ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಚಿವ ಸಂಪುಟವು ಜಾತಿ ಜನಗಣತಿಯನ್ನು (ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ) ಪುನಃ ನಡೆಸಲು ನಿರ್ಧರಿಸಿದೆ. ಈ ನಿರ್ಧಾರವು ಜಾತಿ ಜನಗಣತಿ ಬಗ್ಗೆ ಇದ್ದ ಗೊಂದಲವನ್ನು ಒಂದಷ್ಟು ಕಡಿಮೆ ಮಾಡಿದ್ದರೂ ಅನೇಕ ಪ್ರಶ್ನೆಗಳನ್ನು ನಮ್ಮ ಮುಂದಿಟ್ಟಿದೆ.

ಮೊದಲನೆಯದಾಗಿ, ಗಣತಿ ಮಾಡುವ ಬಗ್ಗೆ. ಮುಂದಿನ ಮೂರು ತಿಂಗಳ ಒಳಗಾಗಿ ಜಾತಿ ಜನಗಣತಿಯನ್ನು ಮುಗಿಸುತ್ತೇವೆಂದೂ ಮತ್ತು ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಈ ಸಾಮಾಜಿಕ– ಶೈಕ್ಷಣಿಕ ಸಮೀಕ್ಷೆಯನ್ನು ಕೈಗೆತ್ತಿಕೊಳ್ಳುವುದೆಂದೂ ಮುಖ್ಯಮಂತ್ರಿ ಹೇಳಿರುವುದಾಗಿ ವರದಿಯಾಗಿದೆ. ಸದ್ಯಕ್ಕೆ ಈ ಆಯೋಗದಲ್ಲಿ, ಆರು ತಿಂಗಳ ಹಿಂದೆ ನೇಮಕಗೊಂಡ ಅಧ್ಯಕ್ಷರಷ್ಟೇ ಇದ್ದಾರೆ. ಐವರು ಸದಸ್ಯರ ನೇಮಕ ಇನ್ನೂ ಆಗಬೇಕಿದೆ. ಇನ್ನು, ಕಳೆದ ಬಾರಿ 55 ಪ್ರಶ್ನೆಗಳು ಇದ್ದ ಹಾಗೆ ಈ ಬಾರಿಯೂ ಪ್ರಶ್ನಾವಳಿ ತಯಾರಿ ನಡೆಯಬೇಕಿದೆ. ಮನೆಗಳ ಗುರುತು, ಸಮೀಕ್ಷೆ ನಡೆಸುವವರಿಗೆ ತರಬೇತಿ, ಡಿಜಿಟಲೀಕರಣ ಯಾವ ರೀತಿ ಇರಬೇಕು ಎನ್ನುವ ಸ್ಪಷ್ಟತೆ, ಈ ಎಲ್ಲವೂ ಸಮೀಕ್ಷೆ ಪ್ರಾರಂಭಗೊಳ್ಳುವ ಮೊದಲೇ ಆಗಬೇಕು. ಸಮೀಕ್ಷೆಯ ನಂತರ ಕಚ್ಚಾ ದತ್ತಾಂಶಗಳ ವಿಶ್ಲೇಷಣೆ ಆಗಬೇಕು. ನಂತರವಷ್ಟೇ ವರದಿಯ ತಯಾರಿಕೆ.

ಹೊಸ ಗಣತಿಯನ್ನು ಮಾಡುವವರು ಯಾರು ಎನ್ನುವುದು ನಂತರದ ಪ್ರಶ್ನೆ. ಸಾಮಾನ್ಯವಾಗಿ, ಗಣತಿ ಕಾರ್ಯವನ್ನು ನಡೆಸಿಕೊಡುವವರು ಶಿಕ್ಷಕರು. ಆದರೆ, ಈಗಾಗಲೇ ಶಾಲೆಗಳು ಪ್ರಾರಂಭವಾಗಿರುವುದರಿಂದ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕರಿಗೆ ಬಿಡುವಿರುವುದಿಲ್ಲ. ಮುಂದಿನ ವರ್ಷ ಫೆಬ್ರುವರಿ– ಮಾರ್ಚ್ವರೆಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ಅವರು ನಿರತರಾಗಿರುತ್ತಾರೆ. ಶಿಕ್ಷಕರಿಂದಲೇ ಗಣತಿ ಕಾರ್ಯ ಮಾಡಿಸಬೇಕೆಂದಿದ್ದರೆ, 2026ರ ಏಪ್ರಿಲ್ವರೆಗೂ ಕಾಯಬೇಕು. ಜಾತಿ ಜನಗಣತಿಯಲ್ಲಿ ಶಿಕ್ಷಕರನ್ನು ಬಳಸಿಕೊಳ್ಳುವುದಿಲ್ಲ ಎಂದು ಶಿಕ್ಷಣ ಸಚಿವರೇನೋ ಹೇಳಿದ್ದಾರೆ. ಆದರೆ, ಶಿಕ್ಷಕರ ಬದಲು ಯಾರು ಗಣತಿ ನಡೆಸುತ್ತಾರೆ ಎನ್ನುವುದನ್ನವರು ಸ್ಪಷ್ಟಗೊಳಿಸಿಲ್ಲ.

ಶಿಕ್ಷಕರ ಬದಲು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಂದ ಗಣತಿ ಕಾರ್ಯ ನಡೆಸುವ ಬಗ್ಗೆ ಯೋಚಿಸಲಾಗುತ್ತಿದೆ ಎನ್ನಲಾಗಿದೆ. ಹಾಗೇನಾದರೂ ಆದಲ್ಲಿ, ಅವರು ನಿರ್ವಹಿಸುತ್ತಿರುವ ಕರ್ತವ್ಯದಲ್ಲಿ ವ್ಯತ್ಯಯವಾಗುವುದಿಲ್ಲವೇ? ಬಹುಶಃ, ಇದು ಕೂಡ ಕಾರ್ಯಸಾಧುವಲ್ಲ. ಇವೆರಡೂ ಆಗದಿದ್ದ ಪಕ್ಷದಲ್ಲಿ ಸರ್ಕಾರೇತರ ಸಂಸ್ಥೆಗಳಿಗೆ ಜಾತಿ ಜನಗಣತಿಯ ಕೆಲಸ ವಹಿಸುವುದನ್ನು ಸರ್ಕಾರ ಪರಿಗಣಿಸಬಹುದೇ? ಆದರೆ, ಇಲ್ಲಿ ಹೊಣೆಗಾರಿಕೆಯ ಪ್ರಶ್ನೆ ಉದ್ಭವಿಸುತ್ತದೆ ಹಾಗೂ ಬಹು ಮಹತ್ವದ ಕೆಲಸವನ್ನು ಸರ್ಕಾರೇತರ ಸಂಸ್ಥೆ ಕೈಗೆತ್ತಿಕೊಳ್ಳುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುವ ಸಾಧ್ಯತೆ ಹೆಚ್ಚು.

ಈಗ ಮಳೆಗಾಲ. ಸೆಪ್ಟೆಂಬರ್– ಅಕ್ಟೋಬರ್ ಕೊನೆಯವರೆಗೂ ಮಳೆ ಇರುತ್ತದೆ. ಕೃಷಿ ಚಟುವಟಿಕೆಗಳು ನಡೆಯುವ ಸಮಯದಲ್ಲಿ ಸಮೀಕ್ಷೆ ನಡೆಸುವುದು ಅಸಾಧ್ಯ. ಇದು ಸರ್ಕಾರಕ್ಕೆ ಗೊತ್ತಿಲ್ಲದ ಸಂಗತಿಯೇನಲ್ಲ.

ಈ ಹಿಂದೆ, ಕಾಂತರಾಜ ಆಯೋಗವು ನಡೆಸಿದ್ದ ಜಾತಿ ಜನಗಣತಿಯಲ್ಲಿ 1.6 ಲಕ್ಷ ಸಿಬ್ಬಂದಿ ಭಾಗಿ
ಆಗಿದ್ದರು. ಅದರಲ್ಲಿ ಶಿಕ್ಷಕರ ಸಂಖ್ಯೆಯೇ 1.33 ಲಕ್ಷದಷ್ಟಿತ್ತು. ಈ ಭಾರಿ ಇಷ್ಟೇ ಸಂಖ್ಯೆಯ ಶಿಕ್ಷಕರು ಶೈಕ್ಷಣಿಕ ವರ್ಷ ಪ್ರಾರಂಭವಾದ ನಂತರ ಸಿಗುವುದು ಕಷ್ಟಸಾಧ್ಯ. ಅಷ್ಟೇ ಅಲ್ಲ, ‘ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು’ ಕಾಯ್ದೆಯ ಪ್ರಕಾರ, ಶೈಕ್ಷಣಿಕ ವರ್ಷ ಪ್ರಾರಂಭವಾದ ಮೇಲೆ ಶಿಕ್ಷಕರಿಗೆ ಬೇರೆ ಯಾವುದೇ ಕೆಲಸವನ್ನೂ ಕೊಡುವಂತಿಲ್ಲ. ಕಾಂತರಾಜ ಆಯೋಗವು 2015ರ ಏಪ್ರಿಲ್ 11ರಿಂದ ಮೇ 30ರವರೆಗೆ ನಡೆಸಿದ ಸಾಮಾಜಿಕ– ಶೈಕ್ಷಣಿಕ ಸಮೀಕ್ಷೆ ಸುಮಾರು 50 ದಿನಗಳಲ್ಲೇ ಮುಗಿದರೂ ಅದು ನಡೆದದ್ದು ಶಾಲೆಗಳಿಗೆ ರಜೆ ಇದ್ದ ದಿನಗಳಲ್ಲಿ.

ಆಗಿನ ಜನಸಂಖ್ಯೆಯ 6.35 ಕೋಟಿಯಲ್ಲಿ ಸಮೀಕ್ಷೆಗೆ ಒಳಪಟ್ಟವರು 5.98 ಕೋಟಿ. ಈಗಿನ ಜನಸಂಖ್ಯೆ 7 ಕೋಟಿ ಮೀರುವ ಸಾಧ್ಯತೆ ಹೆಚ್ಚು. ಕಳೆದ ಬಾರಿಯ ಸಮೀಕ್ಷೆಗೆ ಆದ ವೆಚ್ಚ ₹165 ಕೋಟಿ. ಹೊಸ ಸಮೀಕ್ಷೆಯ ವೆಚ್ಚದ ಬಗ್ಗೆ ಸರ್ಕಾರ ಯಾವುದೇ ಹೇಳಿಕೆ ನೀಡಿಲ್ಲದಿದ್ದರೂ ಈ ಬಾರಿ ಆ ಮೊತ್ತ ₹300 ಕೋಟಿ ದಾಟುವ ಸಾಧ್ಯತೆ ಇದೆ.

ಕಾಂತರಾಜ ಹಾಗೂ ಜಯಪ್ರಕಾಶ್ ಹೆಗ್ಡೆ ವರದಿ ಬಗ್ಗೆ ತನ್ನ ನಿಲುವು ಏನೆಂದು ಸರ್ಕಾರ ಈವರೆಗೂ ಸ್ಪಷ್ಟನೆ ನೀಡಿಲ್ಲ. ವರದಿಯನ್ನು ಸ್ವೀಕರಿಸಿರುವುದು ಮಾತ್ರವೋ ಅಥವಾ ಒಪ್ಪಿಕೊಳ್ಳಲಾಗಿದೆಯೋ ಎನ್ನುವುದರ ಬಗ್ಗೆ ಸರ್ಕಾರ ಏನನ್ನೂ ಹೇಳಿಲ್ಲ. ಏನೇ ತೀರ್ಮಾನವಿದ್ದರೂ ವರದಿಯನ್ನು ಬಹಿರಂಗವಂತೂ ಮಾಡಿಲ್ಲ. ಈವರೆಗೆ ತಿಳಿದುಬಂದಿರುವ ವಿವರಗಳೆಲ್ಲ, ವರದಿಯಿಂದ ಸೋರಿಕೆಗೊಂಡು ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವ ದತ್ತಾಂಶಗಳಷ್ಟೇ.

ಸೋರಿಕೆಗೊಂಡ ದತ್ತಾಂಶಗಳ ಪ್ರಕಾರ ಪ್ರಬಲ ಜಾತಿಗಳಾದ ಲಿಂಗಾಯತ, ಒಕ್ಕಲಿಗರ ಜನಸಂಖ್ಯೆಯು ಆ ಸಮುದಾಯಗಳ ಸಂಘಟನೆಗಳು ಪ್ರತಿಪಾದಿಸುತ್ತಿರುವ ಸಂಖ್ಯೆಗೆ ಹೋಲಿಸಿದರೆ ಭಾರಿ ಪ್ರಮಾಣದಲ್ಲಿ ಕಡಿಮೆ ಇದೆ. ಈ ವ್ಯತ್ಯಾಸಕ್ಕೆ ಈ ಎರಡು ಸಮುದಾಯಗಳ ವ್ಯಾಪಕ ವಿರೋಧವೂ ವ್ಯಕ್ತವಾಗಿದೆ. ಈ ಸಂಗತಿಯನ್ನು, ಉಪ ಮುಖ್ಯಮಂತ್ರಿ ಹಾಗೂ ಒಕ್ಕಲಿಗ ನಾಯಕ ಡಿ.ಕೆ. ಶಿವಕುಮಾರ್ ಅವರು ಇತ್ತೀಚೆಗೆ ದೆಹಲಿಯಲ್ಲಿ ಹೇಳಿದ್ದಾರೆ.

ದೇವರಾಜ ಅರಸು ಅವರು ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ತುಳಿತಕ್ಕೊಳಗಾದ ಸಮುದಾಯಗಳಿಗೆ ಭರವಸೆ ತುಂಬಿ, ಅಧಿಕಾರದಲ್ಲಿ ಮತ್ತು ಇತರ ಕ್ಷೇತ್ರಗಳಲ್ಲಿ ಅವರಿಗೆ ಹೆಚ್ಚಿನ ಪಾಲು ದೊರಕಿಸಿಕೊಡಲು ಶ್ರಮಿಸಿದ್ದರು. ಅದೇ ರೀತಿ, ಅವಕಾಶವಂಚಿತರಿಗೆ ನ್ಯಾಯ ದೊರಕಿಸಿಕೊಡುವ ದಿಸೆಯಲ್ಲಿ ಕಳೆದ ಸಮೀಕ್ಷೆಯೂ ಮಹತ್ವದ ಹೆಜ್ಜೆ ಇರಿಸಿತ್ತು. ತೆಲಂಗಾಣ ಮತ್ತು ಬಿಹಾರದಲ್ಲಿ ಹಿಂದುಳಿದ ಸಮುದಾಯಗಳಿಗೆ ಜಾತಿ ಸಮೀಕ್ಷೆಯು ಬಲವನ್ನು ತಂದುಕೊಟ್ಟಂತೆ, ಸಿದ್ದರಾಮಯ್ಯನವರ ಅವಧಿಯಲ್ಲಿ ತಮಗೂ ನ್ಯಾಯ ದೊರೆಯುತ್ತದೆ ಎಂದು ಈ ಸಮುದಾಯಗಳು ಕಾಯುತ್ತಿದ್ದರೆ ಆಶ್ಚರ್ಯವೇನಿಲ್ಲ.

ಕಾಂತರಾಜ ಆಯೋಗದ ವರದಿಯನ್ನು ಆಧಾರವಾಗಿಟ್ಟುಕೊಂಡು ಜಯಪ್ರಕಾಶ್ ಹೆಗ್ಡೆ ಆಯೋಗವು ರಾಜ್ಯದ ಹಿಂದುಳಿದ ವರ್ಗಗಳ ಜನಸಂಖ್ಯೆಯು ಶೇ 70ರಷ್ಟಿದ್ದು, ಅವರಿಗೆ ಮೀಸಲಾತಿಯನ್ನು ಶೇ 32ರಿಂದ ಶೇ 51ಕ್ಕೆ ಏರಿಸಬೇಕೆಂದು ಶಿಫಾರಸು ಮಾಡಿತ್ತು. ಮುಸ್ಲಿಮರ ಜನಸಂಖ್ಯೆ ಹೆಚ್ಚಾಗಿರುವುದನ್ನು ಗುರುತಿಸಿರುವ ಸಮೀಕ್ಷೆ ಆ ಸಮುದಾಯಕ್ಕೂ ಮೀಸಲಾತಿಯನ್ನು ಏರಿಸಬೇಕು ಎಂದು ಹೇಳಿತ್ತು.

ಜಾತಿ ಲೆಕ್ಕಾಚಾರದಲ್ಲಿ ಬಲಿಷ್ಠವಾಗಿರುವ ಲಿಂಗಾಯತ, ಒಕ್ಕಲಿಗ ಸಮುದಾಯಗಳಿಗೆ ರಾಜ್ಯ ಸರ್ಕಾರ ಮಣಿದಿರುವುದು ಸ್ಪಷ್ಟ. ಕಳೆದ ಸುಮಾರು ಒಂದೂವರೆ ದಶಕದ ಅವಧಿಯಲ್ಲಿ ಹಿಂದುಳಿದ ಸಮುದಾಯಗಳ ನಾಯಕರಾಗಿ ಹೊರಹೊಮ್ಮಿರುವ ಸಿದ್ದರಾಮಯ್ಯನವರಿಗೆ ಹಿನ್ನಡೆಯಾಗಿರುವುದೂ ಸ್ಪಷ್ಟ. ಕಾಂಗ್ರೆಸ್ ನೇತೃತ್ವದ ಸರ್ಕಾರದ ಈ ನಡೆಯಿಂದ ಹಿಂದುಳಿದ ಸಮುದಾಯದ ಮುಂದಿನ ಹೆಜ್ಜೆ ಏನು ಎನ್ನುವುದನ್ನು ಕಾದು ನೋಡಬೇಕು.

ಇತ್ತೀಚಿನವರೆಗೂ ಆಯೋಗದ ವರದಿಯನ್ನು ಬಲವಾಗಿ ಸಮರ್ಥನೆ ಮಾಡುತ್ತಿದ್ದ ಸಿದ್ದರಾಮಯ್ಯ, ಪಕ್ಷದ ಹೈಕಮಾಂಡ್ ಹೇಳಿದ್ದರಿಂದ ಮರು ಸಮೀಕ್ಷೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಸಮೀಕ್ಷೆ ನಡೆದು 10 ವರ್ಷ ಮೀರಿರುವುದರಿಂದ, ಮರು ಸಮೀಕ್ಷೆ ಆಗಲೇಬೇಕೆಂದು ಹೇಳುತ್ತಾ, ತಮ್ಮ ದಿಢೀರ್ ಮನಃಪರಿವರ್ತನೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅವರ ಮಾತನ್ನು ಒಪ್ಪಿಕೊಳ್ಳುವುದಾದಲ್ಲಿ, ಅವರು ಎರಡನೇ ಬಾರಿ ಅಧಿಕಾರಕ್ಕೆ ಬಂದ ತಕ್ಷಣ, 2023ರಲ್ಲಿಯೇ ವರದಿಯನ್ನು ಒಪ್ಪಿಕೊಂಡು ಜಾರಿಗೆ ತರಬಹುದಾಗಿತ್ತಲ್ಲ? ಆಗಿನ್ನೂ ವರದಿ ಕೊಟ್ಟು 10 ವರ್ಷ ಕಳೆದಿರಲಿಲ್ಲ. ಇವೆಲ್ಲವೂ ಗೊತ್ತಿದ್ದರೂ ವಿಳಂಬಕ್ಕೆ ಅವಕಾಶ ಮಾಡಿಕೊಟ್ಟ ಅವರ ವರ್ತನೆಯು ತಾವು ಹಿಂದುಳಿದ ವರ್ಗಗಳ ನಾಯಕ ಎಂದು ಬಿಂಬಿಸಿಕೊಳ್ಳಲು ನಡೆಸಿದ ತಂತ್ರವಾಗಿತ್ತೇ?

ಈಗ ಆಗಿರುವ ಜಾತಿ ಜನಗಣತಿಯನ್ನು ಕಾಂಗ್ರೆಸ್ ಹೈಕಮಾಂಡ್ ತಿರಸ್ಕರಿಸಿದೆ ಎಂದೇ ಹೇಳಬೇಕಾಗುತ್ತದೆ. ಇದೇ ಏಪ್ರಿಲ್ ತಿಂಗಳಿನಲ್ಲಿ ಅಹಮದಾಬಾದ್ನಲ್ಲಿ ನಡೆದ ಎಐಸಿಸಿ ಅಧಿವೇಶನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರಾಜ್ಯದ ಈ ಜಾತಿ ಜನಗಣತಿಯನ್ನು ಪ್ರಸ್ತಾಪಿಸಿ ಹೊಗಳಿದ್ದರು; ವರದಿಯನ್ನು ತಕ್ಷಣವೇ ಜಾರಿಗೊಳಿಸಿ ಎಂದು ಹೇಳಿದ್ದರು. ಅಹಮದಾಬಾದ್ನಿಂದ ಮರಳಿದ ನಂತರ ಮುಖ್ಯಮಂತ್ರಿ ಮಾಡಿದ ಮೊದಲ ಕೆಲಸ, ಕ್ಯಾಬಿನೆಟ್ ಮೀಟಿಂಗ್ ಕರೆದು ಸಮೀಕ್ಷೆ ಕುರಿತು ಚರ್ಚಿಸಿದ್ದು. ಈಗ ಕಾಂಗ್ರೆಸ್ ವರಿಷ್ಠರು ತೆಲಂಗಾಣದ ಜಾತಿ ಸಮೀಕ್ಷೆಯನ್ನು ಹೊಗಳುತ್ತಿದ್ದಾರೆ. ನೆರೆ ರಾಜ್ಯದ ಸಮೀಕ್ಷೆ ಕಾಂತರಾಜ ಆಯೋಗದ ರೀತಿ 55 ಪ್ರಶ್ನೆಗಳನ್ನು ಒಳಗೊಂಡಿತ್ತು ಹಾಗೂ ಅಲ್ಲಿನ ಆಯೋಗ ಪ್ರಾರಂಭದಿಂದ ಹಿಡಿದು ವರದಿ ಕೊಡುವವರೆಗೂ ತೆಗೆದುಕೊಂಡಿದ್ದು ಕೇವಲ 6 ತಿಂಗಳು. ತೆಲಂಗಾಣದ ಸಮೀಕ್ಷೆಯ ಪ್ರಶಂಸೆ ಹಾಗೂ ಕರ್ನಾಟಕದ ಸಮೀಕ್ಷೆಯ ತಿರಸ್ಕಾರ ಸಿದ್ದರಾಮಯ್ಯನವರಿಗೆ ನುಂಗಲಾರದ ತುತ್ತಷ್ಟೇ ಅಲ್ಲ, ತೀವ್ರ ಮುಜುಗರ ತರುವ ವಿಷಯವೂ ಹೌದು.

ಹೊಸತಾಗಿ ಸಮೀಕ್ಷೆ ನಡೆಸುವ ಕರ್ನಾಟಕ ಸರ್ಕಾರದ ನಡೆ ಹಿಂದುಳಿದ ಸಮುದಾಯಗಳ ಕೆಂಗಣ್ಣಿಗೆ ಗುರಿಯಾಗುವುದಂತೂ ಸ್ಪಷ್ಟ. ತಳಸಮುದಾಯಗಳ ಆ ಅಸಮಾಧಾನವನ್ನು ಸಿದ್ದರಾಮಯ್ಯ ಅವರು ಹೇಗೆ ನಿಭಾಯಿಸುತ್ತಾರೆ ಎನ್ನುವುದು ಕುತೂಹಲಕರ.

ಮುಂದಿನ ಗಣತಿಯ ವರದಿ ಹಾಗೂ ಜಾತಿ ಜನಗಣತಿ ಒಳಗೊಂಡಂತೆ ಕೇಂದ್ರ ಸರ್ಕಾರ ನಡೆಸುವ ರಾಷ್ಟ್ರೀಯ ಜನಗಣತಿ, ಕರ್ನಾಟಕ ಸರ್ಕಾರಕ್ಕೆ ಹೊಸ ಸಮಸ್ಯೆಯನ್ನೇ ತಂದೊಡ್ಡಬಹುದು. ರಾಜ್ಯ ಹಾಗೂ ಕೇಂದ್ರದ ಜಾತಿಗಣತಿಯ ವಿವರ, ಶಿಫಾರಸುಗಳು ಕಳೆದ ಸಮೀಕ್ಷೆಗಿಂತ ಭಿನ್ನವಾಗಿದ್ದರೆ, ನೊಂದ ಸಮುದಾಯಗಳ ಪ್ರತಿಕ್ರಿಯೆ ಏನಿರಬಹುದು? ಮುಂದಿನ ಎರಡೂ ಗಣತಿಗಳು ಹಿಂದಿನ ಸಮೀಕ್ಷೆ
ಯಂತೆಯೇ ಇದ್ದರೆ, ಪ್ರಬಲ ಜಾತಿಗಳ ನಿಲುವು ಏನಾಗಬಹುದು? ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜೊತೆಗೆ ಹಿಂದುಳಿದ ಸಮುದಾಯ ಕೂಡ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಭಾರಿ ವಿಜಯಕ್ಕೆ ಕಾರಣವಾಗಿತ್ತು.

ಈ ಮಧ್ಯೆ, ಅಕ್ಟೋಬರ್–ನವೆಂಬರ್ನಲ್ಲಿ ರಾಜ್ಯದಲ್ಲಿ ಮಹತ್ತರ ರಾಜಕೀಯ ಬೆಳವಣಿಗೆಗಳಾಗ
ಬಹುದು ಎನ್ನಲಾಗುತ್ತಿದೆ. ನವೆಂಬರ್ಗೆ ಸಿದ್ದರಾಮಯ್ಯನವರ ಅಧಿಕಾರಾವಧಿ ಎರಡೂವರೆ ವರ್ಷ ಪೂರೈಸುತ್ತದೆ. ಆ ಸಮಯದಲ್ಲಿ, ಅಧಿಕಾರದ ಹಸ್ತಾಂತರ ನಡೆದು, ಮುಖ್ಯಮಂತ್ರಿ ಬದಲಾವಣೆ ಆಗಬಹುದು ಎಂದು ಹೇಳಲಾಗುತ್ತಿದೆ. ಹಾಗೇನಾದರೂ ಆದಲ್ಲಿ, ಮುಂದೆ ನಡೆಸಲಿರುವ ಜಾತಿ ಜನಗಣತಿಗಳ ಮೇಲೆ ಅದು ಯಾವ ರೀತಿಯ ಪರಿಣಾಮ ಬೀರಬಹುದು ಎನ್ನುವುದೂ ಕುತೂಹಲಕಾರಿ.

ಲೇಖಕ: ಹಿರಿಯ ಪತ್ರಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.