ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಹವೇ ದೇಗುಲ ಎಂದ ನಾಡಿನಲ್ಲಿ...

Last Updated 24 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

‘ಉಳ್ಳವರು ಶಿವಾಲಯವ ಮಾಡುವರು
ನಾನೇನು ಮಾಡುವೆ ಬಡವನಯ್ಯ
ಎನ್ನ ಕಾಲೇ ಕಂಬ ದೇಹವೇ ದೇಗುಲ
ಶಿರವೇ ಹೊನ್ನ ಕಳಶವಯ್ಯ
ಕೂಡಲ ಸಂಗಮದೇವಾ ಕೇಳಯ್ಯ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’

ಬಸವಣ್ಣನವರ ಈ ವಚನ ಇವತ್ತಿನ ಸಮಾಜೋಧಾರ್ಮಿಕ ಕ್ಷೇತ್ರದ ಕೆಲವು ಮಠ, ಮಂದಿರಗಳಲ್ಲಿ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಪ್ರಸ್ತುತವಾಗುತ್ತದೆ. ಆ ಕಾಲದ ಮಠ, ಮಂದಿರಗಳಲ್ಲಿ ನಡೆದ ಶೋಷಣೆಯನ್ನು ಗಮನದಲ್ಲಿಟ್ಟುಕೊಂಡೇ, ಅದಕ್ಕೆ ಪ್ರತಿಕ್ರಿಯೆಯಾಗಿ ಬಸವಣ್ಣನವರ ಈ ವಚನ ರಚನೆಯಾಗಿದೆ. ಸಾಮಾನ್ಯವಾಗಿ ಧರ್ಮಗಳು ಮತಧರ್ಮವಾದಾಗ ಜಡತ್ವಕ್ಕೆ, ಸ್ಥಾವರತೆಗೆ ಒಳಗಾಗುತ್ತವೆ. ಇಂಥ ಸ್ಥಾವರ ಸ್ಥಿತಿಯ ವಿರುದ್ಧ ಬಹುತೇಕ ಧರ್ಮಗಳಲ್ಲಿ ಪ್ರತಿರೋಧ ಹಾಗೂ ಪರ್ಯಾಯ ಹುಡುಕಾಟದ ಪ್ರಕ್ರಿಯೆ ಆರಂಭವಾಗಿದೆ. ಬುದ್ಧ, ದೇವರಿಲ್ಲದ ಧರ್ಮವನ್ನು ಕಟ್ಟಿದ. ಬಸವ, ದೇಗುಲವಿಲ್ಲದ ಧರ್ಮವನ್ನು ರೂಪಿಸಿದ. ಸೂಫಿ ಸಂತ ಕಬೀರ, ದೇವರನ್ನು ಗುಡಿ, ಮಸೀದಿಯಲ್ಲಿ ಗುರ್ತಿಸದೇ ಭಕ್ತರ ಮನದಲ್ಲೇ ಗುರ್ತಿಸಿದ. ಶಿಲುಬೆ ಮೇಲೆ ನಿಂತ ಯೇಸು, ಮುಂದೆ ಆ ಶಿಲುಬೆ ಧಾರ್ಮಿಕ ಸಂಕೇತವಾಗುತ್ತದೆ ಎಂದು ಭಾವಿಸಿರಲಿಲ್ಲ. ಕುವೆಂಪು, ಗುಡಿ, ಚರ್ಚ್‌, ಮಸೀದಿಗಳಿಂದ ಹೊರಬಂದ ವಿಶ್ವಮಾನವ ಧರ್ಮವನ್ನು ಕಟ್ಟಲು ಕರೆ ಕೊಟ್ಟರು. ಇಂಥ ಹಲವಾರು ದಾರ್ಶನಿಕರು ಮತಧರ್ಮಗಳ ಸ್ಥಾವರ ಸಂಸ್ಕೃತಿಯ ವಿರುದ್ಧ ತಮ್ಮ ಸಂದೇಶಗಳನ್ನು ಕೊಟ್ಟಿದ್ದಾರೆ.

ಮೂಲತಃ ಮನುಷ್ಯ, ಪ್ರಕೃತಿಯ ಆರಾಧಕ. ಕಾಲಾಂತರದಲ್ಲಿ ಬದುಕಿನ ಸಂಕಷ್ಟಗಳನ್ನು ಎದುರಿಸಲಾಗದೇ ಅಗೋಚರ ಶಕ್ತಿಯ ಮೊರೆ ಹೋದ. ಭಕ್ತಿ ಎನ್ನುವುದು ಭಯ ಮತ್ತು ಪ್ರೀತಿಯಿಂದ ಉಂಟಾದ ಒಂದು ಭಾವ. ಸಾಮಾನ್ಯವಾಗಿ ಜನಪದರೇ ಹೇಳುವಂತೆ ‘ಸಂಕಟ ಬಂದಾಗ ವೆಂಕಟರಮಣ’ ಎನ್ನುವ ಮಾತು ಸತ್ಯ. ವಾಸ್ತವವಾದಿ ಚಿಂತಕ ಕಾರ್ಲ್ ಮಾರ್ಕ್ಸ್‌, ಧರ್ಮವನ್ನು (ರಿಲಿಜನ್‌) ‘ಹೃದಯಹೀನ ವಿಶ್ವದ ಹೃದಯ, ಅದೊಂದು ಅಫೀಮು (ನಶೆ)’ ಎಂದು ಹೇಳಿದ. ಮನುಷ್ಯ, ತನ್ನ ಸಂಕಟಗಳಿಗೆ ಎಲ್ಲಿಯೂ ಪರಿಹಾರ ದೊರೆಯದೇ ಇದ್ದಾಗ ದೇವರು, ಧರ್ಮದ ಮೊರೆ ಹೋಗುತ್ತಾನೆ. ತನ್ನ ಸಂಕಟಗಳ ಭಾರವನ್ನು ನಶೆಯ ರೀತಿಯಲ್ಲಿ ಮರೆಯಬಯಸುತ್ತಾನೆ. ಆದರೆ ನಶೆ ಇಳಿದ ಮೇಲೆ ಮತ್ತೆ ವಾಸ್ತವಕ್ಕೆ ಬರುವಂತೆ, ತನ್ನ ಬದುಕಿನ ಜಂಜಡಗಳಲ್ಲಿ ಸ್ವತಃ ಈಸುತ್ತಾನೆ. ಆದರೆ, ಭಕ್ತಿಯ ಭಾವದಲ್ಲಿ ಭಾವನಾತ್ಮಕವಾಗಿಯಾದರೂ ತನ್ನ ನೋವುಗಳನ್ನು ಮರೆಯಲು ಯತ್ನಿಸುತ್ತಾನೆ. ಇಂಥ ಭಕ್ತನ ಭಾವನಾತ್ಮಕ ಚಟುವಟಿಕೆಗಳನ್ನು ಭಕ್ತಿಯ ಕೇಂದ್ರಗಳಾದ ಮಠ, ಮಂದಿರಗಳು ಬಹುತೇಕ ಸಂದರ್ಭದಲ್ಲಿ ದುರುಪಯೋಗಪಡಿಸಿಕೊಳ್ಳುತ್ತಿವೆ.

ಭಕ್ತ ಮತ್ತು ಭಗವಂತನ ನಡುವೆ ಮಧ್ಯವರ್ತಿಗಳಾಗಿ ಬೆಳೆದ ಮಠ, ಮಂದಿರಗಳು, ‍‍ಪುರೋಹಿತರು ಪ್ರಭುತ್ವದ ಜೊತೆಗೂಡಿ ಒಂದು ಪ್ರಬಲ ವ್ಯವಸ್ಥೆ ರೂಢಿಸಿಕೊಂಡಿದ್ದಾರೆ. ಇದು ಒಂದು ದೇಶದ, ಒಂದು ಮತಧರ್ಮದ ಒಳಗೆ ನಡೆದ ಬೆಳವಣಿಗೆಯಲ್ಲ; ವಿಶ್ವ ಎಲ್ಲ ಕಡೆಗೂ ಆದ ಬೆಳವಣಿಗೆ. ಒಂದು ಹಂತದಲ್ಲಿ ಸಮಾಜವನ್ನು ಪ್ರಭುತ್ವ ನಿಯಂತ್ರಿಸಬೇಕೋ ಅಥವಾ ಧಾರ್ಮಿಕ ಸಂಸ್ಥೆಗಳು ನಿಯಂತ್ರಿಸಬೇಕೋ ಎಂಬ ವಿಷಯಕ್ಕಾಗಿ ತೀವ್ರ ಸಂಘರ್ಷಗಳೇ ನಡೆದಿವೆ. ಅಂತಿಮವಾಗಿ ಅರಮನೆ, ಗುರುಮನೆ ಒಂದಾಗಿ ಒಂದು ವ್ಯವಸ್ಥೆಯನ್ನು ರೂಪಿಸಿಕೊಂಡಿವೆ.

ಪ್ರಸ್ತುತ ಮಠ, ಮಂದಿರಗಳಲ್ಲಿ ನಡೆಯುತ್ತಿರುವ ಸಂಘರ್ಷದ ಹಿಂದೆ ಯಾವ ತಾತ್ವಿಕ ಭಿನ್ನಾಭಿಪ್ರಾಯಗಳೂ ಇಲ್ಲ. ಇದು, ಆಸ್ತಿಕ–ನಾಸ್ತಿಕರ ನಡುವಿನ ಸಂಘರ್ಷವೂ ಅಲ್ಲ. ಬಹುತೇಕ ಮತಧಾರ್ಮಿಕ ಸಂಸ್ಥೆಗಳು, ದೇವಾಯಲಗಳು ಒಂದು ಉದ್ಯಮವಾಗಿ ಬೆಳೆದಿವೆ. ಕರ್ನಾಟಕದ ಮುಜರಾಯಿ ಇಲಾಖೆಯ ಸಚಿವರು ಹೇಳುವ ಹಾಗೆ ವರ್ಷಕ್ಕೆ ಅಧಿಸೂಚಿತ ಮಂದಿರ ಹಾಗೂ ಧಾರ್ಮಿಕ ದತ್ತಿ ಸಂಸ್ಥೆಗಳಿಂದ ಐದು ನೂರು ಕೋಟಿಯಿಂದ ಆರುನೂರು ಕೋಟಿ ರೂಪಾಯಿ ಆದಾಯ ಸರ್ಕಾರಕ್ಕೆ ಬರುತ್ತಿದೆ. ರಾಜ್ಯದಲ್ಲಿ ಮುಜರಾಯಿ ಇಲಾಖೆಯ ಅಡಿಯಲ್ಲಿ ಬರುವ 35,000ಕ್ಕಿಂತಲೂ ಹೆಚ್ಚಿನ ದೇವಾಲಯಗಳು, ಧಾರ್ಮಿಕ ಸಂಸ್ಥೆಗಳಿದ್ದು, ಪುರೋಹಿತರು, ಅರ್ಚಕರು ಸೇರಿದಂತೆ ಒಂದು ಲಕ್ಷಕ್ಕಿಂತ ಹೆಚ್ಚಿನ ಉದ್ಯೋಗಿಗಳು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ. ಕರ್ನಾಟಕದಲ್ಲಿರುವ ದೇವಸ್ಥಾನಗಳನ್ನು ಆದಾಯದ ಆಧಾರದ ಮೇಲೆ ಎ, ಬಿ, ಸಿ ಶ್ರೇಣಿಗಳಲ್ಲಿ ವಿಂಗಡಿಸಲಾಗಿದೆ. ದೇವಾಯಲದ ಆದಾಯದ ಒಂದು ಸಣ್ಣ ಭಾಗವೇ ಇಷ್ಟು ದೊಡ್ಡಮಟ್ಟದ್ದಾದರೆ ಒಟ್ಟು ಆದಾಯ, ಲೆಕ್ಕಪತ್ರವಿಲ್ಲದ ಆದಾಯ ಸೇರಿದರೆ ಎಷ್ಟಾಗಬಹುದು? ಸೆಪ್ಟೆಂಬರ್ ತಿಂಗಳಲ್ಲಿ ಲಾಕ್‌ಡೌನ್‌ ಹಿಂತೆಗೆದುಕೊಂಡಾಗ ತಿರುಪತಿಯ ತಿರುಮಲ ದೇವಸ್ಥಾನದ ಹುಂಡಿಗೆ ಒಂದೇ ದಿನ 1.02 ಕೋಟಿ ರೂಪಾಯಿ ಹಣ ಬಂದಿದೆ. ಕೇರಳದ ಅನಂತಪದ್ಮನಾಭ ದೇವಸ್ಥಾನದ ಸಂಪತ್ತು ಲಕ್ಷ ಕೋಟಿ ರೂಪಾಯಿ ಎಂದು ಹೇಳಲಾಗಿದೆ.

ಕರ್ನಾಟಕದ ಮುಜರಾಯಿ ಇಲಾಖೆಯ ವ್ಯಾಪ್ತಿಯ ಹೊರಗೂ ಸಾವಿರಾರು ಮಠ, ಮಂದಿರಗಳಿವೆ. ಕೆಲವು ಕುಟುಂಬಗಳ ನಿಯಂತ್ರಣದಲ್ಲಿ, ಇನ್ನು ಕೆಲವು ಜಾತಿ ಸಂಘಟನೆಗಳ ನಿಯಂತ್ರಣದಲ್ಲಿ ನಡೆಯುತ್ತವೆ. ಕೆಲವು ದೇವಸ್ಥಾನಗಳಲ್ಲಿ ಮಾತ್ರ ಆಡಳಿತ ಮಂಡಳಿಗಳು, ಧರ್ಮದರ್ಶಿಗಳು ಇದ್ದಾರೆ. ಅಮಾಯಕ ಭಕ್ತರು ತಮ್ಮ ಸಂಕಟಗಳ ಪರಿಹಾರಕ್ಕಾಗಿ, ನೆಮ್ಮದಿಯ ಬದುಕಿಗಾಗಿ, ಹರಕೆಗಳನ್ನು ಹೊತ್ತು ತಮ್ಮ ಬೆವರಿನ ದುಡಿಮೆಯ ಪಾಲನ್ನು ದೇವಸ್ಥಾನದ ಹುಂಡಿಗೋ ಪರೋಹಿತರ ತಟ್ಟೆಗೋ ಹಾಕುತ್ತಾರೆ. ಜನರ ಭಕ್ತಿಭಾವದಿಂದ ‘ಭಗವಂತ’ನಿಗೆ ಬಂದ ಈ ಹಣ ಪುರೋಹಿತರ ಮಧ್ಯೆ, ಧರ್ಮದರ್ಶಿಗಳ ಮಧ್ಯೆ ಭಿನ್ನಮತಕ್ಕೆ ಸಂಘರ್ಷಕ್ಕೆ ಕಾರಣವಾಗುತ್ತದೆ. ಇಂಥ ಸಂಘರ್ಷಗಳು ಗುಂಪು ಫರ್ಷಣೆಗಳಿಗೂ ಪರಸ್ಪರರ ಕೊಲೆಗಳಿಗೂ ಕಾರಣವಾಗಿವೆ. ಭಕ್ತರ ಕಾಣಿಕೆಯಿಂದ ಬರುವ ದುಡ್ಡಿನ ಆಚೆ ಇಂದು ಹಲವಾರು ದೇವಸ್ಥಾನಗಳು ವಾಣಿಜ್ಯ ಮಳಿಗೆ, ಜಮೀನು, ಇತರೆ ಸ್ಥಿರಾಸ್ತಿ ಹೊಂದಿರುವುದರಿಂದ ಅಲ್ಲಿ ಭಕ್ತಿಗಿಂತಲೂ ಭಕ್ತಿಯ ಉದ್ಯಮ ಆದ್ಯತೆ ಪಡೆಯುತ್ತಿದೆ. ಈ ಕ್ಷೇತ್ರದ ಉದ್ಯಮಪತಿಗಳಾಗಲು ನಡೆದ ಪೈಪೋಟಿಯೇ ಸಂಘರ್ಷದ ಮೂಲ.

ದೇವರಲ್ಲಿ, ದೇವಸ್ಥಾನಗಳಲ್ಲಿ ಕೆಲವು ಸಾಮಾನ್ಯ ಮತ್ತು ಅಸಾಮಾನ್ಯ ಎಂಬ ವಿಂಗಡನೆ ಇದೆ. ಎಲ್ಲ ಪ್ರಸಿದ್ಧ ದೇವಸ್ಥಾನಗಳ ಆಡಳಿತ ಮಂಡಳಿಯವರು ಅಸಾಮಾನ್ಯ ಮಟ್ಟಕ್ಕೇರಲು ಆ ದೇವರ ಶಕ್ತಿ, ಪವಾಡ, ಅವತಾರಗಳನ್ನು ಜಾಹೀರಾತು ಮತ್ತು ಸಾಂಸ್ಕೃತಿಕ ಮಾಧ್ಯಮದ ಮೂಲಕ ಜನರಿಗೆ ತಲುಪಿಸುತ್ತಾರೆ. ಅಮಾಯಕ ಜನ ಪರಿಹರಿಸಲು ಸಾಧ್ಯವಾಗದ ತಮ್ಮ ಸಂಕಟಗಳ ಪರಿಹಾರಕ್ಕಾಗಿ ಅಂಥ ದೇವಸ್ಥಾನಗಳಿಗೆ ಹೋಗಿ ಹರಕೆ ತೀರಿಸುತ್ತಾರೆ. ಜನರ ಮೇಲೆ ಇಂಥ ಪ್ರಭಾವ ಹೊಂದಿದ ದೇವಸ್ಥಾನ, ಮಠಗಳು ಸಹಜವಾಗಿಯೇ ರಾಜಕೀಯ ಮಹತ್ವವನ್ನೂ ಪಡೆಯುತ್ತವೆ. ಹಲವಾರು ದೇವಸ್ಥಾನಗಳ ಧರ್ಮದರ್ಶಿಗಳು, ಮಠಾಧಿಪತಿಗಳು ಯಾರು ಮಂತ್ರಿಗಳಾಗಬೇಕು, ಯಾರು ಮುಖ್ಯಮಂತ್ರಿಗಳಾಗಬೇಕು ಎಂದು ಆದೇಶ ಕೊಡುವ ಮಟ್ಟಕ್ಕೆ ಹೋದ ಉದಾಹರಣೆಗಳೂ ನಮ್ಮ ಮುಂದಿವೆ.

ಪ್ರಗತಿಪರ ಮಠಾಧಿಪತಿಯೊಬ್ಬರು ‘ಬಹುತೇಕ ಮಠಗಳು ಅಕ್ರಮ ಸಂಪತ್ತಿನ ಕೇಂದ್ರ’ಗಳಾಗಿವೆ ಎಂದು ಹೇಳಿದ್ದರು. ಮುಜರಾಯಿ ಇಲಾಖೆಯ ದೇವಸ್ಥಾನಗಳನ್ನು ಹೊರತುಪಡಿಸಿ ಇತರೆ ಬಹುತೇಕ ದೇವಸ್ಥಾನಗಳ, ಮಠಗಳ ಆಯವ್ಯಯ ‍‍‍ಪಾರದರ್ಶಕವಾಗಿರುವುದಿಲ್ಲ. ಯಾವ ಪಕ್ಷದ ಸರ್ಕಾರ ಬಂದರೂ ಇಂಥ ಸಂಪತ್ತಿನ ಮೂಲ, ಗಾತ್ರ ಹುಡುಕುವ ಸಾಹಸ ಮಾಡುವುದಿಲ್ಲ. ಇದು ಬಹುತೇಕ ಮಠ, ಮಂದಿರಗಳಲ್ಲೂ ನಡೆವ ವಿದ್ಯಮಾನ, ಇಂಥ ಸಂಪತ್ತಿನ, ಜನ ಬೆಂಬಲದ ಕ್ಷೇತ್ರದಲ್ಲಿ ಸಹಜವಾಗಿ ಅಧಿಕಾರಕ್ಕಾಗಿ ಪೈಪೋಟಿ ಸಂಘರ್ಷ ನಡೆಯುತ್ತಲೇ ಇರುತ್ತದೆ.

ಆಸ್ತಿಕತೆ ಆಸ್ತಿಯಾಗುವ ಪ್ರಕ್ರಿಯೆ ಇಂದು ನಿನ್ನೆಯದಲ್ಲ. ಶತಮಾನಗಳಿಂದ ಬೆಳೆದುಬಂದ, ಧರ್ಮದ ಹೆಸರಿನಲ್ಲಿ ನಡೆದು ಬಂದ ಅಧರ್ಮದ ಕ್ರಿಯೆ ಇದು. ಇದನ್ನು ಕನ್ನಡದ ಹಲವಾರು ಸಾಹಿತ್ಯ ಕೃತಿಗಳು, ದೃಶ್ಯ ಮಾಧ್ಯಮಗಳು ಹೊರಹಾಕಿವೆ. ಕನ್ನಡದ ಆರಂಭಿಕ ಕಾದಂಬರಿಕಾರರಲ್ಲಿ ಒಬ್ಬರಾದ ಬೋಳಾರ ಬಾಬುರಾಯರು 1905ರಲ್ಲಿಯೇ ‘ವಾಗ್ದೇವಿ‘ ಎಂಬ ಕಾದಂಬರಿಯಲ್ಲಿ ಧಾರ್ಮಿಕ ಮುಖವಾಡದಲ್ಲಿ ನಡೆವ ಅನಾಚಾರಗಳನ್ನು ದಾಖಲಿಸಿದ್ದಾರೆ. ಖ್ಯಾತ ಕಾದಂಬರಿಕಾರ ಬಸವರಾಜ ಕಟ್ಟೀಮನಿಯವರು ಮಠಾಧಿಪತಿಗಳು ಮತ್ತು ಧರ್ಮದರ್ಶಿಗಳ ಅನಾಚಾರ ಮತ್ತು ಅವ್ಯವಹಾರಗಳನ್ನು ‘ಜರತಾರಿ ಜಗದ್ಗುರು’ ಎಂಬ ಕಾದಂಬರಿಯಲ್ಲಿ ದಾಖಲಿಸಿದ್ದಾರೆ.

ವೈಕುಂಠರಾಜು ಅವರ ‘ಉದ್ಭವ’ ನಾಟಕ ರಾತ್ರೋರಾತ್ರಿ ಉದ್ಭವವಾಗುವ ದೇವರ ಕುರಿತಾಗಿದೆ. ಪ್ರಸನ್ನ ಅವರ ‘ಮಹಿಮಾಪುರ’ ನಾಟಕ ಒಂದು ಸಾಮಾನ್ಯ ದೇವಸ್ಥಾನ ಅಸಾಮಾನ್ಯವಾಗಿ, ಉದ್ಯಮವಾದ ಪರಿಯನ್ನು ಹೇಳುತ್ತದೆ. ಹಲವಾರು ಚಲನಚಿತ್ರಗಳು ಇಂಥ ವಿಷಯಗಳನ್ನಿಟ್ಟುಕೊಂಡು ಬಂದಿವೆ. ಆದರೆ, ಇಂದಿನ ಸಮಾಜೋಧಾರ್ಮಿಕ, ರಾಜಕೀಯ ಸಂದರ್ಭದಲ್ಲಿ ಇಂಥ ವಾಸ್ತವ ಸಂಗತಿಗಳ ಕುರಿತ ಮಾತು, ಕೃತಿ ವಿವಾದಕ್ಕೆ, ಸಂಘರ್ಷಕ್ಕೆ, ಅಂತಿಮವಾಗಿ ಕೊಲೆಗಳಿಗೂ ಕಾರಣವಾಗುತ್ತಿವೆ.

ಭಾರತದಂಥ ವಿವಿಧ ಧರ್ಮ, ಭಾಷೆ, ಜಾತಿಗಳಿರುವ ದೇಶದಲ್ಲಿ ಎಲ್ಲ ಜನ ಸಮೂಹದ ಸಹಬಾಳ್ವೆ ಸುಗಮ ಬದುಕಿಗಾಗಿ ಸಂವಿಧಾನದ ಮೂಲಭೂತ ಹಕ್ಕುಗಳಲ್ಲಿಯೇ ‘ಧಾರ್ಮಿಕ ಸ್ವಾತಂತ್ರ್ಯದ ಹಕ್ಕು’ಗಳನ್ನು ಅನುಚ್ಛೇದ 25, 26, 27, 28ರಲ್ಲಿ ಕೊಡಲಾಗಿದೆ. ಧರ್ಮ ಒಂದು ಹಕ್ಕಿನ ಭಾಗ ನಿಜ, ಆದರೆ ಧರ್ಮದ ಹೆಸರಿನಲ್ಲಿ ನಡೆವ ಅಧರ್ಮಗಳನ್ನು ತಡೆಯಲಯ ನಮ್ಮ ಸರ್ಕಾರ, ಸಮಾಜ ವಿಫಲವಾಗಿವೆ.

ನಮ್ಮ ರಾಜ್ಯದ, ದೇಶದ ಎಲ್ಲ ದೇವಸ್ಥಾನಗಳೂ ಎಲ್ಲ ಮಠಗಳೂ ಅಕ್ರಮ ಸಂಪತ್ತಿನ, ಅನೈತಿಕ ಚಟುವಟಿಕೆಗಳ ಕೇಂದ್ರ ಎಂದು ಹೇಳಿದರೆ ತಪ್ಪಾಗುತ್ತದೆ. ಹಲವಾರು ದೇವಸ್ಥಾನಗಳು ತಮ್ಮ ಆದಾಯವನ್ನು ದೇವಸ್ಥಾನದ ಅಭಿವೃದ್ಧಿ, ಭಕ್ತರ, ಯಾತ್ರಿಕರ ಮೂಲಭೂತ ಸೌಲಭ್ಯಗಳಿಗಾಗಿ ವಿನಿಯೋಗಿಸಿವೆ. ಕೆಲವು ಮಠಗಳು ಬಡವರ ಶಿಕ್ಷಣ, ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ. ಆದರೆ ಹೆಚ್ಚಿನ ಮಠಗಳು, ದೇವಸ್ಥಾನಗಳು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿವೆ. ಇಂದು ಹಲವಾರು ಮಠಗಳ, ದೇವಾಲಯಗಳ ಆಂತರಿಕ ವ್ಯವಹಾರಗಳು ನ್ಯಾಯಾಲಯದ ಮೆಟ್ಟಿಲೇರಿವೆ. ಮಠಾಧಿಪತಿಗಳ ಸ್ಥಾನಕ್ಕಾಗಿ ಪೈಪೋಟಿ ನಡೆದು, ನ್ಯಾಯಾಲಯದಲ್ಲಿ ಹೋರಾಟಗಳು ನಡೆಯುತ್ತಲೇ ಇವೆ.

ಜನ ವಿಶ್ವಾಸ, ಭಕ್ತಿಯಿಂದ ನಡೆದುಕೊಳ್ಳುವ ಕೆಲವು ಮಠಾಧಿಪತಿಗಳೂ ಭಕ್ತರ ಭಾವನೆಗಳಿಗೆ ದ್ರೋಹ ಬಗೆದ ವಿದ್ಯಮಾನಗಳು ಸಾಕಷ್ಟಿವೆ. ಹಲವಾರು ಧರ್ಮಗಳಲ್ಲಿ ದೇವದೂತರು, ಧರ್ಮ ಪ್ರಸಾರಕರಿದ್ದರೆ, ಕೆಲವರು ದೇವಮಾನವರಿದ್ದಾರೆ. ಜನರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡ ಇಂಥವರಿಂದ ಧರ್ಮ ದುರ್ಬಳಕೆಯಾಗಿದೆ. ಇಂಥ ಸಂದರ್ಭದಲ್ಲಿ ಸಮಾಜ ಜಾಗೃತವಾಗಬೇಕು. ನಮ್ಮ ಜಾತಿಯ, ನಮ್ಮ ಧರ್ಮದ ಶ್ರದ್ಧಾಕೇಂದ್ರಗಳಲ್ಲಿ ಅನ್ಯಾಯವಾದರೆ ಸರಿ. ಇನ್ನೊಬ್ಬರು ಈ ಕುರಿತು ಮಾತನಾಡಬಾರದು ಎಂಬ ಭಾವ ಇತ್ತೀಚೆಗೆ ಬೆಳೆಯುತ್ತಿದೆ. ಇಂದು ಕೆಲವು ಹಿಂದೂ ದೇವಸ್ಥಾನ, ಮಠಗಳಲ್ಲಿ ಸಂಘರ್ಷಗಳಿರುವಂತೆಯೇ ವಕ್ಫ್‌ ಮಂಡಳಿಯಲ್ಲಿ ಹಣ ದುರುಪಯೋಗ, ಗುಂಪುಗಾರಿಕೆ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿವೆ. ಕ್ರಿಶ್ಚಿಯನ್‌ ಧರ್ಮದ ಪ್ರಚಾರಕಿಯರ ಮೇಲೆ ಅತ್ಯಾಚಾರ ನಡೆದ ಘಟನೆಗಳು ವರದಿಗಳಾಗಿವೆ. ಅದಕ್ಕೆ ಬಸವಣ್ಣನವರು ಇಂಥ ಉಳ್ಳವರ ದೇವಾಲಯಗಳನ್ನು ನಿರಾಕರಿಸಿ ‘ದೇಹವೇ ದೇಗುಲ’ ಎಂಬ ತತ್ವ ಸಾರಿದರು.

ಭಾವನಾವಾದಿಗಳ ಪ್ರಕಾರ, ಭಕ್ತ ಮತ್ತು ಭಗವಂತನ ಸಂಬಂಧ ಸಾಮೂಹಿಕ ಪೂಜೆ, ಪ್ರಾರ್ಥನೆಗಳ ಆಚೆ ತೀರ ವೈಯಕ್ತಿಕವಾದದ್ದು. ನಮ್ಮ ಸಂವಿಧಾನ ನಂಬಿಕೆಯ ಹಕ್ಕನ್ನು ಕೊಟ್ಟಿದೆ. ಹಾಗೇ ನಾಸ್ತಿಕನಾಗುವ ಹಕ್ಕೂ ನಮಗಿದೆ. ಆದಿಕಾಲದಿಂದಲೂ ಆಸ್ತಿಕ– ನಾಸ್ತಿಕದ ಸಂಘರ್ಷ ನಡೆದುಕೊಂಡು ಬಂದಿದೆ. ಜಗತ್ತು ಮಿಥ್ಯ ಎಂದು ಹೇಳಿದವರೂ ಪೀಠಗಳನ್ನು ಸ್ಥಾಪಿಸಿ ಹೋಗಿದ್ದಾರೆ. ಒಂದೇ ಕುಟುಂಬದಲ್ಲಿ ಆಸ್ತಿಕ–ನಾಸ್ತಿಕರಿದ್ದಾರೆ. ಇಂಥ ಒಂದು ಸಮಾಜದಲ್ಲಿ ಧರ್ಮ, ಮತಧರ್ಮ, ಮಠ, ಮಂದಿರಗಳು ಜನರ ನಂಬಿಕೆಯ, ಆಚರಣೆಯ, ಶ್ರದ್ಧೆಯ ಕೇಂದ್ರಗಳಾಗಿವೆ. ಇಂಥ ಸ್ಥಳಗಳಲ್ಲಿ ರಾಜಕಾರಣ, ಉದ್ಯಮದಾಹ, ಪ್ರಸಿದ್ಧಿಗಾಗಿ ಮೌಢ್ಯಾಚರಣೆ, ಪವಾಡ ಇಂತಹ ಕ್ರಿಯೆಗಳು ನಡೆಯಬಾರದು. ಮತಧರ್ಮದ, ಜಾತಿ ಶ್ರೇಷ್ಠತೆಯ ‍ಪ್ರತಿಷ್ಠೆಗಾಗಿ ಮಠ ಮಂದಿರಗಳು ಬಳಕೆಯಾಗಬಾರದು. ಎಲ್ಲ ಮತಧರ್ಮಗಳಿಗೂ ಒಂದು ನೀತಿ ಸಂಹಿತೆ ಇದೆ. ಅದೇ ಸಂದರ್ಭದಲ್ಲಿ ಎಲ್ಲ ಧರ್ಮಗಳ ಪ್ರಜೆಗಳಿಗೂ ಕೂಡಿ ಬಾಳುವಂಥ ನೀತಿ ಸಂಹಿತೆಯನ್ನು ನಮ್ಮ ಸಂವಿಧಾನ ಕೊಟ್ಟಿದೆ. ನಮ್ಮ ಸಂವಿಧಾನ ನಮ್ಮ ಮಾರ್ಗದರ್ಶಿಯಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT