ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ವನ್ಯಜೀವಿಗಳ ರಕ್ಷಣೆಗೆ ‘ಮಹಾಮಾರ್ಗ’

701 ಕಿ.ಮೀ. ಉದ್ದದ ಸೂಪರ್ ಎಕ್ಸ್‌ಪ್ರೆಸ್ ಹೆದ್ದಾರಿಯ ಉದ್ದೇಶ ಫಲಿಸುವುದೇ?
Published 28 ಮಾರ್ಚ್ 2024, 22:13 IST
Last Updated 28 ಮಾರ್ಚ್ 2024, 22:13 IST
ಅಕ್ಷರ ಗಾತ್ರ

ಈ ಹೆದ್ದಾರಿಯ ಅಧಿಕೃತ ಹೆಸರು ‘ಹಿಂದೂ ಹೃದಯ ಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಮಹಾರಾಷ್ಟ್ರ ಸಮೃದ್ಧಿ ಮಹಾಮಾರ್ಗ’. ಆದರೆ ಸಂಕ್ಷಿಪ್ತವಾಗಿ ‘ಸಮೃದ್ಧಿ ಮಹಾಮಾರ್ಗ’ ಎಂದೇ ಹೆಚ್ಚು ಪರಿಚಿತ. 701 ಕಿ.ಮೀ. ಉದ್ದದ ಈ ಸೂಪರ್ ಎಕ್ಸ್‌ಪ್ರೆಸ್ ಹೆದ್ದಾರಿಯು ಮುಂಬೈ ಮತ್ತು ನಾಗಪುರದ ನಡುವೆ ಸಂಪರ್ಕ ಕಲ್ಪಿಸುತ್ತದೆ.  ಆರು ಲೇನ್‍ಗಳ ಈ ಹೆದ್ದಾರಿಯು ಮಹಾರಾಷ್ಟ್ರದ 10 ಜಿಲ್ಲೆಗಳ ಮೂಲಕ ಹಾದುಹೋಗುವುದು. ಅದರ ಉದ್ದಕ್ಕೂ ಸುತ್ತಮುತ್ತಲಿರುವ ಪ್ರವಾಸೋದ್ಯಮ ತಾಣಗಳು, ಕೈಗಾರಿಕಾ ಪ್ರದೇಶಗಳು, ಕಾರಿಡಾರ್‌ಗಳು, ಕೃಷಿ ಉತ್ನನ್ನ ಮತ್ತು ವಾಣಿಜ್ಯ ವ್ಯವಹಾರ ಕೇಂದ್ರಗಳು, ಧಾರ್ಮಿಕ ನಗರ, ಪಟ್ಟಣಗಳ ಆರ್ಥಿಕ ಸ್ವರೂಪವನ್ನೇ ಬದಲಿಸುತ್ತಿದೆ.

2022ರ ಡಿಸೆಂಬರ್‌ನಲ್ಲಿ, ಸಂಪೂರ್ಣವಾಗಿ ಸಿದ್ಧವಾಗುವ ಮುನ್ನವೇ ಮೊದಲ ಹಂತ ಉದ್ಘಾಟನೆಯಾಯಿತು. 55 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯಿಂದ ನಿರ್ಮಿತವಾಗಿರುವ ಈ ಮಹಾಮಾರ್ಗದಲ್ಲಿ 65 ಫ್ಲೈಓವರ್‌ಗಳು, ಕಣಿವೆಗಳನ್ನು ದಾಟಲು ಕಟ್ಟಲಾಗಿರುವ ಎತ್ತರದ ಸೇತುವೆಗಳು, ಪಥ ಬದಲಿಸುವ 24 ವ್ಯವಸ್ಥೆಗಳು, 6 ಸುರಂಗಗಳು ಮತ್ತು 400 ಅಂಡರ್‌ಪಾಸ್‍ಗಳಿವೆ. ಹೆದ್ದಾರಿಯ ಉದ್ದಕ್ಕೂ ವಾಹನಗಳು ಮತ್ತು ಪ್ರಯಾಣಿಕರಿಗೆ ಎಲ್ಲ ಸೌಲಭ್ಯಗಳನ್ನೂ ಕಲ್ಪಿಸಿ, ಗರಿಷ್ಠ 120 ಕಿ.ಮೀ. ವೇಗದ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ತುರ್ತು ಸಂದರ್ಭಗಳಲ್ಲಿ ಈ ಹೆದ್ದಾರಿಯಲ್ಲಿ ವಿಮಾನಗಳನ್ನೂ ಇಳಿಸಬಹುದು. ಇವುಗಳೆಲ್ಲದರ ಜೊತೆಗೆ, ಹೆದ್ದಾರಿಯ ನಿರ್ದಿಷ್ಟ ಭಾಗಗಳಲ್ಲಿ ವನ್ಯಜೀವಿಗಳು ಹೆದ್ದಾರಿಯನ್ನು ಸುರಕ್ಷಿತವಾಗಿ ದಾಟಲು 8 ಮೇಲ್ಸೇತುವೆಗಳು (ಓವರ್‌ಪಾಸ್) ಮತ್ತು 17 ಕೆಳದಾರಿಗಳನ್ನು ನಿರ್ಮಿಸಲಾಗಿದೆ.  ಹೆದ್ದಾರಿಯ ವಿನ್ಯಾಸದ ಪ್ರಾರಂಭದ ಹಂತದಲ್ಲಿಯೇ, ವನ್ಯಜೀವಿಗಳ ರಕ್ಷಣೆಯನ್ನು ಯೋಜನೆಯ ಭಾಗವನ್ನಾಗಿ ಅಳವಡಿಸಿಕೊಂಡಿರುವ, ನಮ್ಮ ದೇಶದ ಮೊದಲ, ಅತಿದೊಡ್ಡ, ‘ಗ್ರೀನ್‍ಫೀಲ್ಡ್ ರೂಟ್ ಅಲೈನ್‍ಮೆಂಟ್ ಪ್ರಾಜೆಕ್ಟ್’ ಎಂಬ ಹೆಗ್ಗಳಿಕೆಯೂ ಈ ಮಹಾಮಾರ್ಗಕ್ಕಿದೆ.

ನಮ್ಮ ದೇಶದಲ್ಲಿ 55,000 ಕಿ.ಮೀ.ಗಳಷ್ಟು ಉದ್ದದ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು, 26 ಹುಲಿ ಸಂರಕ್ಷಣಾ ಪ್ರದೇಶಗಳ ಮೂಲಕ ಹಾದುಹೋಗುತ್ತವೆ. ಶ್ರೀನಗರದಿಂದ ಕನ್ಯಾಕುಮಾರಿಯವರೆಗಿನ ದೇಶದ ಅತಿ ಉದ್ದವಾದ 44ನೇ ರಾಷ್ಟ್ರೀಯ ಹೆದ್ದಾರಿ, ನಾಲ್ಕು ಸಂರಕ್ಷಿತ ಪ್ರದೇಶಗಳ ಮೂಲಕ ಮತ್ತು ಖಾನ್ಹಾ, ಸಾತ್ಪುರ, ಪೆಂಚ್, ಬಾಂಧವನಗರ ಮತ್ತು ಪನ್ನಾ ಹುಲಿ ಸಂರಕ್ಷಿತ ಪ್ರದೇಶಗಳನ್ನು ಜೋಡಿಸುವ ವನ್ಯಜೀವಿ ಕೊಂಡಿದಾರಿಯ (ವೈಲ್ಡ್‌ಲೈಫ್ ಕಾರಿಡಾರ್) ಮೂಲಕ ಹಾದುಹೋಗುತ್ತದೆ. ಸೂರತ್‍ನಿಂದ ಕೋಲ್ಕತ್ತದವರೆಗಿನ ಎರಡನೆಯ ಅತಿ ಉದ್ದದ ಎನ್‍ಎಚ್6, ಮೇಲ್ಘಾಟ್, ಬೋರಾ, ನಾಗ್‍ಝಿರ, ಸಿಮ್ಲಿಪಾಲ್ ಸುತ್ತಲಿನ ವನ್ಯಜೀವಿ ಕೊಂಡಿದಾರಿಗಳ ಮೂಲಕ ಮತ್ತು ಇತರ ಏಳು ರಾಷ್ಟ್ರೀಯ ಉದ್ಯಾನಗಳು ಮತ್ತು ಸಂರಕ್ಷಿತ ಪ್ರದೇಶಗಳ ಮೂಲಕ ಹಾದುಹೋಗುತ್ತದೆ.

ವನ್ಯಜೀವಿ ಸಂರಕ್ಷಣಾ ಪ್ರದೇಶಗಳ ಮೂಲಕ ಹಾದುಹೋಗುವ ರಸ್ತೆಗಳಿಂದ ಎದ್ದು ಕಾಣುವಂತೆ ಆಗುವ ತೊಂದರೆಯೆಂದರೆ, ವಾಹನಗಳ ಡಿಕ್ಕಿಯಿಂದ ಆಗುವ ವನ್ಯಜೀವಿಗಳ ಸಾವುನೋವು. ಈ ವನ್ಯಜೀವಿಗಳಲ್ಲಿ ಹುಲಿ, ಆನೆ, ಚಿರತೆ, ಕಾಡುಬೆಕ್ಕು, ಕಡವೆ, ಜಿಂಕೆ, ಹಕ್ಕಿಗಳು, ಹಾವು ಹಾಗೂ ಇತರ ಸರೀಸೃಪಗಳು ಸೇರಿವೆ. ಮಹಾರಾಷ್ಟ್ರದ ವೈಲ್ಡ್‌ಲೈಫ್ ಕನ್ಸರ್ವೇಶನ್ ಟ್ರಸ್ಟ್ ಅಭಿವೃದ್ಧಿಪಡಿಸಿರುವ ‘ರೋಡ್‍ಕಿಲ್ ಆ್ಯಪ್‌’, 2018ರಲ್ಲಿ, ವನ್ಯಜೀವಿ ಸಂರಕ್ಷಿತ ಪ್ರದೇಶಗಳ ಮೂಲಕ ಹಾದುಹೋಗುವ ನಮ್ಮ ದೇಶದ ರಸ್ತೆಗಳಲ್ಲಿ 3,500 ವನ್ಯಜೀವಿಗಳು ಸಾವಿಗೀಡಾಗಿರುವುದನ್ನು ದಾಖಲಿಸಿದೆ. ವರದಿಯಾಗದ ಸಾವುಗಳ ಸಂಖ್ಯೆ ಇದರ ಎರಡರಷ್ಟಿರಬಹುದೆಂದು ಅಂದಾಜಿಸಲಾಗಿದೆ.

ವನ್ಯಜೀವಿ ವಿಜ್ಞಾನಿ ಸಂಜಯ ಗುಬ್ಬಿ ಮತ್ತು ಸಹಚರರು ನಡೆಸಿರುವ ಅಧ್ಯಯನಗಳ ಪ್ರಕಾರ, 2010-17ರ ಅವಧಿಯಲ್ಲಿ ಕರ್ನಾಟಕದಲ್ಲಿ 130 ಜಿಂಕೆಗಳು, 26 ಕಡವೆಗಳು, 27 ಕರಡಿಗಳು, ಎರಡು ಆನೆಗಳು, ಎರಡು ಕತ್ತೆಕಿರುಬಗಳು ಹಾಗೂ ಒಂದು ಹುಲಿಯು ವಾಹನಗಳಿಂದಾದ ಡಿಕ್ಕಿಯಿಂದ ಸಾವನ್ನಪ್ಪಿವೆ. ರಸ್ತೆಗಳಲ್ಲಿ ಸಂಭವಿಸುವ ವನ್ಯಜೀವಿಗಳ ಸಾವು ಎದ್ದು ಕಾಣುತ್ತದೆ. ಆದರೆ ಅಪಘಾತದಿಂದ ಸಾಯದೇ ಊನಗೊಂಡ ವನ್ಯಜೀವಿಯ ಬದುಕು ಅಸಹನೀಯವಾಗುತ್ತದೆ.

2016ರಲ್ಲಿ ಸಮೃದ್ಧಿ ಮಹಾಮಾರ್ಗದ ‘ವಿಸ್ತೃತ ಯೋಜನಾ ವರದಿ’ಯನ್ನು ಸಿದ್ಧಪಡಿಸಲು ಮಹಾರಾಷ್ಟ್ರ ಸರ್ಕಾರ ಪರಿಣತ ಸಮಾಲೋಚಕರನ್ನು ನೇಮಿಸಿತು. 701 ಕಿ.ಮೀಗಳ ಮಹಾಮಾರ್ಗ ಠಾಣೆ ಜಿಲ್ಲೆಯ ತಾನ್ಸಾ, ಅಕೋಲಾದ ಕಾಟೇಪೂರ್ಣ ಮತ್ತು ವಾಸಿಮ್ ಜಿಲ್ಲೆಯ ಕಾರಂಜಾ- ಸೋಹೋಲ್ ವನ್ಯಜೀವಿ ಅಭಯಾರಣ್ಯಗಳ ಮೂಲಕ, ಒಟ್ಟು 117 ಕಿ.ಮೀಗಳ ದೂರ ಹಾದುಹೋಗಲಿದೆಯೆಂಬ ವಿಷಯ ತಿಳಿಯುತ್ತಿದಂತೆ, ವನ್ಯಜೀವಿ ಸಂಘಟನೆಗಳು ಯೋಜನೆಯ ವಿರುದ್ಧ ದನಿಯೆತ್ತಿದವು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ವೇಗವಾಗಿ ಚಲಿಸುವ ವಾಹನಗಳಿಂದ ಸಾವಿಗೀಡಾಗುವ ವನ್ಯಜೀವಿಗಳ ಪ್ರಮಾಣವನ್ನು ಈ ಮಹಾಮಾರ್ಗ ಗಣನೀಯವಾಗಿ ಹೆಚ್ಚಿಸುವುದೆಂಬ ಕಳವಳಕಾರಿ ಅಭಿಪ್ರಾಯ ವ್ಯಕ್ತವಾಯಿತು. ವನ್ಯಜೀವಿ ಸಂಘಟನೆಗಳ ಅಭಿಪ್ರಾಯಕ್ಕೆ ಸ್ಪಂದಿಸಿದ ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ಕಾರ್ಪೊರೇಶನ್, ಅಂತಹ ಅನಾಹುತಗಳನ್ನು ತಡೆಯಲು ಸೂಕ್ತ ಕ್ರಮಗಳನ್ನು ಸೂಚಿಸಲು, ಡೆಹ್ರಾಡೂನ್‍ನ ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ಜೊತೆಗೆ ಒಪ್ಪಂದವೊಂದಕ್ಕೆ ಸಹಿ ಹಾಕಿತು. ಸಮಸ್ಯೆಯನ್ನು ಅಧ್ಯಯನ ಮಾಡಿದ ವಿಜ್ಞಾನಿಗಳ ತಂಡ ನೀಡಿದ ಸಲಹೆಯಂತೆ, ಸಮೃದ್ಧಿ ಮಹಾಮಾರ್ಗ ಹಾದುಹೋಗುವ ಮೂರು ಅಭಯಾರಣ್ಯಗಳ ಪರಿಸರ ಸೂಕ್ಷ್ಮಪ್ರದೇಶಗಳಲ್ಲಿ, ವನ್ಯಜೀವಿಗಳಿಗೆ ಹೆದ್ದಾರಿಯನ್ನು ದಾಟಲು ನೆರವಾಗುವಂತೆ 8 ಓವರ್‌ಪಾಸ್ ಮತ್ತು 17 ಕೆಳದಾರಿಗಳನ್ನು ಯೋಜನೆಯ ವಿನ್ಯಾಸದಲ್ಲಿ ಅಳವಡಿಸಲಾಯಿತು.

‘ಹಸಿರು ಸೇತುವೆ’ಯೆಂದು ಕರೆಯಲಾಗುವ, 32 ಮೀಟರ್ ಅಗಲದ ಈ ವನ್ಯಜೀವಿ ಮಾರ್ಗಗಳನ್ನು ನಿಸರ್ಗಸಹಜವಾಗಿ, ಸ್ಥಳೀಯ ಮರಗಿಡಗಳ ಹಿನ್ನೆಲೆಯಲ್ಲಿ ಎದ್ದು ಕಾಣದೇ ಬೆರೆಯುವಂತೆ ನಿರ್ಮಿಸಲು ಸೂಚಿಸಲಾಯಿತು. ಕೇಂದ್ರ ಸರ್ಕಾರದ ಪರಿಸರ ಸಚಿವಾಲಯ ಮತ್ತು ರಾಷ್ಟ್ರೀಯ ವನ್ಯಜೀವಿ ಮಂಡಳಿಗಳ ಅನುಮೋದನೆಯ ನಂತರ 2019ರ ಜನವರಿಯಲ್ಲಿ ಮಹಾಮಾರ್ಗದ ನಿರ್ಮಾಣ ಕಾರ್ಯ ಪ್ರಾರಂಭವಾಯಿತು. ಕೋವಿಡ್ ತಂದ ಅಡೆತಡೆಗಳಿಂದ ಯೋಜನೆಯ ಕೆಲಸ ಕುಂಟುತ್ತ ಸಾಗಿದರೂ, 2022ರ ಡಿಸೆಂಬರ್‌ನಲ್ಲಿ, ನಾಗಪುರ- ಶಿರಡಿಯನ್ನು ಜೋಡಿಸುವ ಮೊದಲ ಹಂತದ ಹೆದ್ದಾರಿಯನ್ನು ಪ್ರಧಾನಿ ಉದ್ಘಾಟಿಸಿದರು. 2023ರ ಮೇ ತಿಂಗಳಲ್ಲಿ ಎರಡನೆಯ ಹಂತ ಮುಗಿದು, ಅಂತಿಮ ಹಂತದ 100 ಕಿ.ಮೀಗಳ ಹೆದ್ದಾರಿ ಈ ವರ್ಷದ ಜುಲೈ ವೇಳೆಗೆ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆಯಿದೆ.

ಸಮೃದ್ಧಿ ಮಹಾಮಾರ್ಗವನ್ನು ಸುರಕ್ಷಿತವಾಗಿ ದಾಟಲು ವನ್ಯಜೀವಿಗಳಿಗೆಂದೇ ಪ್ರತ್ಯೇಕ ಮಾರ್ಗವನ್ನು ನಿರ್ಮಿಸಿದ ಮಾತ್ರಕ್ಕೆ ಅವು ಅದನ್ನು ಬಳಸಲು ಪ್ರಾರಂಭಿಸುವುದಿಲ್ಲ. ವನ್ಯಜೀವಿಗಳ ಸಹಜ ಪ್ರವೃತ್ತಿಯಲ್ಲಿ ಬದಲಾವಣೆ ಬರಲು ಬಹಳಷ್ಟು ಕಾಲ ಬೇಕು. ಹೀಗಾಗಿಯೇ 2022ರ ಡಿಸೆಂಬರ್‌ನಲ್ಲಿ ಕೆಲವು ಮಾರ್ಗಗಳು ಸಿದ್ಧವಾದರೂ 2023ರ ಅಂತ್ಯದವರೆಗೆ ಬಹುಪಾಲು ವನ್ಯಜೀವಿಗಳು ಅವುಗಳನ್ನು ಬಳಸಲಿಲ್ಲ. ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ಕಾರ್ಪೋರೇಶನ್ ಮತ್ತು ಡೆಹ್ರಾಡೂನ್‍ನ ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ನಡುವಿನ ಒಪ್ಪಂದದಂತೆ, ಮಹಾಮಾರ್ಗ ಹಾದುಹೋಗುವ ಮೂರು ವನ್ಯಜೀವಿ ಅಭಯಾರಣ್ಯಗಳ, ಆಯ್ದ 64 ಜಾಗಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಿ, ವನ್ಯಜೀವಿಗಳ ಸಂಚಾರ, ಅವು ಆಯ್ಕೆ ಮಾಡುವ ಮಾರ್ಗ ಮುಂತಾದವುಗಳನ್ನು ಅಧ್ಯಯನ ಮಾಡಲಾಗುತ್ತಿದೆ. ಈ ವರ್ಷದ ಮೊದಲ ಎರಡೂವರೆ ತಿಂಗಳ ಅವಧಿಯಲ್ಲಿ ನೀಲ್‍ಗಾಯ್, ಚಿಂಕಾರಾ, ಕಾಡುಹಂದಿ, ಮೊಲ, ಮುಳ್ಳು ಹಂದಿ, ಮುಂಗುಸಿ, ಲಂಗೂರ್ ಕೋತಿ ಮತ್ತು ಚಿರತೆಗಳು ಈ ವನ್ಯಜೀವಿ ಮಾರ್ಗಗಳನ್ನು ಬಳಸುತ್ತಿರುವುದು ದಾಖಲಾಗಿದೆ. ಇದು ಒಳ್ಳೆಯ ಬೆಳವಣಿಗೆ ಎನ್ನಿಸಿದರೂ ವನ್ಯಜೀವಿ ಸಂಘಟನೆಗಳಲ್ಲಿ ಈ ಬಗ್ಗೆ ಅಸಮಾಧಾನವಿದೆ.

ವನ್ಯಜೀವಿಗಳ ಸಾವನ್ನು ತಪ್ಪಿಸಲು ಹಸಿರು ಸೇತುವೆ ಮತ್ತು ಕೆಳದಾರಿಗಳ ಸಲಹೆ ನೀಡಿ, ಅವುಗಳ ವಿನ್ಯಾಸ ಮಾಡಿದವರು ಡೆಹ್ರಾಡೂನ್‍ನ ವನ್ಯಜೀವಿ ಸಂಸ್ಥೆಯ ವಿಜ್ಞಾನಿಗಳು. ಈಗ ಅಂತಹ ಮಾರ್ಗಗಳ ಬಳಕೆ ಮತ್ತು ಉಪಯುಕ್ತತೆಯ ಮೌಲ್ಯಮಾಪನ ಮಾಡುತ್ತಿರುವುದು ಹೆಚ್ಚು ಕಡಿಮೆ ಅದೇ ವಿಜ್ಞಾನಿಗಳ ತಂಡ. ಈ ವಿರೋಧಾಭಾಸದಲ್ಲಿರುವ ‘ಹಿತಾಸಕ್ತಿಯ ಸಂಘರ್ಷ’ದಿಂದ ಪ್ರಾಮಾಣಿಕವಾದ ಫಲಿತಾಂಶ ದೊರೆಯುವುದಿಲ್ಲ ಎಂಬುದು ವನ್ಯಜೀವಿ ಸಂಘಟನೆಗಳ ದೂರು. ವನ್ಯಜೀವಿಗಳು ಹೆದ್ದಾರಿಗೆ ಬರದಂತೆ ರಸ್ತೆಯ ಎರಡೂ ಕಡೆ ತಡೆಗೋಡೆಗಳನ್ನು ನಿರ್ಮಿಸಿದಾಗ ಮಾತ್ರ ಅವು ಮೇಲ್ಸೇತುವೆ ಅಥವಾ ಕೆಳದಾರಿಗಳನ್ನು ಬಳಸುವಂತೆ ಮಾಡುವುದು ಸಾಧ್ಯ. ಆದರೆ ತಡೆಗೋಡೆಯ ಕೆಲಸ ಬಹಳ ನಿಧಾನಗತಿಯಲ್ಲಿ ಸಾಗುತ್ತಿದೆ. ಆ ಕೆಲಸ ಮುಗಿದನಂತರ ಸ್ವತಂತ್ರವಾಗಿ, ನಿಷ್ಪಕ್ಷಪಾತವಾಗಿ ನಡೆಯುವ ಮೌಲ್ಯಮಾಪನದಿಂದ ಮಾತ್ರ ಈ ಪ್ರತ್ಯೇಕ ವನ್ಯಜೀವಿ ಮಾರ್ಗಗಳ ವಿನ್ಯಾಸ, ಉಪಯುಕ್ತತೆಯ ಬಗ್ಗೆ ಖಚಿತ ನಿಲುವು ತಳೆಯುವುದು ಸಾಧ್ಯವೆಂಬುದು ಪರಿಣತರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT