ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ: ಉತ್ತಮ ಆರೋಗ್ಯಕ್ಕೆ ಹೊಸ ಆಹಾರ ಸೂತ್ರ

ಜನರನ್ನು ಆರೋಗ್ಯಕರ ಆಹಾರಾಭ್ಯಾಸದತ್ತ ತಿರುಗಿಸಬೇಕಾದ ಕಠಿಣ ಸವಾಲು ಸರ್ಕಾರದ ಮುಂದಿದೆ
Published 3 ಜೂನ್ 2024, 0:19 IST
Last Updated 3 ಜೂನ್ 2024, 0:19 IST
ಅಕ್ಷರ ಗಾತ್ರ

ನಮ್ಮ ದೇಶದ ಜನ ರೋಗರುಜಿನಗಳಿಂದ ದೂರವಾಗಿ, ಆರೋಗ್ಯವಂತರಾಗಿ ಬದುಕಲು ಎಂತಹ ಆಹಾರವನ್ನು ಸೇವಿಸಬೇಕು? ಹೈದರಾಬಾದ್‍ನ, 106 ವರ್ಷಗಳ ಇತಿಹಾಸವಿರುವ ಪ್ರತಿಷ್ಠಿತ ‘ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್’ (ಎನ್‍ಐಎನ್) ಈ ಪ್ರಶ್ನೆಗೆ ಉತ್ತರ ರೂಪವಾಗಿ, 1998ರಲ್ಲಿ ‘ಡಯಟರಿ ಗೈಡ್‍ಲೈನ್ಸ್ ಫಾರ್ ಇಂಡಿಯನ್ಸ್’ ಎಂಬ 140 ಪುಟಗಳ ಕೈಪಿಡಿಯೊಂದನ್ನು ಪ್ರಕಟಿಸಿತು. 2011ರಲ್ಲಿ ಈ ಕೈಪಿಡಿಯ ಪರಿಷ್ಕೃತ ಎರಡನೆಯ ಆವೃತ್ತಿ ಪ್ರಕಟಗೊಂಡಿತು. ಇದೀಗ, ಮೇ ತಿಂಗಳ 7ರಂದು, ‘ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್’ (ಐಸಿಎಂಆರ್) ಮತ್ತು ‘ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್’ ಜೊತೆಯಾಗಿ ಸೇರಿ, ಭಾರತದ ಪ್ರಜೆಗಳಿಗೆ ಪೋಷಕಾಂಶಭರಿತ, ಸಮತೋಲಿತ ಆಹಾರದ ಮಾರ್ಗದರ್ಶಕ ಸೂತ್ರಗಳನ್ನು ಪ್ರಕಟಿಸಿವೆ.

2011- 24ರ ನಡುವಿನ 13 ವರ್ಷಗಳ ಅವಧಿಯಲ್ಲಿ, ನಮ್ಮ ಜನರ ಜೀವನಶೈಲಿ ಮತ್ತು ಆಹಾರಾಭ್ಯಾಸದಲ್ಲಿ ಆಗಿರುವ ಬದಲಾವಣೆಗಳು, ಆಹಾರ- ಪೋಷಕಾಂಶ- ವೈದ್ಯವಿಜ್ಞಾನ ಕ್ಷೇತ್ರಗಳಲ್ಲಿ ಆಗಿರುವ ಸಂಶೋಧನೆಗಳನ್ನು ಗಮನದಲ್ಲಿ ಇಟ್ಟುಕೊಂಡು, 148 ಪುಟಗಳ ನೂತನ ಕೈಪಿಡಿಯನ್ನು ಹೊರತರಲಾಗಿದೆ.

ಈ ಕೈಪಿಡಿಯಲ್ಲಿ, ನಾವು ಬಳಸಬೇಕಾದ ಆಹಾರಕ್ಕೆ ಸಂಬಂಧಿಸಿದಂತೆ 17 ಮಾರ್ಗದರ್ಶಿ ಸೂತ್ರಗಳಿವೆ. ಹೊರ ನೋಟಕ್ಕೆ ಈ ಸೂತ್ರಗಳು ಹೊಸವೆನಿಸುವುದಿಲ್ಲ. ಸಕ್ಕರೆ ಮತ್ತು ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡಬೇಕು, ಅಡುಗೆ ಎಣ್ಣೆಯ ಬದಲು ಎಣ್ಣೆಕಾಳುಗಳನ್ನು ಬಳಸುವುದು ಒಳ್ಳೆಯದು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ವಿಶೇಷ ಪೌಷ್ಟಿಕ ಆಹಾರ ನೀಡಬೇಕು, ನಿಯತವಾಗಿ ವ್ಯಾಯಾಮ ಮಾಡಬೇಕು, ಧೂಮಪಾನ, ಮದ್ಯಪಾನ, ತಂಬಾಕು ಸೇವನೆಯಿಂದ ದೂರವಿರಬೇಕು ಎನ್ನುವಂತಹವು ಎಲ್ಲರಿಗೂ ತಿಳಿದಿರುವ ವಿಷಯಗಳೇ. ಇವುಗಳ ಜೊತೆಗೆ, ಹಿಂದಿನ ಎರಡು ದಶಕಗಳಲ್ಲಿ ನಮ್ಮ ಆಹಾರ ಪದ್ಧತಿಯಲ್ಲಿ ಆಗಿರುವ ಬದಲಾವಣೆಯ ಪರಿಣಾಮಗಳ ಬಗ್ಗೆ ಕೈಪಿಡಿ ಜನರನ್ನು ಎಚ್ಚರಿಸುತ್ತದೆ. ನಮ್ಮ ದೇಶದಲ್ಲಿ ಕಂಡುಬರುತ್ತಿರುವ ರೋಗ ರುಜಿನಗಳ ಪೈಕಿ ಶೇ 56.4ರಷ್ಟಕ್ಕೆ ಅನಾರೋಗ್ಯಕರವಾದ ಆಹಾರ ಪದ್ಧತಿಯೇ ನೇರ ಕಾರಣವೆಂದು ಕೈಪಿಡಿ ತಿಳಿಸುತ್ತದೆ. ಪೌಷ್ಟಿಕಾಂಶ ಭರಿತ, ಸಮತೋಲಿತ ಆಹಾರ ಸೇವನೆ ಮತ್ತು ನಿಯತ ವ್ಯಾಯಾಮಗಳಿಂದ ರಕ್ತದ ಏರೊತ್ತಡ, ಕರೋನರಿ ಹೃದಯ ಕಾಯಿಲೆ ಮತ್ತು ಟೈಪ್-2 ಮಧುಮೇಹದ ಪ್ರಕ ರಣಗಳನ್ನು ಶೇ 80ರಷ್ಟು ಕಡಿಮೆ ಮಾಡಬಹುದೆಂದು ಸೂಚಿಸುತ್ತದೆ.

ನಾವು ಸೇವಿಸುವ ವಿವಿಧ ಬಗೆಯ ಆಹಾರ ಪದಾರ್ಥ ಗಳನ್ನು ಪಿರಮಿಡ್ ರೂಪದಲ್ಲಿ ನಿರೂಪಿಸಿದರೆ, ಈ ಮುಂಚಿನ ಮಾರ್ಗದರ್ಶಕ ಸೂತ್ರಗಳಲ್ಲಿ, ಅಕ್ಕಿ, ಗೋಧಿ, ಜೋಳ, ಬೇಳೆಯಾಗದ ಕಾಳಿನಂತಹ ಏಕದಳ ಧಾನ್ಯಗಳು ವಿಶಾಲವಾದ ತಳಭಾಗದಲ್ಲಿದ್ದು, ಅದರ ಮೇಲಿನ ಸ್ವಲ್ಪ ಕಿರಿದಾದ ಹಂತದಲ್ಲಿ ಹಣ್ಣು, ತರಕಾರಿಗಳಿದ್ದವು. 2024ರ ಮಾರ್ಗದರ್ಶಕ ಸೂತ್ರಗಳಲ್ಲಿ ಈ ಎರಡು ಸ್ಥಾನಗಳು ಅದಲು ಬದಲಾಗಿವೆ. ಇದೀಗ ಮೊದಲ ಸ್ಥಾನವನ್ನು ಧಾರಾಳ ಪ್ರಮಾಣದಲ್ಲಿ ಹಣ್ಣು, ತರಕಾರಿಗಳಿಗೆ ನೀಡಿ ಆನಂತರದ ಸ್ಥಾನವನ್ನು ಏಕದಳ ಮತ್ತು ದ್ವಿದಳ ಧಾನ್ಯಗಳಿಗೆ ನೀಡಲಾಗಿದೆ. ನಮ್ಮ ಆಹಾರದಲ್ಲಿರುವ ಅಕ್ಕಿ, ಜೋಳ, ಗೋಧಿಯಂತಹವುಗಳ ಪ್ರಮಾಣವನ್ನು ಸದ್ಯದ ಶೇ 50- 70ರಿಂದ ಶೇ 45ಕ್ಕೆ ಇಳಿಸಬೇಕೆಂಬ ಸೂಚನೆಯಿದೆ. ಪಿರಮಿಡ್‍ನ ಮೂರನೆಯ ಮಟ್ಟದಲ್ಲಿ ಪ್ರಾಣಿ ಮೂಲದ ಆಹಾರ ಪದಾರ್ಥಗಳು ಮತ್ತು ಎಣ್ಣೆಗಳಿದ್ದು, ಅಂತಿಮ ಹಂತದಲ್ಲಿ, ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಳಸಬೇಕಾದ ಸಕ್ಕರೆ, ಉಪ್ಪು, ಮೇದಸ್ಸು ಅಥವಾ ಕೊಬ್ಬಿನ ಅಂಶಗಳನ್ನು ಒಳಗೊಂಡ ಆಹಾರ ಪದಾರ್ಥ ಗಳಿವೆ. ಅತಿಯಾಗಿ ಸಂಸ್ಕರಿಸಿದ ಆಹಾರ ಪದಾರ್ಥಗಳು (ಅಲ್ಟ್ರಾ ಪ್ರೋಸೆಸ್ಡ್ ಫುಡ್) ಮತ್ತು ಆಹಾರ ಕೆಡದಂತೆ ಕಾಪಾಡಲು ಹೆಚ್ಚಿನ ಪ್ರಮಾಣದಲ್ಲಿ ಸಂರಕ್ಷಕ ವಸ್ತುಗಳನ್ನು ಬಳಸುವ ‘ಪ್ಯಾಕೇಜ್ಡ್’ ಆಹಾರ ಪದಾರ್ಥಗಳ ಬಗ್ಗೆ ವಿಶೇಷ ಎಚ್ಚರಿಕೆಯನ್ನು ನೀಡಲಾಗಿದೆ.

ಮಾರ್ಗದರ್ಶಕ ಸೂತ್ರಗಳಲ್ಲಿನ ಅತಿಮುಖ್ಯವಾದ ಅಂಶವೆಂದರೆ, ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ರೋಟೀನ್ ಪೂರಕ ಪದಾರ್ಥಗಳನ್ನು (ಪ್ರೋಟೀನ್ ಸಪ್ಲಿಮೆಂಟ್ಸ್) ವೈದ್ಯರ ಸೂಚನೆ, ಮೇಲ್ವಿಚಾರಣೆಯಿಲ್ಲದೆ ಬಳಸಲೇಬಾರದೆಂಬ ಸ್ಪಷ್ಟವಾದ ಎಚ್ಚರಿಕೆ ನೀಡಿರುವುದು. 2023ರಲ್ಲಿ ನಮ್ಮ ದೇಶದಲ್ಲಿ ಪ್ರೋಟೀನ್ ಪೂರಕ ಪದಾರ್ಥಗಳ ಮಾರುಕಟ್ಟೆಯ ಮೌಲ್ಯ ₹ 33,000 ಕೋಟಿ ಇತ್ತು. 2032ರ ವೇಳೆಗೆ ಇದು 1.28 ಲಕ್ಷ ಕೋಟಿಗೇರುವ ನಿರೀಕ್ಷೆಯಿದೆ. ಕಟ್ಟುನಿಟ್ಟಾದ ಗುಣಮಟ್ಟ ನಿಯಂತ್ರಣ, ಸುರಕ್ಷಾ ಕ್ರಮಗಳು ಇಲ್ಲದಿರುವ ಮಾರುಕಟ್ಟೆಯಿಂದ ಪ್ರೋಟೀನ್ ಪೂರಕ ಪದಾರ್ಥಗಳನ್ನು ಪಡೆದು, ದೀರ್ಘಕಾಲದವರೆಗೆ ಬಳಸಿದರೆ ಮೂಳೆಗಳಲ್ಲಿ ಖನಿಜಾಂಜ ಕಡಿಮೆಯಾಗಿ, ಮೂತ್ರಪಿಂಡದ ಸಮಸ್ಯೆಗಳು ಎದುರಾಗುತ್ತವೆ ಎಂಬುದನ್ನು ಸಂಶೋಧನೆಗಳು ಸ್ಪಷ್ಟವಾಗಿ ತೋರಿಸಿವೆ ಎಂದು ಎನ್‍ಐಎನ್ ಸಂಸ್ಥೆಯ ನಿರ್ದೇಶಕರಾದ ಡಾ. ಹೇಮಲತಾ ಎಚ್ಚರಿಸಿದ್ದಾರೆ.

ಕೇರಳದ ರಾಜಗಿರಿ ಆಸ್ಪತ್ರೆಯ ‘ಲಿವರ್ ಇನ್‌ಸ್ಟಿಟ್ಯೂಟ್’ ಮತ್ತು ಅಮೆರಿಕದ ‘ಹ್ಯೂಮನ್ ಬಿಹೇವಿಯರ್ ಆ್ಯಂಡ್ ಚೇಂಜ್’ ಸಂಸ್ಥೆಗಳು, ‘ಸಿಟಿಜನ್ ಪ್ರೋಟೀನ್ ಪ್ರಾಜೆಕ್ಟ್’ ಹೆಸರಿನಲ್ಲಿ, ನಮ್ಮ ದೇಶದ ಮಾರುಕಟ್ಟೆಯಲ್ಲಿರುವ, 36 ಬ್ರ್ಯಾಂಡ್‍ಗಳಿಗೆ ಸೇರಿದ ಪ್ರೋಟೀನ್ ಪೂರಕ ಪದಾರ್ಥಗಳ ವೈಜ್ಞಾನಿಕ ವಿಶ್ಲೇಷಣೆ ನಡೆಸಿವೆ. ಯಾವುದೇ ವಾಣಿಜ್ಯ ಸಂಸ್ಥೆಗಳ ಹಣಕಾಸಿನ ನೆರವನ್ನು ಪಡೆಯದೆ, ಸಂಪೂರ್ಣವಾಗಿ ಸ್ವಂತ ಸಂಪನ್ಮೂಲದಿಂದ ನಡೆಸಿರುವ ಈ ಅಧ್ಯಯನದ ಫಲಿತಾಂಶಗಳು, ಅಮೆರಿಕದ ಬಾಲ್ಟಿಮೋರ್‌ನಿಂದ ಪ್ರಕಟವಾಗುವ ‘ಮೆಡಿಸಿನ್’ ಸಂಶೋಧನಾ ಜರ್ನಲ್‍ನಲ್ಲಿ ಏಪ್ರಿಲ್ ಮೊದಲ ವಾರ ಪ್ರಕಟಗೊಂಡಿವೆ. ವೈಜ್ಞಾನಿಕ ಪರಿಶೀಲನೆಗೆ ಒಳಗಾದ 36 ಬ್ರ್ಯಾಂಡ್‍ಗಳ ಪೈಕಿ ಶೇ 70ರಷ್ಟರಲ್ಲಿ, ಲೇಬಲ್ ಮೇಲಿರುವ ಮಾಹಿತಿ ಮತ್ತು ಪ್ರೋಟೀನ್ ಪೂರಕ ಪದಾರ್ಥಗಳಲ್ಲಿರುವ ವಸ್ತುಗಳ ನಡುವೆ ವ್ಯತ್ಯಾಸವಿದೆ. ಶೇ 14ರಲ್ಲಿ ಶಿಲೀಂಧ್ರಕಾರಕ ವಿಷವಸ್ತುಗಳಿವೆ. ಶೇ 8ರಷ್ಟು ಬ್ರ್ಯಾಂಡ್‍ಗಳಲ್ಲಿ ಕೀಟನಾಶಕ ಮತ್ತು ಭಾರಲೋಹಗಳ ಶೇಷಾಂಶಗಳಿವೆ.

ಈ ಪ್ರೋಟೀನ್ ಪೂರಕ ಪದಾರ್ಥಗಳ ಉತ್ಪಾದಕರು ಅವುಗಳಲ್ಲಿರುವ ವಸ್ತುಗಳು, ಅವುಗಳ ಪ್ರಮಾಣ, ಗುಣಮಟ್ಟದಂತಹವುಗಳಿಗೆ ಸಂಬಂಧಿಸಿದಂತೆ ನಡೆಸಿರುವ ಪರೀಕ್ಷೆಗಳ ವಿವರಗಳನ್ನು ‘ಫುಡ್ ಸೇಫ್ಟಿ ಆ್ಯಂಡ್ ಸ್ಟ್ಯಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯಾ’ (ಎಫ್‍ಎಸ್‍ಎಸ್‍ಎಐ) ಸಂಸ್ಥೆಗೆ ನೀಡಿ, ತಮ್ಮ ಉತ್ಪನ್ನಗಳ ಬಗ್ಗೆ ಆಶ್ವಾಸನೆ ನೀಡುತ್ತಾರೆ. ಆ ವಿವರಗಳನ್ನುಎಫ್‍ಎಸ್‍ಎಸ್‍ಎಐ ಪರಿಶೀಲಿಸುತ್ತದೆ. ಆದರೆ ಗುಣ ಮಟ್ಟದ ನಿಯಂತ್ರಣಕ್ಕೆ ನಡೆಸಿದ ಪರೀಕ್ಷೆಗಳು, ಫಲಿತಾಂಶಗಳು ಸಂಪೂರ್ಣವಾಗಿ ಅಪಾರದರ್ಶಕವಾಗಿದ್ದು
ಸಾರ್ವಜನಿಕರಿಗೆ ದೊರೆಯುವುದಿಲ್ಲ. ಔಷಧಗಳ ವಿನ್ಯಾಸ, ಉತ್ಪಾದನೆ, ಪ್ರಾಯೋಗಿಕ ಪರೀಕ್ಷೆಯಂತಹವು
ಗಳಲ್ಲಿ ಕಂಡುಬರುವ ಕಟ್ಟುನಿಟ್ಟಾದ ಸುರಕ್ಷಾ ಕ್ರಮಗಳು ಪ್ರೋಟೀನ್ ಸಪ್ಲಿಮೆಂಟ್ಸ್ ಕ್ಷೇತ್ರದಲ್ಲಿ ಕಂಡುಬರುವುದಿಲ್ಲ ಎಂಬುದು ವೈದ್ಯವಿಜ್ಞಾನಿಗಳ ಅಭಿಪ್ರಾಯ.

ವೈದ್ಯರು ಸೂಚಿಸುವ ಕೆಲವು ವಿಶೇಷ ಸಂದರ್ಭಗಳನ್ನು ಹೊರತುಪಡಿಸಿದರೆ, ಪ್ರೋಟೀನ್ ಪೂರಕ ವಸ್ತುಗಳ ಅಗತ್ಯವೇ ಇಲ್ಲವೆಂಬ ಖಚಿತ ನಿಲುವನ್ನು ಐಸಿಎಂಆರ್ ಮತ್ತು ಎನ್‍ಐಎನ್ ಸಂಸ್ಥೆಗಳ ಪರಿಣತರ ತಂಡ ವ್ಯಕ್ತಪಡಿಸುತ್ತದೆ. ಪ್ರೋಟೀನ್, ಸೂಕ್ಷ್ಮ ಪೋಷಕಾಂಶಗಳು ಮತ್ತು ವಿಟಮಿನ್‌ನಂತಹ ಉಳಿದೆಲ್ಲ ಅಗತ್ಯಗಳನ್ನು ಹಣ್ಣು, ತರ ಕಾರಿ, ಏಕದಳ, ದ್ವಿದಳ ಧಾನ್ಯಗಳು, ಸಿರಿಧಾನ್ಯಗಳು, ಗೆಡ್ಡೆ ಗೆಣಸು, ಮೊಟ್ಟೆ, ಮೀನು, ಎಣ್ಣೆಬೀಜಗಳು ಮತ್ತು ಹಾಲಿನ ಉತ್ಪನ್ನಗಳಿಂದ ಪಡೆಯಬಹುದು ಎಂದು ತಿಳಿಸಿದೆ.

ಐಸಿಎಂಆರ್ ಮತ್ತು ಎನ್‍ಐಎನ್ ಪ್ರಕಟಿಸಿರುವ ‘ಡಯಟರಿ ಗೈಡ್‌ಲೈನ್ಸ್’ಗಳ ಬಗ್ಗೆ ಇದೀಗ ವ್ಯಾಪಕವಾದ ಚರ್ಚೆಗಳು ಪ್ರಾರಂಭವಾಗಿವೆ. ಹಣ್ಣು, ತರಕಾರಿಗೆ ಮೊದಲ ಸ್ಥಾನ ನೀಡಿ ಅವುಗಳನ್ನು ಧಾರಾಳವಾಗಿ ಬಳಸಬೇಕೆಂಬ ಸಲಹೆಯಿದ್ದರೂ, ದೇಶದ ಕೋಟ್ಯಂತರ ಬಡ ಕುಟುಂಬಗಳಿಗೆ ಅದು ಅಸಾಧ್ಯ. ಅಂತಹ ಪರಿಸ್ಥಿತಿಯಲ್ಲಿ ಈ ಮಾರ್ಗದರ್ಶಕ ಸೂತ್ರಗಳಿಗೆ ಬರೀ ಅಕಡೆಮಿಕ್ ಮೌಲ್ಯವಿರುತ್ತದೆ ಎಂಬ ಟೀಕೆಯಿದೆ. ಸಾರ್ವಜನಿಕರ ಆರೋಗ್ಯದ ಬಗ್ಗೆ ನಿಜವಾದ ಕಾಳಜಿಯಿದ್ದರೆ, ಹೊಸ ಸೂತ್ರಗಳಲ್ಲಿ ಸೂಚಿಸಿರುವ ಎಲ್ಲ ಪೋಷಕಾಂಶ ಪದಾರ್ಥಗಳನ್ನೂ ಸರ್ಕಾರವು ಪಡಿತರ ವ್ಯವಸ್ಥೆಯ ಮೂಲಕ ಬಡ ಕುಟುಂಬಗಳಿಗೆ ವಿತರಿಸಬೇಕೆಂಬ ಸಲಹೆ ಬಂದಿದೆ.

ಅನಾರೋಗ್ಯಕರ ಎಂದು ತಿಳಿದಿದ್ದರೂ ನಾಲಿಗೆಯ ಚಪಲಕ್ಕಾಗಿ ಜಂಕ್‍ಫುಡ್‍ಗೆ ಮುಗಿಬೀಳುವ ಜನರ ಮನವೊಲಿಸಿ, ಅವರನ್ನು ಆರೋಗ್ಯಕರ ಆಹಾರಾಭ್ಯಾಸದತ್ತ ತಿರುಗಿಸುವುದು ಸರ್ಕಾರದ ಮುಂದಿರುವ ಅತ್ಯಂತ ಕಠಿಣವಾದ ಸವಾಲು. ಅದು ಸಾಧ್ಯವಾಗುವವರೆಗೂ ಮುಂಬರುವ ವರ್ಷಗಳಲ್ಲಿ ರೋಗರುಜಿನಗಳ ಹೊರೆ ಏರುತ್ತಲೇ ಹೋಗುತ್ತದೆ ಎಂಬ ಎಚ್ಚರಿಕೆಯನ್ನು ಐಸಿಎಂಆರ್- ಎನ್‍ಐಎನ್ ತಜ್ಞರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT