ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ರಷ್ಯಾ ಸೃಷ್ಟಿಸಿದ ಎರಡು ಬಿಕ್ಕಟ್ಟು

ಸ್ಥಳೀಯ ಸಮಸ್ಯೆಯೊಂದು ಜಾಗತಿಕ ಸಮಸ್ಯೆಯಾಗಿ ಕಾಡಬಲ್ಲದು!
Last Updated 1 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ಜಾಗತೀಕರಣದಿಂದ ಅಂತರರಾಷ್ಟ್ರೀಯ ವಾಣಿಜ್ಯ ವ್ಯವಹಾರಗಳಿಗೆ ಬಲ ಬಂತು, ನಿಜ. ಆದರೆ ಅದರ ಕರಾಳ ಮುಖದ ದರ್ಶನವಾಗುವುದು ಯುದ್ಧದ ಸಮಯದಲ್ಲೇ. ಉಕ್ರೇನ್‌ ಮೇಲಿನ ರಷ್ಯಾದ ದಾಳಿ ಇನ್ನೂ ನಿಂತಿಲ್ಲ. ಯುದ್ಧ ಈಗಲೂ ಮುಂದುವರಿದಿದೆ. ರಷ್ಯಾದ ಸಂಪನ್ಮೂಲಗಳನ್ನು ಆಧರಿಸಿ ತಮ್ಮ ಆರ್ಥಿಕ ಮತ್ತು ಸಾಮಾಜಿಕ ಬದುಕು ಕಟ್ಟಲು ಹೊರಟ ದೇಶಗಳು, ವಿಶೇಷವಾಗಿ ಇಡೀ ಯುರೋಪು ಈಗ ಮೈ ಪರಚಿಕೊಳ್ಳುತ್ತಿವೆ. ಇದರಲ್ಲಿ ರಷ್ಯಾ ಸೃಷ್ಟಿಸಿರುವ ಎರಡು ಮಹಾ ಬಿಕ್ಕಟ್ಟುಗಳು ಎದ್ದುಕಾಣುತ್ತವೆ.

2011ರಲ್ಲೇ ನಾರ್ಡ್ ಸ್ಟ್ರೀಮ್‌-1 ಎಂಬ, 1,200 ಕಿಲೊಮೀಟರ್‌ ಉದ್ದದ ಅನಿಲ ಕೊಳಾಯಿ ಮಾರ್ಗವನ್ನು ರಷ್ಯಾ ನಿರ್ಮಿಸಿ ಪ್ರತಿದಿನ 1,700 ಲಕ್ಷ ಘನ ಮೀಟರು ಅನಿಲವನ್ನು ಈಶಾನ್ಯ ಜರ್ಮನಿಗೆ ಕಳಿಸುತ್ತಿತ್ತು. ಈ ಕೊಳವೆಯು ಬಾಲ್ಟಿಕ್‌ ಸಮುದ್ರದ ಕೆಳಗೇ ಸಾಗುತ್ತದೆ. ಇದನ್ನು ನಿರ್ಮಿಸುವುದು ಹಗ್ಗ ಎಳೆದಷ್ಟು ಸುಲಭವಲ್ಲ. ಜೊತೆಗೆ ಅದು ಹಾದುಹೋಗುವ ಆರ್ಥಿಕ ವಲಯಗಳ ಮೇಲೆ ಬೇರೆ ಬೇರೆ ದೇಶಗಳ ಹಿಡಿತವಿದೆ. ತೆರಿಗೆ ಕಟ್ಟಿದರಷ್ಟೇ ಅಲ್ಲಿ ಅನಿಲ ಹರಿಯುವುದು.

ರಷ್ಯಾವು ಉಕ್ರೇನಿನ ಮೇಲೆ ಯುದ್ಧ ಪ್ರಾರಂಭಿಸಿದಾಗ ಜರ್ಮನಿ ಇದನ್ನು ವಿರೋಧಿಸಿತು. ಪರಿಣಾಮ ‘ಜರ್ಮನಿಯ ದನಿಯನ್ನು ಅಡಗಿಸುತ್ತೇವೆ’ ಎಂದು ರಷ್ಯಾ ನೇರವಾಗಿ ಕೈಹಾಕಿದ್ದು ಅನಿಲ ಪೂರೈಕೆಯ ನಿಯಂತ್ರಣಕ್ಕೆ. ಶೇಕಡ 75 ಭಾಗ ‘ಕಟ್‌’ ಅಂದರೆ 40 ಕೋಟಿ ಘನ ಮೀಟರು ಅನಿಲದ ಹರಿವು ಸ್ಥಗಿತ. ನಿಜವಾದ ಅರ್ಥದಲ್ಲಿ ಜರ್ಮನಿಗೆ ಇದು ‘ಗ್ಯಾಸ್‌ ಟ್ರಬಲ್‌’. ನಿಮಗೆ ನೆನಪಿರಬಹುದು, ಎರಡನೇ ಮಹಾ ಯುದ್ಧದಲ್ಲಿ ನಾಜಿಗಳು ಯಹೂದ್ಯರನ್ನು ಕೊಲ್ಲಲು ಗ್ಯಾಸ್‌ ಚೇಂಬರ್‌ಗೆ ತಳ್ಳುತ್ತಿದ್ದರು. ಈಗ ಅದು ಉಲ್ಟಾ. ಜರ್ಮನಿಯಲ್ಲಿ ಮನೆಯನ್ನು ಬೆಚ್ಚಗಿಡಲು, ಅಡುಗೆಗೆ, ಕೈಗಾರಿಕೆಗೆ ಗ್ಯಾಸ್‌ ಬೇಕು. ಹೆಚ್ಚಿನಪಾಲು ರಷ್ಯಾದ ಮೇಲೆ ಅವಲಂಬನೆ. ಇಂದಿನ ದಿನಗಳಲ್ಲಿ ಒಂದು ಶತ್ರು ರಾಷ್ಟ್ರ ವನ್ನು ಹೆಡಮುರಿಗೆ ಕಟ್ಟಬೇಕೆಂದರೆ ಬಾಂಬ್‌ ದಾಳಿ ಮಾಡಬೇಕಾಗಿಲ್ಲ, ಸಂಪನ್ಮೂಲ ಪೂರೈಕೆಯನ್ನು ಕಡಿತಗೊಳಿಸಿದರೆ ಆಯಿತು. ಜರ್ಮನಿ ಈಗ ವಸ್ತುಶಃ ತತ್ತರಿಸಿಹೋಗಿದೆ.

ಅನಿಲವನ್ನು ಹೇಗೆ ಯುದ್ಧಾಸ್ತ್ರ ಮಾಡಿಕೊಳ್ಳಬಹುದು ಎಂಬ ಗುಟ್ಟು ರಷ್ಯಾಕ್ಕೆ ಗೊತ್ತಿದೆ. ಕೊಳವೆ ಮಾರ್ಗದ ದುರಸ್ತಿಯ ನೆಪ ಒಡ್ಡಿ ಪೂರೈಕೆಯನ್ನು 200 ಲಕ್ಷ ಘನ ಮೀಟರಿಗೆ ಕಡಿತಗೊಳಿಸಿತು. ಇದೇ ಸಮಯದಲ್ಲಿ ಇಡೀ ಯುರೋಪಿಗೆ ಬಿಸಿ ತಾಗಿಸಲು ಅನಿಲದ ಬೆಲೆಯನ್ನು 450 ಪಟ್ಟು ಏರಿಸಿತು. ಇದೇ ಕೊಳವೆ ಮಾರ್ಗದಲ್ಲಿ ರಷ್ಯಾವು ಯುರೋಪಿನ ಹಲವು ದೇಶಗಳಿಗೆ ಅನಿಲ ಪೂರೈಸುತ್ತಿದೆ.

ರಷ್ಯಾದ ಅನಿಲದ ಮೇಲೆ ಬಹುವಾಗಿ ಅವಲಂಬಿಸಿದ್ದ ಜರ್ಮನಿ ಈಗ ನಾರ್ವೆ, ನೆದರ್‌ಲ್ಯಾಂಡ್ಸ್‌, ಕತಾರ್‌ಗಳತ್ತ ಮುಖಮಾಡಿದೆ. ಇಟಲಿ ಮತ್ತು ಸ್ಪೇನ್‌ಗಳು ಆಲ್ಜೀರಿಯದತ್ತ ಕೈಚಾಚಿವೆ. ತನ್ನ ಕಲ್ಲಿದ್ದಲು ಆಧಾರಿತ ಉಷ್ಣಸ್ಥಾವರಗಳನ್ನು ಹಂತಹಂತವಾಗಿ ಕಡಿಮೆಗೊಳಿಸಲು ಹೊರಟಿದ್ದ ಜರ್ಮನಿ ಈಗ ಮತ್ತೆ ಉಷ್ಣಸ್ಥಾವರಗಳ ಮೊರೆಹೋಗಿದೆ. ಐರೋಪ್ಯ ಒಕ್ಕೂಟ ಈಗ ಅನಿಲ ಬಳಕೆಯನ್ನು ಶೇ 15ರಷ್ಟು ಕಡಿಮೆಗೊಳಿಸಿ ಎಂದು ನಾಗರಿಕರಿಗೆ ಸೂಚಿಸಿದೆ. ರಷ್ಯಾದ ಶೇ 40ರಷ್ಟು ಅನಿಲಕ್ಕೆ ಯುರೋಪೇ ಗಿರಾಕಿ.

ರಷ್ಯಾವು ಜರ್ಮನಿಗೆ ಅನಿಲ ಪೂರೈಸಲೆಂದೇ ಇನ್ನೊಂದು ಕೊಳವೆ ಮಾರ್ಗ ನಿರ್ಮಿಸಿದೆ- ಇದರ ಹೆಸರು ನಾರ್ಡ್-2. ಇದಕ್ಕಾಗಿ ರಷ್ಯಾಕ್ಕೆ ಸುಮಾರು 950 ಕೋಟಿ ಯೂರೊ ಖರ್ಚಾಗಿದೆ. ಈ ಮಾರ್ಗ ರಷ್ಯಾ- ಜರ್ಮನಿ- ಡೆನ್ಮಾರ್ಕ್‌- ಫಿನ್ಲೆಂಡ್- ಸ್ವೀಡನ್ನಿಗೆ ಸೇರಿದ ಆರ್ಥಿಕ ವಲಯದ ಮೂಲಕ ಸಾಗುತ್ತದೆ. ಬೇಕೆಂದೇ ಬೆಲಾರಸ್‌, ಉಕ್ರೇನ್‌, ಸ್ಲೋವಾಕಿಯ, ಜೆಕ್‌ ಮತ್ತು ಪೋಲೆಂಡ್‌ಗಳನ್ನು ತಪ್ಪಿಸಿ ಅವುಗಳಿಗೆ ಬರಬೇಕಾದ ಕರ ನಷ್ಟ ಮಾಡಿದೆ ಎಂಬ ಆರೋಪವೂ ರಷ್ಯಾದ ಮೇಲಿದೆ. ವರ್ಷಕ್ಕೆ 550 ಕೋಟಿ ಘನ ಮೀಟರು ಅನಿಲ ಹರಿದು ಯುರೋಪಿನ 2,600 ಲಕ್ಷ ಅಡುಗೆ ಮನೆಗಳಿಗೆ ಸರಬರಾಜಾಗಬೇಕಾಗಿತ್ತು. ಸದ್ಯಕ್ಕೆ ಜರ್ಮನಿ ಈ ಯೋಜನೆಗೆ ಹಸಿರು ನಿಶಾನೆ ತೋರಿಸುತ್ತಿಲ್ಲ. ಬಿಕ್ಕಟ್ಟು ಹೆಚ್ಚುತ್ತಿದೆ. ಅಮೆರಿಕ ಮತ್ತು ಯುನೈಟೆಡ್‌ ಕಿಂಗ್‌ಡಂ, ಈ ಯೋಜನೆಯಿಂದ ರಷ್ಯಾದ ಮೇಲಿನ ಅವಲಂಬನೆ ಹೆಚ್ಚಾಗುತ್ತದೆಂಬ ಅಸಮಾಧಾನ ತೋಡಿಕೊಂಡಿವೆ. ಮಾರ್ಗ ಸಿದ್ಧವಾಗಿದ್ದರೂ, ಅನಿಲ ಹರಿಯಲು ಎಡರು ತೊಡರುಗಳಿವೆ– 25 ವರ್ಷಗಳ ಕಾಲ ಅನಿಲ ಪೂರೈಸುವ ಕರಾರಿಗೆ ರಷ್ಯಾ ಮತ್ತು ಜರ್ಮನಿ ಎರಡೂ ದೇಶಗಳು ಸಹಿ ಹಾಕಿವೆ.

ಇದು ಹೇಗೂ ಇರಲಿ, ಯುರೋಪನ್ನು ಮಾತ್ರ ಬಾಧಿಸುವ ಸಮಸ್ಯೆ ಇದು. ಆದರೆ ಜಗತ್ತು ಬೆಚ್ಚಿ ಬೀಳು ತ್ತಿರುವುದು ಪರಮಾಣು ಸ್ಥಾವರಗಳ ಮೇಲೆ ಈ ದಾಳಿ ಬೀರುವ ಪರಿಣಾಮಗಳ ಬಗ್ಗೆ. ಕಳೆದ ಮಾರ್ಚ್‌ ತಿಂಗಳಲ್ಲೇ ಚೆರ್ನೋಬಿಲ್‌ ಪರಮಾಣು ಸ್ಥಾವರದ ಬಳಿಯ ಅಧಿಕ ವೋಲ್ಟೇಜ್‌ ವಿದ್ಯುತ್‌ ತಂತಿಗಳು ರಷ್ಯಾದ ದಾಳಿಯಿಂದ ಜಖಂಗೊಂಡಿದ್ದವು. ಅದನ್ನು ದುರಸ್ತಿ ಮಾಡಿದ ಮೇಲೆ ಸಮಸ್ಯೆ ಮುಗಿಯಬೇಕಾಗಿತ್ತು. 1986ರಲ್ಲಿ, ರಷ್ಯಾದ ಸುಪರ್ದಿಯಲ್ಲಿದ್ದ ಚೆರ್ನೋಬಿಲ್‌ ಪರಮಾಣು ಸ್ಥಾವರ ಸೋರಿ ವಿಕಿರಣ ಉತ್ತರ ಧ್ರುವ ದವರೆಗೆ ಹರಡಿತ್ತು. ಈಗ ಅಂತಹುದೇ ಭೀತಿ ಇಡೀ ಯುರೋಪಿನಲ್ಲಿ ಅತಿದೊಡ್ಡ ಪರಮಾಣು ಸ್ಥಾವರ ಎನಿ ಸಿರುವ ಝಪೋರಿಜಿಯಾ ಬಳಿ ಸ್ಥಾಪಿಸಿರುವ ಸ್ಥಾವರಕ್ಕೂ ಎದುರಾಗಿದೆ. ಇದನ್ನೂ ರಷ್ಯಾವೇ ಸ್ಥಾಪಿಸಿತ್ತು. ಆದರೆ ಈಗ ಉಕ್ರೇನ್‌ನ ಆಡಳಿತಕ್ಕೆ ಬಂದಿದೆ. ವಾರ್ಷಿಕ 29.3 ಗಿಗಾ ವ್ಯಾಟ್‌ ವಿದ್ಯುತ್‌ ಉತ್ಪಾದಿಸಬಲ್ಲ ಸಾಮರ್ಥ್ಯ ಇದಕ್ಕಿದೆ.

ಈ ಆಗಸ್ಟ್‌ ತಿಂಗಳ ಕೊನೆಯ ಭಾಗದಲ್ಲಿ ರಷ್ಯಾವು ಷೆಲ್‌ಗಳಿಂದ ಈ ಪ್ರದೇಶದ ಮೇಲೆ ದಾಳಿ ಮಾಡಿದೆ. ಇದು ಉಕ್ರೇನ್‌ನ ಕರಾಮತ್ತು ಎಂದು ರಷ್ಯಾ ಉಲ್ಟಾ ಹೊಡೆಯುತ್ತಿದೆ. ಆದರೆ ಜಗತ್ತು ಈ ಕುರಿತು ಭಯವನ್ನು ವ್ಯಕ್ತಪಡಿಸುತ್ತಿದೆ. ಏಕೆಂದರೆ ಪರಮಾಣು ಸ್ಥಾವರಕ್ಕೂ ಝಪೋರಿಜಿಯಾ ನಗರಕ್ಕೂ ಇರುವ ಅಂತರ 40 ಕಿಲೊಮೀಟರು ಮಾತ್ರ. ಅಂದರೆ, ಷೆಲ್‌ ದಾಳಿಯಿಂದ ಒಂದುವೇಳೆ ಪರಮಾಣು ಸ್ಥಾವರಕ್ಕೆ ಧಕ್ಕೆಯಾದರೆ ವಿಕಿರಣ ಮೊದಲು ತಟ್ಟುವುದೇ ಸುಮಾರು ಏಳೂವರೆ ಲಕ್ಷ ನಾಗರಿಕರಿರುವ ಈ ನಗರಕ್ಕೆ. ಹೀಗಾಗಿ ಅಂತರ ರಾಷ್ಟ್ರೀಯ ಪರಮಾಣು ಶಕ್ತಿ ಕೂಟ (ಐ.ಎ.ಇ.ಎ) ತ್ವರಿತವಾಗಿ ತಜ್ಞರನ್ನು ಈ ನಗರಕ್ಕೆ ಕಳಿಸುತ್ತಿದೆ.

ಈಗಾಗಲೇ ನಾಗರಿಕರು ನಗರ ತೊರೆದು ಗುಳೆ ಹೊರಡುತ್ತಿದ್ದಾರೆ. ತಜ್ಞರು ಅಯೋಡಿನ್‌ ಮಾತ್ರೆಗಳನ್ನು ಹೊತ್ತು ಹೋಗುತ್ತಿದ್ದಾರೆ. ಇದು ವಿಕಿರಣವನ್ನು ಹೇಗೆ ತಡೆಯುತ್ತದೆ? ಆದರೆ ಈ ಮಾತ್ರೆಗಳನ್ನು ಸೇವಿಸಿದಾಗ ಥೈರಾ ಯಿಡ್‌ ಗ್ರಂಥಿಗಳಲ್ಲಿ ಪೊಟಾಷಿಯಂ ಅಯೋಡೈಡ್‌ ಸಂಚಯನವಾಗುತ್ತದೆ. ಪರಮಾಣು ಸ್ಥಾವರಗಳಿಂದ ಬಿಡುಗಡೆಯಾಗುವ ವಿಕಿರಣಯುಕ್ತ ಅಯೋಡಿನ್‌ ಗಂಟಲು ಸೇರಿದಾಗ ಥೈರಾಯಿಡ್‌ ಗ್ರಂಥಿಗಳಲ್ಲಿ ಅವಕ್ಕೆ ಜಾಗವಿರುವುದಿಲ್ಲ- ಒಂದರ್ಥದಲ್ಲಿ ‘ಹೌಸ್‌ ಫುಲ್’. ಈಗಾ ಗಲೇ 1986ರಲ್ಲಾದ ಚೆರ್ನೋಬಿಲ್‌ ಪರಮಾಣು ಸ್ಥಾವರ ದುರಂತದಿಂದ ಬೆಲಾರಸ್‌, ಉಕ್ರೇನ್‌ ಮತ್ತು ರಷ್ಯಾದಲ್ಲಿ ಮಕ್ಕಳು ಥೈರಾಯಿಡ್‌ ಗ್ರಂಥಿಯ ಕ್ಯಾನ್ಸರ್‌ಗೆ ದೊಡ್ಡ ಪ್ರಮಾಣದಲ್ಲಿ ಬಲಿಯಾಗಿರುವುದು ಅಧ್ಯಯನದಿಂದ ತಿಳಿದಿದೆ.

ಈ ಪರಿಹಾರ ಏನೇ ಇರಲಿ, ಪರಮಾಣು ಸ್ಥಾವರ ಗಳಿಂದ ಹಿಂದೆ ಆಗಿರುವ ಆಘಾತಗಳನ್ನು ಜಗತ್ತು ಸುಲಭವಾಗಿ ಮರೆಯುವುದಿಲ್ಲ. ಆ ಭಯ ಎಂದೂ ಇದ್ದದ್ದೇ. ಮೇಲಾಗಿ, ಜಗತ್ತಿನ ಶಕ್ತಿ ಬೇಡಿಕೆಯಲ್ಲಿ ಪರಮಾಣು ಸ್ಥಾವರಗಳ ಕೊಡುಗೆ ಶೇ 10ರಷ್ಟು ಮಾತ್ರ!
ಇಷ್ಟೊಂದು‌ ರಿಸ್ಕ್ ಬೇಕೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಬೇಕಿದೆ.

ಇದಕ್ಕೆ ಕಾರಣವೂ ಇಲ್ಲದಿಲ್ಲ. ರಷ್ಯಾದ ಚೆರ್ನೋ ಬಿಲ್‌ ದುರಂತ, ಅಮೆರಿಕದ ತ್ರೀಮೈಲ್‌ ಐಲೆಂಡ್‌ ದುರಂತ, ಜಪಾನಿನಲ್ಲಾದ ಫುಕುಶಿಮಾ ಪರಮಾಣು ಸ್ಥಾವರ ದುರಂತ ಒಂದೊಂದೂ ಮನುಷ್ಯನ ಅಸಡ್ಡೆಯ ಕಾರಣವಾಗಿಯೋ ಅಜಾಗರೂಕತೆಯ ಕಾರಣವಾ ಗಿಯೋ ಘಟಿಸಿರುವುದು ಸುಸ್ಪಷ್ಟ. ಇಂಥ ಸಂದರ್ಭದಲ್ಲಿ ರಷ್ಯಾ ಮತ್ತು ಉಕ್ರೇನ್‌ ನಡುವೆ ಸಿಕ್ಕಿಹಾಕಿಕೊಂಡಿರುವ ಝಪೋರಿಜಿಯಾ ಪರಮಾಣು ಸ್ಥಾವರ ಎಷ್ಟು ಸುರಕ್ಷಿತ ಎಂದು ಯೋಚಿಸುವಂತೆ ಮಾಡಿದೆ. ಸ್ಥಳೀಯ ಸಮಸ್ಯೆಯು ಜಾಗತಿಕ ಸಮಸ್ಯೆಯಾಗಿ ಕಾಡಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT