ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ವಿಶೇಷ: ಯಾಂತ್ರಿಕ ಬುದ್ಧಿಮತ್ತೆ– ಸಮಸ್ತ ಲೋಕಕ್ಕೆ ಸುಖವೆಲ್ಲಿ ಬಂತು?

ಯಾಂತ್ರಿಕ ಬುದ್ಧಿಮತ್ತೆಯ ಹೊಸ ಹೊಸ ಸವಾಲುಗಳು ಹೊಸ ವರ್ಷದಲ್ಲಿ ಹೆಚ್ಚಲಿವೆಯೇ? ನಾಗೇಶ ಹೆಗಡೆ ಅವರ ಲೇಖನ
Published 10 ಜನವರಿ 2024, 20:05 IST
Last Updated 10 ಜನವರಿ 2024, 20:05 IST
ಅಕ್ಷರ ಗಾತ್ರ

ಎಪ್ಪತ್ತರ ದಶಕದಲ್ಲಿ ಧಾರವಾಡದಲ್ಲಿ ಒಂದು ವದಂತಿ ಹಬ್ಬಿತ್ತು. ಎಕ್ಸ್‌ರೇ ಪವರ್‌ ಇರುವ ವಿದೇಶೀ ಗಾಗಲ್‌ಗಳು (ಕಪ್ಪು ಕನ್ನಡಕ) ಕಳ್ಳಸಾಗಣೆಯಲ್ಲಿ ಗೋವಾಕ್ಕೆ ಬಂದಿದ್ದು, ಅಂಥ ಕನ್ನಡಕ ಹಾಕಿಕೊಂಡರೆ ಎಲ್ಲೆಲ್ಲೂ ದಿಗಂಬರ ವ್ಯಕ್ತಿಗಳೇ ಕಾಣುತ್ತಾರೆ ಎಂಬ ಸುದ್ದಿ ಅದಾಗಿತ್ತು. ಅದನ್ನು ನಂಬಿ, ಮುಗ್ಧ ಹೆಣ್ಣುಮಕ್ಕಳು ಕೆಲಕಾಲ ಗಾಗಲ್‌ಧಾರಿ ಪುರುಷರಿದ್ದ ಕಡೆ ಸುಳಿಯಲೂ ಅಂಜುವಂತಾಗಿತ್ತು. ಇದೆಲ್ಲ ಅವೈಜ್ಞಾನಿಕ ಬುರುಡೆಯೆಂದೂ ಅಂಥ ಕನ್ನಡಕ ಇದ್ದುದೇ ಆದರೆ, ಅದನ್ನು ಧರಿಸಿದವರಿಗೆ ಹೆಣ್ಣು, ಗಂಡಿನ ವ್ಯತ್ಯಾಸವೇ ಇಲ್ಲದಂತೆ ಎಲ್ಲೆಲ್ಲೂ ಬರೀ ಅಸ್ಥಿಪಂಜರಗಳೇ ಕಾಣುತ್ತವೆಂದೂ ನಾವು ವಿಜ್ಞಾನದ ವಿದ್ಯಾರ್ಥಿಗಳು (ಎಕ್ಸ್‌-ರೇ ಫಿಲ್ಮ್‌ಗಳನ್ನು ತೋರಿಸಿ) ಸಮಜಾಯಿಷಿ ಕೊಡಬೇಕಾಗಿ ಬಂದಿತ್ತು.

ಈಗ ಐವತ್ತು ವರ್ಷ ಕಳೆದರೂ ಅಂಥ ಕನ್ನಡಕ ಬಂದಿಲ್ಲ, ಬರಲು ಸಾಧ್ಯವೂ ಇಲ್ಲ. ಆದರೆ ಅದಕ್ಕಿಂತ ಪವರ್‌ಫುಲ್‌ ಯಾಂತ್ರಿಕ ಬುದ್ಧಿಮತ್ತೆ (ಯಾಂಬು) ಬಂದಿದೆಯಲ್ಲ? ಯಾರ ವಿಡಿಯೊ ಚಿತ್ರಣವನ್ನು ಬೇಕಾದರೂ ನಗ್ನಗೊಳಿಸಬಹುದು. ಕಳೆದ ಅಕ್ಟೋಬರ್‌ ನಲ್ಲಿ ಅಮೆರಿಕದ ಲೂಸಿಯಾನಾದಲ್ಲಿ ಇಂಥದ್ದೊಂದು ಘಟನೆ ನಡೆಯಿತು. ಜೈಲಿನಲ್ಲಿದ್ದ ಅಪರಾಧಿಗಳನ್ನು ಪೆರೋಲ್‌ ಮೇಲೆ ಬಿಡುಗಡೆ ಮಾಡುವ ಮುಂಚೆ ಅವರ ನಡವಳಿಕೆ ಸರಿ ಇದೆಯೇ ಎಂದು ಮನೋವೈದ್ಯೆ ಯೊಬ್ಬರು ಪರೀಕ್ಷೆ ಮಾಡುತ್ತಿದ್ದ ದೃಶ್ಯ ಪ್ರಸಾರವಾಗಿತ್ತು. ಡಿಜಿಟಲ್‌ ಕಿಡಿಗೇಡಿಗಳು ಆ ವಿಡಿಯೊವನ್ನೇ ತಿರುಚಿ, ವೈದ್ಯೆಯ ಬಟ್ಟೆಬರೆಯನ್ನು ಕಳಚಿ ಹಾಕಿ, ಹುಟ್ಟುಡುಗೆ
ಯಲ್ಲೇ ಆಕೆ ಸಂವಾದಿಸುವ ವಿಡಿಯೊವನ್ನು ಆನ್‌ಲೈನ್‌ನಲ್ಲಿ ಬಿತ್ತರಿಸಿದರು. ಜೊತೆಗೆ ಅಶ್ಲೀಲ, ವರ್ಣಲೇವಡಿಯ ಸಂಭಾಷಣೆಯೂ ಅದರಲ್ಲಿತ್ತು.

ಅಂಥ ಪಿರ್ಕಿ ವೆಬ್‌ಸೈಟ್‌ಗಳು ಇಂಟರ್ನೆಟ್‌ನಲ್ಲಿ ಬೇಕಾದಷ್ಟಿವೆ. ವಿಕೃತ ಟೆಕಿಗಳೇ ಯಾಂಬು ನೆರವು ಪಡೆದು, ಗಣ್ಯವ್ಯಕ್ತಿಗಳ ಬಾಯಿಂದ ಎಂಥ ಹೊಲಸು ಮಾತುಗಳನ್ನೂ ಅವರದೇ ಧ್ವನಿಯಲ್ಲಿ ಹೊಮ್ಮಿಸುತ್ತಾರೆ. ಹಿಟ್ಲರನ ಆತ್ಮಕಥೆಯನ್ನು ಖ್ಯಾತ ಬ್ರಿಟಿಷ್‌ ನಟಿ ಎಮ್ಮಾ ವ್ಯಾಟ್ಸನ್‌ ಓದುತ್ತಿರುವ ದೃಶ್ಯ, ಜೋ ಬೈಡನ್‌ ರಷ್ಯಾದ ಮೇಲೆ ಯುದ್ಧ ಘೋಷಿಸುವ ಮಾತು– ಎಲ್ಲ ಬರುತ್ತಿವೆ. ಮೈಕ್ರೊಸಾಫ್ಟ್‌, ಮೆಟಾ, ಗೂಗಲ್‌ ಹೀಗೆ ನೂರಾರು ಕಂಪನಿಗಳು ಒಳ್ಳೆಯ (ಲಾಭ ಮತ್ತು) ಉದ್ದೇಶಕ್ಕೆಂದೇ ನಾನಾ ಬಗೆಯ ಯಾಂಬುಗಳನ್ನು ಬಿಡುಗಡೆ ಮಾಡುತ್ತಿವೆ. ಅವುಗಳ ದುರ್ಬಳಕೆಯನ್ನು ತಡೆಯುವುದು ಹೇಗೆಂಬುದು ಮಾತ್ರ ಯಾರಿಗೂ ಗೊತ್ತಾಗುತ್ತಿಲ್ಲ. ‘ಇದು ಯಾಂಬು ಸೃಷ್ಟಿಸಿದ್ದು’ ಎಂಬ ಮುದ್ರೆ ಹಾಕಿರಬೇಕೆಂದು ಯೂಟ್ಯೂಬ್‌, ಟಿಕ್‌ಟಾಕ್‌ನಂಥ ಜನಪ್ರಿಯ ಮಾಧ್ಯಮ ಕಂಪನಿಗಳು ಹೇಳುತ್ತಿವೆಯಾದರೂ ಅವನ್ನೂ ಏಮಾರಿಸುವ ದುಷ್ಟಬುದ್ಧಿಗಳು ಅಂತರ್ಜಾಲದಲ್ಲಿ ಹಾವಳಿ ಎಬ್ಬಿಸುತ್ತಿವೆ. ಈ ವರ್ಷ ಅನೇಕ ದೇಶಗಳಲ್ಲಿ ಚುನಾವಣೆ ನಡೆಯಲಿದ್ದು, ರಾಜಕೀಯ ಲಾಭಕ್ಕೆಂದೇ ಹೊಸಹೊಸ ರೂಪದಲ್ಲಿ ಯಾಂಬು ದುರ್ಬಳಕೆಯ ಸಾಧ್ಯತೆಗಳು ಹೆಚ್ಚುತ್ತಿವೆ.

ಎ.ಐ. ಹೆಸರಿನ ಈ ದೈತ್ಯನ ಸದ್ಬಳಕೆಯೂ ಆಗುತ್ತಿದೆ ನಿಜ. ಚೀನಾದ ಲಕ್ಷಾಂತರ ಶಾಲೆಗಳಲ್ಲಿ ಎ.ಐ. ಕ್ಯಾಮೆರಾಗಳಿವೆ. ಕ್ಲಾಸ್‌ ನಡೆಯುತ್ತಿರುವಾಗ ಅವು ಪ್ರತಿ ಮಗುವಿನ ಕ್ಷಣಕ್ಷಣದ ಭಾವನೆಗಳನ್ನು ಅಳೆಯುತ್ತ, ಯಾವ ಮಗುವಿಗೆ ಗಣಿತದಲ್ಲಿ ಖುಷಿ, ಯಾವುದಕ್ಕೆ ಪ್ರದರ್ಶನ ಕಲೆಯಲ್ಲಿ ಆಸಕ್ತಿ ಎಂದೆಲ್ಲ ನೋಡುತ್ತವೆ. ಏಕಕಾಲಕ್ಕೆ ಕೋಟ್ಯಂತರ ಮಕ್ಕಳ ಚರ್ಯೆಯನ್ನು ಅಳೆಯುತ್ತ, ಹೋಲಿಸುತ್ತ ಯಾಂಬು ವಿಶ್ಲೇಷಣೆ ಮಾಡುತ್ತದೆ. ಎಕ್ಸಾಮ್‌ ಇಲ್ಲದೆಯೇ ಮಕ್ಕಳನ್ನು ವಿಂಗಡಿಸಿ ಕೆಲವರನ್ನು ವಿಶೇಷ ತರಬೇತಿಗೆ ಶಿಫಾರಸು ಮಾಡುತ್ತದೆ. ಸೈನ್ಸ್‌ನಲ್ಲಿ ಭಾರೀ ಚುರುಕಾಗಿರುವ ಹತ್ತು ವರ್ಷದ ಮಕ್ಕಳನ್ನು ಹಾರ್ವರ್ಡ್‌ಗೂ ಮೀರಿದ ವಿಶೇಷ ಶಾಲೆಗೆ ಸೇರಿಸಿ ಸಾವಿರಾರು ಐನ್‌ಸ್ಟೀನ್‌ಗಳನ್ನು ರೂಪಿಸಲು ಸಾಧ್ಯವಾದರೆ ಮನುಕುಲಕ್ಕೆ ಒಳ್ಳೆಯದೆಂದು ವಾದಿಸುವವರಿದ್ದಾರೆ. ಐನ್‌ಸ್ಟೀನ್‌ ಬದಲು ನೂರಾರು ಒಪ್ಪೆನ್‌ಹೀಮರ್‌ಗಳು ರೂಪುಗೊಂಡಾರೆಂದು ದಿಗಿಲು ಹಬ್ಬಿಸಲೂ ಸಾಧ್ಯವಿದೆ.

ಯಾಂಬು ಅನೂಹ್ಯ ವೇಗದಲ್ಲಿ ಹೊಸದನ್ನು ಕಲಿಯುತ್ತಿದೆ. ತಂತಾನೇ ಚಲಿಸುವ ಕಾರೊಂದು ಎಲ್ಲೋ ಚಿಕ್ಕ ಎಡವಟ್ಟು ಮಾಡಿದರೆ, ಅಂಥ ತಪ್ಪನ್ನು ಮತ್ತೊಮ್ಮೆ ಮಾಡದಂತೆ ಜಗತ್ತಿನ ಎಲ್ಲ ಸ್ವಯಂಚಾಲಿತ ಕಾರುಗಳೂ ಏಕಕಾಲಕ್ಕೆ ಹೊಸ ಪಾಠ ಕಲಿಯುತ್ತವೆ. ಅಂಥ ಸಾಮರ್ಥ್ಯ ಮನುಷ್ಯನಿಗಿಲ್ಲ. ಕೃತಕ ಬುದ್ಧಿಮತ್ತೆ ಈಗ ಸ್ವತಃ ಕೋಡಿಂಗ್‌ ಕೂಡ ಮಾಡುತ್ತ ತನ್ನ ಅಂಗಾಂಗಗಳನ್ನು ತಾನೇ ರೂಪಿಸಿಕೊಳ್ಳುತ್ತ ಬೆಳೆಯುತ್ತಿದೆ. ಅದರ ಫಲ ಏನೆಂದರೆ, ಯಾಂಬು ಸೃಷ್ಟಿಗೆ ಕಾರಣರಾದ ಟೆಕಿಗಳೇ ಸಾಲುಸಾಲಾಗಿ ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಕಲಾವಿದರ ಸಹಾಯಕ್ಕೆ ಬಂದು ಕಲಾಕಾರರ ಕೆಲಸವನ್ನೇ ಕಬಳಿಸುತ್ತಿದೆ. ವಾಸ್ತುಶಿಲ್ಪಿಗಳು ರೂಪಿಸಿದ ಕಟ್ಟಡ ವಿನ್ಯಾಸಗಳನ್ನು ನೋಡಿ ಅದು ಇನ್ನೂ ಮಜಬೂತಾದ ಕಟ್ಟಡಗಳ ಡಿಸೈನ್‌ ಮಾಡುತ್ತಿದ್ದರೆ, ಇನ್ನು ಮುಂದೆ ವಾಸ್ತುಶಿಲ್ಪಿಗಳೇ ಬೇಕಾಗಿಲ್ಲ ಎಂಬಂತಾಗುತ್ತಿದೆ. ಐದು ವರ್ಷಗಳ ವೈದ್ಯಕೀಯ ಶಿಕ್ಷಣವನ್ನು ಐದೇ ದಿನಗಳಲ್ಲಿ ಪಡೆದು ವೈದ್ಯರನ್ನು ತಳ್ಳತೊಡಗಿದೆ. ಮುಂದಿನ ಹೆಜ್ಜೆಯಾಗಿ ಅದು ವಿಜ್ಞಾನಿಗಳನ್ನು, ಸಂಶೋಧಕರನ್ನು ಬಲಿಹಾಕೀತೆ?

ಅದೂ ಸಾಧ್ಯವಿದೆ. ತನಗೇ ಗೊತ್ತಿಲ್ಲದಂತೆ ಅದು ಸುಳ್ಳಿನ ಸರಮಾಲೆಗಳನ್ನು ಸೃಷ್ಟಿಸುತ್ತದೆ. ಅದಕ್ಕೆ ಇಂಗ್ಲಿಷ್‌ನಲ್ಲಿ ಹ್ಯಾಲುಸಿನೇಶನ್‌ (ಭ್ರಾಂತಿ) ಎನ್ನುತ್ತಾರೆ. ನಮ್ಮಲ್ಲಿ ಕೆಲವರಿಗೆ ಅನಗತ್ಯವಾಗಿ ಸುಳ್ಳು ಹೇಳುವ ಚಟವಿರುತ್ತದೆ. ಇನ್ನು ಕೆಲವರಿಗೆ ನಿದ್ರಾಹೀನತೆ, ಡ್ರಗ್‌ ಸೇವನೆಯಿಂದ ಭ್ರಾಂತಿ ಉಂಟಾಗುತ್ತದೆ. ಯಾಂಬುಗೆ ಅಂಟಿದ ಈ ಕಾಯಿಲೆಯ ಬಗ್ಗೆ ಸಖತ್‌ ಚರ್ಚೆ ನಡೆಯುತ್ತಿದೆ. ಚರಿತ್ರೆ, ಭೂಗೋಲ, ಅರ್ಥಶಾಸ್ತ್ರ, ವ್ಯಕ್ತಿಚಿತ್ರಗಳಿಗೆ ಸಂಬಂಧಿಸಿದಂತೆ ಯಾಂಬು ನೀಡುವ ಅಂಕಿ ಅಂಶಗಳು ಚಾಟ್‌ಜಿಪಿಟಿಯಲ್ಲಿ ಅಪರಾತಪರಾ ಆಗುವುದು ನಮಗೆಲ್ಲ ಗೊತ್ತಿದೆ. ಅದನ್ನು ನಂಬಿ ಹಿಟ್‌ ವಿಕೆಟ್‌ ಮಾಡಿಕೊಂಡ ವಕೀಲರದ್ದೂ ಕತೆಗಳಿವೆ. ಆದರೆ ಅಸ್ತಿತ್ವದಲ್ಲೇ ಇಲ್ಲದ ಒಂದು ವಿಜ್ಞಾನ ಪ್ರಬಂಧವನ್ನು ಯಾಂಬು ತಾನಾಗಿ ಕಲ್ಪಿಸಿಕೊಂಡು ನಮಗೆ ನೀಡಿದರೆ? ಎಲ್ಲರ ಮಿದುಳಿನಲ್ಲಿರುವ ಥ್ಯಾಲಮಸ್‌ ಎಂಬ ಗ್ರಂಥಿಯ ಬಗ್ಗೆ ಸಂಶೋಧನೆ ಮಾಡಲು ಹೊರಟ ವಿಜ್ಞಾನಿ ರಾಬಿನ್‌ ಎಮ್‌ಸ್ಲೇ ಎಂಬಾತ ಚಾಟ್‌ಜಿಪಿಟಿಯನ್ನು ನಂಬಿ ತಾನೆಷ್ಟು ಮೋಸ ಹೋದೆ ಎಂದು ಹೇಳಿಕೊಂಡಿದ್ದನ್ನು ಪ್ರತಿಷ್ಠಿತ ‘ನೇಚರ್‌’ ಪತ್ರಿಕೆ ಈಚೆಗೆ ಪ್ರಕಟಿಸಿದೆ. ತೀವ್ರ ವಿಷಕಾರಿ ಅಣಬೆಯ ಚಿತ್ರವನ್ನು ನೋಡಿ, ಅದು ರುಚಿಕರ, ಸುರಕ್ಷಿತ ಎಂದು ಯಾಂಬು ಹೇಳಿದ್ದೂ ಇದೆ. ‘ಹೌದು ಅದೊಂದು (ಯಾಂತ್ರಿಕ ಭ್ರಾಂತಿ) ದೊಡ್ಡ ಸಮಸ್ಯೆ’ ಎಂದು ಖುದ್ದಾಗಿ ಗೂಗಲ್‌ ಮುಖ್ಯಸ್ಥ ಸುಂದರ್‌ ಪಿಚ್ಚೈ ಒಪ್ಪಿಕೊಂಡಿದ್ದಾರೆ.

ಯಾಂಬು ಬಲಿಷ್ಠವಾದಷ್ಟೂ ಅದರಿಂದ ಬಡತನ, ರೋಗರುಜಿನ, ಪರಿಸರ ಸಮಸ್ಯೆಗಳೆಲ್ಲ ನೀಗುತ್ತವೆ; ನಾವೆಲ್ಲ ಶತಾಯುಷಿಗಳಾಗುತ್ತೇವೆ ಎಂಬ ವಾದಗಳೆಲ್ಲ ಪೊಳ್ಳೆಂದು ಕಂಪ್ಯೂಟರ್‌ ವಿಜ್ಞಾನಿ ರೊಜರ್‌ ಮಾರ್ಶಲ್‌ ಮೊನ್ನೆ ‘ಡೆಕ್ಕನ್‌ ಹೆರಾಲ್ಡ್‌’ನಲ್ಲಿ ಬರೆದಿದ್ದಾರೆ. ಬಡತನ, ರೋಗರುಜಿನ ನಿವಾರಣೆಗೆ ಬೇಕಾದ ‘ಔಷಧ’ಗಳನ್ನು ಯಾಂಬು ಸೂಚಿಸಬಹುದು. ಆದರೆ ಬಂಡವಾಳ ಹೂಡುವವರು ಯಾರು? ತಮಗೆ ಲಾಭ ತರುವ ಔಷಧಗಳಿಗೆ ಮಾತ್ರ ಹಣ ಸುರಿದು ಕಂಪನಿಗಳು ಹಣವನ್ನು ಮೊಗೆಯುತ್ತವೆ ಎಂದು ಅವರು ವಾದಿಸುತ್ತಾರೆ. ಶತಾಯುಷಿಗಳಾಗಬಲ್ಲ ಔಷಧವನ್ನು ಯಾಂಬು ಸೃಷ್ಟಿಸಿತು ಎಂದಿಟ್ಟುಕೊಳ್ಳಿ. ಕೆಲಸ ಕಳೆದುಕೊಳ್ಳುವ ಅಕ್ಷೋಹಿಣಿ ಜನರೇನು ತಮ್ಮ ಮೊಬೈಲ್‌ನಲ್ಲಿ ಮೂಡಿಬರುವ ಭ್ರಾಮಕ ಥ್ರೀಡಿ ದೃಶ್ಯಗಳ ಮಜ ನೋಡುತ್ತ ದಿನ ನೂಕಬೇಕೆ ಎಂದು ಮಾರ್ಶಲ್‌ ಕೇಳುತ್ತಾರೆ.

ಶಕ್ತ ರಾಷ್ಟ್ರಗಳು ಹಿಂದೆ ಪರಮಾಣು ಬಾಂಬುಗಳನ್ನು ಪೈಪೋಟಿಯಲ್ಲಿ ನಿರ್ಮಿಸಿದ ಹಾಗೆ, ಹೊಸಹೊಸ ಬಗೆಯ ಯಾಂಬುಗಳನ್ನು ಸೃಷ್ಟಿಸಲೆಂದು ಸರ್ಕಾರಗಳೂ ಖಾಸಗಿ ಕಂಪನಿಗಳೂ ನುಗ್ಗುತ್ತಿವೆ. ತಾನು ಹಿಂದೆ ಬಿದ್ದೇನೆಂಬ ಭಯವೇ ಹೊಸ ಭಯಾನಕ ಪರಿಕರಗಳನ್ನು ಸೃಷ್ಟಿಸುವಂತಾಗಿದೆ. ಬಾಂಬ್‌ಗೂ ಯಾಂಬುಗೂ ವ್ಯತ್ಯಾಸ ಏನೆಂದರೆ, ಬಾಂಬ್‌ ತಾನಾಗಿ ಇನ್ನೊಂದು ಬಾಂಬನ್ನು ಸೃಷ್ಟಿಸಲಾರದು. ಯಾಂಬು ಹಾಗಲ್ಲ; ಶತಾವತಾರ, ಶತಕೋಟಿ ಅವತಾರ ತಾಳಿ, ಯಾವುದೋ ಒಬ್ಬಂಟಿ ಹ್ಯಾಕರ್‌ನ ಕೈಯಲ್ಲೂ ದುಷ್ಟಾಸ್ತ್ರವಾಗಬಹುದು. ಜಗತ್ತಿನ ಮುತ್ಸದ್ದಿಗಳೆಲ್ಲ ಸೇರಿ ಇದನ್ನು ತಡೆಯಲು ಸಾಧ್ಯವಿಲ್ಲವೇ? ಬಿಸಿಪ್ರಳಯದ ತುರ್ತು ಸಮಸ್ಯೆಗೂ ಇದೇ ಪ್ರಶ್ನೆ ಎದುರಾಗುತ್ತಿದೆ. ಪ್ರತಿಯೊಬ್ಬ ಮುತ್ಸದ್ದಿಯೂ ತನ್ನ ಪೀಠ, ತನ್ನ ಬೆಂಬಲಿಗ, ತನ್ನ ಪ್ರಜಾಸ್ತೋಮದ ಹಿತಾಸಕ್ತಿ ಯನ್ನು ಬದಿಗೊತ್ತಿ ‘ಲೋಕಾಃ ಸಮಸ್ತಾಃ ಸುಖಿನೋ ಭವಂತು’ -ಮನುಕುಲವೇ ಒಂದೆಂಬಂತೆ ಕೆಲಸ ಮಾಡಬೇಕು. ಅಂಥ ವ್ಯಕ್ತಿ ಎಲ್ಲಿದ್ದಾರೆ?

ಆ ಕಾಲ್ಪನಿಕ ಎಕ್ಸ್‌ರೇ ಗಾಗಲ್ಲನ್ನೇ ಧರಿಸಿ ಹುಡುಕಬೇಕೇನೊ..

ನಾಗೇಶ ಹೆಗಡೆ

ನಾಗೇಶ ಹೆಗಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT