ಅಂತೂ ರಾಜ್ಯ ಸರ್ಕಾರ ಎಚ್ಚತ್ತಿದೆ. ಸುಪ್ರೀಂ ಕೋರ್ಟ್ ಆದೇಶ ಚುರುಕು ಮುಟ್ಟಿಸಿದೆ. ಹೊರಗುತ್ತಿಗೆ ನೌಕರರ ಬಹುದಿನಗಳ ಆಕ್ರಂದನಕ್ಕೆ ಪರಿಹಾರ ಸಿಗುವ ನಿರೀಕ್ಷೆ ಮೂಡಿದೆ. ಬೆಳಗಾವಿ ಅಧಿವೇಶನದಲ್ಲಿ ಈ ಸಂಬಂಧ ಮಸೂದೆ ಮಂಡಿಸಲು ಸರ್ಕಾರ ಮುಂದಾಗಿದೆ.

ಅಷ್ಟಕ್ಕೂ ಈ ಹೊರಗುತ್ತಿಗೆ ನೌಕರರು ಯಾರು? ಪೌರಾಣಿಕ ಭಾಷೆಯಲ್ಲಿ ಉತ್ತರಿಸುವುದಾದರೆ ಇವರು– ವಿಶ್ವಾಮಿತ್ರ–ಮೇನಕೆ ಸಂತಾನದವರು! ತಪೋನಿರತ ವಿಶ್ವಾಮಿತ್ರನ ಮುಂದೆ ಸುರಾಂಗನೆ ಮೇನಕೆ ಸುಳಿದಳು. ವಿಶ್ವಾಮಿತ್ರನಿಗೆ ಲಾಲಸೆಯಾಯಿತು. ‘ಸಂಗ’ ನಡೆದು, ಪ್ರಮಾದವಾಗಿಬಿಟ್ಟಿತು. ಪರಿತ್ಯಕ್ತಳಾದ ಮೇನಕೆ ಇಂದ್ರಲೋಕಕ್ಕೆ ಹಿಂತಿರುಗಿದಳು. ವಿಶ್ವಾಮಿತ್ರ ಮತ್ತೆ ತಪಸ್ಸಿಗೆ ಕುಳಿತ. ಇಬ್ಬರಿಗೂ ಬೇಡವಾದ ಮಗು ಬೀದಿಗೆ ಬಿದ್ದಿತು. ಮಗುವಿನ ಪುಣ್ಯ. ಕಣ್ವ ಮಹರ್ಷಿಗಳ ಕಣ್ಣಿಗೆ ಬಿದ್ದ ಆ ಮಗು, ಅವರ ಆಶ್ರಮದ ಆಶ್ರಯದಲ್ಲಿ ಬೆಳೆದು ಮುಂದೆ ಶಕುಂತಲೆಯಾದುದು ಪುರಾಣದ ಕಥೆ.

ಇಲ್ಲಿ ಆಗಿರುವುದೂ ಹೀಗೆಯೇ. ದುಡ್ಡಿಲ್ಲದ ಬೊಕ್ಕಸದ ಮುಂದೆ ಕುಳಿತ ಸರ್ಕಾರಗಳು ಖಾಲಿ ಹುದ್ದೆಗಳನ್ನು ತುಂಬಲಾಗಲಿಲ್ಲ. ಆದರೆ, ಸರ್ಕಾರದ ದೈನಂದಿನ ಕೆಲಸಗಳು ಸಾಗಬೇಕಲ್ಲ? ‘ದುಡ್ಡೂ ಹೆಚ್ಚು ಖರ್ಚಾಗಬಾರದು. ಕೆಲಸಗಳೂ ನಿಲ್ಲಬಾರದು’ ಎಂದು ಚಿಂತಿಸುತ್ತಿದ್ದ ಸರ್ಕಾರದ ಮುಂದೆ ಸುಳಿದವರು ಖಾಸಗಿ ಏಜೆನ್ಸಿಗಳು. ‘ಅಗ್ಗದ ದರಕ್ಕೆ ಚಾಕರಿ ಮಾಡಲು ತಯಾರಿರುವ ನಿರುದ್ಯೋಗಿಗಳನ್ನು ಒದಗಿಸುತ್ತೇವೆ. ನಮಗಿಷ್ಟು ಸೇವಾ ಶುಲ್ಕ ಕೊಡಿ’ ಎಂದರು. ಹೀಗೆ ಏರ್ಪಟ್ಟ ಸರ್ಕಾರ ಮತ್ತು ಏಜೆನ್ಸಿಗಳ ‘ಸಂಗ’ದ ಫಲವಾಗಿ ಹುಟ್ಟಿಕೊಂಡವರೇ ಹೊರಗುತ್ತಿಗೆ ನೌಕರರು. ಇವರಿಗೆ ವಿಶ್ವಾಮಿತ್ರನೂ ಇಲ್ಲ. ಮೇನಕೆಯೂ ಇಲ್ಲ. ಹೀಗೆ ಬೀದಿಗೆ ಬಿದ್ದ ಹೊರಗುತ್ತಿಗೆ ನೌಕರರೆಂಬ ‘ಅನಾಥ’ರಿಗೆ ಕಣ್ವನಾಗಿ ಬಂದದ್ದು ಸುಪ್ರೀಂ ಕೋರ್ಟ್.

ಕಳೆದ ಒಂದು ವರ್ಷದಿಂದ ಈಚೆಗೆ ಸತತವಾಗಿ ನಾಲ್ಕು ಮಹತ್ವದ ಆದೇಶಗಳನ್ನು ಸುಪ್ರೀಂ ಕೋರ್ಟ್ ನೀಡಿದೆ. ಸರ್ಕಾರಗಳಿಗೆ ಸಾಂವಿಧಾನಿಕ ಜವಾಬ್ದಾರಿಯನ್ನು ಜ್ಞಾಪಿಸಿದೆ. ನೈತಿಕ ಪಾಠ ಹೇಳಿದೆ. ‘ಕಾಲಮಿತಿಯಲ್ಲಿ ವಿಳಂಬ ಮಾಡದೆ ನ್ಯಾಯ ಒದಗಿಸಿ’ ಎಂದು ನಿಷ್ಠುರವಾಗಿ ಹೇಳಿದೆ. ಅದರ ಪರಿಣಾಮವೇ ಈಗ ನಮ್ಮ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲು ಹೊರಟಿರುವ ಮಸೂದೆ.

ಸುಪ್ರೀಂ ಕೋರ್ಟ್ನ ಆ ನಾಲ್ಕು ಆದೇಶಗಳ ಪ್ರಕರಣಗಳು ಹೀಗಿವೆ: 2004ರ
ನ. 29ರಂದು ನೀಡಿದ ಆದೇಶ. ಸಿವಿಲ್ ಅಪೀಲ್ ನಂ. 10800/2024 (ಹರಿಯಾಣ ಕೃಷಿ ವಿಶ್ವವಿದ್ಯಾನಿಲಯ ವರ್ಸಸ್ ಕೇಂದ್ರ ಸರ್ಕಾರ); 2024ರ ಡಿ. 20ರಂದು ನೀಡಿದ ಆದೇಶ. ಎಸ್ಎಲ್ಪಿ (ಸಿ) ನಂ. 5580/2024 (ಜಗ್ಗೂ ವರ್ಸಸ್ ಕೇಂದ್ರ ಸರ್ಕಾರ ಹಾಗೂ ಅನಿತಾ ವರ್ಸಸ್ ಕೇಂದ್ರ ಸರ್ಕಾರ); 2025ರ ಜ. 31ರಂದು ನೀಡಿದ ಆದೇಶ. ಸಿವಿಲ್ ಅಪೀಲ್ ನಂ. 8157/2024 (ಶ್ರೀಪಾಲ್ ವರ್ಸಸ್ ಗಾಜಿಯಾಬಾದ್ ನಗರ ನಿಗಮ); 2025ರ ಆ. 19ರಂದು ನೀಡಿದ ಆದೇಶ. ಸಿವಿಲ್ ಅಪೀಲ್ ನಂ. 8558 /2018 (ಧರಮ್ ಸಿಂಗ್ ವರ್ಸಸ್ ಉ.ಪ್ರ. ಸರ್ಕಾರ).

ಮೇಲ್ಕಂಡ ಆದೇಶಗಳಲ್ಲಿ ಕೋರ್ಟ್ ತಳೆದಿರುವ ನಿಲುವು, ಸರ್ಕಾರಗಳಿಗೆ ನೀಡಿರುವ ನಿರ್ದೇಶನ, ಬಳಸಿರುವ ಕಠಿಣ ಭಾಷೆ, ಬೀಸಿರುವ ಚಾಟಿ,– ಇವುಗಳ ಒಟ್ಟು ಸಾರಾಂಶ ಹೀಗಿದೆ:

ದೀರ್ಘಕಾಲ ರೆಗ್ಯುಲರ್ ನೌಕರರಂತೆಯೇ ಕೆಲಸ ಮಾಡುತ್ತಾ ಬಂದಿರುವ ನೌಕರರನ್ನು ‘ಉಮಾದೇವಿ ಪ್ರಕರಣ’ ಎಂಬ ಕಾರಣ ನೀಡಿ ಕಾಯಂ ಮಾಡಲಾಗದು ಎಂದು ಹೇಳುವ ಕಾರ್ಯಾಂಗದ ಮುಖ್ಯಸ್ಥರ ಮತ್ತು ಅಧಿಕಾರಿಗಳ ಧೋರಣೆಯ ಬಗ್ಗೆ ಕೋರ್ಟ್ ಹೀಗೆ ಅಭಿಪ್ರಾಯಪಟ್ಟಿದೆ: ‘ದೀರ್ಘಕಾಲ ನೌಕರರ ನ್ಯಾಯಯುತ ಬೇಡಿಕೆಗಳನ್ನು ತಿರಸ್ಕರಿಸಲು ಉಮಾದೇವಿ ಪ್ರಕರಣದ ತತ್ತ್ವ ಮತ್ತು ತಾತ್ಪರ್ಯವನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ, ಇಲ್ಲವೇ ತಪ್ಪಾಗಿ ಅನ್ವಯಿಸಲಾಗುತ್ತಿದೆ’ ಎಂದು ವಿಷಾದಿಸಿರುವ ಕೋರ್ಟ್, ‘ಹಂಗಾಮಿ/ ಹೊರಗುತ್ತಿಗೆ ನೇಮಕ ಕ್ರಮಬದ್ಧ ಅಲ್ಲವೇ ಹೊರತು ಕಾನೂನುಬಾಹಿರ ಅಲ್ಲ. ಆದುದರಿಂದ ಅವರು ರೆಗ್ಯುಲರೈಸೇಷನ್ಗೆ ಅರ್ಹರು’ ಎಂದು ಹೇಳಿದೆ.

‘ಹಂಗಾಮಿ’ ಅಥವಾ ‘ಹೊರಗುತ್ತಿಗೆ’ ಲೇಬಲ್ ಹಚ್ಚುವುದನ್ನು ಕಟುವಾಗಿ ಆಕ್ಷೇಪಿಸಿರುವ ಕೋರ್ಟ್, ‘ಅಗತ್ಯವೂ ನಿರಂತರವೂ ಮತ್ತು ಸರ್ಕಾರಿ ಇಲಾಖೆಯೊಂದರ ಕಾರ್ಯ ನಿರ್ವಹಣೆಗೆ ಅನಿವಾರ್ಯವೂ ಆದ ಕೆಲಸಗಳಿಗೆ ಬಳಸಿಕೊಳ್ಳಲಾಗಿರುವ ನೌಕರರನ್ನು ‘ಹಂಗಾಮಿ’, ‘ಹೊರಗುತ್ತಿಗೆ’, ‘ದಿನಗೂಲಿ’ ಮುಂತಾದ ಲೇಬಲ್ಗಳಿಂದ ಗುರುತಿಸಲಾಗುತ್ತಿದೆ. ಹಾಗೆ ನೋಡಿದರೆ ಈ ನೌಕರರು ರೆಗ್ಯುಲರ್ ನೌಕರರ ಕೆಲಸವನ್ನೇ ಮಾಡುತ್ತಿದ್ದಾರೆ. ಪಕ್ಷಪಾತ ಧೋರಣೆ ಯಿಂದಾಗಿ ಈ ನೌಕರರು ರೆಗ್ಯುಲರ್ ನೌಕರರಿಗೆ ಸಿಗುವ ಘನತೆ, ಭದ್ರತೆ ಮತ್ತು ಸರ್ಕಾರಿ ಸವಲತ್ತುಗಳಿಂದ ವಂಚಿತರಾಗಿದ್ದಾರೆ’ ಎಂದು ಸ್ಪಷ್ಟವಾಗಿ ಹೇಳಿದೆ.

‘ಹೊರಗುತ್ತಿಗೆ’ ಎಂಬುದನ್ನು ಸರ್ಕಾರಗಳು ಬಳಸಿಕೊಳ್ಳುತ್ತಿರುವ ರೀತಿಯ ಬಗೆಗಂತೂ ನ್ಯಾಯಾಲಯ ಕಠಿಣ ಶಬ್ದಗಳಲ್ಲಿ ಹೀಗೆಂದಿದೆ. ‘ಹೊರಗುತ್ತಿಗೆ ಎಂಬುದು ಸರ್ಕಾರಗಳಿಗೆ ಒಂದು ಗುರಾಣಿ. ಸರ್ಕಾರಗಳು ಹೊರಗುತ್ತಿಗೆ ಪದ್ಧತಿಯನ್ನು ದಿನೇ ದಿನೇ ಹೆಚ್ಚಿಸುತ್ತಲೇ ಇವೆ. ಶೋಷಣೆಗೆ ಒಳಗಾದ ನೌಕರರ ಒಂದು ತಂಡವನ್ನು ಬದಲಾಯಿಸಿ ಮತ್ತೊಂದು ತಂಡವನ್ನು ನೇಮಿಸಿಕೊಳ್ಳುವ ಪದ್ಧತಿ ಮುಂದುವರಿದಿದೆ. ಈ ವ್ಯವಸ್ಥೆಯಿಂದ ಹೊರಗುತ್ತಿಗೆ ಕಾರ್ಮಿಕರ ಶೋಷಣೆ ಮುಂದುವರಿಯುವುದಲ್ಲದೆ, ಕಾಯಂ ಉದ್ಯೋಗ ನೀಡುವ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರಗಳು ಅನುಸರಿಸುತ್ತಿರುವ ‘ಬೈಪಾಸ್’ ಇದಾಗಿದೆ’.

ಬೊಕ್ಕಸದಲ್ಲಿ ಹಣವಿಲ್ಲ ಎಂಬ ಕಾರಣಕ್ಕೆ ಹಂಗಾಮಿ/ ಹೊರಗುತ್ತಿಗೆ ಕಾರ್ಮಿಕರಿಗೆ ನ್ಯಾಯ ಒದಗಿಸಲು ಮೀನಾಮೇಷ ಎಣಿಸುತ್ತಿರುವ ಸರ್ಕಾರಗಳಿಗೆ ಕೋರ್ಟ್ ಹೀಗೆ ಹೇಳಿದೆ: ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬರೀ ಮಾರುಕಟ್ಟೆ ಭಾಗೀದಾರರಲ್ಲ. ಅವರು ಸಂವಿಧಾನದ ಮಾಲೀಕರು. ಹಾಗಾಗಿ, ಅತ್ಯಂತ ಅಗತ್ಯ ಮತ್ತು ಅನಿವಾರ್ಯವಾದ ಸರ್ಕಾರಿ ಕರ್ತವ್ಯಗಳನ್ನು ಸತತವಾಗಿ ನಿರ್ವಹಿಸುವ ನೌಕರರ ಮೇಲೆ ನಿಮ್ಮ ಆಯವ್ಯಯವನ್ನು ಹೊರಿಸಲು ಹೋಗಬೇಡಿ. ಹಂಗಾಮಿ/ ಹೊರಗುತ್ತಿಗೆ ಎಂಬ ತಾತ್ಕಾಲಿಕ ಲೇಬಲ್ಗಳನ್ನು ಹಚ್ಚಿ ಆ ನೌಕರರಿಂದ ದೀರ್ಘಕಾಲ ರೆಗ್ಯುಲರ್ ಕೆಲಸದ ದುಡಿತ ಪಡೆದುಕೊಂಡು ಅವರನ್ನು ಅಭದ್ರತೆಗೆ ದೂಡುವುದು ಸಾರ್ವಜನಿಕ ಆಡಳಿತ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಕುಂದಿಸುತ್ತದೆ. ನಿಜ ಸಾರ್ವಜನಿಕ ನೀತಿಯಲ್ಲಿ ಆರ್ಥಿಕ ಬಿಕ್ಕಟ್ಟಿಗೂ ಪಾತ್ರವಿದೆ. ಹಾಗೆಂದು ಅದು ವಿವೇಕ ಮತ್ತು ಕಾನೂನುಬದ್ಧ ಸೇವೆಯನ್ನು ಮೀರುವ ‘ತಾಲಿಸ್ಮಾನ್’ ಆಗಬಾರದು’.

ಅಂತಿಮವಾಗಿ, ದೇಶದ ಎಲ್ಲ ಸರ್ಕಾರಗಳಿಗೂ ಸ್ಪಷ್ಟ ನಿರ್ದೇಶನಗಳನ್ನೂ ಮಾನದಂಡಗಳನ್ನೂ ವಿಧಿಸುತ್ತಾ ಸುಪ್ರೀಂ ಕೋರ್ಟ್ ಹೀಗೆ ಹೇಳಿದೆ:

‘ಈ ವಿಷಯದಲ್ಲಿ ಸರಳ ನಿರ್ದೇಶನಗಳನ್ನು ನೀಡುವುದರಿಂದ ನ್ಯಾಯ ಪರಿಪಾಲನೆಯಾಗುವುದಿಲ್ಲ. ಇದು ಸ್ಪಷ್ಟ ಹೊಣೆಗಾರಿಕೆಯ ನಿರ್ವಹಣೆ, ಕಾಲಮಿತಿ ನಿಗದಿ ಮತ್ತು ಅನುಷ್ಠಾನದ ಪರಿಶೀಲನೆಯನ್ನು ಬಯಸುತ್ತದೆ. ಸರ್ಕಾರಗಳು ಈ ನೌಕರರಿಗೆ ಪೂರ್ಣಪ್ರಮಾಣದ ರೆಗ್ಯುಲರೈಸೇಷನ್ ಒದಗಿಸಬೇಕು. ನ್ಯಾಯಾಂಗದ ಈ ನಿರ್ದೇಶನವನ್ನು ಕಡ್ಡಾಯವಾಗಿ ಪಾಲಿಸಬೇಕು. ಇದನ್ನು ಜಾರಿಗೆ ತರುವಲ್ಲಿ ವಿಳಂಬ ಮಾಡಿದಲ್ಲಿ ಅದು ಈ ನೌಕರರ ಬದುಕು ಮತ್ತು ಘನತೆಯನ್ನು ಉದ್ದೇಶಪೂರ್ವಕವಾಗಿ ಹಾಳುಗೆಡವಿದ ಕೃತ್ಯವೆಂದೇ ಭಾವಿಸಬೇಕಾಗುತ್ತದೆ’ ಎಂದು ಒತ್ತಿ ಹೇಳಿದೆ.

ಮೇಲ್ಕಂಡ ತೀರ್ಪುಗಳ ಬಿಸಿ ಕಾರ್ಯಾಂಗಕ್ಕೆ ತಟ್ಟಿದಂತೆ ಅನ್ನಿಸುವುದಿಲ್ಲ. ಅಧಿಕಾರಿಗಳಿಗೆ ಕೋರ್ಟ್ ತೀರ್ಪುಗಳ ಗಂಭೀರತೆಯನ್ನು ಅರಿಯುವ ಅಥವಾ ಅವುಗಳನ್ನು ಓದುವಷ್ಟೂ ವ್ಯವಧಾನ ಇದ್ದಂತಿಲ್ಲ. ತಕ್ಷಣಕ್ಕೆ ಮಕ್ಕಿಕಾಮಕ್ಕಿ ಷರಾ ಬರೆದು ಕೈ ತೊಳೆದುಕೊಳ್ಳುತ್ತಾರೆ. ಕಾರ್ಯಾಂಗದ ಈ ನಿಸ್ಸೀಮ ನಿರ್ಲಕ್ಷ್ಯದ ಪರಿಣಾಮವಾಗಿಯೇ ಪ್ರಸ್ತುತ ರಾಜ್ಯದಲ್ಲಿ ಸುಮಾರು ಮೂರು ಲಕ್ಷ ಹೊರಗುತ್ತಿಗೆ ನೌಕರರು ಹತ್ತಾರು ವರ್ಷಗಳಿಂದ ಸರ್ಕಾರದ ಕೆಲಸ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಅನೇಕರನ್ನು ಹೇಳದೇ ಕೇಳದೇ ಕೆಲಸದಿಂದ ತೆಗೆದುಹಾಕಿ ಬೀದಿಪಾಲು ಮಾಡಲಾಗಿದೆ. ಅನೇಕರು ನಿವೃತ್ತಿಯ ಅಂಚಿನಲ್ಲಿದ್ದಾರೆ. ಅದರಲ್ಲೂ ಇಂಧನ ಇಲಾಖೆ, ಗಣಿ ಇಲಾಖೆ, ಆರೋಗ್ಯ ಇಲಾಖೆಗೆ ಹೊರಗುತ್ತಿಗೆ ಕಾರ್ಮಿಕರು ಮತ್ತು ಪೌರಕಾರ್ಮಿಕರು ಪ್ರಾಣಾಪಾಯದೊಂದಿಗೆ ಕೆಲಸ ಮಾಡುತ್ತಿದ್ದಾರೆ. ಅನೇಕರು ಕರ್ತವ್ಯ ನಿರತರಾಗಿದ್ದಾಗ ಅವಘಡದಿಂದ ಮೃತರಾಗಿದ್ದಾರೆ; ಶಾಶ್ವತ ಅಂಗವಿಕಲರೂ, ರೋಗಗ್ರಸ್ತರೂ ಆಗಿದ್ದಾರೆ. ಇವರಿಗೆ ಜೀವಭದ್ರತೆಯೂ ಇಲ್ಲ. ಜೀವನಭದ್ರತೆಯೂ ಇಲ್ಲ.

ಸಮಾಧಾನದ ಸಂಗತಿ ಎಂದರೆ, ಕಾರ್ಯಾಂಗವಲ್ಲದಿದ್ದರೂ ರಾಜ್ಯದ ಶಾಸಕಾಂಗವಾದರೂ ಈ ವಿಷಯದಲ್ಲಿ ಗಂಭೀರವಾಗಿ ಚಿಂತಿಸುತ್ತಿದೆ. ಸುಪ್ರೀಂ ಕೋರ್ಟ್ ತೀರ್ಪುಗಳು ಬಂದ ಮೇಲೆ ಮುಖ್ಯಮಂತ್ರಿಗಳು, ಶಾಸನ ಮತ್ತು ಸಂಸದೀಯ ಸಚಿವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟದ ಉಪಸಮಿತಿ ರಚಿಸಿದ್ದು, ಆ ಉಪಸಮಿತಿ ಬೆಳಗಾವಿಯ ಅಧಿವೇಶನದಲ್ಲಿ ಮಸೂದೆ ಮಂಡಿಸಲು ಶಿಫಾರಸು ಮಾಡಿದೆ. ಇದೊಂದು ಉತ್ತಮ ಬೆಳವಣಿಗೆ. ಸರ್ಕಾರದ ರಾಜಕೀಯ ಇಚ್ಛಾಶಕ್ತಿ ಅಭಿನಂದನಾರ್ಹ. ಆದರೆ, ಸುಪ್ರೀಂ ಕೋರ್ಟ್ ಹೇಳಿರುವಂತೆ ವಿಳಂಬಕ್ಕೆ ಎಡೆಮಾಡಿಕೊಡದೆ, ಮಸೂದೆ ಮಂಡನೆ ಈ ಅಧಿವೇಶನದಲ್ಲಿಯೇ ಆಗಬೇಕು. ಆಗ ನಮ್ಮ ರಾಜ್ಯ ಸರ್ಕಾರ ‘ಸಂವಿಧಾನ ಬದ್ಧ ಜೀವಪರ ಸರ್ಕಾರ’ ಎಂದು ದೇಶಕ್ಕೇ ಮೊದಲ ಮಾದರಿಯಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.