ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಚೀನಾದ ಎದುರು ಸೈದ್ಧಾಂತಿಕ ಯುದ್ಧ

ಭಾರತವು ಮಾಡುವ ಆಯ್ಕೆಗಳನ್ನು ಆಧರಿಸಿ ಏಷ್ಯಾದಲ್ಲಿ ಹಾಗೂ ವಿಶ್ವದಲ್ಲಿ ಪ್ರಜಾತಂತ್ರದ ಭವಿಷ್ಯ ನಿರ್ಧಾರವಾಗಬಹುದು
Last Updated 10 ಜುಲೈ 2020, 1:50 IST
ಅಕ್ಷರ ಗಾತ್ರ
ADVERTISEMENT
""

ವಾಸ್ತವ ನಿಯಂತ್ರಣ ರೇಖೆಯಿಂದ (ಎಲ್‌ಎಸಿ) ತಮ್ಮ ಯೋಧರನ್ನು ಹಿಂದಕ್ಕೆ ಕರೆಸಿಕೊಳ್ಳಲು ಭಾರತ ಮತ್ತು ಚೀನಾ ಒಪ್ಪಿಕೊಂಡಿವೆ ಎಂದು ವರದಿಯಾಗಿದೆ. ಇದು ಒಳ್ಳೆಯ ಸುದ್ದಿ. ಹೀಗಿದ್ದರೂ, ಪರಸ್ಪರ ಅಪನಂಬಿಕೆ ಹೆಚ್ಚಾಗಿರುವುದು ಹಾಗೆಯೇ ಉಳಿದುಕೊಳ್ಳಲಿದೆ.
ಮುಂದಿನ ದಿನಗಳಲ್ಲಿ ಚೀನಾ ಇಡಬಹುದಾದ ಹೆಜ್ಜೆಗಳನ್ನು ಭಾರತವು ಎಚ್ಚರಿಕೆಯಿಂದ ಗಮನಿಸುವುದು ಮುಂದುವರಿಯಲಿದೆ. ಚೀನಾ ದೇಶವು ಕೆಲವು ಜಾಗಗಳು ತನ್ನದು ಎಂದು ಹೇಳಿದ್ದನ್ನು ಪುನರುಚ್ಚರಿಸಿದೆ.

ಕೋವಿಡ್–19 ಸಾಂಕ್ರಾಮಿಕದ ಪರಿಣಾಮವಾಗಿ ಆರ್ಥಿಕ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಒಂದಿಷ್ಟು ಕುಸಿತ ಕಂಡುಬಂದಿತ್ತು. ಅದಕ್ಕಿಂತಲೂ ಹೆಚ್ಚಿನ ಕುಸಿತ ಈಗ ಎದುರಾಗುವ ಸಾಧ್ಯತೆ ಇದೆ. ಭಾರತದಲ್ಲಿ ಚೀನಾದ ಕಂಪನಿಗಳು ಮತ್ತು ಚೀನಾದಲ್ಲಿ ಭಾರತದ ಕಂಪನಿಗಳು ನಡೆಸುವ ಹೂಡಿಕೆಗಳು ಸ್ಥಗಿತಗೊಳ್ಳಬಹುದು. ಹೀಗಾಗಿ, ನಮ್ಮಲ್ಲಿ ನಮ್ಮದೇ ಆದ ‘ಬೇರೆಯಾಗುವ’ ಪ್ರಕ್ರಿಯೆಯನ್ನು ಕಾಣಬೇಕಾಗಬಹುದು. ‘ಆತ್ಮನಿರ್ಭರ ಭಾರತ’ ತಂತ್ರವು ಈ ಪ್ರಕ್ರಿಯೆಯನ್ನು ಇನ್ನಷ್ಟು ಎದ್ದುಕಾಣುವಂತೆ ಮಾಡಬಹುದು. ಭಾರತ ಮತ್ತು ಚೀನಾ ನಡುವಿನ ಸಂಬಂಧಗಳಲ್ಲಿ ದಶಕಗಳಿಂದ ಇದ್ದ ಒಮ್ಮತವು ಈಗ ಕುಸಿದುಬಿದ್ದಿದೆ ಎಂಬುದು ಸ್ಪಷ್ಟ. ಹಾಗಾದರೆ, ಈ ಒಮ್ಮತದ ಮುಖ್ಯ ಅಂಶಗಳು ಏನಾಗಿದ್ದವು?

ಭಾರತವು ಚೀನಾದ ಪಾಲಿಗೆ ಬೆದರಿಕೆ ಅಲ್ಲ, ಚೀನಾ ಕೂಡ ಭಾರತದ ಪಾಲಿಗೆ ಬೆದರಿಕೆ ಅಲ್ಲ ಎಂಬುದು ಒಂದು ಅಂಶ. ಚೀನಾಕ್ಕೂ ಭಾರತಕ್ಕೂ ಬೆಳವಣಿಗೆ ಸಾಧಿಸಲು ಬೇಕಿರುವಷ್ಟು ಅವಕಾಶಗಳು ಏಷ್ಯಾದಲ್ಲಿ ಮತ್ತು ಜಗತ್ತಿನಲ್ಲಿ ಇವೆ ಎಂಬುದು ಎರಡನೆಯ ಅಂಶ. ಚೀನಾವು ಭಾರತದ ಪಾಲಿಗೆ, ಭಾರತವು ಚೀನಾದ ಪಾಲಿಗೆ ಆರ್ಥಿಕ ಅವಕಾಶ ಎಂಬುದು ಮೂರನೆಯ ಅಂಶ. ಭಾರತ ಮತ್ತು ಚೀನಾ ನಡುವಿನ ಸಂಬಂಧಗಳು ಪ್ರಮುಖ ಹಾಗೂ ವೈಶ್ವಿಕ ಆಯಾಮವನ್ನು ಪಡೆದುಕೊಂಡಿವೆ, ಆ ಮೂಲಕ ಈ ಎರಡೂ ದೇಶಗಳ ನಡುವೆ ಇನ್ನಷ್ಟು ಸಹಕಾರ ಇರಬೇಕಾದ ಅಗತ್ಯವಿದೆ ಎಂಬುದು ನಾಲ್ಕನೆಯ ಅಂಶ. ಈ ಕಾರಣಕ್ಕಾಗಿಯೇ ಎರಡೂ ದೇಶಗಳು ತಮ್ಮ ನಡುವಿನ ಗಡಿ ಸಮಸ್ಯೆಗೆ ರಾಜಕೀಯ ಪರಿಹಾರವನ್ನು ಕಂಡುಕೊಳ್ಳುವ ಬಯಕೆ ವ್ಯಕ್ತಪಡಿಸಿದವು. ಆಗ, ಎರಡೂ ದೇಶಗಳಿಗೆ ಸಮಾನ ಹಿತಾಸಕ್ತಿಗಳಿರುವ ಹಲವು ಜಾಗತಿಕ ವಿಷಯಗಳಲ್ಲಿ ಒಟ್ಟಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿತ್ತು. ಇದನ್ನು ಚೀನಾ ಪ್ರಧಾನಿ (Premier) ವೆನ್ ಜಿಯಾಬಾವೊ ಅವರು 2005ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದಾಗ ಸ್ಪಷ್ಟವಾಗಿ ಹೇಳಲಾಗಿತ್ತು. ಹೀಗಿದ್ದರೂ, 2009ರಿಂದ ಇದು ತನ್ನ ಗಟ್ಟಿತನವನ್ನು ಕಳೆದುಕೊಳ್ಳುತ್ತಿದೆ.

ಜಾಗತಿಕ ಮಟ್ಟದ ವಿಚಾರವೊಂದನ್ನು ಇಟ್ಟುಕೊಂಡು ಭಾರತ ಮತ್ತು ಚೀನಾ ಕೊನೆಯ ಬಾರಿಗೆ ಒಟ್ಟಾಗಿ ಕೆಲಸ ಮಾಡಿದ್ದು 2009ರಲ್ಲಿ ನಡೆದ ಕೋಪನ್‌ಹೆಗನ್‌ ಹವಾಮಾನ ಬದಲಾವಣೆ ಶೃಂಗಸಭೆಯಲ್ಲಿ. ವೆನ್ ಜಿಯಾಬಾವೊ ಅವರು 2010ರಲ್ಲಿ ಭಾರತಕ್ಕೆ ಭೇಟಿ ನೀಡಿದಾಗ ಬದಲಾವಣೆ ಕಾಣುವಂತಿತ್ತು. ಆಗ ಅವರು, ಗಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ದೀರ್ಘ ಅವಧಿ ಬೇಕು ಎಂದು ಹೇಳಿದ್ದರು.

ಪ್ಯಾರಿಸ್‌ ಹವಾಮಾನ ಬದಲಾವಣೆ ಶೃಂಗದ ಸಂದರ್ಭದಲ್ಲಿ ಅಮೆರಿಕ ಮತ್ತು ಚೀನಾ ಸಿದ್ಧಪಡಿಸಿದ ಮಾದರಿಯೇ ಪ್ಯಾರಿಸ್ ಒಪ್ಪಂದಕ್ಕೆ ನೆಲೆಗಟ್ಟಿನ ರೀತಿಯಲ್ಲಿ ಬಳಕೆಯಾಯಿತು. ಆಗ ಭಾರತ ಪ್ರಮುಖ ಪಾತ್ರಧಾರಿಯಾಗಿರಲಿಲ್ಲ. ಚೀನಾವು ಅಮೆರಿಕಕ್ಕೆ ಎದುರಾಗಿ ತನ್ನನ್ನು ಬಿಂಬಿಸಿಕೊಳ್ಳಲು ಆರಂಭಿಸಿತು. ಪ್ರವರ್ಧಮಾನಕ್ಕೆ ಬರುತ್ತಿರುವ ಇತರ ದೇಶಗಳೊಂದಿಗಿನ ಸಂಬಂಧವನ್ನು ಎರಡನೆಯ ಸಾಲಿಗೆ ನೂಕಿತು. ಚೀನಾವು ತನ್ನ ಜಾಗತಿಕ ಕಾರ್ಯತಂತ್ರದಲ್ಲಿ ಅಥವಾ ಏಷ್ಯಾಕ್ಕೆ ಸಂಬಂಧಿಸಿದ ಕಾರ್ಯತಂತ್ರದಲ್ಲಿ ಭಾರತದ ಜೊತೆಗಿನ ಸಂಬಂಧವನ್ನು ಮಹತ್ವದ್ದೆಂದು ಈಗ ಪರಿಗಣಿಸುತ್ತಿಲ್ಲ. ನೇರ ಮಾತುಗಳಲ್ಲಿ ಹೇಳಬೇಕು ಎಂದಾದರೆ, ಏಷ್ಯಾದಲ್ಲಿ ಅವಕಾಶಗಳು ಇರುವುದು ತನಗೆ ಮಾತ್ರ; ಭಾರತಕ್ಕೆ ಅಲ್ಲ ಎಂದು ಚೀನಾ ಭಾವಿಸುತ್ತಿದೆ.

ದೊಡ್ಡ ಮಟ್ಟದಲ್ಲಿ ಗಮನ ಸೆಳೆದ, ಕೆಲವೊಮ್ಮೆ ನಾಟಕೀಯ ಅನಿಸುತ್ತಿದ್ದ ನಾಯಕತ್ವ ಶೃಂಗಗಳಂತಹ ಕಾರ್ಯಕ್ರಮಗಳು ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರ ನಡುವೆ ಆಗಿರಬಹುದು. ಆದರೆ, ಈಚಿನ ಬೆಳವಣಿಗೆಗಳು ಮೊದಲಿನ ಒಪ್ಪಂದಗಳನ್ನು ಮುರಿದುಬೀಳಿಸುವ ಹಂತಕ್ಕೆ ತಂದಿರಿಸಿವೆ. ತನ್ನ ಉದ್ದೇಶಗಳನ್ನು ಮರೆಮಾಚಲು, ತನ್ನ ಎದುರಾಳಿಯನ್ನು ಸಮಾಧಾನಪಡಿಸಲು ನಾಟಕೀಯತೆಯನ್ನು ಬಳಸಿಕೊಳ್ಳುವಲ್ಲಿ ಚೀನಾ ಪರಿಣತಿ ಹೊಂದಿದೆ. ಆದರೂ, ಚೀನಾದ ಉದ್ದೇಶದ ಸೂಚನೆಗಳು ಹಿಂದೆಯೇ ಕಂಡುಬಂದಿದ್ದವು. ಅವುಗಳನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದರೆ ಸಾಕಿತ್ತು.

ಅಧಿಕಾರದ ಶ್ರೇಣಿಯಲ್ಲಿ ಭಾರತವನ್ನು ಕೆಳಕ್ಕೆ ತಳ್ಳಲು ಚೀನಾ ನಡೆಸುತ್ತಿರುವ ಯತ್ನಕ್ಕೆ ಸೈದ್ಧಾಂತಿಕ ಆಯಾಮ ಕೂಡ ಇದೆ. ಭಾರತದ ಪ್ರಜಾತಂತ್ರ ವ್ಯವಸ್ಥೆಯು ಗೊಂದಲಗಳಿಂದ ಕೂಡಿರುವಂಥದ್ದು, ಅದು ಅಸಮರ್ಥ ಕೂಡ, ಅದು ತಾನು ಹೊಂದಿರುವ ಶ್ರೇಷ್ಠವಾದ ಮಾದರಿಗೆ ಸರಿಸಾಟಿಯಲ್ಲ ಎಂದು ತೋರಿಸುವ ಉದ್ದೇಶವೂ ಚೀನಾಕ್ಕೆ ಇದೆ. ಇದು ಚೀನಾ ದೇಶವು‍ಪಾಶ್ಚಿಮಾತ್ಯ ಪ್ರಜಾತಂತ್ರ ವ್ಯವಸ್ಥೆಗಳನ್ನುಅವಮಾನಿಸುವುದರ ಒಂದು ಭಾಗ– ಅದರಲ್ಲೂ ಮುಖ್ಯವಾಗಿ ಅಮೆರಿಕದ ಪ್ರಜಾತಂತ್ರ ವ್ಯವಸ್ಥೆಯನ್ನು ಅವಮಾನಿಸುವುದು (ಡೊನಾಲ್ಡ್‌ ಟ್ರಂಪ್ ಅವರ ನೇತೃತ್ವದಲ್ಲಿ ಅಮೆರಿಕವು ಈಗ ಎಲ್ಲರೆದುರು ಹೇಳಿಕೊಳ್ಳಬಹುದಾದ ಉದಾರವಾದಿ ಜನತಂತ್ರ ವ್ಯವಸ್ಥೆಯಾಗಿಲ್ಲ).

ಚೀನಾದಲ್ಲಿನ ರಾಜಕೀಯ ಅತೃಪ್ತಿಯನ್ನು ನಿಭಾಯಿಸುವಲ್ಲಿ, ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕುವಲ್ಲಿ ಇದು ಮುಖ್ಯವಾಗುತ್ತದೆ. ಪ್ರಬುದ್ಧ ಪ್ರಜಾತಂತ್ರ ವ್ಯವಸ್ಥೆಗಳಲ್ಲಿಯೂ ಇರುವ ಕೆಲವು ಅವ್ಯವಸ್ಥೆಗಳನ್ನು ತನ್ನಲ್ಲಿ ಮೇಲ್ನೋಟಕ್ಕೆ ಕಾಣಿಸುವ ಅಚ್ಚುಕಟ್ಟುತನ ಹಾಗೂ ದಕ್ಷತೆಯ ಜೊತೆ ಚೀನಾ ಹೋಲಿಸಿ ತೋರಿಸುತ್ತದೆ.

ಸಾಂಕ್ರಾಮಿಕವೊಂದು ಸ್ಫೋಟಿಸುತ್ತಿರುವುದನ್ನು ಸಕಾಲದಲ್ಲಿ ಒಪ್ಪಿಕೊಂಡು, ಅದರ ಅಪಾಯಗಳ ಬಗ್ಗೆ ಜಗತ್ತಿಗೆ ಪಾರದರ್ಶಕವಾಗಿ ತಿಳಿಸುವಲ್ಲಿ ಚೀನಾದ ಸರ್ವಾಧಿಕಾರಿ ವ್ಯವಸ್ಥೆಯು ದೊಡ್ಡ ಮಟ್ಟದಲ್ಲಿ ವಿಫಲವಾಯಿತು. ಉದಾರವಾದಿ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಈ ರೀತಿ ಆಗುತ್ತಿರಲಿಲ್ಲ. ಆದರೆ, ನಂತರ ನಿಷ್ಕರುಣೆಯ ದಕ್ಷತೆಯ ಮೂಲಕ ಈ ಪರಿಸ್ಥಿತಿಯನ್ನು ನಿಭಾಯಿಸಿ, ಈ ವೈಫಲ್ಯವನ್ನು ಮರೆಮಾಚಲಾಯಿತು. ಚೀನಾದ ‘ಶ್ರೇಷ್ಠ’ ಮಾದರಿಯಲ್ಲಿ ಅಂತರ್ಗತವಾಗಿ ಇರುವ ಅಪಾಯಕಾರಿ ವೈಫಲ್ಯವನ್ನು, ಸಾಂಕ್ರಾಮಿಕವನ್ನು ನಿಗ್ರಹಿಸುವಲ್ಲಿನ ಯಶಸ್ಸು ಎಂಬಂತೆ ಜಾಣತನದಿಂದ ತೋರಿಸಲಾಯಿತು. ಈ ಅಂತರ್ಗತ ಲೋಪವು ಚೀನಾದ ಜನರಿಗೆ ಮಾತ್ರವೇ ಅಲ್ಲದೆ, ಜಗತ್ತಿನ ಇತರರಿಗೂ ಅಪಾಯಕಾರಿ. ಚೀನಾದ ಈ ಮಾದರಿಯು ವಿಶ್ವದ ಇತರ ರಾಷ್ಟ್ರಗಳನ್ನು ಸೆಳೆದುಕೊಂಡಂತೆಲ್ಲ, ಈಗ ಎದುರಾಗಿರುವಂತಹ ಬಿಕ್ಕಟ್ಟುಗಳನ್ನು ವಿಶ್ವ ಭವಿಷ್ಯದಲ್ಲಿ ಎದುರಿಸುವುದು ಹೆಚ್ಚಲಿದೆ.

ನಾನು ಇದುವರೆಗೆ ಸೈದ್ಧಾಂತಿಕ ಆಯಾಮಗಳನ್ನು ವಾಸ್ತವದ ನೆಲೆಗಟ್ಟಿನಲ್ಲಿ ಹೇಳಿದೆ. ಮೂಲಭೂತಸ್ವಾತಂತ್ರ್ಯಗಳಿಗೆ, ಕಾನೂನಿನ ಪ್ರಕಾರ ಆಡಳಿತ ನಡೆಯಬೇಕು ಎಂಬ ತತ್ವಕ್ಕೆ, ಪ್ರಭುತ್ವದ ಅಧಿಕಾರಕ್ಕೆ ಉತ್ತರದಾಯಿತ್ವ ಇರಬೇಕು ಎಂಬುದಕ್ಕೆ ಪ್ರಜಾತಂತ್ರ ವ್ಯವಸ್ಥೆಗಳು ನೀಡುವ ಬೆಲೆಇದಕ್ಕಿಂತ ಮಹತ್ವದ್ದು. ಜಾಗತಿಕ ಅಧಿಕಾರದ ಕೇಂದ್ರವು ಏಷ್ಯಾದತ್ತ ವಾಲುತ್ತಿರುವ ಹೊತ್ತಿನಲ್ಲಿ ಚೀನಾ ತಾನು ಮಿಲಿಟರಿಯ ಮೂಲಕ ಹಾಗೂ ಆರ್ಥಿಕವಾಗಿ ಪ್ರಾಬಲ್ಯ ಸಾಧಿಸಬೇಕು ಎಂದಷ್ಟೇ ಬಯಸುತ್ತಿಲ್ಲ; ಅದು ಸೈದ್ಧಾಂತಿಕ ಪ್ರಾಬಲ್ಯ ಹೊಂದುವ ಬಯಕೆಯನ್ನೂ ಇಟ್ಟುಕೊಂಡಿದೆ ಎಂಬುದು ಒಂದಷ್ಟರಮಟ್ಟಿಗೆ ಗೋಚರವಾಗುತ್ತಿದೆ.

ಏಷ್ಯಾದಲ್ಲಿ ಚೀನಾದ ಪ್ರಾಬಲ್ಯಕ್ಕೆ ಎದುರಾಗಿ ನಿಲ್ಲುವ ದೃಢ ನಿರ್ಧಾರ ಭಾರತದ್ದಾಗಿದ್ದರೆ, ಅದು ಆ ಕೆಲಸವನ್ನು ಮಿಲಿಟರಿ ಮತ್ತು ಆರ್ಥಿಕ ರಂಗದಲ್ಲಿ ಮಾತ್ರ ಮಾಡುವುದಲ್ಲ. ಸೈದ್ಧಾಂತಿಕವಾಗಿಯೂ ಅದು ಈ ಕೆಲಸ ಮಾಡಬೇಕಾಗುತ್ತದೆ. ಚೀನಾದ ಅತಿಯಾದ ಅಹಂಕಾರವನ್ನು ಎದುರಿಸಬೇಕಾದರೆನಾವು ನಮ್ಮ ಉದಾರವಾದಿ ಪ್ರಜಾತಂತ್ರ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು, ದೇಶದ ಸಂವಿಧಾನದಲ್ಲಿ ಅಡಕವಾಗಿರುವ ಮೌಲ್ಯಗಳ ಮೇಲಿನ ನಂಬಿಕೆಯನ್ನುಮತ್ತೆ ಒತ್ತಿ ಹೇಳಬೇಕಾಗುತ್ತದೆ; ಇದನ್ನು ಮರೆಯುವಂತಿಲ್ಲ. ಆದರೆ, ದುರದೃಷ್ಟದ ಸಂಗತಿಯೆಂದರೆ, ಭಾರತವು ತಾನು ಚೀನಾವನ್ನು ಮಾದರಿಯಾಗಿ ಪರಿಗಣಿಸಿ, ತಾನೂ ಅದರಂತೆ ಆಗಬೇಕು ಎಂದು ಬಯಸಬೇಕು ಎನ್ನುವ ಪ್ರವೃತ್ತಿ ಇದೆ. ಪ್ರಜಾತಂತ್ರ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದೇ ಭಾರತವು ಹಿಂದಕ್ಕೆ ಉಳಿಯಲು ಕಾರಣ ಎಂಬ ನಿರಂತರ ದೂಷಿಸುವಿಕೆ ಈ ದೇಶದಲ್ಲಿ ನಡೆದಿದೆ, ಷಿ ಜಿನ್‌ಪಿಂಗ್‌ ಅವರಂತೆ ‘ಬಲಿಷ್ಠ ನಾಯಕ’ ಎಂಬ ಕಾರಣಕ್ಕೇ ಮೋದಿ ಅವರನ್ನು ಇಷ್ಟಪಡುವ ಪ್ರವೃತ್ತಿ ಇದೆ.

ಬಹು ಜನಾಂಗಗಳ, ಬಹು ಭಾಷೆಗಳ, ಬಹು ಧರ್ಮಗಳ, ಬಹು ಸಂಸ್ಕೃತಿಗಳ ಸಮಾಜವನ್ನು ನಿಭಾಯಿಸುವಲ್ಲಿ ಭಾರತ ಸಾಧಿಸಿದ, ಅಸದೃಶ ಯಶಸ್ಸನ್ನು ಒಪ್ಪಿಕೊಳ್ಳಲು ಸಾಧ್ಯವಾಗದಿದ್ದರೆಅದರಲ್ಲೂ ಮುಖ್ಯವಾಗಿ ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಘನತೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೆ, ಅವುಗಳನ್ನು ತನ್ನ ಅತಿದೊಡ್ಡ ಶಕ್ತಿಯನ್ನಾಗಿ ಉಳಿಸಿಕೊಂಡಿದ್ದನ್ನು ನಾವು ನಮ್ಮದೆಂಬುದನ್ನು ಅಪಮೌಲ್ಯಗೊಳಿಸಿಕೊಂಡಂತೆ ಆಗುತ್ತದೆ. ಚೀನಾ ದೇಶವು ಬಯಸುವುದು ಏಕರೂಪದ ಶುಷ್ಕ ಸಮಾಜವನ್ನು. ನಮ್ಮನ್ನು ಚೀನಾದಿಂದ ಭಿನ್ನವಾಗಿಸುವ ಸಂಗತಿಗಳು ಇರುವುದು ಈ ವಿಚಾರದಲ್ಲೇ.

ಚೀನಾ ಏಕರೂಪಿ ವ್ಯವಸ್ಥೆಯಲ್ಲೇ ಮುಂದುವರಿಯಲಿ. ಆದರೆ, ಭಾರತವು ಯಾವತ್ತೂ ಅಂತಹ ಸ್ಥಿತಿಗೆ ಹಂಬಲಿಸಬಾರದು. ಏಷ್ಯಾವು ಚೀನಾದ ಪ್ರಾಬಲ್ಯವಿರುವ ಖಂಡವಾದರೆ, ಅದಕ್ಕೆ ಕಾರಣ ಭಾರತ ಆರ್ಥಿಕವಾಗಿ ಬೆಳೆಯಲು ವಿಫಲವಾಗಿದ್ದೊಂದೇ ಆಗಿರುವುದಿಲ್ಲ; ಬದಲಿಗೆ, ಭಾರತವು ತನ್ನ ಪ್ರಜಾತಾಂತ್ರಿಕ ಗುಣಗಳ ಪರ ಮಾತನಾಡಲಿಲ್ಲ ಎಂಬುದೂ ಆಗಿರುತ್ತದೆ. ಭಾರತವು ಮಾಡುವ ಆಯ್ಕೆಗಳನ್ನು ಆಧರಿಸಿ ಏಷ್ಯಾದಲ್ಲಿ ಹಾಗೂ ವಿಶ್ವದಲ್ಲಿ ಪ್ರಜಾತಂತ್ರದ ಭವಿಷ್ಯ ನಿರ್ಧಾರವಾಗಬಹುದು.

ಲೇಖಕ: ಮಾಜಿ ವಿದೇಶಾಂಗ ಕಾರ್ಯದರ್ಶಿ

(ಮೂಲ ಲೇಖನವು ಬ್ಯುಸಿನೆಸ್‌ ಸ್ಟ್ಯಾಂಡರ್ಡ್‌ ಪತ್ರಿಕೆಯಲ್ಲಿ ಪ್ರಕಟವಾಗಿದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT