ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮರುನಾಮಕರಣ ಪ್ರಹಸನಕ್ಕೂ ಇದೆಯೇ ಅಸಮಾನತೆಯ ಸೋಂಕು?

ಸ್ಥಳ, ಸಂಸ್ಥೆ, ಪ್ರಶಸ್ತಿಗಳ ಹೆಸರು ಬದಲಾವಣೆ ಸರಿಯೇ?
Published : 13 ಆಗಸ್ಟ್ 2021, 19:31 IST
ಫಾಲೋ ಮಾಡಿ
Comments

‘ಹೆಸರಲ್ಲೇನಿದೆ?’– ಎಲಿಜಬೆತ್‌ ಯುಗದ ಶ್ರೇಷ್ಠ ನಾಟಕಕಾರ ವಿಲಿಯಂ ಶೇಕ್ಸ್‌ಪಿಯರ್‌ ಕೇಳಿದ್ದ ಅತ್ಯಂತ ಪ್ರಸಿದ್ಧ ಪ್ರಶ್ನೆ ಇದು.ಹೆಸರಲ್ಲಿ ಏನೂ ಇಲ್ಲ, ಇರುವುದೆಲ್ಲವೂ ಸತ್ವದಲ್ಲಿ ಎಂಬುದನ್ನು ಸೂಚಿಸುವುದು ಈ ಪ್ರಶ್ನೆಯ ಉದ್ದೇಶವಾಗಿತ್ತು. ಹಾಗಿದ್ದರೂ ಸಾಮಾಜಿಕ ಮತ್ತು ರಾಜಕೀಯ ಅಸ್ಮಿತೆಯ ಪ್ರಬಲ ಪ್ರತಿಪಾದನೆಗಾಗಿ ನಾಮಕರಣ ಮತ್ತು ಮರುನಾಮಕರಣವನ್ನು ನಾವು ನೋಡುತ್ತಿದ್ಧೇವೆ. ಪ್ರಜಾಸತ್ತಾತ್ಮಕ ಆಗಿರಲಿ ನಿರಂಕುಶವಾಗಿರಲಿ, ಸರ್ಕಾರಗಳು ಬರುತ್ತವೆ– ಹೋಗುತ್ತವೆ. ಅದರಂತೆಯೇ, ಸಾರ್ವಜನಿಕ ಸ್ಥಳಗಳು, ಸಂಕೇತಗಳು, ಪ್ರತಿಮೆಗಳು ಮತ್ತು ಸಂಸ್ಥೆಗಳಿಗೆ ಹೆಸರು ಇರಿಸುವುದು ಅಥವಾ ಹೆಸರು ಬದಲಿಸುವುದು ನಡೆಯುತ್ತಲೇ ಇರುತ್ತದೆ. ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿಯ ಹೆಸರನ್ನು ಧ್ಯಾನ್‌ ಚಂದ್‌ ಖೇಲ್‌ ರತ್ನ ಪ್ರಶಸ್ತಿ ಎಂದು ಬದಲಾಯಿಸಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಚರ್ಚೆಯಿಂದಾಗಿ, ಇತ್ತೀಚೆಗೆ ಎರಡು ಕ್ರೀಡಾಂಗಣಗಳ ಹೆಸರು ಬದಲಾವಣೆಯತ್ತ ವಿಮರ್ಶಕರು ಬೊಟ್ಟು ಮಾಡಿದ್ದಾರೆ. ಅಹಮದಾಬಾದ್‌ನ ಸರ್ದಾರ್‌ ವಲ್ಲಭಭಾಯ್ ಪಟೇಲ್‌ ಕ್ರೀಡಾಂಗಣದ ಹೆಸರನ್ನು ನರೇಂದ್ರ ಮೋದಿ ಕ್ರೀಡಾಂಗಣ ಎಂದು ಈ ವರ್ಷವಷ್ಟೇ ಬದಲಾಯಿಸಲಾಗಿದೆ. ಅದಕ್ಕೂ ಮೊದಲು, ದೆಹಲಿಯ ಫಿರೋಜ್‌ ಶಾ ಕೋಟ್ಲಾ ಕ್ರೀಡಾಂಗಣದ ಹೆಸರನ್ನು ಅರುಣ್‌ ಜೇಟ್ಲಿ ಕ್ರೀಡಾಂಗಣ ಎಂದು ಬದಲಿಸಲಾಗಿತ್ತು!

ಇದಕ್ಕೂ ಮೊದಲು, ಜನಸಂಘದ ಸ್ಥಾಪಕ ದೀನದಯಾಳ್‌ ಉಪಾಧ್ಯಾಯ ಅವರ ಹೆಸರು ಈಗಿನ ಸರ್ಕಾರಕ್ಕೆ ಅತ್ಯಂತ ಅಚ್ಚುಮೆಚ್ಚಾಗಿತ್ತು. ಜನಸಂಘದ ಸಹ ಸಂಸ್ಥಾಪಕರ ಹೆಸರಿನಲ್ಲಿ ಎರಡು ನಿಲ್ದಾಣಗಳಿವೆ– ಅವುಗಳಲ್ಲಿ ಒಂದು ಮಥುರಾದಲ್ಲಿದ್ದರೆ ಇನ್ನೊಂದು ವಾರಾಣಸಿಯ ಹೊರಭಾಗದಲ್ಲಿದೆ. ಈ ಹೆಸರು ಬದಲಾಯಿಸುವಿಕೆಗೆ ಮೊದಲು ಮಥುರಾ ನಿಲ್ದಾಣದ ಹೆಸರು ಫರಾ ಪಟ್ಟಣ ಎಂದೂ ಇನ್ನೊಂದರದ್ದು ಮೊಘಲ್‌ಸರಾಯ್‌ ಎಂದು ಇತ್ತು. ಮುಸ್ಲಿಮರಿಗೆ ಸಂಬಂಧಿಸಿದ ಎಲ್ಲವನ್ನೂ ದ್ವೇಷಿಸುವ ಈಗಿನ ಬಲಪಂಥೀಯ ಮತ್ತು ಜನಾಂಗ ಶ್ರೇಷ್ಠತೆಯ ವ್ಯಸನದ ಸರ್ಕಾರವು ಈ ಹೆಸರು ಬದಲಾವಣೆ ಮಾಡಿದೆ.

ಗುಡಗಾಂವ್‌ ಹೆಸರನ್ನು ಗುರುಗ್ರಾಮ (ದ್ರೋಣಾಚಾರ್ಯರ ನೆನಪಿಗೆ) ಎಂದು ಬದಲಾಯಿಸಿರುವುದು ಈ ದೇಶದ ಆದಿವಾಸಿಗಳು, ದಲಿತರು ಮತ್ತು ಶೋಷಿತರಿಗೆ ಜಾತಿವಾದದ ಸ್ಪಷ್ಟ ಸಂದೇಶವನ್ನು ಕಳುಹಿಸಿದೆ. ಬಿಲ್ವಿದ್ಯೆಯಲ್ಲಿ ಅತ್ಯಂತ ಕುಶಲಿಯಾಗಿದ್ದ ಏಕಲವ್ಯ ಎಂಬ ‘ಶಿಷ್ಯ’ನ ಹೆಬ್ಬೆರಳನ್ನು ದ್ರೋಣಾಚಾರ್ಯ ಗುರುದಕ್ಷಿಣೆಯಾಗಿ ಪಡೆದು ಆತನನ್ನು ಅಂಗವಿಕಲನನ್ನಾಗಿ ಮಾಡುತ್ತಾರೆ. ಮೇಲ್ಜಾತಿಗೆ ಸೇರಿದ ಅರ್ಜುನನನ್ನು ಅತ್ಯುತ್ತಮ ಬಿಲ್ಲುಗಾರ ಎಂದು ಘೋಷಿಸುವುದು ಇದರ ಉದ್ದೇಶವಾಗಿತ್ತು. ತಳವರ್ಗಗಳ ಆಕ್ರೋಶ ಮತ್ತು ಅಸ್ಮಿತೆಯ ಹರಳುಗಟ್ಟುವಿಕೆಯ ಹಿಂದೆ ಇಂತಹುದೇ ಅಂಶಗಳಿವೆ.ವಿಶೇಷವಾಗಿ, ಪ್ರಾದೇಶಿಕ, ಭಾಷಿಕ ಮತ್ತು ಇತರ ವೈವಿಧ್ಯಗಳನ್ನು ಇರಿಸಿಕೊಂಡು ಯೋಚಿಸುವುದಾದರೆ, ಹೆಸರಿಸುವ ಮತ್ತು ಹೆಸರು ಬದಲಿಸುವ ರಾಜಕಾರಣದ ಹಿಂದೆ ಇರುವ ರಾಜಕಾರಣದ ಬಗ್ಗೆ ಸ್ವತಂತ್ರ ಭಾರತವು ಬಹಳಷ್ಟು ಚಿಂತನೆ ನಡೆಸಬೇಕಿದೆ.

ಒಂದು ಹೆಸರು ಏನನ್ನು ಧ್ವನಿಸುತ್ತದೆ? ಹೆಮ್ಮೆ? ನೋವಿನ ನೆನಪುಗಳು? ಅನ್ಯಾಯ? ಸಂಕುಚಿತ ಮತ್ತು ಜನಾಂಗೀಯ ಶ್ರೇಷ್ಠತೆಯ ಹಿಂದುತ್ವ ದೃಷ್ಟಿಕೋನದ ಉತ್ತರವು ಒಂದು ಬಣ್ಣವನ್ನಷ್ಟೇ ಹೊಂದಿರಲು ಸಾಧ್ಯ. ಆದರೆ, ಒಟ್ಟು ಚಿತ್ರಣವು ಸಂಕೀರ್ಣವಾಗಿದೆ; ಹೆಸರು ಬದಲಿಸುವಿಕೆಯ ಇಡೀ ವ್ಯವಹಾರದಲ್ಲಿ ಭಾರತದ ‘ಕುಲೀನ’ ರಾಜಕಾರಣಿಗಳ ಪ್ರಾಬಲ್ಯವನ್ನು ಗಮನಿಸಿದರೆ, ಈ ವಿಚಾರದಲ್ಲಿ ಹೆಚ್ಚು ವ್ಯಾಪಕವಾದ ಪರಿಗಣನೆಯ ಅಗತ್ಯ ಇದೆ.

ತ್ರಿಪುರಾದಲ್ಲಿ ಇದ್ದ ವ್ಲಾಡಿಮಿರ್‌ ಲೆನಿನ್‌ ಅವರ ಪ್ರತಿಮೆಯನ್ನು ಕಡುಬಲಪಂಥೀಯ ಪಕ್ಷವೊಂದು 2018ರ ಮಾರ್ಚ್‌ನಲ್ಲಿ ಅಧಿಕಾರಕ್ಕೆ ಬಂದ ಬಳಿಕ ಕೆಡವಿದ್ದನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ, ಅಸಮಾನತೆಯ ಧರ್ಮಗ್ರಂಥವೇ ಆಗಿರುವ ಮನುಸ್ಮೃತಿಯನ್ನು ಕೈಯಲ್ಲಿ ಹಿಡಿದುಕೊಂಡಿರುವ ಮನುವಿನ ಪ್ರತಿಮೆಯನ್ನು ತನ್ನ ಆವರಣದಲ್ಲಿಯೇ ಸ್ಥಾಪಿಸಲು ಅವಕಾಶ ಕೊಟ್ಟ ರಾಜಸ್ಥಾನ ಹೈಕೋರ್ಟ್‌ನ ನಿಲುವು ಮಾತ್ರ ಗ್ರಹಿಕೆಗೇ ನಿಲುಕುವುದಿಲ್ಲ. ಜಾತಿ ಮತ್ತು ಲಿಂಗ ಬಹಿಷ್ಕಾರ, ಕ್ರೌರ್ಯ ಮತ್ತು ಅಸಮಾನತೆಗೆ ಮಾನ್ಯತೆ ಕೊಟ್ಟ ‘ಕಾನೂನು’ಗಳ ಸಂಗ್ರಹವಾದ ಮನುಸ್ಮೃತಿಯನ್ನು ಡಾ. ಅಂಬೇಡ್ಕರ್‌ ಅವರು 1927ರ ಡಿಸೆಂಬರ್‌ 25ರಂದು ಸುಟ್ಟು ಹಾಕಿದ್ದರು. (ಬಿಜೆಪಿ–ಜೆಡಿ ಮೈತ್ರಿಕೂಟವು ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ವರ್ಷವೇ ಹೈಕೋರ್ಟ್‌ ಮುಂದೆ ಪ್ರತಿಮೆ ಸ್ಥಾಪನೆ ಆಗಿತ್ತು. ಹೈಕೋರ್ಟ್‌ ನ್ಯಾಯಮೂರ್ತಿಯೊಬ್ಬರು ಸಂವಿಧಾನವನ್ನೇ ಅಣಕಿಸಿ, ಪ್ರತಿಮೆ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟದ್ದೇ ಭಾರತದ ನ್ಯಾಯಾಂಗ ವ್ಯವಸ್ಥೆಯೊಳಗೆ ಇರುವ ಸಾಂವಿಧಾನಿಕತೆಯ ಸಂಸ್ಕೃತಿ ಎಂಥಹುದು ಎಂಬುದನ್ನು ತೋರಿಸಿಕೊಡುತ್ತದೆ).

2014ರ ನಂತರದ ಹೆಸರು ಬದಲಿಸುವಿಕೆಯ ಅತ್ಯುತ್ಸಾಹದ ಹಿಂದೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ (ಐಎನ್‌ಸಿ) ಕೆಲವು ನಾಯಕರು ಅದರಲ್ಲೂ ವಿಶೇಷವಾಗಿ ನೆಹರೂ–ಗಾಂಧಿ ಕುಟುಂಬದ ಸದಸ್ಯರ ಗಣನೀಯ ಅಸ್ತಿತ್ವವನ್ನು ವಿಸ್ಮೃತಿಗೆ ಕಳುಹಿಸುವ ಉದ್ದೇಶವಿದೆ. ಭಾರತದ ಸಾರ್ವಜನಿಕ ಸ್ಥಳಗಳು ಮತ್ತು ಜೀವನದಲ್ಲಿ ಇವರ ಉಪಸ್ಥಿತಿಯು ಅತಿಯಾಗಿದೆ ಎಂದೂ ಕೆಲವರು ಹೇಳುತ್ತಿದ್ದಾರೆ. ಇತಹಾಸ ಮತ್ತು ಸ್ಮರಣೆಯಲ್ಲಿ ಪ್ರಜಾಸತ್ತಾತ್ಮಕವಾದ ಪಾಲು ಮತ್ತು ಅವಕಾಶದ ಬಗ್ಗೆ ಕಾಳಜಿ ಹೊಂದಿರುವವರಿಗೆ ಇತರ ಪ್ರಶ್ನೆಗಳೂ ಪ್ರಸ್ತುತ ಅನಿಸುತ್ತವೆ.

ವಿಚಾರವಾದ, ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಇನ್ನಷ್ಟು ಗಟ್ಟಿಗೊಳಿಸಲು ಹೋರಾಡಿದ ಎಲ್ಲ ವರ್ಗಗಳಿಗೆ ಸೇರಿದ ಎಲ್ಲ ನಾಯಕಿಯರು ಮತ್ತು ನಾಯಕರನ್ನು ಗುರುತಿಸುವ ಕೆಲಸವನ್ನು ಭಾರತವು ನಿಜವಾಗಿಯೂ ಮಾಡುತ್ತಿದೆಯೇ? ನಮ್ಮ ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳು, ರಸ್ತೆಗಳು, ಉದ್ಯಾನಗಳು ಹಾಗೂವಸ್ತುಸಂಗ್ರಹಾಲಯಗಳ ಹೆಸರುಗಳು ಈ ವಾಸ್ತವವನ್ನು ಗುರುತಿಸುವಂತೆ ಇವೆಯೇ? ಅಥವಾ, ಭಾರತದ ಸಾರ್ವಜನಿಕ ಮತ್ತು ರಾಜಕೀಯ ಜೀವನವು ನಿರಾಕರಣೆ ಮತ್ತು ಅಸಮಾನತೆಯ ಸೋಂಕಿನಲ್ಲಿಯೇ ಇದೆಯೇ?

ಎರಡು ಉದಾಹರಣೆಗಳನ್ನು ಕೊಡುತ್ತೇನೆ– ಮಹಿಳೆಯರು ಶಿಕ್ಷಣ ಪಡೆಯುವುದಕ್ಕಾಗಿ ಹೋರಾಡಿದ ಸಾವಿತ್ರಿಬಾಯಿ ಫುಲೆ ಮತ್ತು ಅವರ ಸಹವರ್ತಿ ಫಾತಿಮಾ ಶೇಖ್‌ ಅವರ ಹೆಸರನ್ನು ಮಹಿಳೆಯರ ಶಿಕ್ಷಣ ಸಂಸ್ಥೆಗಳಿಗೆ ಇರಿಸಲಾಗಿದೆಯೇ? ದ್ರಾವಿಡ ರಾಜ್ಯ ತಮಿಳುನಾಡಿನ ಹಾಗೆಯೇ ಪಶ್ಚಿಮ ಬಂಗಾಳ ಮತ್ತು ಬಿಹಾರವು ಸ್ವಲ್ಪಮಟ್ಟಿಗೆ ಪ್ರಜಾಸತ್ತಾತ್ಮಕವಾದ ತುಡಿತವನ್ನು ತೋರಿವೆ. ಭಾಗಲ್ಪುರ ವಿಶ್ವವಿದ್ಯಾಲಯದ ಹೆಸರನ್ನು ತಿಲಕಾ ಮಾಂಝಿ ಭಾಗಲ್ಪುರ ವಿಶ್ವವಿದ್ಯಾಲಯ ಎಂದು1991ರಲ್ಲಿ ಮರುನಾಮಕರಣ ಮಾಡಲಾಯಿತು. ಬ್ರಿಟಿಷರ ವಿರುದ್ಧ ನಡೆದ ಸಂಥಾಲ ಪರಗಣ ಆದಿವಾಸಿ ಬಂಡಾಯದ ನಾಯಕನಾಗಿದ್ದ ತಿಲಕಾ ಮಾಂಝಿಯ ಪ್ರತಿರೋಧವು ಬ್ರಿಟಿಷರನ್ನು ಎಷ್ಟು ಬೆದರಿಸಿತ್ತೆಂದರೆ, ಆತನನ್ನು ಸೆರೆ ಹಿಡಿದು ಭಾಗಲ್ಪುರದಲ್ಲಿ ಮಾವಿನ ಮರಕ್ಕೆ ನೇತು ಹಾಕುತ್ತಾರೆ.ಹಾಗೆಯೇ, ಈಸ್ಟ್‌ ಇಂಡಿಯಾ ಕಂಪನಿಯ ವಿರುದ್ಧ ಜಮೀನ್ದಾರರು ಮತ್ತು ರೈತರ ಹೋರಾಟವನ್ನು ಸಂಘಟಿಸಿದ್ದ ತಿತುಮೀರ್ (ಸಯ್ಯದ್‌ ಮೀರ್‌ ನಿಸಾರ್‌ ಅಲಿ), ಪಶ್ಚಿಮ ಬಂಗಾಳದ 24 ಪರಗಣ, ಫರೀದ್‌ಪುರ, ನಾದಿಯಾ ಮತ್ತು ಇತರ ಪ್ರದೇಶಗಳನ್ನು ಸ್ವತಂತ್ರ ಎಂದು ಘೋಷಿಸಿದ್ದರು. ನಂತರ, ದಮನ ನಡೆಯಿತು. ಇಂದಿಗೂ ಪೂರ್ವ ಮತ್ತು ಪಶ್ಚಿಮ ಬಂಗಾಳಗಳೆರಡರಲ್ಲಿಯೂ ಮೀರ್‌ ಸ್ವಾತಂತ್ರ್ಯದ ಸಂಕೇತವಾಗಿ ಉಳಿದಿದ್ದಾರೆ. ಢಾಕಾದಲ್ಲಿ ಅವರ ಹೆಸರಿನಲ್ಲಿ ಒಂದು ವಿಶ್ವವಿದ್ಯಾಲಯವೂ ಸ್ಥಾಪನೆಯಾಗಿದೆ.

ಜನಜೀವನದ ಮೇಲೆ ಗಾಢ ಪರಿಣಾಮ ಬೀರಿದ ವ್ಯಕ್ತಿಗಳ ಮೂಲಕ ಹೆಸರುಗಳು ಮತ್ತು ಸ್ಥಳಗಳು ಗುರುತಿಸಿಕೊಳ್ಳುತ್ತವೆ. ಒಬ್ಬ ವ್ಯಕ್ತಿಯಿಂದ ಎಷ್ಟು ಜನರ ಮೇಲೆ ಯಾವ ಮಟ್ಟದ ಪರಿಣಾಮ ಉಂಟಾಯಿತು ಮತ್ತು ಈ ದೇಶದ ವಿಭಜಿತ ಜನ ಸಮದಾಯಗಳಲ್ಲಿ ಯಾವುದರ ಮೇಲೆ ಹೆಚ್ಚು ಪ್ರಭಾವ ಆಗಿದೆ ಎಂಬುದನ್ನು ಗುರುತಿಸುವವರು ಯಾರು?

ಲೇಖಕಿ: ನಾಗರಿಕ ಹಕ್ಕುಗಳ ಪರ ಹೋರಾಟಗಾರ್ತಿ, ವಕೀಲೆ ಮತ್ತು ಸಿಟಿಜನ್ಸ್‌ ಫಾರ್‌ ಜಸ್ಟಿಸ್‌ ಅಂಡ್ ಪೀಸ್‌ನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT