ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಗುಜರಿ ನೀತಿ: ಏನೇನೋ ಫಜೀತಿ

Published 9 ಡಿಸೆಂಬರ್ 2023, 1:56 IST
Last Updated 9 ಡಿಸೆಂಬರ್ 2023, 1:56 IST
ಅಕ್ಷರ ಗಾತ್ರ

ವಾಯುಮಾಲಿನ್ಯ ತಡೆಯುವ ವಿಚಾರ ಬಂದಾಗಲೆಲ್ಲ ರಸ್ತೆಗಳಲ್ಲಿ ದಟ್ಟ ಹೊಗೆಯುಗುಳುವ ಅವಧಿ ಮೀರಿದ ಮುದಿ ವಾಹನಗಳ ಸಂಚಾರವನ್ನು ನಿಷೇಧಿಸುವ ವಿಷಯ ಪ್ರಸ್ತಾಪವಾಗುತ್ತದೆ. ಆದರೆ ಅದನ್ನು ಕಾರ್ಯರೂಪಕ್ಕಿಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಠಿಣ ನೀತಿ, ನಿರ್ದೇಶನ ಇರಲಿಲ್ಲ. 2016ರಿಂದಲೂ ಸ್ಪಷ್ಟ ‘ಗುಜರಿ ನೀತಿ’ಯನ್ನು ರೂಪಿಸಲು ಹೆಣಗುತ್ತಿದ್ದ ಕೇಂದ್ರ ಸರ್ಕಾರ ಕಳೆದ ವರ್ಷ ಏಪ್ರಿಲ್ ಒಂದರಿಂದ ಹೊಸ ನೀತಿಯನ್ನು ಜಾರಿಗೆ ತಂದಿದೆ.

ಈ ಹೊಸ ನೀತಿಯ ಪ್ರಕಾರ ಮಿಲಿಟರಿ ಮತ್ತು ತುರ್ತು ಚಿಕಿತ್ಸಾ ವಾಹನಗಳನ್ನು ಹೊರತುಪಡಿಸಿ ಹದಿನೈದು ವರ್ಷ ಹಳೆಯದಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಸ್ವಾಮ್ಯದ ವಾಹನಗಳನ್ನು ಅವು ಎಷ್ಟೇ ಸಮರ್ಥವಾಗಿ
ದ್ದರೂ ಗುಜರಿಗೆ ಹಾಕಲಾಗುತ್ತದೆ. ನಂತರ ಖಾಸಗಿ ವಲಯದ ವಾಣಿಜ್ಯ ಬಳಕೆಯ ವಾಹನಗಳಾದ ಬಸ್ಸು, ಲಾರಿ, ಕ್ಯಾಬ್‍ಗಳು ಮೊದಲ ಎಂಟು ವರ್ಷಗಳವರೆಗೆ ಪ್ರತಿ ಎರಡು ವರ್ಷಕ್ಕೊಮ್ಮೆ ಮತ್ತು ನಂತರ ಪ್ರತಿ ವರ್ಷಕ್ಕೊಮ್ಮೆ ದೃಢತೆ ಪ್ರಮಾಣಪತ್ರ (ಎಫ್‌ಸಿ) ಪಡೆಯಬೇಕು. ಹೀಗೆಯೇ ಮುಂದುವರೆದು ಹದಿನೈದು ವರ್ಷ ಹಳೆಯದಾದ ಮೇಲೆ ದೃಢತೆ ಪರೀಕ್ಷೆ ತೇರ್ಗಡೆಯಾಗದಿದ್ದರೆ ಗುಜರಿಗೆ ಹೋಗಲೇಬೇಕು. ಸ್ವಂತಕ್ಕೆ ಬಳಸುವ ಕಾರು ಮತ್ತಿತರೆ ವಾಹನಗಳು 20 ವರ್ಷಗಳಾದ ಮೇಲೆ ದೃಢತೆ ಪ್ರಮಾಣ ಪತ್ರ ಪಡೆಯುವಲ್ಲಿ ವಿಫಲಗೊಂಡರೆ ಅವೂ ಗುಜರಿಗೆ ಹೋಗಬೇಕಾಗುತ್ತವೆ. ಸುಸ್ಥಿತಿಯಲ್ಲಿರುವ ವಾಹನಗಳನ್ನು ಗುಜರಿಗೆ ಹಾಕಲೇಬೇಕಿಲ್ಲ. ದೃಢತೆ ಪರೀಕ್ಷೆಗಳನ್ನು ಪೂರೈಸದ ವಾಹನಗಳಿಗೆ ಮತ್ತೊಂದು ಅವಕಾಶ ನೀಡಲಾಗುತ್ತದೆ. ಆಗಲೂ ಪಾಸಾಗದಿದ್ದರೆ ಗುಜರಿ ಕೇಂದ್ರಗಳೇ ಗತಿ.

ಎಂಟು ವರ್ಷ ಹಳೆಯದಾದ ಸರಕುಸಾಗಣೆ ವಾಹನ ಮತ್ತು ಹದಿನೈದು ವರ್ಷ ಹಳೆಯದಾದ ಖಾಸಗಿ ವಾಹನಗಳಿಗೆ ರಸ್ತೆ ತೆರಿಗೆ ಮೊತ್ತದ ಶೇಕಡ 10ರಿಂದ 25 ರಷ್ಟು ಗ್ರೀನ್‍ಟ್ಯಾಕ್ಸ್ (ಹಸಿರುತೆರಿಗೆ) ಹಾಕಬೇಕೆಂಬ ಪ್ರಸ್ತಾಪವಿದೆ. ಕರ್ನಾಟಕ, ಮಹಾರಾಷ್ಟ್ರದಲ್ಲಿ ಈಗಾಗಲೇ ಗ್ರೀನ್ ಟ್ಯಾಕ್ಸ್ ವಿಧಿಸಲಾಗುತ್ತಿದೆ.

ದೇಶದಲ್ಲಿ ನೋಂದಣಿಯಾಗಿರುವ ವಾಹನಗಳ ಸಂಖ್ಯೆ 34 ಕೋಟಿಗಿಂತ ಹೆಚ್ಚು. ಮುದಿ ವಾಹನಗಳ ಸಂಖ್ಯೆ 6 ಕೋಟಿ. ವಯಸ್ಸಾದರೂ ಓಡುತ್ತಿರುವ ವಾಹನಗಳಲ್ಲದೆ ಸುಮಾರು ಅರ್ಧ ಕೋಟಿ ವಾಹನಗಳು ರಸ್ತೆಯ ಅಕ್ಕ ಪಕ್ಕ, ಪೊಲೀಸ್‌ ಠಾಣೆಗಳ ಮುಂದೆ, ಊರ ಹೊರಗೆ, ಗ್ಯಾರೇಜುಗಳಲ್ಲಿ ತುಕ್ಕು ಹಿಡಿಯುತ್ತ ನಿಂತಿವೆ. ಅವು ಉಂಟುಮಾಡುವ ನೀರು, ಮಣ್ಣು, ಗಾಳಿಯ ಮಾಲಿನ್ಯ ಹೊಸ ವಾಹನಗಳಿಂದಾಗುವ ಮಾಲಿನ್ಯಕ್ಕಿಂತ ಎಪ್ಪತ್ತು ಪಟ್ಟು ಜಾಸ್ತಿ. ರಸ್ತೆಗಿಳಿಯುವ ವಾಹನ ಇಪ್ಪತ್ತು ವರ್ಷಗಳವರೆಗೆ ಮಾತ್ರ ಓಡಬಹುದು ಎಂದಾದರೆ, ಈ ವೇಳೆಗೆ ಕೋಟ್ಯಂತರ ವಾಹನಗಳು ಗುಜರಿಗೆ ಸೇರಬೇಕಿತ್ತು.

ಹದಿನೈದು ವರ್ಷ ಹಳೆಯದಾದ ಸರ್ಕಾರಿ ಸ್ವಾಮ್ಯದ ಎಲ್ಲ ವಾಹನಗಳನ್ನು ಇದೇ ಏಪ್ರಿಲ್ 1ರಿಂದ ಗುಜರಿಗೆ ಹಾಕಲಾಗುತ್ತಿದ್ದು ಇದುವರೆಗೆ ಹದಿಮೂರು ಸಾವಿರ ವಾಹನಗಳು ಗುಜರಿಗೆ ಹೋಗಿವೆ. ಮುಂದಿನ ಜೂನ್ 1ರಿಂದ ಹದಿನೈದು ವರ್ಷ ಹಳೆಯದಾದ ವಾಣಿಜ್ಯ ಬಳಕೆಯ ಮತ್ತು ಇಪ್ಪತ್ತು ವರ್ಷದ ಸ್ವಂತ ವಾಹನ
ಗಳು ಸರ್ಕಾರ ನಿಗದಿಪಡಿಸಿದ ಆಟೊಮೇಟೆಡ್ ಟೆಸ್ಟಿಂಗ್ ಸ್ಟೇಷನ್‌ಗಳಿಂದ (ಎಟಿಎಸ್) ಕಡ್ಡಾಯವಾಗಿ ದೃಢತೆ ಪ್ರಮಾಣಪತ್ರ ಪಡೆಯಲೇಬೇಕು, ಇಲ್ಲವೇ ಗುಜರಿಗೆಹೋಗಬೇಕು. ವಾಣಿಜ್ಯ ಬಳಕೆಯ ಖಾಸಗಿ ವಾಹನಗಳು ಮತ್ತು ಸ್ವಂತಕ್ಕೆ ಬಳಸುವ ವಾಹನಗಳ ದೃಢತೆಪ್ರಮಾಣಪತ್ರ ಶುಲ್ಕವು ಈಗಿರುವುದಕ್ಕಿಂತ ಕ್ರಮವಾಗಿ 62 ಮತ್ತು 8 ಪಟ್ಟು ಹೆಚ್ಚಲಿದೆ. ಆಗ ದುಬಾರಿ ಶುಲ್ಕ ಕಟ್ಟುವುದಕ್ಕಿಂತ ಗುಜರಿಗೆ ಹಾಕುವುದೇ ಉತ್ತಮ ಎಂಬ ಮಾತು ತಜ್ಞರದ್ದು.

ವಾಹನಗಳನ್ನು ಸ್ವಯಂ ನಿರ್ಧಾರದಂತೆ ಗುಜರಿಗೆ ಹಾಕುವವರಿಗೆ ಸರ್ಕಾರ ಕೆಲವು ಸವಲತ್ತುಗಳನ್ನು ನೀಡಲಿದೆ. ಹೊಸ ವಾಹನದ ನೋಂದಣಿಗೆ ಶುಲ್ಕವಿರುವುದಿಲ್ಲ. ಖಾಸಗಿ ವಾಹನಗಳ ರಸ್ತೆ ತೆರಿಗೆಯ ಮೇಲೆ ಶೇ 25 ಮತ್ತು ವಾಣಿಜ್ಯ ವಾಹನಗಳ ರಸ್ತೆ ತೆರಿಗೆಯ ಮೇಲೆ ಶೇ 15ರ ರಿಯಾಯಿತಿ ಇರುತ್ತದೆ. ವಾಹನ ಮಾರಾಟಗಾರರು ಹೊಸ ವಾಹನದ ಬೆಲೆಯಲ್ಲಿ ಹೆಚ್ಚಿನ ರಿಯಾಯಿತಿ ಮತ್ತು ಹಳೆಯ ವಾಹನಕ್ಕೆ ಹೊಸ ವಾಹನದ ಬೆಲೆಯ ಶೇಕಡ 6ರಷ್ಟು ಬೆಲೆ ನೀಡಬಹುದು.

‘ಆಟೊಮೋಟಿವ್ ಇಂಡಸ್ಟ್ರಿ ಸ್ಟ್ಯಾಂಡರ್ಡ್’ (ಎಐಎಸ್)– 129ರ ಪ್ರಕಾರ ವಾಹನ ತಯಾರಿಕೆಗೆ ಬಳಕೆಯಾಗುವ ಬಹುತೇಕ ವಸ್ತುಗಳು ರೀಸೈಕಲ್ ಆಗುವಂತಿರಬೇಕು, ವಾಹನ ಗುಜರಿಯಾದಾಗ ಅದರ ಶೇ 85 ಭಾಗ ಪುನರ್ಬಳಕೆಗೆ ಯೋಗ್ಯವಾಗಿರಬೇಕು ಮತ್ತು ಸೀಸ, ಪಾದರಸ, ಕ್ಯಾಡ್ಮಿಯಂ, ಕ್ರೋಮಿಯಂನಂತಹ ಭಾರದ ಲೋಹಗಳನ್ನು ಬಳಸಿರಕೂಡದು, ಬಳಸಿದ ಪ್ಲಾಸ್ಟಿಕ್‍ನ ಗ್ರೇಡ್ ನಮೂದಾಗಲೇಬೇಕು ಎಂಬ ನಿಯಮವಿದೆ. ಉತ್ಪಾದಕರೇ ಗುಜರಿ ವಿಲೇವಾರಿ ಮಾಡಬೇಕೆಂಬ ‘ಎಕ್ಸ್‌ಟೆಂಡೆಡ್ ಪ್ರೊಡ್ಯೂಸರ್ ರೆಸ್ಪಾನ್ಸಿಬಿಲಿಟಿ’ (ಇಪಿಆರ್) ನಿಯಮವನ್ನು ನಮ್ಮಲ್ಲಿ ಸರಕುಸಾಗಣೆ ವಾಹನಗಳಿಗೆ ಅನ್ವಯಿಸದಿರುವುದು ಮಾಲಿನ್ಯ ನಿಯಂತ್ರಣಕ್ಕೆ ದೊಡ್ಡ ಅಡ್ಡಿಯಾಗಿದೆ.

ತಮ್ಮ ಹಳೆಯ ವಾಹನವನ್ನು ಗುಜರಿಗೆ ಹಾಕಲು ಒಪ್ಪದ ಮಾಲೀಕರು ‘ನಮ್ಮ ವಾಹನದ ಹೊಗೆಯ ಬಗ್ಗೆ ಎಲ್ಲರೂ ಮಾತನಾಡುತ್ತಾರೆ, ಆದರೆ ಗುಂಡಿ ಬಿದ್ದು ಡಾಂಬರು ಕಿತ್ತುಹೋದ ರಸ್ತೆಗಳ ಬಗ್ಗೆ ಯಾರೂ ಏಕೆ ಚಕಾರ ಎತ್ತುವುದಿಲ್ಲ, ನಾವೆಲ್ಲಾ ರಸ್ತೆ ತೆರಿಗೆ ಯಾಕೆ ಕಟ್ಟಬೇಕು’ ಎಂದು ಕೇಳುತ್ತಾರೆ. ‘ಕೆಟ್ಟ ರಸ್ತೆಗಳಲ್ಲಿ  ಹಲವು ಸಲ ಬ್ರೇಕ್ ಹಾಕಬೇಕಾಗುತ್ತದೆ, ಇದ್ದಕ್ಕಿದ್ದಂತೆವೇಗ ಹೆಚ್ಚಿಸಬೇಕಾಗುತ್ತದೆ, ಆಗ ಹೆಚ್ಚಿನ ಇಂಧನ ಉರಿಯುವುದರಿಂದ ಹೆಚ್ಚು ಹೊಗೆ ಎದ್ದೇ ಏಳುತ್ತದೆ. ಕೆಟ್ಟ ರಸ್ತೆಗಳಿಂದಾಗಿ ನಮ್ಮ ವಾಹನಗಳು ಮುದಿಯಾಗುತ್ತಿವೆ, ಅದಕ್ಕೆ ಯಾರು ಹೊಣೆ’ ಎನ್ನುತ್ತಾರೆ. ‘ಸಿಟಿಯಲ್ಲಿದ್ದರೆ ತಾನೇ ಸಮಸ್ಯೆ, ಇದನ್ನು ನಮ್ಮ ಹಳ್ಳಿಗೆ ಕಳಿಸಿಬಿಡುತ್ತೇವೆ, ಇನ್ನೂ ಇಪ್ಪತ್ತು ವರ್ಷ ಆರಾಮವಾಗಿ ಬಳಸಬಹುದು’ ಎನ್ನುತ್ತಾರೆ. ಅಲ್ಲಿಗೆ ನಗರದ ಮಾಲಿನ್ಯ ಹಳ್ಳಿಗಳಿಗೆ ವರ್ಗಾವಣೆಗೊಳ್ಳುತ್ತದೆ.

‘ಹೊಸ ವಾಹನಗಳ ಖರೀದಿಗೆ ಲಕ್ಷಲಕ್ಷ ಹಣ ಬೇಕಾಗುತ್ತದೆ, ಅದು ನಮ್ಮಲ್ಲಿಲ್ಲ’ ಎನ್ನುವ ಜನ ಡೀಸೆಲ್ ಗಾಡಿಗಳು ನೀಡುವಷ್ಟು ಮೈಲೇಜನ್ನು ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಗಾಡಿಗಳು ನೀಡುವುದಿಲ್ಲ ಎಂದು ಕಾರಣ ಕೊಡುತ್ತಾರೆ. ಕಡಿಮೆ ದೂರ ಓಡಿರುವ ಪೆಟ್ರೋಲ್ ವಾಹನಗಳು ಕಡಿಮೆ ಮಾಲಿನ್ಯ ಉಂಟುಮಾಡುತ್ತವೆ, ಹಾಗಾಗಿ ವಯಸ್ಸಿನ ಆಧಾರದ ಮೇಲೆ ಗುಜರಿಗೆ ತಳ್ಳುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಬಲವಾಗಿದೆ. ಮೇಲಾಗಿ ಹೊಸ ವಾಹನಗಳ ತಯಾರಿಕೆಗೆ ಬೇಕಾದ ಲೋಹಗಳಿಗೆ ಹೆಚ್ಚಿನ ಗಣಿಗಾರಿಕೆ ನಡೆದು ಪರಿಸರದ ಮೇಲೆ ಮತ್ತಷ್ಟು ಒತ್ತಡ ಬೀಳುತ್ತದೆ.

ದೇಶದಲ್ಲಿರುವ ‘ಆಟೊಮೇಟೆಡ್ ಟೆಸ್ಟಿಂಗ್ ಸ್ಟೇಷನ್‍’ಗಳ ಸಂಖ್ಯೆ ಕೇವಲ 24. ಸರ್ಕಾರಗಳು ಎಟಿಎಸ್‍ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆರೆಯಬೇಕು. ಒಂದು ಲಕ್ಷ ಸಂಖ್ಯೆಯ ವಾಣಿಜ್ಯ ಬಳಕೆಯ ವಾಹನಗಳಿರುವ ಜಿಲ್ಲೆಗೊಂದರಂತೆ ಎಟಿಎಸ್ ತೆರೆಯುವ ಯೋಜನೆ ಸರ್ಕಾರದ ಮುಂದಿದೆ. ತಪಾಸಣೆಯಲ್ಲಿ ಯಾವ ಲೋಪವೂ ಆಗಬಾರದು. ಸಮಸ್ಯೆ ಪರಿಹರಿಸಲು ಜನ ಸ್ವಯಂಪ್ರೇರಿತರಾಗಿ ತಮ್ಮ ಹಳೆಯ ವಾಹನವನ್ನು ಗುಜರಿಗೆ ಹಾಕಬೇಕು. ಹೆಚ್ಚು ಹೊಗೆ ಕಾರುವ ಡೀಸಲ್ ವಾಹನದ ಬದಲಿಗೆ ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಮುಂದಾಗಬೇಕು. ತಯಾರಕರು ಎಲೆಕ್ಟ್ರಿಕ್ ವಾಹನಗಳ ಬೆಲೆ ಕಡಿಮೆ ಮಾಡಿ, ಹೆಚ್ಚಿನ ಸಬ್ಸಿಡಿ ನೀಡಿ, ಚಾರ್ಜಿಂಗ್ ಸ್ಟೇಷನ್‍ಗಳನ್ನು ಹೆಚ್ಚಿಸಿ, ಮಾರಾಟ ಹೆಚ್ಚಿಸಿದಲ್ಲಿ ಮಾಲಿನ್ಯವನ್ನು ಗಣನೀಯವಾಗಿ ನಿಯಂತ್ರಿಸಬಹುದು.

ವಾಹನಗಳನ್ನು ಗುಜರಿಗೆ ತೆಗೆದುಕೊಳ್ಳುವ ನೋಂದಣಿಯಾಗಿರುವ ಸೌಲಭ್ಯ ಕೇಂದ್ರಗಳ (ರಿಜಿಸ್ಟರ್ಡ್ ವೆಹಿಕಲ್ ಸ್ಕ್ರ್ಯಾಪಿಂಗ್ ಫೆಸಿಲಿಟಿ) ಸಂಖ್ಯೆ ಕೇವಲ 65. ಅತಿ ಹೆಚ್ಚು ಕೇಂದ್ರಗಳು ಉತ್ತರಪ್ರದೇಶ (9) ರಾಜ್ಯದಲ್ಲಿದ್ದು ಉಳಿದವು ಇತರ ಹನ್ನೊಂದು ರಾಜ್ಯಗಳಲ್ಲಿವೆ. ಕರ್ನಾಟಕದಲ್ಲಿ ಬೆಂಗಳೂರಿನ ಹೊರವಲಯದ ವಿಜಯಪುರದಲ್ಲಿ ಒಂದಿದೆ. ಸರ್ಕಾರ ಆದಷ್ಟು ಬೇಗ ಇವುಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಹೊಸ ಗುಜರಿ ನೀತಿಯನ್ನು ಜನಸ್ನೇಹಿಯನ್ನಾಗಿ ಮಾಡುವ ಜವಾಬ್ದಾರಿ ಸರ್ಕಾರದ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT