ಕರ್ನಾಟಕದ ಕ್ರಿಕೆಟಿಗರು ಈಗ ಎಲ್ಲೆಲ್ಲೂ ಸಲ್ಲುವ ಆಟಗಾರರಾಗಿದ್ದಾರೆ. ಈ ವರ್ಷದ ರಣಜಿ ಟ್ರೋಫಿ ಕ್ರಿಕೆಟ್ ಋತುವಿನಲ್ಲಿ ರಾಜ್ಯದ ಹತ್ತು ಆಟಗಾರರು ಬೇರೆ ಬೇರೆ ತಂಡಗಳಲ್ಲಿ ಆಡಿದರು. ಯಾವುದೇ ತಂಡದಲ್ಲಿ ಸ್ಥಾನ ಪಡೆದರೂ ತಮ್ಮ ಸಾಮರ್ಥ್ಯವನ್ನು ಧಾರೆಯೆರೆದು ಬರುವ ಗುಣ ಇಲ್ಲಿಯ ಆಟಗಾರರಿಗೆ ಇದೆ. ಈ ಮಾತಿಗೆ ಸದ್ಯ ಕರುಣ್ ನಾಯರ್ ಅವರು ಉತ್ತಮ ಉದಾಹರಣೆ.

ಈ ಋತುವಿನಲ್ಲಿ ವಿದರ್ಭ ತಂಡವು ವಿಜಯ್ ಹಜಾರೆ ಟ್ರೋಫಿ ಮತ್ತು ರಣಜಿ ಟ್ರೋಫಿ ಟೂರ್ನಿಗಳಲ್ಲಿ ಫೈನಲ್ ತಲುಪುವಲ್ಲಿ ಕರುಣ್ ಪ್ರಮುಖ ಪಾತ್ರ ವಹಿಸಿದರು. ವಿಜಯ್ ಹಜಾರೆ ಟೂರ್ನಿಯಲ್ಲಿ 779 ಹಾಗೂ ರಣಜಿ ಟೂರ್ನಿಯಲ್ಲಿ 642 ರನ್ (ಸೆಮಿಫೈನಲ್ವರೆಗೆ) ಕಲೆಹಾಕಿದರು. ಎರಡೂ ಟೂರ್ನಿ ಸೇರಿ ಒಟ್ಟು ಎಂಟು ಶತಕ ದಾಖಲಿಸಿದ್ದಾರೆ. ಎರಡು ವರ್ಷದ ಹಿಂದೆ ಕರ್ನಾಟಕ ತಂಡಕ್ಕೆ ನಾಯಕರಾಗಿಯೂ ಆಡಿದ್ದ ಅವರನ್ನು ಫಾರ್ಮ್ ಕಳೆದುಕೊಂಡ ಕಾರಣ ಆಯ್ಕೆಗಾರರು ಕೈಬಿಟ್ಟಿದ್ದರು. ತವರು ತಂಡವನ್ನು ತೊರೆದುಹೋದ ನೋವನ್ನು ಮೀರಿ ನಿಂತು ಯಶಸ್ವಿಯಾಗಿದ್ದಾರೆ. ಅವರು ಈ ಋತುವಿನಲ್ಲಿ ಮಾಡಿರುವ ಸಾಧನೆಯು ರಾಷ್ಟ್ರೀಯ ತಂಡದ ಆಯ್ಕೆಗಾರರ ಕಣ್ಣಿಗೆ ಇನ್ನೂ ಬೀಳದಿರುವುದು ಸೋಜಿಗ!

ಭಾರತ ತಂಡ ಅಥವಾ ಐಪಿಎಲ್ ಫ್ರ್ಯಾಂಚೈಸಿಗಳಲ್ಲಿ ಅವಕಾಶ ಸಿಗುವುದಿಲ್ಲ ಎಂದು ಖಾತರಿಯಾದಾಗ ಮತ್ತು ತವರಿನ ತಂಡವೂ ಕೈಬಿಟ್ಟಾಗ ಮಾನಸಿಕವಾಗಿ ದೃಢವಾಗಿ ನಿಲ್ಲುವುದು ಬಹಳ ಕಷ್ಟ. ಆದರೆ ಈ ವಿಷಯದಲ್ಲಿ ಕರ್ನಾಟಕದ ಆಟಗಾರರು ಗಟ್ಟಿಗರು ಎಂದೇ ಹೇಳಬಹುದು. ಈ ರಣಜಿ ಋತುವಿನಲ್ಲಿ ಆರ್. ಸಮರ್ಥ್ (ಉತ್ತರಾಖಂಡ), ಜೆ.ಸುಚಿತ್ (ನಾಗಾಲ್ಯಾಂಡ್), ರೋಹನ್ ಕದಂ (ಗೋವಾ), ಡೇಗಾ ನಿಶ್ಚಲ್ (ನಾಗಾಲ್ಯಾಂಡ್), ಕೆ.ವಿ. ಸಿದ್ಧಾರ್ಥ್ (ಗೋವಾ), ಶರತ್ ಶ್ರೀನಿವಾಸ್ (ತ್ರಿಪುರಾ), ಕೆ.ಸಿ. ಕಾರ್ಯಪ್ಪ (ಮಿಜೋರಾಂ), ರಾಂಗ್ಸೆನ್ ಜೊನಾಥನ್ (ನಾಗಾಲ್ಯಾಂಡ್) ಹಾಗೂ ರೋನಿತ್ ಮೋರೆ (ಸಿಕ್ಕಿಂ) ಕಣದಲ್ಲಿದ್ದರು. 32 ವರ್ಷದ ಸಮರ್ಥ್ ಅವರು ಉತ್ತರಾಖಂಡ ಪರವಾಗಿ 649 ರನ್ ಗಳಿಸಿದರು. ಡಿ. ನಿಶ್ಚಲ್ ಕೂಡ ಪ್ಲೇಟ್ ಗುಂಪಿನಲ್ಲಿ 848 ರನ್ಗಳನ್ನು ಗಳಿಸಿದರು.

ಇಲ್ಲಿಯ ಆಟಗಾರರು ಬೇರೆ ಕಡೆ ಹೋಗಿ ಚೆನ್ನಾಗಿ ಆಡಿದಾಗಲೆಲ್ಲ ಕರ್ನಾಟಕ ತಂಡದಿಂದ ಯಾಕೆ ಕೈಬಿಡಲಾಯಿತು ಎಂಬ ಪ್ರಶ್ನೆ ಅಭಿಮಾನಿಗಳ ವಲಯದಿಂದ ಕೇಳಿಬರುತ್ತದೆ. ಈ ಹಿಂದೆ ಉತ್ತಮ ಲಯದಲ್ಲಿದ್ದ ಗಣೇಶ್ ಸತೀಶ್ ಹಾಗೂ ಈಚೆಗೆ ಕೆ.ವಿ. ಸಿದ್ಧಾರ್ಥ್ ಅವರನ್ನು ಕೈಬಿಟ್ಟಾಗಲೂ ಆಯ್ಕೆಗಾರರ ನಡೆ ಅಚ್ಚರಿ ಮೂಡಿಸಿತ್ತು.

‘ಇಲ್ಲಿ ತಂಡದಿಂದ ಕೈಬಿಡಲು ಬೇರೆ ಬೇರೆ ಕಾರಣಗಳಿವೆ. ಅವರಿಗೆ ಬಹಳಷ್ಟು ಅವಕಾಶಗಳನ್ನು ಕೊಟ್ಟ ಮೇಲೂ ವಿಫಲರಾಗಿದ್ದರೆ ಕೈಬಿಡುವುದು ಅನಿವಾರ್ಯ. ಇನ್ನೊಂದೆಡೆ ವಯಸ್ಸು ಹೆಚ್ಚಿದಾಗಲೂ ಇಂತಹ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇರುತ್ತದೆ. ಬೆಂಚ್ನಲ್ಲಿ ಕಾಯುತ್ತಿರುವ ಯುವಪ್ರತಿಭೆಗಳಿಗೆ ಸ್ಥಳಾವಕಾಶ ಮಾಡಿಕೊಡಬೇಕಾಗುತ್ತದೆ. ಆದ್ದರಿಂದ ಇಂತಹ ಕಠಿಣ ನಿರ್ಧಾರಕ್ಕೆ ಕೈಹಾಕುವುದು ಅನಿವಾರ್ಯ. ಕರ್ನಾಟಕದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಅವರಿಗೆ ಬೇಗ ಅವಕಾಶ ಕೊಟ್ಟರೆ ರಾಜ್ಯ ತಂಡಕ್ಕೂ ಲಾಭ ಮತ್ತು ಆಟಗಾರರಿಗೂ ರಾಷ್ಟ್ರೀಯ ಆಯ್ಕೆಗಾರರ ಗಮನ ಸೆಳೆಯಲು ವೇದಿಕೆ ಸಿಗುತ್ತದೆ’ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ರಾಜ್ಯದಲ್ಲಿ ಎಲ್ಲ ವಯೋಮಿತಿ, ಲೀಗ್ ಮತ್ತಿತರ ವಿಭಾಗಗಳಲ್ಲಿ 2500ಕ್ಕೂ ಹೆಚ್ಚು ಪಂದ್ಯಗಳು ನಡೆಯುತ್ತವೆ. ಕ್ಲಬ್ಗಳ ನಡುವೆಯೇ ಅಪಾರ ಪೈಪೋಟಿ ಇದೆ. ಹೀಗಾಗಿ ಪ್ರತಿವರ್ಷವೂ ಹೊಸ ಮುಖಗಳು ಬರುತ್ತವೆ. ಅದರಿಂದಾಗಿಯೇ ಕಳೆದೆರಡು ರಣಜಿ ಋತುಗಳಲ್ಲಿ ಎಂಟು ಆಟಗಾರರು ಪದಾರ್ಪಣೆ ಮಾಡಲು ಸಾಧ್ಯವಾಗಿದೆ. ಈ ವರ್ಷ ಪದಾರ್ಪಣೆ ಮಾಡಿದ್ದ ಬ್ಯಾಟರ್ ಸ್ಮರಣ್ ರವಿಚಂದ್ರನ್, ವಿಕೆಟ್ಕೀಪರ್ ಕೃಷ್ಣನ್ ಶ್ರೀಜಿತ್ ಅವರು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಸ್ಮರಣ್ ಶತಕಗಳನ್ನು ಸಿಡಿಸಿ ಗೆಲುವಿನ ರೂವಾರಿಯೂ ಆಗಿದ್ದಾರೆ. ಎಡಗೈ ವೇಗಿ ಅಭಿಲಾಷ್ ಶೆಟ್ಟಿ, ಯಶೋವರ್ಧನ್ ಪರಂತಾಪ್ ಕೂಡ ಗಮನ ಸೆಳೆದರು. 3 ವರ್ಷಗಳ ಹಿಂದಷ್ಟೇ ರಾಜ್ಯ ತಂಡಕ್ಕೆ ಪದಾರ್ಪಣೆ ಮಾಡಿದ್ದ ವಿದ್ವತ್ ಕಾವೇರಪ್ಪ ಮತ್ತು ವೈಶಾಖ ವಿಜಯಕುಮಾರ್ ಅವರೂ ಈಗ ಅಡಿಯಿಟ್ಟಿರುವ ನವಪ್ರತಿಭೆಗಳಿಂದ ಕಠಿಣ ಪೈಪೋಟಿ ಎದುರಿಸುವಂತಾಗಿದೆ. ಇದು ರಾಜ್ಯ ಕ್ರಿಕೆಟ್ನ ಎಲ್ಲ ವಿಭಾಗಗಳಲ್ಲಿಯೂ ಕಾಣುತ್ತಿರುವ ಪೈಪೋಟಿಯ ತೀವ್ರತೆಗೆ ಒಂದು ಉದಾಹರಣೆಯಷ್ಟೇ.

ಈ ಭರಾಟೆಯಲ್ಲಿ ಪ್ರದರ್ಶನ ಮಟ್ಟ ಸ್ವಲ್ಪ ಏರುಪೇರಾದರೂ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚುತ್ತಿವೆ. ಎಂಟು ಬಾರಿ ರಣಜಿ ಚಾಂಪಿಯನ್ ಆಗಿರುವ ಕರ್ನಾಟಕವು ದೇಶಿ ಕ್ರಿಕೆಟ್ನಲ್ಲಿ ಪ್ರತಿಸಲವೂ ಪ್ರಶಸ್ತಿ ಜಯಿಸಬೇಕು ಎಂಬ ನಿರೀಕ್ಷೆ ಕ್ರಿಕೆಟ್ ಪ್ರಿಯರಲ್ಲಿರುವುದು ಸಹಜ. ಈ ಒತ್ತಡವನ್ನು ನಿಭಾಯಿಸಿ ಉತ್ಕೃಷ್ಟ ದರ್ಜೆಯ ಆಟವಾಡುವ ಪ್ರತಿಭೆಗಳ ತಂಡವನ್ನು ಕಟ್ಟುವ ಒತ್ತಡ ಆಯ್ಕೆಗಾರರ ಮೇಲೆಯೂ ಇರುತ್ತದೆ. ಇಂತಹ ಸಂದರ್ಭದಲ್ಲಿ ಕೆಲವು ಅರ್ಹ ಪ್ರತಿಭೆಗಳು ಅವಕಾಶವಂಚಿತರಾದ ದೂರುಗಳೂ ಪ್ರತಿಧ್ವನಿಸುತ್ತವೆ.

ಈ ಬಾರಿ ಅನುಭವಿ ಮನೀಷ್ ಪಾಂಡೆ ಅವರನ್ನು ಋತುವಿನ ಮಧ್ಯಂತರದಲ್ಲಿ ಕೈಬಿಟ್ಟಿದ್ದು ಬಹಳಷ್ಟು ಚರ್ಚೆಗೆ ಕಾರಣವಾಗಿತ್ತು. ಭಾರತ ತಂಡದಲ್ಲಿ ಆಡಿದ್ದ ಪಾಂಡೆ, ಕರ್ನಾಟಕವನ್ನು 14 ವರ್ಷಗಳಿಂದ ಪ್ರತಿನಿಧಿಸಿದ್ದರು. ಮುಂದಿನ ದಿನಗಳಲ್ಲಿ ಅವರು ಕೂಡ ಹೊರ ರಾಜ್ಯಕ್ಕೆ ತೆರಳುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.

ಕರ್ನಾಟಕದಿಂದ ಬೇರೆಡೆ ಹೋಗುವ ಪರಿಪಾಟ ದಶಕಗಳ ಹಿಂದಿನಿಂದಲೂ ಇದೆ. ಸೈಯ್ಯದ್ ಕಿರ್ಮಾನಿ (ರೈಲ್ವೇಸ್), ಜೆ. ಅರುಣಕುಮಾರ್ (ಅಸ್ಸಾಂ, ಗೋವಾ), ಕೆ. ಶ್ರೀನಾಥ್ (ತಮಿಳುನಾಡು), ಆನಂದ್ ಕಟ್ಟಿ (ಅಸ್ಸಾಂ), ಯರೇಗೌಡ (ರೈಲ್ವೇಸ್), ದೀಪಕ್ ಚೌಗುಲೆ (ಜಾರ್ಖಂಡ್), ಉದಿತ್ ಪಟೇಲ್ (ತ್ರಿಪುರಾ), ರಿಯಾನ್ ನಿನಾನ್ (ಗೋವಾ), ಕೆ.ಬಿ. ಪವನ್ (ತ್ರಿಪುರಾ), ಕೇರಳ, ನಾಗಾಲ್ಯಾಂಡ್, ಮಿಜೋರಾಂ), ಟಿ. ಪ್ರದೀಪ್ (ರೈಲ್ವೇಸ್), ಅಮಿತ್ ವರ್ಮಾ (ಅಸ್ಸಾಂ, ಗೋವಾ, ಕೇರಳ), ಗಣೇಶ್ ಸತೀಶ್ (ವಿದರ್ಭ, ತ್ರಿಪುರಾ), ರಾಬಿನ್ ಉತ್ತಪ್ಪ (ಸೌರಾಷ್ಟ್ರ, ಕೇರಳ), ಆರ್. ವಿನಯಕುಮಾರ್ (ಪುದುಚೇರಿ), ಸ್ಟುವರ್ಟ್ ಬಿನ್ನಿ (ನಾಗಾಲ್ಯಾಂಡ್), ಸಿ.ಎಂ.ಗೌತಮ್ (ಗೋವಾ), ಅಬ್ರಾರ್ ಖಾಜಿ (ಮಿಜೋರಾಂ, ನಾಗಾಲ್ಯಾಂಡ್), ರೋನಿತ್ ಮೋರೆ (ಹಿಮಾಚಲ ಪ್ರದೇಶ, ಸಿಕ್ಕಿಂ), ಸಿ.ಎ. ಕಾರ್ತಿಕ್ (ಸಿಕ್ಕಿಂ), ಪವನ್ ದೇಶಪಾಂಡೆ (ಪುದುಚೇರಿ), ಲಿಯಾನ್ ಖಾನ್ (ಸಿಕ್ಕಿಂ), ಅಭಿಷೇಕ್ ರೆಡ್ಡಿ (ಆಂಧ್ರ) ಮತ್ತು ಕ್ರಾಂತಿಕುಮಾರ್ (ಸಿಕ್ಕಿಂ) ಅವರು ಪರರಾಜ್ಯಗಳಲ್ಲಿ ಆಡಿದ್ದ ಪ್ರಮುಖರು. ಶ್ರೇಯಸ್ ಗೋಪಾಲ್ ಕೂಡ ಒಂದು ಋತುವಿನಲ್ಲಿ ಕೇರಳ ತಂಡಕ್ಕೆ ಆಡಿ, ಕರ್ನಾಟಕಕ್ಕೆ ಮರಳಿದರು.

‘ಈಗ ಐಪಿಎಲ್ ಆಕರ್ಷಣೆ ಹೆಚ್ಚಿದೆ. ಫ್ರ್ಯಾಂಚೈಸಿಗಳ ಗಮನ ಸೆಳೆಯಲು ಆಟಗಾರರು ತಮ್ಮನ್ನು ಯಾವುದಾದರೂ ಒಂದು ತಂಡದಲ್ಲಿ ಸಕ್ರಿಯವಾಗಿರಿಸಿಕೊಳ್ಳಲು ಬಯಸುತ್ತಾರೆ. ಭಾರತ ತಂಡವಷ್ಟೇ ಅಲ್ಲ, ಐಪಿಎಲ್ನಲ್ಲಿ ಅವಕಾಶ ಪಡೆಯಲು ಇದು ಅನಿವಾರ್ಯ. ಕರ್ನಾಟಕದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಇಲ್ಲಿ ಅವಕಾಶ ಸಿಗದವರು ಹೊರ ರಾಜ್ಯಗಳಿಗೆ ಹೋಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಬಹುದು. ಆದರೆ ಆಟಗಾರರನ್ನು ತಂಡದಿಂದ ಕೈಬಿಡುವಾಗ ಸಂಬಂಧಿತ ಆಡಳಿತವು ಗೌರವಯುತವಾದ ಸಂವಹನ ಮಾಡಬೇಕು. ಹಲವು ವರ್ಷಗಳಿಂದ ರಾಜ್ಯಕ್ಕೆ ಉತ್ತಮ ಕೊಡುಗೆ ನೀಡಿದವರನ್ನು ಸೌಜನ್ಯಯುತವಾಗಿ ಕಳಿಸಬೇಕು’ ಎಂದು ಮಾಜಿ ಆಟಗಾರರೊಬ್ಬರು ಅಭಿಪ್ರಾಯಪಡುತ್ತಾರೆ.

ಕಳೆದ ಕೆಲ ವರ್ಷಗಳಿಂದ ಈಶಾನ್ಯ ರಾಜ್ಯಗಳ ತಂಡಗಳೂ ಕಣಕ್ಕಿಳಿದಿವೆ. ಅಲ್ಲಿಯ ಕೆಲ ರಾಜ್ಯಗಳಲ್ಲಿ ಇಂದಿಗೂ ಸೂಕ್ತ ಕ್ರಿಕೆಟ್ ಮೈದಾನಗಳಿಲ್ಲ. ಆದರೆ ಇಲ್ಲಿಂದ ಅಲ್ಲಿಗೆ ಆಡಲು ಅವಕಾಶ ಅರಸಿ ಹೋದವರು ಆ ರಾಜ್ಯಗಳಲ್ಲಿ ಕ್ರಿಕೆಟ್ ಆಸಕ್ತಿ ಬೆಳೆಯಲು ಕಾರಣರಾಗಿದ್ದಾರೆ. ಆ ಮಟ್ಟಿಗೆ ಕರ್ನಾಟಕದ ಆಟಗಾರರು ಗೆದ್ದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.