ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಟಕ ವಿಮರ್ಶೆ: ಪೌರಕಾರ್ಮಿಕರ ಪಾಡು ‘ಪೊರಕೆಯ ಹಾಡು’

Published 18 ಫೆಬ್ರುವರಿ 2024, 0:05 IST
Last Updated 18 ಫೆಬ್ರುವರಿ 2024, 0:05 IST
ಅಕ್ಷರ ಗಾತ್ರ

ಮನುಷ್ಯ ಮಾಡಬಹುದಾದ ಅತ್ಯಂತ ನಿಕೃಷ್ಟವಾದ ವೃತ್ತಿಯೆಂದರೆ ಮತ್ತೊಬ್ಬ ಮನುಷ್ಯನ ಮಲವನ್ನು ಬಾಚುವುದು. ಈ ಕೆಲಸವನ್ನೂ ಕೆಲವೇ ಜಾತಿಗಳಿಗೆ ಸೀಮಿತಗೊಳಿಸಿರುವ ದೇಶ ನಮ್ಮದು. ಜಾತಿ ತಾರತಮ್ಯ, ಅನಕ್ಷರತೆ, ಹಿಂದಿನವರು ಇದೇ ಕೆಲಸ ಮಾಡಿದ್ದರು, ಬೇರೆ ಕೆಲಸ ಸಿಗಲ್ಲ ಇತ್ಯಾದಿ ಕಾರಣಗಳಿಗಾಗಿ ಇಂದಿಗೂ ಕೆಲಜಾತಿಗಳ ಜನರಿಗಷ್ಟೇ ಈ ಕಾಯಕ. ಸಮಾಜದ ಕೊಳೆಯನ್ನು ತೊಳೆಯುತ್ತಿರುವ ಪೌರಕಾರ್ಮಿಕರ ಬದುಕಿನ ಕುರಿತು ಬೆಳಕು ಚೆಲ್ಲುವ ನಾಟಕ ‘ಪೊರಕೆಯ ಹಾಡು’.

ಬೆಂಗಳೂರಿನ ಕಲಾಗ್ರಾಮದಲ್ಲಿ ಈಚೆಗೆ ನೀರದಾರಿ ಕಲೆಕ್ಟಿವ್ ತಂಡ ಪ್ರದರ್ಶಿಸಿದ ‘ಪೊರಕೆಯ ಹಾಡು’ ಹೆಸರೇ ಹೇಳುವಂತೆ ಪೊರಕೆ ಹಿಡಿದು ಸಮಾಜದ ಮಲಿನವನ್ನು ತೊಳೆಯುವವರ ಬದುಕಿನ ಚಿತ್ರಣದ ಕಥೆ. ಪೌರಕಾರ್ಮಿಕ ಮಹಿಳೆ ಪದ್ಮಾ ಪೊರಕೆ ಹಿಡಿದು ಅಂದಿನ ಕಾಯಕಕ್ಕೆ ಸಜ್ಜಾಗುವ ದೃಶ್ಯದಿಂದ ಆರಂಭವಾಗುವ ನಾಟಕ, ನಿಧಾನಕ್ಕೆ ಪ್ರೇಕ್ಷಕರನ್ನು ಆವರಿಸುತ್ತಾ ಹೋಗುತ್ತದೆ. ಸಮಾಜದ ಮಲಿನವನ್ನು ಸ್ವಚ್ಛಗೊಳಿಸುವವರ ಬದುಕಿನ ಒಳನೋಟ, ಅವರ ನೋವು–ನಲಿವು ಎಲ್ಲವನ್ನೂ ನಾಟಕ ಪ್ರೇಕ್ಷಕರಿಗೆ ದಾಟಿಸುತ್ತದೆ. ನಾಟಕದಲ್ಲಿ ತಮಟೆ, ಡಾ.ಬಿ.ಆರ್.ಅಂಬೇಡ್ಕರ್ ಹಚ್ಚಿದ ಅರಿವಿನ ದೀಪಕ್ಕೆ ದನಿಯಾಗಿದೆ. ತಮಟೆಯ ಬಡಿತದಷ್ಟೇ ತೀವ್ರವಾಗಿ ಪೌರಕಾರ್ಮಿಕರ, ಮ್ಯಾನ್ಯುವೆಲ್ ಸ್ಕ್ಯಾವೆಂಜರುಗಳ ಮರಣಮಯ ಕಾಯಕ ಇಲ್ಲಿ ಅನಾವರಣಗೊಂಡಿದೆ.

ಅಕ್ಷರ ಮತ್ತು ಸ್ಪರ್ಶದಿಂದ ದೂರವಾದರೂ ಈ ಕಾಯಕಯೋಗಿಗಳು ಜೀವನ ಪ್ರೀತಿ, ಕನಸು ಮತ್ತು ನಾದದಿಂದ ದೂರವಾದವರೇ ಅಲ್ಲ. ನಿರ್ಜೀವ ತೊಗಲಿನಲ್ಲಿ ಅಡಗಿರುವ ಜೀವ ನಾದವನ್ನು ಎಬ್ಬಿಸುವ, ಬಾಡೂಟದಲ್ಲಿನ ವೈವಿಧ್ಯತೆಯನ್ನು ವರ್ಣಿಸುವ ದೃಶ್ಯ ನೋಡುಗರ ಕುತೂಹಲ ಹೆಚ್ಚಿಸುತ್ತದೆ. ಪೌರಕಾರ್ಮಿಕರ ಬದುಕಿನ ಬಿಡಿ ಬಿಡಿ ಚಿತ್ರಣಗಳ ಕೊಲಾಜ್ ಆಗಿರುವ ‘ಪೊರಕೆಯ ಹಾಡು’ ನಿಧಾನಕ್ಕೆ ಜಾತಿ ವ್ಯವಸ್ಥೆ, ಪ್ರಭುತ್ವ, ಇತಿಹಾಸ ಮತ್ತು ವರ್ತಮಾನವನ್ನು ಪ್ರಶ್ನಿಸುತ್ತಾ ಹೋಗುತ್ತದೆ.

‘ಪೊರಕೆಯ ಹಾಡು’ ನಾಟಕದ ದೃಶ್ಯ

‘ಪೊರಕೆಯ ಹಾಡು’ ನಾಟಕದ ದೃಶ್ಯ 

(ಚಿತ್ರ: ಐವನ್ ಡಿ’ಸಿಲ್ವ)

ಬೀದಿ ಕಸ, ಮನೆ ಕಸ, ಆಸ್ಪತ್ರೆ ಕಸ, ಹಬ್ಬದ ಕಸ, ತಿಥಿ ಕಸ, ಆಳುವವರ ಕಸ, ಕೊನೆಗೆ ಸರ್ಕಾರದ ಕಸ–ಹೀಗೆ ಎಲ್ಲ ಕಸವನ್ನೂ ಬಳಿಯುವ ಪೌರಕಾರ್ಮಿಕರ ಬದುಕು ಮೇಲ್ನೋಟಕ್ಕೆ ಕಂಡಷ್ಟು ಸರಳವಲ್ಲ. ನಿತ್ಯ ಮನೆ ಮುಂದೆ ಗಂಟೆ ಬಾರಿಸುತ್ತಲೋ, ಹಾಡು ಕೇಳಿಸುವ ಕಸದ ಗಾಡಿಗಳು ಬಂದಾಕ್ಷಣ ‘ಕಸದವರು ಬಂದರು’ ಎಂದು  ಕಿಂಚಿತ್ತೂ ಯೋಚಿಸದೇ ನುಡಿದು ಬಿಡುತ್ತೇವೆ. ಕಸ ಹಾಕುವವರು ನಾವು, ಸ್ವಚ್ಛಗೊಳಿಸುವವರು ಪೌರಕಾರ್ಮಿಕರು ಎನ್ನುವ ಕನಿಷ್ಠ ಪ್ರಜ್ಞೆಯನ್ನೂ ಹೊಂದದ ನಾಗರಿಕರ, ಅನಾಗರಿಕ ನಡೆಯನ್ನು ನಾಟಕ ಸೂಕ್ಷ್ಮವಾಗಿ ಬಿಂಬಿಸುತ್ತದೆ. 

ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಒಬ್ಬರು ಪೌರಕಾರ್ಮಿಕರಾಗಿದ್ದರೆ, ಸಂಗಾತಿಯನ್ನು ಮುಟ್ಟುವಾಗಲೂ ಕೈಗಳು ಹಿಂಜರಿಯುತ್ತವೆ. ಅಷ್ಟೇ ಅಲ್ಲ, ಹೆತ್ತಮಗುವನ್ನು ಸ್ಪರ್ಶಿಸಲೂ ಕೈಗಳು ನಡುಗುತ್ತವೆ. ಹೇಲು–ಉಚ್ಚೆ, ಕೊಳಚೆ, ಕಸ ಬಳಿದ ಕೈಗಳಿಗೆ ಅಂಟಿದ ಸೋಂಕು ಎಲ್ಲಿ ತಮ್ಮ ಕರುಳಕುಡಿಗೆ, ಸಂಗಾತಿಗೆ ಅಂಟುತ್ತದೆಯೋ ಎಂಬ ಭೀತಿ ಈ ಸ್ವಚ್ಛತಾ ಸೇನಾನಿಗಳದ್ದು. ಅಂತೆಯೇ, ತುಂಬಿದ ಬಸುರಿ ಲಕ್ಷ್ಮಿ ತನ್ನ ಹೆತ್ತವ್ವನಿಗಾಗಿ ಮಾಡಿಟ್ಟ ಘಮಘಮಿಸುವ ಮಟನ್‌ಗೂ ಸತ್ತನಾಯಿ/ಬೆಕ್ಕಿನ ದುರ್ನಾತ ತಡೆಯುವ ಶಕ್ತಿಯಿಲ್ಲ. ಮಗಳು ಪ್ರೀತಿಯಿಂದ ಬಡಿಸಿದ ಬಾಡೂಟವನ್ನು ತಿನ್ನಲಾಗದೇ ಪದ್ಮಾ, ವಾಂತಿ ಮಾಡಿಕೊಳ್ಳುತ್ತಾಳೆ. ಅವಳಂಥ ಪೌರಕಾರ್ಮಿಕರು ವಾರದಲ್ಲಿ ಊಟ ಬಿಟ್ಟ ದಿನಗಳೆಷ್ಟೋ, ಲೆಕ್ಕವಿಟ್ಟವರಾರು?

ಊಟವಿರಲಿ, ಕೆಲಸದ ಸ್ಥಳದಲ್ಲಿ ಕನಿಷ್ಠ ಘನತೆ, ಗೌರವವನ್ನೂ ನೀಡದ ಕಾಯಕ ಈ ವೃತ್ತಿಯದ್ದು. ‘ಕಸದ ಪೊರಕೆ ಹಾಳಾಗಿದ್ದರೆ, ಸೀರೆಯಲ್ಲೇ ಕಸಗುಡಿಸು, ಮಾಡೋದು ಕಸದ ಕೆಲಸ ಆಫೀಸರ್ ಸಂಬಳ ಬೇಕಂತೆ...’ ಎನ್ನುವ ಮೇಸ್ತ್ರಿಗಳ ದೌಲತ್ತು ಒಂದೆಡೆಯಾದರೆ, ನೇಸರ ಮೂಡುವ ಮುನ್ನವೇ ಜಗದ ಕಸ ಸ್ವಚ್ಛಗೊಳಿಸಲು ತೆರಳುವ ಪೌರಕಾರ್ಮಿಕ ಮಹಿಳೆಯರನ್ನೂ ಬಿಡದ ಕಾಮುಕ ಕೈಗಳ ದೌರ್ಜನ್ಯ ಮತ್ತೊಂದೆಡೆ. ಪೌರಕಾರ್ಮಿಕರನ್ನು ಹೀನಾಯವಾಗಿ ಕಾಣುವಂಥದ್ದನ್ನು ನಾಟಕ ತಮಾಷೆಯಾಗಿ ಹೇಳುತ್ತಲೇ, ವ್ಯವಸ್ಥೆಯ ಅಮಾನವೀಯತೆಯನ್ನು ತೆರೆದಿಡುತ್ತದೆ.

ಮಲದ ಗುಂಡಿಯಲ್ಲಿ ಹೆಣವಾದ ಕುಟ್ಟಿ ಪ್ರಸಾದ್ ಅವರಂಥ ನೂರಾರು ಜನರ ಒಡಲನೋವಿಗೆ ನಾಟಕ ಕನ್ನಡಿ ಹಿಡಿಯುತ್ತದೆ. ಹೀಗೆ ಸತ್ತವರ ಕುಟುಂಬಗಳಿಗೆ ₹ 10 ಲಕ್ಷ ನೀಡಬೇಕೆಂಬ ಕಾನೂನು ಇದ್ದರೂ, ಸ್ಥಳೀಯ ಆಡಳಿತಗಾರರು, ಪುಡಾರಿಗಳು ಆ ಹಣಕ್ಕೂ ಕನ್ನ ಹಾಕಿ ಪುಡಿಗಾಸಿನ ಪರಿಹಾರ ನೀಡುವ ದೃಶ್ಯಗಳು ಮನುಷ್ಯರೊಳಗಿನ ವಿಕೃತಿಯನ್ನು ತೋರಿಸುತ್ತದೆ.

‘ಪೊರಕೆಯ ಹಾಡು’ ನಾಟಕದ ದೃಶ್ಯ

‘ಪೊರಕೆಯ ಹಾಡು’ ನಾಟಕದ ದೃಶ್ಯ 

(ಚಿತ್ರ: ಐವನ್ ಡಿ’ಸಿಲ್ವ)

ಮೂರ್ಛೆ ಹೋಗುವಷ್ಟು ದುರ್ನಾತ ಬೀರುವ ಮಲದ ಗುಂಡಿಯೊಳಗೆ ಇಳಿದ ಎರಡೇ ನಿಮಿಷಕ್ಕೆ ಲಕ್ವಾ ಹೊಡೆಯುತ್ತದೆ. ಅದರೊಳಗಿನ ಗಾಳಿ ಎಷ್ಟು ವಿಷವೆಂದರೆ ಏಳೇ ನಿಮಿಷಕ್ಕೆ ಮನುಷ್ಯ ಪ್ರಾಣ ಇನ್ನಿಲ್ಲವಾಗುತ್ತದೆ. ಸೀದಾ ಯಮಲೋಕಕ್ಕೆ ಕಳಿಸುವ ಮಲದ ಗುಂಡಿಗಳಿಗೆ ಬಿದ್ದು ಸತ್ತವರೆಷ್ಟು? ಇನ್ನೆಷ್ಟು ಹೆಣಗಳು ಬೀಳಬೇಕೋ? ಎಂದು ಪ್ರಶ್ನಿಸುವ ನಾಟಕ ಗಾಢ ವಿಷಾದಕ್ಕೊಯ್ಯುತ್ತದೆ. ಕೋಲಾರದ ಚಿನ್ನದ ಗಣಿಯ ಗಣಿಗಾರಿಕೆ ನಿಂತರೂ, ಈ ಕಾರ್ಮಿಕರಿಗೆ ಮಲ ಬಾಚುವುದು ತಪ್ಪಲಿಲ್ಲ ಎಂಬ ಇತಿಹಾಸದ ಸತ್ಯ, ವರ್ತಮಾನದಲ್ಲೂ ಅನುರಣಿಸುತ್ತಿರುವುದನ್ನು ನಾಟಕ ಮಾರ್ಮಿಕವಾಗಿ ಹೇಳುತ್ತದೆ.

ಸೂತ್ರಧಾರ, ಕುಡುಕ ತಂದೆ ಹಾಗೂ ಸಾವಿ ಪಾತ್ರದಲ್ಲಿ ದು. ಸರಸ್ವತಿ, ಲಕ್ಷ್ಮಿಯಾಗಿ ಅಶ್ವಿನಿ ಬೋಧ್, ಇತರ ಪಾತ್ರಗಳಿಗೆ ತಕ್ಕ ಜೀವ ತುಂಬಿ ಭರತ್ ಡಿಂಗ್ರಿ, ನಂದಾ, ಭರತ್ ನಟಿಸಿದ್ದಾರೆ. ಪೌರಕಾರ್ಮಿಕ ವೃತ್ತಿಯಲ್ಲಿರುವ ಮಣಿಯಮ್ಮ ಹಾಗೂ ಸುರೇಶ್ ನಾಟಕದಲ್ಲಿ ಪಾತ್ರಧಾರಿಗಳಾಗಿರುವುದು ವಿಶೇಷ.

ಕನ್ನಡ ರಂಗಭೂಮಿಯಲ್ಲಿ ಶೋಷಿತರ ಬದುಕಿನ ನೋವು ಮತ್ತು ಸಂಭ್ರಮಗಳೆರಡನ್ನೂ ರಂಗದ ಮೇಲೆ ತರುತ್ತಿರುವ ನಿರ್ದೇಶಕ ಲಕ್ಷ್ಮಣ ಕೆ.ಪಿ.ಅವರ ಮುಡಿಗೆ ‘ಪೊರಕೆಯ ಹಾಡು’ ಮತ್ತೊಂದು ಗರಿ ಮೂಡಿಸಿದೆ.

ಪೌರಕಾರ್ಮಿಕರ ಬದುಕನ್ನು ಪೂರ್ಣಪ್ರಮಾಣದಲ್ಲಿ ನಾಟಕದ ಕಥಾವಸ್ತುವನ್ನಾಗಿಸಿದ ದು. ಸರಸ್ವತಿ ಅವರ ಶ್ರಮ ಶ್ಲಾಘನೀಯ. ದೇಸಿ ಭಾಷೆಯ ಸೊಗಡು, ಆಪ್ತವೆನಿಸುವ ದೃಶ್ಯಗಳು, ಹೋರಾಟದ ಹಾಡುಗಳು ನಾಟಕಕ್ಕೆ ಪೂರಕವಾಗಿವೆ.

ನಾಟಕ ಮುಗಿದ ಮೇಲೂ ಪೌರಕಾರ್ಮಿಕ ಹಾಡು–ಪಾಡು ಕಾಡುತ್ತದೆ.

‘ಪೊರಕೆಯ ಹಾಡು’ ನಾಟಕದ ದೃಶ್ಯ  (ಚಿತ್ರ: ಐವನ್ ಡಿ’ಸಿಲ್ವ)
‘ಪೊರಕೆಯ ಹಾಡು’ ನಾಟಕದ ದೃಶ್ಯ  (ಚಿತ್ರ: ಐವನ್ ಡಿ’ಸಿಲ್ವ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT