ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಹದಗೊಳ್ಳಬೇಕಿದೆ ಸಾಮೂಹಿಕ ಪ್ರಜ್ಞೆ

ದೇಶದ ಅಭಿವೃದ್ಧಿಗೆ ಪೂರಕವಾದ ಲಿಂಗಸಂವೇದನೆ ಈ ಕಾಲದ ತುರ್ತು
Published 18 ಮಾರ್ಚ್ 2024, 23:33 IST
Last Updated 18 ಮಾರ್ಚ್ 2024, 23:33 IST
ಅಕ್ಷರ ಗಾತ್ರ

ಮಹಿಳೆಯರಿಗೆ ಸಲ್ಲಬೇಕಾದ ನ್ಯಾಯವು ಸಾಮಾಜಿಕ ನ್ಯಾಯದ ಭಾಗವೇ ಆಗಿದೆ ಎಂಬುದು ಎಚ್ಚೆತ್ತುಕೊಂಡ ಸಮಾಜದ ಪರಿಭಾಷೆ. ಹೆಣ್ಣಿನ ಅಸ್ತಿತ್ವದ ಘನತೆಯನ್ನು ಕಾಪಾಡುವುದು ಸಾಮಾಜಿಕ ನೈತಿಕತೆಯ ಹೊಣೆಯೂ ಹೌದು. ಚರಿತ್ರೆಯ ತಪ್ಪುಗಳನ್ನು ಸರಿಪಡಿಸಿಕೊಂಡು ನಾಗರಿಕತೆಯನ್ನು ಹೊಸದಾಗಿ ಕಟ್ಟುತ್ತಾ ಹೋಗುವುದು ಮನುಷ್ಯಪ್ರಜ್ಞೆಯ ಚಲನೆಯ ದ್ಯೋತಕ.

ಯಾವುದೇ ಒಂದು ದೇಶದ ಅಭಿವೃದ್ಧಿಯನ್ನು ಮಹಿಳೆಯರ ಅಭಿವೃದ್ಧಿಯ ಅಳತೆಗೋಲಿನಿಂದ ಅಳೆಯ ಬೇಕು ಎಂದ ಅಂಬೇಡ್ಕರ್ ಹಾಗೂ ಮಹಿಳೆಯರು ಮಧ್ಯರಾತ್ರಿಯೂ ನಿರ್ಭಯವಾಗಿ ಸಂಚರಿಸುವ ಸ್ಥಿತಿ ಸಿದ್ಧಿಸಿದಾಗ ಮಾತ್ರ ಸ್ವಾತಂತ್ರ್ಯಕ್ಕೆ ನಿಜ ಅರ್ಥ ಬರುವು ದೆಂದ ಗಾಂಧೀಜಿ ಈ ಇಬ್ಬರೂ ವ್ಯವಸ್ಥೆಯಲ್ಲಿ ಹೆಣ್ಣಿನ ಇರುವಿಕೆಯನ್ನು ಬಲವಾಗಿ ಪ್ರತಿಪಾದಿಸಿದ ಆಧುನಿಕ ಭಾರತದ ಪ್ರತಿನಿಧಿಗಳಾಗಿ ಕಾಣುತ್ತಾರೆ. ಒಂದು,
ಸಾಮಾಜಿಕ ನೈತಿಕತೆ, ಇನ್ನೊಂದು, ವೈಯಕ್ತಿಕ ನೈತಿಕತೆ. ಹಾಗೆ ನೋಡಿದರೆ ಇವೆರಡೂ ಒಂದರೊಳಗೊಂದು ಬೆರೆತ ಪೂರ್ಣವೃತ್ತ.

ತನ್ನ ದೇಹದ ಕಾರಣಕ್ಕಾಗಿ ಭಯಗ್ರಸ್ತಳಾಗಿಯೇ ಇರಬೇಕಾದ ಹೆಣ್ಣು ತನ್ನ ಪ್ರಜ್ಞೆಯ ಅಸೀಮ ಸಾಧ್ಯತೆಗಳನ್ನು ಅರಿಯುವುದು ಕನಸಿನ ಮಾತು. ಈ ಭಯವನ್ನು ದಾಟಲು ದೇಹದ ಬಗೆಗಿನ ಮಿಥ್ಯೆಗಳನ್ನು ದಾಟುವ ಅವಳ ಅರಿವು ಎಷ್ಟು ಮುಖ್ಯವೋ ನಮ್ಮ ವ್ಯವಸ್ಥೆಯೂ ಅವಳು ನಿರ್ಭಯವಾಗಿರಲು ಬೇಕಾದ ಮನಃಸ್ಥಿತಿ ಹಾಗೂ ಸುರಕ್ಷಿತ ವಾತಾವರಣವನ್ನು ನಿರ್ಮಾಣ ಮಾಡಬೇಕಾದುದು ಅಷ್ಟೇ ಮುಖ್ಯ. ಇದು ಯಾವುದೇ ನಾಗರಿಕ ಸಮಾಜದ ಪ್ರಾಥಮಿಕ ಅವಶ್ಯಕತೆ. ಆಗಲೇ ಅವಳು ತನ್ನ ಕನಸುಗಳನ್ನು ತಾನೇ ಕಾಣುವ, ತನ್ನ ಬದುಕಿನ ನಿರ್ಧಾರಗಳನ್ನು ತಾನೇ ಕೈಗೊಳ್ಳುವ ಸ್ವಾತಂತ್ರ್ಯದ ಮೊದಲ ಹೆಜ್ಜೆಗಳನ್ನಿಡುತ್ತ ತನ್ನ ದಾರಿಗಳನ್ನು ಶೋಧಿಸಿಕೊಳ್ಳಲು ಸಾಧ್ಯ. ಹೆಣ್ಣು ತನ್ನ ದೇಹವನ್ನು ಸ್ವೀಕರಿಸುವ ಮೂರು ಮಾದರಿಗಳು ನೆನಪಾಗುತ್ತವೆ. ಒಂದು, ಅಕ್ಕಮಹಾದೇವಿಯ ಮಾದರಿ. ಇನ್ನೊಂದು, ದ್ರೌಪದಿಯ ಮಾದರಿ. ಮತ್ತೊಂದು, ದೋಪ್ದಿಯ ಮಾದರಿ. ಅಕ್ಕನ ಬೆತ್ತಲು, ದೇಹ ಮತ್ತು ಪ್ರಜ್ಞೆಗಳೆರಡನ್ನೂ ಬಯಲಾಗಿಸುವ ರೂಪಕ. ಸಂಸ್ಕೃತಿಯು ಬಿತ್ತಿದ ದೇಹದ ಲಜ್ಜೆಯನ್ನು ಮೀರಿ ಅದನ್ನು ಪ್ರಾಕೃತಿಕ ಸತ್ಯವಾಗಿ ಮಾತ್ರ ಕಾಣುವ ಎಚ್ಚರ ಹಾಗೂ ಆ ಮೂಲಕ ಎಲ್ಲ ಸಮಾಜೋ ಸಾಂಸ್ಕೃತಿಕ ರಚನೆಗಳನ್ನು ಮೀರುವ ಸಾಹಸ ಅವಳದು. ಕೀಳರಿಮೆ, ಭಯ ಹಾಗೂ ಅವನ್ನು ಮೂಡಿಸಲು ಕಾರಣವಾದ ಎಲ್ಲ ಲೌಕಿಕ ಅಧಿಕಾರವನ್ನೂ ನಿರಾಕರಿಸುವ ಆಧ್ಯಾತ್ಮಿಕ ಎತ್ತರದ ಸ್ಥಿತಿ ಅದು.

ದ್ರೌಪದಿಯನ್ನು ವಿವಸ್ತ್ರಗೊಳಿಸಲು ಪ್ರಯತ್ನಿಸಿದ್ದು ವ್ಯವಸ್ಥೆಯ ಅಧಿಕಾರ. ಅವಳನ್ನು ಪಣಕ್ಕಿಟ್ಟು ಜೂಜಾಡುವ ಅಧಿಕಾರವನ್ನು ಗಂಡನಿಗೂ ಸೋತ ‘ವಸ್ತು’ವಿನ ಸೀರೆ ಸೆಳೆಯುವ ಅಧಿಕಾರವನ್ನು ಅನ್ಯ ಗಂಡಸರಿಗೂ ದಯಪಾಲಿಸಿದ ಪಿತೃಪ್ರಧಾನ ವ್ಯವಸ್ಥೆ ಹಾಗೂ ಅದರ ಬೆನ್ನಿಗೆ ಬಲವಾಗಿ ನಿಂತ ಪ್ರಭುತ್ವ ಹಾಗೂ ಧರ್ಮ. ಈ ಎಲ್ಲ ಸಿಕ್ಕುಗಳಲ್ಲಿ ದ್ರೌಪದಿಯ ದೇಹ ಮತ್ತು ಆತ್ಮ ಕಂಪಿಸುತ್ತವೆ. ಆದರೆ ಜಡ ವ್ಯವಸ್ಥೆಗೆ ಇದು ತಟ್ಟುವುದಿಲ್ಲ.

ಇನ್ನು ಈ ದೋಪ್ದಿಯು ಮಹಾಶ್ವೇತಾದೇವಿಯವರ ಕತೆಯಲ್ಲಿ ಬರುವ ಬುಡಕಟ್ಟು ಹೆಣ್ಣು. ಸೈನ್ಯಾಧಿಕಾರವು ಬುಡಕಟ್ಟು ಚಳವಳಿಯನ್ನು ನಿಗ್ರಹಿಸಲು ಹೆಣ್ಣುದೇಹ ವನ್ನು ಛಿದ್ರಗೊಳಿಸುವ ಹುನ್ನಾರ ಹೂಡಿದಾಗ ಅದನ್ನು ನಿಷ್ಕ್ರಿಯಗೊಳಿಸಿದ ಹೆಣ್ಣು ದೋಪ್ದಿ. ಹೆಣ್ಣಿನ ದನಿಯಡ ಗಿಸಲು ಪುರುಷಾಧಿಕಾರವು ಕಂಡುಕೊಂಡ ಸುಲಭ ಉಪಾಯ ಅವಳ ದೇಹ. ಅತ್ಯಾಚಾರದ ಮೂಲಕ ಅವಳನ್ನು ದಿಗ್ಭ್ರಮೆಗೆ ತಳ್ಳುವ ಹುನ್ನಾರ ಚರಿತ್ರೆ
ಯುದ್ದಕ್ಕೂ ಕಾಣಿಸುತ್ತದೆ. ಆದರೆ ಈ ಹೊಸಕಾಲದ ದೋಪ್ದಿ ತನ್ನ ಬೆತ್ತಲುದೇಹದ ಮೂಲಕವೇ ಸೈನ್ಯಾಧಿಕಾರಿ ಯನ್ನು ಕಂಗೆಡಿಸುತ್ತಾಳೆ. ಅತ್ಯಾಚಾರದ ಮೂಲಕ ಅವಳ ಆತ್ಮಸ್ಥೈರ್ಯವನ್ನು ಭಗ್ನಗೊಳಿಸಲೆತ್ನಿಸಿದ ಸೈನ್ಯಾಧಿಕಾರಿಯ ಮುಂದೆ ಪೂರ್ಣ ಬೆತ್ತಲಾಗಿ ತಲೆಯೆತ್ತಿ ನಿಲ್ಲುವುದು ಅವಳು ವ್ಯವಸ್ಥೆಗೆ ತೋರುವ ಪ್ರತಿಭಟನೆ. ‘ನಗ್ನತೆಯನ್ನು ಯಾರೂ ಮುಚ್ಚಲಾರಿರಿ’ ಎಂಬ ಅವಳ ಮಾತು ಲೈಂಗಿಕ ನೈತಿಕತೆಯ ಕಲ್ಪನೆಯನ್ನು ಕಟ್ಟಿದ ಜ್ಞಾನಮಾದರಿಗಳಿಗೇ ಎಸೆಯುವ ಸವಾಲು.

ಈ ಮೂರೂ ಸಂದರ್ಭಗಳು ನಗ್ನತೆಯ ಮಹಾರೂಪಕಗಳಾಗಿ ನಿಲ್ಲುತ್ತವೆ. ಇಂದಿಗೂ ನಡೆಯುತ್ತಿರುವ ದಲಿತ ಹೆಣ್ಣುಮಕ್ಕಳ ಬೆತ್ತಲೆ ಮೆರವಣಿಗೆ ಹಾಗೂ ಅತ್ಯಾಚಾರ ಪ್ರಕರಣಗಳು ಭಯವನ್ನು ಉತ್ಪಾದಿಸುತ್ತಲೇ ಇವೆ. ಸರ್ಕಾರವು ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ, ಸಮಾನ ಉದ್ಯೋಗಾವಕಾಶಗಳನ್ನು ಕಲ್ಪಿಸಿದ್ದರೂ ಅವರು ತಮ್ಮ ಪರಿಸರದಲ್ಲೇ ಸುರಕ್ಷಿತರಾಗಿಲ್ಲ ಎಂಬುದು ಮತ್ತೆಮತ್ತೆ ಮನವರಿಕೆಯಾಗುತ್ತಲೇ ಇದೆ. ಹೆಣ್ಣಿಗೆ ತನ್ನ ದೇಹದ ಬಗೆಗಿನ ಸ್ವಯಂ ಅರಿವು ಹಾಗೂ ಸಮಾಜದಲ್ಲಿ ಹೆಣ್ಣುದೇಹದ ಸ್ವಾಯತ್ತತೆಯ ಬಗೆಗಿನ ಅರಿವು ಎರಡೂ ಒಟ್ಟಿಗೆ ಕೆಲಸ ಮಾಡುವುದು ಮುಖ್ಯವಾಗುತ್ತದೆ. ನಮಗೆ ರಾಜಕೀಯ ಸ್ವಾತಂತ್ರ್ಯ ಬಂದರೂ ನಾವು ಮನುಷ್ಯರಾಗದ ಹೊರತು ನಿರ್ಭಯ ಸ್ಥಿತಿಯಲ್ಲಿ ಬದುಕು ಅರಳುವುದಿಲ್ಲ. ಪ್ರಜ್ಞೆಯಲ್ಲಾಗಬೇಕಾದ ಪರಿವರ್ತನೆಯನ್ನು ಅಂದು ಗಾಂಧಿ ಸೂಚಿಸಿದ್ದರು. ಅದಕ್ಕೆ ಬೇಕಾದ ಬೌದ್ಧಿಕ ಎಚ್ಚರ ಹಾಗೂ ಕಾನೂನಿನ ಬೆಂಬಲವನ್ನು ಅಂಬೇಡ್ಕರ್‌ ಪ್ರತಿಪಾದಿಸಿದ್ದರು.

ಆಧುನಿಕ ಸಂದರ್ಭದಲ್ಲಿ ನಮ್ಮ ಪ್ರಜ್ಞೆ ಎರಡು ನೆಲೆಯಲ್ಲಿ ರೂಪುಗೊಳ್ಳುತ್ತದೆ. ಒಂದು ನೆಲೆ ಕೌಟುಂಬಿಕ ಹಾಗೂ ಸಾಮಾಜಿಕ ಪರಿಸರದಲ್ಲಿ ರೂಪುಗೊಂಡರೆ, ಇನ್ನೊಂದು, ಶೈಕ್ಷಣಿಕ ಪರಿಸರದಲ್ಲಿ ವಿಕಾಸಗೊಳ್ಳುತ್ತದೆ. ಬಾಲ್ಯದಲ್ಲಿ ನಮ್ಮ ಸ್ವಭಾವದ ಪಡಿಯಚ್ಚು ರೂಪುಗೊಳ್ಳುತ್ತದೆ. ಹಿರಿಯರನ್ನು ನೋಡಿ, ಕೇಳಿ, ಅನುಕರಿಸಿ ನಮ್ಮ ಗ್ರಹಿಕೆಗಳ ವಿನ್ಯಾಸವೊಂದು ರೂಪುಗೊಳ್ಳುತ್ತದೆ. ಇದು ಅಪ್ರಜ್ಞಾ ಸ್ಥಿತಿಯಲ್ಲೇ ಆಗುವ ಕಲಿಕೆ. ಪ್ರಜ್ಞಾಪೂರ್ವಕವಾಗಿಯೂ ಕುಟುಂಬವು ಮೌಲ್ಯಗಳನ್ನು ಬಿತ್ತುವ ಕೆಲಸವನ್ನು ಮಾಡುತ್ತದೆ. ಧರ್ಮ, ಜಾತಿ, ಸಂಸ್ಕೃತಿ, ಸಂಪ್ರದಾಯ, ನಂಬಿಕೆ ಹೀಗೆ ಹಲವು ನೆಲೆಗಳಲ್ಲಿ ನಮ್ಮ ಸತ್ವವು ರೂಪುಗೊಳ್ಳುತ್ತಾ ಹೋಗುತ್ತದೆ. ನಂತರ ವ್ಯಕ್ತಿಯನ್ನು ಸದಸ್ಯನನ್ನಾಗಿ ರೂಪಿಸುವುದು ಶಿಕ್ಷಣ.

ಸಮಾಜದ ವಿವಿಧ ಸ್ತರಗಳ ಜನರು ಕೂಡಿ ಅರಿಯುವ, ಕೂಡಿ ಬದುಕುವ, ಪರಸ್ಪರರನ್ನು ಗೌರವಿಸುವ, ಹಂಚಿಕೊಳ್ಳುವ, ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ತತ್ವ ವಿಶಾಲ ಭಿತ್ತಿಯಲ್ಲಿ ಬದುಕನ್ನು ತೆರೆದಿಡುತ್ತದೆ. ಪ್ರಜಾಪ್ರಭುತ್ವದ ಈ ಮನೋಭಾವ ನಮ್ಮ ಬದುಕಿನ ಧರ್ಮವೇ ಆಗಬೇಕೆಂಬುದು ಸಂವಿಧಾನದ ಸಂಕಲ್ಪ. ಅದು ದೇಶವೊಂದರ ಕನಸೂ ಹೌದು, ಕಾನೂನೂ ಹೌದು. ದೇಶದ ಅಭಿವೃದ್ಧಿಯಲ್ಲಿ ಎಲ್ಲರ ತೊಡಗುವಿಕೆಯ ಪರಿಕಲ್ಪನೆಯು ಎಷ್ಟೋ ಸಲ ವ್ಯಕ್ತಿಗಳ ಸಾಂಪ್ರದಾಯಿಕ ಪಾತ್ರಗಳೊಂದಿಗೆ ಡಿಕ್ಕಿ ಹೊಡೆಯುತ್ತದೆ. ಪಿತೃಪ್ರಧಾನ ಕುಟುಂಬ ವ್ಯವಸ್ಥೆಯಲ್ಲಿ ಹೆಣ್ಣಿನ ಸಾಮಾಜಿಕ ತೊಡಗುವಿಕೆಯ ಸಾಧ್ಯತೆ ಗೌಣವಾಗಿದೆ. ಅದು ವಂಶಪಾರಂಪರ್ಯಕ್ಕಾಗಿ ಸಂತಾನವನ್ನು ಸೃಷ್ಟಿಸುವ ಸಾಧನವಾಗಿಯೇ ಹೆಣ್ಣನ್ನು ರೂಪಿಸುತ್ತಾ ಬಂದಿದೆ.

ವಿವಾಹದ ಮೂಲಕ ಅವಳ ದೇಹ, ಮನಸ್ಸು, ಪ್ರಜ್ಞೆಯನ್ನು ಆಳುವ ಒಡೆತನವನ್ನು ಪುರುಷನಿಗೆ ನೀಡುತ್ತಾ ಬಂದಿದೆ. ಆಧುನಿಕ ರಾಷ್ಟ್ರವು ನೀಡಿದ ಸಮಾನತೆ, ಸಮಾನ ಅವಕಾಶ, ಅವಳನ್ನು ಸಹಜವಾಗಿಯೇ ಸಮಾಜ ಮುಖಿಯಾಗಿಸಿವೆ. ದೇಹಮಗ್ನತೆಯಿಂದ ದೇಶವೆಂಬ ರಾಜಕೀಯ ಆಯಾಮಕ್ಕೆ ತೆರೆದುಕೊಳ್ಳುವಿಕೆ ಅವಳಿಗೆ ಹೊಸ ಅಸ್ತಿತ್ವವೊಂದನ್ನು ನೀಡಿದೆ. ಅಷ್ಟಕ್ಕೇ ನಿಲ್ಲದೆ ದೇಶದ ಅಭಿವೃದ್ಧಿಯಲ್ಲಿ ಅವಳ ಸಮಾನ ತೊಡಗುವಿಕೆ ಮುಖ್ಯವೆಂಬ ಅರಿವು ವಿಕಾಸವಾಗುತ್ತ ಬಂದಿದೆ. ಸಾರ್ವಜನಿಕ ನೀತಿಗಳು, ಕಾನೂನು, ಆಡಳಿತ, ಅಭಿವೃದ್ಧಿ ಮಾದರಿಗಳು ಎಲ್ಲವೂ ಲಿಂಗಸಂವೇದನಾಶೀಲಗೊಳ್ಳುವುದು ಈ ಕಾಲದ ತುರ್ತು. ಆದರೆ ಕುಟುಂಬದಲ್ಲಿ ಇಂಥ ಸಂವೇದನಾಶೀಲತೆ ವಿಕಾಸವಾಗದೇ ಅದು ಹೊರಗಿನ ವ್ಯವಸ್ಥೆಯಲ್ಲಿ ಮಾತ್ರ ಇರಬೇಕೆಂದು ಬಯಸುವುದು ದ್ವಂದ್ವ ನೀತಿಯಾಗುತ್ತದೆ. ಈ ಸಂದಿಗ್ಧವನ್ನು ಸೂಕ್ಷ್ಮವಾಗಿ ತಾಳ್ಮೆಯಿಂದ ನಿಭಾಯಿಸುವ ಕಾರ್ಯನೀತಿಗಳು ಇಂದು ಬೇಕಾಗಿವೆ. ಇದಕ್ಕಾಗಿ ಸಾಮೂಹಿಕ ಪ್ರಜ್ಞೆಯೊಂದು ಹದಗೊಳ್ಳುವುದು ಅಗತ್ಯ.

ಲೇಖಕಿ: ಸಹಪ್ರಾಧ್ಯಾಪಕಿ, ಡಾ. ಡಿ.ವಿ.ಜಿ. ಕನ್ನಡ ಅಧ್ಯಯನ ಕೇಂದ್ರ, ತುಮಕೂರು ವಿಶ್ವವಿದ್ಯಾಲಯ, ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT