ಭಾನುವಾರ, 3 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೇಖನ: ವಿರಳ ಭಸ್ಮಧಾತು: ಸುಧಾರಣೆಯ ಹಾದಿ

ಗಣಿ ಸಚಿವಾಲಯ ಮುಂದಿಟ್ಟಿರುವ ಪ್ರಸ್ತಾವ ಅತಿ ಮುಖ್ಯ ಹೆಜ್ಜೆ
Last Updated 12 ಜುಲೈ 2022, 19:47 IST
ಅಕ್ಷರ ಗಾತ್ರ

ವಿರಳ ಭಸ್ಮಧಾತುಗಳು (ರೇರ್ ಅರ್ತ್ ಎಲಿಮೆಂಟ್ಸ್), ಸಾರ್ವಜನಿಕರಿಗೆ ಅಷ್ಟಾಗಿ ಪರಿಚಯವಿರದ, ಆದರೆ ರಸಾಯನ ವಿಜ್ಞಾನದ ಆಸಕ್ತ ವಿದ್ಯಾರ್ಥಿಗಳಿಗೆ ತಿಳಿದಿರುವ 17 ಅತಿ ಅಮೂಲ್ಯ ಲೋಹೀಯ ಧಾತುಗಳು. ಆವರ್ತ ಕೋಷ್ಟಕದಲ್ಲಿ (ಪೀರಿಯಾಡಿಕ್ ಟೇಬಲ್) ಲ್ಯಾಂಥನಮ್‍ನಿಂದ ಲುಟೀಸಿಯಮ್‌ ವರೆಗಿನ 15 ಧಾತುಗಳು ಹಾಗೂ ಸ್ಕ್ಯಾಂಡಿಯಮ್ ಮತ್ತು ಯಿಟ್ರಿಯಮ್ ಸೇರಿದಂತೆ ಈ 17 ಧಾತುಗಳಿಗೆ ಸಂಬಂಧಿಸಿದಂತೆ ಅತಿ ಮಹತ್ವದ ಹೊಸ ನೀತಿಯ ಪ್ರಸ್ತಾವವೊಂದನ್ನು ಗಣಿ ಸಚಿವಾಲಯವು ಸಿದ್ಧಪಡಿಸಿದೆ. ಈ ಸಂಬಂಧ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಬೇಕಿದೆ.

ದೇಶದ ರಕ್ಷಣಾ ವಲಯ, ಪರಮಾಣು ಶಕ್ತಿ, ಬಾಹ್ಯಾಕಾಶ, ಎಲೆಕ್ಟ್ರಾನಿಕ್ಸ್, ವೈದ್ಯಕೀಯ ಉಪಕರಣಗಳು, ಬ್ಯಾಟರಿಚಾಲಿತ ವಾಹನಗಳು, ಗಾಳಿಯಂತ್ರದ ಟರ್ಬೈನುಗಳು, ಸ್ವಚ್ಛಶಕ್ತಿ, ಮೊಬೈಲ್ ಫೋನ್, ಕಂಪ್ಯೂಟರ್‌ ಮುಂತಾದ ಕ್ಷೇತ್ರಗಳ ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವ ವಿರಳ ಭಸ್ಮಧಾತುಗಳಿಗೆ ಕಚ್ಚಾ ತೈಲದಷ್ಟೇ ಆರ್ಥಿಕ ಮಹತ್ವವಿದೆ. ಉದಾಹರಣೆಗೆ, ಬ್ಯಾಟರಿಚಾಲಿತ ವಾಹನಗಳು ಮತ್ತು ಟರ್ಬೈನುಗಳ ಉತ್ಪಾದನೆಯಲ್ಲಿ ನಿಯಡೀಮಿಯಮ್‌ ಬಹುಮುಖ್ಯವಾದ ಧಾತು. ಸದ್ಯದಲ್ಲಿ ನಿಯಡೀಮಿಯಮ್‌ ವಾರ್ಷಿಕ ಬೇಡಿಕೆ 900 ಟನ್‍ಗಳು ಮಾತ್ರ. ಆದರೆ ಮುಂಬರುವ ವರ್ಷಗಳಲ್ಲಿ ವಿದ್ಯುತ್‌
ವಾಹನಗಳು ಮತ್ತು ಗಾಳಿಯಂತ್ರಗಳ ಬಳಕೆ ಏರುವುದರಿಂದ 2025ರ ವೇಳೆಗೆ ನಿಯಡೀಮಿಯಮ್‌ ಬೇಡಿಕೆ 6,000 ಟನ್‍ ಆಗಲಿದ್ದು, 2030ರ ವೇಳೆಗೆ 20,000 ಟನ್‍ ಆಗಲಿದೆ. ಬಹುತೇಕ ಎಲ್ಲ ವಿರಳ ಭಸ್ಮಧಾತುಗಳ ಬೇಡಿಕೆಯೂ ಇದೇ ರೀತಿ ಹೆಚ್ಚಾಗಲಿದೆ.

ಪ್ರಪಂಚದ ವಿರಳ ಭಸ್ಮಧಾತುಗಳ ನಿಕ್ಷೇಪದ ಒಟ್ಟು ಪ್ರಮಾಣ 12.1 ಕೋಟಿ ಟನ್‍ಗಳು. ಇದರಲ್ಲಿ ಅತಿಹೆಚ್ಚಿನ ಅಂದರೆ 4.4 ಕೋಟಿ ಟನ್ ನಿಕ್ಷೇಪ ಚೀನಾದಲ್ಲಿದೆ. ಚೀನಾ, ಬ್ರೆಜಿಲ್, ರಷ್ಯಾ, ವಿಯೆಟ್ನಾಂ ನಂತರ ಐದನೆಯ ಸ್ಥಾನದಲ್ಲಿರುವ ಭಾರತದಲ್ಲಿ 69 ಲಕ್ಷ ಟನ್‍ ಲಭ್ಯತೆಯ ನಿಕ್ಷೇಪವಿದೆ. ಆದರೂ ವಿರಳ ಭಸ್ಮಧಾತುಗಳ ಪೂರೈಕೆಗೆ ನಾವು ಸಂಪೂರ್ಣವಾಗಿ ವಿದೇಶಗಳನ್ನು ಅವಲಂಬಿಸಿದ್ದೇವೆ. ಇದರಲ್ಲಿ ಅತ್ಯಧಿಕ ಭಾಗ ಬರುತ್ತಿರುವುದು ಚೀನಾದಿಂದ.

ಕಳೆದ ಕೆಲವು ವರ್ಷಗಳವರೆಗೆ ಜಗತ್ತಿನ ಶೇ 90ರಷ್ಟು ಬೇಡಿಕೆಯನ್ನು ಚೀನಾ ಪೂರೈಸುತ್ತಿತ್ತು. ಆದರೆ ಈ ಸಾಮರ್ಥ್ಯವನ್ನೇ ಪ್ರಬಲ ರಾಜಕೀಯ ಅಸ್ತ್ರವನ್ನಾಗಿ ಚೀನಾ ಬಳಸಿಕೊಳ್ಳಲು ಪ್ರಾರಂಭಿಸಿದ ನಂತರ ಅಮೆರಿಕ, ಕೆನಡಾ ಮತ್ತು ಆಸ್ಟ್ರೇಲಿಯಾ ಸತತ ಪ್ರಯತ್ನ ಮಾಡಿ ಈ ಅವಲಂಬನೆಯ ಪ್ರಮಾಣವನ್ನು ಕಡಿಮೆ ಮಾಡಿವೆ. ಆದರೂ ಜಾಗತಿಕ ಪೂರೈಕೆಯ ಶೇ 58 ಭಾಗ ಇನ್ನೂ ಚೀನಾದ ಭದ್ರ ಹಿಡಿತದಲ್ಲಿದೆ.

ನಮ್ಮ ದೇಶದಲ್ಲಿ ವಿರಳ ಭಸ್ಮಧಾತುಗಳ ನಿಕ್ಷೇಪ ವಿದ್ದರೂ ವಿದೇಶಗಳ ಮೇಲಿನ ನಮ್ಮ ಅವಲಂಬನೆಗೆ ಐದು ದಶಕಗಳಿಂದ ನಾವು ಅನುಸರಿಸಿಕೊಂಡು ಬಂದಿರುವ ನೀತಿಯೇ ಕಾರಣ ಎಂಬುದು ಪರಿಣತರ ಅಭಿಪ್ರಾಯ. ನಮ್ಮಲ್ಲಿ ವಿರಳ ಭಸ್ಮಧಾತುಗಳು ಮತ್ತು ವಿಕಿರಣಪಟು ಥೋರಿಯಮ್ ಧಾತುವಿನ ಮುಖ್ಯ ಮೂಲವೆಂದರೆ, ಸಾಗರತೀರದ ಮರಳಿನಲ್ಲಿರುವ ಮಾನಜೈಟ್ ಖನಿಜ. ಇದರಲ್ಲಿ ಅತಿ ಅಲ್ಪ ಪ್ರಮಾಣದಲ್ಲಿ ಯುರೇನಿಯಮ್ ಕೂಡ ಉಂಟು. ಥೋರಿಯಮ್ ಮತ್ತು ಯುರೇನಿಯಮ್ ಮುಖ್ಯವಾದ ನ್ಯೂಕ್ಲಿಯರ್ ಇಂಧನಗಳು. 1962ರ ಪರಮಾಣು ಶಕ್ತಿ ಅಧಿನಿಯಮದಂತೆ ಮಾನಜೈಟ್ ಖನಿಜದ ಸಂಪೂರ್ಣ ಒಡೆತನವಿರುವುದು ಭಾರತ ಸರ್ಕಾರದ ಪರಮಾಣು ಶಕ್ತಿ ಇಲಾಖೆಯಲ್ಲಿ. ಇದರಿಂದಾಗಿ ಎಲ್ಲ 17 ವಿರಳ ಭಸ್ಮಧಾತುಗಳೂ ಪರಮಾಣು ಖನಿಜಗಳ ಪಟ್ಟಿಗೇ ಸೇರುತ್ತವೆ. ಹೀಗಾಗಿ ಈ ಖನಿಜಗಳ ಅನ್ವೇಷಣೆ, ಗಣಿಗಾರಿಕೆ, ಸಂಸ್ಕರಣೆ, ಮೌಲ್ಯವರ್ಧನೆ, ಸಂಶೋಧನೆಯಂತಹ ಯಾವ ಚಟುವಟಿಕೆಯಲ್ಲೂ ಖಾಸಗಿ ಉದ್ಯಮಗಳಿಗೆ, ಕೈಗಾರಿಕಾ ಸಂಸ್ಥೆಗಳಿಗೆ ಅವಕಾಶವಿಲ್ಲ. ಅಷ್ಟೇಕೆ, ನಮ್ಮ ದೇಶದ ರಾಷ್ಟ್ರೀಯ ಪ್ರಯೋಗಾಲಯಗಳು, ಐಐಟಿಗಳು, ಡಿಆರ್‌ಡಿಒ, ಉನ್ನತ ಸಂಶೋಧನಾ ಸಂಸ್ಥೆಗಳಿಗೂ ಈ ಕ್ಷೇತ್ರದಲ್ಲಿರುವ ಸಹಭಾಗಿತ್ವದ ಅವಕಾಶಗಳು ಬಹು ಕಡಿಮೆ. ಇದು ನಮಗೆ ನಾವೇ ವಿಧಿಸಿಕೊಂಡ ನಿರ್ಬಂಧ. ನಮ್ಮ ಕೈಗಳನ್ನು ನಾವೇ ಕಟ್ಟಿಕೊಂಡ ಪರಿಸ್ಥಿತಿ.

ಪರಮಾಣು ಶಕ್ತಿ ಇಲಾಖೆಯ ಅಧೀನದಲ್ಲಿರುವ ಇಂಡಿಯನ್ ರೇರ್ ಅರ್ತ್ ಲಿಮಿಟೆಡ್ (ಐಆರ್‌ಇಎಲ್) ಮತ್ತು ಕೇರಳ ಸರ್ಕಾರದ ಉದ್ಯಮವಾದ ಕೇರಳ ಮಿನರಲ್ಸ್ ಆ್ಯಂಡ್ ಮೆಟಲ್ಸ್ ಲಿಮಿಟೆಡ್ ಸಂಸ್ಥೆಗೆ ಮಾತ್ರ ಮಾನಜೈಟ್ ಗಣಿಗಾರಿಕೆಯನ್ನು ನಡೆಸಲು ಅನುಮತಿ ಇದೆ. ಪ್ರಾಥಮಿಕ ಸಂಸ್ಕರಣೆಯಿಂದ ದೊರೆಯುವ ಆಕ್ಸೈಡ್ ರೂಪದ ಅದಿರನ್ನು ಮತ್ತಷ್ಟು ಸಂಸ್ಕರಿಸಿ, ಉನ್ನತೀಕರಿಸಿ, ಶುದ್ಧ ಧಾತುಗಳನ್ನು ಪಡೆಯುವುದು ಮುಂದಿನ ಜಟಿಲವಾದ, ದುಬಾರಿಯ, ಅಧಿಕ ಬಂಡವಾಳ ಬೇಕಿರುವ ಹಂತ. ತಾಂತ್ರಿಕವಾಗಿ ಇದು ‘ಅಧಿಕ ವೆಚ್ಚ- ಅಧಿಕ ಪ್ರತಿಫಲ’ದ ಪ್ರಕ್ರಿಯೆ. ಆದರೆ ಐಆರ್‌ಇಎಲ್ ಇದನ್ನು ಮಾಡುವುದಿಲ್ಲ. ಅದರ ಬದಲಿಗೆ ‘ಅಲ್ಪ ವೆಚ್ಚ- ಅಲ್ಪ ಪ್ರತಿಫಲ’ದ ದಾರಿಯನ್ನು ಹಿಡಿದು, ಕಡಿಮೆ ಮೌಲ್ಯದ ವಿರಳ ಭಸ್ಮಧಾತು ಅದಿರನ್ನು ಚೀನಾ, ಜಪಾನ್‍ಗೆ ಕಳುಹಿಸುತ್ತದೆ. ಅಲ್ಲಿಂದ ಶುದ್ಧರೂಪದ ಧಾತುಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ.

ವಿಚಿತ್ರವೆಂದರೆ, ಐಆರ್‌ಇಎಲ್ ಸಂಸ್ಥೆಯ ಆದಾಯದ ಹೆಚ್ಚಿನ ಭಾಗ ಬರುವುದು ವಿರಳ ಭಸ್ಮಧಾತುಗಳಿಂದ ಅಲ್ಲ. ಅದರ ಬದಲಿಗೆ, ಸಾಗರ ಕಿನಾರೆಯ ಮರಳಿನಲ್ಲಿ ಇರುವ ಇತರ ಧಾತುಗಳಾದ ಇಲ್ಮನೈಟ್, ಸಿಲ್ಲಿಮನೈಟ್, ಜಿಂಕ್ರಾನ್‌ ಗಣಿಗಾರಿಕೆಯಿಂದ. ಸಂಶೋಧನೆ, ಅಭಿವೃದ್ಧಿ, ಹೊಸತನ, ಹೊಸ ಸವಾಲುಗಳ ಒತ್ತಡವೇ ಇಲ್ಲದಂತಹ ಪರಿಸ್ಥಿತಿಯಲ್ಲಿ ಐಆರ್‌ಇಎಲ್‌ನಿಂದ ಹೆಚ್ಚಿನದನ್ನು ನಿರೀಕ್ಷಿಸುವುದು ಸಾಧ್ಯವಿಲ್ಲವೆಂಬುದು ಪರಿಣತರ ಅಭಿಪ್ರಾಯ. ಇಂತಹ ಸಂದರ್ಭದಲ್ಲೂ ವಿಶಾಖಪಟ್ಟಣದಲ್ಲಿ ರೇರ್ ಅರ್ತ್ ಪರ್ಮನೆಂಟ್ ಮ್ಯಾಗ್ನೆಟ್ ಉತ್ಪಾದನಾ ಸೌಲಭ್ಯ, ಒಡಿಶಾದಲ್ಲಿ ಮಾನಜೈಟ್ ಉತ್ಪಾದನಾ ಸ್ಥಾವರ, ಭಾಭಾ ಅಣುಶಕ್ತಿ ಸಂಶೋಧನಾ ಕೇಂದ್ರದೊಡನೆ ಹೆಚ್ಚಿನ ಸಹಯೋಗ, ಗುಜರಾತ್‍ನಲ್ಲಿ ವಿರಳ ಭಸ್ಮಧಾತುಗಳ ಹೊಸ ನಿಕ್ಷೇಪದ ಪತ್ತೆಯಂತಹ ಬೆಳವಣಿಗೆಗಳಾಗಿವೆ. ಆದರೆ ವಿದೇಶಗಳ ಮೇಲಿನ ಅವಲಂಬನೆಗೆ ಕಾರಣವಾದ ಮೂಲ ಸಮಸ್ಯೆ ಹಾಗೆಯೇ ಉಳಿದಿದೆ.

ವಿರಳ ಭಸ್ಮಧಾತುಗಳನ್ನು ಸರ್ಕಾರದ ಏಕಸ್ವಾಮ್ಯ ದಿಂದ ಮುಕ್ತಗೊಳಿಸಿ, ಅವುಗಳ ಗಣಿಗಾರಿಕೆ, ಉತ್ಪಾದನೆಯಲ್ಲಿ ಖಾಸಗಿ ವಲಯದ, ಸಾರ್ವಜನಿಕ ರಂಗದ, ಪ್ರತಿಷ್ಠಿತ ಹಾಗೂ ಸಮರ್ಥ ಉನ್ನತ ಸಂಶೋಧನಾ ಸಂಸ್ಥೆಗಳ ಸಹಭಾಗಿತ್ವಕ್ಕೆ ಅವಕಾಶ ನೀಡಿದಲ್ಲಿ ಮಾತ್ರ, ಈ ಕ್ಷೇತ್ರದಲ್ಲಿ ಆರೋಗ್ಯಕರ ಬೆಳವಣಿಗೆ ಸಾಧ್ಯವೆಂಬುದು ತಜ್ಞರ ನಿಲುವು. ನೀತಿ ಆಯೋಗ ನೇಮಿಸಿದ್ದ ತಜ್ಞರ ಸಮಿತಿಯೂ ಈ ಅಂಶಗಳಿಗೆ ಒತ್ತು ನೀಡಿದೆ. ವಿರಳ ಭಸ್ಮಧಾತುಗಳನ್ನು ಪರಮಾಣು ಖನಿಜಗಳ ಪಟ್ಟಿಯಿಂದ ಹೊರ ತೆಗೆಯುವ ಪ್ರಸ್ತಾವವವು ಕೇಂದ್ರ ಸರ್ಕಾರದ ಮುಂದಿದೆ. ಇದಕ್ಕೆ ಒಪ್ಪಿಗೆ ದೊರೆತರೆ, ಖಾಸಗಿ ಸಂಸ್ಥೆಗಳು, ಸಾರ್ವಜನಿಕ ಉದ್ದಿಮೆಗಳು, ಸಂಶೋಧನಾ ಪ್ರಯೋಗಾಲಯಗಳು ವಿರಳ ಭಸ್ಮಧಾತುಗಳ ಉತ್ಪಾದನೆಯ ಎಲ್ಲ ಹಂತಗಳಲ್ಲೂ ಭಾಗವಹಿಸುವ ಅವಕಾಶ ದೊರೆಯುತ್ತದೆ.

ಈ ಪ್ರಸ್ತಾವದ ಜೊತೆಗೇ ಈ ಕ್ಷೇತ್ರದಲ್ಲಿನ ತಜ್ಞರಿಂದ ಹಲವಾರು ಸಲಹೆಗಳೂ ಬಂದಿವೆ. ವಿಕಿರಣಪಟು ಥೋರಿಯಮ್ ಮತ್ತು ಯುರೇನಿಯಮ್ ನ್ಯೂಕ್ಲಿಯರ್ ಇಂಧನವಾದ್ದರಿಂದ ಅವುಗಳ ಗಣಿಗಾರಿಕೆ, ಸಂಸ್ಕರಣೆಯು ಪರಮಾಣು ಶಕ್ತಿ ಇಲಾಖೆಯ ಕಟ್ಟುನಿಟ್ಟಿನ ಸುಪರ್ದಿಯಲ್ಲೇ ಮುಂದುವರಿಯಬೇಕು. ವಿರಳ ಭಸ್ಮಧಾತುಗಳ ಉತ್ಪಾದನೆಯಲ್ಲಿ ಸಂಪೂರ್ಣ ಸ್ವಾವಲಂಬನೆ
ಯನ್ನು ಸಾಧಿಸಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಗಣಿ ಸಚಿವಾಲಯದ ಅಡಿಯಲ್ಲಿ ಪ್ರತ್ಯೇಕವಾದ ಇಲಾಖೆಯನ್ನು ಸ್ಥಾಪಿಸಬೇಕು. ಖಾಸಗಿ ಮತ್ತು ಸರ್ಕಾರಿ ವಲಯದ ಆಯ್ದ ಪ್ರತಿಷ್ಠಿತ ಸಂಸ್ಥೆಗಳಿಗೆ ವಿಶೇಷ ಬಂಡವಾಳ ಒದಗಿಸಿ, ಶುದ್ಧ ಸ್ವರೂಪದ ವಿರಳ ಭಸ್ಮಧಾತುಗಳನ್ನು ಉತ್ಪಾದಿಸಲು ಪ್ರೋತ್ಸಾಹಿಸಬೇಕು. ಈ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಅಮೆರಿಕ, ಆಸ್ಟ್ರೇಲಿಯಾ, ಜಪಾನ್ ಮತ್ತು ಕೆನಡಾದ ಕೈಗಾರಿಕಾ ಸಂಶೋಧನಾ ಸಂಸ್ಥೆಗಳ ಸಹಯೋಗವನ್ನು ಪಡೆಯಬೇಕು. ‘ರೇರ್ ಅರ್ತ್ ರೆಗ್ಯುಲೇಟರಿ ಅಥಾರಿಟಿ’ ರಚಿಸಬೇಕು ಇತ್ಯಾದಿ.

ವಿರಳ ಭಸ್ಮಧಾತುಗಳ ಪೂರೈಕೆ ಮೇಲೆ ಮನಸೋ ಇಚ್ಛೆಯ ನಿಯಂತ್ರಣ ಹೇರುವ ಮೂಲಕ, ಅವಲಂಬಿತ ದೇಶಗಳ ಕೈಗಾರಿಕಾ ಮತ್ತು ರಕ್ಷಣಾ ಸಾಮರ್ಥ್ಯಗಳನ್ನು ಜಡಗೊಳಿಸಿ, ಭವಿಷ್ಯದ ತಂತ್ರಜ್ಞಾನದ ಬೆಳವಣಿಗೆಗಳನ್ನು ಕುಂಠಿತಗೊಳಿಸುವ ಕುಟಿಲ ತಂತ್ರಗಾರಿಕಾ ಮನೋಭಾವ ಕೆಲವು ದೇಶಗಳಿಗಿದೆ. ಆದರೆ ಅಂತಹ ತಂತ್ರಗಳಿಗೆ ಈಡಾಗದೆ, ವಿರಳ ಭಸ್ಮಧಾತುಗಳ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗುವ ಸಾಮರ್ಥ್ಯವನ್ನು ರೂಢಿಸಿಕೊಳ್ಳುವ ದಿಕ್ಕಿನಲ್ಲಿ ಗಣಿ ಸಚಿವಾಲಯ ಮುಂದಿಟ್ಟಿರುವ ಪ್ರಸ್ತಾವ ಅತಿ ಮುಖ್ಯ ಹೆಜ್ಜೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT