ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಅರಣ್ಯ ಸಂರಕ್ಷಣೆಗೆ ಅರ್ಧಚಂದ್ರ?

ಅರಣ್ಯ ಸಂರಕ್ಷಣೆ ನಿಯಮ ಸಡಿಲವಾದರೆ, ದುರ್ಬಳಕೆಯ ಸಾಧ್ಯತೆ ಹೆಚ್ಚುತ್ತದೆ
Published 4 ಆಗಸ್ಟ್ 2023, 0:25 IST
Last Updated 4 ಆಗಸ್ಟ್ 2023, 0:25 IST
ಅಕ್ಷರ ಗಾತ್ರ

ಅಖಿಲೇಶ್‌ ಚಿಪ್ಪಳಿ

ರಾಜ್ಯದ ಹಲವೆಡೆ ಒಂದೇ ವಿಷಯವನ್ನು ಮುಂದಿಟ್ಟುಕೊಂಡು ಸಾಲುಸಾಲು ಪ್ರತಿಭಟನೆಗಳು ನಡೆದಿವೆ. ಅರಣ್ಯ ಸಂರಕ್ಷಣೆ (ತಿದ್ದುಪಡಿ) ಮಸೂದೆಯನ್ನು ವಿರೋಧಿಸಿ ಪರಿಸರಾಸಕ್ತ ಗುಂಪುಗಳು ತಹಶೀಲ್ದಾರರು ಹಾಗೂ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಆಗ್ರಹಪೂರ್ವಕ ಮನವಿಯನ್ನು ಕಳುಹಿಸುತ್ತಿವೆ. ಈ ಮಸೂದೆಯು ಕಾಯ್ದೆಯಾಗಿ ಜಾರಿಗೆ ಬಂದದ್ದೇ ಆದರೆ, ದೇಶದ 1.97 ಲಕ್ಷ ಹೆಕ್ಟೇರ್‌ನಷ್ಟು ಅರಣ್ಯ ಪ್ರದೇಶಕ್ಕೆ ಮತ್ತು ವನ್ಯಜೀವಿಗಳ ಆವಾಸಸ್ಥಾನಗಳ ಅಸ್ತಿತ್ವಕ್ಕೆ ತೀವ್ರ ಧಕ್ಕೆಯಾಗಲಿದೆ ಎಂಬ ಆಕ್ರೋಶವನ್ನು ವ್ಯಕ್ತಪಡಿಸುತ್ತಿವೆ. ಹಾಗಾದರೆ, ಈ ತಿದ್ದುಪಡಿ ಮಸೂದೆಯಲ್ಲಿ ಅಂತಹ ಅಪಾಯಕಾರಿ ಅಂಶಗಳೇನಿವೆ ಎಂಬುದನ್ನು ನೋಡೋಣ.

ಐತಿಹಾಸಿಕ ಅರಣ್ಯ ಸಂರಕ್ಷಣೆ ಕಾಯ್ದೆ (1980) ಜಾರಿಗೆ ಬರುವ ಮುನ್ನ, ಅಂದರೆ 1950ರಿಂದ 1980ರವರೆಗೆ ದೇಶದ ಸುಮಾರು 42 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಅರಣ್ಯೇತರ ಉದ್ದೇಶಕ್ಕೆ ಬಳಸಲಾಗುತ್ತಿತ್ತು. ಈ ಕಾಯ್ದೆ ಜಾರಿಗೆ ಬಂದ ನಂತರದ ನಲವತ್ತು ವರ್ಷಗಳಲ್ಲಿ ಈ ಪ್ರಮಾಣ 15 ಲಕ್ಷ ಹೆಕ್ಟೇರಿಗೆ ಇಳಿಯಿತು. ಹವಾಗುಣ ಬದಲಾವಣೆಯೆಂಬ ವಿಪತ್ತು ಗಂಭೀರ ವಿಷಯವಾಗಿರದ ಆ ಕಾಲದಲ್ಲಿ, ದೂರದೃಷ್ಟಿಯುಳ್ಳ ಅಂದಿನ ನಾಯಕರು ಹಾಗೂ ಆಡಳಿತಾರೂಢರು ಈ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ತಮ್ಮ ಕಾಳಜಿಯನ್ನು ಮೆರೆದಿದ್ದರು.

ಜಾಗತಿಕವಾಗಿ ಅತ್ಯಂತ ಸಮೃದ್ಧವಾದ, ವೈವಿಧ್ಯಮಯವಾದ ಹಾಗೂ ಅಪೂರ್ವ ಸಸ್ಯ ಹಾಗೂ ವನ್ಯಸಂಪತ್ತನ್ನು ಹೊಂದಿರುವ 17 ದೇಶಗಳಲ್ಲಿ ಭಾರತವೂ ಒಂದಾಗಿದೆ. ಐದು ಸಾವಿರಕ್ಕೂ ಹೆಚ್ಚು ಸಸ್ಯ ಹಾಗೂ ವನ್ಯಪ್ರಭೇದಗಳು ಭಾರತಕ್ಕೆ ಮಾತ್ರ ಸೀಮಿತವಾಗಿರುವುದು ದೇಶದ ವೈವಿಧ್ಯಮಯವಾದ ಅರಣ್ಯಗಳ ವಿಶೇಷ.

ಆದರೆ ಅರಣ್ಯ ಸಂರಕ್ಷಣೆ ಕಾಯ್ದೆ– 1980 ದೇಶದ ಅಭಿವೃದ್ಧಿಯ ವೇಗಕ್ಕೆ ತಡೆ ಒಡ್ಡುತ್ತದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರವು ಅದಕ್ಕೆ ತಿದ್ದುಪಡಿ ತರಲು ಮುಂದಾಗಿದೆ. ಈ ಸಂಬಂಧ ಅದು, ಸರ್ಕಾರದ ಅಧಿಕೃತ ಜಾಲತಾಣಗಳಲ್ಲಿ ಸಾರ್ವಜನಿಕ ಆಕ್ಷೇಪ, ಸಲಹೆಗಳಿಗೆ ಆಹ್ವಾನ ನೀಡಿತ್ತು. ಅದರಂತೆ, ಪರಿಸರ ತಜ್ಞರು, ಸ್ವಯಂಸೇವಾ ಸಂಸ್ಥೆಗಳಿಂದ ಮಾತ್ರವಲ್ಲದೆ ವೈಯಕ್ತಿಕ ನೆಲೆಯಲ್ಲೂ ಲಕ್ಷಲಕ್ಷ ಆಕ್ಷೇಪಗಳು ಸಲ್ಲಿಕೆಯಾಗಿದ್ದವು. ಈಶಾನ್ಯ ಭಾರತದ ಅನೇಕ ರಾಜ್ಯಗಳು ಈ ಉದ್ದೇಶಿತ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದ್ದವು.

ಕೇಂದ್ರ ಅಥವಾ ರಾಜ್ಯಗಳ ಅರಣ್ಯ ಇಲಾಖೆಯ ಸುಪರ್ದಿಯಲ್ಲಿ ಇಲ್ಲದಿರುವ ಲಕ್ಷಾಂತರ ಹೆಕ್ಟೇರ್ ಅರಣ್ಯ ಪ್ರದೇಶವು ಭಾರತದಲ್ಲಿದೆ. ಕಾನೂನು ಭದ್ರತೆಯಿಲ್ಲದ ಇಂತಹ ಅರಣ್ಯ ಪ್ರದೇಶಗಳಿಗೆ 1995ಕ್ಕೂ ಮೊದಲು ರಕ್ಷಣೆ ಇರಲಿಲ್ಲ. ಕೇರಳದ ಟಿ.ಎನ್.ಗೋಧಾವರ್ಮನ್ ಎಂಬುವರು ಅಕ್ರಮ ಮರಕಡಿತಲೆ ವಿರುದ್ಧ ಸುಪ್ರೀಂ ಕೋರ್ಟ್‌ ಮೊರೆ ಹೋದಾಗ, ಅವರ ಅಹವಾಲನ್ನು ಪರಿಗಣಿಸಿದ ಕೋರ್ಟ್‌, ಅರಣ್ಯಕ್ಕಿದ್ದ ವ್ಯಾಖ್ಯೆಯನ್ನು 1996ರಲ್ಲಿ ಬದಲಿಸಿ ತನ್ನ ಐತಿಹಾಸಿಕ ತೀರ್ಪನ್ನು ನೀಡಿತು. ಕಾನೂನಿನ ರಕ್ಷಣೆಗೆ ಒಳಪಡದ ಯಾವುದೇ ಅರಣ್ಯ ಪ್ರದೇಶವನ್ನು, ‘ಅರಣ್ಯ’ ಎಂಬ ಪದವನ್ನು ನಿಘಂಟಿನಲ್ಲಿ ವಿವರಿಸಿದಂತೆ ಅರ್ಥೈಸಿಕೊಂಡು, ಅದಕ್ಕೆ ಕಾನೂನುಬದ್ಧವಾದ ರಕ್ಷಣೆ ನೀಡಬೇಕು ಎಂಬುದು ಆ ತೀರ್ಪಿನ ಸಾರಾಂಶ. ಇದರ ಅನ್ವಯ, ಡೀಮ್ಡ್ ಅಥವಾ ಪರಿಭಾವಿತ ಅರಣ್ಯಗಳು ಮುನ್ನೆಲೆಗೆ ಬಂದವು. ಕರ್ನಾಟಕವೊಂದರಲ್ಲೇ ಸುಮಾರು 9.5 ಲಕ್ಷ ಹೆಕ್ಟೇರ್ ಡೀಮ್ಡ್‌ ಅರಣ್ಯ ಇದೆ ಎಂದು ಅರಣ್ಯ ಇಲಾಖೆ ಈ ಹಿಂದೆ ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು. 

ಅರಣ್ಯ ಪ್ರದೇಶಗಳನ್ನು ಯಾರೂ ಬೇಕಾಬಿಟ್ಟಿಯಾಗಿ ಅರಣ್ಯೇತರ ಉದ್ದೇಶಕ್ಕೆ ಬಳಸಬಾರದು, ಅದಕ್ಕೊಂದು ನಿಯಂತ್ರಣ ಇರಲೇಬೇಕು ಎಂಬ ಉದ್ದೇಶದಿಂದ ಜಾರಿಯಾದ 1980ರ ಕಾಯ್ದೆಯಲ್ಲಿ ಹಲವು ಅಸ್ಪಷ್ಟ ಅಂಶಗಳಿವೆ ಎಂಬ ಕಾರಣಕ್ಕೆ ತಿದ್ದುಪಡಿ ಮಸೂದೆಯನ್ನು ಸರ್ಕಾರ ರೂಪಿಸಿದೆ. ಯಾವುದೇ ಸಲಹೆ, ಆಕ್ಷೇಪಗಳನ್ನು ಪರಿಗಣಿಸದೆ ಮುಂಗಾರು ಅಧಿವೇಶನದಲ್ಲಿ ಸಂಸತ್ತಿನ ಅನುಮೋದನೆ ಪಡೆದುಕೊಂಡುಬಿಟ್ಟಿದೆ. 

ಈ ತಿದ್ದುಪಡಿ ಮಸೂದೆಯು ಕಾಯ್ದೆಯಾಗಿ ಜಾರಿಗೆ ತಂದರೆ, ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯ ಹೊರಗಿನ ಅರಣ್ಯ ಪ್ರದೇಶಗಳನ್ನು ಅರಣ್ಯೇತರ ಉದ್ದೇಶಕ್ಕೆ ಬಳಸಲು ಯಾವುದೇ ಅಡ್ಡಿಯಿರುವುದಿಲ್ಲ. ಉದಾಹರಣೆಗೆ, ಅಂತರರಾಷ್ಟ್ರೀಯ ಗಡಿ, ಗಡಿ ನಿಯಂತ್ರಣ ರೇಖೆಯ 100 ಕಿ.ಮೀ. ವ್ಯಾಪ್ತಿಯಲ್ಲಿರುವ ಅರಣ್ಯ ಪ್ರದೇಶದಲ್ಲಿ ರಕ್ಷಣಾ ಉದ್ದೇಶದ ರಸ್ತೆ ಮತ್ತು ರೈಲು ಮಾರ್ಗ ನಿರ್ಮಾಣಕ್ಕೆ ಪೂರ್ವಾನುಮತಿ ಪಡೆದುಕೊಳ್ಳಬೇಕು ಎಂಬ ನಿಯಮವನ್ನು ಈ ಮಸೂದೆಯು ಇಲ್ಲವಾಗಿಸುತ್ತದೆ. ಸರ್ಕಾರದ ಅಧೀನದ ಮೃಗಾಲಯ ಹಾಗೂ ಸಫಾರಿ ಪ್ರದೇಶಗಳಿಗೆ, ಪ್ರವಾಸೋದ್ಯಮವನ್ನು ಉತ್ತೇಜಿಸುವ ಅಥವಾ ಕೇಂದ್ರವು ಬಯಸುವ ಇತರ ಕೆಲವು ಯೋಜನೆಗಳಿಗೆ ಪರಿಸರ ಸಂಬಂಧಿ ಪೂರ್ವಾನುಮತಿ ಪಡೆಯುವ ಅಗತ್ಯ ಇರುವುದಿಲ್ಲ.

ರಾಜ್ಯಗಳ ಸುಪರ್ದಿಯಲ್ಲಿದ್ದ ಹಾಗೂ ಕಾನೂನು ಮಾನ್ಯತೆಯಿಲ್ಲದ ಅರಣ್ಯ ಪ್ರದೇಶಗಳಿಗೆ ಕಾನೂನು ಮಾನ್ಯತೆ ನೀಡಲು ಹಿಂದಿನ ನಾಲ್ಕು ದಶಕಗಳಲ್ಲಿ ಅರಣ್ಯ ಸಂರಕ್ಷಣೆ ಕಾಯ್ದೆಗೆ ಅನೇಕ ಬಾರಿ ತಿದ್ದುಪಡಿ ಮಾಡಲಾಗಿದೆ. ಆದರೆ, ಈಗಿನ ತಿದ್ದುಪಡಿಯು ಬಿಗಿಯಾಗಿರುವ ಕಾನೂನು, ನಿಯಮಗಳನ್ನು ಸಡಿಲಿಸುವ ಮೂಲಕ ಕಾಯ್ದೆಯನ್ನು ದುರ್ಬಲಗೊಳಿಸುತ್ತದೆ ಎಂದು ನೂರಕ್ಕೂ ಹೆಚ್ಚು ನಿವೃತ್ತ ಐಎಎಸ್ ಅಧಿಕಾರಿಗಳು ಎಲ್ಲಾ ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರಿಗೆ ಪತ್ರ ಬರೆದು ವಿರೋಧ ವ್ಯಕ್ತಪಡಿಸಿದ್ದಾರೆ. ಬಹುಮುಖ್ಯವಾಗಿ, ಉದ್ದೇಶಿತ ಮಸೂದೆಯು ಸುಪ್ರೀಂ ಕೋರ್ಟ್‌ 1996ರಲ್ಲಿ ನೀಡಿದ ಅರಣ್ಯ ವ್ಯಾಖ್ಯಾನಕ್ಕೆ ವಿರುದ್ಧವಾಗಿದೆ. ಅಂದರೆ, ಇದು ಕಾಯ್ದೆಯಾಗಿ ಜಾರಿಗೆ ಬಂದರೆ ಡೀಮ್ಡ್‌ ಅರಣ್ಯಗಳಿಗೆ ಕಾನೂನಿನ ರೀತ್ಯ ಯಾವುದೇ ಭದ್ರತೆ ಇರುವುದಿಲ್ಲ.

ಒಂದು ಹೆಕ್ಟೇರ್ ಪ್ರದೇಶದಲ್ಲಿ ನಿರ್ದಿಷ್ಟವಾಗಿ ಮರಗಳ ಚಾವಣಿಯು ಶೇ 10ಕ್ಕಿಂತ ಹೆಚ್ಚು ಇದ್ದಲ್ಲಿ, ಅಂತಹ ಪ್ರದೇಶಗಳನ್ನು ಹಸಿರು ಕವಚ ಎಂದು ಕರೆಯಲಾಗುತ್ತದೆ. 2001ರಿಂದ 2021ರವರೆಗೆ ಇಂತಹ ಹಸಿರು ಕವಚ 38,251 ಚ.ಕಿ.ಮೀ.ನಷ್ಟು ಹೆಚ್ಚಾಗಿದೆ ಎಂದು ವರದಿಗಳು ಹೇಳುತ್ತವೆ. ಇದು ಶೇ 40ರಷ್ಟು ಇದ್ದಲ್ಲಿ ಅಂತಹ ಪ್ರದೇಶವನ್ನು ದಟ್ಟಾರಣ್ಯವೆಂದು ಪರಿಗಣಿಸಲಾಗುತ್ತದೆ. ಆದರೆ, ವಾಸ್ತವದಲ್ಲಿ ಏಕಜಾತಿಯ ನೆಡುತೋಪುಗಳನ್ನು ಕೂಡ ಹಸಿರು ಕವಚವೆಂದೇ ಪರಿಗಣಿಸಲಾಗುತ್ತಿದ್ದು, ಅವು ನೈಸರ್ಗಿಕ ಅರಣ್ಯಕ್ಕೆ ಎಂದೂ ಸಮನಾಗಲಾರವು. ಹಾಲಿ ಇರುವ ಅರಣ್ಯ ಪ್ರದೇಶಗಳನ್ನು ಅರಣ್ಯೇತರ ಉದ್ದೇಶಕ್ಕೆ ಬಳಸುವುದು ಹಾಗೂ ನಷ್ಟವಾದ ಅರಣ್ಯ ಪ್ರದೇಶಕ್ಕೆ ಪರಿಹಾರವಾಗಿ ಬೇರೆಡೆಯಲ್ಲಿ ಅರಣ್ಯ ಬೆಳೆಸುವ ಪರಿಪಾಟ ಇದೆ. ಆದರೆ, ನೈಸರ್ಗಿಕ ಅರಣ್ಯಗಳಿಗೆ ಇಂಗಾಲಾಮ್ಲವನ್ನು ಹೀರಿಕೊಳ್ಳುವ ಸಾಮರ್ಥ್ಯವು ಹೊಸ ನೆಡುತೋಪುಗಳಿಗಿಂತ ಶೇ 40ರಷ್ಟು ಹೆಚ್ಚು ಎಂದು ಅನೇಕ ಸಂಶೋಧನೆಗಳು ಬಹಿರಂಗಪಡಿಸಿವೆ.

ಮಧ್ಯಪ್ರದೇಶದ ಬಕ್ಸಾ ಎಂಬ ದಟ್ಟಾರಣ್ಯದ ಅಡಿಯಲ್ಲಿ ವಜ್ರ ನಿಕ್ಷೇಪವಿದೆ ಎನ್ನುವ ಕಾರಣದಿಂದ, ಅಲ್ಲಿ ವಜ್ರ ಗಣಿಗಾರಿಕೆ ಮಾಡಲು ಅರಣ್ಯ ಸಂರಕ್ಷಣೆ ಕಾಯ್ದೆ– 1980ರ ಅಡಿಯಲ್ಲಿ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ತಿದ್ದುಪಡಿ ಮಸೂದೆ ಇನ್ನೂ ದುರ್ಬಲವಾಗಿದೆ. ಇನ್ನಷ್ಟು ಮತ್ತಷ್ಟು ಅರಣ್ಯ ಪ್ರದೇಶಗಳು ಹೆದ್ದಾರಿಗಳಿಗೆ, ಹೊಸ ರೈಲು ಮಾರ್ಗಗಳಿಗೆ, ಪ್ರವಾಸೋದ್ಯಮಕ್ಕೆ ಸುಲಭವಾಗಿ ತೆರೆದುಕೊಳ್ಳಲು ಇದು ಅನುವಾಗಿಸಲಿದೆ ಎಂಬ ಆತಂಕ ಇದೆ. ಅಭಿವೃದ್ಧಿ ಕಾರ್ಯಗಳ ಹೆಸರಿನಲ್ಲಿ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುವ ಬಲ ಕೇಂದ್ರಕ್ಕೆ ಲಭಿಸಲಿದೆ.

ಪ್ರಪಂಚದಾದ್ಯಂತ ನೈಸರ್ಗಿಕ ಅರಣ್ಯ ಪ್ರದೇಶಗಳು ಕ್ಷೀಣಿಸುತ್ತಿರುವುದರಿಂದ ವಾತಾವರಣದಲ್ಲಿ ಇಂಗಾಲಾಮ್ಲದ ಅಂಶ ಹೆಚ್ಚಾಗಿದ್ದು, ಹವಾಮಾನ ವೈಪರೀತ್ಯಕ್ಕೆ ಕಾರಣವಾಗುತ್ತಿದೆ. ನೈಸರ್ಗಿಕ ವಿಕೋಪಗಳ ಆವರ್ತನದಲ್ಲಿ ಹೆಚ್ಚಳವಾಗುತ್ತಿದೆ. ನೆರೆ ಹಾಗೂ ಬರ ಒಟ್ಟೊಟ್ಟಿಗೇ ಕಾಡುತ್ತವೆ. ಇವೆಲ್ಲಾ ಜಾಗತಿಕ ಹಾಗೂ ರಾಷ್ಟ್ರೀಯ ವಿದ್ಯಮಾನಗಳಾದರೆ, ಕರ್ನಾಟಕದಲ್ಲಿ ಅದರಲ್ಲೂ ಪಶ್ಚಿಮಘಟ್ಟಗಳಲ್ಲಿ ವಾಸಿಸುವ ಬಹುಸಂಖ್ಯಾತ ಬಡವರ ಪರಿಸ್ಥಿತಿ ಚಿಂತಾಜನಕವಾಗಲಿದೆ. ಹಾಲಿ ಇರುವ ಡೀಮ್ಡ್‌ ಅರಣ್ಯ ಪ್ರದೇಶಗಳಿಗೆ ಕಾನೂನು ಭದ್ರತೆ ಇಲ್ಲದಿರುವುದರಿಂದ ಹಾಗೂ ಅಡಕೆ ಮತ್ತು ಶುಂಠಿ ಬೆಳೆಗಳಿಗೆ ಅನಿರೀಕ್ಷಿತವಾಗಿ ಹೆಚ್ಚು ಬೆಲೆ ಬಂದಿರುವ ಕಾರಣದಿಂದ ಒತ್ತುವರಿಗೆ ಲಂಗು ಲಗಾಮು ಇರುವುದೇ ಇಲ್ಲ. ದೇಶದಲ್ಲಿ ಅರಣ್ಯ ಪ್ರದೇಶವನ್ನು ಹೆಚ್ಚಿಸುವುದು ಈ ಮಸೂದೆಯ ಉದ್ದೇಶ ಎಂದು ಹೇಳಲಾಗಿದೆ. ಆದರೆ, ಇದು ಅರಣ್ಯ ಪ್ರಮಾಣದ ಕುಸಿಯುವಿಕೆಗೆ ಕಾರಣವಾಗಲಿದೆ ಎಂಬ ಕಳವಳ ಪರಿಸರ ತಜ್ಞರನ್ನು ಕಾಡುತ್ತಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT