಟು ವಿವಾದ ಸೃಷ್ಟಿಸಿತು. ಅಲ್ಲದೆ ‘ಹಿಂದೂ ಮತ್ತು ಮುಸ್ಲಿಂ ಭಾವೈಕ್ಯತೆಯ ಹರಿಕಾರ ಗಾಂಧೀಜಿ ಅವರನ್ನು ನಾಥೂರಾಮ್‌ ಗೋಡ್ಸೆ ಎಂಬುವವನು ಹತ್ಯೆ ಮಾಡಿದನು’ ಎಂಬ ವಿವರವನ್ನು ಪರಿಶೀಲನಾ ಸಮಿತಿ ತೆಗೆದು ಹಾಕಿತು. ಇದೇ ಕೆಲಸವನ್ನು ಈಗ ಎನ್‌ಸಿಇಆರ್‌ಟಿ ಮಾಡಿದೆ!

ಜತೆಗೆ ಡಾ. ಬಿ.ಆರ್‌. ಅಂಬೇಡ್ಕರ್ ಅವರಿಗಿದ್ದ ‘ಸಂವಿಧಾನ ಶಿಲ್ಪಿ’ ಬಿರುದು ಒಳಗೊಂಡಂತೆ ಹಲವು ಅಂಶಗಳನ್ನು ಪಾಠದಿಂದ ತೆಗೆಯಲಾಯಿತು. ಇದೇ ರೀತಿ ಬಸವೇಶ್ವರ, ಕನಕದಾಸ, ಬೆಂಗಳೂರು ನಿರ್ಮಾತೃ ಕೆಂಪೇಗೌಡ, ಟಿಪ್ಪು ಸುಲ್ತಾನ್, ಕುವೆಂಪು, ಶಿವಕುಮಾರ ಸ್ವಾಮೀಜಿ, ಬಾಲಗಂಗಾಧರನಾಥ ಸ್ವಾಮೀಜಿ, ಕಯ್ಯಾರ ಕಿಂಞಣ್ಣ ರೈ ಅವರ ಪಾಠದಲ್ಲಿ ಕೆಲ ವಿಷಯಾಂಶಗಳನ್ನು ಕಡಿತಗೊಳಿಸಲಾಯಿತು. ಪುನರ್ ಪರಿಷ್ಕರಣಾ ಕಾರ್ಯದಿಂದ ಬೇಸತ್ತ ಸಾಹಿತಿಗಳಾದ ದೇವನೂರ ಮಹಾದೇವ ಹಾಗೂ ಜಿ.ರಾಮಕೃಷ್ಣ ಸೇರಿದಂತೆ ಕೆಲವರು ತಮ್ಮ ಪಾಠ, ಪದ್ಯಗಳನ್ನು ಪಠ್ಯಪುಸ್ತಕದಿಂದ ಕೈಬಿಡುವಂತೆ ಸರ್ಕಾರವನ್ನು
ಒತ್ತಾಯಿಸಿದ್ದರು.

ಮುಜುಗರ ಅನುಭವಿಸಿದ ಸರ್ಕಾರ: ಲಿಂಗಾಯತ, ಒಕ್ಕಲಿಗ, ದಲಿತ, ಬಂಟ, ಈಡಿಗ, ಮುಸ್ಲಿಂ ಸೇರಿದಂತೆ ಹಲವು ಸಮುದಾಯಗಳ ಮುಖಂಡರು, ಸಂಘಟನೆಗಳು, ಮಠಾಧೀಶರು, ಪ್ರಗತಿಪರರು, ವಿದ್ಯಾರ್ಥಿ ಸಂಘಟನೆಗಳು ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಆದ ಲೋಪಗಳ ವಿರುದ್ಧ ಧ್ವನಿಯೆತ್ತಿ, ಪ್ರತಿಭಟಿಸಿದರು. ಈ ಬೆಳವಣಿಗೆಗಳಿಂದ ಸರ್ಕಾರ ತೀವ್ರ ಮುಜುಗರವನ್ನೂ ಅನುಭವಿಸಿತು. ಕಾಂಗ್ರೆಸ್‌, ಜೆಡಿಎಸ್‌ ನಾಯಕರೇ ಅಲ್ಲದೆ ಬಿಜೆಪಿಯ ಕೆಲ ಪ್ರಮುಖ ನಾಯಕರೂ ಪಠ್ಯ ಪರಿಷ್ಕರಣೆ ಕಾರ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಎಚ್ಚೆತ್ತ ಸರ್ಕಾರ ಪರಿಷ್ಕರಣೆ ವೇಳೆ ಕೈಬಿಟ್ಟಿದ್ದ ಕೆಲ ಪಾಠಗಳನ್ನು ಮರು ಸೇರಿಸಿ, ತಿದ್ದೋಲೆ ಹೊರಡಿಸಿತು. ಇದು ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಸಾಕಷ್ಟು ಗೊಂದಲಗಳನ್ನೂ ಮೂಡಿಸಿ, ಕಲಿಕೆಯ ಮೇಲೆ ಪರಿಣಾಮ ಬೀರಿತು.

ಪಠ್ಯ ಪರಿಷ್ಕರಣೆ ಹೆಸರಲ್ಲಿ ನಡೆದ ಈ ಅಚಾತುರ್ಯಗಳು ಬಿಜೆಪಿಗೆ ಚುನಾವಣೆಯಲ್ಲಿ ಯಾವ ಫಲ ನೀಡುತ್ತವೆ ಎಂಬುದು ಮತದಾನದ ಬಳಿಕವಷ್ಟೇ ಗೊತ್ತಾಗುತ್ತದೆ. ಅಲ್ಲದೆ ಬಿಜೆಪಿ ಪ್ರತಿಪಾದಿಸುತ್ತಿರುವ ನೈತಿಕ ಶಿಕ್ಷಣ, ‘ವೇದಿಕ್‌ ಗಣಿತ’... ಇತ್ಯಾದಿ ವಿಚಾರದಲ್ಲೂ ಪರ, ವಿರೋಧ ವಾದಗಳು ಕೊನೆಗೊಂಡಿಲ್ಲ. ಇದರ ಜತೆಗೆ ಹಿಜಾಬ್ ವಿವಾದ ಶಾಲಾ, ಕಾಲೇಜು ಆವರಣ, ಕೊಠಡಿ ಪ್ರವೇಶಿಸಿ ಶಿಕ್ಷಣ ಸಂಸ್ಥೆಗಳಲ್ಲಿನ ಸೌಹಾರ್ದ ವಾತಾವರಣವನ್ನು ಕಲಕಿದೆ.

ಈ ವಿವಾದಗಳೇ ಮುನ್ನೆಲೆಯಲ್ಲಿದ್ದ ಕಾರಣ ಗುಣಮಟ್ಟ, ಮೌಲ್ಯಯುತ ಶಿಕ್ಷಣ, ಶಾಲಾ, ಕಾಲೇಜುಗಳ ಮೂಲ ಸೌಕರ್ಯಗಳ ವಿಚಾರಗಳು ನೇಪಥ್ಯಕ್ಕೆ ಸರಿದವು. ಕಾಲ ಕಾಲಕ್ಕೆ ಶಿಕ್ಷಕರು, ಉಪನ್ಯಾಸಕರು ಮತ್ತು ಸಹ ಪ್ರಾಧ್ಯಾಪಕರ ನೇಮಕಾತಿ ಆಗದೇ ದೊಡ್ಡ ಮಟ್ಟದಲ್ಲಿ ‘ಅತಿಥಿ’ಗಳು ಬೋಧನಾ ಕಾರ್ಯದಲ್ಲಿ ತೊಡಗಿದ್ದಾರೆ. ಶಾಲಾ ಶಿಕ್ಷಣವೂ ದುಬಾರಿಯಾಗಿದ್ದು, ಸಾಮಾನ್ಯರ ಕೈಗೆಟುಕದಂತಾಗಿದೆ. ವೃತ್ತಿ ಶಿಕ್ಷಣ ಕೋರ್ಸ್‌ಗಳಾದ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪ್ರವೇಶಕ್ಕಿಂತಲೂ ಹೆಚ್ಚಿನ ಶುಲ್ಕವನ್ನು ಹಲವು ಖಾಸಗಿ ಶಾಲೆಗಳು ಪ್ರಾಥಮಿಕ ಶಿಕ್ಷಣ ಹಂತದಿಂದಲೇ ವಸೂಲಿ ಮಾಡುತ್ತಿದ್ದು, ಅದಕ್ಕೆ ಮೂಗುದಾರ ಹಾಕುವ ಕಾರ್ಯದಲ್ಲಿ ಸರ್ಕಾರ ವಿಫಲವಾಗಿದೆ.

ಸಾಕಾರಗೊಳ್ಳದ ಉಚಿತ, ಕಡ್ಡಾಯ ಶಿಕ್ಷಣ: ಮಗುವಿನ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣ ಬಹುಮುಖ್ಯ. ಈ ಮಹತ್ವದ ಜವಾಬ್ದಾರಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲಿದೆ. ಹೀಗಾಗಿಯೇ ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿ ಶಿಕ್ಷಣಕ್ಕೆ ಸ್ಥಾನ ಕಲ್ಪಿಸಲಾಗಿದೆ. ಅಲ್ಲದೆ 2002ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿಸಲಾಗಿದೆ. ಅದರಂತೆ 6ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ದೊರೆಯಬೇಕು. ಆದರೆ ಈ ಆಶಯ ಇನ್ನೂ ಪೂರ್ಣ ಪ್ರಮಾಣದಲ್ಲಿ ಸಾಕಾರಗೊಂಡಿಲ್ಲ.

ಶಿಕ್ಷಣ ವಂಚಿತರು ಮತ್ತು ಶಾಲೆ ತೊರೆಯುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ತಾರತಮ್ಯದಿಂದ ಕೂಡಿರುವ ಪಠ್ಯಕ್ರಮ, ಭಾಷಾ ಮಾಧ್ಯಮ ವಿಚಾರದಲ್ಲಿನ ಗೊಂದಲ ಮುಂದುವರಿದಿದೆ. ಸಹಸ್ರಾರು ಶಾಲೆಗಳ ಕೊಠಡಿಗಳು ದುರಸ್ತಿ ಆಗಬೇಕಿವೆ. ಕೆಲವೆಡೆ ಕುಡಿಯುವ ನೀರಿನ ಸೌಕರ್ಯ ಮತ್ತು ಶೌಚಾಲಯವೂ ಇಲ್ಲ. ಹಲವೆಡೆ ಆಟದ ಮೈದಾನ, ಗ್ರಂಥಾಲಯ, ಕಂಪ್ಯೂಟರ್‌ಗಳು ಮತ್ತು ಪ್ರಯೋಗಾಲಯಗಳೂ ಇಲ್ಲ. ಇನ್ನೂ ಕೆಲವು ಶಾಲೆಗಳಲ್ಲಿ ಕೆಲ ವಿಷಯಗಳಿಗೆ ಶಿಕ್ಷಕರೇ ಇಲ್ಲ. ಈ ವಿಷಯಗಳನ್ನು ಕಲಿಯದೇ ಮಕ್ಕಳು ಮುಂದಿನ ತರಗತಿಗಳಿಗೆ ಹೋಗುತ್ತಿರುವುದು ವಿಪರ್ಯಾಸ.

ತರಾತುರಿಯಲ್ಲಿ ಬಂದ ಎನ್‌ಇಪಿ: ವಿರೋಧ ಪಕ್ಷಗಳ, ಹಲವು ಸಾಹಿತಿಗಳ, ಶಿಕ್ಷಣ ತಜ್ಞರ, ಬುದ್ಧಿಜೀವಿಗಳ ಮತ್ತು ವಿವಿಧ ಸಂಘಟನೆಗಳ ವಿರೋಧದ ನಡುವೆಯೂ ರಾಜ್ಯ ಸರ್ಕಾರ ನೂತನ ಶಿಕ್ಷಣ ನೀತಿ (ಎನ್‍ಇಪಿ 2020) ಜಾರಿಗೆ ಉತ್ಸುಕತೆ ತೋರಿತು. ವಿರೋಧ ಪಕ್ಷಗಳು ಎನ್‍ಇಪಿಯನ್ನು ‘ನಾಗಪುರ ಶಿಕ್ಷಣ ನೀತಿ’, ‘ಶಿಕ್ಷಣದ ಕೇಸರೀಕರಣ’ ಎಂದೆಲ್ಲ ಜರಿದರೂ ತಲೆಕೆಡಿಸಿಕೊಳ್ಳದ ರಾಜ್ಯದ ಬಿಜೆಪಿ ಸರ್ಕಾರ, 2021–22ರಿಂದ ಉನ್ನತ ಶಿಕ್ಷಣದಲ್ಲಿ ಎನ್‍ಇಪಿ ಜಾರಿಗೊಳಿಸಿತು. ಎನ್‍ಇಪಿಗೆ ತಕ್ಕಂತೆ ಕೋರ್ಸ್‌ಗಳಿಗೆ ಹೊಸ ಸ್ವರೂಪ ನೀಡಿ, ಹೊಸ ಪಠ್ಯಕ್ರಮವನ್ನೂ ರಚಿಸಿ, ವಿದ್ಯಾರ್ಥಿಗಳಿಗೆ ಬಹುಶಿಸ್ತೀಯ ವಿಷಯಗಳ ಆಯ್ಕೆಯನ್ನೂ ಒದಗಿಸಿದೆ.

ಆದರೆ, ಈ ಕೋರ್ಸ್‌ಗಳ ಹೊಸ ಪಠ್ಯಕ್ರಮಕ್ಕೆ ಸಂಬಂಧಿಸಿ ದಂತೆ ಅಧ್ಯಾಪಕರಿಗೆ ಯಾವುದೇ ಕಾರ್ಯಾಗಾರ, ವಿಚಾರ ಸಂಕಿರಣಗಳನ್ನು ನಡೆಸುವ ಗೋಜಿಗೆ ಸರ್ಕಾರವಾಗಲಿ ಅಥವಾ ವಿಶ್ವವಿದ್ಯಾಲಯಗಳಾಗಲಿ ಹೋಗಿಲ್ಲ ಎಂದು ಅಧ್ಯಾಪಕರೇ ದೂರುತ್ತಾರೆ. ಇನ್ನು ಹೊಸ ಪಠ್ಯಕ್ಕೆ ತಕ್ಕಂತೆ ಸೂಕ್ತ ಪಠ್ಯ ಪುಸ್ತಕಗಳು ದೊರೆಯದೇ ಇದ್ದರೂ ವಿದ್ಯಾರ್ಥಿಗಳು ಪದವಿ ಕೋರ್ಸ್‍ನ ಮೊದಲ ವರ್ಷವನ್ನು ಪೂರೈಸಿ, ಎರಡನೇ ವರ್ಷಕ್ಕೆ ಕಾಲಿಟ್ಟಿದ್ದಾರೆ! ಈ ವರ್ಷದಿಂದ ಎನ್‍ಇಪಿಯನ್ನು ಪ್ರಾಥಮಿಕ ಶಾಲಾ ಹಂತದಿಂದಲೂ ಜಾರಿಗೊಳಿಸಲು ಸರ್ಕಾರ ಯೋಜನೆ ರೂಪಿಸಿದೆ.

ರಾಜ್ಯದಲ್ಲಿ 1ರಿಂದ 12ನೇ ತರಗತಿಯವರಗೆ 1.2 ಕೋಟಿ ಹಾಗೂ ಉನ್ನತ ಶಿಕ್ಷಣದಲ್ಲಿ 24 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಕೆಲಸ ಮಾಡುವ ಬದ್ಧತೆ ತೋರುವ ಪಕ್ಷಗಳತ್ತ ಮತದಾರರು ಒಲಿಯುತ್ತಾರೆ.

ಶಿಕ್ಷಣ ಕ್ಷೇತ್ರದ ಎಲ್ಲ ಸಮಸ್ಯೆಗಳಿಗೆ ಎನ್‌ಇಪಿಯಲ್ಲಿ ಪರಿಹಾರ ಇದೆ ಎಂದು ಬಿಜೆಪಿ ಸಮರ್ಥಿಸಿಕೊಳ್ಳುತ್ತಿದೆ. ಇದಕ್ಕೆ ವಿರುದ್ಧವಾಗಿ ಪಠ್ಯ ಪುನರ್‌ ಪರಿಷ್ಕರಣೆಯ ಯಡವಟ್ಟುಗಳು ಮತ್ತು ತರಾತುರಿಯಲ್ಲಿ ಎನ್‌ಇಪಿ ಜಾರಿಗೊಳಿಸಿದ ಬಿಜೆಪಿ ನಡೆಯನ್ನು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪ್ರಮುಖ ಚುನಾವಣಾ ವಿಷಯವನ್ನಾಗಿಸಿ ಮತ ಸೆಳೆಯಲು ಮುಂದಾಗಿವೆ.

----

ರಾಜಕಾರಣಿಗಳ ಸ್ವ ಹಿತಾಸಕ್ತಿ

ಉಚಿತ ಮತ್ತು ಸಮಾನವಾಗಿ ದೊರೆಯಬೇಕಾದ ಶಿಕ್ಷಣ ಇಂದು ವ್ಯಾಪಾರದ ಸರಕಾಗಿದೆ. ಇಲ್ಲಿ ಖಾಸಗಿ ಪ್ರಭಾವ ಹೆಚ್ಚಾಗುತ್ತಿದ್ದು, ಕಾರ್ಪೊರೇಟ್ ಸಂಸ್ಕೃತಿ ಬೆಳೆದು ನಿಂತಿದೆ. ಉದ್ಯಮಿಗಳು, ರಾಜಕಾರಣಿಗಳು ಈ ಕ್ಷೇತ್ರದಲ್ಲಿ ಬಂಡವಾಳ ಹೂಡಿ, ಲಾಭದ ಫಸಲು ಗಳಿಸುತ್ತಿದ್ದಾರೆ. ರಾಜ್ಯದ ವಿವಿಧ ಪಕ್ಷಗಳಲ್ಲಿನ ಹಲವು ರಾಜಕೀಯ ನಾಯಕರೂ ಶಿಕ್ಷಣ ಸಂಸ್ಥೆಗಳ ಒಡೆಯರಾಗಿದ್ದು, ತಮ್ಮ ಹಿತಾಸಕ್ತಿ ಕಾಯ್ದುಕೊಳ್ಳುವುದಕ್ಕೆ ಪೂರಕವಾಗಿ ನಿಯಮಗಳನ್ನು ರೂಪಿಸುತ್ತಿದ್ದಾರೆ ಎಂಬ ಆರೋಪಗಳೂ ಇವೆ. ಹೀಗಾಗಿಯೇ ಶಿಕ್ಷಣದ ಸಾರ್ವತ್ರೀಕರಣ, ಸಮಾನ ಶಿಕ್ಷಣ, ಏಕರೂಪ ಪಠ್ಯ ವಿಚಾರಗಳು ನನೆಗುದಿಗೆ ಬಿದ್ದಿವೆ. ಇವುಗಳನ್ನು ಜಾರಿಗೊಳಿಸುವ ರಾಜಕೀಯ ಇಚ್ಚಾಶಕ್ತಿ ಯಾವ ಪಕ್ಷದವರಲ್ಲೂ ಇಲ್ಲವಾಗಿದೆ.

ಒಂದೆಡೆ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಅಳೆಯಲು ರಾಜ್ಯದಾದ್ಯಂತ ‘ಬೋರ್ಡ್’ ಪರೀಕ್ಷೆ ಮಾದರಿಯಲ್ಲಿ ಮೌಲ್ಯಾಂಕನ ಪರೀಕ್ಷೆ ನಡೆಸಿರುವ ಶಿಕ್ಷಣ ಇಲಾಖೆ ಇನ್ನೊಂದೆಡೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಶೇಕಡ 10ರವರೆಗೆ ಕೃಪಾಂಕ ನೀಡುವುದಾಗಿ ಘೋಷಿಸಿದೆ. ಈ ಮೂಲಕ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ ಹೆಚ್ಚಿಸುವುದು ಇಲಾಖೆಯ ಯೋಜನೆ. ಇದು ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಂತೆ ಆಗುವುದಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತದೆ.


ದೋಷಗಳನ್ನು ಸರಿಪಡಿಸುತ್ತೇವೆ

ಎನ್‌ಇಪಿ ಮತ್ತು ಪಠ್ಯ ಪರಿಷ್ಕರಣೆ ಹೆಸರಿನಲ್ಲಿ ಈಗಿನ ಬಿಜೆಪಿ ಸರ್ಕಾರ ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಹಾಳುಗೆಡವಿದೆ. ಇದು ಬಿಜೆಪಿಯ ರಾಜಕೀಯ ಉದ್ದೇಶದ ಸ್ವರೂಪ ಮತ್ತು ಸಂರಚನೆ ಹೊಂದಿದ್ದು, ಆಘಾತಕಾರಿಯಾಗಿದೆ. ಸಾಕಷ್ಟು ದೋಷಗಳಿಂದ ಕೂಡಿದೆ. ‘ನೀಟ್‌’ ವಿಷಯದಲ್ಲಿ ವಿದ್ಯಾರ್ಥಿಗಳಲ್ಲಿ ಸಾಕಷ್ಟು ಗೊಂದಲಗಳಿವೆ. ಇದರಿಂದ ಹಿಂದುಳಿದ, ದಲಿತ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ವೈದ್ಯಕೀಯ ಕೋರ್ಸ್‌ ಪ್ರವೇಶವನ್ನು ಮೊದಲಿನಂತೆ ಸಿಇಟಿ ಮೂಲಕವೇ ನಡೆಸುವ ಚಿಂತನೆ ಇದೆ. ಬಸವೇಶ್ವರ, ಡಾ. ಬಿ.ಆರ್‌. ಅಂಬೇಡ್ಕರ್‌, ಕುವೆಂಪು ಅವರ ಆದರ್ಶದಂತೆ ಕರ್ನಾಟಕ ಸಂಸ್ಕೃತಿಯ ಒಳನೋಟವನ್ನು ಬೀರುವ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುತ್ತೇವೆ.

ಕೆ.ಇ.ರಾಧಾಕೃಷ್ಣ, ಕೆಪಿಸಿಸಿ ಪ್ರಣಾಳಿಕೆ ಸಮಿತಿಯ ಉಪಾಧ್ಯಕ್ಷ

ಎನ್‌ಇಪಿಯಿಂದ ವ್ಯವಸ್ಥೆಗೆ ಬಲ

ಎನ್‌ಇಪಿ ಸಮರ್ಪಕ ಅನುಷ್ಠಾನ
ವಾದರೆ ದೇಶದ ಶಿಕ್ಷಣ ವ್ಯವಸ್ಥೆಯ ಬಹುತೇಕ ಸಮಸ್ಯೆಗಳು ಪರಿಹಾರವಾಗುತ್ತವೆ. ಎನ್‌ಇಪಿಯಿಂದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಬಲಗೊಳ್ಳುತ್ತದೆ. ಈಗಾಗಲೇ ರಾಜ್ಯದಲ್ಲಿ ಉನ್ನತ ಶಿಕ್ಷಣದಲ್ಲಿ ಇದನ್ನು ಜಾರಿಗೊಳಿಸಿದ್ದೇವೆ. ಶಾಲಾ ಶಿಕ್ಷಣದಲ್ಲಿ ಹಂತ ಹಂತವಾಗಿ ಅನುಷ್ಠಾನಗೊಳಿಸುತ್ತೇವೆ. ಮುಂದಿನ ದಿನಗಳಲ್ಲಿ ಎನ್‌ಇಪಿ ಅನುಷ್ಠಾನಕ್ಕೆ ಬಜೆಟ್‌ನಲ್ಲಿ ಗರಿಷ್ಠ ಅನುದಾನ ಮೀಸಲಿಡುತ್ತೇವೆ. ಶಿಕ್ಷಕರ ಕೊರತೆ ನೀಗಿಸಲು ಕ್ರಮ ಕೈಗೊಳ್ಳುತ್ತೇವೆ.

ಅರುಣ ಶಹಾಪುರ, ವಿಧಾನ ಪರಿಷತ್ತಿನ ಮಾಜಿ ಸದಸ್ಯ, ಬಿಜೆಪಿ

ಶಿಕ್ಷಣವೇ ಮೊದಲ ಆದ್ಯತೆ

‘ಪಂಚರತ್ನ’ ಯೋಜನೆಯಲ್ಲಿ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿದ್ದೇವೆ. ಗುಣಮಟ್ಟ ಮತ್ತು ವ್ಯವಸ್ಥಿತ ಶಿಕ್ಷಣವನ್ನು ಉಚಿತವಾಗಿ ನೀಡುವ ಯೋಜನೆಗೆ ಜೆಡಿಎಸ್‌ ಬದ್ಧವಾಗಿದೆ. ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಒಂದೊಂದು ಮಾದರಿ ಶಾಲೆಗಳನ್ನು ನಿರ್ಮಿಸಿ ಅಲ್ಲಿ ಪೂರ್ವ ಪ್ರಾಥಮಿಕ ಹಂತದಿಂದ 12ನೇ ತರಗತಿವರೆಗೆ ಅವಕಾಶ ಕಲ್ಪಿಸುತ್ತೇವೆ. ಒಂದೇ ರೀತಿಯ ಪಠ್ಯಕ್ರಮಕ್ಕೆ ಒತ್ತು ನೀಡುವುದರ ಜತೆಗೆ ಶಿಕ್ಷಕರ ನೇಮಕಾತಿ, ಕಾಲದಿಂದ ಕಾಲಕ್ಕೆ ನಡೆಯುವಂತೆ ಎಚ್ಚರ ವಹಿಸುತ್ತೇವೆ. ಎನ್‌ಇಪಿ ಕುರಿತು ಅಧ್ಯಯನಕ್ಕೆ ಸಮಿತಿ ರಚಿಸಿ, ಶಿಫಾರಸು ಅನುಷ್ಠಾನಗೊಳಿಸುತ್ತೇವೆ.

ಎಚ್‌.ಎನ್‌. ದೇವರಾಜು, ರಾಜ್ಯ ವಕ್ತಾರ, ಜೆಡಿಎಸ್‌

ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಲಿ

ಹಿಂದುತ್ವದ ರಾಷ್ಟ್ರೀಯತೆಯು ಬಿಜೆಪಿಯ ಗುಪ್ತ ರಾಜಕೀಯ ಕಾರ್ಯಸೂಚಿ. ಅದರ ಜಾರಿಗಾಗಿಯೇ ಕೇಂದ್ರ ಸರ್ಕಾರ ಎನ್‌ಇಪಿ–2020 ಅನ್ನು ರೂಪಿಸಿದೆ. ಸಂಕುಚಿತ ಉದ್ದೇಶ ಹೊಂದಿರುವ ಇದು ಸಾರ್ವಜನಿಕ ಶಿಕ್ಷಣ ಕ್ಷೇತ್ರವನ್ನು ದುರ್ಬಲಗೊಳಿಳಿಸುತ್ತದೆ. ಅಲ್ಲದೆ ಕೇಂದ್ರೀಕರಣ, ಖಾಸಗೀಕರಣ ಮತ್ತು ಕೋಮುವಾದೀಕರಣಕ್ಕೆ ಎಡೆಮಾಡಿಕೊಡುತ್ತದೆ. ಸಾರ್ವಜನಿಕ ಶಿಕ್ಷಣದ ಬಲವರ್ಧನೆಗೆ ಪಕ್ಷಗಳು ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಸಮಾನ ಗುಣಮಟ್ಟದ ಶಿಕ್ಷಣವು ಪಕ್ಷಗಳ ಆದ್ಯತೆಯಾಗಬೇಕು. ಈ ಉದ್ದೇಶದ ಈಡೇರಿಕೆಗಾಗಿ ಸಾರ್ವಜನಿಕ ಶಾಲಾ ಶಿಕ್ಷಣ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡಬೇಕು.

ನಿರಂಜನಾರಾಧ್ಯ.ವಿ.ಪಿ, ಅಭಿವೃದ್ಧಿ ಶಿಕ್ಷಣ ತಜ್ಞ

ವೈಚಾರಿಕ ಶಿಕ್ಷಣ ಅಗತ್ಯ

ವಿದ್ಯಾರ್ಥಿಗಳಲ್ಲಿ ಮಾನವೀಯ ವ್ಯಕ್ತಿತ್ವ ರೂಪಿಸಲು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಲು ವೈಜ್ಞಾನಿಕ, ವೈಚಾರಿಕ ಶಿಕ್ಷಣ ನೀಡಬೇಕಿದೆ. ಅದಕ್ಕೆ ಪೂರಕವಾಗಿ ಹಿಂದಿನಿಂದಲೂ ಶಿಕ್ಷಣ ಪಠ್ಯರಚನಾ ಚೌಕಟ್ಟು ಸಿದ್ಧಪಡಿಸಲಾಗುತ್ತಿತ್ತು. ಈಗ ಪಠ್ಯ ರಚನೆಯ ಆಶಯವೇ ಬದಲಾಗಿದೆ. ಶಿಕ್ಷಣದ ಉದ್ದೇಶವನ್ನೂ ಆರ್ಥಿಕ ಗುರಿಯಂತೆ ನೋಡಲಾಗುತ್ತಿದೆ. ರಾಷ್ಟ್ರದ ಆಂತರಿಕ ಉತ್ಪನ್ನದ ಶೇ 6ರಷ್ಟನ್ನು ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಬೇಕು. ಶಿಕ್ಷಣದ ಗುಣಮಟ್ಟ, ಮಾನವ ಹಕ್ಕುಗಳು, ಸುಸ್ಥಿರ ಸಮಾಜದ ಸೃಷ್ಟಿಯ ಧೋರಣೆಗಳು ರಾಜಕೀಯ ಪಕ್ಷಗಳ ಆದ್ಯತೆಯಾಗಬೇಕು.

ಸರೋಜ. ಎಂ.ಎಸ್,ಪ್ರಗತಿ ಶಿಕ್ಷಣದ ಚಿಂತಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT