ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಯಾಂಬು ತಂತ್ರಜ್ಞಾನ ಮತ್ತು ಚುನಾವಣೆ   

Published 5 ಏಪ್ರಿಲ್ 2024, 0:09 IST
Last Updated 5 ಏಪ್ರಿಲ್ 2024, 0:09 IST
ಅಕ್ಷರ ಗಾತ್ರ

ಇದೇ ಜನವರಿ ತಿಂಗಳಿನಲ್ಲಿ ಅಮೆರಿಕದ ನ್ಯೂ ಹ್ಯಾಂಪ್‍ಶೈರ್‌ನ ನಿವಾಸಿಗಳು ಬೆಳ್ಳಂಬೆಳಗ್ಗೆ ಅಚ್ಚರಿಯ ಮಡುವಿನಲ್ಲಿ ಬಿದ್ದಿದ್ದರು. ಅದಕ್ಕೆ ಕಾರಣ, ಅಧ್ಯಕ್ಷ ಜೋ ಬೈಡನ್ ಅವರು ಜನರಿಗೆ ಫೋನ್ ಮಾಡಿ ಕ್ಷೇಮ ವಿಚಾರಿಸಿ ‘ವೈಟ್‍ಹೌಸ್‍ನಿಂದ ಮಾತನಾಡುತ್ತಿದ್ದೇನೆ. ಚುನಾವಣೆಯ ದಿನ ಮತಗಟ್ಟೆಗೆ ಬರಬೇಡಿ. ನಿಮಗೆಲ್ಲ ಶುಭವಾಗಲಿ’ ಎಂದು ಮಾತು ಮುಗಿಸಿದ್ದರು. ದೇಶದ ಅಧ್ಯಕ್ಷರೇ ಖುದ್ದು ಫೋನ್ ಮಾಡಿದ್ದಾರೆ ಎಂಬ ಖುಷಿ, ಉದ್ವೇಗ, ಅನುಮಾನದ ಜೊತೆ, ‘ಅರೆ, ಇದೇನಿದು, ಅಧ್ಯಕ್ಷರಾದವರು ಹೀಗೆಲ್ಲ ಹೇಳುತ್ತಾರಾ?’ ಎಂಬ ಪ್ರಶ್ನೆ ಮನಸ್ಸಿನಲ್ಲಿ ಮೊಳೆತು ಜನ ವಾಸ್ತವಕ್ಕೆ ಬಂದಂತೆ, ಅದು ಯಾಂಬು (ಯಾಂತ್ರಿಕ ಬುದ್ಧಿಮತ್ತೆ- ಎ.ಐ) ಆಧಾರಿತ ರೊಬಾಟ್‌ ಮಾಡಿದ ಕಿತಾಪತಿ ಎಂದು ಗೊತ್ತಾಗಿ ನಿರಾಳರಾದರು.

ಹಿಂದಿನ ಸೆಪ್ಟೆಂಬರ್‌ನಲ್ಲಿ ಸ್ಲೊವಾಕಿಯಾದ ನ್ಯಾಟೊ ನಾಯಕರೊಬ್ಬರು ಮತ್ತು ಪತ್ರಕರ್ತನ ನಡುವೆ ನಡೆದ ‘ಚುನಾವಣೆಗಳಲ್ಲಿ ಹೇಗೆ ಮೋಸ ಮಾಡಬಹುದು?’ ಎಂಬ ಸಂಭಾಷಣೆಯೊಂದು ಫೇಸ್‍ಬುಕ್‍ನಲ್ಲಿ ಪ್ರಕಟಗೊಂಡು ರಾಜಕೀಯದ ದೊಡ್ಡ ಬಿರುಗಾಳಿಯನ್ನೇ ಹುಟ್ಟುಹಾಕಿತ್ತು. ಚುನಾವಣೆಗೆ ಎರಡು ದಿನ ಬಾಕಿ ಇದ್ದಾಗ ಈ ಆಡಿಯೊ ತುಣುಕು ದೇಶದಾದ್ಯಂತ ಪ್ರಜೆಗಳ ಮನಸ್ಸಿನಲ್ಲಿ ತಲ್ಲಣ ಸೃಷ್ಟಿಸಿತು. ಇದಕ್ಕಿಂತ ಗಂಭೀರವಾದ ಪ್ರಮಾದವೆಸಗಿದ್ದ ಯಾಂಬು, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬಂಧನಕ್ಕೆ ಒಳಗಾದಂತಹ ನಕಲಿ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ವಿಶ್ವದ ನಾಯಕರನ್ನೆಲ್ಲ ಬೆಚ್ಚಿಬೀಳಿಸಿತ್ತು. ‌ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಇತ್ತೀಚಿನ ಚುನಾವಣೆಗಳಲ್ಲಿ ‘ಮತಗಟ್ಟೆಗಳನ್ನು ನಮ್ಮ ವಿರೋಧಿಗಳು ವಶಪಡಿಸಿಕೊಂಡಿದ್ದಾರೆ. ನಮ್ಮ ಬೆಂಬಲಿಗರು ಯಾರೂ ಮತ ಹಾಕಲು ಮತಗಟ್ಟೆಗೆ ಬರಬೇಡಿ’ ಎಂಬ ನಕಲಿ ವಿಡಿಯೊಗಳು ಮತದಾರರ ಮೊಬೈಲಿನಲ್ಲಿ ಕಾಣಿಸಿಕೊಂಡು ಅವರಲ್ಲಿ ದೊಡ್ಡ ಗೊಂದಲ ಸೃಷ್ಟಿಸಿದ್ದವು.

ಮಧ್ಯಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಈ ಬಾರಿಯ ವಿಧಾನಸಭೆ ಚುನಾವಣೆಗಳಲ್ಲಿ ‘ಕೌನ್‍ ಬನೇಗಾ ಕರೋಡ್‍ಪತಿ?’ ಮಾದರಿಯ ವಿಡಿಯೊ ತುಣುಕುಗಳಲ್ಲಿ, ಅಭ್ಯರ್ಥಿಗಳು ತಮ್ಮ ಎದುರಾಳಿಗಳನ್ನು ಬೆಂಬಲಿಸುವಂತೆ ಚಿತ್ರೀಕರಿಸಿ ಅವನ್ನು ಸಾಮಾಜಿಕ ಜಾಲತಾಣ ಮತ್ತು ಮತದಾರರ ಮೊಬೈಲುಗಳಿಗೆ ನೇರವಾಗಿ ಕಳುಹಿಸಿದ್ದರು.

ವಿಡಿಯೊಗಳು ನಕಲಿ ಎಂಬುದು ಜನರಿಗೆ ಗೊತ್ತಾಗಿದ್ದು ತುಂಬಾ ತಡವಾಗಿ. ಅಷ್ಟರಲ್ಲಾಗಲೇ ಚುನಾವಣೆಗೆ ಕೆಲವೇ ಗಂಟೆಗಳು ಬಾಕಿ ಇದ್ದವು. ದಿನಕ್ಕೊಂದು ಹೊಸ ಅವತಾರದೊಂದಿಗೆ ಶಿಕ್ಷಣ, ಆರೋಗ್ಯ, ಸಂವಹನ, ಉತ್ಪಾದನಾ ಕ್ಷೇತ್ರಗಳಲ್ಲೆಲ್ಲಾ ದಾಂಗುಡಿ ಇಡುತ್ತಿರುವ ಯಾಂಬು, 2024ರ ಎಲ್ಲ ಚುನಾವಣೆಗಳ ಮೇಲೆ ಗಾಢ ಪ್ರಭಾವ ಬೀರಲಿದೆ. ದೇಶದ ಎಲ್ಲ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ತಮ್ಮ ಎದುರಾಳಿಗಳನ್ನು ಮಣಿಸಲು ಮತ್ತು ಬೆಂಬಲಿಗರನ್ನು ತಮ್ಮ ಪ್ರಭಾವದಲ್ಲೇ ಇರಿಸಿಕೊಳ್ಳಲು ಯಾಂಬು ಸಹಾಯದಿಂದ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರಗತಿಯ ಚಟುವಟಿಕೆ ನಡೆಸುತ್ತಿವೆ. ಈ ಬಾರಿಯ ಲೋಕಸಭೆ ಚುನಾವಣೆಯನ್ನು ‘ಎ.ಐ. ಎಲೆಕ್ಷನ್’ (ಯಾಂತ್ರಿಕ ಬುದ್ಧಿಮತ್ತೆ ಎಲೆಕ್ಷನ್) ಎಂದು ಕರೆಯುವಷ್ಟರ ಮಟ್ಟಿಗೆ ಯಾಂಬುವಿನ ಬಳಕೆ ಹೆಚ್ಚಾಗಿದೆ.

ಹಿಂದಿನ ಮೂರು ದಶಕಗಳಿಂದ ನಮ್ಮ ಚುನಾವಣೆಗಳಲ್ಲಿ ಆಧುನಿಕ ತಂತ್ರಜ್ಞಾನ ಯಥೇಚ್ಛವಾಗಿ ಬಳಕೆಯಾಗುತ್ತಿದೆ. ತೊಂಬತ್ತರ ದಶಕದಲ್ಲಿ ಮನೆ ಮನೆಗೂ ಫೋನ್ ಮಾಡುತ್ತಿದ್ದ ರಾಜಕೀಯ ಧುರೀಣರು, ಮತದಾರರ ಬಳಿ ವೋಟಿಗಾಗಿ ಮೊರೆ ಇಡುತ್ತಿದ್ದರು. 2007ರಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಸಲ ಮೊಬೈಲ್‌ ಫೋನ್‍ಗಳಲ್ಲಿ ಲಕ್ಷಾಂತರ ಜನರಿಗೆ ಬರಹ ರೂಪದ ಸಂದೇಶ ಮತ್ತು ಪಕ್ಷಗಳ ಚಿಹ್ನೆಯ ಹಾಲೊಗ್ರಾಂ ಕಳಿಸುವ ಮೂಲಕ ಮತಯಾಚನೆ ನಡೆದಿತ್ತು. 2014ರ ಚುನಾವಣೆಗೆ ಫೇಸ್‍ಬುಕ್ ಬಳಕೆ ಮಾಡಿಕೊಂಡಿದ್ದ ಪಕ್ಷಗಳು ಅದಕ್ಕಾಗಿ ₹ 500 ಕೋಟಿ ವ್ಯಯಿಸಿದ್ದವು. 2015ರಲ್ಲಿ ಏಷ್ಯನ್ ಜರ್ನಲ್ ಆಫ್ ಪೊಲಿಟಿಕಲ್ ಸೈನ್ಸ್‌ನಲ್ಲಿ ಪ್ರಕಟಗೊಂಡ ಲೇಖನವೊಂದು ಚುನಾವಣಾ ಅಭ್ಯರ್ಥಿಯ ಹೇಳಿಕೆ, ಚಿತ್ರಗಳಿಗೆ ಫೇಸ್‍ಬುಕ್‍ನಲ್ಲಿ ಸಿಕ್ಕ ಲೈಕು ಮತ್ತು ಚುನಾವಣೆಯಲ್ಲಿ ಆತ ಗಳಿಸಿದ ಮತಗಳ ಪ್ರಮಾಣದ ತೌಲನಿಕ ಅಧ್ಯಯನ ನಡೆಸಿತ್ತು. ಅಭ್ಯರ್ಥಿಗೆ ಸಿಕ್ಕ ಫೇಸ್‍ಬುಕ್ ಮೆಚ್ಚುಗೆಗಳಿಗೂ ಮತ್ತು ಮತಗಳಿಗೂ ಹೆಚ್ಚಿನ ಅಂತರವಿರಲಿಲ್ಲ ಎಂಬುದು ಸಂಶೋಧನಾ ಬರಹದಲ್ಲಿ ಎದ್ದು ಕಂಡಿತ್ತು.

2019ರ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಿಗೆ ವಾಟ್ಸ್‌ಆ್ಯಪ್ ಬಳಕೆ ವ್ಯಾಪಕವಾಗಿತ್ತು. ವಾಟ್ಸ್‌ಆ್ಯಪ್ ಬಳಕೆಯಿಂದ ರಾಜಕೀಯ ಪಕ್ಷಗಳು ಮತದಾರರೊಂದಿಗೆ ನೇರ ಸಂವಾದಕ್ಕೆ ಇಳಿಯಬಹುದು ಮತ್ತು ಅಭ್ಯರ್ಥಿಗಳು ತಮ್ಮ ಕಾರ್ಯಕರ್ತರ ನೇರ ಅಭಿಪ್ರಾಯ, ಸಲಹೆ ಪಡೆದು ಮುನ್ನಡೆಯಬಹುದು. ಬೇರೆ ಸಾಮಾಜಿಕ ಜಾಲತಾಣ ಬಳಕೆಗೆ ಹೋಲಿಸಿದಲ್ಲಿ ವಾಟ್ಸ್‌ಆ್ಯಪ್ ಬಳಕೆ ಸುಲಭ ಮತ್ತು ಈಗ ವಾಟ್ಸ್‌ಆ್ಯಪ್ ಮೂಲಕ ಹಣವನ್ನೂ ಕಳಿಸಬಹುದಾದ್ದರಿಂದ, ಕಾರ್ಯಕರ್ತರ ಖರ್ಚನ್ನು ನೇರವಾಗಿ ನಿಭಾಯಿಸುವ ಅವಕಾಶಗಳೂ ಲಭ್ಯವಾಗಿವೆ.

ಮತ್ತೇರಿದ ಗೂಳಿಯಂತೆ ಎಲ್ಲೆಂದರಲ್ಲಿ ನುಗ್ಗುತ್ತಿರುವ ಯಾಂಬುವನ್ನು ನಿಯಂತ್ರಿಸಲು ಸರ್ಕಾರಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿವೆ. ಯಾಂತ್ರಿಕ ಬುದ್ಧಿಮತ್ತೆ ಉತ್ಪಾದನೆಗಳನ್ನು ನಿರ್ವಹಿಸುವ ಕಂಪನಿಗಳಿಗೆ ಮಾರ್ಗದರ್ಶಿ ಸೂತ್ರಗಳನ್ನು ನೀಡಿರುವ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಪರೀಕ್ಷಾ ಹಂತದಲ್ಲಿರುವ ಮತ್ತು ಪ್ರಮಾಣೀಕರಿಸಲಾಗದ ಯಾವುದೇ ಉತ್ಪನ್ನವನ್ನು ಜನರಿಗೆ ನೀಡಕೂಡದು ಎಂದಿದೆ. ಭಾರತದ ಕಾನೂನಿಗೆ ವಿರುದ್ಧವಾಗಿ ಯಾಂತ್ರಿಕ ಬುದ್ಧಿಮತ್ತೆಯು ಯಾವುದೇ

ಪ್ರತಿಕ್ರಿಯೆಗಳನ್ನು ನೀಡುವುದಾಗಲೀ ಚುನಾವಣಾ ವ್ಯವಸ್ಥೆಗೆ ಧಕ್ಕೆ ತರುವ ಕೆಲಸಗಳನ್ನಾಗಲೀ ಮಾಡಕೂಡದು ಎಂದು ನಿರ್ದಾಕ್ಷಿಣ್ಯವಾಗಿ ಹೇಳಿದೆ. ಅನೇಕ ಕಂಪನಿಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಸ್ಟಾರ್ಟ್‌ಅಪ್ ಕಂಪನಿಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಅಮೆರಿಕ ಸರ್ಕಾರವು ಎ.ಐ. ಆಧಾರಿತ ರೋಬೊ ಟೆಲಿಫೋನ್ ಕರೆಗಳನ್ನು ಕಾನೂನುಬಾಹಿರಗೊಳಿಸಿದೆ.

ಯಾಂಬು ನಿರ್ಮಾಣದ ಹಿಂದಿರುವ ಓಪನ್ ಎ.ಐ., ಮೈಕ್ರೊಸಾಫ್ಟ್, ಗೂಗಲ್ ಮತ್ತು ಮೆಟಾ ಕಂಪನಿಗಳು ಯಾಂಬುವಿನಿಂದ ಜನರಿಗಾಗುತ್ತಿರುವ ತೊಂದರೆ ನಿಗ್ರಹಿಸಲು ಪಣ ತೊಟ್ಟಿವೆ. ತಾವೇ ಸೃಷ್ಟಿಸಿದ ತಂತ್ರಜ್ಞಾನವೊಂದು ಕೈಮೀರಿ ವರ್ತಿಸುತ್ತಿರುವುದು ಕಂಪನಿಗಳಲ್ಲಿ ಆತಂಕ ಸೃಷ್ಟಿಸಿದೆ.

ಸಂಸ್ಕರಿಸಲಾದ ಇಲ್ಲವೇ ನಕಲಿ ವಿಡಿಯೊಗಳನ್ನು ಸೃಷ್ಟಿಸುವುದು ಈಗ ಅತ್ಯಂತ ಸುಲಭ ಮತ್ತು ಕಡಿಮೆ ಖರ್ಚು ತಗಲುವುದರಿಂದ ಅವುಗಳ ಹಾವಳಿ ಜೋರಾಗಿದೆ. ಇಂಡಿಯನ್ ‘ಡೀಪ್ ಫೇಕರ್’ ಎಂಬ ಸಂಸ್ಥೆಯ ಹೆಸರಿನಲ್ಲಿ ಚುನಾವಣೆ ಮತ್ತಿತರ ಪ್ರಚಾರ ಕೆಲಸಗಳಲ್ಲಿ ನಿರತರಾಗಿರುವ ದಿವ್ಯೇಂದ್ರ ಸಿಂಗ್ ಜಾಡೂನ್ ‘ಎದುರಾಳಿ ಪಕ್ಷದವರನ್ನು ಕೆಟ್ಟದಾಗಿ ಬಿಂಬಿಸುವ ವಿಡಿಯೊಗಳನ್ನು ಮಾಡಿಕೊಡುವಂತೆ ನಮ್ಮನ್ನು ಕೇಳುವವರು ಕಡಿಮೆಯೇ. ಮುಂದೊಂದು ದಿನ ಅದು ತಮಗೆ ವಿರುದ್ಧವಾಗಬಹುದು ಎಂಬ ಕಾರಣದಿಂದ ಅಂತಹ ವಿಡಿಯೊಗಳನ್ನು ತಾವೇ ಮಾಡಿಕೊಳ್ಳುತ್ತಿದ್ದಾರೆ. ನಾವೇನಿದ್ದರೂ ಚಾಟ್‌ಬಾಟ್‌ ಬಳಸಿ ಜನಪ್ರಿಯ ನಾಯಕರು ಭಾಷಣ ಮಾಡಿದಂತೆ, ಟೆಲಿಫೋನ್ ಕರೆ ಮಾಡಿದಂತೆ ಮತ್ತು ದಿವಂಗತರಾದ ನಾಯಕರು ಮತ್ತೆ ಜೀವತಳೆದು ಮಾತನಾಡುವಂತಹ ವಿಡಿಯೊಗಳನ್ನು ಸೃಷ್ಟಿಸಿ ಜನರಿಗೆ ತಲುಪಿಸುತ್ತೇವೆ. ಆದ್ದರಿಂದ, ಯಾಂತ್ರಿಕ ಬುದ್ಧಿಮತ್ತೆಯ ಬಳಕೆ ಸಂಪೂರ್ಣ ಕೆಡುಕಿನದು ಎಂದು ಹೇಳಲಾಗುವುದಿಲ್ಲ’ ಎನ್ನುತ್ತಾರೆ.

ಸುದ್ದಿಯ ಸತ್ಯಾಸತ್ಯತೆಯನ್ನು ಪತ್ತೆ ಮಾಡುವ ‘ಆಲ್ಟ್ ನ್ಯೂಸ್’ ಸಂಸ್ಥೆಯ ಪ್ರತೀಕ್ ಸಿನ್ಹಾ, ‘ಈಗ ಬಳಕೆಯಲ್ಲಿರುವಯಾಂಬು ಅಷ್ಟೊಂದು ಸಮರ್ಥವಾಗಿಲ್ಲ, ಹಳೆಯ ಪ್ರಚಾರದ ವೈಖರಿಗಳೇ ಈಗಲೂ ಜನಪ್ರಿಯವಾಗಿವೆ. ಹಿಂದಿನ ವರ್ಷ ಪ್ರಧಾನಿಯವರು ಮಾಡಿದ ಭಾಷಣವನ್ನು ‘ಭಾಷಿಣಿ’ ಎಂಬ ಆ್ಯಪ್ ಬಳಸಿ ಅದೇ ಸಮಯದಲ್ಲಿ ಕೆಲವು ಪ್ರಾದೇಶಿಕ ಭಾಷೆಗಳಿಗೆ ತರ್ಜುಮೆ ಮಾಡುವ ಪ್ರಯತ್ನ ಮಾಡಲಾಯಿತು. ಅದು ಅಷ್ಟೊಂದು ಯಶಸ್ವಿಯಾಗಲಿಲ್ಲ’ ಎಂದು ದಾಖಲೆ ನೀಡುತ್ತಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಗೊಳ್ಳುವ ವಿಷಯಗಳು ನಕಲಿಯೋ ಅಸಲಿಯೋ ಎಂಬುದನ್ನು ಪತ್ತೆ ಮಾಡುವ ‘ಬೂಮ್’ ವೆಬ್‌ಸೈಟ್‌ನ ಕರೆನ್ ರೆಬೆಲೊ, ‘ಲ್ಯಾಪ್‌ಟಾಪ್ ಇರುವ ಯಾರು ಬೇಕಾದರೂ ಯಾಂಬು ಬಳಸಿಕೊಂಡು ನಕಲಿ ವಿಡಿಯೊ ಸೃಷ್ಟಿಸಬಹುದು, ಚುನಾವಣೆಗೆ ಸಂಬಂಧಿಸಿದಂತೆ ಯಾಂಬು ದುರ್ಬಳಕೆಯಾಗುತ್ತಿದೆ ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಒಟ್ಟಿನಲ್ಲಿ, ಯಾಂಬು ತನ್ನ ವಿರಾಟದರ್ಶನ ತೋರಲು ಅಣಿಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT