ಸ್ವಾತಂತ್ರ್ಯಪೂರ್ವದಲ್ಲಿ ಭಾಷಾ ಸಮಸ್ಯೆ ಇರಲಿಲ್ಲ. ಅವರವರ ತಾಯಿನುಡಿಯಲ್ಲಿ ಕಲಿಕೆ ನಡೆಯುತ್ತಿತ್ತು. ಸ್ವಾತಂತ್ರ್ಯೋತ್ತರ ಕಾಲದಲ್ಲಿ ಬದಲಾವಣೆಯ ಗಾಳಿ ಬೀಸಿತು. ಭಾಷಾವಾರು ಪ್ರಾಂತಗಳ ಪರಿಕಲ್ಪನೆ ಕೊನರಿತು. ತೆಲುಗು ಭಾಷಾ ಪ್ರದೇಶ ಸ್ವತಂತ್ರ ಪ್ರಾಂತವಾಗಬೇಕೆಂದು ಪೊಟ್ಟಿ ಶ್ರೀರಾಮುಲು ಆಮರಣಾಂತ ಉಪವಾಸ ಮಾಡಿ ಪ್ರಾಣತೆತ್ತ ಕಾರಣ ಆಂಧ್ರಪ್ರದೇಶ ನಿರ್ಮಾಣ ಆಯಿತು. ಅದು ಭಾಷಾವಾರು ಪ್ರಾಂತ ರಚನೆಗೆ ನಾಂದಿ ಆಗಿ 1956ರಲ್ಲಿ ಕರ್ನಾಟಕ ಏಕೀಕರಣ ಆಯಿತು.

ಆಗ, ಹಿಂದಿ ಭಾಷೆಗೆ ಜಾಗ ಕಲ್ಪಿಸಿ, ಪ್ರೌಢಶಾಲೆಯಲ್ಲಿ ಮೊದಲನೆಯ ಭಾಷೆ, ಎರಡನೆಯ ಭಾಷೆ, ಮೂರನೆಯ ಭಾಷೆ ಎಂದು ಮೂರು ಭಾಷೆಗಳನ್ನು ಕಲಿಯುವ ವ್ಯವಸ್ಥೆ ಜಾರಿಗೆ ಬಂತು. ಮೊದಲನೆಯ ಭಾಷೆಯಾಗಿ ಮಾತೃಭಾಷೆ ಕನ್ನಡ ಅಥವಾ ಬೇರೆ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿತ್ತು. ಎರಡನೆಯ ಭಾಷೆಯಾಗಿ ಇಂಗ್ಲಿಷ್ ಕಡ್ಡಾಯವಾಗಿತ್ತು. ಮೂರನೆಯ ಭಾಷೆಯಾಗಿ ಕನ್ನಡ ಅಥವಾ ಹಿಂದಿ ಇಲ್ಲವೇ ಇನ್ನೊಂದು ಭಾಷೆಯನ್ನು ಆರಿಸಿಕೊಳ್ಳಬಹುದಿತ್ತು. ಈ ತ್ರಿಭಾಷಾ ವ್ಯವಸ್ಥೆಯನ್ನು ರೂಪಿಸಿ ಜಾರಿಗೆ ತಂದುದರಲ್ಲಿ ದೊಡ್ಡ ಹುನ್ನಾರ ನಡೆದಿತ್ತು. ಇದು ಕನ್ನಡ ವಿರೋಧಿಯಾಗಿತ್ತು ಮತ್ತು ಜಾಣ ಕನ್ನಡ ವಿದ್ಯಾರ್ಥಿಗಳಿಗೆ ಘನಘೋರ ಅನ್ಯಾಯ ಎಸಗಿತ್ತು.

ಹೇಗೆಂದರೆ, ಕೆಲವರು ಪ್ರಥಮ ಭಾಷೆಯಾಗಿ ಕನ್ನಡದ ಬದಲು ಸಂಸ್ಕೃತವನ್ನು ಆಯ್ಕೆ ಮಾಡಿಕೊಂಡರು. ಅದಕ್ಕೆ ಕಾರಣ ಅವರ ಮಾತೃಭಾಷೆ ಸಂಸ್ಕೃತ ಎಂದಲ್ಲ ಅಥವಾ ಸಂಸ್ಕೃತದಲ್ಲಿ ಆಸಕ್ತಿ ಇದೆ ಎಂಬುದೂ ಅಲ್ಲ. ಈ ಆಯ್ಕೆಯ ಉದ್ದೇಶ ಸುಲಭವಾಗಿ ಹೆಚ್ಚು ಅಂಕಗಳನ್ನು ಪಡೆದು ರ್ಯಾಂಕು ಗಿಟ್ಟಿಸಬಹುದು ಎಂಬುದು. ಅದರಲ್ಲಿ ಇನ್ನೊಂದು ಒಳಗುಟ್ಟು ಇದೆ. ಸಂಸ್ಕೃತ ಆರಿಸಿಕೊಂಡರೆ ಪಠ್ಯ ಸುಲಭ, ಸರಳ ಬಾಲಬೋಧೆ. ಪರೀಕ್ಷೆಯಲ್ಲಿ ಉತ್ತರವನ್ನು ಕನ್ನಡದಲ್ಲೇ ಬರೆಯಬಹುದು. ಬಹಳ ಮುಖ್ಯವಾದ ಲಾಭವೆಂದರೆ ಅತಿ ಹೆಚ್ಚು ಅಂಕಗಳನ್ನು, ನೂರಕ್ಕೆ 85ರಿಂದ 100ರವರೆಗೆ ಧಾರಾಳವಾಗಿ ಪಡೆಯಬಹುದಿತ್ತು. ಇದಕ್ಕೆ ತದ್ವಿರುದ್ಧವಾಗಿ, ಕನ್ನಡ ಆರಿಸಿಕೊಂಡವರಿಗೆ ದೊಡ್ಡ ಪಠ್ಯಪುಸ್ತಕಗಳು, ಶ್ರಮ ಹೆಚ್ಚು, ಪರೀಕ್ಷೆಯಲ್ಲಿ ಉತ್ತರಕ್ಕೆ ಅನುಗುಣವಾಗಿ 50ರಿಂದ 80ರೊಳಗೆ ಅಂಕಗಳು. ಹೀಗಾಗಿ, ಎಲ್ಲಾ ವಿಷಯಗಳಲ್ಲಿ ಹೆಚ್ಚು ಅಂಕಗಳು ಬಂದಿದ್ದರೂ ಕನ್ನಡದಲ್ಲಿ ಕಡಿಮೆ ಅಂಕವಿದ್ದು ಉನ್ನತ ಶ್ರೇಣಿಯಲ್ಲಿ ಹಿಂದೆ ಇರುತ್ತಿದ್ದರು. ಸಂಸ್ಕೃತದಲ್ಲಿ ಅತಿ ಹೆಚ್ಚು ಅಂಕವಿದ್ದ ಕಾರಣ ನಿರಾಯಾಸವಾಗಿ ಉನ್ನತ ಶ್ರೇಣಿ ಪ್ರಾಪ್ತವಾಗುತ್ತಿತ್ತು. ಸಾರಾಂಶವೆಂದರೆ, ಕನ್ನಡವನ್ನು ಅಪ್ಪಿಕೊಂಡ ಕಾರಣಕ್ಕಾಗಿ ಕೆಳಗಾದರು, ಕನ್ನಡವನ್ನು ತೊರೆದ ‘ಮಾರ್ಕ್ಸ್ವಾದಿಗಳು’ ಮೇಲುಗೈ ಹೊಂದಿದರು.

ಈ ತ್ರಿಭಾಷಾ ವ್ಯವಸ್ಥೆಯನ್ನು ಹೇಗೆ ಕೆಲವರು ದುರುಪಯೋಗ ಅಲ್ಲಲ್ಲ ಸದುಪಯೋಗ ಮಾಡಿಕೊಂಡರೆಂಬುದು ತುಂಬಾ ತಡವಾಗಿ ಬೆಳಕಿಗೆ ಬಂತು. ಆ ವೇಳೆಗಾಗಲೇ ಕನ್ನಡ ಭಾಷೆಯನ್ನು ಆರಿಸಿಕೊಂಡ ಸಹಸ್ರಾರು ವಿದ್ಯಾರ್ಥಿಗಳಿಗೆ ಅನ್ಯಾಯ ವಾಗಿತ್ತು ಮತ್ತು ಸಂಸ್ಕೃತವನ್ನು ಆಯ್ಕೆ ಮಾಡಿಕೊಂಡು ರ್ಯಾಂಕು ಮೊದಲಾದ ಉನ್ನತಶ್ರೇಣಿ ಗಿಟ್ಟಿಸಿಕೊಂಡ ಸಮುದಾಯಕ್ಕೆ ದೊಡ್ಡ ಲಾಭವಾಯಿತು.

ತ್ರಿಭಾಷಾ ಶಿಕ್ಷಣ ಕ್ರಮದಿಂದ ಕನ್ನಡ ಭಾಷೆಗೆ ಉಂಟಾಗಿರುವ ಅಪಾಯ ಮತ್ತು ಕನ್ನಡ ವಿದ್ಯಾರ್ಥಿ ಗಳಿಗೆ ಆಗುತ್ತಿರುವ ಅನ್ಯಾಯದ ವಿಷಯ, 1976ರಲ್ಲಿ ಎಸ್.ವಿ. ರಂಗಣ್ಣನವರ ಅಧ್ಯಕ್ಷತೆಯಲ್ಲಿ ಶಿವಮೊಗ್ಗ
ದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಸ್ತಾಪಿತವಾಗಿ ಸಾರ್ವಜನಿಕರ ಕಣ್ಣು ತೆರೆಸಿತು. ಅಲ್ಲಿ ಕೈಗೊಂಡ ಎರಡು ನಿರ್ಣಯಗಳು: 1. ಅನೇಕ ತರಗತಿಗಳ ಕನ್ನಡ ಮತ್ತು ಸಂಸ್ಕೃತ ವಿಷಯಗಳ ಪಾಠಕ್ರಮದ ಪಟ್ಟಿಯನ್ನು ಅವಲೋಕಿಸಿದಾಗ, ಸಂಸ್ಕೃತ ವಿಷಯಕ್ಕೆ ಒಂದೇ ಪಠ್ಯಪುಸ್ತಕ ಇದ್ದರೆ, ಕನ್ನಡಕ್ಕೆ ಅಧಿಕ ಪುಸ್ತಕಗಳಿದ್ದ ಕಾರಣ ವಿದ್ಯಾರ್ಥಿಗಳು ಹೆಚ್ಚಿಗೆ ಸಂಸ್ಕೃತದತ್ತ ಒಲಿದು ಕನ್ನಡ ತೆಗೆದುಕೊಳ್ಳುವುದಕ್ಕೆ ಹಿಂಜರಿಯುತ್ತಿದ್ದಾರೆ. ಈ ಅಸಮತೆಯನ್ನು ಹೋಗಲಾಡಿಸಿ ಕನ್ನಡವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಳ್ಳಲು ತೊಂದರೆಯಾಗದಂತೆ ಸೂಕ್ತ ತಿದ್ದುಪಡಿಯನ್ನು ಪಾಠಕ್ರಮದಲ್ಲಿ ಮಾಡುವಂತೆ ಕಾಲೇಜು ಇಲಾಖೆ ನಿರ್ದೇಶಕರಿಗೂ ವಿಶ್ವವಿದ್ಯಾಲಯ ಗಳಿಗೂ ಸಮ್ಮೇಳನ ಸೂಚಿಸುತ್ತದೆ. 2. ರಾಜ್ಯದ ಪ್ರತಿ ಶಾಲೆಯಲ್ಲಿಯೂ ಒಂದರಿಂದ ಹತ್ತನೆಯ ತರಗತಿವರೆಗೆ ಕಡ್ಡಾಯವಾಗಿ ಕನ್ನಡ ಕಲಿಸುವ ವ್ಯವಸ್ಥೆ ಮಾಡಬೇಕು.

ಆನಂತರ 1979ರಲ್ಲಿ ಧರ್ಮಸ್ಥಳದಲ್ಲಿ ನಡೆದ 51ನೇ ಸಾಹಿತ್ಯ ಸಮ್ಮೇಳನವು ‘ಕರ್ನಾಟಕದ ಎಲ್ಲ
ಪ್ರೌಢಶಾಲೆಗಳಲ್ಲಿಯೂ ಕನ್ನಡವನ್ನು ಪ್ರಥಮ ಭಾಷೆಯನ್ನಾಗಿ ಕಡ್ಡಾಯವಾಗಿ ಕಲಿಸಲು ಒಡನೆಯೇ ವ್ಯವಸ್ಥೆ ಮಾಡಲು ಸರ್ಕಾರವನ್ನು ಒತ್ತಾಯಿಸಬೇಕು’ ಎಂಬ ಗೊತ್ತುವಳಿಯನ್ನು ಒಪ್ಪಿತು. ಅನೇಕ ಕಡೆ ಕನ್ನಡಪರ ಹಾಗೂ ಸಂಸ್ಕೃತ ವಿರೋಧದ ಧ್ವನಿ ಅನುರಣಿಸಿತು. ಇದರ ಪರಿಣಾಮವಾಗಿ, ರಾಜ್ಯ ಸರ್ಕಾರವು ಹಾಲಿ ಜಾರಿಯಲ್ಲಿದ್ದ ತ್ರಿಭಾಷೆಯ ಕ್ರಮವನ್ನು ಮಾರ್ಪಡಿಸಿ 1979ರ ಅಕ್ಟೋಬರ್ನಲ್ಲಿ ಮರುಆದೇಶ ಹೊರಡಿಸಿತು. ಅದರ ಪ್ರಕಾರ, ಸಂಸ್ಕೃತವನ್ನು ಮೊದಲನೆಯ ಭಾಷೆ ಪಟ್ಟಿಯಿಂದ ತೆಗೆದು ಮೂರನೆಯ ಭಾಷೆ ಪಟ್ಟಿಗೆ ಸೇರಿಸಲಾಗಿತ್ತು. ಇದರಿಂದ ನಿರಾಶರಾದ ಕಟ್ಟಾ ಸಂಸ್ಕೃತವಾದಿಗಳು ಹಳೆಯ ವ್ಯವಸ್ಥೆಯ ಮರುಸ್ಥಾಪನೆಗೆ ಕೋರಿ ಕೋರ್ಟಿನ ಮೆಟ್ಟಿಲೇರಿದರು. ಇದು ಕನ್ನಡಿಗರನ್ನು, ಚಳವಳಿಗಾರರನ್ನು ಕೆರಳಿಸಿತು. ವಿರೋಧ ಹೆಪ್ಪುಗಟ್ಟಿತು. ವಿಧಾನಮಂಡಲದ ಉಭಯ ಸದನಗಳಲ್ಲಿ ಇದು ಪ್ರತಿಧ್ವನಿಸಿತು.

ಎಚ್ಚೆತ್ತ ಸರ್ಕಾರ ಈ ವಿವಾದ ಬಗೆಹರಿಸಲು ಸಮಿತಿ ರಚಿಸಿತು. ವಿ.ಕೃ.ಗೋಕಾಕ್, ಜಿ.ನಾರಾಯಣ,
ಎಸ್.ಕೆ.ರಾಮಚಂದ್ರ ರಾವ್, ತ.ಸು.ಶಾಮರಾಯ, ಕೆ.ಕೃಷ್ಣಮೂರ್ತಿ, ಎಚ್.ಪಿ.ಮಲ್ಲೇದೇವರು, ಸಾ.ಮಂಚಯ್ಯ ಸದಸ್ಯರಾಗಿದ್ದರು. ಸಮಿತಿಯ ಪರಿಶೀಲನೆಗೆ ವಹಿಸಿದ ವಿಷಯ: 1. ಶಾಲಾ ಪಠ್ಯದಲ್ಲಿ ಅಭ್ಯಾಸದ ವಿಷಯವಾಗಿ ಸಂಸ್ಕೃತ ಉಳಿಯಬೇಕೆ? 2. ಉಳಿಯಬೇಕಾದರೆ ಕನ್ನಡಕ್ಕೆ ಪರ್ಯಾಯವಾಗದೆ ಉಳಿಸುವುದು ಹೇಗೆ? 3. ತ್ರಿಭಾಷಾ ಸೂತ್ರದಂತೆ ಕನ್ನಡವನ್ನು ಕಡ್ಡಾಯ ಮಾಡಿ ಉಳಿದೆರಡು ಭಾಷೆಗಳ ಆಯ್ಕೆಯ ಸ್ವಾತಂತ್ರ್ಯವನ್ನು ವಿದ್ಯಾರ್ಥಿಗಳಿಗೆ ಬಿಡುವುದು ಸೂಕ್ತವೇ?

ಸಮಿತಿಯ ಸದಸ್ಯರ ಹೆಸರು ಬಹಿರಂಗವಾದ ಮೇಲೆ, ಕನ್ನಡಕ್ಕೆ ನ್ಯಾಯ ಸಿಗುವುದಿಲ್ಲ ಎಂಬ ಅಪನಂಬಿಕೆ ಜನರಲ್ಲಿ ಉಂಟಾಯಿತು. ಇದು ಸಂಸ್ಕೃತವಾದಿಗಳ ಸಮಿತಿ ಎಂದೂ ಕನ್ನಡ ವಿರೋಧಿ ಸಮಿತಿ ಎಂದೂ ಗದ್ದಲ ಶುರುವಾಯಿತು. ಪ್ರತಿಭಟನೆಯ ಕಿಡಿ ಹಬ್ಬಿತು. ಧಾರವಾಡದಲ್ಲಿ ‘ಗೋಕಾಕ್ ಗೋ ಬ್ಯಾಕ್’ ಎಂಬ ಘೋಷಣೆ ಮೊಳಗಿ ಸಮಿತಿಯ ಸದಸ್ಯರು ತೀವ್ರ ವಿರೋಧಕ್ಕೆ ಗುರಿಯಾಗಿ ವಿಚಲಿತರಾದರು. ಪರಿಸ್ಥಿತಿಯ ನಾಡಿಮಿಡಿತವನ್ನು ಅರಿತ ಸಮಿತಿಯು ಕನ್ನಡಕ್ಕೆ ಮೊದಲ ಭಾಷೆಯ ಮನ್ನಣೆಯಿತ್ತು ಸಂಸ್ಕೃತವನ್ನು ಮೂರನೆಯ ಸ್ಥಾನಕ್ಕೆ ತಳ್ಳಿತು.

ಈ ವರದಿಯನ್ನು ಸರ್ಕಾರಕ್ಕೆ ಒಪ್ಪಿಸಿದ ಅವಧಿಯಲ್ಲಿ ದೇವರಾಜ ಅರಸು ನೇತೃತ್ವದ ಸರ್ಕಾರ ಹೋಗಿ ಗುಂಡೂರಾವ್ ಮುಖ್ಯಮಂತ್ರಿಯಾದರು. ಅವರು ವರದಿಯನ್ನು ಅಂಗೀಕರಿಸುವ ವಿಚಾರಕ್ಕೆ ಗಮನಕೊಡದೆ ತಟಸ್ಥರಾಗಿದ್ದರು. ಇವರು ಕನ್ನಡಪರ ಅಲ್ಲವೆಂಬ ಗುಮಾನಿ ಪ್ರಬಲವಾಗಿ ಅದು ಕಾಳ್ಗಿಚ್ಚಿನಂತೆ ಹಬ್ಬಿತು. ಗೋಕಾಕ್ ವರದಿ ಜಾರಿಗೆ ಬರದ ಹೊರತು ವಿರಮಿಸುವುದಿಲ್ಲ ಎಂದು ಜನ ಬೀದಿಗಿಳಿದರು. ಜಾತಿಮತಧರ್ಮ ತಾರತಮ್ಯವಿರದೆ ನಾಡಿನ ಎಲ್ಲ ಸಂಘಟನೆಗಳೂ ಕನ್ನಡ ಚಳವಳಿಗಾರರೂ ಸಾಹಿತಿಗಳೂ ಒಕ್ಕೊರಲಿನಿಂದ ಪ್ರತಿಭಟಿಸತೊಡಗಿದರು. ಚಿತ್ರನಟ ರಾಜ್ಕುಮಾರ್ ಕೂಡ ಮುಂದಾಳುವಾಗಿ ನಿಂತದ್ದು ಈ ಹೋರಾಟಕ್ಕೆ ಆನೆಬಲ ತಂದಿತು. ಕವಿ ಕುವೆಂಪು ಅವರೂ ಬೀದಿಗಿಳಿದರು. ಮೈಸೂರಿನಲ್ಲಿ ಧರಣಿ ಕುಳಿತರು. ಇದಕ್ಕೆ ಮಣಿದ ಸರ್ಕಾರ ಮೈಸೂರಿನಲ್ಲೇ ಸಚಿವ ಸಂಪುಟ ಸಭೆ ನಡೆಸಿ, ವರದಿಯನ್ನು ಯಾವ ಬದಲಾವಣೆಯೂ ಇಲ್ಲದೆ ಅಂಗೀಕರಿಸಿತು.

ಇದು, ತ್ರಿಭಾಷಾ ಸೂತ್ರ ಕನ್ನಡದ ಮುನ್ನಡೆಗೆ ಅಪಾಯಕಾರಿ ಎಂಬುದನ್ನು ಬಿಂಬಿಸುತ್ತದೆ. ಪೂರ್ವಾಪರಗಳನ್ನು ವಸ್ತುನಿಷ್ಠವಾಗಿ ಪರ್ಯಾಲೋಚಿಸಿದರೆ ಶಿಕ್ಷಣದಲ್ಲಿ ದ್ವಿಭಾಷಾ ನೀತಿಪಾಲನೆ ಸೂಕ್ತ ಎಂದು ಮನವರಿಕೆ ಆಗುತ್ತದೆ. ರಾಜ್ಯಭಾಷೆ ಕನ್ನಡದ ಜೊತೆಗೆ ವಿದ್ಯಾರ್ಥಿಗಳು ಇಂಗ್ಲಿಷ್, ಸಂಸ್ಕೃತ ಅಥವಾ ಹಿಂದಿಯಲ್ಲಿ ತಮಗೆ ಬೇಕೆನಿಸಿದ್ದನ್ನು ಆಯ್ಕೆ ಮಾಡಿಕೊಳ್ಳಬಹುದು. ಇಂಗ್ಲಿಷ್ ಅನ್ನು ಬಹುಜನ ಬಯಸುತ್ತಿರುವುದರಿಂದ ಅವರ ಅಪೇಕ್ಷೆ ಈಡೇರುವುದಕ್ಕೆ ದ್ವಿಭಾಷಾ ನೀತಿಯಲ್ಲಿ ಅವಕಾಶವಿದೆ. ಶಿಕ್ಷಣದಲ್ಲಿ ಬೇರೆಬೇರೆ ವಿಷಯಗಳನ್ನು ಕಲಿಯಬೇಕಾಗಿ ರುತ್ತದೆ. ಅದರಿಂದ ಎರಡೇ ಭಾಷೆ ಇದ್ದರೆ ಮೂರು ಭಾಷೆ ಕಲಿಯಬೇಕಾದ ಹೊರೆ ನಿವಾರಣೆ ಆಗುತ್ತದೆ.

ಬಹುಭಾಷೆಗಳಲ್ಲಿ ದ್ವಿಭಾಷೆಯೇ ದಿವ್ಯೌಷಧ. ಏಕಕಾಲದಲ್ಲಿ ಅತ್ತ ಹಿಂದಿ ಹೇರಿಕೆಯಿಂದ ಪಾರಾಗುತ್ತೇವೆ, ಇತ್ತ ಸಂಸ್ಕೃತದ ಹೊಡೆತ ನಿವಾರಣೆಯಾಗುತ್ತದೆ, ಇಂಗ್ಲಿಷ್ ಬೇಡಿಕೆಯೂ ಈಡೇರುತ್ತದೆ. ಮಾತೃಭಾಷೆ ಗಟ್ಟಿಯಾಗಿ ನಿಲ್ಲುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.