ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ | ಪ್ರಧಾನಿ ಮಾತು ಮತ್ತು ರಾಜಧರ್ಮ

ಅಶಾಂತಿ ಹೆಚ್ಚಾಗಿ ಹಿಂಸೆಗೆ ಅಡಿಯಿಡುವ ಸಮಾಜದಲ್ಲಿ ಆರ್ಥಿಕ ಅಭಿವೃದ್ಧಿ ಸಾಧ್ಯವಿಲ್ಲ
Published 20 ಮೇ 2024, 23:30 IST
Last Updated 20 ಮೇ 2024, 23:30 IST
ಅಕ್ಷರ ಗಾತ್ರ

ಬ್ಯಾಂಕ್ ನೌಕರಿಯಲ್ಲಿದ್ದು, ಇದೀಗ ನಿವೃತ್ತರಾಗಿರುವ ನನ್ನೊಬ್ಬ ಸಜ್ಜನ ಸ್ನೇಹಿತರಿದ್ದಾರೆ. ಹಲವು ದೃಷ್ಟಿಕೋನಗಳನ್ನು ಗ್ರಹಿಸುವ ಜಾಗೃತ ಮತದಾರರಾದ ಅವರು, ಈಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಕೆಲವು ಚುನಾವಣಾ ಭಾಷಣಗಳಿಂದ ವಿಚಲಿತರಾಗಿದ್ದರು. ದೇಶದ ಪ್ರಧಾನಿಯು ರಾಷ್ಟ್ರದ ಏಕೀಕರಣದ ಪರವಾಗಿರಬೇಕು, ಮುಸ್ಲಿಮರನ್ನು ಕಡೆಗಣಿಸುವ ಮೋದಿಯವರ ನೇರ ಮಾತುಗಳು ವಿಭಜನಕಾರಿ, ಇದು ಪ್ರಧಾನಿಯ ಘನತೆಗೆ ತಕ್ಕುದಲ್ಲ ಎಂದು ಅವರು ಆತಂಕಿತರಾಗಿದ್ದರು.

ಅವರ ಪ್ರಕಾರ, ನಮ್ಮ ಹಿರಿಯರು, ಅನೇಕ ಸಮಕಾಲೀನರು ಧಾರ್ಮಿಕರಾಗಿದ್ದರೂ ಕೋಮುವಾದಿ ಗಳಾಗಿರಲಿಲ್ಲ. ಇಂದಿನ ಸಮಾಜಕ್ಕೆ, ಮುಖ್ಯವಾಗಿ ಅನೇಕಾನೇಕ ಬಿಜೆಪಿ ಅನುಯಾಯಿಗಳಿಗೆ ಧಾರ್ಮಿಕತೆಗೂ ಕೋಮುವಾದಕ್ಕೂ ಇರುವ ಅಂತರವೇ ತಿಳಿದಿಲ್ಲ. ನಿರ್ಮಲ ಧಾರ್ಮಿಕತೆಯಿಂದ, ಆಧ್ಯಾತ್ಮಿಕತೆಯಿಂದ ಸಮಾಜಕ್ಕೆ ಅಪಾಯವಿಲ್ಲ. ಆದರೆ ಕೋಮುವಾದದ ಬೆಳವಣಿಗೆ ಮನುಷ್ಯರ ಮನಸ್ಸುಗಳನ್ನು ಒಡೆಯುತ್ತದೆ, ಸಮಾಜದ ಭದ್ರತೆ ಕೆಡಿಸಿ ಅಶಾಂತಿ ಉಂಟು ಮಾಡುತ್ತದೆ.

ಮಾಸ್ತಿಯವರ ‘ರಾಮನವಮಿ’ ಕವನದ ಕುರಿತಾಗಿ ಬರೆಯುತ್ತಾ ಕವಿ ಗೋಪಾಲಕೃಷ್ಣ ಅಡಿಗರು, ಮಾಸ್ತಿಯವರ ದೃಷ್ಟಿ ಧಾರ್ಮಿಕವಾದದ್ದು, ಆಧ್ಯಾತ್ಮಿಕ ವಾದದ್ದಲ್ಲ ಎನ್ನುತ್ತಾರೆ. ಆಧ್ಯಾತ್ಮಿಕವೆಂದರೆ, ತನ್ನನ್ನು ಮೀರಿ ವಿಶ್ವದೊಡನೆ ಬೆರೆಯುವ ಆಸೆ. ಮಾಸ್ತಿಯವರು ಪ್ರಭಾವಗೊಂಡಿದ್ದ ಇಂಗ್ಲಿಷ್ ರೊಮ್ಯಾಂಟಿಕ್ ಸಾಹಿತ್ಯವೂ ಆ ದೃಷ್ಟಿಕೋನವನ್ನು ಪ್ರತಿಪಾದಿಸಿತ್ತು. ನವೋದಯದ ಕುವೆಂಪು, ಬೇಂದ್ರೆ, ಪುತಿನ ಅವರಿಗೆಲ್ಲಾ ಪ್ರಕೃತಿಯಿಂದ ಪಡೆವ ಆನಂದ ಹೀಗೆ ವಿಶ್ವದೊಡನೆ ಬೆರೆಯುವ ಆಸೆಯ ಒಂದು ಮುಖ. ಅಡಿಗರು ಹೇಳುವಂತೆ, ಮಾಸ್ತಿಯವರಲ್ಲಿ ಕಾಣುವುದು ಹಿಂದೂ ಧರ್ಮದ ‘ಸಹಿಷ್ಣುತೆ’ ಎಂಬ ಮೌಲ್ಯದಲ್ಲಿ ಅಡಕವಾಗಿರುವ ಪ್ರಜಾಪ್ರಭುತ್ವ ತತ್ವಗಳ ಅರಿವಿನಿಂದ ಸ್ಪಷ್ಟವಾದ ‘ಲಿಬರಲ್’ ಎನ್ನುವ ಉದಾರವಾದಿ ದೃಷ್ಟಿ. ಆದುದರಿಂದಲೇ ಅವರಿಗೆ ತಮ್ಮ ಸ್ವಂತ ಅಥವಾ ಧಾರ್ಮಿಕವಾದ ನಂಬಿಕೆಗಳಲ್ಲಿ ನಿಷ್ಠೆ ದೃಢವಾಗಿದ್ದರೂ ಅದೇ ಪರಮ ಎಂಬ ‘ಮತಚ್ಛಲ’ ಮಾಸ್ತಿಯವರ ಕಾವ್ಯದಲ್ಲಿ ಕಾಣಿಸುವುದಿಲ್ಲ.

ಆರ್ಷ್ಯ ದೃಷ್ಟಿಕೋನದ ಕವಿ ಎಂದು ವಿವರಿಸಲ್ಪಟ್ಟ, ಇಂದಿನ ಬಿಜೆಪಿಯ ಹಿಂದಿನ ರೂಪವಾದ ಜನಸಂಘದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಗೋಪಾಲಕೃಷ್ಣ ಅಡಿಗರು, ‘ರಾಮನವಮಿ’ ಎಂಬ ಮಾಸ್ತಿಯವರ ಕವನದ ಬಗ್ಗೆ ಬರೆಯುತ್ತಾ ಅವರಿಗೆ ‘ಮತಚ್ಛಲ’ ಇಲ್ಲ ಎಂದು ಹೇಳುವುದನ್ನು ಗಮನಿಸಬೇಕು. ತನ್ನ ಮತವೇ ಸರಿ ಎಂಬ ಹಟವೇ ಮತದ ಬಗೆಗಿನ ಛಲ. ಕೋಮುವಾದದ ಮನಃಸ್ಥಿತಿಗೆ ಸಮೀಪವಾದ ಇನ್ನೊಂದು ಮನಃಸ್ಥಿತಿ ಮತಚ್ಛಲ. ಅದ್ವೈತ, ದ್ವೈತ, ವಿಶಿಷ್ಟಾದ್ವೈತ ಮತಗಳ ನಡುವಿನ ಚರ್ಚೆಗಳಲ್ಲಂತೂ ತಂತಮ್ಮ ಮತವೇ ಪರಮಶ್ರೇಷ್ಠ ಎಂಬ ಛಲವು ಸಹಿಷ್ಣುತೆಗೆ ಸಂಪೂರ್ಣ ವಿರೋಧವಾದ ನೆಲೆ. ಹಿಂದೂ ಮತದೊಳಗಿನ ಅದೇ ಮನೋಭಾವದ ಇನ್ನೊಂದು ಮುಖವಾದ ಜಾತಿವಾದಕ್ಕೂ ಈ ‘ಮತಚ್ಛಲ’ಕ್ಕೂ ಸಂಬಂಧವಿದೆ. ಕೆಲವೊಮ್ಮೆ ಈ ಛಲದಲ್ಲಿ ತಮ್ಮ ಜಾತಿಯೇ ಶ್ರೇಷ್ಠ, ತಮ್ಮ ಜಾತಿಗೆ ಅನ್ಯಾಯವಾಗಿದೆ ಎನ್ನುವಂತಹ ಹಲವು ಅಂಶಗಳು ಸೇರಿಕೊಂಡಿರಲೂಬಹುದು. ಹಿಂದೂ ಧಾರ್ಮಿಕ ಸ್ಥಿತಿಯ ‘ಸಹಿಷ್ಣು’ ಶಕ್ತಿಗಿಂತ ಭಿನ್ನವಾದ ನೆಗೆಟಿವ್ ನಿಲುವನ್ನು ಸೂಚಿಸಲು ಅಡಿಗರು ‘ಮತಚ್ಛಲ’ ಎಂಬ ನುಡಿಗಟ್ಟನ್ನು ಠಂಕಿಸಿದರು.

ನನ್ನ ಗೆಳೆಯ ‘ನಮ್ಮ ಹಿರಿಯರು ಧಾರ್ಮಿಕರಾಗಿದ್ದರು. ಆದರೆ ಕೋಮುವಾದಿಗಳಾಗಿರಲಿಲ್ಲ’ ಎಂದಾಗಲೂ ಸೂಚಿಸುತ್ತಿದ್ದುದು ಹಿಂದೂ ಧರ್ಮದ ಒಳಗಿರುವ ಈ ಸಹಿಷ್ಣುತೆಯನ್ನೇ, ಈ ಸಹಿಷ್ಣುತೆಯನ್ನು ಪ್ರತಿಪಾದಿಸಿದ ಬುದ್ಧ, ಕಬೀರ ಹಾಗೂ ಮಹಾತ್ಮ ಫುಲೆ ತಮ್ಮ ಮೂವರು ಗುರುಗಳೆಂದು ಅಂಬೇಡ್ಕರ್ ಹೇಳಿದ್ದಾರೆ.

ಹಿಂದೂಗಳ ‘ಸಹಿಷ್ಣುತೆ’ ಮತ್ತು ಅದಕ್ಕೆ ವಿರುದ್ಧವಾದ ಕೋಮುವಾದಕ್ಕೆ ಪೂರಕವಾದ ‘ಹಿಂದುತ್ವ’ ಒಂದೂವರೆ ಶತಮಾನದಿಂದ ಪರಸ್ಪರ ಗುದ್ದಾಡಿವೆ. ಗಾಂಧೀಜಿ ಹಾಗೂ ಸಾವರ್ಕರ್ ನಡುವಿನ ಅಭಿಪ್ರಾಯಭೇದದಲ್ಲಿ ದೇಶವು ಗಾಂಧಿಯವರನ್ನು ಒಪ್ಪಿಕೊಂಡಿತು. ಗಾಂಧೀಜಿ ಜೊತೆ ಸಹಮತ ಹೊಂದಿದ ಅನೇಕ ಸಮಾಜ ಸುಧಾರಕರಿದ್ದರು. ಅವರಲ್ಲೊಬ್ಬರು, ಇಂದಿನ ಉದ್ಧವ್ ಠಾಕ್ರೆ ಅವರ ಅಜ್ಜ ಕೇಶವ್ ಸೀತಾರಾಮ್ ಠಾಕ್ರೆ. ಆರ್ಯ ಸಮಾಜದಿಂದ ಪ್ರಭಾವಿತರಾಗಿದ್ದ ಅವರು ಪ್ರಾರಂಭಿಸಿದ ‘ಪ್ರಭೋದನ್’ (ಜ್ಞಾನೋದಯ) ಪತ್ರಿಕೆಯು ಮತಾಂತರಗೊಂಡ ಹಿಂದೂಗಳು ಹಿಂದೂ ಮತಕ್ಕೆ ಹಿಂತಿರುಗಬಹುದು, ವಿಧವಾ ವಿವಾಹ ಬೇಕು ಎಂಬಂಥ ವಿಚಾರಗಳನ್ನು ಪ್ರತಿಪಾದಿಸಿತು. ಅದನ್ನು ಒಪ್ಪದ ಹಿಂದೂ ಮೂಲಭೂತವಾದಿಗಳು, ಹಾಗೆ ಬಂದವರು ಯಾವ ಜಾತಿಯ ಹಿಂದೂಗಳಾಗಬೇಕು ಎಂಬಂತಹ ವಿಚಾರಗಳನ್ನು ಮುಂದಿಡುತ್ತಿದ್ದರು.

ಇಂದು ಕೂಡ ಭಾರತವು ಹಿಂದೂ ರಾಷ್ಟ್ರಆಗಬೇಕು ಎಂದು ವಾದಿಸುವ ಶೇ 99ರಷ್ಟು ಜನರೂ ತಮ್ಮ ಮಕ್ಕಳು ತಮ್ಮ ಜಾತಿಯವರನ್ನೇ ಮದುವೆಯಾಗಬೇಕೆಂದು ಬಯಸುತ್ತಾರೆ. ಬೇರೆ ಧರ್ಮದ ಬಗೆಗಿನ ದ್ವೇಷವನ್ನೇ ಅನೇಕರು ತಪ್ಪಾಗಿ ತಮ್ಮ ಹಿಂದುತ್ವ ಎಂದು ತಿಳಿದಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ. ತಮ್ಮ ಮಗಳು ಬೇರೆ ದೇಶದವನನ್ನು- ಅನ್ಯ ಧರ್ಮೀಯನನ್ನು ಮದುವೆಯಾಗುವುದಾಗಿ ಹೇಳಿದಾಗ ಅದನ್ನು ಒಪ್ಪಿಕೊಳ್ಳುವುದು, ಮನೆಯಲ್ಲಿ ನಿತ್ಯಪೂಜೆ, ಪಾರಾಯಣ ಎಲ್ಲವನ್ನೂ ಮಾಡುತ್ತಿದ್ದ ಮಾಸ್ತಿಯವರಿಗೆ ಸಾಧ್ಯವಾಯಿತು ಎಂಬುದನ್ನು ನಾವು ನೆನಪಿಸಿಕೊಳ್ಳಬೇಕು.

ಪುತಿನ ಅವರು ‘ಪ್ರಪಂಚದೊಂದಿಗೆ ಸ್ವಾರ್ಥದೂರ ಸಂಬಂಧದಿಂದ ಆಧ್ಯಾತ್ಮಿಕತೆ ಹುಟ್ಟುತ್ತದೆ’ ಎನ್ನುತ್ತಾರೆ. ಈ ಆಧ್ಯಾತ್ಮಿಕತೆ ಲೋಕಶಾಂತಿಗೆ ಇಂಬಾಗುತ್ತದೆ. ಸಮಾಜದ ಈ ಶಾಂತಿಯೇ ಜಗತ್ತಿನ ಚೆಲುವನ್ನು ಹೆಚ್ಚು ಮಾಡುವುದು. ನಿಜವಾದ ಧರ್ಮದ ಮೂಲ ಸ್ವರೂಪ ಖಾಸಗಿಯಾಗಿರುವುದು. ಆದ್ದರಿಂದಲೇ ದೇವರು ಮತ್ತು ಭಕ್ತನ ಸಂಬಂಧ ವೈಯಕ್ತಿಕವಾದದ್ದು. ರಾಜಕೀಯದ ಉದ್ದೇಶವೇಸಾರ್ವಜನಿಕವಾದುದು. ಆದುದರಿಂದ ಲೋಕದ ಶಾಂತಿಗಾಗಿ, ಸಮಾಜದಲ್ಲಿ ಸಮಾನತೆಯ ಮೌಲ್ಯವೃದ್ಧಿಗಾಗಿ ಧರ್ಮ ಹಾಗೂ ರಾಜಕೀಯ ಪ್ರತ್ಯೇಕವಾಗಿರುವುದು ಮುಖ್ಯವಾಗುತ್ತದೆ.

ತಮ್ಮ ಧರ್ಮ, ಶ್ರದ್ಧಾಕೇಂದ್ರ ಅಪಾಯದಲ್ಲಿವೆ ಎಂಬುದನ್ನು ತಲೆಗೆ ತುಂಬಿದ ಕೂಡಲೇ ತಮ್ಮ ಧರ್ಮ ಎಲ್ಲಿ ನಶಿಸಿಹೋಗುತ್ತದೋ ಎಂಬ ಅಭದ್ರತೆ ಕಾಡುತ್ತದೆ. ಆಗ ಅದನ್ನು ರಕ್ಷಿಸಲು ಆಕ್ರಮಣಕಾರಿ ಮನೋಭಾವ ಹುಟ್ಟುತ್ತದೆ. ಆ ಮನೋಭಾವ ಹುಟ್ಟಿದವರಿಗೆ ಇನ್ನೊಂದು ಧರ್ಮವನ್ನು ವೈರಿಗಳಂತೆ ಎದುರು ಪಕ್ಷವಾಗಿ ಸೂಚಿಸಿದಾಗ ದ್ವೇಷ ಹೆಚ್ಚಾಗುತ್ತದೆ. ಅಮೂರ್ತವಾದ ಎದುರುಪಕ್ಷದ ಧರ್ಮವೊಂದು ಅಪಾಯಕಾರಿಯಾಗಿ ಗೋಚರಿಸತೊಡಗುತ್ತದೆ. ಆಗ ಸಮಾಜದಲ್ಲಿ ಶಾಂತಿ ಹಾಳಾಗುತ್ತದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ರಾಮಮಂದಿರಕ್ಕೆ ಬಾಬರಿ ಮಸೀದಿಯ ಬೀಗ ಹಾಕುತ್ತಾರೆ, ಅವರು ಬುಲ್ಡೋಜರ್‌ ಕಳಿಸಿ ರಾಮ
ಮಂದಿರವನ್ನು ನೆಲಸಮ ಮಾಡುತ್ತಾರೆ ಎಂದು ಹೇಳಿ ಸ್ವತಃ ಪ್ರಧಾನಿಯೇ ಅಶಾಂತಿ ಹರಡುವುದು ರಾಜಧರ್ಮ ತತ್ವಕ್ಕೆ ಕೂಡಾ ವಿರುದ್ಧವಾದುದು. ಕಾಳಿದಾಸನು‘ರಘುವಂಶ’ದಲ್ಲಿ, ರಾಜಧರ್ಮ ಎಂದರೆ ಯಾವ ಭೇದವೂ ಇಲ್ಲದೆ, ಪ್ರತಿಯೊಬ್ಬ ಪ್ರಜೆಗೂ ರಾಜ ನೀಡಬೇಕಾದ ರಕ್ಷಣೆ ಎನ್ನುತ್ತಾನೆ. ನಮಗೆ ಸ್ವಾತಂತ್ರ್ಯ ಬಂದಾಗ ನಮ್ಮ ಹಿರಿಯರು ಸ್ವತಂತ್ರ ಭಾರತ ಸಾಧಿಸಬೇಕಾದ ಮೂರು ಗುರಿಗಳನ್ನು ಹಾಕಿಕೊಂಡರು. 1. ಕಾನೂನಿನ ಆಡಳಿತ, 2. ರಾಷ್ಟ್ರದ ಭೌಗೋಳಿಕ ಮತ್ತು ಭಾವನಾತ್ಮಕ ಸಮಗ್ರೀಕರಣ,
3. ಬಡತನದ ನಿರ್ಮೂಲನೆ.

ಸರ್ವಧರ್ಮ ಸಮಾನತೆ ಮತ್ತು ಎಲ್ಲ ಪ್ರಜೆಗಳಿಗೂ ಇರುವ ಸಮಾನತೆಯನ್ನು ಸಂವಿಧಾನ ತನ್ನ ಪೀಠಿಕೆಯಲ್ಲೇ ಪ್ರಸ್ತಾಪಿಸಿದೆ. ನಾವು ಸಂವಿಧಾನವನ್ನು ರಕ್ಷಿಸಿದರೆ ಸಂವಿಧಾನ ನಮ್ಮನ್ನೂ ನಮ್ಮ ನಮ್ಮ ಧರ್ಮಗಳನ್ನೂ ರಕ್ಷಿಸುತ್ತದೆ. ಪ್ರಜಾಪ್ರಭುತ್ವದಲ್ಲಿ ಧರ್ಮೋ ರಕ್ಷತಿ ರಕ್ಷಿತಃ ಎಂದರೆ ಸಂವಿಧಾನವನ್ನು ರಕ್ಷಿಸುವವರನ್ನು ಸಂವಿಧಾನವು ರಕ್ಷಿಸುತ್ತದೆ ಎಂಬುದೇ ಆಗಿದೆ. ಅದುವೇ ಕಾನೂನಿನ ಆಡಳಿತದ ಮೂಲತತ್ವ. ಸಮಾನತೆಯ ಮೂಲಸೂತ್ರ. ಇಂತಹ ಕಾನೂನಿನ ಆಡಳಿತದ ಭಾಗವಾಗಿ ಸಂವಿಧಾನದ ಮೂಲಕ ಅಧಿಕಾರಕ್ಕೆ ಬಂದ ಪ್ರಧಾನಿ, ಜನರ ರಕ್ಷಣೆಯನ್ನು ಅಪಾಯಕ್ಕೆ ಒಡ್ಡುವ ಧಾರ್ಮಿಕ ದ್ವೇಷವನ್ನು ಹಬ್ಬಿಸುವ ಕೋಮುವಾದದ ವಕ್ತಾರರಂತೆ ಮಾತನಾಡುವುದು ಸಂವಿಧಾನದ ರಕ್ಷಣೆಯನ್ನು ಧಿಕ್ಕರಿಸುವ ಮಾತಾಗುತ್ತದೆ. ಅದು ರಾಜಧರ್ಮಕ್ಕೂ ವಿರೋಧವಾದ ಮಾತು.

ಪ್ರಧಾನಿಯವರ ಧರ್ಮದ್ವೇಷದ ಮಾತುಗಳನ್ನು ಒಪ್ಪುವುದಿಲ್ಲ ಎಂದು ಸಾರ್ವಜನಿಕವಾಗಿ ಹೇಳಿ
ಪ್ರತಿಭಟಿಸುವುದು ಮತ್ತು ಅವರು ಬಿತ್ತುವ ಭಯವನ್ನು ಶಾಂತಿಯುತವಾಗಿ ತಿರಸ್ಕರಿಸುವುದು ಮಾತ್ರ ಈಗ ಪ್ರಜೆಗಳಿಗೆ ಉಳಿದಿರುವ ದಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT