ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ| ವಿರೋಧ ಪಕ್ಷಗಳ ಒಕ್ಕೂಟ: ಸಾಧ್ಯತೆಯ ದಿಕ್ಸೂಚಿ

ಬದ್ಧತೆ, ಸಹನೆ, ಪ್ರಾಮಾಣಿಕತೆ, ಖಚಿತ ಗುರಿಗಳು ಹೊಸ ರಾಜಕಾರಣದ ಹಾದಿ ತೆರೆಯಬಲ್ಲವು
Published : 30 ಜೂನ್ 2023, 1:06 IST
Last Updated : 30 ಜೂನ್ 2023, 1:06 IST
ಫಾಲೋ ಮಾಡಿ
Comments

ಹಿಂದಿನ ನಲವತ್ತು ವರ್ಷಗಳ ಭಾರತದ ಕಾಯಂ ಅಧಿಕಾರಸ್ಥ ರಾಜಕಾರಣಿ ನಿತೀಶ್ ಕುಮಾರ್ ಕೊನೆಗೂ ಪಟ್ನಾದಲ್ಲಿ 15 ವಿರೋಧ ಪಕ್ಷಗಳನ್ನು ಒಟ್ಟಿಗೆ ಸೇರಿಸಿದ್ದಾರೆ. ಅಧಿಕಾರದಲ್ಲಿ ಉಳಿಯಲು ಎಲ್ಲ ರಾಜಕೀಯ ಅಸ್ತ್ರಗಳನ್ನೂ ಬಳಸಿರುವ ನಿತೀಶ್, ಈ ಸಲ ದೇಶದ ಅತ್ಯುನ್ನತ ಹುದ್ದೆ ಹಿಡಿಯುವ ಮಹತ್ವಾಕಾಂಕ್ಷೆಯನ್ನು ಕೊಂಚ ಹಿನ್ನೆಲೆಯಲ್ಲಿಟ್ಟು ದೇಶದುದ್ದಕ್ಕೂ ಓಡಾಡುತ್ತಿದ್ದಾರೆ.

ಡಾ. ನಟರಾಜ್‌ ಹುಳಿಯಾರ್‌
ಡಾ. ನಟರಾಜ್‌ ಹುಳಿಯಾರ್‌

ಬಿಜೆಪಿಯ ಜೊತೆ ಸರಸವಾಡಿದ್ದರೂ ಬಿಹಾರದಲ್ಲಿ ಕೋಮುವಾದಕ್ಕೆ ತಕ್ಕಮಟ್ಟಿಗೆ ಕಡಿವಾಣ ಹಾಕಿದ್ದ ನಿತೀಶ್, ಹಲಬಗೆಯ ರಾಜಕೀಯ ಪಕ್ಷಗಳ ನಾಯಕರನ್ನು ಒಪ್ಪಿಸಬಲ್ಲ ನುಡಿಗಟ್ಟು, ತರ್ಕ, ವಾದಗಳನ್ನು ಬಳಸಬಲ್ಲರು. ಈ ಸಲ ನಿತೀಶ್ ಬಹಳಷ್ಟು ಹೋಮ್‌ವರ್ಕ್ ಮಾಡಿ ಅಖಾಡಕ್ಕಿಳಿದಿದ್ದಾರೆ. 2024ರ ಲೋಕಸಭಾ ಚುನಾವಣೆಗೆ ಮುನ್ನ ಬದಲಾವಣೆಯ ಗಾಳಿ ಸ್ಪಷ್ಟವಾಗಿ ಬೀಸುತ್ತಿರುವುದರ ಜಾಡು ಹಿಡಿದು ಖಚಿತ ಹೆಜ್ಜೆಗಳನ್ನಿಟ್ಟಿದ್ದಾರೆ. ಕೊಂಚ ಚೇತರಿಸಿಕೊಂಡಿರುವ ಲಾಲೂ ಪ್ರಸಾದ್ ಅಖಾಡಕ್ಕೆ ಇಳಿದಿರುವುದು ವಿರೋಧ ಪಕ್ಷಗಳ ಒಕ್ಕೂಟದ ಬಲ ಹೆಚ್ಚಿಸಿದೆ.

ಹಲವು ಪಕ್ಷಗಳು ಒಗ್ಗೂಡಿ ಕೇಂದ್ರದಲ್ಲಿ ಆಡಳಿತ ಹಿಡಿಯುವ ಪರಿಪಾಟ 1977ರಿಂದಲೂ ನಡೆದುಕೊಂಡು ಬಂದಿದೆ, ಇವತ್ತಿಗೂ ಮುಂದುವರಿದಿದೆ. ಹಿಂದಿನ ಎರಡು ಅವಧಿಯಲ್ಲಿ ಬಿಜೆಪಿ ಕೇಂದ್ರದಲ್ಲಿ ಸರ್ಕಾರ ರಚಿಸುವಷ್ಟು ಬಹುಮತ ಪಡೆದಿದ್ದರೂ, ಅದು ಕೂಡ ಕೇಂದ್ರ, ರಾಜ್ಯಗಳಲ್ಲಿ ಸುಮಾರು ಹದಿನೈದಿಪ್ಪತ್ತು ಪಕ್ಷಗಳ ಕೂಟವಾಗಿದೆ. ಬಿಜೆಪಿ ಹಲವು ರಾಜ್ಯಗಳಲ್ಲಿ ಸ್ಥಳೀಯ ಪಕ್ಷಗಳ ಜೊತೆಗಿನ ಹೊಂದಾಣಿಕೆಯಿಂದ ಆಡಳಿತ ನಡೆಸುತ್ತಿದೆ. ಅದು ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರಗಳಲ್ಲಿ ಪಕ್ಷಾಂತರದ ಮೂಲಕ ಅಧಿಕಾರ ಪಡೆದ ಅಸಹ್ಯ ಕೂಡ ನಮ್ಮ ಕಣ್ಣ ಮುಂದಿದೆ. ಹೀಗಾಗಿ ವಿರೋಧ ಪಕ್ಷಗಳ ಒಕ್ಕೂಟವನ್ನು ತಮಾಷೆ ಮಾಡುವ ಯಾವ ಹಕ್ಕೂ ಬಿಜೆಪಿಗಿಲ್ಲ.

ಹೊಸ ಒಕ್ಕೂಟದಲ್ಲಿರುವ ವಿರೋಧ ಪಕ್ಷಗಳು ಕೇಂದ್ರದಲ್ಲಿ ಅಧಿಕಾರದಲ್ಲಿಲ್ಲ ಎನ್ನುವುದನ್ನು ಬಿಟ್ಟರೆ, ಉಳಿದಂತೆ ಅವು ಹಲವು ರಾಜ್ಯಗಳಲ್ಲಿ ಆಡಳಿತ ಪಕ್ಷಗಳಾಗಿವೆ. ಎಎಪಿ ದೆಹಲಿ, ಪಂಜಾಬ್‌ನಲ್ಲಿ ಅಧಿಕಾರದಲ್ಲಿದೆ. ಕಾಂಗ್ರೆಸ್ ನಾಲ್ಕು ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ತಮಿಳುನಾಡು, ಜಾರ್ಖಂಡ್, ಬಿಹಾರ ರಾಜ್ಯಗಳಲ್ಲಿ ಮೈತ್ರಿ ಸರ್ಕಾರದ ಭಾಗವಾಗಿದೆ. ತೃಣಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿದೆ. ಡಿಎಂಕೆ ತಮಿಳುನಾಡಿನಲ್ಲಿ, ಜಾರ್ಖಂಡ್ ಮುಕ್ತಿ ಮೋರ್ಚಾ ಜಾರ್ಖಂಡ್‌ನಲ್ಲಿ, ಆರ್‌ಜೆಡಿ- ಜೆಡಿಯು ಬಿಹಾರದಲ್ಲಿ ಅಧಿಕಾರದಲ್ಲಿವೆ. ಸಮಾಜವಾದಿ ಪಕ್ಷ ಉತ್ತರಪ್ರದೇಶದ ಪ್ರಧಾನ ವಿರೋಧ ಪಕ್ಷವಾಗಿದೆ.

ಇದೆಲ್ಲದರ ಜೊತೆಗೆ, ನಿತೀಶ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ದಶಕಗಳ ರಾಜಕೀಯಾನುಭವ ಹಾಗೂ ಸಹನೆಯ ರಾಜಕಾರಣ ಒಕ್ಕೂಟವನ್ನು ಸಮರ್ಥವಾಗಿ ಮುನ್ನಡೆಸಬಲ್ಲವು. ಹಿಂದಿನ ವರ್ಷ ಅನಿರೀಕ್ಷಿತವಾಗಿ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಪಕ್ಷದಲ್ಲಿ ಅಪರೂಪದ ಹೊಂದಾಣಿಕೆಯ ವಾತಾವರಣವನ್ನು ಸಮರ್ಥವಾಗಿ ನಿರ್ಮಿಸಿದ್ದಾರೆ. ಇದೀಗ ಛತ್ತೀಸಗಢದಲ್ಲಿ ಭೂಪೇಶ್ ಬಘೇಲ್ ನೇತೃತ್ವದ ಸರ್ಕಾರದಲ್ಲಿ ಮತ್ತೊಬ್ಬ ಪ್ರಭಾವಶಾಲಿ ನಾಯಕ ಸಿಂಗ್ ದೇವೊ ಅವರನ್ನು ಉಪಮುಖ್ಯಮಂತ್ರಿ ಮಾಡಿರುವ ಖರ್ಗೆ, ಛತ್ತೀಸಗಢದ ವಿಧಾನಸಭಾ, ಲೋಕಸಭಾ ಚುನಾವಣೆಗಳೆರಡರಲ್ಲೂ ಪಕ್ಷದ ಗೆಲುವಿಗೆ ಹಾದಿ ನಿರ್ಮಿಸಿದ್ದಾರೆ.

ಇನ್ನು ನಿತೀಶ್ ತಂಡ ರೂಪಿಸಿರುವ ಚುನಾವಣಾ ಕ್ಷೇತ್ರಗಳ ಹಂಚಿಕೆಯ ಸೂತ್ರ ಕೂಡ ವೈಜ್ಞಾನಿಕವಾಗಿದೆ: ಪ್ರತಿ ರಾಜ್ಯದ ಲೋಕಸಭಾ ಕ್ಷೇತ್ರಗಳಲ್ಲಿ ಯಾವ ಪಕ್ಷದ ವೋಟು ಗಳಿಕೆ ಈವರೆಗೆ ಎಷ್ಟಿದೆಯೆಂಬ ಅಂಕಿ-ಅಂಶಗಳ ಖಚಿತ ಲೆಕ್ಕಾಚಾರ; ಆ ಆಧಾರದಲ್ಲಿ ವಸ್ತುನಿಷ್ಠವಾಗಿ ಸೀಟು ಹಂಚಿಕೆ. ಒಕ್ಕೂಟ ಒಪ್ಪಿದ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಎಲ್ಲ ಪಕ್ಷಗಳೂ ಬದ್ಧತೆಯಿಂದ ಕೆಲಸ ಮಾಡಬೇಕು. ಒಕ್ಕೂಟದಲ್ಲಿರುವ ಎಲ್ಲ ಪಕ್ಷಗಳ ವೋಟುಗಳೂ ಒಬ್ಬ ಸಾಮಾನ್ಯ ಅಭ್ಯರ್ಥಿಗೆ ವರ್ಗಾವಣೆಯಾಗಬೇಕು. ಈ ಸೂತ್ರ ಬಿಹಾರ, ತಮಿಳುನಾಡಿನ ಕಳೆದ ವಿಧಾನಸಭಾ ಚುನಾವಣೆಗಳಲ್ಲಿ ದಕ್ಷವಾಗಿ ಕೆಲಸ ಮಾಡಿದೆ. ನಿತೀಶ್ ಅವರ ಈ ಸೂತ್ರಕ್ಕೆ ಸದ್ಯಕ್ಕೆ ಒಕ್ಕೂಟದ ಪಕ್ಷಗಳ ಒಪ್ಪಿಗೆ ಇರುವಂತಿದೆ.

ಇನ್ನು ದೇಶದುದ್ದಕ್ಕೂ ಓಡಾಡಿ ಇಡೀ ಒಕ್ಕೂಟದ ಅಭ್ಯರ್ಥಿಗಳತ್ತ ಮತಗಳನ್ನು ತಿರುಗಿಸಬಲ್ಲ ನಾಯಕರ ಪಡೆಯೇ ಇಲ್ಲಿದೆ. ರಾಹುಲ್ ಇವರ ಮುಂಚೂಣಿಯಲ್ಲಿದ್ದಾರೆ. ಕೊಂಚ ಸೆಡವು ಬಿಟ್ಟು, ಉದಾರವಾಗಿ ನಡೆದುಕೊಂಡರೆ, ಅರವಿಂದ ಕೇಜ್ರಿವಾಲ್ ದೇಶದುದ್ದಕ್ಕೂ ಒಕ್ಕೂಟಕ್ಕೆ ಮಧ್ಯಮ ವರ್ಗದ ಮತಗಳನ್ನು ಸೆಳೆಯಬಲ್ಲರು. ಕೇಜ್ರಿವಾಲ್ ಎತ್ತರದ ನಾಯಕರಾಗಬೇಕೆಂದರೆ, ಪಟ್ನಾ ಸಭೆಯಲ್ಲಿ ಕಾಂಗ್ರೆಸ್ಸನ್ನು ಮಣಿಸಲು ಅನುಸರಿಸಿದ ಪಿಳ್ಳೆ ನೆವವನ್ನು ಕೈಬಿಡಬೇಕು. ‘ಮಾಡು ಇಲ್ಲವೆ ಮಡಿ’ಯ ದೊಡ್ಡ ಚುನಾವಣಾ ಗುರಿ ಎದುರಿಗಿರುವಾಗ ಸಣ್ಣಪುಟ್ಟ ಕಲಹಗಳಲ್ಲಿ ಕಾಲ ಕಳೆಯುವುದು ಮುತ್ಸದ್ದಿಗಳ ಲಕ್ಷಣವಲ್ಲ. ಈ ಮಾತು ಉಳಿದವರಿಗೂ ಅನ್ವಯಿಸುತ್ತದೆ.

ಅಷ್ಟೇ ಮುಖ್ಯವಾಗಿ, ಒಕ್ಕೂಟ ನಿಜವಾದ ಅರ್ಥದಲ್ಲಿ ದೇಶ ನವನಿರ್ಮಾಣದ ಒಕ್ಕೂಟವಾದಾಗ ಮಾತ್ರ ಜನ ದೊಡ್ಡ ಮಟ್ಟದಲ್ಲಿ ಒಕ್ಕೂಟದೆಡೆಗೆ ಓಡೋಡಿ ಬರುತ್ತಾರೆ. ಕರ್ನಾಟಕದ ಫಲಿತಾಂಶದ ನಂತರ ಈ ಹೊಸ ದಿಕ್ಸೂಚಿಯನ್ನು ಗ್ರಹಿಸಿ ಬೆಚ್ಚಿದ ಬಿಜೆಪಿ, ಜನತಾದಳ, ಅಕಾಲಿದಳಗಳನ್ನೂ ತನ್ನ ಕೂಟಕ್ಕೆ ಆಹ್ವಾನಿಸಿದೆ! ಈ ಬೆಳವಣಿಗೆ ನೋಡಿದರೆ, ‘ವಿರೋಧಿ ಒಕ್ಕೂಟದಲ್ಲಿ ಪ್ರಧಾನಿ ಪಟ್ಟಕ್ಕೆ ಯಾರಿದ್ದಾರೆ?’ ಎಂಬ ಬಿಜೆಪಿ- ಬಿಜೆಪಿಪರ ಮಾಧ್ಯಮಗಳ ಹುಸಿ ಅಟ್ಟಹಾಸ ಈ ಚುನಾವಣೆಯಲ್ಲಿ ಮುಖ್ಯವಾಗಲಾರದು ಎನ್ನಿಸುತ್ತದೆ.

ಪ್ರಧಾನಿ ಪಟ್ಟದ ಪ್ರಶ್ನೆಯನ್ನು ಯಾವ ಪಕ್ಷ ಹೆಚ್ಚುಹೆಚ್ಚು ಸೀಟುಗಳನ್ನು ಪಡೆಯುತ್ತದೆ ಎಂಬುದರ ಮೇಲೋ, ಸಾಮರ್ಥ್ಯದ ಮೇಲೋ ಒಮ್ಮತದಿಂದ ನಿರ್ಧರಿಸಬಹುದು. ಈ ಒಕ್ಕೂಟದಲ್ಲಿ ಪ್ರಧಾನಿ ಪಟ್ಟಕ್ಕೆ ಅರ್ಹರಾದ ಸಮರ್ಥ ನಾಯಕರಿದ್ದಾರೆ. ‘ಭಾರತ್ ಜೋಡೊ’ ಯಾತ್ರೆಯ ಪ್ರೀತಿ ಸಂದೇಶದಿಂದ ರಾಹುಲ್ ಗಾಂಧಿಯವರ ವರ್ಚಸ್ಸು ಬಹು ದೊಡ್ಡ ಮಟ್ಟದಲ್ಲಿ ಜಿಗಿದಿರುವುದನ್ನು ಸಮೀಕ್ಷೆಗಳು ತೋರಿಸಿವೆ. ಕೇಂದ್ರ, ರಾಜ್ಯಗಳಲ್ಲಿ ದಶಕಗಟ್ಟಲೆ ಅಧಿಕಾರ ನಡೆಸಿರುವ ನಿತೀಶ್ ಹಾಗೂ ಈಚಿನ ವರ್ಷಗಳಲ್ಲಿ ರೂಪುಗೊಂಡಿರುವ ಕೇಜ್ರಿವಾಲ್ ಈ ಇಬ್ಬರ ರಾಷ್ಟ್ರೀಯ ವರ್ಚಸ್ಸು ಕೂಡ ಬೆಳೆದಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಪಕ್ಷದಲ್ಲಿ ಮಾತುಕತೆಯ ಸೌಹಾರ್ದ ವಾತಾವರಣ ನಿರ್ಮಿಸಿ ಜನಪ್ರಿಯರಾಗಿದ್ದಾರೆ. ಮಧ್ಯಪ್ರದೇಶದ ದಿಗ್ವಿಜಯ್ ಸಿಂಗ್, ಎರಡನೇ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ದೊಡ್ಡ ನಾಯಕರಾಗಿ ಬೆಳೆದಿರುವ ಸಿದ್ದರಾಮಯ್ಯ… ಹೀಗೆ ಹಲವು ದಕ್ಷ ನಾಯಕರಿದ್ದಾರೆ. ಡಿಎಂಕೆಯ ಸ್ಟಾಲಿನ್ ಜನಪ್ರಿಯತೆ ಕಾಯ್ದಿಟ್ಟುಕೊಂಡಿದ್ದಾರೆ. ಇವರಲ್ಲಿ ಯಾರಾದರೂ ಪ್ರಧಾನಿ ಸ್ಥಾನಕ್ಕೆ ಅರ್ಹರಾಗಬಲ್ಲರು; ಒಕ್ಕೂಟಕ್ಕೆ ಹೊಸ ಮತದಾರರನ್ನು ಸೆಳೆಯಬಲ್ಲರು.  ಶರದ್ ಪವಾರ್, ಉದ್ಧವ್ ಠಾಕ್ರೆ ಥರದವರು ಅಕ್ಕಪಕ್ಕದ ರಾಜ್ಯಗಳಲ್ಲೂ ಪ್ರಭಾವ ಬೀರಬಲ್ಲರು.

ಒಕ್ಕೂಟದಲ್ಲಿ ಭಾಗಿಯಾಗಿರುವ ಕಮ್ಯುನಿಸ್ಟ್ ಪಕ್ಷಗಳು ಸಂಘಟನಾ ಶಕ್ತಿ, ತಾತ್ವಿಕ ಭಾಷೆ, ಸಾಮಾಜಿಕ ಜಾಲತಾಣಗಳ ಮೂಲಕ ದೇಶದಾದ್ಯಂತ ಅಭಿಪ್ರಾಯ ರೂಪಿಸುವ ಕ್ರಿಯಾಶೀಲ ಪಡೆಗಳನ್ನು ರೂಪಿಸಬಲ್ಲವು. ದೇಶದ ರೈತ ಚಳವಳಿ, ದಲಿತ, ಪ್ರಗತಿಪರ ಚಳವಳಿಗಳು ಸ್ವಯಂಪ್ರೇರಿತವಾಗಿ ಒಕ್ಕೂಟದ ಪರ ನಿಲ್ಲಬಲ್ಲವು. ನೊಂದಿರುವ ಅಲ್ಪಸಂಖ್ಯಾತರಂತೂ ಈ ಬೆಳವಣಿಗೆಯನ್ನು ಮನದುಂಬಿ ಬೆಂಬಲಿಸಬಲ್ಲರು.

ಈ ಎಲ್ಲರೂ ಒಗ್ಗೂಡಿ ರೂಪಿಸಬಲ್ಲ ದೇಶಜೋಡಣೆಯ ಹೊಸ ರಾಜಕಾರಣದ ಸಾಧ್ಯತೆಯಿಂದ ಇಡೀ ದೇಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟಕ್ಕೆ ದೊಡ್ಡ ಬಲ ಮೂಡಬಹುದು. ಹೊಸ ಅಲೆ ಏಳಬಹುದು. ಇದಕ್ಕೆ ಕರ್ನಾಟಕವೇ ಸಮರ್ಥ ಮಾದರಿಯನ್ನು ತೋರಿಸಿದೆ. ಕಾಂಗ್ರೆಸ್, ಕರ್ನಾಟಕದಲ್ಲಿ ಖಚಿತ ಆಡಳಿತ ವಿರೋಧಿ ಅಲೆ ರೂಪಿಸಿ, ಸ್ಪಷ್ಟವಾದ ಸಾಮರಸ್ಯ, ಸಾಮಾಜಿಕ ನ್ಯಾಯದ ಸಂದೇಶ ಕೊಟ್ಟು, ಚುರುಕಾಗಿ ಕೆಲಸ ಮಾಡತೊಡಗಿದೆ. ಈ ಕರ್ನಾಟಕ ಮಾದರಿಯು ಮಧ್ಯಪ್ರದೇಶದ ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಮುಖ್ಯ ಪಾತ್ರ ವಹಿಸಲಿದೆ. ಕರ್ನಾಟಕದಂತೆಯೇ ಪಕ್ಷಾಂತರಿ ಸರ್ಕಾರಗಳನ್ನು ಸೋಲಿಸುವ ಸಾಧ್ಯತೆಗಳು ಮಧ್ಯಪ್ರದೇಶ, ಮಹಾರಾಷ್ಟ್ರಗಳಲ್ಲೂ ಹೆಚ್ಚಿವೆ.

ರಾಜಕೀಯ ಎನ್ನುವುದು ಅಂತಿಮವಾಗಿ ಅಧಿಕಾರದ ಆಟವಿರಬಹುದು. ಆದರೆ ಎಲ್ಲ ಕಾಲದಲ್ಲೂ ರಾಜಕೀಯಕ್ಕೆ ದೇಶದ ಜನರನ್ನು ಬೆಸೆಯುವ ಹಾಗೂ ದೇಶದ ಸಕಲ ಸಮಸ್ಯೆಗಳಿಗೂ ನಿಜವಾದ ಪರಿಹಾರ ಹುಡುಕುವ ಆದ್ಯ ಕರ್ತವ್ಯವಿದೆ. ಈ ರಾಷ್ಟ್ರೀಯ ಸಂದೇಶವನ್ನು ದೇಶದುದ್ದಕ್ಕೂ ಹಬ್ಬಿಸುವಲ್ಲಿ ಒಕ್ಕೂಟ ಸಫಲವಾದರೆ ಹೊಸ ಬದಲಾವಣೆಯ ಅಲೆಯನ್ನು ಯಾವ ಶಕ್ತಿಗಳೂ ತಡೆಯಲಾರವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT