ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು–31: ವ್ಯಾವಹಾರಿಕ ಭಕ್ತಿ!

Published : 25 ಸೆಪ್ಟೆಂಬರ್ 2024, 20:53 IST
Last Updated : 25 ಸೆಪ್ಟೆಂಬರ್ 2024, 20:53 IST
ಫಾಲೋ ಮಾಡಿ
Comments

ಒಂದು ಮನ್ಯಾಗ ಕುರಿಮರಿ ಒಂದಿತ್ತು. ಆ ಮನೆಯವರು ಅದನ್ನು ಭಾಳ ಪ್ರೀತಿ ಮಾಡ್ತಿದ್ರು. ತಲಿ ಮ್ಯಾಲ ಕೈಯಾಡಸ್ತಿದ್ರು. ಇದನ್ನು ನೋಡಿದ ಕೊಟ್ಟಿಗೆಯಲ್ಲಿದ್ದ ಆಕಳ ಕರು ತಾಯಿಗೆ, ‘ಆ ಕುರಿ ಮರಿಗೆ ಈ ಮನೆಯವರು ಎಷ್ಟೊಂದು ಪ್ರೀತಿ ಮಾಡ್ತಾರ, ಆದರೆ ನನಗ ಏನೂ ಕಾಳಜಿ ಮಾಡೋದಿಲ್ಲ ಯಾಕ?’ ಎಂದು ಕೇಳಿತಂತೆ. ಅದಕ್ಕೆ ತಾಯಿ ಆಕಳು, ‘ಈಗ ನಿನಗೆ ಗೊತ್ತಾಗಂಗಿಲ್ಲ ಸುಮ್ಮನಿರು’ ಎಂದು ಹೇಳಿ ಹೊರಗೆ ಮೇಯಲು ಹೋಯಿತು. ಆಕಳ ವಾಪಸ್‌ ಬಂದಾಗ ಕರು ನಡುಗುತ್ತಾ ನಿಂತಿತ್ತು. ‘ಯಾಕ ಏನಾತು’ ಎಂದು ಕೇಳಿತು ತಾಯಿ ಆಕಳ. ‘ಈ ಮನುಷ್ಯರು ಹೆಗಲ ಮೇಲೆ ಕೈಹಾಕ್ತಾರ ಅಂದರ ಅವರನ್ನು ಉಳುಸೋದಿಲ್ಲ ಎನ್ನೋದು ಈಗ ನನಗ ಗೊತ್ತಾಗೈತಿ’ ಅಂತು.

ಗಿಡ ಹಣ್ಣು ಕೊಡತೈತಿ ಅಂದರ ಅದಕ್ಕೆ ನೀರು ಹಾಕ್ತೀವಿ. ಇಲ್ಲವಾದರೆ ಒಣಗಲಿ ಬಿಡು ಅಂತೇವಿ. ಆಕಳ ಹಾಲು ಕೊಡುತ್ತಿದ್ದರೆ ಇಟಕೋತೀವಿ ಇಲ್ಲ ಅಂದರ ಕಟುಕರಿಗೆ ಕೊಡ್ತೀವಿ. ಒಂದು ಸಲ ಒಂದು ಮುದಿ ಆಕಳ, ‘ಯಾಕ ನನ್ನನ್ನು ಕಟುಕರಿಗೆ ಕೊಡ್ತಿ. ನನ್ನ ಹಾಲು ಕುಡದಾ ನೀನು ಕಟುಕರಿಗೆ ಕೊಡ್ತಿಯಲ್ಲ ಯಾಕ?’ ಎಂದು ಕೇಳಿತು. ಅದಕ್ಕೆ ಯಜಮಾನ, ‘ನೀ ಮುದುಕಿಯಾದೆಲ್ಲ ಅದಕ್ಕ’ ಎಂದು ಉತ್ತರಿಸಿದ. ‘ನಿನ್ನ ತಾಯಿನೂ ಮುದುಕಿಯಾಗ್ಯಾಳ, ಆಕಿನೂ ಕೊಡ್ತಿಯೇನು? ನನ್ನ ಒಯ್ದು ಕೊಲೆ ಮಾಡೋರು
ಕಟುಕರಲ್ಲ. ನನ್ನ ಹಾಲುಂಡು ಕಟುಕರಿಗೆ ಕೊಡ್ತಿಯಲ್ಲ ನೀನು ಕಟುಕ’ ಎಂದು ಮುದಿ ಆಕಳ ಹೇಳಿತಂತೆ. ಅಂದರೆ ನಮಗೆ ಲಾಭ ಇದ್ದರಷ್ಟೇ ನಾವು ಪ್ರೀತಿ ಮಾಡೋದು.

ನೀವು ಸಾಕಷ್ಟು ಸಂಪತ್ತು ಸಂಪಾದಿಸ್ತೀರಿ. ಆ ಸಂಪತ್ತನ್ನು ಎಲ್ಲಿಡ್ತೀರಿ? ಎಲ್ಲ ಹಣ, ಆಭರಣಗಳನ್ನು ಬೀರು ಒಳಗೆ ಇಟ್ಟು ಲಾಕ್ ಮಾಡ್ತೀರಿ. ಅದಕ್ಕೆ ಕೋಡ್ ವರ್ಡ್, ಪಾಸ್ ವರ್ಡ್ ಎಲ್ಲಾ ಮಾಡಿಸಿರುತ್ತೀರಿ. ಅದರ ಮೇಲೆ ಅಷ್ಟ ಪ್ರೀತಿ ನಿಮಗ. ಸಂಪತ್ತು ಲಾಕ್
ಮಾಡಿಟ್ಟು ನೀವು ಚಾಪೆ ಹಾಸಿಕೊಂಡು ಪಕ್ಕದಲ್ಲಿ ಬ್ಯಾಟರಿ, ಕೋಲು ಇಟ್ಟುಕೊಂಡು ಮಲಗ್ತೀರಿ. ಕಳ್ಳಗ ಗೊತ್ತಾಗಲ್ಲೇನು? ಅವ ಪಿಸ್ತೂಲ ಹಿಡಕಂಡು ಬಂದು ನಿಮ್ಮ ಹಣೆಗೆ ಇಟ್ಟು ‘ಎಲ್ಲೈತಿ ಹಣ, ಒಡವಿ ಕೊಡು, ಬೀರು ಬೀಗ ಕೊಡು’ ಎಂದು ಅಬ್ಬರಿಸಿದರೆ
‘ಅಲ್ಲೈತಿ ನೋಡು’ ಅಂತೀರಿ. ನೀವು ಸಂಪತ್ತನ್ನು ಬಹಳ ಪ್ರೀತಿ ಮಾಡುತ್ತಿದ್ದರೆ ಕಳ್ಳರಿಗೆ ‘ನನಗ ಹೊಡೆದರೆ ಹೊಡೀರಿ. ಸಂಪತ್ತು ಮಾತ್ರ ಮುಟ್ಟಬೇಡಿ, ಬಿಟ್ಟುಬಿಡಿ’ ಅನಬೇಕಿತ್ತು. ಆದರೆ ನೀವು ಹಾಂಗೆ ಹೇಳಲ್ಲ ಯಾಕ? ಯಾಕಂದರೆ ನೀವು ಪ್ರೀತಿ ಮಾಡಿದ್ದು
ನಿಮ್ಮನ್ನ. ಜೀವಕ್ಕೆ ಕುತ್ತು ಬರ್ತದೆ ಎಂದರೆ ಸಂಪತ್ತು ಹೋದರೆ ಹೋಗಲಿ ಅಂತೀರಿ.

ಒಂದು ಮುದುಕಿ ಏಪ್ರಿಲ್ ತಿಂಗಳ ಮಟಮಟ ಮಧ್ಯಾಹ್ನ ದೇವರ ಗುಡಿಗೆ ಹೋಗಿ ‘ಇಗಾ ನಿನಗೆ ಎರಡು ಕಾಯಿ ಒಡೆಸ್ತೀನಿ, ನನ್ನ ಎಮ್ಮಿ ಕರು ಕಳದಾವು ಅದನ್ನು ಹುಡುಕಿಕೊಡು’ ಅಂತ ದೇವರನ್ನು ಕೇಳಿತು. ಬಿಸಿಲಿನಲ್ಲಿ ದೇವರು ಅಡ್ಡಾಡಿ ಈಕಿ ಎಮ್ಮಿ ಕರು ಹುಡುಕಬೇಕು. ಈಕಿ ಗುಡಿಯ ನೆರಳಿನಲ್ಲಿ ಕುಂದ್ರಾಕಿ. ಅಂದರೆ ದೇವರಿಗೆ ಕಾಣಿಕೆ ಯದಕ್ಕ ಕೊಟ್ಟೀವಿ ಅಂದರೆ ಆತ ನಮಗೇನೋ ಕೊಡ್ತಾನಂತ. ನಮ್ಮ ಭಕ್ತಿ ಕೂಡಾ ವ್ಯವಹಾರವಾಗೈತಿ. ಇದು ಸಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT