ಹಾಸ್ಯ ಸಾಹಿತಿ ಬೀಚಿ, ‘ಕಾನೂನು ಕತ್ತೆಯಿದ್ದಂತೆ’ ಎಂದು ವ್ಯಂಗ್ಯವಾಡುತ್ತಿದ್ದರು. ಆ ವ್ಯಂಗ್ಯ ಇವತ್ತಿಗೂ ಪ್ರಸ್ತುತ ಎಂದರೆ ಕಾನೂನನ್ನು ತೆಗಳಿದಂತೇನೂ ಆಗುವುದಿಲ್ಲ. ಶಾಸಕಾಂಗದ ಹಸ್ತಕ್ಷೇಪ ಮತ್ತು ಕಾರ್ಯಾಂಗದ ಅದಕ್ಷತೆಯಿಂದಾಗಿ ಕಾನೂನು ಇಲ್ಲಿ ಅಕ್ಷರಶಃ ಕತ್ತೆಯಾಗಿದೆ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ.

ಶಿವಮೊಗ್ಗ ತಾಲ್ಲೂಕಿನ ಕಸಬಾ ಹೋಬಳಿಯ ನವುಲೆ ಗ್ರಾಮದ ಸರ್ವೆ ನಂಬರ್ 41ರಲ್ಲಿ 31 ಎಕರೆ 4 ಗುಂಟೆಯಷ್ಟು ದೊಡ್ಡದಾದ ಸರ್ಕಾರಿ ಕೆರೆ ಯೊಂದಿತ್ತು. ಕೆರೆಯ ಸಂರಕ್ಷಿತ ಪ್ರದೇಶ (ಬಫರ್ ಜೋನ್) ಒತ್ತುವರಿಯಾಯಿತು. ಕೆರೆಯಲ್ಲಿ ನೀರು ಸಂಗ್ರಹ ಕ್ರಮೇಣ ಕಡಿಮೆಯಾಗುತ್ತಾ ಹೋಯಿತು. 1994ರ ಹೊತ್ತಿಗೆ ಶಿವಮೊಗ್ಗ ನಗರಸಭೆಯವರಿಗೆ ‘ಇದು ಜೀವಂತ ಕೆರೆಯಲ್ಲ’ ಅನ್ನಿಸಿತು. ಬೇಸಿಗೆಯಲ್ಲಿ ಆಟದ ಮೈದಾನದಂತೆ ತೋರುವ ನವುಲೆ ಕೆರೆ ಮಳೆಗಾಲದಲ್ಲಿ ತುಂಬುತ್ತಿತ್ತು. 2002ರಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ (ಕೆಎಸ್ಸಿಎ) ಅಲ್ಲಿ ಕ್ರಿಕೆಟ್ ಸ್ಟೇಡಿಯಂ ಮಾಡಲು ಮುಂದಾಯಿತು. ಶಿವಮೊಗ್ಗ ಜಿಲ್ಲಾಡಳಿತ ಎಷ್ಟು ಅಸೂಕ್ಷ್ಮ ಆಗಿತ್ತೆಂದರೆ, ವಿರೋಧ ಮಾಡಿದವರ ಯಾವ ಮಾತನ್ನೂ ಕೇಳದೇ ‘ಕೆಎಸ್ಸಿಎ’ಗೆ ಕೆರೆಯ 26 ಎಕರೆ ಭೂಮಿಯನ್ನು ಮೂವತ್ತು ವರ್ಷಗಳ ಗುತ್ತಿಗೆಗೆ ನೀಡಿತು.

ಮುಂದೆ ಆಗಿದ್ದೆಲ್ಲ ಕೆರೆ ಮುಚ್ಚುವ ಕೆಲಸ. ಗುಡ್ಡವನ್ನು ಕಡಿದು ಲೋಡುಗಟ್ಟಲೇ ಮಣ್ಣನ್ನು ತಂದು ಸುರಿಯಲಾಯಿತು; ಕೆರೆಯನ್ನು ಕ್ರೀಡಾಂಗಣ ಮಾಡಲಾಯಿತು. ಹಾಲಿ ಉಳಿದ 5 ಎಕರೆ ನಾಲ್ಕು ಗುಂಟೆ ಕೆರೆಯಲ್ಲಿ ಮಳೆಗಾಲದಲ್ಲಿ ಭರಪೂರ ನೀರು ತುಂಬಿದಾಗ ಸ್ಟೇಡಿಯಂ ಕೂಡ ಕೆರೆಯಂತಾಗುತ್ತದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಸ್ಟೇಡಿಯಂ ನೀರು ನಿಂತು ಹಾಳಾಗುತ್ತಿದೆ. ಇದಕ್ಕೊಂದು ಉಪಾಯವನ್ನು ಕೆಎಸ್ಸಿಎ ಕಂಡುಕೊಂಡಿದೆ: ಕೆರೆಯ ತಳಭಾಗದಲ್ಲಿ ದೊಡ್ಡದಾದ ಕಿಂಡಿ ಕೊರೆದು, ನೀರನ್ನು ರಾಜಕಾಲುವೆಗೆ ಬಿಡುವುದು.

‘ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ–2025’ರ ಮೂಲಕ, ಕೆರೆಗಳ ಸಂರಕ್ಷಿತ ಪ್ರದೇಶದ ವ್ಯಾಪ್ತಿಯನ್ನು 30 ಮೀಟರ್ನಿಂದ ಕೆರೆಗಳ ವ್ಯಾಪ್ತಿಯ ಆಧಾರದ ಮೇಲೆ ಕಡಿತಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ವಾಣಿಜ್ಯ, ಕೈಗಾರಿಕೆ ಮತ್ತು ಮನರಂಜನಾ ಚಟುವಟಿಕೆ ಗಳಿಗೆ ಕೆರೆಯ ಸಂರಕ್ಷಿತ ವಲಯದ ಸಮೀಪದಲ್ಲಿ ಅವಕಾಶ ಕಲ್ಪಿಸುವ ಉದ್ದೇಶ ಸರ್ಕಾರದ್ದು. ಈ ಕ್ರಮವು ಪಶ್ಚಿಮ ಘಟ್ಟಗಳು ಮತ್ತು ಮಲೆನಾಡಿನ ಕೆರೆಗಳಿಗೆ ಮರಣ ಶಾಸನವಾಗಲಿದೆ; ಪರಿಸರ ವಿನಾಶ, ಪ್ರವಾಹದ ಅಪಾಯ, ಜೀವಿವೈವಿಧ್ಯ ನಾಶಕ್ಕೆ ನೇರ ಕಾರಣವಾಗಲಿದೆ.

ಅಂಕಿ–ಅಂಶಗಳ ಪ್ರಕಾರ, 50 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ 272 ಕೆರೆಗಳಿದ್ದವು. ಈಗ ಈ ಸಂಖ್ಯೆ 168ಕ್ಕೆ ಇಳಿದಿದೆ. ರಿಯಲ್ ಎಸ್ಟೇಟ್ ಮಾಫಿಯಾಗಳು ಮತ್ತವರ ಒತ್ತುವರಿಗೆ ಸಹಕರಿಸಿದ ಎಲ್ಲಾ ಸರ್ಕಾರಗಳು ಇದಕ್ಕೆ ನೇರ ಕಾರಣವಾಗಿವೆ.

‘ರಾಷ್ಟ್ರೀಯ ಹಸಿರು ನ್ಯಾಯಮಂಡಳಿ’ಯು 2016ರಲ್ಲಿ, ಕೆರೆಗಳ ಸುತ್ತಲಿನ ಸಂರಕ್ಷಿತ ಪ್ರದೇಶ ವನ್ನು 75 ಮೀಟರ್ಗೆ ವಿಸ್ತರಿಸಿತ್ತು. ಇದನ್ನು ಒಪ್ಪದ ಕರ್ನಾಟಕ ಸರ್ಕಾರ ಆ ಆದೇಶವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿತ್ತು. ನ್ಯಾಯಮಂಡಳಿಯ ಆದೇಶವನ್ನು ತಡೆಹಿಡಿದ ಸುಪ್ರೀಂ ಕೋರ್ಟ್, ಕರ್ನಾಟಕ ಮುನಿಸಿಪಲ್ ಕಾಯ್ದೆ–1976, ಮಾಸ್ಟರ್ ಪ್ಲಾನ್ ಬೆಂಗಳೂರು–2015, ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ–(ಕೆಟಿಸಿಡಿಎ) 2014ರಂತೆ ಕೆರೆಗಳ ಬಫರ್ ಜೋನ್ ನಿಗದಿ ಮಾಡುವಂತೆ ತಿಳಿಸಿತು. ಕೆಟಿಸಿಡಿಎ ಕಾಯ್ದೆಯಡಿ ಕೆರೆಗಳ ಬಫರ್ ಜೋನ್ 30 ಮೀಟರ್ ಎಂದು ನಮೂದಿಸಲಾಗಿದೆ.

ಅಭಿವೃದ್ಧಿ ಕೆಲಸಗಳಿಗೆ ಕೆರೆಗಳ ಸಂರಕ್ಷಿತ ಪ್ರದೇಶ ಹೆಚ್ಚಾಗಿರುವುದು ಅಡ್ಡಿ ಮಾಡುತ್ತಿದೆ ಎಂಬುದು ಸರ್ಕಾರದ ವಾದವಾಗಿತ್ತು. ಕೆರೆ ಸಂರಕ್ಷಿತ ಪ್ರದೇಶದ 30 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಕಟ್ಟಡ ಕಟ್ಟುವಂತಿಲ್ಲ, ಪರಭಾರೆ ಮಾಡುವಂತಿಲ್ಲ ಎಂಬುದರ ಜೊತೆಗೆ, ಆ ಪ್ರದೇಶದಲ್ಲಿ ಸ್ಥಳೀಯ ಜಾತಿಯ ಗಿಡಗಳನ್ನು ನೆಟ್ಟು ಬೆಳೆಸಬೇಕು ಹಾಗೂ ಕೆರೆಯ ಹೂಳನ್ನು ತೆಗೆದು ನಿರ್ವಹಣೆ ಮಾಡಬೇಕು ಎಂಬ ಅಂಶಗಳು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಆದೇಶದಲ್ಲಿತ್ತು.

ಭಾರತೀಯ ವಿಜ್ಞಾನ ಸಂಸ್ಥೆಯ ವರದಿ ಪ್ರಕಾರ, ಸಂರಕ್ಷಿತ ಪ್ರದೇಶವು ಕೆರೆಯ ನೀರಿನ ಧಾರಣಾ ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೇ, ಪ್ರವಾಹ ನಿಯಂತ್ರಿಸಲು ಸಹಕಾರಿ. ಮಲೆನಾಡಿನ ಕೆರೆಗಳು ಸಾಮಾನ್ಯವಾಗಿ ಕಾಡುಗಳಿಂದ ಆವೃತವಾಗಿವೆ. ಈ ಕೆರೆಗಳ ಸುತ್ತಲಿನ ಸಂರಕ್ಷಿತ ಪ್ರದೇಶಗಳು ಸ್ಥಳೀಯ ಸಸ್ಯಗಳು, ವಿವಿಧ ಪ್ರಭೇದದ ಪಕ್ಷಿಗಳು, ಕೀಟಗಳು, ಉಭಯವಾಸಿಗಳು ಮತ್ತು ಸರೀಸೃಪಗಳಿಗೆ ಆಶ್ರಯ ನೀಡಿವೆ. ಸಂರಕ್ಷಿತ ಪ್ರದೇಶವನ್ನು ಕಡಿತಗೊಳಿಸುವುದರಿಂದ ಕೆರೆಯ ಆವಾಸದಲ್ಲಿನ ಜೀವವೈವಿಧ್ಯದ ಸುರಕ್ಷತೆಗೆ ಧಕ್ಕೆಯಾಗುತ್ತದೆ.

ಬೆಂಗಳೂರಿನ ಬೆಳ್ಳಂದೂರು ಕೆರೆಯ ಉದಾಹರಣೆ ಕಣ್ಣಮುಂದೆಯೇ ಇದೆ. ಕೆರೆಯ ಸುತ್ತಲಿನ ಸಂರಕ್ಷಿತ ಪ್ರದೇಶದ ಅತಿಕ್ರಮಣದಿಂದಾಗಿ, ಕೆರೆಯ ನೀರು ಸಂಗ್ರಹಣಾ ಸಾಮರ್ಥ್ಯವು ಗಣನೀಯವಾಗಿ ಕುಗ್ಗಿದೆ. ಮಲೆನಾಡಿನ ಕೆರೆಗಳಿಗೆ ಇಂತಹ ಗತಿಯಾದರೆ, ಮಲೆನಾಡು ಸೇರಿದಂತೆ ಬಯಲು ನಾಡಿನ ಜಲಭದ್ರತೆಗೂ ಅಪಾಯ ಉಂಟಾಗಲಿದೆ. ಪಶ್ಚಿಮಘಟ್ಟದ ಅನೇಕ ನದಿಗಳು ಬಯಲು ಸೀಮೆಗೆ ನೀರಿನ ಆಕರವಾಗಿವೆ. ಇಲ್ಲಿನ ಕೆರೆಗಳು ನದಿಗಳಿಗೆ ನೀರುಣಿಸುವ ಮೂಲಕ, ನದಿಯ ಜೀವಂತಿಕೆಗೆ ತಮ್ಮ ಕೊಡುಗೆ ನೀಡುತ್ತಿವೆ.

ಕೆರೆ ತೀರದ ಸಮೀಪದಲ್ಲಿ ನಿರ್ಮಾಣಕ್ಕೆ ಅವಕಾಶ ಕಲ್ಪಿಸುವುದರಿಂದ, ಭೂಮಿಯ ಮೌಲ್ಯವು ಗಗನಕ್ಕೇರುತ್ತದೆ; ಆ ಬೆಳವಣಿಗೆ ರಿಯಲ್ ಎಸ್ಟೇಟ್ ವ್ಯಾಪಾರಕ್ಕೆ ಹೆಚ್ಚು ಲಾಭ ತರಲಿದೆ. ಮಲೆನಾಡಿನ ಕೆರೆಗಳ ಸುತ್ತಲಿನ ಭೂಮಿಯು ಪ್ರವಾಸೋದ್ಯಮ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಆಕರ್ಷಕವಾಗಿದೆ. ಆದರೆ, ಅಭಿವೃದ್ಧಿ ಚಟುವಟಿಕೆಗಳ ಹೆಸರಿನಲ್ಲಿ ಕೆರೆಗಳನ್ನು ನಾಶ ಮಾಡುವುದರಿಂದ ಸ್ಥಳೀಯ ಜನರಿಗೆ, ವಿಶೇಷವಾಗಿ ಕೃಷಿಯನ್ನು ಅವಲಂಬಿಸಿರುವವರಿಗೆ, ನೀರಿನ ಕೊರತೆ ಉಂಟಾಗುತ್ತದೆ ಮತ್ತು ಪರಿಸರ ಸಮತೋಲನದಲ್ಲೂ ಏರುಪೇರಾಗುತ್ತದೆ.

ಸಂರಕ್ಷಿತ ಪ್ರದೇಶದಲ್ಲಿ ಬಿದ್ದ ಮಳೆಯ ನೀರು ನೈಸರ್ಗಿಕವಾಗಿ ಗಿಡ–ಮರಗಳ, ದರಗೆಲೆಗಳ, ಹುಲ್ಲಿನ ಮೂಲಕ ಹರಿದು ಶುದ್ಧವಾಗಿ ಕೆರೆಯನ್ನು ಸೇರುತ್ತದೆ. ಸಂರಕ್ಷಿತ ಪ್ರದೇಶದ ಪೋಷಕಾಂಶಗಳು ಮೀನುಗಳಿಗೆ ಆಹಾರ ಮೂಲವಾಗುತ್ತವೆ. ಮೀನು ಆಹಾರ ಭದ್ರತೆಯ ಭಾಗವೂ ಹೌದು. ಗುಡ್ಡಗಳಲ್ಲಿ ಸಂಗ್ರಹವಾಗುವ ನೀರು, ಬೇಸಿಗೆಯಲ್ಲೂ ಕೆರೆಗಳ ನೀರು ಸಂಗ್ರಹಣೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಂರಕ್ಷಿತ ಪ್ರದೇಶದಲ್ಲಿ ಗುಡ್ಡದಿಂದ ಹರಿದು ಬರುವ ನೀರಿನ ಮಾರ್ಗದಲ್ಲಿ ಜಲಕಣ್ಣುಗಳು ಇರುತ್ತವೆ. ಸಂರಕ್ಷಿತ ಪ್ರದೇಶವನ್ನು ಕಡಿತ ಮಾಡುವುದರಿಂದ ಈ ಜಲಕಣ್ಣುಗಳು ಶಾಶ್ವತವಾಗಿ ಮುಚ್ಚಿಹೋಗುತ್ತವೆ. ಇದು ಕೆರೆಗಳ ಸಾಮೂಹಿಕ ಸಾವಿಗೆ ಕಾರಣವಾಗಲಿದೆ.

ಮಲೆನಾಡಿನಲ್ಲಿ ನೀರಾವರಿ ಉದ್ದೇಶಕ್ಕಾಗಿ ಯಾವುದೇ ಅಣೆಕಟ್ಟುಗಳಿಲ್ಲ. ಮಲೆನಾಡಿಗೆ ಜಲಭದ್ರತೆಯನ್ನು ನೀಡುವುದು ಅಸಂಖ್ಯ ಚಿಕ್ಕ ಚಿಕ್ಕ ಒರತೆಗಳ ಕೆರೆಗಳು. ಸಂರಕ್ಷಿತ ಪ್ರದೇಶ ಅಥವಾ ಹಸಿರು ಆವರಣ ಹೆಚ್ಚು ಇದ್ದಷ್ಟೂ ಕೆರೆಗಳ ಆರೋಗ್ಯ ಸಮತೋಲನದಲ್ಲಿರುತ್ತದೆ. ಕೆರೆ–ಕುಂಟೆ, ಕಲ್ಯಾಣಿ, ಗೋಕಟ್ಟೆಗಳು ಅತ್ಯಂತ ಪವಿತ್ರವಾದವು ಎನ್ನುವುದು ಮಲೆನಾಡಿನ ಜನರ ಭಾವನೆಯಾಗಿದೆ. ಮಲೆನಾಡಿನ ಕೆರೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾನೂನಿಗೆ ತಿದ್ದುಪಡಿ ಮಾಡಬೇಕೇ ಹೊರತು, ಸಂರಕ್ಷಿತ ವಲಯದ ವ್ಯಾಪ್ತಿಯನ್ನು ಕಡಿಮೆ ಮಾಡುವ ಸರ್ಕಾರದ ನಿರ್ಧಾರ ಬಹಳ ತಪ್ಪು ಎಂದು ಕೆರೆ ತಜ್ಞ ಶಿವಾನಂದ ಕಳವೆ ಹೇಳುತ್ತಾರೆ.ಸರ್ಕಾರ ಮಲೆನಾಡಿನ ಕೆರೆಗಳನ್ನು ಅಕ್ವೇರಿಯಂನಂತೆ ನೋಡಬಾರದು. ನಮಗೆ ಇಷ್ಟವಾಗುವ ಮೀನುಗಳನ್ನಷ್ಟೇ ಅಕ್ವೇರಿಯಂನಲ್ಲಿ ಸಾಕಿಕೊಳ್ಳುತ್ತೇವೆ. ಕೆರೆ ಎನ್ನುವ ನೈಸರ್ಗಿಕ ಅಕ್ವೇರಿಯಂ ಜೀವವೈವಿಧ್ಯದ ತೊಟ್ಟಿಲು. ಉಭಯಚರಿಗಳಾದ ಕಪ್ಪೆಗಳು ನೀರಿನಲ್ಲಿ ಜನಿಸುತ್ತವೆ. ವಿವಿಧ ಹಂತಗಳನ್ನು ದಾಟಿಕೊಂಡು ಮತ್ತೆ ಕಪ್ಪೆಗಳಾಗಿ ರೂಪಾಂತರಗೊಂಡು ನೀರಿನಿಂದ ಹೊರಗೆ ಹೋಗುತ್ತವೆ. ಕೆರೆಯ ಸಂರಕ್ಷಿತ ಪ್ರದೇಶದಲ್ಲಿರುವ ಹಸಿರು ಆವರಣದ ಕಾರಣಕ್ಕೆ ಕೆರೆಯ ಮೀನುಗಳಿಗೆ ಆಹಾರ ಸಿಗುತ್ತದೆ. ಮೀನುಗಳನ್ನು ಬೇಟೆಯಾಡುವ ಮಿಂಚುಳ್ಳಿಗೂ ಕೆರೆಯ ಆವರಣದಲ್ಲಿ ಗಿಡ–ಮರಗಳು ಇರಬೇಕು.

ರಿಯಲ್ ಎಸ್ಟೇಟ್ ಉದ್ಯಮಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸರ್ಕಾರ ಕೆರೆಗಳ ಹಿತಾಸಕ್ತಿಯನ್ನು ಬಲಿ ಕೊಡಲು ಮುಂದಾಗಿದೆ. ಸರ್ಕಾರದ ನಿರ್ಧಾರಕ್ಕೆ ಯಾವುದೇ ವೈಜ್ಞಾನಿಕ ಕಾರಣಗಳಿಲ್ಲ. ಬಯಲು ಸೀಮೆಯ ಕೆರೆಗಳ ರಚನೆ ಮತ್ತು ಅವುಗಳ ನೈಸರ್ಗಿಕ ರಚನೆಯ ಸ್ವರೂಪವೇ ಬೇರೆ. ಮಲೆನಾಡಿನ ಕೆರೆಗಳ ನೈಸರ್ಗಿಕ ರಚನೆಯೇ ಬೇರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳು ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಪೂರ್ವದಲ್ಲಿ, ಜಿಲ್ಲಾವಾರು ಸ್ಥಳೀಯ ತಜ್ಞರ ಜೊತೆ ಚರ್ಚೆ ನಡೆಸಬೇಕು. ಈ ವಿಷಯದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ಸಮಿತಿಯ ಶಿಫಾರಸುಗಳು ಏನು ಎನ್ನುವುದು ಸಾರ್ವಜನಿಕರಿಗೆ ತಿಳಿಯಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.