ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ | ಒಳಾಂಗಣ ಮಾಲಿನ್ಯ ತಡೆಯುವುದೆಂತು?

ಮನೆ, ಕಚೇರಿ, ಕಾರ್ಖಾನೆಗಳ ಒಳಗಿನ ಮಾಲಿನ್ಯದ ನಿವಾರಣೆಗೆ ಗಮನಹರಿಸಬೇಕಿದೆ
Published 7 ಜುಲೈ 2024, 21:41 IST
Last Updated 7 ಜುಲೈ 2024, 21:41 IST
ಅಕ್ಷರ ಗಾತ್ರ

ಮೂರು ವರ್ಷಗಳ ಹಿಂದಿನ ಮಾತು. ಕೋವಿಡ್ ಪಿಡುಗು ಅಟ್ಟಹಾಸ ಮೆರೆದಿದ್ದ ದಿನಗಳು ಅವು. ಜನರ ಜೀವ ಕಾಪಾಡಲು, ಒಬ್ಬರಿಂದ ಒಬ್ಬರಿಗೆ ಸೋಂಕು ಹರಡದಂತೆ ನೋಡಿಕೊಳ್ಳಲು ಲಾಕ್‌ಡೌನ್ ಘೋಷಿಸಿ ಜನರನ್ನು ಮನೆಯೊಳಗೆ ಇರುವಂತೆ ಮಾಡಲಾಗಿತ್ತು. ರಸ್ತೆಗಿಳಿಯುವ ವಾಹನಗಳ ಸಂಖ್ಯೆ ಕುಸಿದಿತ್ತು. ಮೂರು ಪಾಳಿಗಳಲ್ಲಿ ಕೆಲಸ ನಡೆಸುತ್ತಿದ್ದ ಕಾರ್ಖಾನೆಗಳಲ್ಲಿ ಮೌನ ಮನೆ ಮಾಡಿತ್ತು. ಜನ, ಜಾನುವಾರು ಮತ್ತು ವಾಹನಗಳು ರಸ್ತೆಗೆ ಇಳಿಯದೆ ವಾತಾವರಣದ ಮಾಲಿನ್ಯ ಕಡಿಮೆಯಾಗಿದೆ ಎಂಬ ವರದಿಗಳಿದ್ದವು. ಆದರೆ ಅಮೆರಿಕದ ಸರ್ಕಾರೇತರ ಸಂಸ್ಥೆ ಹೆಲ್ತ್ ಎಫೆಕ್ಟ್ಸ್ಇನ್‌ಸ್ಟಿಟ್ಯೂಟ್‌ನ ಅಧ್ಯಯನದ ಪ್ರಕಾರ 2021ರಲ್ಲಿ ವಿಶ್ವದಾದ್ಯಂತ ವಾಯುಮಾಲಿನ್ಯದಿಂದ 81 ಲಕ್ಷ ಜನ ಜೀವ ಕಳೆದುಕೊಂಡಿದ್ದಾರೆ!

ಮಲಿನಗೊಂಡ ಗಾಳಿಯ ಸೇವನೆಯಿಂದ ಚೀನಾದಲ್ಲಿ ಆ ವರ್ಷ ಒಟ್ಟು 23 ಲಕ್ಷ ಜನ ಜೀವ ಕಳೆದುಕೊಂಡಿದ್ದರೆ, ನಮ್ಮಲ್ಲಿ ಆ ಸಂಖ್ಯೆ 21 ಲಕ್ಷ. ಸುಮಾರು 5 ಲಕ್ಷ ಎಳೆಯರ ಪ್ರಾಣಹಾನಿ ಮನೆಯೊಳಗಿನ ಗಾಳಿಯ ಮಾಲಿನ್ಯದಿಂದಲೇ ಆಗಿರುವುದು ಆತಂಕಕಾರಿ ವಿಷಯ. ಅದರಲ್ಲೂ ದಕ್ಷಿಣ ಏಷ್ಯಾ ಮತ್ತು ಆಫ್ರಿಕಾದಲ್ಲಿ ಮನೆಯ ಹೊರಗಿನ ಮತ್ತು ಒಳಗಿನ ವಾಯುಮಾಲಿನ್ಯದಿಂದ ದೊಡ್ಡ ಸಂಖ್ಯೆಯ ಸಾವುಗಳು ಸಂಭವಿಸಿವೆ ಎಂಬ ಮಾಹಿತಿ ಇದೆ. ನೈಜೀರಿಯಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಮ್ಮ ನಂತರದ ಸ್ಥಾನಗಳಲ್ಲಿವೆ.

ನಾವೆಲ್ಲ ಮನೆಯ ಹೊರಗಿನ, ಸಾರ್ವಜನಿಕ ಸ್ಥಳಗಳ ಮಾಲಿನ್ಯದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳು
ತ್ತೇವೆ. ಆದರೆ ವಾಸಿಸುವ ಮನೆ, ಕೆಲಸ ಮಾಡುವ ಕಚೇರಿ, ದುಡಿಯುವ ಕಾರ್ಖಾನೆಗಳಲ್ಲಿನ ಮಾಲಿನ್ಯದ ಬಗ್ಗೆ ಗಮನ ಕೊಡುವುದು ಕಡಿಮೆ. ಮನೆಗಳಲ್ಲಿ ಅಡುಗೆ ಮಾಡಲು ಬಳಸುವ ಮಾಲಿನ್ಯಕಾರಕ ಇಂಧನಗಳು, ತಂಬಾಕು ಸೇವನೆ, ಕೀಟನಾಶಕ ಬಳಕೆ, ಸ್ಪ್ರೇ ಡಬ್ಬಿಗಳಿಂದ ಹೊಮ್ಮುವ ದ್ರವ್ಯಗಳು, ಕಟ್ಟಡ ನಿರ್ಮಾಣ ಸಾಮಗ್ರಿಗಳು, ಪೇಂಟ್, ಪೀಠೋಪಕರಣಗಳ ಪಾಲಿಶಿಂಗ್‌ಗೆ ಬಳಸುವ ತೈಲ, ನೆಲ ಒರೆಸಲು ಮತ್ತು ಶೌಚಾಲಯ ತೊಳೆಯಲು ಬಳಸುವ ಆ್ಯಸಿಡ್ ಮತ್ತು ಸ್ವಚ್ಛತಾ ಸಾಮಗ್ರಿಗಳು, ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆಯಿಂದ ಹೊಮ್ಮುವ ಹಾನಿಕಾರಕ ಶಾಖವರ್ಧಕ ಅನಿಲಗಳು, ನಾವು ಬಳಸುವ ಸುಗಂಧದ್ರವ್ಯ, ಕ್ರೀಮು, ಪೌಡರ್, ದೈಹಿಕ ನೋವಿನ ಉಪಶಮನಕ್ಕೆ ಬಳಸುವ ಸ್ಪ್ರೇಗಳು, ಸಾಕುಪ್ರಾಣಿಗಳಾದ ಬೆಕ್ಕು, ನಾಯಿ, ಗಿಳಿ ಮತ್ತು ಪಾರಿವಾಳಗಳ ದೇಹದಿಂದ ಉದುರುವ ಸೂಕ್ಷ್ಮ ಕೂದಲು, ಹೊಟ್ಟು ಮತ್ತು ಕೀಟಗಳು ಒಳಾಂಗಣ ಮಾಲಿನ್ಯಕ್ಕೆ ಕಾರಣ ಎಂಬುದು ಅಧ್ಯಯನದಿಂದ ದೃಢಪಟ್ಟಿದೆ.

ಮನೆಗಳಲ್ಲಿ ಊದುಬತ್ತಿ ಉರಿಸುವುದರಿಂದ ಅದರಲ್ಲಿ ಬಳಸಲಾದ ಸಾವಯವ ರೆಸಿನ್‌ಗಳು ಉರಿದು ಬೆಂಜೀನ್, ಟಾಲೀನ್, ಫಾರ್ಮಾಲ್ಡಿಹೈಡ್, ಇಂಗಾಲದ ಡೈಆಕ್ಸೈಡ್, ಸಲ್ಫರ್ ಡೈಆಕ್ಸೈಡ್ ಬಿಡುಗಡೆ
ಯಾಗುತ್ತವೆ. ಊದಿನಕಡ್ಡಿಯ ಹೊಗೆಯ ತೀವ್ರತೆಯು ಸಿಗರೇಟಿನ ಹೊಗೆಗಿಂತ ಐದು ಪಟ್ಟು ಹೆಚ್ಚಾಗಿರುತ್ತದೆ. ಅಡುಗೆ ಬೇಯಿಸಲು ಬಳಸುವ ಕಟ್ಟಿಗೆ, ಇದ್ದಿಲು, ಬೆಳೆ ತ್ಯಾಜ್ಯ, ಸೀಮೆಎಣ್ಣೆ, ದನಗಳ ಸಗಣಿಯಿಂದ ಮಾಡಿದ ಕುರುಳು, ಹಸಿ ಸೌದೆಗಳು ಉರಿಯುವಾಗ ಎಬ್ಬಿಸುವ ಹೊಗೆಯೊಂದಿಗೆ ಬಿಡುಗಡೆಯಾಗುವ ವಿಷಕಾರಿ ತೇಲುಕಣಗಳು, ಕಾರ್ಬನ್ ಮಾನಾಕ್ಸೈಡ್ ಅನಿಲಗಳು ಮನೆಯೊಳಗಿನ ಮಾಲಿನ್ಯವನ್ನು ಹೆಚ್ಚಿಸುತ್ತವೆ. ಅಡುಗೆ ಅನಿಲ ಉರಿದಾಗ ಬಿಡುಗಡೆಯಾಗುವ ಕಾರ್ಬನ್ ಮಾನಾಕ್ಸೈಡ್ ಮತ್ತು ಫಾರ್ಮಾಲ್ಡಿಹೈಡ್  ರಾಸಾಯನಿಕಗಳು ಮನುಷ್ಯನ ಮತ್ತು ಪ್ರಾಣಿಗಳ ಆರೋಗ್ಯದ ಮೇಲೆ ಅಡ್ಡ ಪರಿಣಾಮ
ಗಳನ್ನು ಉಂಟುಮಾಡುತ್ತವೆ. ಅಡುಗೆಎಣ್ಣೆ ಮತ್ತು ಕೊಬ್ಬಿನ ಪದಾರ್ಥಗಳನ್ನು ಅಧಿಕ ಉಷ್ಣಾಂಶದಲ್ಲಿ ಕುದಿಸಿದಾಗ ಮಾಲಿನ್ಯಕಾರಕ ಅನಿಲಗಳು ಬಿಡುಗಡೆಯಾಗುತ್ತವೆ. ಸ್ವಯಂ ಶುದ್ಧೀಕರಣ ತಂತ್ರಜ್ಞಾನದ ಅವೆನ್‌ಗಳು ಆಹಾರವನ್ನು ಸುಡುವುದರಿಂದ ಮತ್ತಷ್ಟು ವಿಷಕಾರಿ ಅನಿಲಗಳು ಒಳಾಂಗಣ ಗಾಳಿಯಲ್ಲಿ ಸೇರಿ
ಕೊಳ್ಳುತ್ತವೆ. ಎಳೆಯ ಮಕ್ಕಳು ಮತ್ತು ಆಸ್ತಮಾ ಕಾಯಿಲೆಯಿಂದ ಬಳಲುವವರಿಗೆ ಹೆಚ್ಚಿನ ತೊಂದರೆಯಾಗುತ್ತದೆ.

ಸಂಭವಿಸಿರುವ ಒಟ್ಟು ಶಿಶು ಮರಣಗಳಲ್ಲಿ ನಮ್ಮ ದೇಶದ 2.37 ಲಕ್ಷ ಶಿಶುಗಳು ಓಜೋನ್ ಮಾಲಿನ್ಯ ಸಂಬಂಧಿತ ಕ್ರಾನಿಕ್ ಅಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸಾರ್ಡರ್‌ನಿಂದ (ದೀರ್ಘಾವಧಿಯ ಶ್ವಾಸನಾಳಗಳ ಸಮಸ್ಯೆ) ಅಸುನೀಗಿರುವುದು ಪತ್ತೆಯಾಗಿದೆ. ತಂಬಾಕಿನ ಹೊಗೆಯು ಅಪಾರ ರಾಸಾಯನಿಕ ವಸ್ತುಗಳನ್ನು ಒಳಗೊಂಡಿದ್ದು ಅವುಗಳಲ್ಲಿ ಕೆಲವು ರಾಸಾಯನಿಕಗಳು ಕ್ಯಾನ್ಸರ್ ರೋಗ ಜನಕಗಳಾಗಿವೆ. ನೇರವಾಗಿ ತಂಬಾಕು ಸೇವಿಸುವವರಷ್ಟೇ ಅಲ್ಲ, ಒಬ್ಬರು ಬಿಡುವ ಹೊಗೆಯನ್ನು ಉಸಿರಾಡುವ ಇತರರಿಗೂ ಶ್ವಾಸಕೋಶದ ಕ್ಯಾನ್ಸರ್‌ ತಗುಲಿರುವ ಸಾವಿರಾರು ಪ್ರಕರಣಗಳು ವರದಿಯಾಗಿವೆ. ಡೀಸೆಲ್ ಕಾರಿನ ಹೊಗೆಗಿಂತ ಹತ್ತು ಪಟ್ಟು ಹೆಚ್ಚಿನ ಮಾಲಿನ್ಯ ತಂಬಾಕಿನ ಹೊಗೆಯಿಂದ ಆಗುತ್ತದೆ. ನಾವು ತೊಡುವ ಹತ್ತಿ ಹಾಗೂ ಜೀನ್ಸ್ ಉಡುಪುಗಳು ಸುಕ್ಕುಗಟ್ಟುವುದನ್ನು ಮತ್ತು ಕಲೆಗಳಾಗದಂತೆ ತಡೆಯಲು ಬಳಕೆಯಾಗುವ ಫಾರ್ಮಾಲ್ಡಿಹೈಡ್ ರಾಸಾಯನಿಕವು ಆವಿಯಾಗುವ ಸಂಯುಕ್ತವಾಗಿದ್ದು ಗಾಳಿಯಲ್ಲಿ ಇದರ ಪ್ರಮಾಣವು 50 ಪಿಎಂ ದಾಟಿದರೆ ಮನುಷ್ಯನಿಗೆ ಪ್ರಾಣಾಪಾಯ ಎದುರಾಗುತ್ತದೆ.

ವಿಶ್ವದ 200 ಕೋಟಿ ಜನರಿಗೆ ಅಡುಗೆ ಮಾಡಲು ಶುದ್ಧ ಇಂಧನ ಮೂಲದ ಸೌಕರ್ಯ ಈಗಲೂ ‌ಇಲ್ಲ. ಪರಿಸ್ಥಿತಿ ಸುಧಾರಿಸಲು ವಿಶ್ವದಲ್ಲಿ ಬಲವಾದ ನೀತಿ ಇಲ್ಲದಿರುವುದರಿಂದ 2030ರವರೆಗೆ ಇದೇ ಸ್ಥಿತಿ ಮುಂದುವರಿಯಲಿದೆ. 140 ಕೋಟಿಗೂ ಅಧಿಕ ಜನಸಂಖ್ಯೆಯುಳ್ಳ ಭಾರತ ಮತ್ತು ಚೀನಾದಲ್ಲಿ ವರ್ಷದಿಂದ ವರ್ಷಕ್ಕೆ ವಾಯುಮಾಲಿನ್ಯದಿಂದಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಗಾಳಿಯಲ್ಲಿರುವ ತೇಲುಕಣಗಳಿಂದ ಮತ್ತು ನೆಲಮಟ್ಟದ ಓಜೋನ್‌ನಿಂದಾಗಿ ಸರಿಸುಮಾರು ಒಂದು ಕೋಟಿ ಜನ ಪ್ರಾಣ ಕಳೆದುಕೊಂಡಿದ್ದಾರೆ.

2.5 ಮೈಕ್ರೊಮೀಟರ್‌ಗಿಂತ ಕಡಿಮೆ ವ್ಯಾಸದ ತೇಲುಕಣಗಳನ್ನು ಪಿಎಂ 2.5 (ಪಾರ್ಟ್ಸ್ ಪರ್‌ ಮಿಲಿಯನ್ ಅಂದರೆ 10 ಲಕ್ಷದಲ್ಲಿ 2.5) ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇವು ನಮ್ಮ ಉಸಿರಾಟದ ಮೂಲಕ ಶ್ವಾಸಕೋಶವನ್ನು ಸೇರಿಕೊಂಡು ನಂತರ ರಕ್ತಕ್ಕೂ ಪ್ರವೇಶ ಪಡೆದು ಆರೋಗ್ಯವನ್ನು ಕೆಡಿಸುತ್ತವೆ. ಹೃದಯದ ತೊಂದರೆ, ಪಾರ್ಶ್ವವಾಯು, ಸಕ್ಕರೆ ಕಾಯಿಲೆ, ಶ್ವಾಸಕೋಶದ ಕ್ಯಾನ್ಸರ್ ಮತ್ತು ಕ್ರಾನಿಕ್ ಅಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸಾರ್ಡರ್ ಕಾಯಿಲೆಯನ್ನು ಉಂಟುಮಾಡುತ್ತವೆ. ಉಸಿರಾಡುವ ಗಾಳಿಯಲ್ಲಿ 2.5 ಪಿಎಂ ಕಣಗಳ ಸಾಂದ್ರತೆ ಎಷ್ಟಿದೆ ಎಂಬುದರ ಆಧಾರದ ಮೇಲೆ ಅಲ್ಲಿನ ಜನರ ಆರೋಗ್ಯ ಹೇಗಿರುತ್ತದೆ ಎಂಬುದನ್ನು ನಿರ್ಧರಿಸಬಹುದಾಗಿದೆ.

ಒಳಾಂಗಣ ಮಾಲಿನ್ಯ ನಿಯಂತ್ರಿಸಲು ಸರಿಯಾದ ವಾತಾನುಕೂಲ ವ್ಯವಸ್ಥೆ ಇರಬೇಕು. ಹೊರಗಿನ ಗಾಳಿಯು ಒಳಗೆ ಬರಲು ವಿಶಾಲ ಕಿಟಕಿಗಳು ಇರಬೇಕು. ಮಾಲಿನ್ಯಕಾರಕ ತೇಲುಕಣಗಳನ್ನು ಹಿಡಿದಿಡಲು ಹೆಚ್ಚಿನ ಸಾಮರ್ಥ್ಯದ ವಾಯು ಶುದ್ಧೀಕರಣ ಯಂತ್ರಗಳನ್ನು (HEPA) ಬಳಸಬೇಕು. ನೆಲ ಒರೆಸಲು, ಬಚ್ಚಲು ತೊಳೆಯಲು, ಕಮೋಡ್‌ಗಳನ್ನು ಶುದ್ಧ ಮಾಡಲು ಬಿಳಿ ವಿನೆಗರ್, ಬೇಕಿಂಗ್‌ ಸೋಡಾ, ಕಿತ್ತಲೆ, ನಿಂಬೆರಸ, ಬೋರಾಕ್ಸ್ ಸಂಯುಕ್ತಗಳನ್ನು ಬಳಸಿದರೆ ಒಳಾಂಗಣ ಮಾಲಿನ್ಯ ತನ್ನಿಂತಾನೆ ಕಡಿಮೆಯಾಗುತ್ತದೆ. ಒಳಾಂಗಣದ ಆಲಂಕಾರಿಕ ಗಿಡಗಳಾದ ಇಂಗ್ಲಿಷ್ ಐವಿ, ಬಿದಿರು ಪಾಮ್, ಪೋಥೋಸ್ (ಮನಿ ಪ್ಲಾಂಟ್) ಒಳಾಂಗಣ ಮಾಲಿನ್ಯವನ್ನು ತಕ್ಕಮಟ್ಟಿಗೆ ತಡೆಯುತ್ತವೆ.

ಕೋವಿಡ್ ಪಿಡುಗಿನ ಕಾಲದಲ್ಲಿ ಮನೆಯ ಹೊರಗಿನ ಗಾಳಿಯ ಗುಣಮಟ್ಟ ಸರಿಯಾಗಿತ್ತು. ಹಾಗಾದರೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸಾವು ಸಂಭವಿಸಿದ್ದಾದರೂ ಹೇಗೆ ಎಂಬ ಪ್ರಶ್ನೆ ಸಹಜವಾಗಿ ಎದುರಾಗುತ್ತದೆ. ಯುನಿಸೆಫ್ ಜೊತೆ ಕೈಜೋಡಿಸಿ ಸಂಶೋಧನೆ ನಡೆಸುತ್ತಿರುವ ಹೆಲ್ತ್ ಎಫೆಕ್ಟ್ಸ್ಇನ್‌ಸ್ಟಿಟ್ಯೂಟ್ ನೀಡಿರುವ ಅಂಕಿ ಅಂಶಗಳು ನಮ್ಮ ದೇಶದಲ್ಲಿ ಐದು ವರ್ಷದೊಳಗಿನ ಲಕ್ಷಗಟ್ಟಲೆ ಮಕ್ಕಳು ಒಳಾಂಗಣ ವಾಯುಮಾಲಿನ್ಯಕ್ಕೆ ಬಲಿಯಾಗಿರುವುದನ್ನು ದೃಢಪಡಿಸಿದ್ದು, ವಾತಾವರಣದ ಗಾಳಿಯ ಗುಣಮಟ್ಟವನ್ನು ವೃದ್ಧಿಸದಿದ್ದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ ಎಂಬ ಎಚ್ಚರಿಕೆಯನ್ನು ನೀಡಿದೆ. ವರದಿಯ ಅಂಶಗಳನ್ನು ಪರಿಗಣಿಸಿಯಾದರೂ ಸರ್ಕಾರಗಳು ಸೂಕ್ತ ಕ್ರಮ ಕೈಗೊಂಡಲ್ಲಿ ವಾಯು ಗುಣಮಟ್ಟವನ್ನು ವೃದ್ಧಿಸಬಹುದು. ವಾಯುಮಾಲಿನ್ಯದಿಂದಾಗಿ ವರ್ಷವೊಂದರಲ್ಲಿ ಅತಿ ಹೆಚ್ಚು ಶಿಶುಮರಣ ಕಂಡಿರುವ ನಾವು ಇನ್ನಾದರೂ ಪಾಠ ಕಲಿಯಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT