ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮದ ಕ್ಷೋಭೆ, ಪೃಥ್ವಿಗೆಲ್ಲ ಪೀಡೆ: ನಾಗೇಶ ಹೆಗಡೆ ಅವರ ವಿಜ್ಞಾನ ವಿಶೇಷ ಲೇಖನ

ಈ ಸಂಕಟಗಳು ಯಾರಿಗೂ ಬೇಡ, ಅದರಿಂದ ಪಾರಾಗುವ ಉಪಾಯಗಳೂ ಯಾರಿಗೂ ಬೇಡ!
Published 13 ಜುಲೈ 2023, 0:46 IST
Last Updated 13 ಜುಲೈ 2023, 0:46 IST
ಅಕ್ಷರ ಗಾತ್ರ

ಹೆದ್ದಾರಿಯ ಆ ದಟ್ಟ ಟ್ರಾಫಿಕ್‌ ಒಂದು ದುಃಸ್ವಪ್ನದ ರೂಪ ಪಡೆದಿತ್ತು. ವಾಹನಗಳ ಬದಲು ದಪ್ಪ ದಪ್ಪ ದಿಮ್ಮಿಗಳು ನೂರಿನ್ನೂರರ ಸಂಖ್ಯೆಯಲ್ಲಿ ಸಾಗಿ ಬರುತ್ತಿದ್ದವು. ಯಾವ ಸಿಗ್ನಲ್ಲಿಗೂ ಅವು ಕಾಯುತ್ತಿರಲಿಲ್ಲ. ಗುಡಿ ಗೋಪುರಗಳು, ಮಹಡಿ ಮನೆಗಳು, ಸೇತುವೆಗಳು ಸಾಗಿ ಬರುತ್ತಿದ್ದವು. ಚಂದದ ಕಾರುಗಳು, ಟೆಂಪೊಗಳು, ಉದ್ದುದ್ದ ಬಸ್‌ಗಳು ಚಕ್ರಗಳ ಸಹಾಯವಿಲ್ಲದೆ ಪಲ್ಟಿ ಹೊಡೆಯುತ್ತ ಚಲಿಸುತ್ತಿದ್ದವು. ರಸ್ತೆಗಳೇ ತುಂಡು ತುಂಡಾಗಿ ಚಲಿಸುತ್ತಿದ್ದವು. ಗುಡ್ಡ-ಬೆಟ್ಟಗಳಂಚಿನ ಬಂಡೆಗಳೂ ಉರುಳುರುಳಿ ಟ್ರಾಫಿಕ್ಕಿಗೆ ಸೇರುತ್ತಿದ್ದವು.

ದುಃಸ್ವಪ್ನವೆ? ಖಂಡಿತ ಅಲ್ಲ. ಮೊನ್ನೆ ಸೋಮವಾರ ವಾರ್ತಾಪರದೆಗಳ ಮೇಲೆ ಕಂಡುಬಂದ ರಿಯಾಲಿಟಿ ಶೋ ಅದಾಗಿತ್ತು. ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರ ಪ್ರದೇಶಗಳಲ್ಲಿ ಸಂಭವಿಸಿದ ಮೇಘಸ್ಫೋಟದ, ಮಹಾಧಾರೆಯ ದೃಶ್ಯ ಅದಾಗಿತ್ತು. ಬೀದಿಗಳೇ ನದಿಯಾಗಿದ್ದವು. ನಿಸರ್ಗಕ್ಕೆ ಮನುಷ್ಯ ಕೊಡುತ್ತಿದ್ದ ಏಟುಗಳಿಗೆ ಪ್ರತಿಯಾಗಿ ಪೃಥ್ವಿಯೇ ಎದಿರೇಟು ಕೊಡುತ್ತಿರುವ ದೃಶ್ಯಮಾಲೆ ಅದಾಗಿತ್ತು.

‘ನೀನು ಮರಗಳನ್ನು ಬೀಳಿಸಿ ರಾಶಿ ಒಟ್ಟಿದ್ದೀಯ, ತಗೋ ನಿನ್ನ ದಿಮ್ಮಿಗಳ ರಾಶಿ! ನೀನಿಲ್ಲಿ ಬಂಡೆಗಳಿಗೆ ಡೈನಮೈಟ್‌ ಇಟ್ಟು ಬೀಳಿಸುತ್ತಿದ್ದೀಯ, ತಗೋ ನಾನೂ ಬೀಳಿಸುತ್ತೇನೆ. ನೀನಿಲ್ಲಿ ಕಾಂಕ್ರೀಟ್‌ ಮನೆ, ಡಾಂಬರ್‌ ಹೈವೇ, ಉಕ್ಕಿನ ಸೇತುವೆ ಕಟ್ಟಬಾರದಿತ್ತು. ತಗೋ ನಾನಿದನ್ನೆಲ್ಲ ಕ್ಲೀನಪ್‌ ಮಾಡುತ್ತೇನೆ. ನೀನು ಇಲ್ಲಿ ಪೆಟ್ರೋಲ್‌, ಡೀಸೆಲ್‌ ಹೊಗೆ ಹಾಯಿಸುವ ಈ ಪಾಟಿ ಬಸ್ಸು, ಲಾರಿ, ಕಾರುಗಳ ಸಾಲುಸಾಲು ಮೆರವಣಿಗೆ ಮಾಡುತ್ತಿದ್ದೀಯ, ತಗೋ ನಾನಿವನ್ನೆಲ್ಲ ಗುಡಿಸಿ ಹಾಕುತ್ತೇನೆ’ ಹೀಗೆಂದು ಪ್ರಕೃತಿ ಪಾಠ ಹೇಳುವಂತಿತ್ತು.

ಮುಗಿಲಿನ ಎರಡು ಮಹಾಶಕ್ತಿಗಳು ಒಟ್ಟಾಗಿ ಮುಗಿಬಿದ್ದಿದ್ದಕ್ಕೇ ಉತ್ತರ ಭಾರತದಲ್ಲಿ ಮೊನ್ನೆ ದಾಖಲೆಯ ಜಲಪ್ರಳಯ ಸಂಭವಿಸಿತೆಂದು ಪವನವಿಜ್ಞಾನಿಗಳು ಹೇಳಿದ್ದಾರೆ. ಒಂದು, ಬಂಗಾಳ ಉಪಸಾಗರದಿಂದ ದಿಲ್ಲಿಯ ಕಡೆ ಬರುತ್ತಿದ್ದ ಆಗ್ನೇಯ ಮಾನ್ಸೂನ್‌- ಅದು ತನ್ನ ಮಾಮೂಲು ಪಂಚಾಂಗಕ್ಕೆ ತಕ್ಕಂತೆ ಸಾಗಿ ಬರುತ್ತಿತ್ತು. ಅದೇ ವೇಳೆಗೆ ಯುರೋಪ್‌ ಕಡೆಯಿಂದ ‘ವೆಸ್ಟರ್ನ್ ಡಿಸ್ಟರ್ಬನ್ಸ್‌’ ಹೆಸರಿನ ಚಂಡಮೇಘವೂ ಇರಾಕ್‌- ಇರಾನ್‌ ಮೇಲಿಂದ ಸಾಗಿ ಬಂತು. ಇದೂ ಪ್ರತಿ ವರ್ಷ ಬರುವಂಥದ್ದೇ, ಆದರೆ ಅಕ್ಟೋಬರ್‌ನಲ್ಲಿ ಬಂದು ಮಳೆ ಸುರಿಸಬೇಕಿತ್ತು. ಏನು ಅವಸರವಿತ್ತೊ ಈಗಲೇ ಬಂದು ಢೀ ಕೊಟ್ಟಿದೆ. ಅಂತೂ ಡಬಲ್‌ ಎಂಜಿನ್‌ ಧಮಾಕಾ.

ಈ ವೆಸ್ಟರ್ನ್‌ ಡಿಸ್ಟರ್ಬನ್ಸ್‌ ಎಂಬುದರ ಚಲನೆಯೂ ಈ ಬಾರಿ ವಿಲಕ್ಷಣದ್ದಾಗಿತ್ತು. ಆಫ್ರಿಕಾ ಮತ್ತು ಯುರೋಪ್‌ ಖಂಡದ ನಡುವಣ ಮಧ್ಯಸಮುದ್ರದಿಂದ (ಮೆಡಿಟರೇನಿಯನ್‌ ಸೀ) ಮೋಡ ಮೇಲಕ್ಕೇರಿ ಇತ್ತ ಸಾಗಿ ಬರುತ್ತದೆ. ಆ ಸಮುದ್ರ ಈಚೀಚೆಗೆ ಜಾಸ್ತಿ ಬಿಸಿಯಾಗುತ್ತಿದೆ. ಎಷ್ಟು ಬಿಸಿ ಎಂದರೆ, ಅಲ್ಲೇ ಪಕ್ಕದ ಫ್ರಾನ್ಸ್‌, ಜರ್ಮನಿ, ಇಟಲಿ, ಗ್ರೀಸ್ ಮತ್ತು ಸ್ಪೇನ್‌ ದೇಶಗಳಲ್ಲಿ ಕಳೆದ ವರ್ಷ ಸೆಕೆಯಿಂದಾಗಿಯೇ 61 ಸಾವಿರ ‘ಹೆಚ್ಚುವರಿ ಮರಣ ಸಂಭವಿಸಿದೆ’ ಎಂದು ವಿಜ್ಞಾನಿಗಳು ಹೇಳಿದ್ದನ್ನು ಲಂಡನ್ನಿನ ನ್ಯೂ ಸೈಂಟಿಸ್ಟ್‌ ಪತ್ರಿಕೆ ಈ ವಾರ ವರದಿ ಮಾಡಿದೆ. ಸಾವಪ್ಪಿದ ಹೆಚ್ಚಿನವರೆಲ್ಲ ಹೃದ್ರೋಗ ಮತ್ತು ದಮ್ಮಿನ ಕಾಯಿಲೆಯಿದ್ದವರಾಗಿದ್ದರು. ಯುರೋಪ್‌ನಲ್ಲಿ ಕಳೆದ ಬೇಸಿಗೆಯ ಸೆಕೆ ಹಿಂದಿನ ಎಲ್ಲ ದಾಖಲೆಗಳನ್ನೂ ಮೀರಿತ್ತು. ಗ್ರೀಸ್‌ ದೇಶದ ಕತೆ ನಮಗೆ ಗೊತ್ತೇ ಇದೆ. 2121ರಲ್ಲಿ ಅಲ್ಲಿನ ತಾಪಮಾನ 47 ಡಿಗ್ರಿ ಸೆಲ್ಸಿಯಸ್‌ ಮೀರಿದಾಗ ತಂತಾನೆ ಹೊತ್ತಿಕೊಂಡ ಕಾಳ್ಗಿಚ್ಚು ಅದೆಷ್ಟು ಭೀಕರವಾಗಿತ್ತೆಂದರೆ, 27 ದೇಶಗಳು ಬೆಂಕಿ ನಂದಿಸಲು ನೆರವಿಗೆ ಧಾವಿಸಿದವು. ನಂತರ ಬಂದ ಮಹಾಮಳೆಯಲ್ಲಿ ಸಾಗಿಬಂದ ಬೂದಿಪ್ರವಾಹವೂ ಸಾರ್ವಕಾಲಿಕ ದಾಖಲೆಯನ್ನೇ ನಿರ್ಮಿಸಿತ್ತು.

ಮಧ್ಯಸಮುದ್ರದ ದಕ್ಷಿಣ ತೀರದ ಈಜಿಪ್ಟಿನಲ್ಲೂ ಹವಾಮಾನ ಸಂಕಟ ಹೆಚ್ಚುತ್ತಿದೆ; ಅಷ್ಟೇ ಅಲ್ಲ, ಅಲ್ಲಿನ ಖ್ಯಾತ ಅಲೆಕ್ಸಾಂಡ್ರಿಯಾ ನಗರವೇ ಹಂತಹಂತವಾಗಿ ಭೂಗತವಾಗುತ್ತಿದೆ. ನೆಲ ಕುಸಿಯುತ್ತಿರುವುದು ಒಂದು ಕಾರಣವಾದರೆ, ಸಮುದ್ರದ ಮಟ್ಟ ಏರುತ್ತಿರುವುದು ಇನ್ನೊಂದು ಕಾರಣ. ನೆಲ ಕುಸಿಯಲು ಮಹತ್ವದ ಕಾರಣ ಏನೆಂದರೆ ಅಲ್ಲಿನ ಸಮುದ್ರಕ್ಕೆ ರಂಧ್ರ ಕೊರೆದು ನೈಸರ್ಗಿಕ ಅನಿಲವನ್ನು ಮೇಲಕ್ಕೆತ್ತಿ ಉರಿಸಲಾಗುತ್ತಿದೆ. ಹಾಗೆ ಫಾಸಿಲ್‌ ಇಂಧನಗಳನ್ನು ಉರಿಸುವುದರಿಂದಲೇ ಭೂತಾಪ ಹೆಚ್ಚಾಗಿ ಸಮುದ್ರ ಮಟ್ಟ ಮೆಲ್ಲಗೆ ಮೇಲೇರುತ್ತಿದೆ. ವಿಶ್ವಸಂಸ್ಥೆಯ ತಜ್ಞರ ಲೆಕ್ಕದ ಪ್ರಕಾರ, ಪೃಥ್ವಿಯ ಇತರೆಲ್ಲ ಸಾಗರಗಳಿಗಿಂತ ವೇಗವಾಗಿ ಮಧ್ಯಸಮುದ್ರದ ಮಟ್ಟ ಏರುತ್ತಿದೆ. ಇನ್ನು 17 ವರ್ಷಗಳಲ್ಲಿ ಅದು 50 ಸೆಂಟಿಮೀಟರ್‌ ಮೇಲಕ್ಕೆ ಏರಲಿದೆ. ಈಗಾಗಲೇ ಸಮುದ್ರ ಮೂರು ಕಿಲೊಮೀಟರ್‌ ಒಳಕ್ಕೆ ನುಗ್ಗಿದ್ದು ಐತಿಹಾಸಿಕ ರೊಸೆಟ್ಟಾ ದೀಪಸ್ತಂಭವನ್ನೂ ನುಂಗಿದೆ.

ಕಳೆದ ವಾರದ ವಿವಿಧ ದೇಶಗಳ ವಿದ್ಯಮಾನಗಳನ್ನು ಗಮನಿಸಿದರೆ ಇಡೀ ಭೂಮಿಯೇ ಮೈ ಪರಚಿಕೊಳ್ಳುತ್ತಿದೆಯೇನೊ ಎಂದು ಭಾಸವಾಗುತ್ತಿತ್ತು. ಅಮೆರಿಕದಲ್ಲಿ ಪ್ರತಿದಿನವೂ ಒಂದಲ್ಲ ಒಂದು ಕಡೆ ಒಂದೊಂದು ಬಗೆಯ ವಿಕೋಪಗಳು ಘಟಿಸುತ್ತಿವೆ. ನಮ್ಮ ಪಂಜಾಬ್‌ ರೈತರು ಭತ್ತದ ಕೂಳೆಗೆ ಬೆಂಕಿ ಕೊಟ್ಟಾಗ ದಿಲ್ಲಿಯ ಜನರು ಮುಖವಾಡ ತೊಡುವ ಹಾಗೆ, ಕೆನಡಾದ ಅಗ್ನಿಕಾಂಡದಿಂದಾಗಿ ನ್ಯೂಯಾರ್ಕ್‌ ನಗರ ಈಚೆಗೆ ಕಪ್ಪಿಟ್ಟಿತ್ತು. ಅಲ್ಲಿ ಒಂದೆಡೆ ಶಾಖಗೋಲ, ಇನ್ನೊಂದೆಡೆ ಅತಿಹಿಮಪಾತ, ವರ್ಮೊಂಟ್‌ನಲ್ಲಿ ಪ್ರವಾಹ, ಫೀನಿಕ್ಸ್‌ನಲ್ಲಿ ಅತಿಶಾಖ ನಿನ್ನೆ ಒಂದೇ ದಿನ ವರದಿಯಾಗಿದೆ. ‘ಹವಾಮಾನ ವೈಪರೀತ್ಯ ಇನ್ನೇನು ನಿತ್ಯಸತ್ಯವಾಗುತ್ತಿದೆ’ ಎಂದು ನ್ಯೂಯಾರ್ಕ್‌ ಗವರ್ನರ್‌ ಹೇಳಿದ್ದಾರೆ. ಅದು ಎಲ್ಲರ ಅನುಭವಕ್ಕೂ ಬರುತ್ತಿದೆ. ಆದರೆ ಕಾರ್ಬನ್‌ ಕಮ್ಮಿ ಮಾಡಬಲ್ಲ ಜೀವನಶೈಲಿಯ ಬಗ್ಗೆ ಯಾರೂ ಮಾತಾಡುತ್ತಿಲ್ಲ.

ಭೂತಾಪಮಾನ ಏರಿಕೆಯಿಂದ ಅರಣ್ಯಗಳ ಉಷ್ಣತೆ ಹೆಚ್ಚುತ್ತಿದೆ, ನೆಲದ ಶಾಖ ಹೆಚ್ಚುತ್ತಿದೆ, ಸಮುದ್ರಗಳು ಬಿಸಿಯಾಗುತ್ತಿವೆ. ಅವೆಲ್ಲ ನಮ್ಮ ಇಂದ್ರಿಯಗಳ ಅರಿವಿಗೆ ಬಾರದಿದ್ದರೂ ವಿಜ್ಞಾನಿಗಳ ವರದಿಯ ಮೂಲಕ ಗೊತ್ತಾಗುತ್ತಿದೆ. ಈಗಂತೂ ನೆಲದಾಳದ ಶಾಖವೂ ಹೆಚ್ಚುತ್ತಿದ್ದು, ವಿಶೇಷವಾಗಿ ನಗರಗಳ ತಳದಲ್ಲಿ ಶಾಖದ್ವೀಪಗಳು ಸೃಷ್ಟಿಯಾಗುತ್ತಿವೆ. ಅಲ್ಲಿನ ಸುರಂಗಗಳು, ವಿದ್ಯುತ್‌ ಕೇಬಲ್‌ಗಳು, ಅನಿಲ ಕೊಳವೆಗಳು, ಅಂತರ್ಜಲ ನಾಳಗಳು ಏನೆಲ್ಲ ಅಪಾಯಗಳು ಬರಲಿವೆ ಎಂಬುದರ ಕುರಿತು ಈ ವಾರ ‘ನೇಚರ್‌’ ವಿಜ್ಞಾನ ಪತ್ರಿಕೆಯಲ್ಲಿ ಸಂಶೋಧನಾ ಪ್ರಬಂಧ ಪ್ರಕಟವಾಗಿದೆ.

ಇಂದಿನ ತಾಜಾ ಸುದ್ದಿ ಏನೆಂದರೆ, ಇದೇ ಮೊದಲ ಬಾರಿಗೆ ಎಂಬಂತೆ ಅಮೆರಿಕದ ದೂತನಾಗಿ ಜಾನ್‌ ಕೆರ್ರಿ ನಾಡಿದ್ದು ಚೀನಾಕ್ಕೆ ಹೊರಡುತ್ತಿದ್ದಾರೆ. ಅತಿ ಹೆಚ್ಚು ಹೊಗೆ ಕಕ್ಕುವ ಎರಡು ಮಹಾನ್‌ ದೇಶಗಳು ಕಾರ್ಬನ್‌ ಡೈಆಕ್ಸೈಡ್‌ ಹೊರಸೂಸುವುದನ್ನು ಕಮ್ಮಿ ಮಾಡುವ ದಿಸೆಯಲ್ಲಿ ಜಂಟಿ ಮಾತುಕತೆ ನಡೆಸಲಿದ್ದಾರೆ. ಅವರಿಗೂ ಬಿಸಿ ತಟ್ಟುತ್ತಿದೆ. ಇತ್ತ ನಮ್ಮ ಸರ್ಕಾರಕ್ಕೂ ತುಸು ಬಿಸಿ ಮುಟ್ಟಿದೆ ಎಂಬುದು ಮೊನ್ನೆ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲಿ ಕಾರ್ಬನ್‌ ಹೆಜ್ಜೆಗುರುತನ್ನು ಕಮ್ಮಿ ಮಾಡಲೆಂದು ತುಸು ಹಣವನ್ನು ಮೀಸಲಿಟ್ಟಿದ್ದೂ ಸುದ್ದಿಯಾಗಿದೆ.

ಅವೆಲ್ಲ ಒತ್ತಟ್ಟಿಗಿರಲಿ. ಮೆಡಿಟರೇನಿಯನ್‌ ಸಮುದ್ರದಿಂದ ನಮ್ಮತ್ತ ಬೀಸಿಬರುವ ಮಾರುತಕ್ಕೆ ‘ವೆಸ್ಟರ್ನ್‌ ಡಿಸ್ಟರ್ಬನ್ಸ್‌’ (ಪಶ್ಚಿಮದ ಕ್ಷೋಭೆ) ಎಂದು ಯಾರು ಹೆಸರಿಟ್ಟರೊ? ಅದು ಇನ್ನೊಂದು ಅರ್ಥದಲ್ಲೂ ಇಡೀ ಪೃಥ್ವಿಗೆ ಕ್ಷೋಭೆ ತರುತ್ತಿದೆ. ಫಾಸಿಲ್‌ ಇಂಧನಗಳ ಬಳಕೆ ಆರಂಭವಾಗಿದ್ದೇ ಯುರೋಪಿನಲ್ಲಿ. ಆ ಇಂಧನಗಳ ಬಲದಿಂದಲೇ ಜಗತ್ತನ್ನೆಲ್ಲ ಜಾಲಾಡಿ, ಎಲ್ಲಿ ಏನೇ ಸಂಪತ್ತಿದ್ದರೂ ಅದು ತಮ್ಮದಾಗಬೇಕೆಂಬ ಅಲ್ಲಿನವರ ಹಪಹಪಿಯೇ ಈಗ ಜಗದ್ವ್ಯಾಪಿಯಾಗಿದೆ. ಎಲ್ಲ ಸಮಾಜಗಳ ಆರ್ಥಿಕತೆಗೆ ಮತ್ತು ಈಗಿನ ಈ ಭೋಗಸಂಸ್ಕೃತಿಗೆ ಮೂಲ ಕಾರಣವೇನೆಂದರೆ ಪಶ್ಚಿಮದ ಆದರ್ಶಗಳೇ ಎಲ್ಲರ ಆದರ್ಶವೆನಿಸಿವೆ. ಹಾಸಿಗೆಯಿದ್ದಷ್ಟೇ ಕಾಲು ಚಾಚಬೇಕೆಂಬ ಮನಃಸ್ಥಿತಿ, ಬದಲೀ ಬದುಕಿನ ವಿಧಾನ, ಸಮಸಮಾಜ, ಸುಸ್ಥಿರ ಅಭಿವೃದ್ಧಿಯಂಥ ಗುರಿ ನಮ್ಮದಾಗಬೇಕೆಂದು ಎಚ್ಚರಿಕೆ ನೀಡಿದ ಬುದ್ಧ, ಬಸವ, ಗಾಂಧೀಜಿಯೆಲ್ಲ ಬರೀ ಬೀದಿ- ಬಡಾವಣೆಗಳ ಹೆಸರುಗಳಾಗಿದ್ದಾರೆ.

ಅಂದಹಾಗೆ, ಮೊನ್ನೆಯ ಅತಿವೃಷ್ಟಿಯಲ್ಲಿ, ಹಿಮಾಚಲ ಪ್ರದೇಶದ ಮೂಲಕ ಹರಿಯುವ ಬಿಯಾಸ್‌ (ವ್ಯಾಸ) ನದಿಯ ಮಹಾಪ್ರವಾಹದಲ್ಲಿ ಮೂರಂತಸ್ತಿನ ಕಟ್ಟಡವೂ ಕೊಚ್ಚಿ ಹೋಗಿ ಅತ್ಯಂತ ಹೆಚ್ಚಿನ ಕಷ್ಟನಷ್ಟಕ್ಕೀಡಾದ ಕುಲ್ಲು ನಗರದ ಆ ಬಡಾವಣೆಯ ಹೆಸರೇನು ಗೊತ್ತೆ? ಗಾಂಧೀನಗರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT