ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ರಾಜ್ಯ ಕ್ರಿಕೆಟ್ ಬೆಂಗಳೂರು ಕೇಂದ್ರಿತವೇ?

Published 13 ಆಗಸ್ಟ್ 2023, 23:31 IST
Last Updated 13 ಆಗಸ್ಟ್ 2023, 23:31 IST
ಅಕ್ಷರ ಗಾತ್ರ

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ನಡೆ, ಕ್ರಿಕೆಟ್ ಅಭಿಮಾನಿಗಳ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ದೇಸಿ ಕ್ರಿಕೆಟ್‌ ಟೂರ್ನಿ ಪಂದ್ಯಗಳನ್ನು ಒಂದೇ ಕಡೆ ಆಯೋಜಿಸುತ್ತಿರುವುದು ಇದಕ್ಕೆ ಕಾರಣ. ರಣಜಿ ಟ್ರೋಫಿ ಹಾಗೂ ದುಲೀಪ್ ಟ್ರೋಫಿ ಟೂರ್ನಿಗಳ ಪಂದ್ಯಗಳನ್ನು ಬೆಂಗಳೂರಿನಲ್ಲೇ ಆಯೋಜಿಸಲಾಗಿತ್ತು. ಈಗ ನಡೆಯುತ್ತಿರುವ ಮಹಾರಾಜ ಟ್ರೋಫಿ ಪಂದ್ಯಗಳೂ ಬೆಂಗಳೂರಿನಲ್ಲೇ ಕೇಂದ್ರೀಕೃತಗೊಂಡಿರುವುದು ಕ್ರೀಡಾ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ರಾಜ್ಯದ ಬೇರೆ ನಗರಗಳಲ್ಲಿರುವ ಕ್ರೀಡಾಂಗಣಗಳಲ್ಲಿ ಪಂದ್ಯ ನಡೆಸದಿರುವುದು ಅಭಿಮಾನಿಗಳಲ್ಲಿ ಸಿಟ್ಟು ಮೂಡಿಸಿದೆ. ಅಲ್ಲದೆ, ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ಮತ್ತಿತರ ಕಾರ್ಯಕ್ರಮಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಿಲ್ಲ ಎಂಬ ಟೀಕೆಗಳು ವ್ಯಕ್ತವಾಗಿವೆ.

ಬೆಂಗಳೂರಿನಿಂದ ಹೊರಗೆ ಪಂದ್ಯಗಳನ್ನು ಆಯೋಜಿಸದಿರಲು ಸಂಸ್ಥೆಯು ಕಾರಣಗಳನ್ನು ನೀಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಬ್‌ ಏರ್ ಸಿಸ್ಟಮ್ ತಂತ್ರಜ್ಞಾನ ಇರುವುದರಿಂದ ಮಳೆ ಬಂದು ನಿಂತ ಮೇಲೆ ಅಲ್ಪ ಸಮಯದಲ್ಲಿ ಪಂದ್ಯ ಮುಂದುವರಿಸಲು ಅನುಕೂಲ ಎಂಬುದು ಒಂದು ಕಾರಣವಾದರೆ, ಪಂದ್ಯಗಳ ನೇರ ಪ್ರಸಾರದ ಹಕ್ಕು ಪಡೆದ ವಾಹಿನಿಯವರ ಸರಂಜಾಮು ಸಾಗಣೆಗೆ ಅಡಚಣೆಯಾಗುತ್ತದೆ ಎಂಬುದು ಇನ್ನೊಂದು ಕಾರಣ ಎನ್ನುತ್ತಾರೆ.

ಆದರೆ ಕೆಲವು ಫ್ರ್ಯಾಂಚೈಸಿಗಳ ಮಾಲೀಕರಿಗೆ ಈ ಕಾರಣಗಳ ಬಗ್ಗೆ ಪೂರ್ಣ ಸಹಮತವಿಲ್ಲ. ಬೇರೆ ನಗರಗಳಲ್ಲಿ ಈ ಹಿಂದೆಗಿಂತಲೂ ಈಗ ಸಾರಿಗೆ ಮತ್ತು ಸೌಲಭ್ಯಗಳು ಉತ್ತಮವಾಗಿವೆ. ಆದ್ದರಿಂದ ಪ್ರಸಾರಕ ಸಂಸ್ಥೆಗಳಿಗೆ ಹೇಗೆ ಸಮಸ್ಯೆಯಾಗುತ್ತದೆ ಎಂದು

ಪ್ರಶ್ನಿಸುತ್ತಾರೆ. ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಮತ್ತು ಐಪಿಎಲ್ ಪಂದ್ಯಗಳಿಗೆ ಮಾತ್ರ ಜನರು ಕಿಕ್ಕಿರಿದು ಸೇರುತ್ತಾರೆ. ಉಳಿದ ಪಂದ್ಯಗಳಲ್ಲಿ ಆಸನಗಳು ಖಾಲಿ ಇರುತ್ತವೆ. ಸಣ್ಣ ನಗರಗಳಲ್ಲಿ ಜನರು ಕ್ರೀಡಾಂಗಣಕ್ಕೆ ಬರುತ್ತಾರೆ. ಆಗ ಪಂದ್ಯಗಳಿಗೆ ವೈಭವದ ಕಳೆ ಇರುತ್ತದೆ, ಪ್ರಾಯೋಜಕರಿಗೂ ಹೆಚ್ಚು ಪ್ರಚಾರ ಲಭಿಸುತ್ತದೆ ಎಂದೂ ಫ್ರ್ಯಾಂಚೈಸಿ ಮಾಲೀಕರು ಹೇಳುತ್ತಾರೆ.

ಬರೋಬ್ಬರಿ ಒಂದು ವರ್ಷದ ಹಿಂದೆ ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಮಹಾರಾಜ ಟ್ರೋಫಿ ಟೂರ್ನಿಯ ಉದ್ಘಾಟನೆ ನಡೆದಿತ್ತು. ಇಲ್ಲಿ ನಡೆದಿದ್ದ ಲೀಗ್ ಹಂತದ ಹದಿನೆಂಟು ಪಂದ್ಯಗಳಿಗೂ ಪ್ರೇಕ್ಷಕರು ಕಿಕ್ಕಿರಿದು ಸೇರಿದ್ದರು. ಅದೂ ಟಿಕೆಟ್ ಖರೀದಿಸಿ!

ಅದೇ ಟೂರ್ನಿಯ ಎರಡನೇ ಹಂತದ ಪಂದ್ಯಗಳು ಬೆಂಗಳೂರಿನಲ್ಲಿ ನಡೆದಾಗ ಅಭಿಮಾನಿಗಳ ಸಂಖ್ಯೆ ಅಷ್ಟೇನೂ ಹೆಚ್ಚಿರಲಿಲ್ಲ. ಕೋವಿಡ್‌ ಬಿಕ್ಕಟ್ಟಿಗಿಂತ ಮೊದಲು ನಡೆದಿದ್ದ ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯಗಳು ಮೈಸೂರು, ಹುಬ್ಬಳ್ಳಿಯಲ್ಲಿ ಆಯೋಜನೆಗೊಂಡಾಗ ಟಿ.ವಿ ನೇರಪ್ರಸಾರ ಕೂಡ ಮಾಡಲಾಗಿತ್ತು. ಸ್ಥಳೀಯ ಸಂಸ್ಕೃತಿ, ಆಹಾರ ಮತ್ತು ಜನಜೀವನವನ್ನು ಅಧಿಕೃತ ಪ್ರಸಾರಕರು ಸಾಕ್ಷ್ಯಚಿತ್ರ ಮಾಡಿದ್ದರು. ಮೈಸೂರು ಕುಸ್ತಿ, ಹುಬ್ಬಳ್ಳಿ ಊಟದ ಗಮ್ಮತ್ತುಗಳ ವಿಡಿಯೊಗಳು ಈಗಲೂ ಜನಪ್ರಿಯ.

ಮಹಾರಾಜ ಟ್ರೋಫಿ ಹೋಗಲಿ; ಈಚೆಗೆ ದುಲೀಪ್ ಟ್ರೋಫಿ ಮತ್ತು ಹೋದ ವರ್ಷದ ಋತುವಿನ ರಣಜಿ ಟ್ರೋಫಿ ಪಂದ್ಯಗಳು ಬೆಂಗಳೂರಿನಲ್ಲಿಯೇ ನಡೆದವು. ಅದರಲ್ಲಿ ಬಹುತೇಕ ಪಂದ್ಯಗಳನ್ನು ಟಿ.ವಿಯಲ್ಲಿ ನೇರಪ್ರಸಾರ ಮಾಡಿರಲಿಲ್ಲ. ಅಂತಹ ಪಂದ್ಯಗಳನ್ನೂ ಗ್ರಾಮಾಂತರ ಪ್ರದೇಶಗಳ ಕ್ರೀಡಾಂಗಣಗಳಲ್ಲಿ ನಡೆಸದಿರಲು ಕಾರಣವೇನು?

ಮಾಜಿ ಕ್ರಿಕೆಟಿಗ ಬ್ರಿಜೇಶ್ ಪಟೇಲ್ ಅವರು ಕೆಎಸ್‌ಸಿಎ ಪದಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಬೆಂಗಳೂರು ಹೊರವಲಯದ ಆಲೂರು, ಹುಬ್ಬಳ್ಳಿ, ಮೈಸೂರು, ಬೆಳಗಾವಿ ಮತ್ತು ಶಿವಮೊಗ್ಗ ಕ್ರೀಡಾಂಗಣಗಳ ಅಭಿವೃದ್ಧಿಗೆ ಹೆಚ್ಚು ಶ್ರಮವಹಿಸಿದ್ದರು. ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಅವರ ಅಧಿಕಾರದ ಅವಧಿಯಲ್ಲಿಯೂ ಬೇರೆ ಊರುಗಳಲ್ಲಿ ಮೂಲ ಸೌಲಭ್ಯಗಳ ಅಭಿವೃದ್ಧಿಯನ್ನು ಮುಂದುವರಿಸಿದ್ದರು.

ಇದರಿಂದಾಗಿ ಅಲ್ಲಿಯ ಸ್ಥಳೀಯ ಆಟಗಾರರಿಗೆ ಟರ್ಫ್‌ ಮೈದಾನದಲ್ಲಿ ಆಡುವ ಮತ್ತು ಅಭ್ಯಾಸ ಮಾಡುವ ಅವಕಾಶ ಸಿಕ್ಕಿತ್ತು. ಅಲ್ಲಿ ನಡೆದ ಪ್ರಥಮ ದರ್ಜೆ ಪಂದ್ಯಗಳನ್ನು ನೋಡಿ ಕಲಿಯುವ ಅವಕಾಶವೂ ಇತ್ತು. ಅಲ್ಲದೆ, ಆಯಾ ವಲಯದಲ್ಲಿರುವ ಅಂಪೈರ್, ಸ್ಕೋರರ್ ಮತ್ತು ಕ್ರೀಡಾಂಗಣ ಸಿಬ್ಬಂದಿಗೂ ಕಾರ್ಯನಿರ್ವಹಿಸುವ ಅನುಭವ ಲಭಿಸುತ್ತಿತ್ತು. ದಶಕಗಳ ಹಿಂದೆ ಬೆಂಗಳೂರು ಕೇಂದ್ರಿತವಾಗಿದ್ದ ಕ್ರಿಕೆಟ್‌ನಿಂದಾಗಿ ಉತ್ತರ ಕರ್ನಾಟಕದ ಪ್ರತಿಭೆಗಳು ಗೋವಾ ಮತ್ತಿತರ ತಂಡಗಳತ್ತ ಮುಖ ಮಾಡುತ್ತಿದ್ದವು. ಎರಡನೇ ಹಂತದ ನಗರಗಳಲ್ಲಿ ಸೌಲಭ್ಯ ವೃದ್ಧಿಯಿಂದಾಗಿ ಕೊಂಚ ಪರಿಹಾರ ಸಿಕ್ಕಿತ್ತು. ರೋನಿತ್ ಮೋರೆ, ಶಿಶಿರ್ ಭವಾನೆ, ರೋಹನ್ ಕದಂ, ಪವನ್ ದೇಶಪಾಂಡೆ ಮತ್ತು ವಿದ್ಯಾಧರ್ ಪಾಟೀಲರಂತಹ ಪ್ರತಿಭಾನ್ವಿತರು ಬೆಳಕಿಗೆ ಬಂದರು.

ಹುಬ್ಬಳ್ಳಿಯಲ್ಲಿ 2022ರಲ್ಲಿ ಭಾರತ ಎ ಮತ್ತು ನ್ಯೂಜಿಲೆಂಡ್ ಎ ನಡುವಣ ನಾಲ್ಕು ದಿನಗಳ ಪಂದ್ಯ ನಡೆದಿತ್ತು. ಎಲ್ಲ ದಿನವೂ ಪ್ರೇಕ್ಷಕರ ಗ್ಯಾಲರಿ ಭರ್ತಿಯಾಗಿತ್ತು. ದಶಕದ ಹಿಂದೆ ಮೈಸೂರಿನಲ್ಲಿ ನಡೆದ ಕಲೆ ಪಂದ್ಯಗಳಲ್ಲಿ ವಿವಿಎಸ್ ಲಕ್ಷ್ಮಣ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್ ಮತ್ತು ವೀರೇಂದ್ರ ಸೆಹ್ವಾಗ್ ಆಡಿದ್ದರು. ಶಿವಮೊಗ್ಗದಲ್ಲಿ ನಡೆದ ರಣಜಿ ಪಂದ್ಯದಲ್ಲಿ ಆಡುತ್ತಿದ್ದ ಸಂದರ್ಭದಲ್ಲಿಯೇ ಹೈದರಾಬಾದಿನ ಮೊಹಮ್ಮದ್ ಸಿರಾಜ್ ಅವರಿಗೆ ಭಾರತ ತಂಡದ ಬುಲಾವ್ ಬಂದಿತ್ತು. ಸದ್ಯ ಅವರು ರಾಷ್ಟ್ರೀಯ ತಂಡದ ಪ್ರಮುಖ ಬೌಲರ್ ಆಗಿದ್ದಾರೆ. ಇಂತಹ ಪಂದ್ಯಗಳು ನಡೆದಾಗ ತಾರಾ ವರ್ಚಸ್ಸಿನ ಆಟಗಾರರನ್ನು ಹತ್ತಿರದಿಂದ ನೋಡುವ ಅಭಿಮಾನಿಗಳ ಆಸೆಯೂ ಈಡೇರುತ್ತದೆ.

ಇದನ್ನು ಈಗಲೂ ಶಿವಮೊಗ್ಗದ ಅಭಿಮಾನಿಗಳು ನೆನಪಿಸಿಕೊಂಡು ಪುಳಕಿತರಾಗುತ್ತಾರೆ. ಇದೀಗ ಕಾರವಾರ, ಹಾಸನ, ಕೋಲಾರ, ಮಂಗಳೂರು, ಗದಗ ಮತ್ತು ರಾಯಚೂರು ಸೇರಿದಂತೆ ರಾಜ್ಯದ ಹಲವೆಡೆ ಕ್ರೀಡಾಂಗಣಗಳನ್ನು ಕಟ್ಟಲು ಯೋಜನೆ ರೂಪಿಸಲಾಗಿದೆ.

‘ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕ್ರಿಕೆಟ್ ಆಡುವವರ ಸಂಖ್ಯೆ ಹೆಚ್ಚುತ್ತಿದೆ. ಸೌಲಭ್ಯಗಳನ್ನು ಒದಗಿಸಬೇಕಿದೆ. ಅದಕ್ಕಾಗಿ ಈ ಕ್ರೀಡಾಂಗಣಗಳ ಅವಶ್ಯಕತೆ ಇದೆ. ಬೆಂಗಳೂರಿನ ಹವಾಗುಣ ಮತ್ತು ಸೌಲಭ್ಯಗಳಿಂದಾಗಿ ಎಲ್ಲರಿಗೂ ಇಲ್ಲಿಯ ಕ್ರೀಡಾಂಗಣಗಳು ಬೇಕು. ಇದೀಗ ನೆದರ್ಲೆಂಡ್ಸ್‌ ದೇಶದ ತಂಡ, ಬರೋಡಾ, ಗುಜರಾತ್, ಛತ್ತೀಸಗಢ ಮತ್ತು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆಡುವ ಯುಪಿ ವಾರಿಯರ್ಸ್ ತಂಡಗಳು ನಗರದ

ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿವೆ. ಆದ್ದರಿಂದ ಹೆಚ್ಚು ಸೌಲಭ್ಯಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ’ ಎಂದು ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್ ಹೇಳುತ್ತಾರೆ.

ಇಂಗ್ಲಿಷ್ ಕೌಂಟಿ ತಂಡಗಳೂ ಇಲ್ಲಿಗೆ ಬಂದು ಅಭ್ಯಾಸ ನಡೆಸುವ ಕುರಿತು ಒಲವು ತೋರಿವೆಯಂತೆ. ಬೆಂಗಳೂರಿನ ಕ್ರೀಡಾಂಗಣಗಳು ಇಷ್ಟೊಂದು ಭರ್ತಿಯಾಗಿದ್ದರೂ ದೇಶಿ ಪಂದ್ಯಗಳನ್ನು ಇಲ್ಲಿಯೇ ಆಡಿಸುವುದಕ್ಕಿಂತ ಹೊರಗಿನ ಕ್ರೀಡಾಂಗಣಗಳಲ್ಲಿ ಆಯೋಜಿಸುವುದು ಸೂಕ್ತವಲ್ಲವೇ?

‘ಗ್ರಾಮಾಂತರ ಪ್ರತಿಭೆಗಳಿಗೆ ಅವಕಾಶ ಕೊಡುವುದಕ್ಕೆ ಬದ್ಧ’ ಎಂದು ಹೇಳುವ ಕೆಎಸ್‌ಸಿಎ, ತನ್ನದೇ ಸುಪರ್ದಿಯಲ್ಲಿರುವ ಕ್ರೀಡಾಂಗಣಗಳ ಸೂಕ್ತ ಬಳಕೆಗೂ ಆದ್ಯತೆ ನೀಡಬೇಕಲ್ಲವೇ? ಗ್ರಾಮಾಂತರ ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯದಿದ್ದರೆ ನಿರ್ವಹಣೆ ವೆಚ್ಚದ ಭಾರವೂ ಸಂಸ್ಥೆಯ ಮೇಲೆ ಬೀಳುತ್ತದೆ.

ತಮಿಳುನಾಡಿನಲ್ಲಿ ಆರಂಭವಾಗಲಿರುವ ಬುಚ್ಚಿಬಾಬು ಕ್ರಿಕೆಟ್ ಟೂರ್ನಿಯ ಎಲ್ಲ ಪಂದ್ಯಗಳೂ ರಾಜಧಾನಿ ಚೆನ್ನೈನಿಂದ ಹೊರಗಿನ ಊರುಗಳಲ್ಲಿ ನಡೆಯಲಿವೆ. ಅಲ್ಲಿಯ ಕ್ರಿಕೆಟ್ ಸಂಸ್ಥೆ ಮತ್ತು ಆಟಗಾರರ ತಮಿಳುಪ್ರೇಮ ಬೇರೆಯವರಿಗೂ ಮಾದರಿ.

ಕರ್ನಾಟಕ ತಂಡದ ಮನೀಷ್ ಪಾಂಡೆ, ಮಯಂಕ್ ಅಗರವಾಲ್, ಕರುಣ್ ನಾಯರ್ ಮತ್ತು ದೇವದತ್ತ ಪಡಿಕ್ಕಲ್ ಅವರ ಮನೆಗಳ ಭಾಷೆ ಕನ್ನಡ ಅಲ್ಲ. ಆದರೂ ಅವರೆಲ್ಲರೂ ಕನ್ನಡ ಮಾತನಾಡುತ್ತಾರೆ. ಕೆಲವು ಐಪಿಎಲ್ ಪಂದ್ಯಗಳಲ್ಲಿ ಅವರ ಕನ್ನಡ ಸಂಭಾಷಣೆಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡಿದಾಗ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಸ್ಟಾರ್ ಸ್ಪೋರ್ಟ್ಸ್ ಕನ್ನಡ ಮತ್ತು ಜಿಯೊ ಸಿನಿಮಾ ಆ್ಯಪ್‌ಗಳ ಕನ್ನಡ ಕಾಮೆಂಟ್ರಿಯಲ್ಲಿ ಕೆಲವು ಖ್ಯಾತನಾಮ ಆಟಗಾರರೂ ಮಿಂಚುತ್ತಿದ್ದಾರೆ. ಆದರೂ ಕೆಎಸ್‌ಸಿಎ ಮಾತ್ರ ಕನ್ನಡದ ಬಳಕೆಗೆ ಹಿಂಜರಿಯುವುದು ಯಾಕೋ ಗೊತ್ತಿಲ್ಲ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT