ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ವರ್ಗ ಎನ್ನಲಾಗುವ ಮೀಸಲಾತಿ

ಬಿಪಿಎಲ್ ಕಾರ್ಡಿನ ಲೆಕ್ಕದಲ್ಲಿ ಬಡವನಲ್ಲದವನೂ ಮಕ್ಕಳಿಗೆ ಉದ್ಯೋಗ ಭರವಸೆಯ ಶಿಕ್ಷಣ ಕೊಡಿಸುವಾಗ ಬಡವನಾಗುತ್ತಾನೆ!
Last Updated 20 ಜನವರಿ 2019, 20:15 IST
ಅಕ್ಷರ ಗಾತ್ರ

ಮೇಲ್ವರ್ಗ ಎನ್ನಲಾಗುವ, ಮೀಸಲಾತಿ‌ ಪಟ್ಟಿಯಿಂದ ಹೊರಗಿರುವ ಜಾತಿಗಳ ಬಡವರಿಗೆ ಶೇ 10ರಷ್ಟು ಮೀಸಲಾತಿ ನೀಡಲು ಸಂವಿಧಾನಕ್ಕೆ ತಿದ್ದುಪಡಿ ತಂದಿರುವುದು ಹಲವು ಮುಖದ ಚರ್ಚೆಗೆ ಕಾರಣವಾಗಿದೆ.

ಮೀಸಲಾತಿ ಇರುವುದು ಸಾಮಾಜಿಕ ಅನ್ಯಾಯ ಸರಿಪಡಿಸಲು. ಬಡತನ ನಿರ್ಮೂಲನೆಗೆ ಅಲ್ಲ. ಸಂವಿಧಾನದಲ್ಲಿ ಬಡತನವನ್ನು ಆಧಾರವಾಗಿಸಲು ಅವಕಾಶವಿರಲಿಲ್ಲ. ಹಾಗಾಗಿಯೇ ನರಸಿಂಹ ರಾವ್ ಪ್ರಧಾನಿಯಾಗಿದ್ದಾಗ ಹೊರಡಿಸಿದ ಆದೇಶವು ಸುಪ್ರೀಂ ಕೋರ್ಟಿನಲ್ಲಿ ಬಿದ್ದು ಹೋಯಿತು.

ಸಂವಿಧಾನಕ್ಕೆ ತಿದ್ದುಪಡಿ ತರಬೇಕಾದರೆ ಮೂರನೇ ಎರಡರಷ್ಟು ಬಹುಮತ ಬೇಕು. ಬಿಜೆಪಿಗೆ ಆ ಶಕ್ತಿ ಇರಲಿಲ್ಲ. ಚುನಾವಣೆಯ ಸಂದರ್ಭ ಇರುವುದರಿಂದಲೇ ಕಾಂಗ್ರೆಸ್, ಬಿಎಸ್‌ಪಿ, ಟಿಎಂಸಿ ಇತ್ಯಾದಿ ವೈರುಧ್ಯದ ನಿಲುವುಗಳ ಪಕ್ಷಗಳೂ ಬೆಂಬಲಿಸಿವೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ವಿರೋಧಿ ಕಾಯ್ದೆಗೆ ವ್ಯಕ್ತಿಯೊಬ್ಬರ ದೂರಿನಿಂದಾಗಿ ಸುಪ್ರೀಂಕೋರ್ಟ್ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಲು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತು. ಈ ಕಾಯ್ದೆ ಬಗ್ಗೆ ಮೇಲ್ವರ್ಗದವರಲ್ಲಿ ಸಹಜವಾದ ಅಸಮಾಧಾನವಿದೆ.

ಬಿಜೆಪಿ ಬಗೆಗಿನ ಈ ಅಸಹನೆಯನ್ನು ಬಳಸಿಕೊಂಡು ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಡದ ಚುನಾವಣೆಯಲ್ಲಿ ಕಾಂಗ್ರೆಸ್ ದಡ ಸೇರಿತು. ಬಿಎಸ್‌ಪಿ ಜೊತೆಗಿನ ಮೈತ್ರಿಗೆ ಕಾಂಗ್ರೆಸ್ ಹಿಂದೇಟು ಹಾಕಿದ್ದು ಇದೇ ಕಾರಣಕ್ಕೆ. ಮೇಲ್ವರ್ಗ ಮತ್ತು ಮಾಯಾವತಿ ನಡುವಿನ ಆಯ್ಕೆಯಲ್ಲಿ ಕಾಂಗ್ರೆಸ್ ಮೇಲ್ವರ್ಗಕ್ಕೆ ಆತುಕೊಂಡಿತು. ಹಾಗಾಗಿಯೇ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ಸನ್ನು ಮಾಯಾವತಿ ದೂರ ಇಟ್ಟಿ
ದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ, ಬಿಜೆಪಿ ತನ್ನ ಬಗ್ಗೆ ಮುನಿಸಿಕೊಂಡಿರುವ ಮೇಲ್ವರ್ಗ
ವನ್ನು ಮತ್ತೆ ಸೆಳೆಯಲು ಅವರಿಗೆ ಮೀಸಲಾತಿಯನ್ನು ಜಾರಿಗೆ ತಂದಿದೆ. ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಬಲಿಷ್ಠ ಜಾತಿಗಳು ಮೀಸಲಾತಿಗಾಗಿ ದೊಡ್ಡ ಹೋರಾಟ ನಡೆಸಿದ್ದರ ಪ್ರಭಾವವೂ ಇದರ ಹಿಂದಿದೆ.

ಆರ್ಥಿಕವಾಗಿ ಹಿಂದುಳಿದವರ ಸ್ಥಿತಿಗತಿ ಅಧ್ಯಯನಕ್ಕಾಗಿ 2006ರಲ್ಲಿ ಯುಪಿಎ ಸರ್ಕಾರವು ಮೇಜರ್ ಜನರಲ್ ಎಸ್.ಆರ್. ಸಿನ್ಹೊ ನೇತೃತ್ವದ ತ್ರಿಸದಸ್ಯರ ರಾಷ್ಟ್ರೀಯ ಆಯೋಗ ರಚಿಸಿತ್ತು. 2010ರ ಜುಲೈನಲ್ಲಿ ಈ ಆಯೋಗ ವರದಿ ಸಲ್ಲಿಸಿದ್ದು, ಆರ್ಥಿಕವಾಗಿ ಹಿಂದುಳಿದವರನ್ನು ಗುರುತಿಸಲು 13 ಮಾನದಂಡಗಳನ್ನು ಸೂಚಿಸಿದೆ. ಈ ಆಧಾರದಲ್ಲಿಯೇ ಹೊಸ ಮೀಸಲಾತಿ ರೂಪುಗೊಂಡಿದೆ.

ಕರ್ನಾಟಕದಲ್ಲಿ ಎಸ್‌.ಸಿ, ಎಸ್‌.ಟಿ ಹಾಗೂ ಒಬಿಸಿ ಪಟ್ಟಿಗೆ ಜಾತಿಗಳ ಸೇರ್ಪಡೆಯ ವಿಷಯದಲ್ಲಿ ಮತಬೇಟೆಯ ರಾಜಕಾರಣ ನಡೆದಿರುವುದು ಬಹಿರಂಗ ಸತ್ಯ. ಅಕ್ಕಪಕ್ಕದ ರಾಜ್ಯಗಳಲ್ಲಿ ಒಬಿಸಿ, ಎಸ್‌.ಟಿ ಪಟ್ಟಿಯಲ್ಲಿರುವ ಬೋವಿ, ಲಂಬಾಣಿ ಸಮುದಾಯಗಳು ನಮ್ಮಲ್ಲಿ ಎಸ್‌.ಸಿ ಪಟ್ಟಿಯಲ್ಲಿವೆ. ಭೂ ಒಡೆತನದ ಜಾತಿಗಳೆನಿಸಿದ ಮಹಾರಾಷ್ಟ್ರದ ಮರಾಠರು, ಗುಜರಾತಿನ ಪಟೇಲರು, ಉತ್ತರ ಭಾರತದ ಜಾಟರು ತಮ್ಮನ್ನು ಒಬಿಸಿ ಪಟ್ಟಿಗೆ ಸೇರಿಸುವಂತೆ ದಶಕಗಳಿಂದ ಚಳವಳಿ ನಡೆಸಿದ್ದಾರೆ. ಆದರೆ ಕರ್ನಾಟಕದಲ್ಲಿ ಭೂ ಒಡೆತನದ ಜಾತಿಗಳೆನಿಸಿದ ಬಂಟ, ಕೊಡವ, ರೆಡ್ಡಿ, ಲಿಂಗಾಯತ, ಒಕ್ಕಲಿಗ ಸಮುದಾಯಗಳು ಒಬಿಸಿ ಪಟ್ಟಿಯಲ್ಲಿ ಸ್ಥಾನ ಪಡೆದು ಮೀಸಲಾತಿ ಅನುಭವಿಸುತ್ತಿವೆ. ಕಾನೂನು ತಜ್ಞರ ವರದಿಯ ಆಧಾರದಲ್ಲಿಯೇ ಈ ಎಲ್ಲ ಸಂಗತಿಗಳೂ ನಡೆದು ಹೋಗಿವೆ.

ಹಾಗಾಗಿ, ಈಗ ಕರ್ನಾಟಕದಲ್ಲಿ ಮೇಲ್ವರ್ಗದ ಬಡವರೆಂದರೆ ಯಾರು ಎಂಬ ಪ್ರಶ್ನೆ ಎದ್ದಿದೆ. ಶೇ 5ರಷ್ಟು ಜನಸಂಖ್ಯೆಗೂ ಸರಿದೂಗಲಾರದ ಬ್ರಾಹ್ಮಣ, ವೈಶ್ಯ ಸಮುದಾಯದ ಬಡವರ ಪ್ರಮಾಣವಾದರೂ ಎಷ್ಟಿದ್ದೀತು? ಅವರಿಗೆ ಶೇ 10ರ ಮೀಸಲಾತಿ ಎಂದರೆ ದುಬಾರಿ ಅಲ್ಲವೇ ಎನ್ನುವುದು ಚರ್ಚೆಗೆ ಕಾರಣವಾಗಿದೆ. ಈ ಮೀಸಲಾತಿಗೆ ವಾರ್ಷಿಕ ಗರಿಷ್ಠ ₹ 8 ಲಕ್ಷ ಆದಾಯ ಇರುವವರೆಲ್ಲ ಅರ್ಹರು. ಇವರನ್ನು ಬಡವರೆಂದು ಗುರುತಿಸಬೇಕೇ ಎನ್ನುವ ಪ್ರಶ್ನೆ ಎದ್ದಿದೆ.

ಇದೇ ಆದಾಯದ ಮಿತಿ ಒಬಿಸಿಗೂ ಇದೆ. ಎಸ್‌.ಸಿ, ಎಸ್‌.ಟಿ ಹಾಗೂ ಒಬಿಸಿ ನಡುವಿನ ವ್ಯತ್ಯಾಸವೆಂದರೆ ಆರ್ಥಿಕ ಮಿತಿ. ವಾರ್ಷಿಕ ಆದಾಯದ ಮಿತಿ ₹ 4 ಲಕ್ಷ ಇದ್ದದ್ದನ್ನು ಹಿಂದಿನ ಯುಪಿಎ ಸರ್ಕಾರ ₹ 6 ಲಕ್ಷಕ್ಕೆ ಏರಿಸಿತ್ತು. 2 ವರ್ಷಗಳ ಹಿಂದೆ ಈಗಿನ ಬಿಜೆಪಿ ನೇತೃತ್ವದ ಸರ್ಕಾರ ₹ 8 ಲಕ್ಷಕ್ಕೆ ಏರಿಸಿತು. ಈಗ ಅದೇ ಮಿತಿಯನ್ನು ಮೇಲ್ವರ್ಗದ ಬಡವರಿಗೂ ವಿಸ್ತರಿಸಲಾಗಿದೆ.

ಸರ್ಕಾರಿ ಉದ್ಯೋಗಗಳೇ ಕುಸಿದು ಹೋಗಿರುವುದರಿಂದ ಮೀಸಲಾತಿಯಿಂದ ಏನು ಪ್ರಯೋಜನ ಎಂಬುದು ಮತ್ತೊಂದು ಪ್ರಶ್ನೆ. ಈಗ ಮೀಸಲಾತಿ ಅವಶ್ಯಕತೆ ಹೆಚ್ಚಾಗಿರುವುದು ಶೈಕ್ಷಣಿಕ ಕ್ಷೇತ್ರದಲ್ಲಿ. ಎಂಜಿನಿಯರಿಂಗ್, ಮೆಡಿಕಲ್, ಬಿ ಫಾರ್ಮ, ಕೃಷಿ ವಿಜ್ಞಾನ, ಪಶುವೈದ್ಯ ವಿಜ್ಞಾನ, ಮ್ಯಾನೇಜ್‌ಮೆಂಟ್, ಬಯೊಟೆಕ್‌ ತರಹದ ಅಧ್ಯಯನಕ್ಕಷ್ಟೇ ಉದ್ಯೋಗದ ಬಾಗಿಲು ತೆರೆದುಕೊಳ್ಳುತ್ತಿದೆ.

ಎಂಜಿನಿಯರಿಂಗ್‌ನಲ್ಲಿ ಪ್ರತಿವರ್ಷ 90 ಸಾವಿರದಷ್ಟು ಸೀಟುಗಳು ಭರ್ತಿಯಾಗುತ್ತಿವೆ. ಇದರಲ್ಲಿ ಶೇ 45ರಷ್ಟು ಸೀಟು ಸಿಇಟಿಯಿಂದ, ಶೇ 30ರಷ್ಟು ಕಾಮೆಡ್– ಕೆಯಿಂದ ಆಯ್ಕೆಯಾದವರಿಗೆ ಸಿಗುತ್ತವೆ. ಉಳಿದ ಶೇ 25ರಷ್ಟು ಸೀಟು ಮ್ಯಾನೇಜ್‌ಮೆಂಟ್ ಕೋಟಾದಲ್ಲಿ ದುಡ್ಡಿ
ದ್ದವರಿಗೆ ಬಿಕರಿಯಾಗುತ್ತವೆ. ಸಿಇಟಿ ಹಾಗೂ ಕಾಮೆಡ್–ಕೆ ಎರಡಕ್ಕೂ ಮೀಸಲಾತಿ ಅನ್ವಯವಾಗುತ್ತದೆ.

ಸಿಇಟಿಯಿಂದ ಆಯ್ಕೆಯಾದ ವಿದ್ಯಾರ್ಥಿ ವಾರ್ಷಿಕ ₹ 60 ಸಾವಿರ ಶುಲ್ಕ ಕಟ್ಟಬೇಕು. ಉಳಿದ ಖರ್ಚುಗಳು ಪ್ರತ್ಯೇಕ. ಕಾಮೆಡ್–ಕೆ ಸೀಟು ಸಿಕ್ಕರೆ 3 ಪಟ್ಟು ಹೆಚ್ಚು ಶುಲ್ಕ. ಬಿ ಫಾರ್ಮ, ಕೃಷಿ ವಿಜ್ಞಾನ, ಬಯೋಟೆಕ್ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಮೆಡಿಕಲ್ ಮತ್ತೂ ದುಬಾರಿ. ಸರ್ಕಾರಿ ಶಾಲಾ ಶಿಕ್ಷಕನೊ, ಪಿಡಬ್ಲ್ಯುಡಿ ನೌಕರನೊ ಬಿಪಿಎಲ್ ಕಾರ್ಡಿನ ಲೆಕ್ಕದಲ್ಲಿ ಬಡವನಲ್ಲದಿರಬಹುದು. ಆದರೆ ಮಕ್ಕಳಿಗೆ ಉದ್ಯೋಗ ಭರವಸೆಯ ಶಿಕ್ಷಣ ಕೊಡಿಸುವಾಗ ಅವನು ಬಡವನಾಗುತ್ತಾನೆ. ಹೀಗಾಗಿಯೇ ವಾರ್ಷಿಕ ಆದಾಯದ ಮಿತಿ ₹8 ಲಕ್ಷ ಇರುವುದು.

ಜಾಟ್, ಮರಾಠ, ಪಟೇಲ್ ಸಮುದಾಯಗಳ ಮೀಸಲಾತಿ ಚಳವಳಿಯ ಪ್ರಮುಖ ಆಕರ್ಷಣೆ ಎಂಜಿನಿಯರಿಂಗ್ ಸೀಟು, ಆ ಮೂಲಕ ಉದ್ಯೋಗ ದಕ್ಕುತ್ತದೆ ಎಂಬುದಾಗಿತ್ತು. ವಾರ್ಷಿಕ ₹10 ಸಾವಿರದಷ್ಟು ಶುಲ್ಕವಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳ ದುಃಸ್ಥಿತಿ ನೋಡಿದರೆ ಅಲ್ಲಿ ಯಾರೂ ಓದಲು ಬಯಸುವುದಿಲ್ಲ. ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳ ಸಂಖ್ಯೆ ಹೆಚ್ಚಿಸುವ, ಕಾಲಮಾನಕ್ಕೆ ತಕ್ಕಂತೆ ಅವುಗಳನ್ನು ಸಜ್ಜುಗೊಳಿಸುವ ಕೆಲಸವೂ ‘ಸಾಮಾಜಿಕ ನ್ಯಾಯ’ವೇ ಆಗಿದೆ.

ಭೂ ಒಡೆತನದ ಜಾತಿಗಳೆನಿಸಿದ ಬಂಟ, ರೆಡ್ಡಿ, ಕೊಡವ, ಒಕ್ಕಲಿಗ, ಲಿಂಗಾಯತ, ಸಮುದಾಯಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ಹೊರತರುವುದು ಹೇಗೆ ಎನ್ನುವುದು ಈ ಹೊತ್ತಿನ ಸಾಮಾಜಿಕ ನ್ಯಾಯದ ಗಂಭೀರ ಪ್ರಶ್ನೆಯಾಗಿದೆ. ಪೀಳಿಗೆಯಿಂದ ಪೀಳಿಗೆಗೆ ಭೂ ಒಡೆತನ ಕಡಿಮೆಯಾಗಿದೆ. ಈಗ ಬಹುತೇಕ ಇರುವವರು ಸಣ್ಣ ಹಿಡುವಳಿದಾರರು. ಆದರೂ ಹೊಸ ಮೀಸಲಾತಿಯಲ್ಲಿ, 5 ಎಕರೆಗಿಂತ ಕಡಿಮೆ ಇರುವ ಸಣ್ಣ ಹಿಡುವಳಿದಾರರಿಗೆ ಅವಕಾಶ ಕಲ್ಪಿಸಲಾಗಿದೆ.

ಭೂ ಒಡೆತನದ ಈ ಸಶಕ್ತ ಜಾತಿಗಳವರು ರಾಜಕೀಯವಾಗಿಯೂ ಬಲಾಢ್ಯರು. ಒಂದೊಮ್ಮೆ ಈ ಜಾತಿಗಳು ಹೊಸ ಮೀಸಲಾತಿಗೆ ವರ್ಗಾವಣೆಯಾದರೆ ಆಗ ಹಿಂದುಳಿದ ವರ್ಗಗಳಲ್ಲಿ ಉಳಿಯುವ ಮೀಸಲಾತಿಯನ್ನು ಇನ್ನೂ ಸಾಮಾಜಿಕ ಸ್ಥಾನಮಾನ ಸಿಗದ ಅಲೆಮಾರಿ ಸಮುದಾಯಗಳಿಗೆ, ಲೈಂಗಿಕ ಅಲ್ಪಸಂಖ್ಯಾತರಿಗೆ ವಿಸ್ತರಿಸಬಹುದು.

ಮೇಲ್ವರ್ಗದ ಬಡವರಿಗೆ ಸಿಗುವ ಮೀಸಲಾತಿಯಲ್ಲಿ ಅಲ್ಪಸಂಖ್ಯಾತರೂ ಒಳಗೊಂಡಿದ್ದಾರೆ. ವಿರೋಧಾಭಾಸವೆಂದರೆ ಈ ಮಸೂದೆ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗುವುದಿಲ್ಲ. ಶೇ 25ರಷ್ಟು ಬಡವರಿಗೆ ಖಾಸಗಿ ಶಾಲೆಗಳಲ್ಲಿ ಸೀಟು ಒದಗಿಸುವ ಆರ್‌ಟಿಇ ಕಾಯ್ದೆಯಲ್ಲೂ ಈ ಕೊರತೆ ಇದೆ. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಕನಿಷ್ಠ ಅವರ ಸಮುದಾಯದ ಬಡವರಿಗಾದರೂ ಸೀಟು ಕೊಡಲು ಮುಂದೆ ಬರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT