ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಮಹಾಶಿವರಾತ್ರಿ | ಒಳಿತಿನ ಎಚ್ಚರಕ್ಕೆ ಶಿವರಾತ್ರಿ

Last Updated 18 ಫೆಬ್ರುವರಿ 2023, 6:50 IST
ಅಕ್ಷರ ಗಾತ್ರ

‘ರಾತ್ರಿಯ ಹೊತ್ತು ಒಳ್ಳೆಯ ನಿದ್ರೆ ಮಾಡತಕ್ಕದ್ದು’. ಇದು ಲೋಕವ್ಯವಹಾರ; ಆರೋಗ್ಯಸೂತ್ರವೂ ಹೌದು; ಮಾತ್ರವಲ್ಲ, ಆಯಾಸಪರಿಹಾರಕ್ಕೆ ಜೀವಿಗಳು ಆಶ್ರಯಿಸುವ ಸಹಜಪ್ರವೃತ್ತಿ ಕೂಡ.

ಆದರೆ ಶಿವರಾತ್ರಿಯ ಆಚರಣೆ ಇದಕ್ಕೆ ವಿರುದ್ಧವಾದ ನಿಲುವನ್ನು ಪ್ರತಿಪಾದಿಸುತ್ತದೆ: ‘ಶಿವರಾತ್ರಿಯ ದಿನ ಜಾಗರಣೆ ಇರಬೇಕು; ಅಂದು ಇಡಿಯ ರಾತ್ರಿ ಎಚ್ಚರವಾಗಿರಬೇಕು, ನಿದ್ರೆಗೆ ಜಾರಬಾರದು.’

ದಿಟ, ಈ ನಿಲುವು ಲೋಕವ್ಯವಹಾರವಲ್ಲ; ಆದರೆ ಅಲೌಕಿಕ ಸಂಕೇತ. ಇದು ಆರೋಗ್ಯಸೂತ್ರವಲ್ಲ; ಆಧ್ಯಾತ್ಮಿಕತತ್ತ್ವ. ಇದು ಜೀವಿಗಳ ಆಯಾಸಪರಿಹಾರದ ಸಹಜ ಪ್ರವೃತ್ತಿಯಲ್ಲ; ಆನಂದಾನುಭವದ ರಹಸ್ಯವನ್ನು ಕಾಣಿಸುವ ನಿವೃತ್ತಿಮಾರ್ಗದ ದಿಕ್ಸೂಚಿ.

ಹೌದು, ಶಿವರಾತ್ರಿಯ ಆಚರಣೆ ಮತ್ತು ಈ ದಿನದ ಆರಾಧ್ಯದೈವ ಶಿವ – ಈ ಎರಡೂ ‘ತತ್ತ್ವ’ಗಳು ತುಂಬ ಸಂಕೇತಮಯವಾಗಿವೆ; ಹಲವು ಪದರಗಳಲ್ಲಿ ಈ ಸಂಕೇತಗಳು ಹರಡಿಕೊಂಡಿವೆ. ಶಿವತತ್ತ್ವ ಭಾರತೀಯ ಪರಂಪರೆಯ ದೊಡ್ಡ ಕಾಣ್ಕೆ; ಪರಿಪೂರ್ಣ ದೈವತ್ವದ ಕಲ್ಪನೆಯನ್ನು ಶಿವನಲ್ಲಿ ಕಾಣಬಹುದು. ತ್ಯಾಗ–ಭೋಗ, ಸಂಸಾರ–ಸನ್ಯಾಸ, ಕರ್ಮ–ಜ್ಞಾನ, ಲಾಸ್ಯ–ಭಯಾನಕ – ಹೀಗೆ ಪರಸ್ಪರ ವಿರುದ್ಧ ಎನಿಸುವಂಥ ಹಲವು ವಿವರಗಳ ಸಾಮರಸ್ಯಮೂರ್ತಿಯೇ ಶಿವ. ಕಾಳಿದಾಸನ ಪದ್ಯವೊಂದು ಈ ತತ್ತ್ವವನ್ನು ಚೆನ್ನಾಗಿ ವರ್ಣಿಸಿದೆ; ಅದರ ತಾತ್ಪರ್ಯ ಹೀಗೆ:

‘ಶಿವನು ಎಂಥವನು ಎಂದರೆ – ನಮಿಸಿದ ಭಕ್ತರ ಬೇಡಿಕೆಗಳನ್ನೆಲ್ಲ ಪೂರೈಸುವಷ್ಟು ಅಖಂಡವಾದ ಐಶ್ವರ್ಯಸಂಪನ್ನ; ಆದರೆ ತಾನು ಧರಿಸಿರುವುದು ಗಜಚರ್ಮವನ್ನಷ್ಟೆ. ತನ್ನ ಮಡದಿಯ ಬಗ್ಗೆ ಅವನಿಗೆ ಎಷ್ಟು ಪ್ರೀತಿ ಎಂದರೆ ಅವಳಿಗೆ ತನ್ನ ದೇಹದ ಅರ್ಧಭಾಗವನ್ನೇ ಕೊಟ್ಟಿದ್ದಾನೆ; ಹೀಗಿದ್ದರೂ ಅವನು ವಿಷಯಾಸಕ್ತರಹಿತರಾದ ಯತಿಗಳನ್ನೂ ಮೀರಿಸುವಂಥ ಪರಮಯತಿ. ತನ್ನ ಅಷ್ಟಮೂರ್ತಿಗಳಿಂದ ಇಡಿಯ ಜಗತ್ತನ್ನೇ ಧರಿಸಿದ್ದಾನೆ; ಆದರೆ ನಾನು–ನನ್ನದು ಎಂಬ ಅಭಿಮಾನವೇ ಇಲ್ಲದವನು. ಮಾನವರ ತಾಮಸವೃತ್ತಿಯನ್ನು ಪರಿಹರಿಸಿ, ಒಳ್ಳೆಯ ದಾರಿಯನ್ನು ತೋರಲು ಇಂಥ ಶಿವನಿಗಲ್ಲದೆ, ಮತ್ತೆ ಇನ್ನಾರಿಗೆ ತಾನೆ ಸಾಧ್ಯವಾದೀತು?’

ಶಿವತತ್ತ್ವವೂ, ಶಿವರಾತ್ರಿಯ ಮಾಹಾತ್ಮ್ಯವೂ ಈ ಪದ್ಯದಲ್ಲಿ ಹರಳುಗಟ್ಟಿದೆ. ನಮ್ಮ ಜೀವನವು ಶಿವಮಯವಾಗಲು ತ್ಯಾಗ–ಭೋಗಗಳ ಸಮನ್ವಯ ನಮ್ಮಲ್ಲಿ ದೃಢವಾಗಬೇಕು; ಈ ವಿವೇಕ ಎಚ್ಚರವಾಗಲು ನಮ್ಮಲ್ಲಿ ಅಡಗಿರುವ ಮೊದಲು ತಾಮಸಬುದ್ಧಿ ತೊಲಗಬೇಕು; ಇದು ಸಾಧ್ಯವಾಗಬೇಕಾದರೆ ತಾಮಸ, ಎಂದರೆ ಅವಿದ್ಯೆಯ ಕತ್ತಲು ನಮ್ಮನ್ನು ಆವರಿಸದಂತೆ ನಾವು ಎಚ್ಚರವಾಗಿರಬೇಕು. ಹೀಗೆ ಎಚ್ಚರದಿಂದ ಕೂಡಿದ ಒಳಿತಿನ ರಾತ್ರಿಯೇ ಶಿವರಾತ್ರಿ.

ಶಿವನು ಯೋಗಿಗಳಿಗೆ ಮಹಾಯೋಗಿ; ಗೃಹಸ್ಥರಿಗೆ ಮಹಾಕುಟುಂಬಿ. ಅವನು ಎಲ್ಲ ತಪಸ್ಸುಗಳಿಗೂ ಫಲವನ್ನು ಕೊಡುವವನು; ಹೀಗಿದ್ದರೂ ದೇವತೆಗಳಲ್ಲಿ ಅವನಷ್ಟು ದೊಡ್ಡ ಸಂಸಾರಸ್ಥ ಇನ್ನೊಬ್ಬರಿಲ್ಲ – ಈ ಕುಟುಂಬವೂ ಹಲವು ವೈರುದ್ಧ್ಯಗಳ ನಿಲಯ. ಹೀಗಾಗಿ ಅವನು ಸನ್ಯಾಸಿಗಳಿಗೂ ಸಂಸಾರಿಗಳಿಗೂ ಒಲಿಯುವ ದೈವ; ಅವನಿಗೆ ತಪಸ್ವಿಗಳ ಸಾಧನೆಯೂ ಅರ್ಥವಾಗುತ್ತದೆ, ಸಂಸಾರಿಗಳ ರೋದನವೂ ಅರ್ಥವಾಗುತ್ತದೆ. ಅವನು ಲಯಕಾರಕ; ಎಂದರೆ ಸೃಷ್ಟಿಯ ಹುಟ್ಟನ್ನೇ ಅಡಗಿಸುತ್ತಾನೆ, ದಿಟ. ಆದರೆ ಅವನು ತನ್ನ ಡಮರುವಿನ ನಾದಮಾತ್ರದಿಂದಲೇ ಸೃಷ್ಟಿಕಾರ್ಯವನ್ನೂ ನೆರವೇರಿಸುವವನು; ಶಿವ ಮತ್ತು ಅವನ ಮಡದಿ ಶಕ್ತಿ – ಇವರು ಆದಿದಂಪತಿ; ಮಾತು–ಅರ್ಥಗಳ ಸಾಂಗತ್ಯದಂತೆ ಇವರಿಬ್ಬರ ದಾಂಪತ್ಯ.

ಹೀಗೆ ಪ್ರವೃತ್ತಿಮಾರ್ಗಕ್ಕೂ ನಿವೃತ್ತಿಮಾರ್ಗಕ್ಕೂ ಒಲಿಯುವ, ಒದಗುವ ಶಿವನ ಆರಾಧನೆಗೆ ಮೀಸಲಾದ ಮಹಾವ್ರತವೇ ಶಿವರಾತ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT