ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ವಾತ್ಸಲ್ಯದ ಹಂಗಿನಲ್ಲಿ ಹೆಣ್ಣು

ಅರ್ಥಶಾಸ್ತ್ರಕ್ಕೆ ಬೇಕು ಮಾತೃವಾತ್ಸಲ್ಯದ ಮಾನವೀಯ ಸ್ಪರ್ಶ
Published 26 ಸೆಪ್ಟೆಂಬರ್ 2023, 23:49 IST
Last Updated 26 ಸೆಪ್ಟೆಂಬರ್ 2023, 23:49 IST
ಅಕ್ಷರ ಗಾತ್ರ

‘ನಾನು ಮನೆಕೆಲಸದಾಕೆಯನ್ನು ಮದುವೆಯಾದರೆ ದೇಶದ ಜಿಡಿಪಿ ಕಮ್ಮಿಯಾಗುತ್ತದೆ’ ಎಂದು ಬರ್ನಾರ್ಡ್‌ ಶಾ ಹೇಳಿದ್ದರು. ಮದುವೆ ಆದ ಮೇಲೆ ಅವಳ ಕೆಲಸಕ್ಕೆ ಸಂಬಳ ಸಿಗುವುದಿಲ್ಲ. ಜಿಡಿಪಿ ಲೆಕ್ಕಕ್ಕೆ ತೆಗೆದುಕೊಳ್ಳುವುದು ಮಾರುಕಟ್ಟೆಯಲ್ಲಿ ಬೆಲೆ ಕಟ್ಟಲಾಗುವ ಸರಕು– ಸೇವೆಗಳನ್ನು ಮಾತ್ರ. ಹಾಗಾಗಿಯೇ ಶೇಕಡ 92ರಷ್ಟು ಮಹಿಳೆಯರು ಮಾಡುವ ವೇತನರಹಿತ ಕೆಲಸವು ಜಿಡಿಪಿ ಲೆಕ್ಕದಲ್ಲಿ ಬರುವುದಿಲ್ಲ.

2014ರಲ್ಲಿ ಅಪಘಾತದಲ್ಲಿ ಮೃತರಾದ ದಂಪತಿಗೆ ಪರಿಹಾರದ ಮೊತ್ತವನ್ನು ನಿರ್ಧರಿಸುವ ಸಂದರ್ಭದಲ್ಲಿ, ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎನ್‌.ವಿ.ರಮಣ ಅವರು ತಮ್ಮ ತೀರ್ಪಿನಲ್ಲಿ ಹೇಳಿರುವಂತೆ, ‘ಸಾಮಾನ್ಯವಾಗಿ ಮನೆಕೆಲಸವನ್ನೆಲ್ಲಾ ಮಾಡುವವರು ಮಹಿಳೆಯರೇ. ಮನೆಯವರಿಗೆಲ್ಲಾ ಅಡುಗೆ ಮಾಡುತ್ತಾರೆ. ಮನೆಯನ್ನು ಒಪ್ಪಮಾಡುತ್ತಾರೆ. ಮಕ್ಕಳು, ಮುದುಕರು ಮತ್ತು ರೋಗಿಗಳನ್ನು ನೋಡಿಕೊಳ್ಳುತ್ತಾರೆ. ವ್ಯವಸಾಯ, ಪಶುಪಾಲನೆಯಂತಹ ಕಾರ್ಯಗಳಲ್ಲಿ ನೆರವಾಗುತ್ತಿರುತ್ತಾರೆ. ಆದರೂ ಗೃಹಿಣಿಯರು ದುಡಿಯುವುದಿಲ್ಲ, ಅವರಿಂದ ಮನೆಗೆ ಆದಾಯವಿಲ್ಲ ಎಂದೇ ಭಾವಿಸಲಾಗಿದೆ. ಈ ಗ್ರಹಿಕೆ ಬಹುಕಾಲದಿಂದ ಉಳಿದುಕೊಂಡೇ ಬಂದಿದೆ. ಇದನ್ನು ಮೀರಬೇಕಾಗಿದೆ’.

ಮಹಿಳೆ ತೋರುವ ಪ್ರೀತಿ, ವಾತ್ಸಲ್ಯವೇ ಅವಳಿಗೆ ಉರುಳಾಗಿದೆ. ಮಕ್ಕಳು, ಹಿರಿಯರು ಹಾಗೂ ರೋಗಿಗಳನ್ನು ಆರೈಕೆ ಮಾಡುವ ಕೆಲಸ ವಾತ್ಸಲ್ಯವನ್ನು ಬೇಡುತ್ತದೆ. ಆರೈಕೆಯ ಪ್ರಕ್ರಿಯೆಯಲ್ಲಿ ಅವರೊಂದಿಗೆ ಭಾವನಾತ್ಮಕ ಬಂಧ ಬೆಳೆಯುತ್ತದೆ. ಅದರಿಂದಾಗಿ ಅವಳಿಗೆ ಆ ಜವಾಬ್ದಾರಿಯಿಂದ ಕಳಚಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಆಕೆಯ ಪ್ರೀತಿಯೇ ಆಕೆಯ ದೌರ್ಬಲ್ಯವೂ ಆಗಿದೆ. ಸ್ತ್ರೀವಾದಿ ಅರ್ಥಶಾಸ್ತ್ರಜ್ಞೆ ನ್ಯಾನ್ಸಿ ಫೊಲ್‌ಬ್ರೆ ಅವರು ಹೇಳುವಂತೆ, ‘ಮಹಿಳೆಯರು ಪ್ರೀತಿಯ ಕೈದಿಗಳಾಗಿದ್ದಾರೆ’.

ಮಹಿಳೆಯರ ಈ ಯಾವ ಕೆಲಸಗಳಿಗೂ ವೇತನ ಸಿಗುವುದಿಲ್ಲ. ಒಂದು ಅಂದಾಜಿನ ಪ್ರಕಾರ, 15ರಿಂದ 29ರ ವಯೋಮಾನದ ಮಹಿಳೆಯರು ದಿನಕ್ಕೆ ಸುಮಾರು 5.5 ಗಂಟೆಗಳು ವೇತನವಿಲ್ಲದೆ ದುಡಿಯುತ್ತಾರೆ. ಅದೇ ವಯೋಮಾನದ ಪುರುಷರು ವೇತನವಿಲ್ಲದೆ ಒಂದು ಗಂಟೆ ದುಡಿದರೆ ಹೆಚ್ಚು. ರಾಷ್ಟ್ರೀಯ ಮಾದರಿ ಸಮೀಕ್ಷೆಯ (ಎನ್‌ಎಸ್‌ಎಸ್‌ಒ) ಅಂಕಿಅಂಶದ ಪ್ರಕಾರ, 2019ರಲ್ಲಿ ಗ್ರಾಮೀಣ ಭಾರತದಲ್ಲಿ ಶೇ 93.2ರಷ್ಟು ಮಹಿಳೆಯರು ವೇತನವಿಲ್ಲದ ಕೆಲಸ ಮಾಡುತ್ತಿದ್ದರು. ಹಾಗೆ ವೇತನವಿಲ್ಲದೆ ದುಡಿಯುತ್ತಿದ್ದ ಪುರುಷರ ಸಂಖ್ಯೆ ಬರೀ ಶೇ 29.2ರಷ್ಟು. ಮಹಿಳೆಯರು ಮಾಡುವ ಎಲ್ಲ ಕೆಲಸಗಳೂ ಕುಟುಂಬದ ದೃಷ್ಟಿಯಿಂದ, ದೇಶದ ಆರ್ಥಿಕತೆಯ ದೃಷ್ಟಿಯಿಂದ ತುಂಬಾ ಮುಖ್ಯ. ಆದರೆ ಅರ್ಥಶಾಸ್ತ್ರ ಇದನ್ನು ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ. ಆದಾಯದ ಹಾಗೂ ಸಂಪತ್ತಿನ ಅಸಮಾನತೆಯನ್ನಷ್ಟೇ ಅದು ನೋಡುತ್ತದೆ. ಅದಕ್ಕೆ ಸಂಬಂಧಗಳಲ್ಲಿನ ಅಸಮಾನತೆ ಕಾಣುವುದಿಲ್ಲ. ಇವೆಲ್ಲ ಹೆಂಗಸರ ಕೆಲಸ ಅಂತಷ್ಟೇ ಭಾವಿಸುತ್ತದೆ.

ಮಕ್ಕಳನ್ನು ಹೆರುವುದು ಹಾಗೂ ಹಾಲುಣಿಸುವುದನ್ನು ಬಿಟ್ಟು ಉಳಿದೆಲ್ಲ ಕೆಲಸಗಳನ್ನು ಪುರುಷರೂ ಮಾಡಬಹುದು. ಆದರೆ ಈ ದೈಹಿಕ ವ್ಯತ್ಯಾಸವನ್ನೇ ಬಳಸಿಕೊಂಡು ಲಿಂಗಾಧಾರಿತ ಶ್ರಮ ವಿಭಜನೆಯನ್ನು ರೂಪಿಸಲಾಗಿದೆ. ಪಾಲನೆ- ಪೋಷಣೆಯ ಕೆಲಸ ಮಹಿಳೆಯರದೇ ಅಂತಾಗಿಬಿಟ್ಟಿದೆ. ಹಾಗಾಗಿ ಅವರು ಹೊರಗಡೆ ದುಡಿಯುತ್ತಿದ್ದರೂ ಈ ಕೆಲಸ ತಪ್ಪುವುದಿಲ್ಲ. ಉದ್ಯೋಗಸ್ಥ ಮಹಿಳೆಯರೂ ಮನೆಯಲ್ಲಿ ಸುಮಾರು 5.8 ಗಂಟೆಗಳು ವೇತನರಹಿತವಾಗಿ ದುಡಿಯುತ್ತಾರೆ. ಅದರಲ್ಲೂ ವಿಶೇಷವಾಗಿ, ಹಣ ಕೊಟ್ಟು ಬೇರೆಯವರಿಂದ ಕೆಲಸ ಮಾಡಿಸುವ ಸ್ಥಿತಿಯಲ್ಲಿ ಇಲ್ಲದ ಕುಟುಂಬಗಳಲ್ಲಿ ಮಹಿಳೆಯರ ಹೊರೆ ದುಪ್ಪಟ್ಟಾಗುತ್ತದೆ.

ಗೃಹಕೃತ್ಯಗಳು ಹೆಚ್ಚಿದಷ್ಟೂ ಗೃಹಿಣಿ ಹೆಚ್ಚೆಚ್ಚು ಮನೆಗೇ ಅಂಟಿಕೊಳ್ಳಬೇಕಾಗುತ್ತದೆ. ಉದ್ಯೋಗಸ್ಥ ಮಹಿಳೆಯರ ಸಂಖ್ಯೆ ಕುಸಿಯುತ್ತಿರುವುದಕ್ಕೆ ಇದೂ ಕಾರಣ. ಭಾರತದಲ್ಲಿ ದುಡಿಯುವ ಮಹಿಳೆಯರ ಸಂಖ್ಯೆ 20 ವರ್ಷಗಳ ಹಿಂದೆ ಶೇ 30ರಷ್ಟು ಇದ್ದುದು ಈಗ ಶೇ 24ಕ್ಕೆ ಕುಸಿದಿದೆ. ಆದರೆ ಬಿಕ್ಕಟ್ಟಿನ ಸಮಯದಲ್ಲಿ ಕುಟುಂಬದ ಆದಾಯ ಕಡಿಮೆಯಾದಾಗ ಹೆಚ್ಚುವರಿ ವರಮಾನಕ್ಕಾಗಿ ಮಹಿಳೆಯರು ದುಡಿಯಲು ಹೋಗುತ್ತಾರೆ. ವಿವಿಧ ಬಿಕ್ಕಟ್ಟುಗಳು ಇದ್ದಾಗ ಮಹಿಳೆಯರು ಸಂಪಾದನೆ ಮಾಡಿ, ಪರಿಸ್ಥಿತಿ ಸುಧಾರಿಸಿದ ಮೇಲೆ ಗೃಹಕೃತ್ಯಕ್ಕೇ ಹಿಂದಿರುಗಿದ್ದನ್ನು ಅಧ್ಯಯನಗಳು ಗಮನಿಸಿವೆ. ಮಹಿಳೆಯರ ದುಡಿಮೆ ಬಡ ಕುಟುಂಬಗಳಿಗೆ ಒಂದು ರೀತಿಯಲ್ಲಿ ಸಬ್ಸಿಡಿ ಇದ್ದಂತೆ.

ಮಹಿಳೆಯರಿಗೆ ಸಿಗುತ್ತಿರುವ ವೇತನದಲ್ಲೂ ತಾರತಮ್ಯವಿದೆ. ಇದನ್ನು ಜಗತ್ತಿನೆಲ್ಲೆಡೆ ನೋಡಬಹುದು. 1970ರಲ್ಲಿ ಫ್ರಾನ್ಸಿನಲ್ಲಿ ಮಹಿಳಾ ಉದ್ಯೋಗಿಗಳಿಗೆ ಸಿಗುತ್ತಿದ್ದ ವೇತನವು ಪುರುಷರು ಪಡೆಯುತ್ತಿದ್ದ ವೇತನಕ್ಕೆ ಹೋಲಿಸಿದರೆ ಬರೀ ಶೇ 30ರಷ್ಟು. 2020ರಲ್ಲಿ ಅದು ಶೇ 38ರಷ್ಟಾಯಿತು. ಇಬ್ಬರೂ ಮಾಡುವ ಕೆಲಸಗಳಲ್ಲೇ ವ್ಯತ್ಯಾಸವಿದೆ. ಫ್ರಾನ್ಸಿನಲ್ಲಿ ಅತಿ ಹೆಚ್ಚು ವೇತನದ ಕೆಲಸ ಮಾಡುತ್ತಿದ್ದ ಮಹಿಳೆಯರ ಸಂಖ್ಯೆ 1970ರಲ್ಲಿ ಇತ್ತು. 2015ರ ವೇಳೆಗೆ ಸ್ವಲ್ಪ ಸುಧಾರಿಸಿ ಶೇ 16 ಆಗಿತ್ತು. ಆದರೂ ಥಾಮಸ್ ಪಿಕೆಟ್ಟಿಯವರು ಹೇಳುವಂತೆ, ಅವರು ಪುರುಷರ ಸಮಕ್ಕೆ ಬರಬೇಕಾದರೆ 2102 ಬರಬೇಕು.  

ಈ ಲಿಂಗತಾರತಮ್ಯವನ್ನು ಎಲ್ಲ ಕ್ಷೇತ್ರಗಳಲ್ಲೂ ನೋಡಬಹುದು. ಪುರುಷ, ಮಹಿಳೆಯರ ಸಂಖ್ಯೆಯ ಅನುಪಾತ, ಅವರ ನಡುವಿನ ಅಂತರದ ಸೂಚ್ಯಂಕ, ಪೌಷ್ಟಿಕಾಂಶದ ಕೊರತೆ, ಶಿಕ್ಷಣದ ಮಟ್ಟ ಇವನ್ನೆಲ್ಲಾ ನೋಡಿದರೆ ತಾರತಮ್ಯದ ತೀವ್ರತೆ ತಿಳಿಯುತ್ತದೆ. ಪ್ರಗತಿಯನ್ನು ಅಳೆಯುವುದಕ್ಕೆ ಬಳಸುವ ಸೂಚಿಗಳಲ್ಲೂ ಸಮಸ್ಯೆಗಳಿವೆ. ಜಿಡಿಪಿ ಲೆಕ್ಕಾಚಾರದಲ್ಲಿ ಮಹಿಳೆಯರ ಬಹುತೇಕ ಚಟುವಟಿಕೆಗಳು ಸೇರುವುದೇ ಇಲ್ಲ. ಜಿಡಿಪಿ ಆ ವರ್ಷ ರಾಷ್ಟ್ರದಲ್ಲಿ ತಯಾರಾದ ಎಲ್ಲಾ ಸರಕು, ಸೇವೆಗಳ ಒಟ್ಟು ಮೊತ್ತವನ್ನು ನೀಡುತ್ತದೆ. ಹಣದ ವಿನಿಮಯವಿಲ್ಲದ ಮಹಿಳೆಯರ ಮನೆಗೆಲಸ, ಹಳ್ಳಿಗಳಲ್ಲಿ ಮೈಲುಗಟ್ಟಲೆ ನಡೆದು ಹೊತ್ತು ತರುವ ನೀರು, ಉರುವಲು... ಇವೆಲ್ಲಾ ಅದರಲ್ಲಿ ಸೇರುವುದಿಲ್ಲ. ಆದರೆ ಮಾಲ್‌ಗಳಲ್ಲಿ ಮಾರುವ ಬಿಸ್ಲೇರಿ, ಹಾಲಿನಪುಡಿ ಅಂತಹವುಗಳಿಗೆ ಅಲ್ಲಿ ಜಾಗ ಉಂಟು.

ಮಹಿಳೆಯರ ವೇತನರಹಿತ ಕೆಲಸಗಳ ಮೌಲ್ಯವನ್ನು ಅಂದಾಜು ಮಾಡುವುದಕ್ಕೂ ಸಾಧ್ಯವಾಗಬೇಕು. ಅಂತಹ ಹಲವು ಪ್ರಯತ್ನಗಳು ನಡೆದಿವೆ. ಕೆಲವರು ಮಹಿಳೆಯರ ವೇತನರಹಿತ ದುಡಿಮೆಯ ಸಮಯವನ್ನು ಸಮೀಕ್ಷೆಗಳ ಮೂಲಕ ಅಂದಾಜು ಮಾಡಿ, ಕನಿಷ್ಠ ಕೂಲಿಯ ಲೆಕ್ಕದಲ್ಲಿ ಅದರ ಮೌಲ್ಯವನ್ನು ಲೆಕ್ಕ ಹಾಕಿದ್ದಾರೆ. ಕೆಲವರು ಆ ಸಮಯದಲ್ಲಿ ಬೇರೆ ಕೆಲಸ ಮಾಡಿದ್ದರೆ ಬರಬಹುದಾಗಿದ್ದ ವೇತನವನ್ನು ಆಧರಿಸಿ, ಇದರ ಮೌಲ್ಯವನ್ನು ಲೆಕ್ಕ ಹಾಕಲು ಪ್ರಯತ್ನಿಸಿದ್ದಾರೆ. ಎದೆಹಾಲಿನ ಮೌಲ್ಯವನ್ನು ಲೆಕ್ಕ ಹಾಕುವ ಪ್ರಯತ್ನವೂ ನಡೆದಿದೆ. ಆರ್ಥಿಕತೆಗೆ ಮಹಿಳೆಯರ ಕೊಡುಗೆಯನ್ನು ಅರಿಯುವ ದಿಸೆಯಲ್ಲಿ ಇಂತಹ ಪ್ರಯತ್ನಗಳು ಮುಖ್ಯವಾಗುತ್ತವೆ.

ಆದರೆ ಇದಕ್ಕೆ ಇದರದೇ ಆದ ಸವಾಲುಗಳಿವೆ. ಮಹಿಳೆಯರು ಮಾಡುವ ಆರೈಕೆಗಳನ್ನು ಸಾಮಾನ್ಯವಾಗಿ ಕೆಲಸವೆಂದೇ ಭಾವಿಸುವುದಿಲ್ಲ. ಹಾಗಾಗಿ ಜನ ಅವುಗಳನ್ನು ಸಮೀಕ್ಷೆಯಲ್ಲಿ ದಾಖಲಿಸುವುದೇ ಇಲ್ಲ. ಜೊತೆಗೆ ಹೆಚ್ಚಿನ ಸಂದರ್ಭಗಳಲ್ಲಿ ಮಹಿಳೆಯರು ಒಟ್ಟೊಟ್ಟಿಗೆ ಅನೇಕ ಕೆಲಸಗಳನ್ನು ಮಾಡುತ್ತಿರುತ್ತಾರೆ. ಅಡುಗೆ ಮಾಡುತ್ತಿರುವಾಗಲೇ ಮಕ್ಕಳನ್ನು ನೋಡಿಕೊಳ್ಳುತ್ತಿರುತ್ತಾರೆ, ಮನೆಯ ಇತರ ಕೆಲಸಗಳನ್ನೂ ಮಾಡುತ್ತಿರುತ್ತಾರೆ. ಹಾಗಾಗಿ, ಆರೈಕೆಗಾಗಿ ವಿನಿಯೋಗಿಸಿದ ಸಮಯವನ್ನು ಅಂದಾಜು ಮಾಡುವುದು ಕಷ್ಟವಾಗಬಹುದು.

ಈ ಬಗ್ಗೆ ಗಂಭೀರವಾದ ಅಧ್ಯಯನ ನಡೆಯಬೇಕಾಗಿದೆ. ಆಗಷ್ಟೇ ಲಿಂಗತಾರತಮ್ಯ ನಿವಾರಣೆಗೆ ನೀತಿಗಳನ್ನು ರೂಪಿಸಬಹುದು. ಉದಾಹರಣೆಗೆ, ಒಂದು ಅಧ್ಯಯನದ ಪ್ರಕಾರ, ಕುಡಿಯುವ ನೀರಿನ ಸೌಲಭ್ಯ ಹಾಗೂ ಅಡುಗೆ ಇಂಧನ ಸೌಲಭ್ಯಗಳನ್ನು ಒದಗಿಸಿದಾಗ ಮಹಿಳೆಯರ ಮನೆ ಕೆಲಸದ ಅವಧಿ ಕಡಿಮೆಯಾಗಿದೆ. ಹೊರಗಡೆ ದುಡಿಯುವ ಅವಧಿ ಹೆಚ್ಚಾಗಿದೆ. ಅಂದರೆ ಕೆಲವು ಮೂಲ ಸೌಕರ್ಯಗಳು ದೊರಕಿದಾಗ ಮನೆ ಕೆಲಸದ ಹೊರೆ ಕಡಿಮೆಯಾಗಿ, ಹೊರಗೆ ದುಡಿಯಲು ಮಹಿಳೆಯರಿಗೆ ಅವಕಾಶವಾಗುತ್ತದೆ. ಮಹಿಳೆಯರ ಕೆಲಸದ ಹೊರೆಯನ್ನು ಕುಟುಂಬ ಹಾಗೂ ಸರ್ಕಾರ ಹಂಚಿಕೊಂಡಾಗ ಮಹಿಳೆಯರಿಗೆ ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದಕ್ಕೆ ಸಮಯ ಸಿಗುತ್ತದೆ.

ಮಹಿಳೆಯರ ದೃಷ್ಟಿಯಿಂದ ಅರ್ಥಶಾಸ್ತ್ರವನ್ನು ನೋಡುವುದಕ್ಕೆ ಸಾಧ್ಯವಾದರೆ ಅದಕ್ಕೆ ಹೊಸ ಆಯಾಮ ಸಾಧ್ಯವಾಗುತ್ತದೆ. ಅರ್ಥಶಾಸ್ತ್ರವು ಪ್ರಗತಿಯನ್ನು ಅರ್ಥೈಸುವ ಕ್ರಮವೂ ಬದಲಾಗುತ್ತದೆ. ಮನುಷ್ಯನ ಕ್ಷೇಮವನ್ನು, ಒಳಿತನ್ನು ಗರಿಷ್ಠಗೊಳಿಸುವ ದಿಸೆಯಲ್ಲಿ ಅದು ಯೋಚಿಸುವುದಕ್ಕೆ ಪ್ರಾರಂಭಿಸಬಹುದು. ಒಂದು ಕೆಲಸ ಉತ್ಪಾದಕವೋ ಅಲ್ಲವೋ ಅನ್ನುವುದನ್ನು ನಿರ್ಧರಿಸುವುದಕ್ಕೂ ಇದೇ ಅಳತೆಗೋಲಾಗಬೇಕು. ವೇತನ ಸಿಗುತ್ತದೋ ಇಲ್ಲವೋ ಅನ್ನುವುದು ಆಗಬಾರದು. ಆಗ ‘ಉತ್ಪಾದಕ ಕೆಲಸ’ಗಳಲ್ಲಿ ತೊಡಗಿರುವವರ ಆರೈಕೆಯನ್ನು ಮಾಡುತ್ತಿರುವ ಮಹಿಳೆಯರ ಕೆಲಸವೂ ಉತ್ಪಾದಕ ಎನಿಸಿಕೊಳ್ಳುತ್ತದೆ. ಅದಕ್ಕೂ ‘ಬೆಲೆ’ ಬರುತ್ತದೆ. ಇಂತಹ ಆಲೋಚನೆ ಸಾಧ್ಯವಾದರೆ ಅರ್ಥಶಾಸ್ತ್ರಕ್ಕೆ ಮಾತೃವಾತ್ಸಲ್ಯದ ಮಾನವೀಯ ಸ್ಪರ್ಶ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT