ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಾಜಕಾರಣ ‌| ಕೊನೆಯ ಹಂತ: ಕಾಣುವುದೇನು?

ಯಾವುದೇ ಅಲೆ ಇಲ್ಲದ ಚುನಾವಣೆಯಲ್ಲಿ ಗೆಲುವಿನ ತಕ್ಕಡಿ ಯಾರ ಪರ ತೂಗಲಿದೆ?
Published 31 ಮೇ 2024, 23:59 IST
Last Updated 31 ಮೇ 2024, 23:59 IST
ಅಕ್ಷರ ಗಾತ್ರ

ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಇಂದು (ಜೂನ್‌ 1). ಏಳು ಹಂತಗಳ ಚುನಾವಣೆ ಹೊಸದೇನಲ್ಲ. 2019ರಲ್ಲೂ ಇದೇ ರೀತಿಯಲ್ಲಿ ಚುನಾವಣೆ ನಡೆದಿತ್ತು. ಹೊಸದೇನೆಂದರೆ, ಮೊದಲ ಹಂತ ಹಾಗೂ ಕೊನೆಯ ಹಂತದ ಮತದಾನದ ನಡುವೆ ಇದ್ದ ಆರು ವಾರಗಳ ಸುದೀರ್ಘ ಅಂತರ. ಹಿಂದಿನ ಬಾರಿ ಐದು ವಾರಗಳಷ್ಟು ಅಂತರವಿತ್ತು. ರಾಜಕೀಯ ಪಕ್ಷಗಳು, ನಾಯಕರು, ಅಭ್ಯರ್ಥಿಗಳು ಹಾಗೂ ಮತದಾರರಲ್ಲಿ ಒಂದು ಬಗೆಯ ಬಳಲಿಕೆ ಉಂಟಾಗಿರುವುದನ್ನು ಕಾಣಬಹುದು. ಚುನಾವಣಾ ಪ್ರಚಾರ ಪ್ರಕ್ರಿಯೆ ಏಪ್ರಿಲ್ ಆರಂಭದಲ್ಲಿ ಶುರುವಾಗಿ ಮೇ ಅಂತ್ಯಕ್ಕೆ ಸಮಾಪ್ತಿಯಾಗಿದೆ. ಹೀಗಾಗಿ, ಇಡೀ ಎರಡು ತಿಂಗಳು ಚುನಾವಣಾ ಪ್ರಚಾರದ ಅಬ್ಬರ.

ಚುನಾವಣಾ ಪ್ರಚಾರ ಆರಂಭವಾಗಿ ಮತದಾನದ ಕಡೆಯ ಹಂತಕ್ಕೆ ಬರುವುದರೊಳಗೆ ಎದ್ದುಕಾಣುವಂತಹ ಬದಲಾವಣೆಯೊಂದು ಸ್ಪಷ್ಟವಾಗಿ ಗೋಚರವಾಗಿದೆ. ಯಾರು ಜಯಶಾಲಿಗಳಾಗುತ್ತಾರೆ ಎಂಬ ಬಗ್ಗೆ ಅಷ್ಟೇನೂ ಚರ್ಚೆಯೇ ಇಲ್ಲದ್ದರಿಂದ ಈ ಚುನಾವಣೆಯಲ್ಲಿ ಹೆಚ್ಚಿನ ಉತ್ಸಾಹವೇನೂ ಇರದು ಎಂಬುದು ಚುನಾವಣಾ ಪ್ರಚಾರ ಆರಂಭವಾಗುವ ಮೊದಲು ಇದ್ದಂತಹ ಮಾತಾಗಿತ್ತು. ಎಷ್ಟು ಸ್ಥಾನಗಳನ್ನು ಗೆಲ್ಲಬಹುದು ಎಂಬುದರ ಸುತ್ತಲೇ ಹೆಚ್ಚಿನ ಚರ್ಚೆ ಇತ್ತು. ಆದರೆ ಪ್ರಚಾರ ಆರಂಭವಾಗುತ್ತಿದ್ದಂತೆಯೇ ಸ್ಪರ್ಧೆ ಹೆಚ್ಚು ಬಿರುಸಾಗಿಯೇ ಇದೆ ಎಂಬುದು ಗಮನಕ್ಕೆ ಬಂತು. ಎರಡು ಪ್ರಧಾನ ಪಕ್ಷಗಳ ನಡುವೆ ನೇರ ಸ್ಪರ್ಧೆ ಇರುವ ರಾಜ್ಯಗಳಲ್ಲಷ್ಟೇ ಅಂತಹ ಬಿರುಸಿನ ಸ್ಪರ್ಧೆ ಕಂಡುಬಂದಿಲ್ಲ; ಬಹುಕೋನದ ಸ್ಪರ್ಧೆ ಇರುವ ರಾಜ್ಯಗಳಲ್ಲಿಯೂ ಸ್ಪರ್ಧೆ ತೀವ್ರವಾಗಿದೆ. ಸ್ಪರ್ಧೆಯ ಸ್ವರೂಪ, ರೂಪುರೇಷೆಯಲ್ಲಿ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸ ಇರುವಂತೆಯೂ ಭಾಸವಾಗಿದೆ.

ಪ್ರತಿ ಮತದಾನದ ಹಂತದಲ್ಲೂ ಕಡಿಮೆಯಾದ ಮತದಾನದ ಪ್ರಮಾಣದ ಬಗ್ಗೆ ಸಹ ಚುನಾವಣಾ ಪ್ರಚಾರದ ವೇಳೆಯ ಚರ್ಚೆಗಳಲ್ಲಿ ಗಮನಹರಿಸಲಾಗಿತ್ತು. ಮೊದಲ ಆರು ಹಂತಗಳ ಪ್ರವೃತ್ತಿಯೇ ಮುಂದುವರಿಯುತ್ತದೆಯೇ ಎಂಬುದನ್ನು ಅರ್ಥ ಮಾಡಿಕೊಳ್ಳಲು ಏಳನೇ ಹಂತದ ಮತದಾನದ ಅಂಕಿಅಂಶಗಳಿಗಾಗಿ ಈಗ ನಾವು ಕಾಯಬೇಕಿದೆ. ಇಲ್ಲಿ ಎರಡು ಅಂಶಗಳನ್ನು ಎತ್ತಿ ತೋರುವುದು ಮುಖ್ಯವಾಗುತ್ತದೆ. ಮೊದಲನೆಯದಾಗಿ, ಈ ಬಾರಿಯ ಮತದಾನದ ಪ್ರಮಾಣವನ್ನು, ವಿಶೇಷವಾಗಿ 2019ರ ಚುನಾವಣೆಯಲ್ಲಿನ ಮತದಾನದ ಪ್ರಮಾಣದ ಜೊತೆಗೆ ಹೋಲಿಕೆ ಮಾಡಲಾಗುತ್ತಿದೆ. ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೆಂದರೆ, ಹೆಚ್ಚಿನ ಮತದಾನದ ಪ್ರಮಾಣವನ್ನು ಕಂಡ ವಿಶೇಷ ಚುನಾವಣೆಯಾಗಿತ್ತು 2019ರ ಚುನಾವಣೆ. ಈ ಬಾರಿಯ ಮತದಾನದ ಪ್ರಮಾಣವು ಈ ಹಿಂದಿನ ಅನೇಕ ಚುನಾವಣೆಗಳಿಗೆ ಸಮಾನವಾಗಿ ಇದ್ದಂತಿದೆ. ಎರಡನೆಯದಾಗಿ, ಸ್ಪರ್ಧೆ ತೀವ್ರವಾಗಿರುವ ಕೆಲವು ಪ್ರಮುಖ ಕ್ಷೇತ್ರಗಳನ್ನು ಗಮನಿಸಿದಲ್ಲಿ, ಆ ಕ್ಷೇತ್ರಗಳಲ್ಲಿನ ಮತದಾನದ ಪ್ರಮಾಣವು 2019ರಲ್ಲಿ ಇದ್ದಷ್ಟೇ ಅಥವಾ ಕೆಲವೆಡೆ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿದೆ.

ಚುನಾವಣಾ ಪ್ರಚಾರ ಸಾಗಿಬಂದಂತೆ, ಎದ್ದು ಕಾಣುವಂತಹ ಯಾವುದೇ ರಾಷ್ಟ್ರೀಯ ಅಲೆ ಇಲ್ಲ ಎಂಬುದೂ ಸ್ಪಷ್ಟವಾಯಿತು. ವಿವಿಧ ರಾಜ್ಯಗಳಲ್ಲಿ ಬದಲಾವಣೆಯ (ವಿವಿಧ ಮಟ್ಟದ ತೀವ್ರತೆಗಳಲ್ಲಿ) ಗಾಳಿ ಇರಬಹುದು. ಅದರ ಪರಿಣಾಮ ಮತ್ತು ಒಳಾರ್ಥಗಳು ಜೂನ್ 4ರಂದಷ್ಟೇ ಗೊತ್ತಾಗಲಿವೆ.

ಬಿಜೆಪಿ ನೇತೃತ್ವದ ಎನ್‌ಡಿಎಗೆ ಚುನಾವಣಾ ಪ್ರಚಾರ ಕುರಿತಂತೆ ಸ್ಪಷ್ಟವಾದ ಸಿದ್ಧ ಮಾದರಿ ಇತ್ತು. ಅದನ್ನು ದೇಶದಾದ್ಯಂತ ಪ್ರಯೋಗಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ನಾಯಕತ್ವದ ಬಗ್ಗೆ ಪ್ರಜ್ಞಾಪೂರ್ವಕವಾದ, ಎದ್ದುಕಾಣಿಸುವಂತಹ ಗಮನ ಕೇಂದ್ರೀಕ ರಿಸಲಾಗಿತ್ತು. ಹೀಗಾಗಿ, ಮತದಾರರು ಮತ ನೀಡುವುದು ತಮಗೆ ವೈಯಕ್ತಿಕವಾಗಿಯಲ್ಲ, ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಿಯಾಗಿಸುವುದಕ್ಕಾಗಿ ಎಂಬುದನ್ನೇ ಎನ್‌ಡಿಎ ಅಭ್ಯರ್ಥಿಗಳು ರಾಷ್ಟ್ರದಾದ್ಯಂತ ಒತ್ತಿ ಹೇಳಿದರು. ಈ ಕಾರ್ಯತಂತ್ರವು ಮೈತ್ರಿಕೂಟಕ್ಕೆ ಮುಜುಗರ ತರಬಹುದಾದ ವಿಚಾರಗಳನ್ನೂ ಬದಿಗೆ ಸರಿಸುತ್ತದೆ ಎಂಬ ಭಾವನೆ ಆಡಳಿತ ಪಕ್ಷದ ನಾಯಕರದು. ಬಿಜೆಪಿಯಲ್ಲಿ ಈ ಬಾರಿ ಅಸಮಾಧಾನ ದೊಡ್ಡ ಮಟ್ಟದಲ್ಲಿ ಅದೂ ಬಹಿರಂಗವಾಗಿ ಕಾಣಿಸಿಕೊಂಡಿತು. ಹಿಂದೆಂದೂ ಈ ಮಟ್ಟದಲ್ಲಿ ಅಸಮಾಧಾನ ಭುಗಿಲೆದ್ದ ನಿದರ್ಶನಗಳು ಇಲ್ಲ. ಮೂರು ಅಥವಾ ನಾಲ್ಕು ಬಾರಿ ಸಂಸದರಾಗಿದ್ದ ಕೆಲವರೂ ಸೇರಿದಂತೆ ಸುಮಾರು ನೂರು ಅಭ್ಯರ್ಥಿಗಳನ್ನು ಬದಲಿಸಿ ಬೇರೆಯವರಿಗೆ ಟಿಕೆಟ್‌ ನೀಡಿದ್ದೂ ಸೇರಿದಂತೆ ಹಲವು ಅಂಶಗಳು ಈ ಅಸಮಾಧಾನಕ್ಕೆ ಕಾರಣವಾಗಿದ್ದವು.

ಇಂತಹ ಸವಾಲುಗಳಿಂದ ಗಮನ ಬೇರೆಡೆ ಸೆಳೆಯಲು ಪ್ರಧಾನಿ ನರೇಂದ್ರ ಮೋದಿಯವರನ್ನೇ ಪ್ರಚಾರದ ಕೇಂದ್ರಬಿಂದುವಾಗಿಸುವುದು ಉತ್ತಮ ಮಾರ್ಗವೆಂದು ಭಾವಿಸಲಾಯಿತು. ಮೊದಲ ಹಂತದ ಮತದಾನದ ನಂತರ, ಬಿಜೆಪಿ ಪ್ರಚಾರದಲ್ಲಿನ ಗಮನ ಹಾಗೂ ವಿಷಯ ಪೂರ್ಣ ಬದಲಾಯಿತು. ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ನಂತರ, ತನ್ನ ಪ್ರತಿಸ್ಪರ್ಧಿಯ ವಿರುದ್ಧದ ಟೀಕೆಗಳನ್ನು ತೀವ್ರವಾಗಿಸಲು ಅದು ನೆಪ ಕಂಡುಕೊಂಡಿತು. ಇದರ ನೇರ ಪರಿಣಾಮವೆಂದರೆ, ಬಿಜೆಪಿ ಸ್ವತಃ ಸಂಕಥನವನ್ನು ಆರಂಭಿಸುವ ಬದಲಿಗೆ ಕಾಂಗ್ರೆಸ್ ಕಾರ್ಯಸೂಚಿಗೆ ಸ್ಪಂದಿಸಲು ತೊಡಗಿತು.

ವಿವಿಧ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಎನ್‌ಡಿಎಯೇತರ ಪಕ್ಷಗಳು, ಸ್ಥಳೀಯ ವಿಚಾರಗಳನ್ನು ಇಟ್ಟುಕೊಂಡು ಚುನಾವಣೆಗಳಲ್ಲಿ ಹೋರಾಡುವಂತಹ ಕಾರ್ಯವಿಧಾನವನ್ನು ಅಳವಡಿಸಿಕೊಂಡವು. ಹೀಗಾಗಿ, ತಮ್ಮ ಸರ್ಕಾರಗಳ ಸಾಧನೆಗಳನ್ನು ಬಿಂಬಿಸಿ, ರಾಜ್ಯಗಳಲ್ಲಿನ ಆಡಳಿತ ಪಕ್ಷ ಅಥವಾ ಮೈತ್ರಿಕೂಟಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಕೇಂದ್ರದಲ್ಲಿ ಪರಿಣಾಮಕಾರಿಯಾಗಿ ತಮ್ಮನ್ನು ಪ್ರತಿನಿಧಿಸುವಂತಹವರಿಗೇ ಮತ ಹಾಕಬೇಕೆಂದು ಮತದಾರರ ಮನ ಒಲಿಸುವ ಯತ್ನವನ್ನು ಅವು ಮಾಡಿದವು. ಬಿಜೆಪಿಯು ರೂಪಿಸಲು ಯತ್ನಿಸಿದ ರಾಷ್ಟ್ರೀಯ ಸಂಕಥನ ಹಾಗೂ ವಿರೋಧ ಪಕ್ಷಗಳು ರೂಪಿಸಲು ಯತ್ನಿಸಿದ ಸ್ಥಳೀಯ ವಿಚಾರಗಳ ಸಂಕಥನದ ಮಧ್ಯದ ಮುಖಾಮುಖಿಯನ್ನು ಈ ಚುನಾವಣೆ ಕಂಡಿದೆ.  

ಭಾರತದ ಉತ್ತರ, ಪಶ್ಚಿಮ ಹಾಗೂ ಮಧ್ಯ ಭಾಗಗಳಲ್ಲಿ ಹೆಚ್ಚಿನ ಸ್ಥಾನಗಳನ್ನು (ಈ ಹಿಂದಿನಂತೆಯೇ) ಕಾಯ್ದುಕೊಳ್ಳುವ ಗುರಿ ಬಿಜೆಪಿಗೆ ಇದೆ. ಹರಿಯಾಣ, ದೆಹಲಿ ಹಾಗೂ ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಕೆಲವೊಂದು ಗಂಭೀರ ಸವಾಲುಗಳಿವೆ. ರಾಜಸ್ಥಾನ ಹಾಗೂ ಗುಜರಾತ್‌ನಲ್ಲಿ ಜಯಭೇರಿ ಬಾರಿಸಬಹುದೇ ಎಂಬ ಬಗ್ಗೆಯೂ ಪ್ರಶ್ನೆಗಳಿವೆ. ಛತ್ತೀಸಗಢ ಹಾಗೂ ಜಾರ್ಖಂಡ್‌ನಲ್ಲಿ ಕಳೆದ ಸಲ ಗೆದ್ದಿದ್ದಕ್ಕಿಂತ ಇನ್ನೊಂದಿಷ್ಟು ಹೆಚ್ಚಿನ ಸ್ಥಾನಗಳನ್ನು ಗೆಲ್ಲಬಹುದು ಎಂಬ ನಿರೀಕ್ಷೆಯನ್ನೂ ಬಿಜೆಪಿ ಇಟ್ಟುಕೊಂಡಿದೆ. ಮಹಾರಾಷ್ಟ್ರ, ಬಿಹಾರ ಹಾಗೂ ಉತ್ತರಪ್ರದೇಶದ ಫಲಿತಾಂಶಗಳು ತಕ್ಕಡಿಯನ್ನು ಏರುಪೇರು ಮಾಡುವ ಸಾಮರ್ಥ್ಯ ಹೊಂದಿವೆ. 

ಮಹಾರಾಷ್ಟ್ರದಲ್ಲಿ ಶಿವಸೇನೆ ಹಾಗೂ ಎನ್‌ಸಿಪಿಯ ಎರಡು ಬಣಗಳು ಇನ್ನೂ ಚುನಾವಣಾ ಪರೀಕ್ಷೆಗೆ ಒಳ ಪಟ್ಟಿಲ್ಲ. ಹೀಗಾಗಿ, ಯಾವ ಬಣಕ್ಕೆ ಹೆಚ್ಚಿನ ಜನಬೆಂಬಲವಿದೆ ಎಂಬುದನ್ನು ಈ ಚುನಾವಣೆ ಸೂಚಿಸಲಿದೆ. ಆ ಅಂಶವೇ ಅವರು ಗೆಲ್ಲುವ ಸೀಟುಗಳ ಮೇಲೂ ಪ್ರಭಾವ ಬೀರಲಿದೆ. ಬಿಹಾರದಲ್ಲಿ ಬಿಜೆಪಿ ಹಾಗೂ ಆರ್‌ಜೆಡಿ ಮೇಲುಗೈ ಸಾಧಿಸಿ ದಂತೆ ಕಾಣುತ್ತಿದೆ. ಜೆಡಿಯು ತೀವ್ರತರವಾದ ಸವಾಲು ಎದುರಿಸುತ್ತಿರುವಂತಿದೆ. ಈ ಹಿಂದಿ ಹೃದಯಭಾಗದಲ್ಲಿನ ಖೋತಾ ಸಾಧ್ಯತೆಯನ್ನು ಉತ್ತರಪ್ರದೇಶದಲ್ಲಿ ಹೆಚ್ಚಿನ ಸ್ಥಾನಗಳ ಗೆಲುವಿನ ಮೂಲಕ ಸುಧಾರಿಸಿಕೊಳ್ಳುವ ಆಶಯ ಬಿಜೆಪಿಯದ್ದು. ಆದರೆ ಇಲ್ಲಿಯೂ ಸ್ಪರ್ಧೆ ತುರುಸಾಗಿದೆ.

ದಕ್ಷಿಣ ಭಾಗದ ರಾಜ್ಯಗಳಲ್ಲಿ ಏನಾಗುತ್ತಿದೆ ಎಂಬ ಬಗ್ಗೆಯೂ ಹೆಚ್ಚಿನ ಚರ್ಚೆಗಳಾಗುತ್ತಿವೆ. ಕರ್ನಾಟಕದಲ್ಲಿ 2019ರಲ್ಲಿನ ಫಲಿತಾಂಶವನ್ನು ಉಳಿಸಿಕೊಳ್ಳುವುದು ಬಿಜೆಪಿಗೆ ಕಷ್ಟ. ಕರ್ನಾಟಕದಲ್ಲಿ ಕಳೆದುಕೊಂಡಿದ್ದನ್ನು ತೆಲಂಗಾಣ, ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ತುಂಬಿಕೊಳ್ಳಬಹುದು ಎಂಬ ವಾದ ಕೇಳಿಸುತ್ತಿದೆ. ಈಶಾನ್ಯ ರಾಜ್ಯಗಳಲ್ಲಿ ಹೆಚ್ಚಿನ ಬದಲಾವಣೆಗಳ ಸೂಚನೆ ಇಲ್ಲವಾದ್ದರಿಂದ ಪಶ್ಚಿಮ ಬಂಗಾಳ ಹಾಗೂ ಒಡಿಶಾದಲ್ಲಿನ ಚುನಾವಣಾ ಫಲಿತಾಂಶಗಳು ಕೂಡ ಸಂಖ್ಯಾದೃಷ್ಟಿಯಿಂದ ಈ ಸಲ ಮುಖ್ಯವಾಗುತ್ತವೆ.  ನಿಜಕ್ಕೂ ಕುತೂಹಲ ಹೆಚ್ಚಾಗುತ್ತಿದೆ. ಆದರೆ, ಜೂನ್ 4ರವರೆಗೆ ನಾವು ಕಾಯಲೇಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT