ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಉನ್ನತ ಶಿಕ್ಷಣ: ಬೇಕು ಸುಧಾರಣೆ

ಸಮಾಜದ ಎಲ್ಲರನ್ನೂ ಒಳಗೊಳ್ಳುವ ರೀತಿಯಲ್ಲಿ ಉನ್ನತ ಶಿಕ್ಷಣವನ್ನು ಮರುರೂಪಿಸಬೇಕಾಗಿದೆ
Published 10 ಆಗಸ್ಟ್ 2023, 23:30 IST
Last Updated 10 ಆಗಸ್ಟ್ 2023, 23:30 IST
ಅಕ್ಷರ ಗಾತ್ರ

ಎಂ.ಚಂದ್ರ ಪೂಜಾರಿ

ಉನ್ನತ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಈ ಹಿಂದಿನ ಅವಧಿಯ ಸರ್ಕಾರವು ಯಾವುದೇ ಪೂರ್ವತಯಾರಿ ಇಲ್ಲದೆ, ಅರ್ಥಪೂರ್ಣ ಸಂವಾದಕ್ಕೆ ಒಳಪಡಿಸದೆ ತರಾತುರಿಯಲ್ಲಿ ಜಾರಿಗೆ ತಂದಿದೆ. ವಿಶ್ವವಿದ್ಯಾಲಯ ಮಟ್ಟದಲ್ಲಿ ಸ್ಥಳೀಯ ಅಗತ್ಯಕ್ಕೆ ಅನುಸಾರವಾಗಿ ಸಿದ್ಧಗೊಳ್ಳಬೇಕಾದ ಪಠ್ಯಗಳನ್ನು ರಾಜ್ಯ ಮಟ್ಟದಲ್ಲಿ ಕೇಂದ್ರೀಕೃತವಾಗಿ ಸಿದ್ಧಗೊಳಿಸಿದೆ. ಇದು ಸರಿಯಾದ ಕ್ರಮವಲ್ಲ. ಈ ಕ್ಷೇತ್ರವನ್ನು ಬಹಳಷ್ಟು ಪೂರ್ವತಯಾರಿಯೊಂದಿಗೆ ರಾಜ್ಯದ ಸಮಾಜೋ-ಆರ್ಥಿಕ ಪರಿವರ್ತನೆಗೆ ಪೂರಕವಾಗುವಂತೆ ಮರುರೂಪಿಸುವ ಅನಿವಾರ್ಯ ಇದೆ.

ಉನ್ನತ ಶಿಕ್ಷಣ ನೀತಿಯ ಬಗ್ಗೆ ಮರುಚಿಂತನೆ ನಡೆಸುವಾಗ, ಸಂಶೋಧನೆ, ಬೋಧನೆ, ಜ್ಞಾನದ ಅನ್ವಯಿಸುವಿಕೆ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ ನಿರ್ವಹಣೆಯಲ್ಲಿ ಗಣನೀಯ ಪ್ರಮಾಣದಲ್ಲಿ ಬದಲಾವಣೆ ತರಬೇಕಾದ ಅಗತ್ಯ ಇದೆ ಎನಿಸುತ್ತದೆ.

ಸತ್ಯವೆಂದು ಸಾಧಿಸಿ ತೋರಿಸಬಹುದಾದ ನಂಬಿಕೆಯೇ ಜ್ಞಾನ ಎಂದು ತತ್ವಜ್ಞಾನಿಗಳು ವ್ಯಾಖ್ಯಾನಿಸುತ್ತಾರೆ. ಹೀಗೆ ಸಾಧಿಸಿ ತೋರಿಸಲು  ಮೂರು ವಿಧಾನಗಳಿವೆ: ವಿಜ್ಞಾನದ ವಿಧಾನ, ಸಮಾಜವಿಜ್ಞಾನ ಅಥವಾ ಮಾನವಿಕದ ವಿಧಾನ ಮತ್ತು ಸ್ಥಳೀಯ ಜ್ಞಾನ ಪರಂಪರೆಯ ವಿಧಾನ. ಪ್ರಶ್ನಿಸಿ, ಪರೀಕ್ಷಿಸಿ, ಅವಲೋಕಿಸಿ, ವಿಶ್ಲೇಷಿಸಿ ತೀರ್ಮಾನಕ್ಕೆ ಬರುವುದು ವಿಜ್ಞಾನ ಮತ್ತು ಸಮಾಜವಿಜ್ಞಾನ ವಿಧಾನಗಳ ತಳಹದಿ. ಆದರೆ ಸ್ಥಳೀಯ ಜ್ಞಾನಪರಂಪರೆಯು ಪ್ರಶ್ನೆ, ಪರೀಕ್ಷೆಗಳಿಗಿಂತ ನಂಬಿಕೆಗೆ ಹೆಚ್ಚು ಮಹತ್ವ ನೀಡುತ್ತಿದೆ.

ಮೂರೂ ವಿಧಾನಗಳು ಒಂದೆರಡು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿವೆ. ಒಂದು, ವಿಜ್ಞಾನ, ಸಮಾಜವಿಜ್ಞಾನ ಹಾಗೂ ಸ್ಥಳೀಯ ಜ್ಞಾನ ಪರಂಪರೆಗಳು ಪರಸ್ಪರ ಸಂವಾದ ನಡೆಸುತ್ತಿಲ್ಲ ಮತ್ತು ಸ್ಥಳೀಯ ಜ್ಞಾನಪರಂಪರೆಯು ಪ್ರಶ್ನೆ, ಪರೀಕ್ಷೆ, ಪರಾಮರ್ಶೆಗೆ ಒಡ್ಡಿಕೊಳ್ಳಲು ತಯಾರಿಲ್ಲ. ಈ ಎರಡೂ ಕೊರತೆಗಳನ್ನು ಸ್ವಲ್ಪ ವಿವರಿಸಬೇಕಾಗಿದೆ. ಮಾರುಕಟ್ಟೆ ಬೇಡಿಕೆಗಳು ವಿಜ್ಞಾನ, ಸಮಾಜವಿಜ್ಞಾನ ಸಂಶೋಧನೆಯ ಆದ್ಯತೆಗಳನ್ನು ಪ್ರಭಾವಿಸಿದಷ್ಟು ತಳಸ್ತರದ ಜನರ ಬದುಕನ್ನು ಪ್ರಭಾವಿಸುತ್ತಿಲ್ಲ. ಇದರಿಂದ ಸಂಶೋಧನೆಗಳ ಸಂಖ್ಯೆ ಹೆಚ್ಚುತ್ತಾ ಹೋದರೂ ಜನಸಾಮಾನ್ಯರ ಬದುಕಿನ ಗುಣಮಟ್ಟದಲ್ಲಿ ವಿಶೇಷ ಪರಿವರ್ತನೆಯನ್ನು ಕಾಣಲು ಸಾಧ್ಯವಾಗುತ್ತಿಲ್ಲ.

ತಳಸ್ತರದ ಬಹುತೇಕರು ಇಂದು ಕೂಡ ತಮ್ಮ ಕೃಷಿ, ವ್ಯಾಪಾರ, ಉದ್ದಿಮೆ, ಸೇವಾವಲಯದ ಚಟುವಟಿಕೆಗಳನ್ನು, ತಮ್ಮ ಸಾಮಾಜಿಕ ಹಾಗೂ ಸಾಂಸ್ಕೃತಿಕ ಬದುಕನ್ನು ಸ್ಥಳೀಯ ಜ್ಞಾನಪರಂಪರೆಯ ನೆಲೆಗಟ್ಟಿನಲ್ಲಿಯೇ ಕಟ್ಟಿಕೊಂಡಿದ್ದಾರೆ. ಆದರೆ ಇವರ ಜ್ಞಾನಪರಂಪರೆಯು ಎರಡು ಪ್ರಮುಖ ಸಮಸ್ಯೆಗಳನ್ನು ಎದುರಿಸುತ್ತಿದೆ. ಒಂದು, ಇದಕ್ಕೆ ಭಾರತೀಯ ಜ್ಞಾನಪರಂಪರೆಯ ಸ್ಥಾನಮಾನ ಇಲ್ಲ. ಎರಡು, ಇದು ಪ್ರಶ್ನೆ, ಪ್ರಯೋಗ, ಪರಾಮರ್ಶೆಗಳಿಗೆ ಒಡ್ಡಿಕೊಳ್ಳದ ಕಾರಣ ಆರ್ಥಿಕವಾಗಿ ಯಶಸ್ಸು ಕಾಣುತ್ತಿಲ್ಲ ಮತ್ತು ಸಾಮಾಜಿಕ, ಸಾಂಸ್ಕೃತಿಕ ಬದುಕಿನಲ್ಲಿ ಬ್ರಾಹ್ಮಣ್ಯದ ಕಣ್ಣಲ್ಲಿ ಲೋಕ ನೋಡುವ ಅಭ್ಯಾಸದಿಂದ ಇವರಿಗೆ ಹೊರಬರಲಾಗುತ್ತಿಲ್ಲ.

ಇವೇ ಕಾರಣಗಳಿಂದ ಇವರು ಸಮಾಜೋ-ಆರ್ಥಿಕ ಪರಿವರ್ತನೆಗಳಿಂದ ವಂಚಿತರಾಗಿದ್ದಾರೆ. ಆದ್ದರಿಂದ ಈ ಜನರ ಜ್ಞಾನಪರಂಪರೆಯೊಂದಿಗೆ ವಿಜ್ಞಾನ, ಸಮಾಜವಿಜ್ಞಾನಗಳು ಸಂವಾದ ನಡೆಸುವ ಅನಿವಾರ್ಯ ಇದೆ. ಅಂದರೆ ಇವರ ಸಮಾಜ, ಆರ್ಥಿಕತೆ, ರಾಜಕೀಯ, ಸಂಸ್ಕೃತಿಗಳು ಪಠ್ಯದೊಳಗೆ ಬರುವ ಅಗತ್ಯವಿದೆ. ಪಠ್ಯದಲ್ಲಿ ಇರುವವರು ಸಂಶೋಧಕರ ‘ಪ್ರಜ್ಞೆಯ ಭಾಗ’ ಆಗುತ್ತಾರೆ. ಸಂಶೋಧಕರ ಪ್ರಜ್ಞೆಯ ಭಾಗವಾದರೆ ಸರ್ಕಾರದ ನೀತಿಯ ಭಾಗವಾಗುತ್ತಾರೆ. ಆಗ, ಬದಲಾಗುತ್ತಿರುವ ಲೋಕದೊಂದಿಗೆ ಸಂವಾದ ನಡೆಸಲು ಇವರನ್ನು ಅಣಿಗೊಳಿಸುವುದು ಸುಲಭವಾಗುತ್ತದೆ.

ಬೋಧನೆಯಲ್ಲಿ ಕೆಲವು ಸಮಸ್ಯೆಗಳಿವೆ. ಬೋಧಕರ ಉಪನ್ಯಾಸಕ್ಕೂ ಸ್ವಾಮೀಜಿಗಳ ಪ್ರವಚನಕ್ಕೂ ವಿಶೇಷ ವ್ಯತ್ಯಾಸವಿಲ್ಲ. ಎರಡೂ ಕಡೆ ಪ್ರಶ್ನೆ, ವಿಮರ್ಶೆ, ಚರ್ಚೆಗೆ ಅವಕಾಶವಿಲ್ಲ. ಕಲಿಕೆಯಲ್ಲಿ ಬೋಧನೆಯೇ ಪ್ರಧಾನವಾಗಿದ್ದು ವಿದ್ಯಾರ್ಥಿಗಳು ಪ್ರಯೋಗ, ಪರೀಕ್ಷೆಗಳನ್ನು ಮಾಡಿ ಕಲಿಯುವುದು ಕಡಿಮೆ ಇದೆ. ತರಗತಿ ಮತ್ತು ಶಿಕ್ಷಣ ಸಂಸ್ಥೆಗಳು ಲಿಂಗ, ಜಾತಿ, ಧರ್ಮ, ವರ್ಗ ತಾರತಮ್ಯಗಳನ್ನು ಜೀವಂತ ಇಡುವ ಮೌಲ್ಯಗಳನ್ನು ನಮ್ಮ ಸಂಸ್ಕೃತಿ ಹೆಸರಿನಲ್ಲಿ ಆಚರಿಸುತ್ತಿವೆ. ಇವೆಲ್ಲ ಕಾರಣಗಳಿಂದ, ಇಂದು ಉನ್ನತ ಶಿಕ್ಷಣ ಪಡೆದವರು ಮತ್ತು ಪಡೆಯದವರ ನಡುವಿನ ವ್ಯತ್ಯಾಸವನ್ನು ಅವರು ಅನುಭೋಗಿಸುವ ಸರಕುಸೇವೆಗಳಿಂದ ಮಾತ್ರ ಗುರುತಿಸಬಹುದೇ ವಿನಾ ಅವರ ಬದುಕಿನ ಮೌಲ್ಯಗಳಿಂದ ಗುರುತಿಸಲು ಸಾಧ್ಯವಾಗುತ್ತಿಲ್ಲ.

ಇವೆಲ್ಲ ಬದಲಾಗಿ, ಉಪನ್ಯಾಸಕರ ಬೋಧನೆ ಕಡಿಮೆ ಇದ್ದು ವಿದ್ಯಾರ್ಥಿಗಳ ಪ್ರಶ್ನೆ, ವಿಮರ್ಶೆಗಳು ಹೆಚ್ಚಾಗಬೇಕು. ಎಲ್ಲ ವಿಷಯಗಳ ಕಲಿಕೆಯಲ್ಲಿ ಪ್ರಯೋಗ, ಪರೀಕ್ಷೆಗಳ ಮೂಲಕ ‘ಮಾಡಿ ಕಲಿಯುವ’ ಅವಕಾಶ ಹೆಚ್ಚಾಗಬೇಕು. ಶಿಕ್ಷಣ ಸಂಸ್ಥೆ ಮತ್ತು ತರಗತಿಗಳ ಎಲ್ಲ ಚಟುವಟಿಕೆಗಳು, ಕಾರ್ಯಕ್ರಮಗಳು ಸಾಂವಿಧಾನಿಕ, ಪ್ರಜಾಪ್ರಭುತ್ವ ಹಾಗೂ ಜಾತ್ಯತೀತ ಮೌಲ್ಯಗಳಿಗೆ ಅನುಸಾರವಾಗಿ ನಡೆಯಬೇಕು.

ಸೃಷ್ಟಿಸುವ ಜ್ಞಾನವನ್ನು ಆರ್ಥಿಕ ಚಟುವಟಿಕೆಗಳ (ಜಿಡಿಪಿ) ವೃದ್ಧಿಗೆ ಬಳಸುವುದನ್ನೇ ಜ್ಞಾನ ಅನ್ವಯಿಸುವಿಕೆ ಎಂದು ಶಿಕ್ಷಣ ಸಂಸ್ಥೆಗಳು ಭಾವಿಸಿವೆ. ಇಂತಹ ನಂಬಿಕೆಯು ಬಹುಪಾಲು ಶಿಕ್ಷಣ ಸಂಸ್ಥೆಗಳನ್ನು ಆವರಿಸಿಕೊಂಡಿದೆ. ಸರಕುಸೇವೆಗಳ ಉತ್ಪಾದನೆಯ ವೃದ್ಧಿ ಅವಶ್ಯ. ಹಾಗೆಂದು ಸರಕುಸೇವೆಗಳ ಉತ್ಪಾದನೆ ಹಾಗೂ ಪೂರೈಕೆ ಹೆಚ್ಚಾದ ಕೂಡಲೇ ಸಮಾಜದ ಎಲ್ಲರ ಸಮಸ್ಯೆಗಳೂ ಪರಿಹಾರವಾಗುವುದಿಲ್ಲ. ಸರಕುಸೇವೆಗಳ ಉತ್ಪಾದನೆಯಲ್ಲಿ ತಳಸ್ತರದ ಜನರು ಪಾಲ್ಗೊಳ್ಳಲು ಸಾಧ್ಯವಾದರೆ ಮಾತ್ರ ಅನುಭೋಗದಲ್ಲೂ ಪಾಲ್ಗೊಳ್ಳಲು ಸಾಧ್ಯ. ಇಲ್ಲವಾದರೆ ಇವರು ಸರ್ಕಾರದ ‘ಕನಿಷ್ಠ ಆದಾಯದ ಕಾರ್ಯಕ್ರಮವನ್ನು ಅವಲಂಬಿಸಿ’ ಬದುಕಬೇಕಾಗುತ್ತದೆ. ಆದ್ದರಿಂದ ಆರ್ಥಿಕ ಪ್ರಗತಿಯಲ್ಲಿ ಸಮಾಜದ ಎಲ್ಲರೂ ಪಾಲ್ಗೊಳ್ಳುವುದು ಅನಿವಾರ್ಯ. ಆದರೆ ಈ ಕೆಳಗಿನ ತೊಡಕುಗಳು ಇವೆ.

1. ಲಿಂಗ, ಜಾತಿ, ಧರ್ಮ ತಾರತಮ್ಯಗಳು ಸೃಷ್ಟಿಸುವ ‘ಸಾಮಾಜಿಕ ಅಸಾಮರ್ಥ್ಯ’ಗಳು. 2. ಜನರ ಉಣ್ಣುವ, ಪೂಜಿಸುವ, ಪ್ರೀತಿಸುವ ವಿಷಯಗಳನ್ನು ಬಳಸಿಕೊಂಡು ನಡೆಸುವ ಸಾಂಸ್ಕೃತಿಕ ರಾಜಕೀಯ ಸೃಷ್ಟಿಸುವ ‘ಸಾಂಸ್ಕೃತಿಕ ಅಸಾಮರ್ಥ್ಯ’ಗಳು ಮತ್ತು 3. ಬಲವಾದ ದೇಶ ಕಟ್ಟುವ ನೆಪದಲ್ಲಿ ನಡೆಸುವ ‘ಕೇಂದ್ರೀಕೃತ ರಾಜಕೀಯ’ ಸೃಷ್ಟಿಸುವ ರಾಜಕೀಯ ಅಸಾಮರ್ಥ್ಯಗಳು ಪಾರಂಪರಿಕ ಜ್ಞಾನಪರಂಪರೆಯಲ್ಲಿ ಉತ್ಪಾದನೆಯಲ್ಲಿ ತೊಡಗಿಸಿಕೊಂಡವರಿಗೆ ಆರ್ಥಿಕ ಪ್ರಗತಿಯಲ್ಲಿ ಪಾಲ್ಗೊಳ್ಳಲು ಅಡ್ಡಿಯಾಗಿವೆ. ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಅಸಾಮರ್ಥ್ಯಗಳನ್ನು ಹೋಗಲಾಡಿಸುವ ಉದ್ದೇಶದಿಂದ ಜಾರಿಗೆ ತಂದ ಕಾಯ್ದೆ ಕಾನೂನುಗಳಿವೆ. ಆದರೆ ಅವುಗಳಿಗೆ ಸಾಮಾಜಿಕ, ಸಾಂಸ್ಕೃತಿಕ ಒಪ್ಪಿಗೆ ಇಲ್ಲದ ಕಾರಣ ಅವು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಆದ್ದರಿಂದ ಜ್ಞಾನ ಅನ್ವಯಿಸುವಿಕೆಯ ವ್ಯಾಪ್ತಿಯನ್ನು ಆರ್ಥಿಕ ಪ್ರಗತಿಗೆ ಸೀಮಿತಗೊಳಿಸುವ ಬದಲು ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಕ್ಷೇತ್ರಗಳಿಗೂ ವಿಸ್ತರಿಸುವ ಅವಶ್ಯಕತೆ ಇದೆ.

ವರ್ತಮಾನದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿವೆ. ಸಂಪನ್ಮೂಲ ಹೊಂದಿಸಿಕೊಳ್ಳುವುದು, ಪಠ್ಯ ಕುರಿತ, ಆಡಳಿತಕ್ಕೆ ಸಂಬಂಧಿಸಿದ ಹಾಗೂ ಮಾನವ ಸಂಪನ್ಮೂಲ ಸೃಷ್ಟಿಸುವ ಸಮಸ್ಯೆಗಳನ್ನು ಎದುರಿಸುತ್ತಿವೆ. ಸಂಪನ್ಮೂಲಕ್ಕೆ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಸಂಪೂರ್ಣವಾಗಿ ಸರ್ಕಾರವನ್ನು ಅವಲಂಬಿಸಿವೆ. ಸೇವಾ ‘ಹಿರಿತನ’ ಮತ್ತು ಹೊಣೆಗಾರಿಕೆರಹಿತ ಅಕಡೆಮಿಕ್ ವ್ಯವಸ್ಥೆಗಳು ಶೈಕ್ಷಣಿಕ ಕೆಲಸಗಳನ್ನು ನಿರ್ವಹಣೆ ಮಾಡುತ್ತಿವೆ. ಬಂದವರಿಗೆಲ್ಲ ಪದವಿ ಕೊಡುವುದನ್ನೇ ಮಾನವ ಸಂಪನ್ಮೂಲ ಸೃಷ್ಟಿ ಎಂದು ಬಗೆಯಲಾಗಿದೆ. ಇದು ಬದಲಾಗಬೇಕಾಗಿದೆ. ಉನ್ನತ ಶಿಕ್ಷಣ ಸಂಸ್ಥೆಗಳು ಬದಲಿ ಸಂಪನ್ಮೂಲ ಸೃಷ್ಟಿಯ ಮಾರ್ಗಗಳನ್ನು ಕಂಡುಕೊಳ್ಳಬೇಕಾಗಿದೆ. ಸೇವಾ ಹಿರಿತನಕ್ಕಿಂತ ವಿಷಯದ ಮೇಲಿನ ತಜ್ಞತೆ ಹಾಗೂ ಹೊಣೆಗಾರಿಕೆಗಳು ಅಕಡೆಮಿಕ್ ವ್ಯವಸ್ಥೆಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದೆ. ಪದವಿ ನೀಡುವುದಕ್ಕಿಂತಲೂ ಸೃಜನಶೀಲವಾದ, ವಿಮರ್ಶಾ ಧೋರಣೆಯ ಹಾಗೂ ಮುನ್ನುಗುವ ಛಾತಿಯುಳ್ಳ ಮಾನವ ಸಂಪನ್ಮೂಲ ಸೃಷ್ಟಿಗೆ ಒತ್ತು ನೀಡಬೇಕಾಗಿದೆ. ಇಂತಹ ಮಾನವ ಸಂಪನ್ಮೂಲ ಮಾತ್ರ ತನ್ನ ಕಣ್ಣ ಮುಂದಾಗುವ ಅನ್ಯಾಯಗಳನ್ನು ಪ್ರಶ್ನಿಸುವ ಮತ್ತು ಸೋತವರೊಂದಿಗೆ ನಿಲ್ಲುವ ಧೈರ್ಯ ಪ್ರದರ್ಶಿಸಲು ಸಾಧ್ಯ.

ಶಿಕ್ಷಣ ಅದರಲ್ಲೂ ಉನ್ನತ ಶಿಕ್ಷಣವು ಸಮಸಮಾಜ ನಿರ್ಮಿಸುವ ವೈದ್ಯರು, ಎಂಜಿನಿಯರ್‌ಗಳು, ನ್ಯಾಯಾಧೀಶರು, ವಕೀಲರು, ಉಪನ್ಯಾಸಕರು, ಅಧಿಕಾರಿಗಳು ಎಲ್ಲರನ್ನೂ ಸೃಷ್ಟಿಸುತ್ತದೆ. ಆದ್ದರಿಂದ ಉದ್ಯೋಗದ ಪರಿಣತಿಯಷ್ಟೇ ಮಹತ್ವವನ್ನು ಶಿಕ್ಷಿತರು ರೂಢಿಸಿಕೊಳ್ಳಬೇಕಾದ ಸಾಂವಿಧಾನಿಕ ಮೌಲ್ಯಗಳಿಗೆ ನೀಡಬೇಕಾಗುತ್ತದೆ. ಶಿಕ್ಷಣವು ಸಾಂವಿಧಾನಿಕ ಮೌಲ್ಯಗಳನ್ನು ನೀಡಲು ಸೋತರೆ (ಸೋತಿದೆ) ಆಧುನಿಕ ಸಂಸ್ಥೆಗಳಲ್ಲಿ ವಸಾಹತುಶಾಹಿ, ಊಳಿಗಮಾನ್ಯ ಮೌಲ್ಯಗಳ ಮಿಶ್ರಣಗಳು ಕಾರುಬಾರು ಮಾಡಬಹುದು (ಮಾಡುತ್ತಿವೆ). ಈ ಸ್ಥಿತಿಯನ್ನು ಬದಲಾಯಿಸುವ ಉನ್ನತ ಶಿಕ್ಷಣ ನೀತಿ ಇಂದಿನ ಅನಿವಾರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT