ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೃದ್ಧಾಪ್ಯದ ವಿಮೆ’: ಗಂಡೋ? ಹೆಣ್ಣೋ?

Last Updated 15 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ಲಿಂಗ ಸಮಾನತೆಯು ಅಭಿವೃದ್ಧಿಯ ಚಾಲಕಶಕ್ತಿ. ಅದು, ಮಹಿಳೆಯರಿಗೆ ಮಾತ್ರ ಸಂಬಂಧಿಸಿದ ಸಂಗತಿಯಲ್ಲ. ಅದರಲ್ಲಿ ಪುರುಷರೂ ಒಳಗೊಳ್ಳುತ್ತಾರೆ. ವಿಶ್ವಬ್ಯಾಂಕ್‌ ತನ್ನ 2012ರ ವಿಶ್ವ ಅಭಿವೃದ್ಧಿ ವರದಿಯಲ್ಲಿ ಲಿಂಗ ಸಮಾನತೆಯನ್ನು ‘ಸ್ಮಾರ್ಟ್ ಎಕನಾಮಿಕ್ಸ್‌’ ಎಂದು ಕರೆದಿದೆ. ಇದು ಅಭಿವೃದ್ಧಿಯ ಸಾಧನವೂ ಹೌದು ಮತ್ತು ಅದರ ಸಾಧ್ಯತೆಯೂ ಹೌದು.

ಜಗತ್ತಿನ, ಭಾರತದ ಮತ್ತು ಕರ್ನಾಟಕದ ಮಟ್ಟದಲ್ಲಿ ಮಹಿಳೆಯರ ಸಾಧನೆ ಶ್ಲಾಘನೀಯ. ಶತಶತಮಾನಗಳ ಮಹಿಳೆಯರ ಹೋರಾಟದ ಫಲವಾಗಿ ಅವರ ಸ್ಥಿತಿಗತಿಯು ಅನೇಕ ನೆಲೆಗಳಲ್ಲಿ ಉತ್ತಮಗೊಂಡಿದೆ. ರಾಜ್ಯದಲ್ಲಿ ಮಹಿಳೆಯರ ಸಾಕ್ಷರತೆ ಪ್ರಮಾಣ 2001ರಲ್ಲಿ ಶೇ 56.87ರಷ್ಟಿದ್ದುದು 2011ರಲ್ಲಿ ಶೇ 68.08ಕ್ಕೇರಿದೆ. ಲಿಂಗ ಸಂಬಂಧಿ ಸಾಕ್ಷರತಾ ಅಂತರ ಕರ್ನಾಟಕದಲ್ಲಿ 2001ರಲ್ಲಿ ಶೇ 19.23 ಅಂಶಗಳಷ್ಟಿದ್ದುದು 2011ರಲ್ಲಿ ಶೇ 14.39 ಅಂಶಕ್ಕಿಳಿದಿದೆ. ಇದೊಂದು ಮಹತ್ವದ ಸಾಧನೆ.

ರಾಜ್ಯದ ಜನಸಂಖ್ಯೆಗೆ ಸಂಬಂಧಿಸಿದ ಇನ್ನೊಂದು ಮಹತ್ವದ ಸಾಧನೆಯೆಂದರೆ, ಒಟ್ಟು ಸಂತಾನೋತ್ಪತ್ತಿ ಪ್ರಮಾಣವು 2004-05ರಲ್ಲಿ 2.1ರಷ್ಟಿದ್ದುದು 2015-16ರಲ್ಲಿ 1.8ಕ್ಕೆ ಇಳಿದಿರುವುದು. ಇದನ್ನು ಜನಸಂಖ್ಯೆಯ ಸಮತೋಲಿತ ಬೆಳವಣಿಗೆ ಪ್ರಮಾಣ ಎನ್ನಲಾಗಿದೆ.

ರಾಜ್ಯದಲ್ಲಿ ಪ್ರತಿ ಸಾವಿರ ಜನನಕ್ಕೆ ಸಾಯುವ ಶಿಶುಗಳ ಪ್ರಮಾಣವು 2004-05ರಲ್ಲಿ 43ರಷ್ಟಿದ್ದರೆ 2015-16ರಲ್ಲಿ ಇದು 28ಕ್ಕೆ ಇಳಿದಿದೆ. ಮಹಿಳೆಯರ ಸರಾಸರಿ ಜೀವನಾಯುಷ್ಯ 2011-2015ರಲ್ಲಿ 70.9 ವರ್ಷಗಳಷ್ಟಾಗಿದ್ದರೆ, ಪುರುಷರ ಜೀವನಾಯುಷ್ಯವು 67.2 ವರ್ಷ. ರಾಜ್ಯದಲ್ಲಿ ಮಹಿಳೆಯರ ಹೋರಾಟವು ನಗರ ಪ್ರದೇಶದ ಮಹಿಳೆಯರಿಗೆ ಮಾತ್ರ ಸೀಮಿತವಾಗಿಲ್ಲ.ಮದ್ಯ ನಿಷೇಧಕ್ಕೆ ಆಗ್ರಹಿಸಿ ಇತ್ತೀಚೆಗೆ ಮಹಿಳೆಯರು ನಡೆಸಿದ ಚಳವಳಿ ಇದಕ್ಕೆ ಒಂದು ನಿದರ್ಶನ.

ರಾಜ್ಯದ ಅನೇಕ ಭಾಗಗಳಲ್ಲಿ ಮಹಿಳಾ ಸಂಘಟನೆಗಳ ನೇತೃತ್ವದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನಕ್ಕೆ ನಡೆದ ಯಶಸ್ವಿ ಹೋರಾಟಗಾಥೆಗಳು ನಮ್ಮ ಮುಂದಿವೆ. ಕೆರೆಗಳ ಪುನರುಜ್ಜೀವನದ ಚಟುವಟಿಕೆಗಳಲ್ಲಿ ಮಹಿಳೆಯರು ಸಕ್ರಿಯ ಪಾತ್ರ ವಹಿಸುತ್ತಿದ್ದಾರೆ. ಇವೆಲ್ಲ ಸಂತಸದ ಸಂಗತಿಗಳಾಗಿವೆ. ಆದರೆ ಇದು ಮಹಿಳೆಯರ ಸ್ಥಿತಿಗತಿಯ ಒಂದು ಮುಖ ಮಾತ್ರ. ಇದಕ್ಕೆ ಮತ್ತೊಂದು ಆಘಾತಕಾರಿ ಮುಖವಿದೆ. ಆ ಮುಖದ ಬಗ್ಗೆಯೂ ಪರಾಮರ್ಶೆ ಮಾಡುವುದು ಅಪೇಕ್ಷಣೀಯ.

ನಾಗರಿಕ ನೋಂದಣಿ ವ್ಯವಸ್ಥೆಯ (ಸಿಆರ್‌ಎಸ್‌) ಮಾಹಿತಿ ಆಧರಿಸಿ ಇದೀಗಪ್ರಕಟವಾಗಿರುವ ವರದಿಯು ಕರ್ನಾಟಕದ ಲಿಂಗ ಅನುಪಾತದ ಬಗ್ಗೆ ಆಘಾತಕಾರಿ ಚಿತ್ರವನ್ನು ನಮ್ಮ ಎದುರಿಗಿಟ್ಟಿದೆ. ಮಕ್ಕಳ ಜನನದಸಂದರ್ಭದಲ್ಲಿನ ಲಿಂಗ ಅನುಪಾತವು 2007ರಲ್ಲಿ 1,004 ರಷ್ಟಿದ್ದುದು 2016ರಲ್ಲಿ 896ಕ್ಕಿಳಿದಿದೆ. ಅಂದರೆ, ಇಲ್ಲಿ ಲಿಂಗ ಅನುಪಾತವು 108 ಅಂಶಗಳಷ್ಟು ಕುಸಿದಿದೆ.ಗಂಭೀರವಾದ ಸಂಗತಿಯೆಂದರೆ, ರಾಜ್ಯದ ನಗರ ಪ್ರದೇಶದಲ್ಲಿ ಜನನದ ಸಂದರ್ಭದಲ್ಲಿನ ಲಿಂಗ ಅನುಪಾತ 913ರಷ್ಟಿದ್ದರೆ ಗ್ರಾಮೀಣ ಪ್ರದೇಶದಲ್ಲಿ ಇದು 833ರಷ್ಟಿದೆ.

ಜನಗಣತಿ ವರದಿ ಮತ್ತು ನಾಗರಿಕ ನೋಂದಣಿ ವರದಿಗಳ ನಡುವೆ ಒಂದು ಭಿನ್ನತೆಯಿದೆ. ಜನಗಣತಿಯು ಒಟ್ಟು ಜನಸಂಖ್ಯೆ ಮತ್ತು 0-6 ವರ್ಷಗಳ ವಯೋಮಾನದ ಮಕ್ಕಳ ಲಿಂಗ ಅನುಪಾತದ ಅಂಕಿಸಂಖ್ಯೆಗಳನ್ನು ನೀಡುತ್ತದೆ. ಆದರೆ ನಾಗರಿಕ ನೋಂದಣಿ ವರದಿಯು ಮಕ್ಕಳು ಹುಟ್ಟಿದ ಸಂದರ್ಭದಲ್ಲಿನ ಲಿಂಗ ಅನುಪಾತದ ವಿವರಗಳನ್ನು ನೀಡುತ್ತದೆ. ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ ಜನನದ ಸಂದರ್ಭದಲ್ಲಿನ ಲಿಂಗ ಅನುಪಾತದಲ್ಲಿ ಕೇರಳ ಮೊದಲನೆಯ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೆಯ ಸ್ಥಾನದಲ್ಲಿದೆ. ಆದರೆ ಕುಸಿತದ ಪ್ರಮಾಣ ಕರ್ನಾಟಕದಲ್ಲಿ ಅಧಿಕವಾಗಿದೆ.

ರಾಜ್ಯದ ಮಕ್ಕಳು ಮತ್ತು ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದ ಮತ್ತೊಂದು ಆತಂಕದ ಸಂಗತಿಯೆಂದರೆ, ಅವರಲ್ಲಿ ಕಂಡುಬರುತ್ತಿರುವ ಅತಿಯಾದ ರಕ್ತಹೀನತೆ (ಅನೀಮಿಯ). ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ 4ರ (2015-16) ಪ್ರಕಾರ, ಕರ್ನಾಟಕದಲ್ಲಿ 6ರಿಂದ 59 ತಿಂಗಳ ವಯೋಮಾನದ ಒಟ್ಟು ಮಕ್ಕಳಲ್ಲಿ ರಕ್ತಹೀನತೆ ಎದುರಿಸುತ್ತಿರುವವರ ಪ್ರಮಾಣ ಶೇ61ರಷ್ಟಿದ್ದರೆ, 15ರಿಂದ 49ರ ವಯೋಮಾನದ ಒಟ್ಟು ಮಹಿಳೆಯರಲ್ಲಿ ಇಂತಹ ಸಮಸ್ಯೆ ಎದುರಿಸುತ್ತಿರುವವರ ಪ್ರಮಾಣ ಶೇ 45.

ಜಿಲ್ಲೆಗಳ ಪೈಕಿ ಯಾದಗಿರಿ, ಬಳ್ಳಾರಿ, ರಾಯಚೂರು ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿ 2015-16ರಲ್ಲಿನ ಒಟ್ಟು ಮಕ್ಕಳಲ್ಲಿ ರಕ್ತಹೀನತೆ ಎದುರಿಸುತ್ತಿರುವವರ ಪ್ರಮಾಣ ಶೇ 70ರಷ್ಟಿದೆ. ಮಹಿಳೆಯರಲ್ಲಿ ಅತ್ಯಧಿಕ ರಕ್ತಹೀನತೆ ರಾಯಚೂರು ಜಿಲ್ಲೆಯಲ್ಲಿದೆ (ಶೇ 58.7). ಇದು ಅತ್ಯಂತ ಗಂಭೀರವಾದ ಸಮಸ್ಯೆ.

ಲಿಂಗ ಅನುಪಾತವನ್ನು ಹೆಚ್ಚಿಸುವ ಉದ್ದೇಶದಿಂದ ಕರ್ನಾಟಕ 2006-07ರಲ್ಲಿ ಭಾಗ್ಯಲಕ್ಷಿ ಯೋಜನೆಯನ್ನು ಜಾರಿಗೊಳಿಸಿದೆ. ಅದರಂತೆ, ಬಿಪಿಎಲ್ ಕುಟುಂಬದಲ್ಲಿ ಹುಟ್ಟಿದ ಹೆಣ್ಣು ಮಗುವಿನ ಹೆಸರಿನಲ್ಲಿ ₹19,300 ಠೇವಣಿಯನ್ನಿಟ್ಟು, ಮಗುವಿಗೆ 18 ವರ್ಷವಾದಾಗ ಬಡ್ಡಿ ಸೇರಿಸಿ ಹೆಚ್ಚಿನ ಮೊತ್ತವನ್ನು ನೀಡಲಾಗುತ್ತದೆ. ಈ ಯೋಜನೆಯಡಿ ಇನ್ನೂ ಅನೇಕ ಅನುಕೂಲಗಳಿವೆ. ಆದರೂ ಈ ಕ್ರಮವು ಹೆಣ್ಣು ಮಕ್ಕಳ ಜನನವನ್ನು ಪ್ರೋತ್ಸಾಹಿಸುವಲ್ಲಿ ವಿಫಲವಾಗಿದೆ. ಇದೇ ರೀತಿ ಕೇಂದ್ರ ಸರ್ಕಾರ ಆರಂಭಿಸಿರುವ ‘ಬೇಟಿ ಬಚಾವೊ ಬೇಟಿ ಪಢಾವೊ’ ಯೋಜನೆಯೂ ವಿಫಲವಾದಂತೆ ಕಾಣುತ್ತದೆ.

ಶಾಸನಾತ್ಮಕ ಕ್ರಮಗಳು ಒಂದು ಹಂತದವರೆಗೆ ಕೆಲಸ ಮಾಡಬಹುದು. ಲಿಂಗ ಅನುಪಾತದ ಕುಸಿತಕ್ಕೆ ಗಂಡು ಮಕ್ಕಳ ಬಗೆಗೆಸಮಾಜದಲ್ಲಿರುವ ಅತಿಯಾದ ವ್ಯಾಮೋಹವು ಒಂದು ಮುಖ್ಯ ಕಾರಣ. ಭ್ರೂಣದಲ್ಲಿನ ದೋಷ ಪತ್ತೆಗಾಗಿ ಬಳಸಲಾಗುತ್ತಿದ್ದ ತಂತ್ರಜ್ಞಾನವನ್ನು ಲಿಂಗ ಪತ್ತೆ ಮತ್ತು ಹೆಣ್ಣು ಭ್ರೂಣದ ಹತ್ಯೆಗೆ ಬಳಸುವ ವಿಕೃತಿ ವ್ಯಾಪಕವಾಗಿದೆ. ಇಷ್ಟಾದರೂ ಇಂತಹ ಅಪರಾಧಗಳನ್ನು ಶಿಕ್ಷಿಸುವ ಕ್ರಮಗಳು ಹೆಚ್ಚಾಗಿ ಕಂಡುಬರುತ್ತಿಲ್ಲ. ಇಂಥ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಇಲ್ಲವೇ ಇಲ್ಲ ಎನ್ನುವಷ್ಟು ಕ್ವಚಿತ್ತಾಗಿದೆ.

ಈ ಸಮಸ್ಯೆಯನ್ನು ಎದುರಿಸಲು ಸರ್ಕಾರವು ಇಂದು ಸಮರೋಪಾದಿಯಲ್ಲಿ ಬಹುಮುಖಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ವಿವಿಧ ಇಲಾಖೆಗಳನ್ನು ಇದರಲ್ಲಿ ತೊಡಗಿಸಿ, ಬಹುಮುಖಿ ಕಾರ್ಯಕ್ರಮ ರೂಪಿಸಿ ಜಾರಿಗೊಳಿಸಬೇಕು. ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಾಗಾರಗಳನ್ನು ಆಯೋಜಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಸಮಸ್ಯೆ ಹೆಚ್ಚು ಗಂಭೀರವಾಗಿರುವುದರಿಂದ ಪಂಚಾಯತ್ ರಾಜ್ ಸಂಸ್ಥೆಗಳು ಇದರಲ್ಲಿ ಭಾಗವಹಿಸುವಂತೆ ಮಾಡಬೇಕು.

ಇದು ಸುಲಭದ ಕೆಲಸವಲ್ಲ. ಏಕೆಂದರೆ ಲಿಂಗ ತಾರತಮ್ಯ ಸಂಸ್ಕೃತಿಯು ಸಮಾಜದಲ್ಲಿ ಆಳವಾಗಿ ಬೇರೂರಿದೆ. ಪಾಲಕರು ಗಂಡುಮಕ್ಕಳನ್ನು ‘ವೃದ್ಧಾಪ್ಯದ ವಿಮೆ’ಯಂತೆ ಪರಿಗಣಿಸುವುದು ವ್ಯಾಪಕವಾಗಿದೆ. ವಾಸ್ತವವಾಗಿ ಈ ಕೆಲಸವನ್ನು ಇತ್ತೀಚೆಗೆ ಹೆಣ್ಣು ಮಕ್ಕಳು ಹೆಚ್ಚು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದಾರೆ. ಲಿಂಗ ಅನುಪಾತವನ್ನು ಉತ್ತಮಪಡಿಸುವ ಕ್ರಮಗಳ ಮೇಲಿನ ವೆಚ್ಚವನ್ನು ಸರ್ಕಾರವು ಅನುತ್ಪಾದಕವೆಂದು ಪರಿಗಣಿಸಬಾರದು. ದೀರ್ಘಾವಧಿ ದೃಷ್ಟಿಯಿಂದ ಇದು ಅತ್ಯಂತ ಉಪಯುಕ್ತ ಹೂಡಿಕೆಯಾಗಿದೆ.

ಲಿಂಗ ಅನುಪಾತದ ಕುಸಿತದಿಂದಾಗಿ ಅನೇಕ ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಕೃತಿಗಳು ಕಾಣಿಸಿಕೊಳ್ಳಬಹುದು. ಅಧ್ಯಯನಗಳು ತೋರಿಸುತ್ತಿರುವಂತೆ, ಲಿಂಗ ಅನುಪಾತದ ಕೊರತೆ-ಕುಸಿತ ಮತ್ತು ಕೌಟುಂಬಿಕ ಹಿಂಸೆ–ದೌರ್ಜನ್ಯಗಳ ನಡುವೆ ಅನುಲೋಮ ಸಂಬಂಧವಿದೆ. ಇದರಿಂದ ಮಕ್ಕಳು ಮತ್ತು ಮಹಿಳೆಯರ ಕಳ್ಳಸಾಗಾಣಿಕೆಯೂ ಹೆಚ್ಚಾಗಬಹುದು. ನಾಗರಿಕ ನೋಂದಣಿ– 2016ರ ವರದಿಯ ಬಗ್ಗೆ ಸರ್ಕಾರ ಗಂಭೀರವಾಗಿ ಅಧ್ಯಯನ ಮಾಡಬೇಕು ಮತ್ತು ಅದರ ಆಧಾರದ ಮೇಲೆ ಕ್ರಮಗಳನ್ನು ತೆಗೆದುಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT